Saturday, 14th December 2024

ಅವರು ಒಡೆದದ್ದು ಕೇವಲ ದೇವಸ್ಥಾನವನ್ನಲ್ಲ !

ಅಭಿವ್ಯಕ್ತಿ

ಸಿಂಚನ ಎಂ.ಕೆ.ಮಂಡ್ಯ

ಅವರು ಒಡೆದದ್ದು ಕೇವಲ ದೇವಸ್ಥಾನವನ್ನಲ್ಲ. ಅವರು ಒಡೆದದ್ದು ಕೋಟಿ-ಕೋಟಿ ಶ್ರದ್ಧಾವಂತ ಭಕ್ತರ ಮನಸ್ಸನ್ನು, ಹಿಂದುತ್ವ ಪರ ಸರಕಾರವೆಂದು ವಿಶ್ವಾಸ ವಿರಿಸಿ ಮತ ಹಾಕಿದ್ದ ಹಿಂದೂಗಳ ಭಾವನೆಯನ್ನು, ಪ್ರಜಾಪ್ರಭುತ್ವದ ಘನತೆಗೆ ಸಾಕ್ಷಿಯಾಗಿ ಸಂವಿಧಾನಕ್ಕೆ ಬದ್ಧವಾಗಿರುವ ಪ್ರಜೆಗಳ ಗೌರವವನ್ನು, ಸರಕಾರವು ಪ್ರಜಾಹಿತೈಷಿ ಎಂದು ಭಾವಿಸಿ ಬದುಕುತ್ತಿದ್ದ ನಾಡಜನರ ಭರವಸೆಯನ್ನು, ಈ ಪುಣ್ಯಭೂಮಿಯ ಸಾಂಸ್ಕೃತಿಕ  ಸಂಕೇತವೇ ಆಗಿರುವ ಭಕ್ತವೃಂದದ ಸಮರ್ಪಣೆ ಯಿಂದ ಕಟ್ಟಲಾದ ಶಕ್ತಿ ಕೇಂದ್ರವನ್ನು, ತಮ್ಮ ಮನೆಗಳಿಗಿಂತಲೂ ಮೊದಲು ದೇವಸ್ಥಾನವನ್ನು ಕಟ್ಟಬೇಕೆಂಬ ಲೋಕ ಕಲ್ಯಾಣಕಾರಿ ಮಾರ್ಗವನ್ನು ಪ್ರಶಸ್ತ ಗೊಳಿಸಿದ್ದ ಆಧ್ಯಾತ್ಮಿಕತೆ ಎಂಬ ಮಹೋನ್ನತ ಆದರ್ಶವನ್ನು, ಅತ್ಯಂತ ಶ್ರೇಷ್ಠ ಯೋಗಿಗಳು ಹಾಗೂ ಸನ್ಯಾಸಿ ಗಳಂತೆ ಧ್ಯಾನ-ತಪಸ್ಸುಗಳಲ್ಲಿ ಸಿದ್ಧಿ ಹೊಂದಲು ಸಾಧ್ಯವಾಗದವರಿಗಾಗಿ ರಚಿಸಲಾದ ಅತ್ಯುತ್ತಮ ಧಾರ್ಮಿಕ ತಳಹದಿಯನ್ನು, ದೇಶದ ಪ್ರತಿ ಹಳ್ಳಿಗಳಲ್ಲೂ ಪರಂಪರಾನುಗತವಾಗಿ ನಡೆಸಿಕೊಂಡು ಬಂದಿದ್ದ ಗ್ರಾಮದೇವತೆ ಕಲ್ಪನೆಯ ಹಿರಿಮೆಯನ್ನು.

ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ

ಧರೆ ಹತ್ತಿ ಉರಿದರೆ ನಿಲಬಾರದು

ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ

ನಾರಿ ತನ್ನ ಮನೆಯಲ್ಲಿ ಕಳುವಡೆ

ತಾಯ ಮೊಲೆವಾಲು ನಂಜಾಗಿ ಕೊಲುವಡೆ

ಇನ್ನಾರಿಗೆ ದೂರುವೆ ಕೂಡಲ ಸಂಗಮದೇವಾ

ಎಂಬ ಬಸವಣ್ಣನವರ ವಚನವನ್ನು ಈ ಸಂದರ್ಭದಲ್ಲಿ ಉಲ್ಲೇಖಿಸುವ ಅವಶ್ಯಕತೆಯಿದೆ. ಸುಪ್ರೀಂಕೋರ್ಟ್‌ನ 2009ನೆ ವರ್ಷದ ತೀರ್ಪಿನನ್ವಯ ಅನಧಿಕೃತ ಧಾರ್ಮಿಕ ಕೇಂದ್ರಗಳ ಮೇಲಿನ ಕ್ರಮಕ್ಕೆ ಸಂಬಂಧಿಸಿದಂತೆ ಸರಕಾರ ಹಾಗೂ ಅಧಿಕಾರಿಗಳು ತಮ್ಮ ಬೇಜವಾಬ್ದಾರಿತನದಿಂದ ದೇಗುಲಗಳನ್ನು ನಿರ್ದಯವಾಗಿ ನೆಲಸಮ ಮಾಡಿರುವ ಅತೀವ ದುಃಖಕರ ಸಂದರ್ಭದಲ್ಲಿ ಈ ಮೇಲಿನ ವಚನಕ್ಕೆ ಅನ್ವಯವಾಗುವಂತೆ ಪ್ರಜಾಪಾಲಕರೇ ಪ್ರಜಾಪೀಡಕರಾಗಿರಲು ಇನ್ನಾರಿಗೆ ದೂರುವುದಯ್ಯಾ ಹಿಂದಿನ ಹಿಂದೂ ವಿರೋಧಿ ನಿಲುವುಗಳನ್ನು ಪ್ರದರ್ಶಿಸಿದ್ದ ಸರಕಾರದ ವಿರುದ್ಧ ಇಂದಿನ ಹಿಂದೂ ಪರ ಸರಕಾರವನ್ನು ನಂಬಿ ಗೆಲ್ಲಿಸಿದ ಮೇಲೂ ಈ ದುಃಸ್ಥಿತಿ ಉಂಟಾದರೆ ಇನ್ನಾರಿಗೆ ದೂರುವೆ ಶಿವ? ಎಂಬಂತೆ ಅರ್ಥೈಸಬೇಕಿದೆ.

ಮೊಹಮ್ಮದ್ ಘೋರಿ, ಮೊಹಮ್ಮದ್ ಘಜನಿ, ತೈಮೂರ್ ಎಂಬ ಮೂರ್ತಿ ಭಂಜಕ ಆಕ್ರಾಂತರು ನಮ್ಮ ದೇಗುಲಗಳನ್ನು ಒಡೆದಿದ್ದರು ಮತ್ತು ಪಾಕಿಸ್ತಾನ, ಆಫ್ಘಾನಿ ಸ್ತಾನದಂತಹ ಭಯೋತ್ಪಾದಕ ರಾಷ್ಟ್ರಗಳಲ್ಲಿ ನಮ್ಮ ದೇಗುಲಗಳನ್ನು ಒಡೆಯುತ್ತಿದ್ದಾರೆ. ಇದುವರೆವಿಗೂ ನಾವು ತಿಳಿದುಕೊಂಡಿದ್ದೆವು ಹಿಂದೂ ವಿರೋಧಿ  ಸರಕಾರ ಗಳ ಆಡಳಿತದ ಚುಕ್ಕಾಣಿ ಹಿಡಿದರೆ ದೇಗುಲಗಳನ್ನು ಒಡೆಯುವ ಸಂಭವವಿದೆ ಎಂದು.  ಆದರೆ ನಾವೆಂದೂ ನಿರೀಕ್ಷಿಸಿರಲಿಲ್ಲ ಯಾವ ಪಕ್ಷ ಹಿಂದೂಗಳ ಅತಿ ದೊಡ್ಡ ಆಶಾಕಿರಣವಾಗಿ, ಹಿಂದೂಗಳ ಆತ್ಮಗೌರವವನ್ನು ಎತ್ತಿ ಹಿಡಿಯಲು ರಾಮಮಂದಿರ ನಿರ್ಮಾಣಕ್ಕೆ ಸುದೀರ್ಘ ಹೋರಾಟವನ್ನು ಮಾಡಿ ಜಯಗಳಿ ಸಿತೊ ಆ ಪಕ್ಷದ ಆಡಳಿತದಲ್ಲಿ ದೇಗುಲಗಳನ್ನು ಒಡೆಯುವ ದೌರ್ಭಾಗ್ಯಕರ ದೃಶ್ಯವನ್ನು ಕಾಣಬೇಕಾಗುವುದೆಂದು.

ಸರಕಾರದ ಜನಪ್ರತಿನಿಽಗಳು ಮಾಧ್ಯಮಗಳ ಹಾಗೂ ಕ್ರೋಧಗೊಂಡಿರುವ ಹಿಂದೂ ಸಮಾಜದ ಪ್ರಶ್ನೆಗಳಿಗೆ ಜಾರಿಕೊಳ್ಳುವ ಉತ್ತರವನ್ನು ನೀಡುತ್ತಿದ್ದಾರೆ. ಸರಕಾರವನ್ನು ಪ್ರಶ್ನಿಸಿದರೆ ಅಽಕಾರಿಗಳ ಕಡೆ ಬೆಟ್ಟು ಮಾಡಿ ತೋರಿಸುವ, ಅಧಿಕಾರಿಗಳನ್ನು ಪ್ರಶ್ನಿಸಿದರೆ ಸರಕಾರ ಹಾಗೂ ಸುಪ್ರೀಂಕೋರ್ಟ್ ನೆಡೆಗೆ ಬೆಟ್ಟು ಮಾಡಿ ತೋರಿಸುವ ನಡೆ ಕಂಡುಬರುತ್ತಿದೆ. ಸುಪ್ರೀಂಕೋರ್ಟ್‌ನ ಒಂದು ಆದೇಶವನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗದ ಅಧಿಕಾರಿಗಳು ನಮ್ಮ ರಾಜ್ಯದಲ್ಲಿ ದ್ದಾರಾ? ಇಂತಹ ಅಧಿಕಾರಿಗಳು ತಮ್ಮ ಅಸಮರ್ಥತೆಯನ್ನು ಪ್ರದರ್ಶಿಸಿ ಜನಮಾನಸದಲ್ಲಿ ದುಃಖವನ್ನು ತಂದಿಡಲು ಕಾಠಿಣ್ಯ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಬರುತ್ತಿzರಾ? ಇನ್ನು ಸರಕಾರ ತನ್ನ ಸುಪರ್ದಿಯ ಬರುವ ಅಽಕಾರಿಗಳು ಅವರಿಗೆ ತಿಳಿಯದಂತೆಯೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸುತ್ತಿದೆ. ಸರಕಾರದ ಈ ಜಾಣಕುರುಡು ಮಾತು ಗಳನ್ನು ನಂಬಲು ಇಲ್ಲಿ ಯಾವ ಮೂರ್ಖರೂ ಇಲ್ಲ.

ಅಧಿಕಾರಿಗಳೇ ಸ್ವಯಂಚಾಲಿತರಾಗಿ ಸರಕಾರದ ಸಂಪರ್ಕವಿಲ್ಲದೆ ತಮ್ಮ ಕಾರ್ಯಗಳನ್ನು ಮಾಡುವುದಾದರೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ವೆಂಬ ವಿಭಾಗಗಳ ಕಾರ್ಯ ಸಂಯೋಜನೆಯನ್ನು ಏಕೆ ರಚಿಸಲಾಗಿದೆ? ಆಡಳಿತ ಸರಕಾರದ ಪರವಾಗಿ ಕೇಳಿಬಂದಿರುವ ಮತ್ತೊಂದು ವಾದವೇನೆಂದರೆ ಮುಖ್ಯ ಮಂತ್ರಿಗಳ ಕಾರ್ಯದರ್ಶಿ ಯವರು ಅವರಿಗೆ ತಿಳಿಸದೆ ಅಽಕಾರಿಗಳಿಗೆ ನೋಟಿಸ್ ನೀಡಿದ್ದಾzರೆ ಎಂಬುದು. ಇದಂತೂ ಪರಮಾಶ್ಚರ್ಯ!

2009ರಿಂದಲೂ ಚಾಲ್ತಿಯಲ್ಲಿರುವ ಈ ಆದೇಶಕ್ಕೆ ಹಿಂದುತ್ವ ಪರಿಪಾಲಕರು ಎಂದು ಗುರುತಿಸಿಕೊಳ್ಳುವವರು ಪರ್ಯಾಯವಾದ ಉಚಿತ ಪರಿಹಾರಕ್ಕಾಗಿ
ಪ್ರಯತ್ನಿಸಿದ್ದಾರೆಯೇ? ತಿಂಗಳ ಹಿಂದೆಯೇ ಅನಧಿಕೃತ ಧಾರ್ಮಿಕ ಕೇಂದ್ರಗಳ ಪಟ್ಟಿ ಸಿದ್ಧವಾಗಿದ್ದಾಗ ಕಾರ್ಯೋನ್ಮುಖರಾಗದ ಸಂಸದರು, ಶಾಸಕರ ಆದಿಯಾಗಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಪ್ರಮುಖರು ಈಗ ಶ್ರದ್ಧಾಳುಗಳ ಆಕ್ರೋಶ ಹೆಚ್ಚಾದ ಮೇಲೆ ಇದರ ವಿರುದ್ಧ ಧ್ವನಿಯೆತ್ತುತ್ತಿರುವುದು ವಿಪರ್ಯಾಸ.

ಅಷ್ಟಕ್ಕೂ ಸುಪ್ರೀಂಕೋರ್ಟ್‌ನ ಆದೇಶದನಿದೆ? ಇದರ ಅನ್ವಯ 2009ರ ನಂತರ ನಿರ್ಮಿಸಲಾಗಿರುವ ಅನಧಿಕೃತ ಧಾರ್ಮಿಕ ಕೇಂದ್ರಗಳ ಮೇಲೆ ಕಠಿಣ
ಕ್ರಮವನ್ನು ಜರುಗಿಸಿ ತೆರವುಗೊಳಿಸಬೇಕು. ಆದರೆ 2009ರ ಹಿಂದಿನ ಐತಿಹಾಸಿಕ ನೆಲೆಗಟ್ಟಿನ ಈ ಕೇಂದ್ರಗಳಲ್ಲಿ ಪ್ರತಿಯೊಂದನ್ನೂ ಪ್ರತ್ಯೇಕವಾಗಿ ಅಧ್ಯಯನ ಮಾಡಿ, ಸ್ಥಳೀಯರ ವಿಶ್ವಾಸ- ಸಲಹೆಗಳನುಸಾರ ಸಕ್ರಮ ಮಾಡುವುದೋ ಅಥವಾ ಸ್ಥಳಾಂತರ ಮಾಡುವುದೋ ಅಥವಾ ತೆರವು ಮಾಡುವುದೋ ಎಂಬ ನಿರ್ಧಾರಕ್ಕೆ ಬರುವುದು.

ಮೊದಲನೆಯ ಆದ್ಯತೆ ಸಕ್ರಮ ಮಾಡುವುದಾಗಿ ರಬೇಕು. ಆದರೆ ಸರಕಾರ ಹಾಗೂ ಅಧಿಕಾರ ವರ್ಗದವರು ಇದನ್ನು ತದ್ವಿರುದ್ಧವಾಗಿ ಅರ್ಥೈಸಿಕೊಂಡಿದ್ದಾರೋ ಏನೋ ಎಂಬಂತೆ ತೀವ್ರತರವಾಗಿ ತೆರವಿನ ಕಾರ್ಯಾಚರಣೆ ನಡೆಯುತ್ತಿದೆ. ನಂಜನಗೂಡಿನ ಹುಚ್ಚಗಣಿ ಗ್ರಾಮದ ಮಹದೇವಮ್ಮ ದೇವಸ್ಥಾನದ ನೆಲಸಮ ದೃಶ್ಯವು ಎಡೆ ವೈರಲ್ ಆದ ನಂತರ ಈ ವಿಷಯ ಹೆಚ್ಚು ಚರ್ಚೆಗೆ ಬಂದಿದೆ. ನ್ಯಾಯಸಂಗತವಾಗಿ ಕಾರ್ಯ ಮಾಡುವುದಾಗಿದ್ದರೆ ಸುಪ್ರೀಂಕೋರ್ಟ್‌ನ ಆದೇಶ ದಂತೆ ಮಾಡಬೇಕಿತ್ತು. ಅಲ್ಲಿನ ಹಿರಿಯರು, ಭಕ್ತಾದಿಗಳನ್ನು ಹೆದರಿಸಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಅನ್ಯಾಯ ಮಾರ್ಗದಲ್ಲಿ ಕಾರ್ಯ ಮಾಡುವವರಂತೆ ಈ ಕೃತ್ಯವನ್ನು ಮಾಡಬೇಕಿರಲಿಲ್ಲ.

ನಮ್ಮ ದೇಶದಲ್ಲಿ ಅಧಿಕಾರಿಗಳು ಇಷ್ಟು ವೇಗವಾಗಿ ಕಾರ್ಯ ಮಾಡುತ್ತಾರಾ? ಎಷ್ಟು ಶೀಘ್ರವಾಗಿ ದೇವಸ್ಥಾನಗಳನ್ನು ತೆರವುಗೊಳಿಸುತ್ತಿದ್ದಾರಾ? ಅವರು
ಅಧಿಕಾರಿ ಗಳಾಗುವುದಕ್ಕೂ ಮೊದಲು ಮಾನವರು. ಅವರು ನಾಗರಿಕ ಸೇವಾ ಅಧಿಕಾರಿಗಳೇ ಹೊರತು ಸರ್ವಾಧಿಕಾರಿಗಳಲ್ಲ. ಪ್ರತಿಷ್ಠಿತ ಸ್ಥಾನದಲ್ಲಿ ಕುಳಿತಿ
ರುವ, ನಾಗರಿಕ ಸೇವೆ ಮಾಡಬೇಕೆಂದು ಸ್ವ ಇಚ್ಛೆಯಿಂದ ಈ ಕ್ಷೇತ್ರವನ್ನು ಆರಿಸಿಕೊಂಡಿರುವ ಅಧಿಕಾರಿಗಳು ಯಾವುದೇ ಆದೇಶವನ್ನು ಪಾಲಿಸುವ ಮೊದಲು
ಅಲ್ಲಿನ ಪ್ರಜೆಗಳ ಹಿತದ ಬಗ್ಗೆ ಆಲೋಚಿ ಸಲಾಗಲಿಲ್ಲ ಎಂದರೆ ನಂಬಿಸಲಾಗುತ್ತಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳೆ ಸುಪ್ರೀಂಕೋರ್ಟ್‌ನ ಒತ್ತಡದಿಂದ ಹೀಗೆ ಅವಸರದಲ್ಲಿ ಅವಘಡವಾಗಿದೆ ಎಂದು ಸಮಜಾಯಿಷಿ ಕೊಡುತ್ತಿದ್ದಾರೆ. ಅವರೆ ಕೆಲವು ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಳ್ಳಲಿ. ಇಷ್ಟೊಂದು ಒತ್ತಡ, ಕಾರ್ಯ, ವೇಗಗಳೆಲ್ಲ ಯಾರಿಗಾಗಿ ಮತ್ತು ಯಾವ ಕಾರಣಕ್ಕಾಗಿ? ದೇಶದ ಪ್ರಜೆಗಳ ಕ್ಷೇಮಾಭಿವೃದ್ಧಿಗಾಗಿ ಅಲ್ಲವೆ? ದೇಶದ ಪ್ರಜೆಗಳಿಗಾಗಿ ಸರಕಾರವೊ ಅಥವಾ ಸರಕಾರ ಕ್ಕಾಗಿ ಪ್ರಜೆಗಳೋ? ಪ್ರಜೆಗಳಿಗಾಗಿ ಆಡಳಿತವೊ ಅಥವಾ ಆಡಳಿತಕ್ಕಾಗಿ ಪ್ರಜೆಗಳೊ? ಈಗ ಮತ್ತೊಂದು ಗಂಭೀರವಾದ ಸಂಗತಿಯನ್ನು ಪ್ರಸ್ತಾಪಿಸಲೇಬೇಕು.

ಸರಕಾರದ ದ್ವಾರ ಪಟ್ಟಿ ಮಾಡಲಾಗಿರುವ ಅನಧಿಕೃತ ಧಾರ್ಮಿಕ ಕೇಂದ್ರಗಳಲ್ಲಿ ಶೇ.95ರಷ್ಟು ಭಾಗ ದೇವಸ್ಥಾನಗಳೇ ಏಕಿವೆ? ನಮ್ಮ ರಾಜ್ಯದಲ್ಲಿ ದೇವಸ್ಥಾನ ಗಳೇ ಹೆಚ್ಚಿವೆ ನಿಜ. ಆದರೆ ಅನ್ಯ ಧಾರ್ಮಿಕ ಕೇಂದ್ರಗಳ ಸಂಖ್ಯೆಯು ಬೆಳೆಯುತ್ತಲೇ ಇದೆ ಎಂಬುದು ವಾಸ್ತವ. ಸರಕಾರದ ಈ ನಿರ್ಧಾರದ ಮೂಲಕ ನಾವೇನು ತಿಳಿದುಕೊಳ್ಳಬೇಕು? ಹಿಂದೂಗಳ ಸಹನಶೀಲ, ಸೌಜನ್ಯಶೀಲ ವ್ಯಕ್ತಿತ್ವಕ್ಕೆ ಕೇವಲ ದಂಡನೆ ಸಿಗುವುದೆಂದೇ? ಹಿಂದೂಗಳು ವಿಭಜಿತ ಶಕ್ತಿಯೆಂದು ತಿಳಿಯದಿರಿ. ಹಿಂದೂಗಳು ಎಂದೆಂದಿಗಿಂತಲೂ ಈಗ ಜಾಗೃತರಾಗಿzರೆ, ಕನಿಷ್ಠ ಪಕ್ಷ ನಿಮ್ಮ ಸರಕಾರಕ್ಕಿಂತ ಜಾಗೃರತವಾಗಿದ್ದಾರೆ!

ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೇಲೆ ನಮ್ಮ ರಾಜ್ಯದಲ್ಲಿ ಕರೋನಾ ಮಹಾಮಾರಿಯ ಪ್ರಭಾವವು ಇಳಿತ ಕಂಡಿದ್ದು ಹಾಗೂ ತಮ್ಮನ್ನು ತಾವು ಕಾಮನ್‌ಮೆನ್ ಎಂದು ಕರೆದುಕೊಳ್ಳುವ ಸಿಎಂ ದೊರೆತಿರುವುದು ರಾಜ್ಯದ ಕಳೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ನಾವು ಭಾವಿಸಿದ್ದೆವು. ಆದರೆ ಈ ರೀತಿ ನಿಮ್ಮ ಸರಕಾರವು ಹಿಂದೂ ಸಮಾಜಕ್ಕೆ ವಿಶ್ವಾಸ ಘಾತವನ್ನು ಮಾಡುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಆಯಿತು ಈಗ ಏನೋ ಅವ್ಯವಸ್ಥೆ ಯಿಂದಲೋ ಅಥವಾ
ಅಜಾಗರೂಕತೆಯಿಂದಲೋ ಈ ರೀತಿ ದುರಂತ ಸಂಭವಿಸಿದೆ ಎಂದುಕೊಳ್ಳೋಣ. ಸರಕಾರಕ್ಕೆ ನಿಜವಾಗಿ ಯೂ ಇದರಿಂದ ವಿಷಾದ ವಾಗಿದ್ದರೆ, ಇಷ್ಟರೊಳಗೆ ಈ
ಕೃತ್ಯ ಸಂಭವಿಸಲು ಕಾರಣೀ ಭೂತರಾದ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯನ್ನು ನೀಡಬೇ ಕಿತ್ತು ಮತ್ತು ಹಿಂದೂ ಸಮಾಜದ ಎದುರು ತಮ್ಮ ತಪ್ಪನ್ನು ಒಪ್ಪಿಕೊಂಡು
ತಮ್ಮ ವೈಫಲ್ಯಕ್ಕಾಗಿ ಕ್ಷಮೆಯಾಚಿಸಬೇಕಿತ್ತು ಅಲ್ಲವೆ? 16 ಸೆಪ್ಟೆಂಬರ್‌ರಂದು ಜಗದೀಶ್ ಕಾರಂತರ ನೇತೃತ್ವದಲ್ಲಿ ಹಿಂದೂ ಜಾಗರಣ ವೇದಿಕೆಯವರಿಂದ
ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ದೇಗುಲ ತೆರವಿನ ವಿರುದ್ಧ ಬೃಹತ್ ಪ್ರತಿಭಟನೆಯೇ ನಡೆಯಿತು.

ದಿಕ್ಸೂಚಿ ಭಾಷಣವನ್ನು ಮಾಡಿದ ಕಾರಂತರು ಸುಪ್ರೀಂಕೋರ್ಟ್‌ನ ಆದೇಶ ವನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗದ ಸರಕಾರ ಹಾಗೂ ಅಧಿಕಾರಿಗಳ ಅವಿವೇ ಕತನವನ್ನು ಪ್ರಶ್ನಿಸಿದ ರು. ಸುಪ್ರೀಂಕೋರ್ಟ್‌ನ ಆದೇಶವೆಂದು ಒತ್ತಿ ಹೇಳುತ್ತಿರುವ ಅಧಿಕಾರಿಗಳಿಗೆ ಅದರ ಮತ್ತೊಂದು ಆದೇಶವಾದ ಮಸೀದಿಗಳಲ್ಲಿ ಧ್ವನಿ ವರ್ಧಕಗಳನ್ನು ಬಳಕೆ ಮಾಡದಿರುವುದು ಮಾತ್ರ ಏಕೆ ಪಾಲನೆಯಾಗುತ್ತಿಲ್ಲ? ಎಂದು ಪ್ರಶ್ನಿಸಿದರು. ಬೊಮ್ಮಾಯಿ ಅವರ ಸರಕಾರಕ್ಕೆ 10 ದಿನಗಳ ಗಡುವನ್ನು ನೀಡಿರುವ ಕಾರಂತರು ಅಷ್ಟರಲ್ಲಿ ಈ ದುರಂತಕ್ಕೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಅವರ ನಿವಾಸದವರೆಗೆ ಪಾದ ಯಾತ್ರೆ ಮಾಡುವ, ಬೃಹತ್ ಸಂಘಟನೆಯನ್ನು ಮಾಡುವ ಎಚ್ಚರಿಕೆಯನ್ನು ನೀಡಿದರು.

ಇದರ ಜೊತೆಗೆ ಪ್ರಸ್ತಾಪಿಸಬೇಕಾದ ಮತ್ತೊಂದು ಅಂಶವೇನೆಂದರೆ ಇದೇ ಸುಪ್ರೀಂಕೋರ್ಟ್‌ನ ತೀರ್ಪಿನನ್ವಯ ಬೆಂಗಳೂರಿನ ರಾಜಕಾಲುವೆ ಒತ್ತುವರಿ ವಿಚಾರದಲ್ಲಿ ಕಾರ್ಯಪ್ರವೃತ್ತರಾಗಿ ಸಾಮಾನ್ಯ ಬಡವ-ಬಲ್ಲಿದರ ಮನೆಗಳನ್ನು ನೆಲ ಸಮಗೊಳಿಸಿದ ತರುವಾಯ ರಾಜಕಾರಣಿಗಳು, ಪ್ರಭಾವಿಗಳ ನಿವಾಸ ಎದುರಾದ ನಂತರ ಕಾರ್ಯಾಚರಣೆಯನ್ನೇಕೆ ಸ್ಥಗಿತ ಗೊಳಿಸಲಾಯಿತು? ಏಕೆ ಪ್ರಭಾವಿಗಳ ನಿವಾಸ ಕೆಡುವಲು ಜೆಸಿಬಿ ವಾಹನಗಳು ಅಸಮರ್ಥವಾದವೆ? ಪ್ರಭಾವಿಗಳ ನಿವಾಸ ಬಂದೊಡನೆ ಅಕ್ರಮ ಸ್ಥಳವನ್ನು ಸಕ್ರಮ ಸ್ಥಳವನ್ನಾಗಿಸಲಾಯಿತೆ? ಈ ದೇಶದ ಕಾನೂನು ಪ್ರಭಾವಿಗಳಿಗೆ ಅನ್ವಯವಾಗುವುದಿಲ್ಲವೆ?
ಇಷ್ಟೆ ಸಮಗ್ರವಾಗಿ ವಿಶ್ಲೇಷಣೆ ಮಾಡಿದ ನಂತರವೂ ಕೊನೆಯಲ್ಲಿ ಕಾಡುವ ಹೀಗೂ ಉಂಟೆ ಪ್ರಶ್ನೆಯನ್ನು ಇಲ್ಲಿ ಹಂಚಿಕೊಳ್ಳಲೇಬೇಕು.

ಸರಕಾರದ ಅಧಿಕಾರಿಗಳು ಸಿದ್ಧಪಡಿಸಿರುವ ಅನಽಕೃತ ದೇವಸ್ಥಾನಗಳ ಪಟ್ಟಿಯಲ್ಲಿ ಒಂದೇ ಒಂದು ಸಂಪದ್ಭರಿತ, ಪ್ರತಿಷ್ಠಿತ ದೇವಸ್ಥಾನದ ಉಲ್ಲೇಖವೇ ಇಲ್ಲದಿರುವುದು ಆ ಯಕ್ಷಪ್ರಶ್ನೆ. ನಮ್ಮ ದೇವಸ್ಥಾನಗಳನ್ನು ಇಂದಿಗೂ ಸಹ ಸಂಪತ್ತಿನ ದೃಷ್ಟಿಯ ನೋಡುವ ಬ್ರಿಟಿಷ್ ಮಾನಸಿಕತೆಯು ನಮ್ಮ ಸರಕಾರಗಳ ಅಸ್ತಿತ್ವದಲ್ಲಿ ರುವುದು ಅಶೋಭನೀಯ. ಹಿಂದೂಗಳ ಬಾಹುಳ್ಯವಿರುವ ಈ ನಮ್ಮ ಮಾತೃಭೂಮಿಯಲ್ಲಿ ಅನ್ಯ ಧರ್ಮೀಯರಿಗೆ ನೀಡಿರುವಂತೆ ಅವರ ಶ್ರದ್ಧಾ ಕೇಂದ್ರಗಳನ್ನು ಶ್ರದ್ಧಾಳುಗಳಿಗೆ ವಹಿಸಿಕೊಡದೆ, ಸರಕಾರವೇ ಇಂದಿಗೂ ಬ್ರಿಟಿಷರಂತೆ ಅದರ ಸ್ವಾಯತ್ತತೆಯನ್ನು ಅನುಭವಿಸುತ್ತಿದೆ. ಆದ್ದರಿಂದ ಬಹುಸಂಖ್ಯೆ ಯಲ್ಲಿರುವ ಹಿಂದೂ ಗಳಿಗೆ ಅವರ ದೇವಸ್ಥಾನಗಳನ್ನು ನಿರ್ವಹಿಸುವ ಸಾಮರ್ಥ್ಯವಿಲ್ಲ, ಅವರ ಮೇಲೆ ನಮಗೆ ನಂಬಿಕೆಯಿಲ್ಲ ವಾದ್ದರಿಂದ ನಾವೇ ಅದನ್ನು ನೋಡಿಕೊಳ್ಳುತ್ತಿದ್ದೇವೆಂದು ಒಮ್ಮೆ ಘೋಷಿಸಿಬಿಡಿ. ನಂತರ ಇಲ್ಲಿ ಚುನಾವಣೆಗಳು ಹೇಗೆ ನಡೆಯುತ್ತವೆ ಎಂದು ನಾವೂ ನೋಡುತ್ತೇವೆ!