Saturday, 5th October 2024

ಎಳನೀರು ಆರೋಗ್ಯಕ್ಕೆ ಹಾನಿಕಾರಕವೇ ?

ಶಶಾಂಕಣ

shashidhara.halady@gmail.com

ಯಾವುದೇ ಮಾಹಿತಿ ಬೇಕಾದಾಗ, ವಿಕಿಪೀಡಿಯಾವನ್ನು ಹುಡುಕುವ ಅಭ್ಯಾಸ ಇಂದು ಹೆಚ್ಚಿನವರಲ್ಲಿದೆ. ಆದರೆ ಆ ಉಚಿತ ಎನ್‌ಸೈಕ್ಲೊ ಪಿಡಿಯಾದಲ್ಲಿ ದೊರೆಯುವ ಎಲ್ಲವೂ ಸತ್ಯವೆ? ಅಲ್ಲಿ ತಪ್ಪು ದಾರಿಗೆ ಎಳೆಯುವ ಮಾಹಿತಿಗಳನ್ನು ಯಾರಾದರೂ ಉದ್ದೇಶಪೂರ್ವಕವಾಗಿ ತುಂಬಬಹುದೆ?

ಮೇಲಿನ ಪ್ರಶ್ನೆಯಲ್ಲಿ ಅಕ್ಷರ ಸ್ಖಲನವಾಗಿರಬಹುದೇ ಎಂಬ ಗುಮಾನಿಯಿಂದ, ಆ ಹೆಡಿಂಗ್‌ನ್ನು ನೀವು ಎರಡು ಬಾರಿ ಓದಿಕೊಂಡಿರ ಬಹುದು. ಇಲ್ಲ, ಉದ್ದೇಶಪೂರ್ವಕ ವಾಗಿಯೇ ಅಂತಹದೊಂದು ಹೆಡಿಂಗ್ ಬರೆದಿದ್ದೇನೆ, ‘ಎಳನೀರು ಆರೋಗ್ಯಕ್ಕೆ ಹಾಕಿಕಾರಕವಾಗ ಬಲ್ಲದೇ’ ಎಂಬ ವಿಸ್ಮಯಕಾರಿ ಪ್ರಶ್ನೆಯನ್ನು ನಿಮ್ಮಲ್ಲಿ ಹುಟ್ಟುಹಾಕಲು ಪ್ರಯತ್ನಿಸಲು ನಿರ್ದಿಷ್ಟ ಉದ್ದೇಶವಿದೆ. ಆದರೆ ಇಲ್ಲಿ ಖಳನಾಯಕ ಎಳನೀರು ಅಲ್ಲ, ಬದಲಿಗೆ ಅದು ಹಾನಿಕಾರಕವಾಗಿರಲೂಬಹುದು ಎಂಬ ಸಿದ್ಧಾಂತವನ್ನು ಜಾಗತಿಕವಾಗಿ ಬೆಳೆಸಲು ಪ್ರಯತ್ನಿಸುತ್ತಿರುವ ವಿಕಿಪೀಡಿಯಾ ಎಂಬ ಅಂತರ್ಜಾಲ ದೈತ್ಯ.

ಎಳ ನೀರು ಕುಡಿದರೆ ಅಪಾಯವಾಗಬಹುದು ಎಂದು ಸೂಚಿಸುವ ವಿಕಿಪೀಡಿಯಾವು, ಇಂತಹ ಹಲವು ಅರೆ ಸತ್ಯದ ಮಾಹಿತಿಗಳನ್ನು ತನ್ನ ಸಾವಿರಾರು ಪುಟಗಳಲ್ಲಿ ಅಲ್ಲಲ್ಲಿ ಕೂಡಿಹಾಕಿರುವ ಪ್ರವೃತ್ತಿಯ ಕುರಿತು ಸಹ ಗಮನ ಸೆಳೆಯುವ ಪ್ರಯತ್ನ ಇದು. ನಮ್ಮ ದೇಶದ ತಿಳಿವಳಿಕೆ ಯಿಂತೆ, ಎಳನೀರು ಸೇವನೆಯು ಶಕ್ತಿದಾಯಕ, ಮಾತ್ರವಲ್ಲ, ಅದು ಕೆಲವೇ ದಶಕಗಳ ಹಿಂದೆ ಜೀವವನ್ನು ಉಳಿಸುವ ದ್ರಾವಣ ಎನಿಸಿತ್ತು. ಅಂದತೆ, ಅತಿ ತುರ್ತು ಸಂದರ್ಭಗಳಲ್ಲಿ ಎಳನೀರನ್ನು ಸೇವಿಸಿ, ತಮ್ಮ ಜೀವ ಕಾಪಾಡಿಕೊಂಡವರು ಹಲವರು.

ಡ್ರಿಪ್ ಹಾಕಲು ಎಳನೀರನ್ನು ನೇರವಾಗಿ ಉಪಯೋಗಿಸದ ದೇಶ ನಮ್ಮದು ಎಂಬ ಎನಿಕ್‌ಡೋಟ್ ಸಹ ಪ್ರಚಾರದಲ್ಲಿದೆ. ರೋಗಿಗಳಿಗೆ
ಒಂದರ ಹಿಂದೆ ಒಂದರಂತೆ ಎಳನೀರನ್ನು ಕುಡಿಸುವ ಸಂಪ್ರದಾಯ ನಮ್ಮ ದೇಶದಲ್ಲಿತ್ತು. ಅದನ್ನು ಕುಡಿದಾಗ, ಅದರಲ್ಲಿರುವ ಸುಲಭ ಗ್ರಾಹಿ ಲವಣಾಂಶ, ಖನಿಜಾಂಶಗಳು ದೇಹಕ್ಕೆ ಸೇರುವುದರಿಂದಾಗಿ, ಒಮ್ಮೆಗೇ ದೇಹದಲ್ಲಿ ಶಕ್ತಿ ಕೂಡಿಬರುತ್ತದೆ. ಆದರೆ, ವಿಕಿಪೀಡಿಯಾ ಪುಟದಲ್ಲಿ ಈ ಅಮೃತಸಮಾನ ಪೇಯದ ವಿವರ ಹುಡುಕಿದರೆ, ಅದರ ‘ನ್ಯೂಟ್ರಿಷನಲ್ ವ್ಯಾಲ್ಯೂ’ ಬಗ್ಗೆ ಕೇವಲ 25 ಪದಗಳ ವಿವರಣೆ ಇದೆ. ನಂತರ ಸುಮಾರು 150 ಪದಗಳ ತನಕ ಅದರ ಸೇವನೆಯಿಂದಾಗುವ ಹಾನಿಯ ವಿವರವಿದೆ. (16.6.2022 ರಲ್ಲಿದ್ದಂತೆ ವಿವರ).

ಹೆಚ್ಚು ಎಳನೀರು ಕುಡಿದರೆ ರಕ್ತದಲ್ಲಿ ಪೊಟೇಶಿಯಂ ಹೆಚ್ಚಳಗೊಂಡು (ಹೈಪರ್‌ಕೆಲಾಮಿಯಾ), ಕಿಡ್ನಿ ಫೈಲ್ಯೂರ್‌ಗೆ ದಾರಿ ಮಾಡಿಕೊಡ ಬಹುದು ಎಂದು ವಿಕಿಪೀಡಿಯಾ ಹೇಳುತ್ತದೆ. ಜತೆಗೆ ಸ್ಮೃತಿ ತಪ್ಪಿ ಸಾವು ಸಂಭವಿಸಬಹುದು ಎಂದೂ ಹೇಳುತ್ತದೆ. ಅದಕ್ಕೆ ಆಧಾರವಾಗಿ, ಯಾವದೋ ವಿದೇಶಿ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ವರದಿ ನಿಡಿ, ಟೆನಿಸ್ ಆಟಗಾರನೊಬ್ಬ ಹಲವು ಎಳನೀರು ಕುಡಿದು,
ಕುಸಿದು ಬಿದ್ದ ಪ್ರಕರಣವನ್ನು ಉದಹರಿಸುತ್ತಾರೆ.

ಆದರೆ ನಂತರ ಆತ ಚೇತರಿಸಿಕೊಂಡನಂತೆ! ವಿಕಿಪೀಡಿಯಾದಲ್ಲಿ ಆಧಾರವಿಲ್ಲದ್ದನ್ನು ಸೇರಿಸುವಂತಿಲ್ಲ ಎಂಬ ನಿಯಮವಿರುವುದರಿಂದ, ಈ ‘ಅಧ್ಯಯನ’ದ ನಾಮಕೆವಾಸ್ತೆ ಆಧಾರವನ್ನು ಒದಗಿ ಸಲಾಗಿದೆ! ಈ ವಿವರ ಓದಿದ ಪಾಶ್ಚಾತ್ಯನೊಬ್ಬ (ಅಂದರೆ ಎಳನೀರಿನ ಪರಿಚಯ ವಿಲ್ಲದವರು) ‘ಅತಿ ಎಳನೀರು ಸೇವಿಸಿದರೆ ಹೈಪರ್‌ಕೆಲಾಮಿಯಾ ಬಂದರೂ ಬರಬಹುದು! ಆ ಮೂಲಕ ಸಾವು ಸಂಭವಿಸಲೂಬಹುದು’ ಎಂದು ತಿಳಿದರೆ ಅಚ್ಚರಿ ಇಲ್ಲ! ಆದರೆ, ಅಂತಹ ಸಾಧ್ಯತೆ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ ಎನ್ನುತ್ತಾರೆ ನಮ್ಮ ದೇಶದ ವೈದ್ಯರು.

ಆ ಅಂತರ್ಜಾಲ ಬರಹ ಇಷ್ಟಕ್ಕೇ ನಿಲ್ಲುವುದಿಲ್ಲ. ದಕ್ಷಿಣ ಭಾರತದಲ್ಲಿ ಎಳನೀರನ್ನು ಉಪಯೋಗಿಸಿ, ವೃದ್ಧರನ್ನು ಕೊಲ್ಲುವ ಪದ್ಧತಿ ಇದೆ ಎಂದೂ ಹೇಳುತ್ತದೆ! ಅದಕ್ಕೆ ಯಾವ ‘ಆಧಾರ’ ನೀಡಲಾಗಿದೆ ಎಂದು ಹುಡುಕಿದರೆ, ತಮಿಳುನಾಡಿನ ಕೆಲವು ಹಳ್ಳಿಗಳಲ್ಲಿ ಇದ್ದಿರಬಹು ದಾದ ತಲೈಕೂತಲ್ ಎಂಬ ಪದ್ಧತಿಯನ್ನು ಉದಹರಿಸಲಾಗಿದೆ. ತಲೆಗೆ ಸ್ನಾನ ಮಾಡಿಸಿ, ತಕ್ಷಣ ಒಂದೆರಡು ಎಳನೀರನ್ನು ಕುಡಿಸಿದರೆ, ವೃದ್ಧರು ಒಂದೆರಡು ದಿನಗಳಲ್ಲಿ ಸಾಯಬಹುದು ಎಂಬ ಮೂಢನಂಬಿಕೆಯಾಧಾರಿದ ಪದ್ಧತಿಯ ಪತ್ರಿಕಾ ವರದಿಯನ್ನು, ವಿಕಿಪೀಡಿಯಾದ ಆ ಮಾಹಿತಿಗೆ ‘ಆಧಾರ’ ವನ್ನಾಗಿ ನೀಡಲಾಗಿದೆ.

ಎಳನೀರಿನ ಉತ್ತಮ ಗುಣಗಳನ್ನು ಮರೆಮಾಚಲು ಇಂತಹ ಕೆಲವು ಮಾಹಿತಿಗಳನ್ನು ವಿಕಿಪೀಡಿಯಾದಲ್ಲಿ ಸೇರಿಸಿಬಿಟ್ಟರೆ, ತಮ್ಮ ಕೆಲಸ ಹಗುರವಾದೀತು ಎಂದು ತಿಳಿದ ಕೆಲವು ಲಾಬಿಗಳ ಹುನ್ನಾರ ಇದಾಗಿರಬಹುದು. ಏಕೆಂದರೆ, ಔಷಧವಿಲ್ಲದೇ ರೋಗಗಳನ್ನು ಗುಣಪಡಿ ಸುವ ಶಕ್ತಿ ಎಳನೀರಿಗೆ ಇದೆ ಎಂಬ ನಂಬಿಕೆಯ ಬುಡವನ್ನು ಅಲ್ಲಾಡಿಸುವುದು ಕೆಲವು ಹಿತಾಸಕ್ತಿಗಳ ಉದ್ದೇಶ. ಇಲ್ಲವಾದರೆ, ಒಂದು ವಸ್ತುವಿನ ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡೂ ವಿಚಾರಗಳನ್ನು ನೀಡುವ ಬದಲು, ಉತ್ತಮ ಗುಣಗಳಿಗೆ 25 ಪದ, ಕೆಟ್ಟದ್ದೆಂದು ಆರೋಪಿಸಲಾದ ಗುಣಗಳಿಗೆ 150 ಪದ ಮೀಸಲಿಡುವ ಚಾಳಿಗೆ ಏನು ಹೇಳಬಹುದು!

ಇಂತಹ ತಪ್ಪು ಮಾಹಿತಿ, ಸುಳ್ಳು ಮಾಹಿತಿ, ಸತ್ಯವನ್ನು ಮರೆಮಾಚುವ ಪ್ರಯತ್ನ ವಿಕಿಪೀಡಿಯಾದಲ್ಲಿ ಅಲ್ಲಲ್ಲಿ ನೂರಾರು ಕಡೆ ಹರಡಿದ್ದು, ಇವೆಲ್ಲವನ್ನೂ ಗಮನಿಸಿದರೆ, ಇದು ವಿಶ್ವಮಟ್ಟದ ಒಂದು ಹುನ್ನಾರ ಎನಿಸಿದರೂ ಅಚ್ಚರಿ ಇಲ್ಲ! ಇಂತಹದೇ ಇನ್ನೊಂದು ಉದಾಹರಣೆ ನೋಡಬೇಕಾದರೆ, ‘ಸರ್ಪಗಂಧಿ’ (ರಾವೋಲ್ಪೀಯಾ ಸರ್ಪೆಂಟೈನಾ) ಎಂಬ ನಮ್ಮ ದೇಶದ ಹೆಮ್ಮೆಯ ಸಸ್ಯದ ಕುರಿತ ಪುಟವನ್ನು ವಿಕಿ ಪೀಡಿಯಾದಲ್ಲಿ ನೋಡಬಹುದು.

ಅಧಿಕ ರಕ್ತದ ಒತ್ತಡವನ್ನು ನಿಯಂತ್ರಿಸಲು ಈ ಸಸ್ಯವನ್ನು ಬಳಸಿ, ವಿಶ್ವದಲ್ಲೇ ಮೊತ್ತಮೊದಲ ಬಾರಿ ‘ರೆಸರ‍್ಪಿನ್’ ಎಂಬ ಔಷಧವನ್ನು ತಯಾರಿಸಲಾಗಿತ್ತು. ಈ ಸಂಶೋಧನೆಯನ್ನಾಧರಿಸಿ, ನಂತರದ ವರ್ಷಗಳಲ್ಲಿ ಹೊಸ ಔಷಧಗಳನ್ನು ಹುಡುಕಲಾಗಿತ್ತು. ಸರ್ಪಗಂಧಿ ಯು ಅನಾದಿ ಕಾಲದಿಂದಲೂ ನಮ್ಮ ದೇಶದಲ್ಲಿ ಔಷಧಿಯ ಸಸ್ಯವಾಗಿ ಉಪಯೋಗವಾಗುತ್ತಿದ್ದು, ಅದರಲ್ಲಿರುವ ಔಷಧಿಯ ಗುಣಗಳ ಬಗ್ಗೆ ಸಾಕಷ್ಟು ಸಂಶೋಧನೆಗಳೂ ಆಗಿವೆ. ಈ ಸಸ್ಯವು ನಮ್ಮ ದೇಶ ಮತ್ತು ದಕ್ಷಿಣ ಏಷ್ಯಾದ ಕೆಲವು ಭಾಗಗಳಲ್ಲಿ ಮಾತ್ರ ಬೆಳೆಯುತ್ತದೆ.

1950ರ ದಶಕದಲ್ಲಿ ಈ ಸಸ್ಯದ ಬೇರನ್ನು ಪಾಶ್ಚಾತ್ಯ ದೇಶಗಳು ಅಪಾರ ಸಂಖ್ಯೆಯಲ್ಲಿ ಆಮದು ಮಾಡಿಕೊಂಡಿದ್ದರಿಂದಾಗಿ, ಒಮ್ಮೆಗೇ ಈ ಸಸ್ಯವು ಅವನತಿಯ ಹಾದಿ ಹಿಡಿದು, ದಕ್ಷಿಣ ಭಾರತದ ಮೂರು ರಾಜ್ಯಗಳಲ್ಲಿ ಅದು ಇಂದು ಅಪಾಯದ ಅಂಚಿನಲ್ಲಿರುವ ಸಸ್ಯ ಎಂದು
ಗುರುತಿಸಿಕೊಂಡಿದೆ. ಸಹಜವಾಗಿ ಇದೊಂದು ಅಮೂಲ್ಯ ಔಷಧಿಯ ಸಸ್ಯ. ಆದರೆ ವಿಕಿಪೀಡಿಯಾ ಪುಟದಲ್ಲಿ, ಇದರ ಬಳಕೆಯಿಂದ ಆಗ ಬಹುದಾದ ‘ಗಂಭೀರ ಅಡ್ಡ ಪರಿಣಾಮ’ (ಪೊಟೆನ್ಶಿಯಲ್ ಅಡ್ವರ್ಸ್ ಎಫೆಕ್ಟ್ಸ್) ಗಳ ಕುರಿತು ಒಂದು ಪ್ಯಾರಾ ಇದೆ, ಹೊರತು ಇದರ
ಉತ್ತಮ ಗುಣಗಳ ಕುರಿತು ವಿಶೇಷ ಪ್ರಸ್ತಾಪವೇ ಇಲ್ಲ! ಜತೆಗೆ ಆಯುರ್ವೇದದಲ್ಲಿ ಇದರ ಉಪಯೋಗವಿದೆ ಎಂಬ ಮಾಹಿತಿಯೂ ಇಲ್ಲ.

ನಮ್ಮ ದೇಶದ ಅಪರೂಪದ ಸಸ್ಯ ಸರ್ಪಗಂಧಿಯಿಂದ ತಯಾರಿಸಿದ ಔಷಧಿಯ ಸೇವನೆಯಿಂದ ಆಗುವ ಗಂಭೀರ ಅಡ್ಡ ಪರಿಣಾಮಗಳನ್ನು ವಿಶ್ವಕ್ಕೆ ತಿಳಿಸುವ ಕೆಲಸ ಮಾಡುವಂತಿದೆ ಆ ಲೇಖನ! ವಿಕಿಪೀಡಿಯಾದಲ್ಲಿ ಇಂತಹ ಅಪಸವ್ಯಗಳು ಒಂದೆರಡಲ್ಲ. ಕೆಲವು ತಪ್ಪು ಮಾಹಿತಿ ಯು ಕಿಡಿಗೇಡಿತನ ಎನಿಸಿದರೆ, ಇನ್ನು ಕೆಲವು ತಪ್ಪು ಮಾಹಿತಿಯು ಕ್ರಿಮಿನಲ್ ಕೆಲಸದಂತೆ ಕಾಣಿಸುತ್ತದೆ. ಆಯುರ್ವೇದದ ಕುರಿತು ಇರುವ ಪುಟವನ್ನು ತೆರೆದರೆ, ಮೊದಲ ಕೆಲವು ವಾಕ್ಯಗಳು ಹೀಗಿವೆ ‘ಆಯುರ್ವೇದವು ಭಾರತದ ಉಪಖಂಡದಲ್ಲಿ ಪರ್ಯಾಯ ಔಷಧಿಯ ಪದ್ಧತಿಯಾಗಿದೆ.

ಆಯುರ್ವೇದದ ಥಿಯರಿ ಮತ್ತು ಪ್ರಾಕ್ಟೀಸ್ ‘ಸೂಡೋಸೈಂಟಿಫಿಕ್’ ಎನಿಸಿದೆ. ‘ವಿಕಿಪೀಡಿಯಾದ ಪ್ರಕಾರ ಆಯುರ್ವೇದವು ‘ಸೂಡೋ ಸೈಂಟಿಫಿಕ್’. ಸಹಜವಾಗಿಯೇ, ನಮ್ಮ ದೇಶದ ಈ ಪುರಾತನ ವೈದ್ಯಪದ್ಧತಿಯನ್ನು ಸೂಡೋಸೈಂಟಿಫಿಕ್ ಎಂದು ಓದಿದವರಿಗೆ ಬೇಸರ
ಎನಿಸಿ, ಅದನ್ನು ಸರಿಪಡಿಲು ಹೊರಟರೆ, ವಿಕಿಪೀಡಿಯಾ ‘ಟಾಕ್ ಪೇಜ್’ನಲ್ಲೇ ಒಂದು ಎಚ್ಚರಿಕೆ ಇದೆ! ‘ಈ ಲೇಖನದಲ್ಲಿರುವ ಸೂಡೈ ಸೈಂಟಿಫಿಕ್ ಮತ್ತು ಕ್ವಾಕರಿ ಎಂಬ ಪದಗಳ ಕುರಿತು ನಿಮ್ಮ ತಕರಾರನ್ನು ದಾಖಲಿಸಿದರೆ, ಅದನ್ನುತಕ್ಷಣ ಡಿಲೀಟ್ ಮಾಡಲಾಗುವುದು!…’ ಆಯುರ್ವೇದ ಪದ್ಧತಿಯು ವೈಜ್ಞಾನಿಕವಲ್ಲ ಎಂಬುದನ್ನು ಎತ್ತಿ ತೋರಿಸಲು ಈ ಲೇಖನದಲ್ಲಿ ಸಾಕಷ್ಟು ಪ್ರಯತ್ನ ಮಾಡಲಾಗಿದೆ ಮತ್ತು ಈ ಪದ್ಧತಿಯ ವಿರುದ್ಧ ಅಲೋಪತಿ ಪದ್ಧತಿಯು ಎತ್ತಿರುವ ತಕರಾರುಗಳನ್ನು ದೊಡ್ಡದಾಗಿ ತೋರಿಸುವುದೇ ಈ ಬರಹದ ಉದ್ದೇಶವೇನೊ ಎನಿಸುತ್ತದೆ.

ಜಗತ್ತಿನ ಹಲವೆಡೆ ವೈದ್ಯಕೀಯ ಪದ್ಧತಿಯೊಂದು ಉಗಮವಾಗುವ ಮುಂಚೆಯೇ ಆಯುರ್ವೇದವು ನಮ್ಮ ದೇಶದಲ್ಲಿ ಸುಸ್ಥಿರವಾಗಿ ಬೆಳೆದಿತ್ತು ಎಂಬ ವಿಚಾರವನ್ನು ಹೈಲೈಟ್ ಮಾಡುವ ಬದಲು, ತಕರಾರುಗಳೇ ವೈಭವೀಕರಿಸಿರುವುದು ಈ ಲೇಖನದ ಹೈಲೈಟ್!
ಮೇಲಿನ ಮೂರು ಲೇಖನಗಳು ಸಣ್ಣ ಮಟ್ಟ ಉದಾಹರಣೆ ಅಷ್ಟೆ. ಇಲ್ಲಿ ಮಾಹಿತಿಯನ್ನು ತಿರುಚಲಾಗಿದೆ ಅಥವಾ ನಮ್ಮ ದೇಶದ ಉತ್ತಮ ವಿಚಾರವನ್ನು ಎದ್ದು ಕಾಣಿಸದೇ ಇರುವಂತೆ ಮಾಡುವ ಪ್ರಯತ್ನ ನಡೆದಿದೆ.

ಆದರೆ, ಇಡಿ ಇಡೀ ಸುಳ್ಳುಗಳನ್ನೇ ತುಂಬಿಕೊಂಡಿರುವ, ನಮ್ಮ ದೇಶದ ವಿರುದ್ಧ ಅಭಿಪ್ರಾಯ ಮೂಡಿಸುವಂತಹ ಹಲವು ಬರಹಗಳು, ಮಾಹಿತಿಯ ಉಂಡೆಗಳು ವಿಕಿಪೀಡಿಯಾದಲ್ಲಿ ಇವೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ನಮ್ಮ ದೇಶದ ಮೇಲೆ ಪಾಕಿಸ್ತಾನದ ನೌಕಾ
ಸೇನೆಯು ‘ಆಪರೇಷನ್ ದ್ವಾರಕಾ’ ಎಂಬ ಹೆಸರಿನಲ್ಲಿ ಆಕ್ರಮಣ ಮಾಡಿತ್ತು ಎಂಬ ವಿಚಾರವೇನಾದರೂ ನಿಮಗೆ ಗೊತ್ತೆ? ಆ ಮೂಲಕ ದ್ವಾರಕಾ ಪಟ್ಟಣದ ಮೇಲೆ ಬಾಂಬುಗಳನ್ನು ಸುರಿಸಲಾಯಿತು ಎಂದು ಪಾಕಿಸ್ತಾನವು ಪ್ರಚಾರ ಮಾಡುತ್ತಿರುವುದು ನಿಮಗೆ ಗೊತ್ತೆ? ವಿಕಿಪೀಡಿಯಾದಲ್ಲಿರುವ ‘ಆಪರೇಷನ್ ದ್ವಾರಕಾ’ ಎಂಬ ಪುಟವನ್ನು ನೋಡಿದರೆ ಇಂತಹ ಅಚ್ಚರಿಯ ವಿವರಗಳನ್ನು ಓದಬಹುದು!

1965ರ ಸೆಪ್ಟೆಂಬರ್ ಮತ್ತು 7 ಮತ್ತು 8 ರಂದು ಪಾಕಿಸ್ತಾನದ ನೌಕಾಪಡೆಯು, ಗುಜರಾತ್‌ನ ದ್ವಾರಕಾ ಪಟ್ಟಣದ ಬಳಿ ಬಂದು, ಅಲ್ಲಿರುವ ರಾಡಾರ್ ಸ್ಟೇಷನ್‌ನ್ನು ನಾಶಪಡಿಸಲು ಪ್ರಯತ್ನ ನಡೆಸಿತಂತೆ. ಆಗ ನಡೆಯುತ್ತಿದ್ದ ಯುದ್ಧದ ಭಾಗವಾಗಿ, ನಮ್ಮ ಸೇನೆಯ ಗಮನವನ್ನು ಈಚೆಗೆ ಸೆಳೆಯಲು ಈ ದಾಳಿಯನ್ನು ನಡೆಸಲಾಯಿತು ಮತ್ತು ಏಳು ಯುದ್ಧ ನೌಕೆಗಳು ಭಾರತದ ಮೇಲೆ ಆಕ್ರಮಣ ಮಾಡಿದವು ಎನ್ನುತ್ತದೆ ಈ ವಿಕಿಪೀಡಿಯಾ ಪುಟ. ಆದರೆ, ಈ ‘ದಾಳಿ’ಯ ವಿವರಗಳು ಹಾಸ್ಯಾಸ್ಪದವಾಗಿವೆ.

ಸುಮಾರು ಇಪ್ಪತ್ತು ನಿಮಿಷಗಳ ಕಾಲ ಪಾಕಿಸ್ತಾನದ ನೌಕೆಗಳು ತಲಾ 50 ಷೆಲ್‌ಗಳನ್ನು ಹಾರಿಸಿದರೂ, ಯಾವುವೂ ರೆಡಾರ್ ಮೇಲೆ
ಬೀಳಲಿಲ್ಲ, ರೆಡಾರ್ ನಾಶವಾಗಲೂ ಇಲ್ಲ. ರೈಲ್ವೆ ಇಲಾಖೆಯ ಅತಿಥಿ ಗೃಹ ಮತ್ತು ಅಲ್ಲಿದ್ದ ಸಿಮೆಂಟ್ ಫ್ಯಾಕ್ಟರಿ ಮೇಲೆ ಕೆಲವು ಷೆಲ್‌ಗಳು ಬಿದ್ದು, ಹಾನಿ ಮಾಡಿದವು. ಹೆಚ್ಚಿನ ಷೆಲ್‌ಗಳು ಖಾಲಿ ಜಾಗದಲ್ಲಿ ಬಿದ್ದವು ಮತ್ತು ಹೆಚ್ಚಿನ ಷೆಲ್‌ಗಳು ಸಿಡಿಯಲೇ ಇಲ್ಲ!

ಸಿಡಿಯದೇ ಉಳಿದಿದ್ದ 40 ಷೆಲ್‌ಗಳು ಲಭ್ಯವಾಗಿದ್ದು, ಅವುಗಳ ಮೇಲೆ 1940ರಲ್ಲಿ ಭಾರತದಲ್ಲಿ ತಯಾರಿಸಿದ್ದು ಎಂಬ ಮಾಹಿತಿ ಇತ್ತು!
ಕೊನೆಯ ಪರಿಣಾಮವೇನೆಂದರೆ, ಪಾಕಿಸ್ತಾನದ ಹಡಗುಗಳು ವಾಪಸಾದವು. ಇಂತಹ ಸಣ್ಣ ಘಟನೆಯನ್ನು ದೊಡ್ಡ ಆಕ್ರಮಣ ಎಂದು ಬಿಂಬಿಸುವ ‘ಆಪರೇಷನ್ ದ್ವಾರಕಾ’ ಎಂಬ ಪುಟವೇ ವಿಕಿಪೀಡಿಯಾದಲ್ಲಿದೆ! ಅಲ್ಲಿನ ಎಡಿಟ್ ಹಿಸ್ಟರಿಯ ಕಮೆಂಟ್‌ಗಳಲ್ಲಿ, ‘ಇದನ್ನು ಪಾಕಿಸ್ತಾನದ ಜಯ ಎಂದು ಪರಿಗಣಿಸಬೇಕು’ ಎಂಬ ಕಮೆಂಟ್ ಗಳಿವೆ! ಇದನ್ನೋದಿದ ಇಂದಿನ ತಲೆಮಾರಿನ ಅಮಾಯಕರು, ಇದು ನಿಜವಾಗಿಯೂ ಒಂದು ನೌಕಾ ಆಕ್ರಮಣ ಎಂದು ತಿಳಿಯುವ ಸಾಧ್ಯತೆ ಇದೆ, ಆದ್ದರಿಂದಲೇ ಇದನ್ನು ತಪ್ಪುದಾರಿಗೆಳೆ ಯುವ ಲೇಖನ ಎಂದು ಕರೆದದ್ದು.

ವಿಕಿಪೀಡಿಯಾದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಹೊಸ ಲೇಖನವನ್ನು ಬರೆಯುವ ಅವಕಾಶ ಅಷ್ಟು ಸುಲಭವಾಗಿ ದೊರೆಯುವುದಿಲ್ಲ, ಆದರೂ ಆಪರೇಷನ್ ದ್ವಾರಕಾ ದೊಡ್ಡ ಗಾತ್ರದ ಲೇಖನವು ಅಲ್ಲಿದೆ! ವಿಕಿಪೀಡಿಯಾದ ಎಲ್ಲಾ ವಿವರಗಳೂ ಸತ್ಯವಲ್ಲ ಎಂಬುದಕ್ಕೆ ಇದೊಂದು ಸಣ್ಣ
ಉದಾಹರಣೆ. ಜಗತ್ತಿನ ಉಚಿತ ಎನ್‌ಸೈಕ್ಲೊಪಿಡಿಯಾ ಎಂದು ಘೋಷಿಸಿಕೊಂಡಿರುವ ವಿಕಿಪೀಡಿಯಾದಲ್ಲಿ ಯಾರು ಬೇಕಾದರೂ ಬರೆಯಬಹುದು, ಯಾರು ಬೇಕಾದರೂ ಹೊಸ ಲೇಖವನ್ನು ಸಿದ್ಧಪಡಿಸಬಹುದು.

ಆ ಲೇಖನಗಳನ್ನು ನೋಡಲು, ತಿದ್ದಲು, ಸರಿಪಡಿಸಲು ತನ್ನದೇ ಆದ ವ್ಯವಸ್ಥೆಯನ್ನು ವಿಕಿಪೀಡಿಯಾ ರೂಪಿಸಿದೆ. ಈ ಸೌಲಭ್ಯ ಮೇಲ್ನೋ ಟಕ್ಕ ಆಕರ್ಷಕ ಎನಿಸಿದರೂ, ಕೆಲವು ಹಿತಾಸಕ್ತಿಗಳು ಈ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗಮನಕ್ಕೆ ಬರುತ್ತದೆ. ವಿಶ್ವದಾದ್ಯಂತ ತನ್ನ ಪ್ರಭಾವ ಹೊಂದಿರುವ ವಿಕಿಪೀಡಿಯಾದಲ್ಲಿ ಇಂತಹ ಬರಹಗಳನ್ನು (ಅಂದರೆ ತಪ್ಪು ಮಾಹಿತಿ, ತಪ್ಪುದಾರಿಗೆಳೆಯುವ ಮತ್ತು ಸತ್ಯವನ್ನು ಮರೆಮಾಚುವ ಮಾಹಿತಿ) ರೂಪಿಸಿ, ಕಾಪಾಡಿಕೊಂಡು ಬರಬಹುದು ಎಂಬ ವಿಚಾರವೇ, ಎಲ್ಲೋ

ಒಂದು ಕಡೆ ಸಣ್ಣ ಗುಮಾನಿಯನ್ನು ಹುಟ್ಟುಹಾಕುತ್ತದೆ. ವಿಕಿಪೀಡಿಯಾದಂತಹ ‘ಉಚಿತ ಎನ್‌ಸೈಕ್ಲೊಪಿಡಿಯಾ’ವು ಸಹ ಪಾಶ್ಚಾತ್ಯ ಜಗತ್ತಿನ ಹಿತಾಸಕ್ತಿಯನ್ನು ಕಾಪಾಡುವ ಮತ್ತೊಂದು ಟೂಲ್ ಇರಬಹುದೇ?