Wednesday, 11th December 2024

ಪಠ್ಯ ಮಕ್ಕಳಿಗಾ ?, ಖಾದಿ ಕಾವಿಗಳಿಗಾ ?

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಬರಗೂರು ರಾಮಚಂದ್ರಪ್ಪರೇನು ಆಲೂರು ವೆಂಕಟರಾಯರಂಥ, ಕುವೆಂಪು ಅವರಂಥ ಮಹಾಮೇದಾವಿ ವಿದ್ವಾಂಸ ರೇನಲ್ಲ. ಹಾಗೆಯೇ ರೋಹಿತ್ ಚಕ್ರತೀರ್ಥ ಸಹ ಮಕ್ಕಳಿಗೆ ದಿಕ್ಸೂಚಿಯಲ್ಲ. ಹೆಚ್ಚೆಂದರೆ ಇವರ ಪಾಠಗಳಿಂದ ಮುಂದಿನ ತರಗತಿಗೆ ಉತ್ತೀರ್ಣರಾಗಲು ಮಕ್ಕಳು ಅಂಕಗಳನ್ನು ಪಡೆಯಬಹುದು.

ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳುಗಳಾಗುತ್ತಿದೆ. ಪಠ್ಯಪುಸ್ತಕಗಳು ಮಕ್ಕಳ ಕೈಗೆ ಸಿಗದೇ ಅವರ ಪಾಡನ್ನು ಕೇಳುವವರೇ ಇಲ್ಲ. ಕಳೆದ ಎರಡು ವರ್ಷಗಳಿಂದ ಆನ್‌ಲೈನ್ ಶಿಕ್ಷಣದಿಂದ ಬೇಸತ್ತ ಮಕ್ಕಳಿಗೆ ಈ ವರ್ಷವೂ ಮೊಬೈಲ್ ಅವಲಂಬನೆ ತಪ್ಪಿಲ್ಲ. ಕಾರಣ ಪಠ್ಯಪುಸ್ತಕದ ವಿವಾದದಿಂದಾಗಿ ಪುಸ್ತಕಗಳು ಸಮಯಕ್ಕೆ ಸರಿಯಾಗಿ ಮುದ್ರಣವಾಗಿ ಶಾಲೆಗಳನ್ನು ಸೇರದೇ, ಸರಕಾರದ ವೆಬ್‌ಸೈಟ್‌ಗಳಲ್ಲಿ ತುಂಬಿರುವ ಪಿಡಿಎಫ್ ಮಾದರಿ ಪಠ್ಯಗಳನ್ನೇ ಡೌನ್‌ಲೋಡ್ ಮಾಡಿಕೊಳ್ಳುವ ಅನಿವಾರ್ಯ ಎದುರಾಗಿದೆ.

ಇನ್ನಷ್ಟು ಮಕ್ಕಳು ಪಿಡಿಎಫ್ ಅನ್ನೇ ಪ್ರಿಂಟ್ ಹಾಕಿಸಿಕೊಳ್ಳುವ, ಝೆರಾಕ್ಸ್ ಮಾಡಿಸಿ ಕೊಳ್ಳುವ ದುಬಾರಿ ಕ್ರಮಗಳಿಗೆ ಮುಂದಾ ಗಿದದ್ದಾರೆ. ಆದರೆ ರಾಜಕಾರಣಿಗಳು, ಮಠಾಧೀಶರು, ಜಾತಿ ನಾಯಕರು ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಎಲ್ಲರಿಗೂ ತಮ್ಮ ಜಾತಿಗಳ ಪ್ರತಿಷ್ಠಿಯೇ ಹೆಚ್ಚಾಗಿ ಬಿಟ್ಟಿದೆ. ಒಬ್ಬನಾದರೂ ‘ಮೊದಲು ಮಕ್ಕಳಿಗೆ ಪಠ್ಯಪುಸ್ತಕ ಕೊಡಿ, ಅವರ ಓದಿಗೆ ತೊಂದರೆಯಾಗಬಾರದು. ಉಳಿದವನ್ನು ಆಮೇಲೆ ಚರ್ಚಿಸೋಣ’ ಎಂಬ ಕಾಳಜಿ ತೋರುತ್ತಿಲ್ಲ. ಎಲ್ಲರದ್ದೂ ಬರೀ ಹೋರಾಟ-ಹಾರಾಟ, ಕುಲಗೆಟ್ಟ ರಾಜಕೀಯವೇ ಆದ್ಯತೆಯಾಗಿದೆ.

ಕುವೆಂಪು ಅವರಿಗೆ ಅವಮಾನವಾಗಿದೆ ಎನ್ನುವ ಮಂದಿ ಕುವೆಂಪು ಅವರಿಗೆ ಜ್ಞಾನಪೀಠ ತಂದುಕೊಟ್ಟ ‘ರಾಮಾಯಣ ದರ್ಶನಂ’ ಕೃತಿಯ ಜೀವಾಳವಾಗಿರುವ ಶ್ರೀರಾಮನ ನಿಂದಕರ ಬಗ್ಗೆ ಎಂದಾದರು ಸೊತ್ತಿದ್ದಾರೆಯೇ? ‘ರಾಘವ ಮಧುಸೂದನವರ ವತರಿಸಿದ’ ಎಂದು ಕುವೆಂಪು ಅವರು ಗೌರವಿಸಿರುವ ಮಧುಸೂದನ ಅರ್ಥಾತ್ ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆಗೆ ಬೆಂಕಿ ಇಟ್ಟು ಅವಮಾ ನಿಸಿದವರನ್ನು ಎಂದಾದರು ಖಂಡಿಸಿದ್ದಾರೆಯೇ? ಒಕ್ಕೂಟ ವ್ಯವಸ್ಥೆಯಲ್ಲಿದ್ದೂ ದೇಶವೇ ಬೇರೆ ರಾಜ್ಯವೇ ಬೇರೆ ಎಂಬಂಥ ದ್ವಂದ್ವ ಪ್ರದರ್ಶಿಸುತ್ತಿರುವವವರು ಕುವೆಂಪು ಜಾತಿಯನ್ನು ಗುರಾಣಿ ಮಾಡಿಕೊಂಡಿದ್ದಾರೆ.

ಆದರೆ, ಅದೇ ಕುವೆಂಪು ಅವರ ಕಾವ್ಯದಲ್ಲಿನ ‘ದೇಶ ನನ್ನದು ನಾಡು ನನ್ನದು ಎನ್ನದ ಮಾನವನೆದೆ ಸುಡುಗಾಡು, ಜಯ ಭಾರತ ಜನನಿಯ ತನುಜಾತೆ’ ಎಂದಿರುವುದನ್ನು ಮರೆತಿದ್ದಾರೆ. ದೇಶಾಭಿಮಾನಕ್ಕೆ ಮೊದಲ ಆದ್ಯತೆ ನೀಡಿರುವ ಕುವೆಂಪು ಅವರ ದೇಶ ಭಕ್ತಿಯನ್ನು ಒಬ್ಬ ಹೊಟ್ಟೆಪಾಡಿನ ಹೋರಾಟಗಾರನಾದರೂ ಅನುಸರಿಸಿದ್ದಾರೆಯೇ? ‘ಜನನಿಯ ಜೋಗುಳ ವೇದದ ಘೋಷ, ಶಂಕರ ರಮನುಜ ಮಧ್ವ ವಿದ್ಯಾರಣ್ಯ’ ಎಂದು ವೈದಿಕ ಪರಂಪರೆಯನ್ನು ಗೌರವಿಸಿದ ಕುವೆಂಪು ಅವರ ನೈಜ ಜಾತ್ಯತೀತ ಮನಃ ಸ್ಥಿತಿಯನ್ನು ಮನಗಂಡು ಪಾಲಿಸಿದ್ದಾರೆಯೇ? ತಮ್ಮ, ಕುಟುಂಬದ ಉದ್ದಾರಕ್ಕಾಹಿ ವೈದಿಕರಿಂದ ಹೋಮ-ಹವನಾದಿಗಳನ್ನು ಮಾಡಿಸಿಕೊಳ್ಳುವ ಮಂದಿ ಅದೇ ಬಡಪಾಯಿ ಬ್ರಾಹ್ಮಣರನ್ನು ‘ಪುರೋಹಿತಶಾಹಿ, ಮನುವಾದಿ’ಎಂದು ನಿಂದಿಸಿ ತಮ್ಮ ‘ಮಾಂಸ’ ಬೇಯಿಸಿಕೊಳ್ಳುತ್ತಾರೆ!

ಕುವೆಂಪು ಕಾಣದ ಜಾತಿಪ್ರೇಮವನ್ನು ಈ ದೇಶಗೇಡಿಗಳು ಕಾಣುತ್ತ, ಅಂಥ ವಿಶ್ವಮಾನವನಿಗೆ ಜಾತಿಯ ಬೇಲಿ ಹಾಕಿ  ಅವಮಾ ನಿಸುತ್ತಿದ್ದಾರೆ. ಒಂದೊಮ್ಮೆ ಪಠ್ಯಪುಸ್ತಕದಲ್ಲಿ ಕುವೆಂಪು ಅವರನ್ನು ಅವಮಾನಿಸಿದ್ದೇ ಆದರೆ ಅದು ನಿಜಕ್ಕೂ ಅಕ್ಷಮ್ಯ. ಹಾಗಾಗಿದ್ದಲ್ಲಿ ಕೇವಲ ಒಕ್ಕಲಿಗ ಸಮುದಾಯದವರು, ಆ ಸಮುದಾಯದ ಮಠಾಧೀಶರು ಮಾತ್ರ ದನಿ ಎತ್ತುವುದೂ ಕನ್ನಡದ ಮೇರುಕವಿಗೆ ಮಾಡುವ ಬಹುದೊಡ್ಡ ಅಪಚಾರ. ಮಾತ್ರವಲ್ಲ, ಅದು ಅಪಾಯಕಾರಿ ಬೆಳವಣಿಗೆಯೇ.

ಒಬ್ಬ ಮಹಾಪುರುಷನನ್ನು ಒಂದು ಜಾತಿಯ ಬೇಲಿಯೊಳಗೆ ತಂದು ನಿಲ್ಲಿಸಿ ಅನ್ಯಜಾತಿಗಳಿಗೆ ಅವರು ಬೇಡವೆಂದಾದರೆ ಕನ್ನಡದ ಸಮಗ್ರತೆಯ ಗತಿಯೇನು? ಕನ್ನಡದ ಅನಂತ ಅಸ್ಮಿತೆಯ ಭವಿಷ್ಯವೇನು? ಇದು ಬರಿಯ ಕುವೆಂಪು ಅವರಿಗಲ್ಲ. ಇಂದು ಕೆಂಪೇಗೌಡ, ಬಸವಣ್ಣ, ಕನಕದಾಸರು, ವಾಲ್ಮೀಕಿ, ವಿಶ್ವಕರ್ಮ, ಆಚಾರತ್ರಯರು, ದೇವರದಾಸಿಮಯ್ಯ, ಸಂಗೊಳ್ಳಿ ರಾಯಣ್ಣ… ಹೀಗೆ ಪ್ರತಿಯೊಬ್ಬ ಇತಿಹಾಸ ಮಹಾಪುರಷರನ್ನೂ ತಂತಮ್ಮ ಜಾತಿಯೊಳಗೆ ಸೀಮಿತಗೊಳಿಸಿ ಟ್ರೇಡ್ ಮಾರ್ಕ್ ಮಾಡಿ ಕೊಂಡಿರುವುದು ದುರಂತ.

ಕುವೆಂಪು ಅವರ ನೈಜ ವೈಶಾಲ್ಯವನ್ನು ರಾಜಕಾರಣಿಗಳಿಂದ ಕಲಿಯುವ ದರಿದ್ರ ಕನ್ನಡಿಗರಿಗಿಲ್ಲ. ಕತ್ತೆ ಎಷ್ಟೇ ಮುದಿಯಾದರೂ ಅದು ಕತ್ತೆಯೇ ಹೊರತು ಹಾಲು ಸಗಣಿ ಗಂಜಲ ನೀಡುವುದಿಲ್ಲ. ಆದಿಚುಂಚನಗಿರಿಯ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಪ್ರಬುದ್ಧ ಹಾಗೂ ಅಪಾರ ಜ್ಞಾನವುಳ್ಳ ಸಂಭಾವಿತ ಮಠಾಧೀಶರು. ಹಿಂದೂಧರ್ಮ, ಭಾರತೀಯ ಪರಂಪರೆ- ಸಂಸ್ಕೃತಿಯ ಕುರಿತು ಸಂಪೂರ್ಣ ಅನುಭೂತಿವುಳ್ಳವರು. ಅವರೆಂದಿಗೂ ಹಿಂದೂ ಧರ್ಮವನ್ನು ಕಡೆಗಣಿಸುವವರಲ್ಲ. ಇಂಥವರು
ಕನ್ನಡಿಗರಿಗೆ ಮಾರ್ಗದರ್ಶಕರಾಗಬೇಕೇ ಹೊರತು, ಸ್ವಾರ್ಥ ರಾಜಕಾರಣಿಗಳ ಮಾತಿಗೆ ಕಿವಿಗೊಡಬಾರದು.

ಇನ್ನು ಕನ್ನಡಧ್ವಜಕ್ಕೆ ಎಂದಿಗೂ ಅಪಮಾನವಾಗಬಾರದು ಸರಿ. ಆದರೆ ಕನ್ನಡವನ್ನು ಇವರೇ ಗುತ್ತಿಗೆ ಪಡೆದವರಂತೆ ಹೊಟ್ಟೆ ಪಾಡಿಗೆ, ಐಷರಾಮಿ ಶೋಕಿಗೆ ಬಳಸಿಕೊಂಡು ಮೆರೆಯುವ ಕೆಲ ಪೋಸ್ಟ್‌ಪೇಯ್ಡ್ -ಪ್ರೀಪೇಯ್ಡ್ ಗಿರಾಕಿಗಳಿಂದಲೇ ಇಂದು ಕನ್ನಡದ ಧ್ವಜ ಸರಕಾರದ ಮಟ್ಟದಲ್ಲಿ ಮಾನ್ಯತೆ ಕಳೆದುಕೊಂಡಿರುವುದು ಬಹುತೇಕ ಕನ್ನಡಿಗರಿಗೆ ತಿಳಿದಿಲ್ಲ. 1965ರಲ್ಲಿ ರಾಮಮೂರ್ತಿ ಯವರಿಂದ ಸ್ಥಾಪಿಸಲ್ಪಟ್ಟ ಕನ್ನಡಪಕ್ಷಕ್ಕಾಗಿ ಹಳದಿ ಕೆಂಪು ಬಣ್ಣದ ರಾಜಕೀಯ ಧ್ವಜ ಸ್ಥಾಪಿತವಾಗಿದ್ದು.

ಮುಂದೆ ಅದು ಕನ್ನಡಿಗರ ಹೋರಾಟಕ್ಕೆ ಬಳಕೆಯಾಗಿ ನಾಡು ನುಡಿಯ ಸಂಕೇತವಾಯಿತು. 2012ರಲ್ಲಿ ಬಿಜೆಪಿ ಮುಖ್ಯಮಂತ್ರಿ ಸದಾನಂದಗೌಡರ ಇಚ್ಛಾಶಕ್ತಿಯಿಂದಾಗಿ ನಾಡಧ್ವಜವಾಗಿ ಘೋಷಣೆಯಾಯಿತು. ಕನ್ನಡದ ಏಳಿಗೆಗಾಗಿ 269 ಕೋಟಿ ರು. ಬಿಡುಗಡೆ ಮಾಡಿ ರಾಜ್ಯೋತ್ಸವ ಸಂದರ್ಭದಲ್ಲಿ ಸರಕಾರಿ ಕಚೇರಿಗಳಲ್ಲಿ ಈ ಕನ್ನಡಧ್ವಜ ಹಾರಿಸುವುದು ಕಡ್ಡಾಯವೆಂದು ಘೋಷಿಸಿ ಬಾವುಟಕ್ಕೆ ಅಧಿಕೃತ ಸರಕಾರಿ ಸ್ಥಾನಮಾನ ನೀಡಿದ್ದೇ ಬಿಜೆಪಿ.

ಆದರೆ, ಅಂಥ ಧ್ವಜ ಬಳಸಿಕೊಂಡು ಗೂಂಡಾಗಿರಿಗೆ ಇಳಿದ ಕೆಲ ಅಯೋಗ್ಯರು ಧ್ವಜವನ್ನು ಮನಬಂದಂತೆ ಬಳಸುವುದರ ವಿರುದ್ಧ ಪ್ರeವಂತ ಕನ್ನಡಪ್ರೇಮಿಯೊಬ್ಬರು ಈ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿದ್ದರು. ದೂರನ್ನು ಸೂಕ್ಷ್ಮವಾಗಿ ಪರಿಗಣಿಸಿದ ನ್ಯಾಯಾಲಯ , ರಾಷ್ಟ್ರಧ್ವಜ ಹೊರತು ಪಡಿಸಿ ಸಂವಿಧಾನದ ರೀತ್ಯ ನಾಡಧ್ವಜದ ಸ್ಥಾನಮಾನಗಳ ಔಚಿತ್ಯ ಪ್ರಶ್ನೆ ಮಾಡಿತ ಲ್ಲದೇ, ರಾಷ್ಟ್ರದ ಧ್ವಜ ಸಂಹಿತೆ ನೀತಿಯಲ್ಲಿ ಇದು ಸಾಧ್ಯವೇ? ಎಂದು ಪ್ರಶ್ನಿಸಿ ಸರಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.

ಇದರಿಂದ ಎಚ್ಚೆತ್ತುಕೊಂಡ ಸದಾನಂದಗೌಡರ ಸರಕಾರ ಕೂಡಲೇ ಸಂವಿಧಾನಾತ್ಮಕ ತೊಡಕುಗಳನ್ನು ಪರಮಾರ್ಶಿಸಿ ನಾಡಧ್ವಜಕ್ಕೆ ಅಧಿಕೃತ ಸ್ಥಾನಮಾನ ನೀಡಲು ಅವಕಾಶವಿಲ್ಲದ್ದರಿಂದ ಕೂಡಲೆ ತನ್ನ ಸುತ್ತೋಲೆಯನ್ನು ವಾಪಸು ಪಡೆಯಿತು. ಈಗ ಹೇಳಿ ನಾಡಧ್ವಜಕ್ಕೆ ಪ್ರಾಥಮಿಕವಾಗಿ ಅಧಿಕೃತ ಸ್ಥಾನ ನೀಡಿದಾಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು ಯಾರಿಂದ? ಅದಕ್ಕೆ ಕಾರಣನಾದ ಮಹಾಪುರುಷ ಯಾರು? ಇದನ್ನೆಲ್ಲ ಕೆದಕಿದರೆ ಧಮಕಿ ಬೀಳುತ್ತದಷ್ಟೆ!

ಇನ್ನು ಬಸವಣ್ಣನವರಿಗೇನಾದರು ಅಪಮಾನವಾಗಿದ್ದರೆ ಖಂಡಿತಾ ಖಂಡನಾರ್ಹ. ದುರಂತವೇನೆಂದರೆ ಅವರನ್ನೂ ಒಂದು ಜಾತಿಯ ಕಟ್ಟಳೆಯಲ್ಲಿ ನಿಲ್ಲಿಸಿ ಗುರುತಿಸಲಾಗುತ್ತಿದೆ. ಹಿರಿಯ ಸಂಶೋಧಕರು, ಸಾಹಿತಿಗಳೂ ಆಗಿದ್ದ ನಾಡೋಜ ಡಾ.
ಎಂ.ಚಿದಾನಂದಮೂರ್ತಿಗಳು ತಾವೊಬ್ಬ ವೀರಶೈವ ಲಿಂಗಾಯತನಾಗಿದ್ದರೂ ಬಸವಣ್ಣನವರು ಮೂಲ ಬ್ರಾಹ್ಮಣರಾಗಿದ್ದರು (ಕುಲಕರ್ಣಿ) ಎಂಬುದನ್ನು ವಸ್ತುನಿಷ್ಠರಾಗಿ ಹೇಳುತ್ತಿದ್ದರು. ಆಜನ್ಮ ಶಿವಭಕ್ತರಾದ ಕಾರಣ ತನ್ನನ್ನು ತಾನು ಶಿವನ ವಾಹನ ನಂದಿ
ಎಂದು ಭಾವಿಸಿಕೊಂಡಿದ್ದ ಬಸವಣ್ಣನವರು ಸಮಾಜವನ್ನು ಒಂದೇ ವೇದಿಕೆಯಲ್ಲಿ ಕ್ರೋಡೀಕರಿಸಲೋಸಗ ಲಿಂಗಧಾರಣೆಮಾಡಿ ಲಿಂಗಾಯತರಾದರು. (ವೀರಶೈವ ಎಂಬ ಪದ ಬಸವಣ್ಣನವರಿಗೂ ಹಳೆಯದು- ಸಮಾಜ ಸುಧಾರಣೆಯಲ್ಲಿ ತೊಡಗುವ ಶಿವನ ಅನುಯಾಯಿ ‘ವೀರಶೈವ’ ಎಂದೆನಿಸಿಕೊಳ್ಳುತ್ತಾನೆ) ಆದರೆ ಅವರು ವೈದಿಕ ಪರಂಪರೆಯನ್ನು ನಿರಾಕರಿಸಲಿಲ್ಲ, ಸಮಾಜದ ಡೊಂಕನ್ನು ತಿದ್ದಲು ವೀರಶೈವ- ಲಿಂಗಾಯತರಾದರೇ ಹೊರತು ವೈಚಾರಿಕವಾಗಿ ಹಿಂದುತ್ವವನ್ನು ತೊರೆದವರಲ್ಲ. ಇದನ್ನು ಚಿಮೂಸಾರಿದ್ದಾರೆ.

ಇಂಥ ವಿಶ್ವಮಾನವ ಬಸವಣ್ಣನವರನ್ನು ಒಂದು ಜಾತಿಯ ಪುರುಷರನ್ನಾಗಿಸಿ ಈಗ ಅವರಿಗೆ ಧರ್ಮದ ಕೋಟೆಯನ್ನು ಕಟ್ಟಲು ಹೊರಟಿರುವುದು ದುರ್ದೈವ. ಇಂಥ ಸತ್ಯ ಮತ್ತು ನೈಜ ಇತಿಹಾಸವನ್ನು ಮಕ್ಕಳಿಗೆ ಹೇಳುವುದರ ಮೂಲಕ ಬಸವಣ್ಣನವರ
ಅನಂತತೆಯ ದರ್ಶನ ಮಾಡಿಸಬೇಕಿದೆ. ಈ ಜಾತಿವ್ಯಾದಿಗಳ ಹೋರಾಟವನ್ನು ನೋಡಿದರೆ ಇವರು ಬಯಸಿದ್ದನ್ನೇ ಮಕ್ಕಳು ಕಲಿಯಬೇಕು, ಇವರು ಕೊಟ್ಟಿದ್ದನ್ನೇ ಮಕ್ಕಳು ಓದಬೇಕೆಂಬ ಅವಿವೇಕತನ ಪ್ರದರ್ಶನವಾಘುತ್ತದೆ. ಆದರೆ ಡಾಕ್ಟರ್,
ಎಂಜಿನಿಯರ್ ಓದಿಕೊಂಡು ಜಿಹಾದಿ ಭಯೋತ್ಪಾದಕರಾಗಿ ಸಿಕ್ಕಿಬಿದ್ದು ಜೈಲುಸೇರಿದವರು ಓದಿದ ಪಠ್ಯಪುಸ್ತಕ ಯಾವುದೆಂದು ಯಾವನಾದರು ಕೇಳುವನೇ? ಮೊನ್ನೆ ಉಮೇಶ್‌ತ್ತಿಯೆಂಬ ಶಾಸಕ ರಾಜ್ಯವನ್ನೇ ಒಡೆಯುವ ಮಾತನ್ನಾಡಿದ್ದಾನೆ.

ಮೊದಲು ಹೋಗಿ ಆತನನ್ನು ಹಿಡಿದುಕೊಳ್ಳಿ. ಸಮಾಜವನ್ನು ಒಡೆಯದೇ ಒಗ್ಗೂಡಿಸಬೇಕಾದ ನಾಯಕರು, ಮಠಾಧಿಪತಿಗಳೇ ಜಾತಿವಾದಿಗಳಾಗಿ ಸರಕಾರವನ್ನು ಬೆದರಿಸಿ ಕಾವಿ ರಾಜಕೀಯ ಮಾಡುತ್ತಿರುವುದು ಸಮಾಜದಲ್ಲಿ ಅಸಹ್ಯವಾಗಿ ಕಾಣುತ್ತಿದೆ.
ಜೈಲಿನಲ್ಲಿರಬೇಕಾದ ಆಕೃತಿಗಳೆಲ್ಲ ರಾಜಕೀಯದಲ್ಲಿ ವಿಕೃತಿಯಾಗಿ ಅವತಾರವೆತ್ತಿ ಮೆರೆಯುತ್ತಿದ್ದಾರೆ. ನಕಲಿ ರೈತನಾಯಕರು, ಡೋಂಗಿ ಲದ್ದಿಜೀವಿಗಳು, ಸೋಗಲಾಡಿ ಚಿಂತಕರು, ತಿಪ್ಪೆ ಪ್ರಗತಿಪರರು, ಬರಗೆಟ್ಟ ಸಾಹಿತಿಗಳು, ಅಯೋಗ್ಯ ರಾಜಕಾರಣಿ
ಗಳು, ಗುಲಾಮಗಿರಿ ಪಕ್ಷಗಳು ಇವೇ ಸಮಾಜದಲ್ಲಿ ತುಂಬಿ ತುಳುಕುತ್ತಿವೆ.

ಇವರ ಒಳಹೂರಣವನ್ನೇ ಪಠ್ಯದ ರೂಪದಲ್ಲಿ ಬಿಚ್ಚಿಟ್ಟರೂ ಸಾಕು ದೇಶಕ್ಕೆ ಭವಿಷ್ಯದಲ್ಲಿ ಯೋಗ್ಯ ಯುವ ನಾಯಕರು
ರೂಪು ಗೊಳ್ಳುತ್ತಾರೆ. ಮೊದಲು ಮಕ್ಕಳಿಗೆ ಪುಸ್ತಕವನ್ನು ಕೈಗಿಡಿ. ಯಡವಟ್ಟಾಗಿರುವ ಪಠ್ಯವನ್ನು ಪರಿಗಣಿಸದಿರಲು ಆದೇಶ ಹೊರಡಿಸಿ. ಕೊನೆಗೆ ತಮ್ಮ ಮಕ್ಕಳಿಗೆ ಯಾರ ಬಗ್ಗೆ ತಿಳಿಸಬೇಕು, ಎಂಥ ಇತಿಹಾಸ ಹೇಳಬೇಕೆಂಬುದನ್ನು ಹೆತ್ತವರು ನಿರ್ಧರಿಸು ತ್ತಾರೆ. ಬರಗೂರು ರಾಮಚಂದ್ರಪ್ಪರೇನು ಆಲೂರು ವೆಂಕಟರಾಯರಂಥ, ಕುವೆಂಪು ಅವರಂಥ ಮಹಾಮೇದಾವಿ
ವಿದ್ವಾಂಸರೇನಲ್ಲ.

ಹಾಗೆಯೇ ರೋಹಿತ್ ಚಕ್ರತೀರ್ಥ ಸಹ ಮಕ್ಕಳಿಗೆ ದಿಕ್ಸೂಚಿಯಲ್ಲ. ಹೆಚ್ಚೆಂದರೆ ಇವರ ಪಾಠಗಳಿಂದ ಮುಂದಿನ ತರಗತಿಗೆ ಉತ್ತೀ
ರ್ಣರಾಗಲು ಮಕ್ಕಳು ಅಂಕಗಳನ್ನು ಪಡೆಯಬಹುದು. ಆದರೆ ಹೆತ್ತವರು ತಮ್ಮ ಮನೆತನ ಪಿತ್ರಾರ್ಜಿತ ಆಸ್ತಿಪಾಸ್ತಿಯ ಹಕ್ಕಿನಂತೆ ದೇಶದ ಪೂರ್ವಜರ ಸಂಸ್ಕಾರವನ್ನು ಮಕ್ಕಳಿಗೆ ಕಲಿಸುವ ಹೊಣೆಗಾರಿಕೆ ತೋರಬೇಕಿದೆ. ದೇಶ ಪರಂಪರೆ, ಸಂಸ್ಕೃತಿ,  ಆಚಾರ ವಿಚಾರಕ್ಕೆ ಪೂರಕವಾಗಿ ಮಕ್ಕಳನ್ನು ಬೆಳೆಸಬೇಕಿದೆ.

ಕಾವಿ ತೊಟ್ಟವರೆಲ್ಲ ಸ್ವಾಮೀಜಿಗಳಲ್ಲ, ಲಿಂಗಧಾರಣೆ ಮಾಡಿದವರೆಲ್ಲ ಬಸವಣ್ಣನವರಲ್ಲ, ಕನ್ನಡಧ್ವಜ ಹಾರಿಸಿದವರೆಲ್ಲ ಕನ್ನಡವನ್ನು ಉಳಿಸುವುದಿಲ್ಲ, ಚಾಚಾ ಆದವರೆಲ್ಲ ಸಾಚಾಗಳಲ್ಲ, ಗಾಂಧಿ ಹೆಸರಿನವರೆಲ್ಲ ಮಹಾತ್ಮರಲ್ಲ, ಸಂವಿಧಾನ  ಕೈಯ್ಯಲ್ಲಿ ಹಿಡಿದವರೆಲ್ಲ ಬಾಬಾಸಾಹೇಬರಲ್ಲ, ರಾಜಕಾರಣಿಗಲ್ಲ ದೇಶೋದ್ದಾರಕರಲ್ಲ, ಮುದಿಯಾದವರೆಲ್ಲ ಮುತ್ಸದ್ದಿಗಳಲ್ಲ -ಇಂಥ ಸತ್ಯ, ಸಾಮಾನ್ಯ ಜ್ಞಾನದ ಪಾಠಗಳನ್ನು ಮನೆಪಾಠವಾಗಿ ತಮ್ಮ ಮಕ್ಕಳಿಗೆ ಹೇಳುವ ಪರಿಪಾಠವನ್ನು ಪೋಷಕರು ರೂಢಿಸಿಕೊಳ್ಳಬೇಕಿದೆ.

ಮಕ್ಕಳ ಮತ್ತು ದೇಶದ ಭವಿಷ್ಯವನ್ನು ಭದ್ರಗೊಳಿಸಲು ಉಜ್ವಲಗೊಳಿಸಲು ಇಂಥ ನೈತಿಕ ಪಾಠ ಹೇಳುವ ಅನಿವಾರ್ಯವಿದೆ. ಇದನ್ನೇ ಗುರುಸರ್ವಜ್ಞಮೂರ್ತಿಗಳು ‘ಅಕ್ಕರವು ಲೆಕ್ಕಕ್ಕೆ ತರ್ಕ ತಾವಾದಕ್ಕೆ ಮಿಕ್ಕ ಓದುಗಳು ತಿರುಪೆಗೆ, ಮೋಕ್ಷಕ್ಕೆರಡಕ್ಕರವೇ ಸಾಕು ಸರ್ವಜ್ಞ’ ಎಂದಿರುವುದು. ಇಲ್ಲಿ ಮೋಕ್ಷವೆಂಬುದು ದೇಶಾಭಿಮಾನವಾಗಲಿ.