Wednesday, 11th December 2024

ಕಾಮುಕರ ಕುತ್ತಿಗೆಗೆ ಗಂಟೆ ಕಟ್ಟುವ ವ್ಯವಸ್ಥೆ ನಮ್ಮಲ್ಲಿಯೂ ಬೇಕಾಗಿದೆ !

ಶಿಶಿರ ಕಾಲ

shishirh@gmail.com

ಅವನೊಬ್ಬ ಬ್ಯುಸಿನೆಸ್‌ಮನ್. ಅವನ ಹೆಸರು ಜೆಫ್ರಿ ಎಪ್‌ಸ್ಟೀನ್. ಎಲ್ಲ ದೇಶಗಳಲ್ಲಿಯೂ ಶ್ರೀಮಂತರ ಬಗ್ಗೆಯೇ ಕೆಲವು ಪತ್ರಿಕೆಗಳಿರುತ್ತವೆ. ಅಂಥ ಪತ್ರಿಕೆಗಳಲ್ಲಿ ಅವನ ಹೆಸರು ಆಗೀಗ ಬಂದುಹೋಗುತ್ತಿತ್ತು. ಅವನೊಬ್ಬ ಆಗರ್ಭ ಶ್ರೀಮಂತ. ಹಲವು ಊರುಗಳ ಶ್ರೀಮಂತ ಬಡಾವಣೆಗಳಲ್ಲಿ ಅವನ ಮನೆಗಳಿದ್ದವು. ದೊಡ್ಡ ಜನರ ಜತೆ ಆತ ಗುರುತಿಸಿಕೊಳ್ಳುತ್ತಿದ್ದ. ದೊಡ್ಡ ದೊಡ್ಡವರು ಅಂದರೆ ಯಾವ ಲೆವೆಲ್ಲಿನವರು? ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಡೊನಾಲ್ಡ್ ಟ್ರಂಪ್, ಲಿಯಾನಾರ್ಡೋ ಡಿ ಕ್ಯಾಪ್ರಿಯೊ (ಟೈಟಾನಿಕ್ ಹೀರೋ), ಅಲ್ ಗೋರ್ (ಅಮೆರಿಕದ ಮಾಜಿ ಉಪಾಧ್ಯಕ್ಷ) ಮೊದಲಾದವರ ಜತೆಯೆಲ್ಲ ಪಾರ್ಟಿ ಮಾಡುವ ಇವನ ಫೋಟೋ ಈಗೀಗ ಪ್ರಕಟವಾಗುತ್ತಿತ್ತು.

ನ್ಯೂಯಾರ್ಕಿನ ಯಾವುದೇ ಶ್ರೀಮಂತರ ಪಾರ್ಟಿಗಳಿರಲಿ, ಅಲ್ಲೆಲ್ಲ ಈತ ಕಾಣಿಸಿಕೊಳ್ಳುತ್ತಿದ್ದ. ಆದರೆ ಇವನ ವ್ಯಾಪಾರ-ವ್ಯವಹಾರವೇನು ಎಂಬ ಬಗ್ಗೆ ಎಲ್ಲಿಯೂ ಮಾಹಿತಿಯಿರಲಿಲ್ಲ. ಎಷ್ಟು ಗೌಪ್ಯವೆಂದರೆ ೨೦೦೨ರಲ್ಲಿ ‘ನ್ಯೂಯಾರ್ಕ್ ಪೋಸ್ಟ್’ ಪತ್ರಿಕೆ ‘ಇಂಟರ್‌ನ್ಯಾಷನಲ್ ಮನಿ ಮ್ಯಾನ್ ಆಫ್ ಮಿಸ್ಟರಿ’- ನಿಗೂಢ ಶ್ರೀಮಂತ ಎಂದು ವರದಿ ಮಾಡಿತ್ತು. ಜೆಫ್ರಿ ಎಪ್‌ಸ್ಟೀನ್ ಮೂಲದಲ್ಲಿ ಒಬ್ಬ ಗಣಿತ ಶಿಕ್ಷಕನಾಗಿದ್ದವ, ಅದೂ ನ್ಯೂಯಾರ್ಕ್‌ನ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ. ಅಲ್ಲಿಗೆ ಬರುತ್ತಿದ್ದವರೆಲ್ಲ ಶ್ರೀಮಂತರ ಮನೆಯ ಮಕ್ಕಳು. ಆತ ಶಾಲೆಯ ವೆರಾಂಡಾದಲ್ಲಿ ನಡೆಯುವಾಗಲೆಲ್ಲ ಹೆಣ್ಣು ಮಕ್ಕಳನ್ನು ಕೆಟ್ಟ ರೀತಿಯಲ್ಲಿ ನೋಡುತ್ತಾನೆ, ಅವನ ವರ್ತನೆ ಸರಿಯಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು.

ಕ್ರಮೇಣ, ಅವನಿಗೆ ಕಲಿಸಲಿಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ಶಾಲೆಯಿಂದ ತೆಗೆದುಹಾಕಿದರು. ನಂತರ ಆತ ತನ್ನ ಹೆಸರಲ್ಲಿ ಒಂದು ಕಂಪನಿಯನ್ನು ತೆರೆದ. ಮೊದಲು ಚಿಕ್ಕಪುಟ್ಟ ವ್ಯವಹಾರ ನೋಡಿಕೊಳ್ಳುವಾಗ ಪ್ರಭಾವಿ ವ್ಯಕ್ತಿಗಳ ಸ್ನೇಹ ಬೆಳೆಸಿಕೊಂಡ. ಅಲ್ಲಿಂದ ವ್ಯವಹಾರಕ್ಕೆ ಇಳಿದ! ವ್ಯವಹಾರ ವೆಂದರೆ ಏನು? ಹದಿಹರೆಯದ, ಮನೆಯಲ್ಲಿ ತೊಂದರೆಯುಳ್ಳ ಹೈಸ್ಕೂಲ್ ಹುಡುಗಿಯರನ್ನು ಹುಡುಕಿ ಗುರುತಿಸುವುದು, ಅವರಿಗೆ ಹಣದ ಆಸೆ ತೋರಿಸುವುದು. ಮನೆಗೆ ಬಂದು ಮಸಾಜ್ ಮಾಡಿದರೆ ಯಥೇಚ್ಛ ಹಣ ಕೊಡುತ್ತೇನೆ ಎಂದು ನಂಬಿಸಿ ಕರೆಸಿಕೊಳ್ಳುವುದು.

ನಂತರ ಮಸಾಜ್ ಹೆಸರಿನಲ್ಲಿ ಅವರ ಮೇಲೆ ಅತ್ಯಾಚಾರ. ಅಷ್ಟೇ ಅಲ್ಲ, ಆ ವಿಷಯವನ್ನು, ವಿಡಿಯೋಗಳನ್ನು ಬಳಸಿಕೊಂಡು ಅವರನ್ನು ಹೈಟೆಕ್ ವೇಶ್ಯಾವಾಟಿಕೆಗೆ ತಳ್ಳುವುದು. ಈತ ಟಾರ್ಗೆಟ್ ಮಾಡುತ್ತಿದ್ದುದೇ ಹದಿಹರೆಯದ, ಮಾನಸಿಕವಾಗಿ ದುರ್ಬಲವಾಗಿರುವ ಹುಡುಗಿಯರನ್ನು. ಬಡ, ಬುದ್ಧಿವಂತ, ಆದರೆ ಆದಷ್ಟು ಬೇಗ ಶ್ರೀಮಂತರಾಗಿಬಿಡಬೇಕೆಂಬ ಆಸೆಯಿಟ್ಟುಕೊಂಡ ಹುಡುಗಿಯರನ್ನು. ಅವರ ಮೂಲಕ, ಅವರ ಸಹಪಾಠಿಗಳಿಗೆ ಕೂಡ ಆಮಿಷ ಒಡ್ಡಿ ಮೋಸದಿಂದ ಕರೆಸಿಕೊಳ್ಳುವುದು. ಅಂಥ ಹುಡುಗಿಯರನ್ನು ಶ್ರೀಮಂತರಿಗೆ, ಪ್ರಬಲ ವ್ಯಕ್ತಿಗಳೆನಿಸಿಕೊಂಡವರಿಗೆ  ಒದಗಿಸಿ ಕೊಡುವುದು!

ಅವನು ಕೇವಲ ಬಿಲಿಯನೇರ್ ಪ್ರಭಾವಿ ವ್ಯಕ್ತಿಗಳ ಜತೆಯಷ್ಟೇ ವ್ಯವಹಾರ ಮಾಡುತ್ತಿದ್ದ. ಅವರ ಹಣಕಾಸಿನ ವ್ಯವಹಾರ ನೋಡಿಕೊಳ್ಳುವುದು ಎಂಬ ನೆಪ ಮೇಲ್ನೋಟಕ್ಕೆ, ಒಳಗೆ ಆತ ನಡೆಸುತ್ತಿದ್ದುದು ಮಾತ್ರ ಬಿಲಿಯನೇರ್ ವೇಶ್ಯಾವಾಟಿಕೆ. ಒಮ್ಮೆ ಆತ ಹೀಗೆಯೇ ಹದಿಹರೆಯದ ಹುಡುಗಿಯೊಬ್ಬಳ
ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದಾಗ, ತಪ್ಪಿಸಿಕೊಂಡು ಓಡಿಬಂದ ಆಕೆ ಪೊಲೀಸ್ ಸ್ಟೇಷನ್ನಿಗೆ ಹೋಗಿ ದೂರು ಕೊಟ್ಟಿದ್ದಳು. ಇದು ನಡೆದದ್ದು ೨೦೦೫ ರಲ್ಲಿ. ಆಗ ಪೊಲೀಸರು ಅವನ ಹಿಂದೆ ಬಿದ್ದರು. ಆದರೆ ಆತ ಅದೆಷ್ಟು ಪ್ರಭಾವಿಯಾಗಿದ್ದ ಅಂದರೆ, ತನ್ನ ಬಗ್ಗೆ ನಡೆಸುತ್ತಿದ್ದ ವಿಚಾರಣೆ ಅರ್ಧಕ್ಕೇ ನಿಲ್ಲುವಂತೆ ನೋಡಿಕೊಂಡ. ತಾನು ಹೆಣ್ಣು ಮಕ್ಕಳನ್ನು ಒದಗಿಸಿದ್ದ ವ್ಯಕ್ತಿಗಳ ಪ್ರಭಾವ ಬಳಸಿಕೊಂಡ.

ತನ್ನನ್ನು ಬಂಧಿಸಿದರೆ, ವಿಚಾರಣೆ ಮಾಡಿದರೆ ದೊಡ್ಡ ದೊಡ್ಡವರದ್ದೆಲ್ಲ ಹೆಸರು ಬಹಿರಂಗಪಡಿಸುತ್ತೇನೆ ಎಂದು ಹೆದರಿಸಿದ. ಇದರಿಂದ ಅವನ ಸೇವೆ ಪಡೆದವರೆಲ್ಲ ಅಂಜಿ, ಪ್ರಭಾವಿಗಳು, ಮಾಜಿ ಅಧ್ಯಕ್ಷರಾದಿಯಾಗಿ ಎಲ್ಲರೂ ಮರೆಯಲ್ಲಿ ಅವನ ಬೆನ್ನಿಗೆ ನಿಂತರು, ಅವನನ್ನು ರಕ್ಷಿಸಿದರು. ಆತ ಮಾತ್ರ ಇದೆಲ್ಲದರ ನಡುವೆ ವ್ಯವಹಾರವನ್ನು ಮುಂದುವರಿಸಿಕೊಂಡು ಹೋದ. ಇದೆಲ್ಲ ನಡೆಯುತ್ತಿರುವಾಗ ಮಾಧ್ಯಮದವರಿಗೆ ಇವನ ಮುಂದುವರಿದ ವ್ಯವಹಾರದ ಬಗ್ಗೆ ಎಲ್ಲಿಲ್ಲದ ಅನುಮಾನ ಶುರುವಾಯಿತು. ಅದರಲ್ಲಿಯೂ ಬ್ರಿಟಿಷ್ ಮಾಧ್ಯಮಗಳು ಇವನ ಹಿಂದೆ ಬಿದ್ದವು. ಅದಕ್ಕೆ ಕಾರಣ, ರಾಜ ಮನೆತನದ ಪ್ರಿನ್ಸ್ ಆಂಡ್ರ್ಯೂ ನ್ಯೂಯಾರ್ಕಿಗೆ ಬಂದಾಗ ಇವನ ಆತಿಥ್ಯದಲ್ಲಿ ಕೆಲವು ಸಮಯ ಕಳೆದಿದ್ದ.

ಪ್ರಿನ್ಸ್ ಆಂಡ್ರ್ಯೂ ರಾಣಿ ಎಲಿಜಬೆತ್‌ಳ ಎರಡನೇ ಮಗ. ಈ ಇಬ್ಬರು ಬಿಲ್ಡಿಂಗ್ ಒಳಗೆ ಹೋಗುತ್ತಿರುವುದನ್ನು, ನಂತರ ಅಪ್ರಾಪ್ತ ಹುಡುಗಿಯೊಬ್ಬಳು
ಅದೇ ಬಿಲ್ಡಿಂಗ್‌ನೊಳಗೆ ಹೋಗಿ ಬರುವುದನ್ನು ಬಿಬಿಸಿಯ ಫೋಟೋ ಪತ್ರಕರ್ತನೊಬ್ಬ ಸೆರೆಹಿಡಿದಿದ್ದ. ಅದು ಮಾರನೆಯ ದಿನದ ಬ್ರಿಟಿಷ್ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಇದಾದ ನಂತರ ಮಾಧ್ಯಮಗಳು ಈತನ ಮೇಲೆ ಮುಗಿಬಿದ್ದವು. ಅಂತೆಯೇ ಅಮೆರಿಕದ ಪೊಲೀಸರು ಕೂಡ ಇವನ ಮನೆ ಸುತ್ತ ಗಸ್ತು ಹೊಡೆಯಲು ಶುರುಮಾಡಿದರು. ಅದಾಗಿಯೂ ಇವನನ್ನು ಏನೂ ಮಾಡಲಿಕ್ಕಾಗಲಿಲ್ಲ. ಏಕೆಂದರೆ ಈತ ಹೆಣ್ಣು ಮಕ್ಕಳನ್ನು ಒದಗಿಸುತ್ತಿದ್ದುದು ಅಮೆರಿಕದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಿಗಲ್ಲವೇ? ಅವರ ಈ ಗೌಪ್ಯ ವಿಚಾರದ ಜತೆಯಲ್ಲಿ, ಅದೆಷ್ಟೋ ಬಿಲಿಯನೇರ್‌ಗಳ ವ್ಯವಹಾರದ ಸಂಪೂರ್ಣ ಪವರ್ ಆಫ್ ಅಟಾರ್ನಿಯನ್ನು ಇವನೇ ಪಡೆದುಕೊಂಡಿದ್ದ. ಅದೆಷ್ಟು ದುಡಿದನೋ, ಅದೆಷ್ಟು ಅತ್ಯಾಚಾರಗಳಾದವೋ? ಅದ್ಯಾರ್ ಯಾರು ಇವನ ಆತಿಥ್ಯ ಸ್ವೀಕರಿಸಿದರೋ- ಪಟ್ಟಿ ನೂರಾರು ಪ್ರಭಾವಿಗಳತ್ತ ಬೆರಳು ಮಾಡುತ್ತದೆ.

ಇದೆಲ್ಲ ಹೊರಬರುತ್ತಿದ್ದಂತೆ ಇವನನ್ನು ಪೊಲೀಸರು ಬಂಧಿಸಿದರು, ಅದೂ ಜುಲೈ ೨೦೧೯ರಲ್ಲಿ. ಈತನ ೨೫ ವರ್ಷದ ಹೈಟೆಕ್ ದಂಧೆ ಕೊನೆಗೂ ಅಂತ್ಯವಾಯಿತು. ಆದರೆ ಆಗಸ್ಟ್ ೨೦೧೯, ಬಂಧನವಾದ ಒಂದೇ ತಿಂಗಳೊಳಗೆ ಈತ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ! ಬಹುಶಃ, ಇಷ್ಟು ದೊಡ್ಡ ಮಟ್ಟದಲ್ಲಿ ಅಪ್ರಾಪ್ತರನ್ನು ಬಳಸಿಕೊಂಡು ಹೀಗೆ ದಂಧೆ ನಡೆಸಿದ್ದು ಇತಿಹಾಸದಲ್ಲಿಯೇ ಇನ್ನೊಂದಿರಲಿಕ್ಕಿಲ್ಲ. ಈತ ಯಾರ‍್ಯಾರಿಗೆ ಈ ರೀತಿ ಹೆಣ್ಣು ಮಕ್ಕಳನ್ನು ಒದಗಿಸಿದ್ದನೋ ಅವರೆಲ್ಲರ ರಾಜಕೀಯ ಪ್ರಭಾವದಿಂದ ಈ ಪ್ರಕರಣವಿಂದು ಬಹುತೇಕ ಮುಚ್ಚಿಹೋಗುತ್ತಿದೆ. ಇಲ್ಲಿ ಈತನಿಗಿಂತ ದೊಡ್ಡ ತಪ್ಪಿತಸ್ಥರು ಈ ಬಿಲಿಯನೇರ್‌ಗಳು, ಪ್ರಭಾವಿಗಳು, ರಾಜಕಾರಣಿಗಳು. ಆದರೆ ಈತನೇ ಸತ್ತು ಹೋದ ಮೇಲೆ ಈ ಇಡೀ ಕೇಸು ತಲೆಕೆಳಗಾಯಿತು.

ಸಾಕ್ಷ್ಯಗಳು ಸಿಗದಾಗಿವೆ. ಆದರೆ ಸಿಕ್ಕಿಬಿದ್ದು ಇಲ್ಲಿಯವರೆಗೆ ಶಿಕ್ಷೆ ಅನುಭವಿಸಿದವನೆಂದರೆ ರಾಣಿ ಎಲಿಜಬೆತ್‌ಳ ಎರಡನೇ ಮಗ ಪ್ರಿನ್ಸ್ ಆಂಡ್ರ್ಯೂ ಮಾತ್ರ. ಜೆಫ್ರಿ ಎಪ್‌ಸ್ಟೀನ್‌ನ ಕಾಮುಕ ವ್ಯವಹಾರ ಬಹಿರಂಗವಾಗುತ್ತಿದ್ದಂತೆ, ಅದಕ್ಕೆ ಬೇಕಾದ ಸಾಕ್ಷ್ಯಗಳು ಸಿಗುತ್ತಿದ್ದಂತೆ ಬ್ರಿಟಿಷ್ ರಾಯಲ್ ಕುಟುಂಬ ಆತನನ್ನು ಹೊರಹಾಕಿತು. ಆತನಿಗಿದ್ದ ಎಲ್ಲ ಬಿರುದಾಂಕಿತಗಳನ್ನು ಹಿಂತೆಗೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಯಿತು. ಆದರೆ ಇಂದಿಗೂ ಬ್ರಿಟಿಷ್ ಪೊಲೀಸರು, ಸರಕಾರ ಮತ್ತು ರಾಜಮನೆತನದ ಪ್ರಕಾರ ಆತ ಮುಗ್ಧ- ನಿರ್ದೋಷಿ!!

ಈ ಜೆಫ್ರಿ ಎಪ್‌ಸ್ಟೀನ್ ಕಥೆಯನ್ನು ನಿಮಗೆ ಹೇಳಲಿಕ್ಕೆ ಕಾರಣವಿದೆ. ಸಾಮಾನ್ಯವಾಗಿ ಹೆಣ್ಣನ್ನು ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುವ ಸಮಾಜವು ಅತ್ಯಂತ ಬಡ, ಹಿಂದುಳಿದದ್ದು ಎಂಬುದು ಸಾಮಾನ್ಯ ಗ್ರಹಿಕೆ. ಅಫ್ಘಾನಿಸ್ತಾನ, ಸಿರಿಯಾ ಅಲ್ಲೆಲ್ಲ ಮಾತ್ರವೇ ಹೆಣ್ಣಿನ ಶೋಷಣೆ ನಡೆಯುತ್ತದೆ ಎಂಬ ಸಹಜ ನಂಬಿಕೆಯಿದೆ. ಆದರೆ ಅತ್ಯಂತ ಮುಂದುವರಿದ, ಜಗತ್ತಿನ ವ್ಯವಸ್ಥೆಯಲ್ಲಿಯೇ ಶ್ರೇಷ್ಠವೆನಿಸಿಕೊಳ್ಳುವ ದೇಶದಲ್ಲಿ ಇಂದಿನ ದಿನದಲ್ಲಿಯೂ ಇದೆಲ್ಲ ನಡೆಯುತ್ತದೆ ಎನ್ನುವುದಕ್ಕೆ ಇದು ಉದಾಹರಣೆ. ಅಷ್ಟೇ ಅಲ್ಲ, ಯಾವುದೇ ದೇಶವಿರಲಿ ಪ್ರಭಾವಿಗಳು ತಪ್ಪಿಸಿಕೊಳ್ಳುತ್ತಾರೆ ಎಂಬುದಕ್ಕೂ ಇದುವೇ
ಉದಾಹರಣೆ. ಎಂಥದ್ದೇ ಒಳ್ಳೆಯ ವ್ಯವಸ್ಥೆಯಿರಲಿ, ಅಲ್ಲಿಯೂ ಇಂಥ ಕಾಮುಕರಿರುತ್ತಾರೆ. ಅವರ ಇಂಥ ಕ್ರೂರ ಬಯಕೆಯನ್ನು ಪೂರೈಸಲಿಕ್ಕೆ ಕೂಡ ಅಲ್ಲೊಂದು ವ್ಯವಸ್ಥೆ ಸೃಷ್ಟಿಯಾಗಿರುತ್ತದೆ.

ಅದು ಆಗೀಗ ಬಹಿರಂಗವಾದಾಗ ವ್ಯವಸ್ಥೆಗೇ ಸವಾಲಾಗಿ ನಿಲ್ಲುತ್ತದೆ. ಜೆಫ್ರಿ ಎಪ್‌ಸ್ಟೀನ್ ಮೇಲೆ ಮೊದಲ ಕೇಸ್ ಆಗಿದ್ದು ೨೦೦೫ರಲ್ಲಿ. ಅಲ್ಲಿಂದ ಮುಂದೆ ೧೪ ವರ್ಷ ಆತ ಈ ವ್ಯವಹಾರವನ್ನು ಸಮಾಜದ ನಡುವೆಯೇ ನಡೆಸಿಕೊಂಡು ಹೋದನಲ್ಲ! ಅಷ್ಟೇ ಅಲ್ಲ, ಬಿಲಿಯನ್‌ಗಟ್ಟಲೆ ಇದರಿಂದ ಗಳಿಸಿದನಲ್ಲ! ಇದಲ್ಲವೇ ವಿಡಂಬನೆ? ಇಂಥದ್ದೆಲ್ಲ ಸರ್ವವ್ಯಾಪಿಯಾಗಿರುವುದು ಕಂಡಾಗ, ಇದು ವಿಡಂಬನೆಯೋ ಅಥವಾ ಮನುಷ್ಯ ಸಮಾಜ ಇರುವುದೇ ಹೀಗೆಯೋ? ಎಂಬ ಪ್ರಶ್ನೆ ಮೂಡುತ್ತದೆ. ನಾವು ಸಮಾಜದ ಇಂಥ ಹೇಸಿಗೆಯನ್ನು ಅಲಕ್ಷಿಸುತ್ತಿದ್ದೇವೆಯೇ? ಅಥವಾ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗು ತ್ತಿದೆಯೇ? ಏಕೆಂದರೆ, ಹೆಣ್ಣಿಗೆ ಶಾಲೆಯಲ್ಲಿ, ಕೆಲಸದ ಜಾಗದಲ್ಲಿ, ಅಂಗಡಿ ಮಾಲುಗಳಲ್ಲಿ, ಕೆಲವೊಮ್ಮೆ ಮನೆಯಲ್ಲಿಯೇ ಆಗುವ ಶೋಷಣೆಗೆ ಪರಾರಿ ಯಾಗುವ ಮಾರ್ಗ ಸುಲಭದ್ದಲ್ಲ.

ಕಾನೂನಿದೆ. ಆದರೆ ಅದುವೇ ಇನ್ನೊಂದು ಶೋಷಣೆಯಾಗಬಹುದೆಂಬ ಹೆದರಿಕೆಯೂ ಇದೆ. ಹಲವು ಒತ್ತಡಗಳಿಂದ, ಅದೆಷ್ಟೋ ಅತ್ಯಾಚಾರಗಳು ಕುಟುಂಬ ದವರ ಮೂಗಿನ ಕೆಳಗೇ ನಡೆಯುತ್ತವೆ. ಕೃಷಿ ಕೂಲಿ ಕಾರ್ಮಿಕರಿರಬಹುದು, ಸರಕಾರಿ ಅಥವಾ ಖಾಸಗಿ ನೌಕರರಿರಬಹುದು, ಎಲ್ಲಿಯೂ ಕಿರುಕುಳಕ್ಕೆ ಸಾಧ್ಯತೆಯಿದೆ. ಅಲ್ಲಿ ಇಂಥ ಕಾಮುಕರಿದ್ದರೆ ತಪ್ಪಿಸಿಕೊಳ್ಳುವುದು ಕಷ್ಟ. ಲೈಂಗಿಕ ಕಿರುಕುಳ ಎಂದರೆ ಕೇವಲ ಅತ್ಯಾಚಾರವಷ್ಟೇ ಅಲ್ಲ, ಅನವಶ್ಯಕವಾಗಿ ಹೆಣ್ಣಿನ ದೇಹವನ್ನು ಮುಟ್ಟುವುದು ಇತ್ಯಾದಿ ಕೂಡ ಇದರ ವ್ಯಾಪ್ತಿಗೆ ಬರುವಂಥದ್ದೇ. ಹಲವು ಉದ್ಯೋಗಗಳಲ್ಲಿ ಗಂಡಿನ ಲೈಂಗಿಕ ಅಹಂ ಅನ್ನು ಹೆಣ್ಣು ಒಂದಿಲ್ಲೊಂದು ರೀತಿ ಯಲ್ಲಿ ಎದುರಿಸಬೇಕಾಗುತ್ತದೆ. ಕಿರುಕುಳವೆಂದರೆ ಮೆಸೇಜ್ ಮಾಡಿ ರಗಳೆ ಕೊಡುವುದು, ಉದ್ಯೋಗ ದಾಚೆಗಿನ ಸ್ನೇಹಕ್ಕೆ ಆಹ್ವಾನಿಸುವುದು ಹೀಗೆ ಹತ್ತಾರು ರೂಪ.

ನಾನಿಲ್ಲಿ ಗಂಡಸರೆಲ್ಲ ಕೆಟ್ಟವರೆಂದು ಹೇಳುತ್ತಿಲ್ಲ, ಒಳ್ಳೆಯವರ ಸಂಖ್ಯೆಯೇ ಜಾಸ್ತಿಯಿದೆ. ಆದರೆ ಇಂಥ ಘಟನೆ ಎಲ್ಲಿಯೇ ನಡೆದದ್ದು ಬೆಳಕಿಗೆ ಬರಲಿ, ಅಲ್ಲಿ ಆರೋಪಿಗೆ ಶಿಕ್ಷೆಯಾಗುವುದೇ ಪರಿಹಾರ ಎಂದು ತಪ್ಪಾಗಿ ವ್ಯವಹರಿಸಬಾರದು. ಬದಲಿಗೆ, ಒಂದು ವ್ಯವಸ್ಥೆಯಲ್ಲಿ ಇಂಥದ್ದಕ್ಕೆ ಅವಕಾಶವಿದೆ ಎಂಬುದನ್ನು ಮೊದಲು ಗುರುತಿಸಬೇಕು. ಅಲ್ಲಿರುವ ಅವಲಂಬನೆಯನ್ನು ಮೊದಲು ತೆಗೆದುಹಾಕಬೇಕು. ಇವತ್ತು ಒಬ್ಬ ಸಿಕ್ಕಿಬಿದ್ದಿರಬಹುದು. ಆದರೆ ಇದರ ಜತೆಯಲ್ಲಿ, ಇದೆಲ್ಲದಕ್ಕೆ ಸಾಧ್ಯವಾದ ವ್ಯವಸ್ಥೆಯನ್ನು ಸರಿಪಡಿಸದಿದ್ದಲ್ಲಿ, ಇನ್ನೊಬ್ಬ ಕಾಮುಕ ಆ ಜಾಗದಲ್ಲಿ ನಾಳೆ ಬೀಜವೂರಿ ನೆಲೆಸುತ್ತಾನೆ, ಬೇರು ಬಿಟ್ಟುಕೊಳ್ಳುತ್ತಾನೆ.

ಇಂಥವರನ್ನು ಕಾಮುಕ, ವಿಕೃತಕಾಮಿ ಇತ್ಯಾದಿ ಸಂಬೋಧಿಸುವುದಕ್ಕಿಂತ ಸರಿಯಾದ ಶಬ್ದ Sexual Predators – ಕಾಮುಕ ಪರಭಕ್ಷಕರು. ನೀವು ನರಭಕ್ಷಕ ಹುಲಿಯ ರೋಚಕ ಕಥೆಗಳನ್ನು ಓದಿಯೇ ಇರುತ್ತೀರಿ. ಮಾಂಸಾಹಾರಿ ಪ್ರಾಣಿಗಳನ್ನೆಲ್ಲ ಪರಭಕ್ಷಕಗಳೆಂದು ಸಂಬೋಧಿಸುವುದಿಲ್ಲ. ಯಾವ ಪ್ರಾಣಿ ಬೇಟೆಯಾಡಿ ತನ್ನ ಆಹಾರವನ್ನು ಗೆಲ್ಲುತ್ತದೆಯೋ ಅದು Predator- ಸಂಚಿನ ಬೇಟೆ. ಹೇಗೆ ಭಕ್ಷಕ ಪ್ರಾಣಿ ತನ್ನ ಬೇಟೆಯನ್ನು ಹೊಂಚು ಹಾಕಿ ಸಾಧಿಸುತ್ತೆ, ಇವೆಲ್ಲವೂ ಜೀವರೋಚಕವೇ. ಪರಭಕ್ಷಕಗಳು ಕತ್ತಲೆಯ ನೆರಳಲ್ಲಿ ಅಡಗಿಕೊಂಡಿರುತ್ತವೆ. ಗುಂಪಿನ ದುರ್ಬಲರನ್ನು ಕ್ಷಣಾರ್ಧದಲ್ಲಿ ಗ್ರಹಿಸಿ ಗುರುತು ಹಾಕಿಕೊಳ್ಳುತ್ತವೆ.

ಹಾಗೆ ಗುರುತಿಸುವುದು ಅವಕ್ಕೆ ತೀರಾ ಕಷ್ಟವಲ್ಲ. ಒಂದು ಹಾಯುವ ನೋಟದಲ್ಲಿಯೇ ತಿಳಿದುಬಿಡುತ್ತದೆ. ನಂತರದ್ದು ಬೇಟೆ. ಬ್ಲಡ್ ಶೆಡ್. ಕಾಮುಕ ಪರಭಕ್ಷಕರೂ ಹಾಗೆಯೇ ವ್ಯವಹರಿಸುವುದು. ಒಬ್ಬ ಕೊಲೆಗಾರನಿಗೂ ಮತ್ತು ಸರಣಿ ಕೊಲೆಗಾರನಿಗೂ (ಸೀರಿಯಲ್ ಕಿಲ್ಲರ್) ಸಾಕಷ್ಟು ವ್ಯತ್ಯಾಸವಿದೆ. ಕೊಲೆಗೆ ಕ್ಷಣಿಕ ಅಥವಾ ಯಾವುದೋ ಹಿನ್ನೆಲೆಯ ಕಾರಣವಿರುತ್ತದೆ. ಆದರೆ ಸರಣಿ ಕೊಲೆಗಾರನಿಗೆ ಕಾರಣ ಬೇಕಿಲ್ಲ; ಆತ ಸಿಕ್ಕಿದ ದುರ್ಬಲರನ್ನು ತನ್ನ ಟಾರ್ಗೆಟ್ ಮಾಡಿಕೊಳ್ಳುತ್ತಾನೆ. ಆತನಿಗೆ ಕೊಲೆ ಮಾಡುವುದೇ ಉದ್ದೇಶವೇ ವಿನಾ, ಕೊಲೆಗೆ ಕಾರಣ-ಞಟಠಿಜಿqಛಿ ಬೇಕಾಗಿಲ್ಲ. ಅದೇ ರೀತಿ ಈ ಸೆಕ್ಷುಯಲ್ ಪರಭಕ್ಷಕರು.

ಅವರಿಗೆ ಹೆಣ್ಣನ್ನು ಶೋಷಿಸುವುದೇ ಉದ್ದೇಶ. ಅದು ವಿಕೃತ ರೂಪ ಪಡೆದ ಗಂಡಿನ ಅಹಂ. ಅಂಥವರು ಅಷ್ಟಕ್ಕೇ ಸುಮ್ಮನಾಗುವುದಿಲ್ಲ. ವಿಡಿಯೋ ಚಿತ್ರೀಕರಿಸಿಕೊಳ್ಳುತ್ತಾರೆ, ಸಾಕ್ಷ್ಯ ಇಟ್ಟುಕೊಳ್ಳುತ್ತಾರೆ. ಇನ್ನಷ್ಟು ಶೋಷಿಸುತ್ತಾರೆ. ಅಂಥವರಿಗೆ ಫೋಟೋ-ವಿಡಿಯೋಗಳು ಟ್ರೋಫಿಯಿದ್ದಂತೆ! ಇಂಥವರಿಗೆ
ಪ್ರಭಾವಿಗಳು ಬೆನ್ನಿಗಿದ್ದರೆ, ಅಥವಾ ಇವರೇ ಪ್ರಭಾವಿಗಳಾದರೆ ಮುಗಿದೇಹೋಯಿತು. ಅಮೆರಿಕ ಮೊದಲಾದ ದೇಶಗಳು ಅದೆಷ್ಟೇ ಮುಂದುವರಿದಿದ್ದರೂ ಇಂಥದ್ದನ್ನೆಲ್ಲ ತಡೆಯುವ ವ್ಯವಸ್ಥೆಯಿಲ್ಲವೇ? ಎಂಬ ಪ್ರಶ್ನೆ ಸಹಜ. ಇದನ್ನು ತಡೆಯಲಿಕ್ಕೆಂದೇ ಅಮೆರಿಕ ಸರಕಾರ ಕ್ಷಿಪ್ರ ಕಾನೂನನ್ನು ರೂಪಿಸಿಟ್ಟು ಕೊಂಡಿದೆ. ಸಂವಿಧಾನವನ್ನು ಬದಲಿಸಿದೆ. ಲೈಂಗಿಕ ಶೋಷಣೆಗೆ ಅತ್ಯುಗ್ರ ಶಿಕ್ಷೆಯಿದೆ. ಅಷ್ಟೇ ಅಲ್ಲ, ಇದರ ಜತೆಯಲ್ಲಿ ಇಲ್ಲಿನ ಸರಕಾರ ಕಾಮುಕರ ಪಟ್ಟಿಯ ಡಾಟಾಬೇಸ್ ನಿರ್ಮಿಸಿಟ್ಟುಕೊಂಡಿದೆ.

ಯಾರೇ ಇರಲಿ, ಕಾಮುಕ ಕೃತ್ಯ, ಶೋಷಣೆ ಸಾಬೀತಾಯಿತೆಂದರೆ ಅಂಥವರ ಹೆಸರು ಈ ಯಾದಿಗೆ ಸೇರುತ್ತದೆ. ಇದು ಸಾರ್ವಜನಿಕರಿಗೆ ಲಭ್ಯವಾಗುವ
ಬಹಿರಂಗ ಹೆಸರಿನ ಪಟ್ಟಿ. ಯಾರು ಬೇಕಿದ್ದರೂ ಇದನ್ನು ನೋಡಬಹುದು. ನಮ್ಮ ಅಕ್ಕಪಕ್ಕದ ಮನೆಯಲ್ಲಿ ಇಂಥವರು ಇದ್ದಾರೆಯೇ ಎಂದು
ಮನೆಯ ವಿಳಾಸ ಕೊಟ್ಟು ಹುಡುಕಬಹುದು. ಅಷ್ಟೇ ಅಲ್ಲ, ಈ ಪಟ್ಟಿ ದೇಶದ ಎಲ್ಲ ಲಾಡ್ಜಿಂಗ್‌ನವರಿಗೂ ಲಭ್ಯ. ಯಾರೇ ರೂಮ್ ಪಡೆದರೂ ಅವರ ಹೆಸರು ಈ ಪಟ್ಟಿಯಲ್ಲಿದೆಯೇ ಎಂದು ಅವರು ನೋಡುತ್ತಾರೆ. ಹೌದಾದಲ್ಲಿ ಅಂಥವರಿಗೆ ತಂಗಲು ಅವಕಾಶವಿಲ್ಲ. ಅಷ್ಟೇ ಅಲ್ಲ, ಅಂಥವರಿಗೆ ಉದ್ಯೋಗ, ಬಾಡಿಗೆ ಮನೆ ಸಿಗುವುದು ಎಲ್ಲವೂ ಕಷ್ಟಾತಿಕಷ್ಟ. ಒಬ್ವ ವ್ಯಕ್ತಿ ಕಾಮುಕನೆಂದು ಸಾಬೀತಾದರೆ ಅವನ ಮುಂದಿನ ಬದುಕು ಯಾರಿಗೂ ಬೇಡವೆಂದಾಗಿ ಬಿಡುತ್ತದೆ.

ಅವರ ಮಕ್ಕಳನ್ನೇ ಆಗೀಗ ಕರೆದು ವಿಚಾರಣೆ ಮಾಡುವುದು ಕೂಡ ಇದೆ. ಇಂಥದೊಂದು ವ್ಯವಸ್ಥೆ ಭಾರತದಲ್ಲಿಯೂ ಬಂದರೆ ಒಳಿತೆನ್ನಿಸುತ್ತದೆ. ಇದರಿಂದ ಸಮಾಜವೇ ಸುಧಾರಿಸಿ ಬಿಡುತ್ತದೆ ಎಂದೇನಲ್ಲ. ಆದರೆ ಶೋಷಿತರು ದೂರು ದಾಖಲಿಸುವುದಕ್ಕೆ ಬೇಕಾದ ಸೂಕ್ಷ್ಮಗ್ರಹಿಕೆಯ ವ್ಯವಸ್ಥೆ, ಕ್ಷಿಪ್ರ ಮತ್ತು ನೇರ ನ್ಯಾಯ, ಉಗ್ರಶಿಕ್ಷೆ, ಕಾನೂನು, ಗಟ್ಟಿ ವ್ಯವಸ್ಥೆ ಇವೆಲ್ಲ ವ್ಯಕ್ತಿಯ ಮೇಲಾಗುವ ಲೈಂಗಿಕ ದೌರ್ಜನ್ಯವನ್ನು ತಕ್ಕ ಮಟ್ಟಿಗೆ ತಡೆದಾವು.

ಎಲ್ಲಿಯೇ ಆಗಲಿ, ಇಂಥ ಕಾಮುಕರ ವ್ಯವಹಾರ ಬಹಿರಂಗವಾದಾಗ ಅತ್ಯಂತ ಧಕ್ಕೆಯಾಗುವುದು ಸಾಮಾಜಿಕ ನಂಬಿಕೆಗೆ. ಇಲ್ಲಿ ಪ್ರಶ್ನೆಗೆ ಒಳಗಾಗ ಬೇಕಾದದ್ದು ಇದೆಲ್ಲದಕ್ಕೆ ಅವಕಾಶವಿರುವ ವ್ಯವಸ್ಥೆ. ಅಪರಾಽಗೆ ಶಿಕ್ಷೆ ಆಯಿತು ಎಂಬುದು ಇಲ್ಲಿನ ಪೂರ್ಣ ಪರಿಹಾರವಾಗುವುದಿಲ್ಲ. ಈ ಸಮಯದಲ್ಲಿ ಸಂತ್ರಸ್ತರಿಗೆ ಇನ್ನಷ್ಟು ಹಾನಿಯಾಗದಂತೆ ಸೂಕ್ಷ್ಮ ಮುನ್ನೆಚ್ಚರಿಕೆ ವಹಿಸುವುದು ಕೂಡ ಈ ಸಮಯದ ಅವಶ್ಯಕತೆ. ಇಂಥ ಘಟನೆಗಳಲ್ಲಿ, ‘ಇದೆಲ್ಲ ಪರಸ್ಪರ ಒಪ್ಪಿಕೊಂಡು ನಡೆದದ್ದು’ ಎಂದು ಕಾನೂನಿಗೆ ಅನಿಸಬಾರದು. ಅತ್ಯಾಚಾರ ಕೇವಲ ದೈಹಿಕ ಬಲದಿಂದಷ್ಟೇ ನಡೆಯುವುದಲ್ಲ; ಇಲ್ಲಿ ಕ್ಷಿಪ್ರ ಮತ್ತು ಪೂರ್ಣ ನ್ಯಾಯ ಮಾತ್ರ ಸಾಮಾಜಿಕ ನಂಬಿಕೆಯನ್ನು ಮರುಸ್ಥಾಪಿಸಬಲ್ಲದು.

ಇಂಥ ಹೇಯಕೃತ್ಯ ಎಲ್ಲಿಯೇ ನಡೆದಿರಲಿ, ಅದು ರಾಜಕೀಯ, ಹಣದ ಪ್ರಭಾವ ಮತ್ತು ಕಾನೂನಿನ ಸಂದಿಯಲ್ಲಿ ಬಿದ್ದು ಮುಚ್ಚಿಹೋಗದಂತೆ ನೋಡಿ ಕೊಳ್ಳಬೇಕಾದ್ದು ಆಯಾ ನ್ಯಾಯಾಂಗ ವ್ಯವಸ್ಥೆಯ ಜವಾಬ್ದಾರಿ.