Wednesday, 11th December 2024

ಅಪೌಷ್ಟಿಕತೆಯ ಪರಿತಾಪದ ಕಹಿವಾಸ್ತವ

-ಡಾ.ಎ.ಜಯ ಕುಮಾರ್ ಶೆಟ್ಟಿ

ಅಪೌಷ್ಟಿಕತೆ ಎನ್ನುವ ಶಬ್ದವೇ ನಮ್ಮ ಮನಸ್ಸಿಗೆ ಬೇಸರ ಮತ್ತು ಸಮಾಜಕ್ಕೆ ಕಸಿವಿಸಿ ಉಂಟುಮಾಡುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಉರುಳಿದ್ದರೂ ಮಕ್ಕಳ, ಮಹಿಳೆಯರ ಮತ್ತು ವಂಚಿತ ಸಮುದಾಯಗಳ ಜೀವ ಮತ್ತು ಆರೋಗ್ಯಗಳನ್ನು ಅಪಾಯಕ್ಕೀಡು ಮಾಡುತ್ತಿರುವ ಹಸಿವು ಮತ್ತು ಅಪೌಷ್ಟಿಕತೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸವಾಲಾಗಿಯೇ ಉಳಿದಿದೆ. ಇತ್ತೀಚಿನ ‘ಕ್ರೆಡಿಟ್ ಸೂಸಿ ಗ್ಲೋಬಲ್ ವೆಲ್ತ್ ರಿಪೋರ್ಟ್’ ಪ್ರಕಾರ ಅತಿ ವೇಗವಾಗಿ ಸಂಪತ್ತನ್ನು ಸೃಷ್ಟಿಸುತ್ತಿರುವ ದೇಶಗಳಲ್ಲಿ ಭಾರತವೂ ಒಂದು; ಆದರೂ ನಮ್ಮಲ್ಲಿ ಹಸಿವು ಮತ್ತು ತೀವ್ರತರನಾದ ಅಪೌಷ್ಟಿಕತೆಯನ್ನು ನಿವಾರಿಸಲಾಗದಿರುವುದು
ವಿಪರ್ಯಾಸ. ಮಕ್ಕಳ ಅಪೌಷ್ಟಿಕತೆಯು ಅಭಿವೃದ್ಧಿ ಹೊಂದುತ್ತಿರುವ ಯಾವುದೇ ರಾಷ್ಟ್ರಕ್ಕೂ ಮಾರಕ ಎನ್ನುವುದು ನಿರ್ವಿವಾದ. ಪ್ರತಿ ವರ್ಷ ೫ ವರ್ಷದೊಳಗಿನ ೩೦ ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಸಾವನ್ನಪ್ಪುತ್ತಿದ್ದಾರೆ ಎಂಬುದು ಆತಂಕದ ವಿಚಾರ. ಜನರ ಆರೋಗ್ಯ ಮತ್ತು ಆರೋಗ್ಯಕರ ಜೀವನವನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರಕಾರವು ೧೯೮೨ರಿಂದ ಪ್ರತಿವರ್ಷ ಸೆಪ್ಟೆಂಬರ್ ೧ರಿಂದ ೭ರವರೆಗೆ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹವನ್ನು ಆಯೋಜಿಸುತ್ತಿದೆ. ಸರಕಾರದ ಕಾರ್ಯಕ್ರಮಗಳು ಯಶಸ್ವಿ ಆಗಬೇಕಾದರೆ ಸಮಾಜ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಆರ್ಥಿಕ ಅಭಿವೃದ್ಧಿಯ ವಿವಿಧ ಮಜಲುಗಳನ್ನು ದಾಟಿದ ಭಾರತದ ಬಡತನ ಮತ್ತು ಅಪೌಷ್ಟಿಕತೆಯ ಮಟ್ಟವು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವಾಸ್ತವವಾಗಿ ಆಫ್ರಿಕಾಕ್ಕಿಂತ (ಶೇ.೩೦) ಭಾರತದ ಮಕ್ಕಳಲ್ಲಿ ಅಪೌಷ್ಟಿಕತೆ ಮಟ್ಟ ಜಾಸ್ತಿ (ಶೇ.೩೭) ಎನ್ನುವುದು
ಆತಂಕಕಾರಿ ಸಂಗತಿ.

ಅಪೌಷ್ಟಿಕತೆಯೆಂಬ ಪೆಡಂಭೂತ
ಆರ್ಥಿಕ ಅಭಿವೃದ್ಧಿಯ ವಿವಿಧ ಮಜಲುಗಳನ್ನು ದಾಟಿದ ಭಾರತವನ್ನು, ಬಡತನ ಹಾಗೂ ಅಪೌಷ್ಟಿಕತೆಯೆಂಬ ಪೆಡಂಭೂತಗಳು ಇಂದು ಕಾಡುತ್ತಿವೆ. ಅಪೌಷ್ಟಿಕತೆ ಅಂದರೆ, ಕೆಲವೊಂದು ಪೋಷಕಾಂಶಗಳ ಕೊರತೆಯಿಂದಾಗಿ ಅಥವಾ ಕೆಲವರ ಅತಿಯಾದ ಬಳಕೆಯಿಂದ ಉಂಟಾದ ಪೋಷಕಾಂಶಗಳ ಅಸಮತೋಲನದಿಂದಾಗಿ, ಆರ್ಥಿಕವಾಗಿ ದುರ್ಬಲವೆನಿಸಿಕೊಂಡಿರುವ ರಾಷ್ಟ್ರಗಳಲ್ಲಿನ ಜನರು ಆದಾಯದ ಗಣನೆಗೆ ನಿಲುಕದ ವಿವಿಧ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಇದರಿಂದಾಗಿ ಅವರಿಗೆ ಅಭಿವೃದ್ಧಿಯ ಲಾಭವನ್ನು ಅನುಭವಿಸಲೂ ಸಾಧ್ಯವಾಗದೆ, ದೇಶದ ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡಲೂ ಸಾಧ್ಯವಾಗದೆ ವಿಲಿವಿಲಿ ಒದ್ದಾಡುವಂತಾಗಿದೆ. ಇದು ದುರದೃಷ್ಟಕರ. ಅಪೌಷ್ಟಿಕತೆಯಿಂದ ಮಕ್ಕಳ ದೇಹದ ಬೆಳವಣಿಗೆ, ರೋಗನಿರೋಧಕ ಶಕ್ತಿ ಹಾಗೂ ಕಲಿಕಾ ಶಕ್ತಿಗಳು ಕುಂದುತ್ತವೆ. ಜನಸಂಖ್ಯೆ ಒಂದು ಹೊರೆಯಲ್ಲ, ಅದೊಂದು ಅವಕಾಶಗಳ ಆಗರ ಎಂದು ಬೀಗುತ್ತಿರುವ ನಮಗೆ ಬಡತನ ಹಾಗೂ ಅಪೌಷ್ಟಿಕತೆಯೆಂಬ ಸಮಸ್ಯೆಗಳು ಇನ್ನಿಲ್ಲದಂತೆ ಕಾಡುತ್ತಿವೆ.

ಕಸಿವಿಸಿಯ ಮೂಲ
ಜಗತ್ತಿನಾದ್ಯಂತ ಅಪೌಷ್ಟಿಕತೆಯಿಂದಾಗಿ ಪ್ರತಿವರ್ಷ ೨೩ ಲಕ್ಷ ಮಕ್ಕಳು ಸಾಯುತ್ತಿದ್ದಾರೆ. ತಡೆಗಟ್ಟಬಹುದಾದ ರೋಗಗಳಿಗೆ ಪ್ರತಿದಿನ ೧೯,೦೦೦ ಮಕ್ಕಳು ಬಲಿಯಾಗುತ್ತಿದಾರೆ, ಶಾಲೆಗೆ ಹೋದರೂ ಮೂಲಪಾಠಗಳನ್ನು ಕಲಿಯುವಲ್ಲಿ ೧೩ ಕೋಟಿ ಮಕ್ಕಳು ವಿಫಲರಾಗುತ್ತಿದ್ದಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಅಧ್ಯಯನಗಳ ಪ್ರಕಾರ, ಪ್ರಮುಖ ಅಪೌಷ್ಟಿಕತೆ ಸೂಚಕಗಳಲ್ಲಿ ಭಾರತದ ಕಾರ್ಯಕ್ಷಮತೆ ಕಳಪೆಯಾಗಿದೆ. ಯೂನಿಸೆಫ್ ಪ್ರಕಾರ, ಕಡಿಮೆ ತೂಕದ ಮಕ್ಕಳನ್ನು ಹೊಂದಿರುವ ದೇಶಗಳಲ್ಲಿ ಭಾರತ ೧೦ನೇ ಸ್ಥಾನದಲ್ಲಿದೆ ಮತ್ತು ವಿಶ್ವದ ಅತಿಹೆಚ್ಚು ಕುಂಠಿತ ಬೆಳವಣಿಗೆಯ ಮಕ್ಕಳ ವಿಷಯದಲ್ಲಿ ೧೭ನೇ ಸ್ಥಾನದಲ್ಲಿದೆ. ೩ ವರ್ಷಕ್ಕಿಂತ ಕೆಳಗಿನ ಶೇ.೪೭ರಷ್ಟು ಮಕ್ಕಳು ಅಪೌಷ್ಟಿಕತೆ ಮತ್ತು ಕಡಿಮೆ ತೂಕದಿಂದ ಬಳಲುತ್ತಿದ್ದಾರೆ.

ವಿಶ್ವಬ್ಯಾಂಕಿನ ಅಂದಾಜಿನಂತೆ ಪ್ರಪಂಚದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ೧೪.೬ ಕೋಟಿ ಮಕ್ಕಳಲ್ಲಿ ೬ ಕೋಟಿ ಮಕ್ಕಳು ಭಾರತದಲ್ಲೇ ಇದ್ದಾರಂತೆ! ಭಾರತದಲ್ಲಿ ೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪೈಕಿ ಶೇ.೨೦ರಷ್ಟು ಭಾಗದವರು ನ್ಯೂನ-ಪೋಷಣೆಯಿಂದ ನರಳುತ್ತಿದ್ದಾರೆ. ವಿಶ್ವದ ಇಂಥ ಮಕ್ಕಳಲ್ಲಿ ಮೂರನೇ ಒಂದು ಭಾಗದಷ್ಟು ಮಕ್ಕಳು ಭಾರತದಲ್ಲಿದ್ದಾರೆ. ೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಶೇ.೪೩ರಷ್ಟು (೬೧ ಮಿಲಿಯನ್) ಅತಿ ಕಡಿಮೆ ತೂಕದ ಮಕ್ಕಳು ಹಾಗೂ ಶೇ.೪೮ಷ್ಟು ದೀರ್ಘಕಾಲಿಕ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳಿದ್ದಾರೆ. ಜಗತ್ತಿನಲ್ಲಿ ಬೆಳವಣಿಗೆ ಕುಂಠಿತಗೊಂಡ ೧೦ ಮಕ್ಕಳಲ್ಲಿ ಮೂರು ಮಂದಿ ಭಾರತೀಯರು!  ಅಪೌಷ್ಟಿಕತೆಯು ನಗರಗಳಿಗಿಂತ ಹಳ್ಳಿ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಅನಕ್ಷರಸ್ಥ ತಾಯಂದಿರ ಮಕ್ಕಳಲ್ಲಿನ ಅಪೌಷ್ಟಿಕತೆಯ ಪ್ರಮಾಣವು, ಅಕ್ಷರಸ್ಥ ತಾಯಂದಿರ ಮಕ್ಕಳಿಗಿಂತ ೫ ಪಟ್ಟು ಜಾಸ್ತಿ ಇದೆ. ಅಪೌಷ್ಟಿಕ ತಾಯಂದಿರ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ದುರ್ಬಲ ವರ್ಗದ ಮಕ್ಕಳಲ್ಲೀ ಅಪೌಷ್ಟಿಕತೆ ಪ್ರಮಾಣ ಅತಿಹೆಚ್ಚು. ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿರುವ ಭಾರತದ ಪಾಲಿಗೆ ಇವು ತಳಮಳಕಾರಿ ಅಂಕಿ-ಅಂಶಗಳು ಎನ್ನಬೇಕು.

ಅಪೌಷ್ಟಿಕತೆಯ ವಿಷವರ್ತುಲ
ಅಪೌಷ್ಟಿಕತೆಯಿಂದ ಬಳಲುವ ಹಾಗೂ ಕಡಿಮೆ ಶಿಕ್ಷಣದ ತಾಯಂದಿರು ಅನೇಕ ಸಲ ಕಡಿಮೆ ತೂಕದ ಮಗುವಿಗೆ ಜನ್ಮನೀಡುತ್ತಾರೆ. ಕ್ಲುಪ್ತ ಸಮಯದಲ್ಲಿ ಲಸಿಕೆಗಳನ್ನು ಹಾಕಿಸದೆ, ಪೂರಕ ಪೌಷ್ಟಿಕ ಆಹಾರ ನೀಡದೆ ಮಗು ಅನಾರೋಗ್ಯದ ವಾತಾವರಣದಲ್ಲಿಯೇ ಬೆಳೆಯುವಂತಾಗುತ್ತದೆ. ಅಪೌಷ್ಟಿಕತೆಯು ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಗಳನ್ನು ಹೆಚ್ಚಿಸಿ ಬದುಕುಳಿಯುವ ಸಾಧ್ಯತೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಆ ಮಗು ಶೈಕ್ಷಣಿಕ ವಾತಾವರಣದಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಶೈಕ್ಷಣಿಕವಾಗಿ, ದೈಹಿಕವಾಗಿ ಬಳಲುವ ಮಗುವು ಮುಂದೆ ದುಡಿದು ಗಳಿಸುವಲ್ಲಿ ವಿಫಲವಾಗಿ ಬಡತನದ ವಿಷವರ್ತುಲದ ಬಲಿಪಶುವಾಗುತ್ತದೆ. ರಾಜ್ಯದ ಗ್ರಾಮೀಣ ಜನರಲ್ಲಿನ ಆರೋಗ್ಯ ಸಂಬಂಧಿ ಅರಿವಿನ ಕೊರತೆ, ಪೌಷ್ಟಿಕ ಆಹಾರ ಸೇವನೆಯತ್ತ ಗಮನದ ಕೊರತೆ, ಹೆರಿಗೆಯ ಸಮಯದಲ್ಲಿ ತಾಯಿ-ಮಗುವಿನ ಸರಿಯಾದ ಆರೈಕೆಯ ಕೊರತೆ, ಬಡತನ, ಅನಕ್ಷರತೆ ಮತ್ತು ಅಂಗನವಾಡಿಗಳಲ್ಲಿನ ಪೌಷ್ಟಿಕ ಆಹಾರ ಪದಾರ್ಥಗಳ ಕೊರತೆ ಇತ್ಯಾದಿಗಳು ಮಕ್ಕಳ ಅಪೌಷ್ಟಿಕತೆಗೆ ಪ್ರಮುಖ ಕಾರಣಗಳಾಗಿವೆ ಎಂದು ಇತ್ತೀಚಿನ ಸಮೀಕ್ಷೆಯು ಬೊಟ್ಟುಮಾಡಿದೆ.

ಕರ್ನಾಟಕದಲ್ಲಿ ಅಪೌಷ್ಟಿಕತೆ
ರಾಜ್ಯದ ೧೦೨ ತಾಲೂಕುಗಳಲ್ಲಿ ಅಪೌಷ್ಟಿಕತೆ ಹೆಚ್ಚಿದೆ ಎಂಬ ಅಂಶವನ್ನು ೨೦೨೨-೨೩ರ ಆರ್ಥಿಕ ಸಮೀಕ್ಷೆ ತೋರಿಸಿದೆ. ಕೋವಿಡ್ ಪ್ರಕರಣಗಳು ಕಡಿಮೆಯಾಗಿದ್ದರೂ, ೫ ವರ್ಷ ದೊಳಗಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ನಾನಾ ರೋಗಗಳು ಉಲ್ಬಣಗೊಳ್ಳುತ್ತಿವೆ. ರಾಜ್ಯದಲ್ಲಿ ೮,೭೧೧ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ, ೨,೨೩,೨೨೧ ಮಕ್ಕಳು ಮಧ್ಯಮ ಪ್ರಮಾಣದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಉತ್ತರ ಕರ್ನಾಟಕದ ಕೆಲ ಭಾಗಗಳು, ಕಲಬುರಗಿ, ವಿಜಯನಗರ, ಬೆಳಗಾವಿ ಜಿಲ್ಲೆಗಳು ಅಪೌಷ್ಟಿಕತೆಯಲ್ಲಿ ಮೊದಲ ೪ ಸ್ಥಾನದಲ್ಲಿವೆ ಎಂಬ ಅಂಶವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಖಚಿತಪಡಿಸಿದೆ.

ಸೃಜನಶೀಲತೆ ಮತ್ತು ನಿರಂತರತೆಯಿರಲಿ
ಸರಕಾರದ ತೆಕ್ಕೆಯಲ್ಲಿ ಹಲವಾರು ಯೋಜನೆಗಳಿದ್ದರೂ ಮಕ್ಕಳ ಅಪೌಷ್ಟಿಕತೆಯ ನಿವಾರಣೆ ಸವಾಲಾಗಿ ಪರಿಣಮಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ ಹಲವು ಹೊಸ ಕ್ರಮಗಳನ್ನು ಕೈಗೊಂಡಿದೆ. ಅಂಗನವಾಡಿಯಲ್ಲಿ ದಾಖಲಾದ ೬ ತಿಂಗಳಿಂದ ೬ ವರ್ಷದೊಳಗಿನ ಮಕ್ಕಳಿಗೆ ೩೦೦ ದಿನಗಳ ಪೌಷ್ಟಿಕ ಆಹಾರ ಪೂರೈಕೆ, ೩ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ, ವಾರಕ್ಕೆ ೨ ದಿನ ಮೊಟ್ಟೆ-ಹಾಲು ವಿತರಣೆ, ತೀವ್ರ ಅಪೌಷ್ಟಿಕ ಮಕ್ಕಳಿಗೆ ದಿನಕ್ಕೆ ೧೨ ರುಪಾಯಿ ಹಾಗೂ ಮಧ್ಯಮ ಪ್ರಮಾಣದ ಅಪೌಷ್ಟಿಕ ಮಕ್ಕಳಿಗೆ ೮ ರು. ಮೌಲ್ಯದ ಪೌಷ್ಟಿಕ ಆಹಾರ ವಿತರಣೆ ಕೈಗೊಂಡಿದೆ. ೬ ವರ್ಷ ದೊಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ನಿಗದಿತ ಚುಚ್ಚುಮದ್ದು ನೀಡುವುದರೊಂದಿಗೆ ಪೋಷಕರಲ್ಲಿ ಅರಿವು ಮೂಡಿಸಲು ಆರೋಗ್ಯ ಮತ್ತು ಪೌಷ್ಟಿಕಾಂಶ ಶಿಬಿರವನ್ನು ನಡೆಸಲಾಗುತ್ತಿದೆ. ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕಾಂಶ ಪುನರ್ವಸತಿ ಕೇಂದ್ರದಲ್ಲಿ ((NRC) ಚಿಕಿತ್ಸೆಗೆ ಅವಕಾಶವಿದ್ದರೂ, ಪಾಲಕರು ಇತ್ತ ಮುಖ ಮಾಡದಿರುವುದು ಇಲಾಖೆಗೆ ದೊಡ್ಡ ತಲೆನೋವಾಗಿದೆ.

ವಿಶ್ವಸಂಸ್ಥೆಯ ಸಹಸ್ರಮಾನದ ಗುರಿಗಳಲ್ಲಿ ೨೦೩೦ರ ವೇಳೆಗೆ ಇಡೀ ಜಗತ್ತನ್ನು ಹಸಿವುಮುಕ್ತಗೊಳಿಸಬೇಕೆಂಬುದೂ ಒಂದು. ಅದನ್ನು ಸಾಧಿಸಬೇಕೆಂದರೆ ಸರಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳಲ್ಲಿ ಸೃಜನಶೀಲತೆ ಮತ್ತು ನಿರಂತರತೆಯ ಅಗತ್ಯವಿದೆ. ಮಾತ್ರವಲ್ಲದೆ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಬೇಕೆಂಬ ಧೃಢವಾದ ಛಲವೂ ಬೇಕಾಗಿದೆ.
(ಲೇಖಕರು ನಿವೃತ್ತ ಪ್ರಾಂಶುಪಾಲರು
ಹಾಗೂ ಅರ್ಥಶಾಸದ ಪ್ರಾಧ್ಯಾಪಕರು)