Wednesday, 11th December 2024

ಹಣದುಬ್ಬರ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ

-ಚೆರ್ಕಾಡಿ ಸಚ್ಚಿದಾನಂದ ಶೆಟ್ಟಿ

ಎಂಪಿಸಿ ಸಭೆಯಲ್ಲಿ ಆರ್‌ಬಿಐ ಹಣದುಬ್ಬರ ಒತ್ತಡ ಹೆಚ್ಚಿದರೆ ತಾತ್ಕಾಲಿಕ ರೆಪೋ ದರವನ್ನು ನಿರೀಕ್ಷಿಸ ಬಹುದು ಮತ್ತು ಆರ್‌ಬಿಐ ಹಣದುಬ್ಬರವನ್ನು ಶೇ. ೪ರ ಗುರಿಗೆ ಹೊಂದಿಸುವ ಬದ್ಧತೆಯನ್ನು
ಪುನರುಚ್ಚರಿಸಿತ್ತು. ಮುಂಬರುವ ಹಬ್ಬದ ಋತುವಿನಲ್ಲಿ ದ್ರವ್ಯತೆಯನ್ನು ಖಚಿತಪಡಿಸಿಕೊಳ್ಳಲು ಸೆಪ್ಟೆಂಬರ್ ೮ ಅಥವಾ ಅದಕ್ಕಿಂತ ಮೊದಲು ಹೆಚ್ಚಳವನ್ನು ಪರಿಶೀಲಿಸುವ ಬಗ್ಗೆ ಆರ್‌ಬಿಐ ಹೇಳಿಕೆ ನೀಡಿದೆ.

ಹಣದುಬ್ಬರ ದರವನ್ನು ನಿಯಂತ್ರಣದಲ್ಲಿರಿಸುವ ಹೊಣೆ ಆರ್‌ಬಿಐ ಮೇಲಿದೆ ಮತ್ತು ಆರ್‌ಬಿಐಗೆ ಇದು ಸತ್ವ ಪರೀಕ್ಷೆಯ ಕಾಲವಾಗಿ ಪರಿಣಮಿಸಿದೆ. ಚಿಲ್ಲರೆ ಹಣದುಬ್ಬರ ದರವನ್ನು ಶೇ.೬ಕ್ಕಿಂತ ಕಡಿಮೆ ಮಟ್ಟದಲ್ಲಿ
ನಿಯಂತ್ರಿಸುವುದು ಆರ್‌ಬಿಐನ ಜವಾಬ್ದಾರಿ. ಈ ಹೊಣೆ ನಿಭಾಯಿಸಲು ಆರ್‌ಬಿಐ ಹಣಕಾಸು ವ್ಯವಸ್ಥೆಯಲ್ಲಿ ಹಣದ ಹರಿವನ್ನು ಕಡಿಮೆ ಮಾಡಲು ಮುಂದಾಗುತ್ತದೆ. ಇತ್ತೀಚೆಗೆ ಆರ್‌ಬಿಐ ಹಣಕಾಸು ನೀತಿ ಸಮಿತಿಯ ಸಭೆ ನಡೆಯಿತು. ಆರ್ ಬಿಐ ನಿರ್ಣಯಗಳ ಪೈಕಿ ಹೆಚ್ಚಿನ ಗಮನ ಸೆಳೆದದ್ದು ರೆಪೋ ದರವನ್ನು ಯಥಾ ಸ್ಥಿತಿಯಲ್ಲಿ ಶೇ.೬.೫ರಲ್ಲಿಯೇ ಮುಂದುವರಿಸಿಕೊಂಡು ಹೋಗುವ ತೀರ್ಮಾನ ಮತ್ತು ಹಣದುಬ್ಬರ ದರದ ಅಂದಾಜನ್ನು ಹೆಚ್ಚಿಸಿರುವುದಾಗಿರುತ್ತದೆ. ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕಕ್ಕೆ ಹಣದುಬ್ಬರದ ಅಂದಾಜನ್ನು ಆರ್‌ಬಿಐ ಶೇ.೬.೨ಕ್ಕೆ ಹೆಚ್ಚಿಸಿತ್ತು. ಪ್ರಸಕ್ತ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಹಣದುಬ್ಬರ ಅಂದಾಜನ್ನು ಶೇ.೫.೪ಕ್ಕೆ ಪರಿಷ್ಕರಿಸಿತ್ತು. ಈ ಮೊದಲು ಇದು ಶೇ.೫.೧ ಆಗಿತ್ತು. ಆದರೆ ಜಿಡಿಪಿ ಬೆಳವಣಿಗೆ ಶೇ.೬.೫ನ್ನು ಪರಿಷ್ಕರಿಸಲಿಲ್ಲ. ಇದು ಐಎಂಎಫ್ ನ ಅಂದಾಜಾದ ಶೇ.೬.೧ರ ಮುನ್ಸೂಚನೆಯನ್ನು ಮೀರಿದ ಆಶಾವಾದದಂತೆ ಕಂಡು ಬರುತ್ತಿದೆ. ಆರ್‌ಬಿಐ ವೀಕ್ಷಣೆ ಉತ್ತಮವಾಗಿದೆಯೇ ಎಂದು ನೋಡಬೇಕಾಗಿದೆ.

ಯಾಕೆಂದರೆ ಮಾನ್ಸೂನ್ ಮತ್ತು ಕುಗ್ಗುತ್ತಿರುವ ರಫ್ತುಗಳಿಂದ ನಿಜವಾದ ಅಪಾಯಗಳ ಬೆಳವಣಿಗೆಯಿದೆ. ಇದೀಗ ಜುಲೈನ ಹಣದುಬ್ಬರ ದರವು ಆರ್‌ಬಿಐನ ಒಮ್ಮತದ ಅಂದಾಜು ಮಟ್ಟಕ್ಕಿಂತ ಹೆಚ್ಚಾಗಿದೆ. ಜೂನ್ ತಿಂಗಳಲ್ಲಿ ಶೇ.೪.೮೭ರಷ್ಟಿದ್ದ ಹಣದುಬ್ಬರ ದರ ಜುಲೈನಲ್ಲಿ ಶೇ.೭.೪೪ಕ್ಕೆ ಏರಿದೆ. ಇದು ಕಳೆದ ೧೫ ತಿಂಗಳುಗಳಲ್ಲಿಯೇ ಗರಿಷ್ಠ ಮಟ್ಟದ್ದಾಗಿದೆ. ಎಪ್ರಿಲ್ ೨೦೨೨ರಲ್ಲಿ ಶೇ.೭.೭೯ ದಾಖಲಾಗಿತ್ತು. ಸೆಪ್ಟೆಂಬರ್ ೨೦೨೨ರ ನಂತರ ಮೊದಲ ಬಾರಿಗೆ ಬೆಲೆ ಏರಿಕೆಯು ಶೇ.೭ಕ್ಕಿಂತ ಹೆಚ್ಚಿದೆ. ತರಕಾರಿ ಬೆಲೆಗಳು ಶೇ.೩೭.೩೩ರಷ್ಟು ಏರಿದವು. ಟೊಮೇಟೊ, ತರಕಾರಿ, ಧಾನ್ಯ ಮತ್ತು ಸಾಂಬಾರ ಪದಾರ್ಥಗಳಲ್ಲಿನ ಬೆಲೆಯಲ್ಲಿ ಆಗಿರುವ ಹೆಚ್ಚಳವು ಈ ಏರಿಕೆಗೆ ಪ್ರಮುಖ ಕಾರಣ. ಅದಲ್ಲದೆ ಈ ಮುಂದಿನ ಬೆಳೆ ಬರುವವರೆಗೆ ಈ ಬೆಲೆಗಳು ಕಡಿಮೆಯಾಗಲಿಕ್ಕಿಲ್ಲ. ಆಹಾರ ಹಣದುಬ್ಬರವು ಕಳೆದ ೩೯ ತಿಂಗಳುಗಳಲ್ಲಿಯೇ ಅಧಿಕವಾಗಿದೆ ಮತ್ತು ಆಗಸ್ಟ್ ನಲ್ಲಿ ಮಳೆ ವಾಡಿಕೆಯಂತೆ ಆಗಿಲ್ಲ. ಇದು ಕೂಡಾ ಬೆಲೆ ಹೆಚ್ಚಳಕ್ಕೆ ಕಾರಣವಾಗಬಹುದು. ಚಿಲ್ಲರೆ ಹಣದುಬ್ಬರ ದರವನ್ನು ಹೇಳುವ ಗ್ರಾಹಕ ಬೆಲೆ ಸೂಚ್ಯಂಕದಲ್ಲಿ ಆಹಾರ ವಸ್ತುಗಳಿಗೆ ಹೆಚ್ಚಿನ ಪ್ರಾಧಾನ್ಯ ನೀಡುವುದರಿಂದ ತರಕಾರಿ, ಧಾನ್ಯಗಳ ಬೆಲೆಯಲ್ಲಿ ಆಗುವ ಏರಿಕೆಯ ಒಟ್ಟು ಅಂಕಿ- ಅಂಶಗಳ ಮೇಲೆ ಪ್ರಭಾವ ಬೀರುತ್ತದೆ.

ಆರ್‌ಬಿಐ ರೆಪೋ ದರವನ್ನು ಇನ್ನೂ ಹೆಚ್ಚಿನ ಅವಧಿಗೆ ಯಥಾಸ್ಥಿತಿಯಲ್ಲಿ ಇರಿಸಬಹುದು ಮತ್ತು ಮುಂದಿನ ದಿನಗಳಲ್ಲಿ ನಗದು ಲಭ್ಯತೆಯನ್ನು ಕಡಿಮೆ ಮಾಡುವ ಪ್ರಕ್ರಿಯೆಗೆ ವೇಗ ನೀಡುವ ಸಾಧ್ಯತೆಯಿದೆ. ಪ್ರಸಕ್ತ ಸನ್ನಿವೇಶವನ್ನು ಅವಲೋಕಿಸುವಾಗ ಮುಂದಿನ ೧೨ ತಿಂಗಳವರೆಗೆ ರೆಪೋ ದರ ಇಳಿಕೆಯ ಸಾಧ್ಯತೆಯಿಲ್ಲ. ಈ ಹಣದುಬ್ಬರವನ್ನು ನಿಯಂತ್ರಿಸುವುದರ ಬಗ್ಗೆ ಅರ್ಥ ಶಾಸಜ್ಞರಲ್ಲಿ ಒಮ್ಮತವಿಲ್ಲ. ಕೇಂದ್ರ ಬ್ಯಾಂಕ್
ಗಳು ಮಾತ್ರ ಹಣದುಬ್ಬರದ ನಿಯಂತ್ರಣವನ್ನು ಸುದೀರ್ಘ ಹೋರಾಟ ವೆಂದು ಒಪ್ಪಿಕೊಂಡಿವೆ. ಸಮಾಜದ ದೃಷ್ಟಿಯಲ್ಲಿ ಹಣದುಬ್ಬರದ ಗಾಢ ಪರಿಣಾಮಗಳೆಂದರೆ ಅಸಮರ್ಪಕ ಹಂಚಿಕೆ, ಉತ್ಪಾದನೆ ಕುಂಠಿತಗೊಳ್ಳುವಿಕೆ. ಹಣದುಬ್ಬರದ ಹೊಡೆತ ಮೊದಲಿಗೆ ಬೀಳುವುದು ಜನಸಾಮಾನ್ಯರ ಮೇಲೆ. ಇದರಿಂದಾಗಿ ಜನರ ನೈತಿಕ ಮಟ್ಟ ಕುಸಿಯುತ್ತದೆ. ಲಾಭಕೋರತನ, ಕಳ್ಳ ದಾಸ್ತಾನು, ಕಾಳಸಂತೆ ಮಾರಾಟ, ಕಲಬೆರಕೆ, ಸಟ್ಟಾ ವ್ಯಾಪಾರ, ಭೃಷ್ಟಾಚಾರ, ಹಣದ ಖರೀದಿ ಶಕ್ತಿ ಕುಂಠಿತವಾಗುವುದು, ವಿದೇಶಿ ಬಂಡವಾಳ ಹರಿವು ಕಡಿಮೆಯಾಗುವುದು ಇವೆಲ್ಲವೂ ಆರ್ಥಿಕತೆಯ ಮೇಲಾ ಗುವ ದುಷ್ಪರಿಣಾಮಗಳು.

ರೆಪೋ ದರದಲ್ಲಿ ಯಾವ ಇಳಿಕೆಯೂ ಆಗುವುದಿಲ್ಲ ಎಂಬುದು ಸಾಲಗಾರರು ಹಾಗೂ ಬಂಡವಾಳಕ್ಕಾಗಿ ಬ್ಯಾಂಕ್‌ಗಳನ್ನೇ ನೆಚ್ಚಿಕೊಂಡ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ಯಮಗಳಿಗೆ ಬಹುವಾಗಿ ಬಾಧಿಸುತ್ತದೆ. ಹಣದುಬ್ಬರವು ಆಧುನಿಕ ಹಣದ ಆರ್ಥಿಕತೆಗಳನ್ನು ಸದಾ ಬಾಧಿಸುತ್ತಿರುತ್ತದೆ. ಇದೊಂದು ವಿಶ್ವವ್ಯಾಪಿ ವಿದ್ಯಾಮಾನವೂ ಹೌದು. ಆಧುನಿಕ ಅರ್ಥಶಾಸದ ಕೇಂದ್ರ ಬಿಂದುವೂ ಹೌದು. ಮಾರುಕಟ್ಟೆಯಲ್ಲಿ ಹಣದ ಪ್ರಮಾಣ ಅಂದರೆ ದ್ರವ್ಯತೆ ಹೆಚ್ಚಬೇಕಾದರೆ ಸಾಲ ಅಗ್ಗವಾಗಿ ಸಿಗಬೇಕು. ಆ ದ್ರವ್ಯತೆ ಹೆಚ್ಚಾದಾಗ ಹಣದುಬ್ಬರ ಹೆಚ್ಚುತ್ತದೆ. ಆ ಸಮಯದಲ್ಲಿ ಹಣದುಬ್ಬರ ನಿಯಂತ್ರಿಸ ಬೇಕಾದರೆ ಅರ್ಥಿಕತೆಯಲ್ಲಿ ಚಲಾವಣೆಯಲ್ಲಿರುವ ಹಣದ ಪ್ರಮಾಣ ಕಡಿಮೆ ಮಾಡಬೇಕು. ಅಂದರೆ ಬಡ್ಡಿದರವನ್ನು ಏರಿಸಬೇಕು. ಇದರಿಂದ ಸಾಲದ ಪ್ರಮಾಣ ಕಡಿಮೆ ಯಾಗಬೇಕು. ಮಾರುಕಟ್ಟೆಯಲ್ಲಿ ದ್ರವ್ಯತೆ ಒಮ್ಮೆ ಕಡಿಮೆಯಾದರೆ ಬೆಲೆ ಕಡಿಮೆಯಾಗುತ್ತದೆ. ಆದರೆ ವಾಸ್ತವದಲ್ಲಿ ಆಹಾರ ವಸ್ತುಗಳ ಬೆಲೆ ಏರಿಕೆಯನ್ನು ತಡೆಯುವ ಪರಿಣಾಮಕಾರಿ ಅಸ ಆರ್‌ಬಿಐ ಬಳಿ ಇದ್ದಂತಿಲ್ಲ.

ರೆಪೋ ದರ ಏರಿಕೆ ಅಥವಾ ಸಿಆರ್‌ಆರ್ (ನಗದು ಮೀಸಲು ಅನುಪಾತ) ಹೆಚ್ಚಳದ ಮೂಲಕ ತರಕಾರಿ ಧಾನ್ಯಗಳಂಥ ಅವಶ್ಯಕ ವಸ್ತುಗಳ ಬೆಲೆ ಏರಿಕೆಯ ನಿಯಂತ್ರಣ ಸಾಧ್ಯವಿಲ್ಲ. ಅಲ್ಲದೆ ಜಾಗತಿಕ ಪೂರೈಕೆಯ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾದರೆ ಧಾನ್ಯಗಳ ಬೆಲೆಯ ಮೇಲೆ ಕೆಟ್ಟ ಪರಿಣಾಮ ಆಗಬಹುದು. ಇಂಥ ಸಂದರ್ಭ ಗಳಲ್ಲಿ ಚಿಲ್ಲರೆ ಹಣದುಬ್ಬರ ಹೊರೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೆಚ್ಚು ಹೊರಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಮೊದಲಿನಿಂದಲೂ ಅಗತ್ಯ ವಸ್ತುಗಳ ಬಗ್ಗೆ ಗಂಭೀರವಾದ ಕ್ರಮ ಕೈಗೊಳ್ಳಲು ಹೋಗಿಲ್ಲ. ಅನಗತ್ಯ ದಾಸ್ತಾನನ್ನು ತಡೆಗಟ್ಟಲು ಇನ್ನೂ ಸಾಧ್ಯವಾಗಿಲ್ಲ. ದೇಶದಲ್ಲಿ ಪ್ರತಿ ಪ್ರಜೆಗೆ ಅಕ್ಕಿಯಿಂದ ಹಿಡಿದು ಔಷಧದವರೆಗೆ ೨೨ ಅಗತ್ಯ ವಸ್ತುಗಳ ಪಟ್ಟಿಯಿದೆ. ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಸರಿಯಾದ ವ್ಯವಸ್ಥೆಯಿಲ್ಲ. ಕೃಷಿ ಉತ್ಪನ್ನಗಳ ದಾಸ್ತಾನು ಬಹಳ ಕಷ್ಟ ಮತ್ತು ಅವು ಹೆಚ್ಚು ದಿನ ಉಳಿಯುವುದಿಲ್ಲ. ಅಗತ್ಯ ವಸ್ತುಗಳ ಮಹತ್ವವೆಂದರೆ ಅದನ್ನು ಉತ್ಪಾದಿಸುವವನಿಗೂ ಖರೀದಿಸುವವನಿಗೂ ನಷ್ಟವಾಗಬಾರದು. ಕೇಂದ್ರ ಸರಕಾರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸುವ
ಮೂಲಕ ಬೆಲೆ ಸ್ಥಿರೀಕರಣಕ್ಕೆ ಪ್ರತ್ಯೇಕ ನಿಧಿಯನ್ನು ಹೊಂದಿದೆ.

ಕೇಂದ್ರ ಆಹಾರ ನಿಗಮವು ಸುಗ್ಗಿಯ ಕಾಲದಲ್ಲಿ ಆಧಾರ ಧಾನ್ಯ ಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಅಭಾವ ಕಾಲದಲ್ಲಿ ವಿಸ್ತರಿಸಬೇಕು. ರಾಜ್ಯ ಸರಕಾರಗಳು ಗೋದಾಮುಗಳಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡರೆ ಕೇಂದ್ರ
ಮತ್ತು ರಾಜ್ಯ ಸರಕಾರಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಜನರಿಗೆ ಅಗತ್ಯ ವಸ್ತುಗಳು ಕಡಿಮೆ ದರದಲ್ಲಿ ಲಭಿಸುವಂತೆ ನೋಡಿಕೊಳ್ಳಬಹುದು. ಇತ್ತೀಚಿನ ಎಂಪಿಸಿ ಸಭೆಯಲ್ಲಿ ಆರ್‌ಬಿಐ ಹಣದುಬ್ಬರ ಒತ್ತಡ ಹೆಚ್ಚಿದರೆ ತಾತ್ಕಾಲಿಕ ರೆಪೋ ದರವನ್ನು ನಿರೀಕ್ಷಿಸ ಬಹುದು ಮತ್ತು ಆರ್‌ಬಿಐ ಹಣದುಬ್ಬರವನ್ನು ಶೇ. ೪ರ ಗುರಿಗೆ ಹೊಂದಿಸುವ ಬದ್ಧತೆಯನ್ನು ಪುನರುಚ್ಚರಿಸಿತ್ತು. ಮುಂಬರುವ ಹಬ್ಬದ ಋತುವಿನಲ್ಲಿ ದ್ರವ್ಯತೆಯನ್ನು ಖಚಿತಪಡಿಸಿಕೊಳ್ಳಲು ಸೆಪ್ಟೆಂಬರ್ ೮ ಅಥವಾ ಅದಕ್ಕಿಂತ ಮೊದಲು ಹೆಚ್ಚಳವನ್ನು ಪರಿಶೀಲಿಸುವ ಬಗ್ಗೆ ಆರ್‌ಬಿಐ ಹೇಳಿಕೆ ನೀಡಿದೆ. ಈ ವರ್ಷದ ಅಸಮ ಮಳೆಯ ವಿತರಣೆ, ಕಚ್ಚಾತೈಲ ಬೆಲೆಗಳಲ್ಲಿ ಇತ್ತೀಚಿನ ಏರಿಕೆ, ಆಹಾರ ವಸ್ತುಗಳ ಬೆಲೆಗಳಲ್ಲಿನ ಏರಿಕೆಯ ಅನಿಶ್ಚಿತತೆಯಿಂದ ಆರ್‌ಬಿಐ ಬಿಗುನಿಲುವು ತಳೆಯುವ ಸಾಧ್ಯತೆಯಿದೆ.

ಹವಾಮಾನ ವೈಪರೀತ್ಯ, ಎಲ್‌ನಿನೋ ಪರಿಣಾಮ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿನ ಆಹಾರ ವಸ್ತುಗಳ ಬೆಲೆಯ ಮೇಲೆ ಸೂಕ್ಷ್ಮ ನಿಗಾ ವಹಿಸಬೇಕಾಗಿರುವುದರ ಬಗ್ಗೆ ಆರ್‌ಬಿಐ ಬೆಳಕು ಚೆಲ್ಲಿದೆ. ಹವಾಮಾನ ಏರುಪೇರು ಮಾರುಕಟ್ಟೆ ಯಲ್ಲಿ ಸರಕಾರದ ಮಧ್ಯ ಪ್ರವೇಶ ಮತ್ತು ಜಾಗತಿಕ ಮಟ್ಟದಲ್ಲಿ ಆಹಾರ ವಸ್ತುಗಳ ಪೂರೈಕೆಯಲ್ಲಿನ ವ್ಯತ್ಯಯವು ಹಣದುಬ್ಬರದ ಮೇಲೆ ತೀವ್ರ ಪರಿಣಾಮ ಬೀರದೇ ಇರಲಾರದು. ಇದೀಗ ಪ್ರತಿನಿತ್ಯ ಖರೀದಿಸುವ ದಿನ ಬಳಕೆಯ ವಸ್ತುಗಳ ಬೆಲೆಯೇರಿಕೆ ಜನಾಕ್ರೋಶಕ್ಕೆ ಕಾರಣ ವಾಗಿದೆ. ಇಷ್ಟೆಲ್ಲದರ ನಡುವೆ ಗೋಧಿ, ಬಳಿಕ ಅಕ್ಕಿಯ ರಫ್ತನ್ನು ನಿಲ್ಲಿಸಿ ಸರಕಾರ ಆಹಾರ ಭದ್ರತೆಗೂ ಆದ್ಯತೆ ನೀಡಿತ್ತು. ಈ ಬಾರಿ ಚಂಡಮಾರುತ ಹಾಗೂ ವ್ಯಾಪಕ ಮಳೆ ಯಂಥ ಹವಾಮಾನ ವೈಪರೀತ್ಯದಿಂದಾಗಿ ಮಾನ್ಸೂನ್ ಎಲ್ಲ ಪ್ರದೇಶಗಳಲ್ಲಿ ಕೈಕೊಟ್ಟು ಆಹಾರ ಬೆಳೆಗಳು ನಾಶ ವಾಗಿವೆ. ಇಂಥ ಸಂದರ್ಭದಲ್ಲಿ ಕೇವಲ ಬ್ಯಾಂಕ್ ಬಡ್ಡಿದರ ಮಾತ್ರ ಕಾರ್ಯಕ್ಕೆ ಬರಲಾರದು.

ಕೇಂದ್ರ ಬ್ಯಾಂಕ್ (ಆರ್‌ಬಿಐ) ವಿತ್ತೀಯ ನೀತಿಯನ್ನು ರೂಪಿಸಲು ಚಿಲ್ಲರೆ ಹಣದುಬ್ಬರವನ್ನು ಗಣನೆಗೆ ತೆಗೆದು ಕೊಳ್ಳುತ್ತದೆ. ಹಣದುಬ್ಬರದ ಅಪಾಯಗಳು, ಅಂತಾರಾಷ್ಟ್ರೀಯ ಆಹಾರ ಮತ್ತು ಇಂಧನ ಬೆಲೆಗಳು ದೀರ್ಘ ಕಾಲದ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಹವಾಮಾನ ಸಂಬಂಽತ ಅನಿಶ್ಚಿತತೆಗಳ ನಡುವೆ ಮುಂದು ವರಿಯುತ್ತದೆ ಎಂದು ಆರ್‌ಬಿಐ ಹೇಳಿದೆ. ಆಹಾರ ಹಣದುಬ್ಬರ ಏರಿಕೆಯಾದರೆ ಕಠಿಣ ಕ್ರಮದ ಬಗ್ಗೆಯೂ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದರು. ಇದೀಗ ಹಣದುಬ್ಬರ ಅನಿರೀಕ್ಷಿತ ಮಟ್ಟ ತಲುಪಿರುವುದರಿಂದ ಆರ್‌ಬಿಐ ಪರಿಣಾಮಕಾರಿ ಆರ್ಥಿಕ ನೀತಿಯನ್ನು ಪ್ರಕಟಿಸುವ ಸಾಧ್ಯತೆಯಿದೆ.
ಪ್ರಸಕ್ತ ಸನ್ನಿವೇಶದಲ್ಲಿ ಗಗನಮುಖಿಯಾಗುತ್ತಿರುವ ಅಗತ್ಯ ವಸ್ತುಗಳ ಬೆಲೆಯೇರಿಕೆ ತಪ್ಪಿಸಲು ಜನಹಿತ ದೃಷ್ಟಿಯಿಂದ ಸರಕಾರ ಬೆಲೆ ತಗ್ಗಿಸುವ ಕಾರ್ಯಕ್ಕೆ ಶಕ್ತಿಮೀರಿ ಶ್ರಮಿಸಲೇಬೇಕಾಗಿದೆ. ಜನಾಕ್ರೋಶದ ಬಿರುಗಾಳಿ, ಆಳುವ ಸರಕಾರಗಳನ್ನು ಬಲಿ ತೆಗೆದುಕೊಳ್ಳುತ್ತದೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಸೇರಿದಂತೆ ನಿರ್ಣಾಯಕ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕಿದೆ. ದಾಖಲೆ ಮಟ್ಟ ದಲ್ಲಿ ಏರಿಕೆಯಾಗುತ್ತಿರುವ ತೆರಿಗೆ ಹಣದ ಒಂದು ಪಾಲನ್ನು ಸರಕಾರ ಹಣದುಬ್ಬರ ನಿಯಂತ್ರಣಕ್ಕೆ ವಿನಿಯೋಗಿಸ ಬೇಕಿದೆ. ಇಂಧನ, ತೈಲ ಬೆಲೆ ಇಳಿಸುವ ಜತೆಗೆ, ಗೋಧಿ, ಅಕ್ಕಿ, ಅಡುಗೆ ಎಣ್ಣೆಗಳ ಮೇಲಿನ ಆಮದು ಸುಂಕ ಕಡಿತ, ಕಡಿಮೆ ಬಡ್ಡಿ ದರದಲ್ಲಿ ಸಾಲ
ಮುಂತಾದ ಜನಪರ ನೀತಿಗಳಿಗೆ ಸರಕಾರ ಮುಂದಾಗಬೇಕಿದೆ.
(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ
ಮತ್ತು ಸಂದರ್ಶಕ ಪ್ರಾಧ್ಯಾಪಕರು)