ನಾಡಿಮಿಡಿತ
ವಸಂತ ನಾಡಿಗೇರ
vasanth.nadiger@gmail.com
ಇನ್ನೇನು ಜೂನ್ 5 ಬಂದೇಬಿಟ್ಟಿತು. ಅದೇ ವಿಶ್ವ ಪರಿಸರ ದಿನ. ಆ ದಿನ, ‘ಗಿಡ ನೆಡಿ.. ಗಿಡ ನೆಡಿ..’ ಎಂಬ ಘೋಷಣೆ ಎಲ್ಲೆಲ್ಲೂ
ಮೊಳಗುತ್ತದೆ. ಅಲ್ಲಲ್ಲಿ ವನಮಹೋತ್ಸವ ಆಚರಣೆ ನಡೆಯುತ್ತದೆ. ಆಮೇಲೆ ನೆಟ್ಟ ಆ ಸಸಿಗಳು ನೆಟ್ಟಗಿವೆಯೋ ಇಲ್ಲವೋ ಎಂಬುದನ್ನು ಕೇಳುವರಾರೋ? ಮೊದಲೆಲ್ಲ ಸಸಿ ನೆಡುತ್ತಿದ್ದರು.
ಅವು ಬೆಳೆದು ಗಿಡ ಮರವಾಗುತ್ತಿದ್ದವು. ಆದರೆ ಈಗ ಗಿಡವನ್ನೇ ನೆಡುವುದು. ಅದಕ್ಕಾಗಿಯೇ ಅವು ಬೆಳೆಯುವುದೇ ಇಲ್ಲವೇನೊ. ಅಂತೂ ಪರಿಸರ ದಿನದ ಬಗ್ಗೆ ಭಾಷಣ ಮತ್ತಿತರ ಕಾರ್ಯಕ್ರಮ ನಡೆಯುತ್ತವೆ. ಶಾಸ್ತ್ರಕ್ಕೋ, ಕಾಟಾಚಾರಕ್ಕೋ, ಪ್ರಚಾರಕ್ಕೋ – ಹೀಗೆ ಅವರವರ ಭಾವಕ್ಕೆ, ಅವರವರ ಭಕುತಿಗೆ ತೆರನಾಗಿ ಈ ಆಚರಣೆ ಇರುತ್ತದೆ. ಮರುದಿನದಿಂದ ಮತ್ತೆ ಅವರವರ ಎಂದಿನ ಕಾರ್ಯಕ್ರಮಗಳು. ಹಾಗೆಯೇ ಮತ್ತೆ ಗಿಡಮರ, ಕಾಡು ಕಡಿಯುವ ಕಾಯಕ ವರ್ಷವಿಡೀ ಜಾರಿಯಲ್ಲಿರುತ್ತದೆ.
ಅಂದಮಾತ್ರಕ್ಕೆ ಏನೂ ಆಗುವುದೇ ಇಲ್ಲ ಎಂದೇನೂ ಇಲ್ಲ. ಕೆಲವರು ಅರ್ಥಪೂರ್ಣವಾದದ ಕೆಲವು ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಅಂತೂ ಈಗೀಗ ಪರಿಸರದ ಬಗ್ಗೆ ಕಾಳಜಿ, ಜಾಗೃತಿ ತುಸು ಹೆಚ್ಚಾಗಿಯೇ ನಡೆಯುತ್ತಿರುವುದಂತೂ ಹೌದು.
ಹಾಗೆಂದು ಹಿಂದಿನವರೆಲ್ಲ ದಡ್ಡರು, ಪರಿಸರ ನಾಶ ಮಾಡುತ್ತಲೇ ಕಾಲ ಕಳೆದರು ಎಂದೇನೂ ಇಲ್ಲ. ಆಗಲೂ ಪರಿಸರ ರಕ್ಷಣೆಗೆ ಟೊಂಕಕಟ್ಟಿ ನಿಂತಿದ್ದವರೆಷ್ಟೋ.
ಯಾವುದೇ ಪ್ರಚಾರ ಬಯಸದೆ, ಗಿಡ ಮರ ನೆಟ್ಟು ಅವುಗಳಿಗೆ ನೀರೆರೆದು ಪೋಷಿಸಿದವರೆಷ್ಟೋ. ನೋಡುತ್ತ ಹೋದರೆ ಇಂಥ ಬೇಕಾದಷ್ಟು ವೃಕ್ಷಮಿತ್ರರು. ಪರಿಸರಪ್ರೇಮಿಗಳು ಸಿಗುತ್ತಾರೆ. ನಮ್ಮಲ್ಲೇ ಅದಕ್ಕೆ ಬೇಕಾದಷ್ಟು ಉದಾಹರಣೆಗಳಿವೆ. ನಮ್ಮ ಸಾಲು ಮರದ ತಿಮ್ಮಕ್ಕರಂಥವರು ಈಗಲೂ ನಮ್ಮ ನಡುವೆ ಇದ್ದಾರೆ. ಆದರೆ ಅವರು ಎಲೆಮರೆಯ ಕಾಯಿಯಂತೆ ಇದ್ದವರು.
ನಾನೀಗ ಹೇಳಲು ಹೊರಟಿದ್ದು ಅಂಥದ್ದೇ ಒಂದು ಎಲೆಮರೆಯ ಕಾಯಿಯ ಬಗ್ಗೆ.
‘ಭಾರತದ ಅರಣ್ಯ ಮಾನವ’ನ ಬಗ್ಗೆ. ಏಕಾಂಗಿಯಾಗಿ ಸಾವಿರಾರು ಎಕರೆ ಅರಣ್ಯ ಬೆಳೆಸಿದ ದೈತ್ಯನ ಬಗ್ಗೆ. ಅವರ ಹೆಸರು ಜಾದವ್
ಪಾಯೇಂಗ್. ಜಾದವ್ ‘ಮೊಲಾಯ್’ ಪಾಯೇಂಗ್ ಎಂದೇ ಅವರನ್ನು ಕರೆಯುವುದು. 57-58ರ ವಯಸ್ಸಿನ ಈ ಹೊತ್ತಿಗೆ ಅವರು ಸುಮಾರು 1500 ಎಕರೆಯಷ್ಟು ವಿಸ್ತೀರ್ಣದ ಕಾಡನ್ನು ಬೆಳೆಸಿದ್ದಾರೆ. ಅದೂ ಏಕಾಂಗಿಯಾಗಿ. ಯಾವುದೇ ಫಲಾಪೇಕ್ಷೆ ಇಲ್ಲದೆ. ಅದಕ್ಕೆ ಮೊಲಾಯ್ ಅರಣ್ಯ ಎಂದೇ ನಾಮಕರಣ ಮಾಡಲಾಗಿದೆ.
ಅವರಿಗೇನು ತಲೆ ಕೆಟ್ಟಿದೆಯಾ? ಹುಚ್ಚಾ ಎಂದು ಯಾರಾದರೂ ಕೇಳಬಹುದು. ಹೌದು ಅದೊಂಥರ ಹುಚ್ಚೇ. ಅದೆಲ್ಲ ಸರಿ. ಆದರೆ ಇಷ್ಟು ದೊಡ್ಡ ಅರಣ್ಯವನ್ನು ಅವರು ಬೆಳೆಸಿದ್ದು ಏಕೆ ಮತ್ತು ಹೇಗೆ ಎಂಬುದು ಬಹು ರೋಚಕವಾದ ಕಥೆ. ಇದನ್ನು
ತಿಳಿಯಬೇಕಾದರೆ 30-40 ವರ್ಷ ಹಿಂದಕ್ಕೆ ಹೋಗಬೇಕಾಗುತ್ತದೆ. ಅಲ್ಲಿಂದ ಶುರುವಾಗುತ್ತದೆ ಇವರ ಅರಣ್ಯಶೋಧನೆ, ಸಾಧನೆ. ಅವರ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಒಂದಷ್ಟು ಮಂದಿಗೆ ಗೊತ್ತಿರಲೂ ಬಹುದು. ಆದರೂ ಪರಿಸರ ದಿನಾಚರಣೆ
ಸಮೀಪಿಸಿರುವ ಈ ಸಂದರ್ಭದಲ್ಲಿ ಇವರನ್ನು ನೆನಪಿಸಿಕೊಳ್ಳೋಣ ಎಂದರೂ ಆದೀತು.
ಈ ಅರಣ್ಯಕಾಂಡದ ಕಥನ ಇಲ್ಲಿದೆ. ಇದು ಅಸ್ಸಾಂ ರಾಜ್ಯದ ಜೋಹ್ರಾತ್ ಜಿಲ್ಲೆಯಲ್ಲಿರುವ ಮಜುಲಿ ದ್ವೀಪದ ಕಥೆ. ಕೋಕಿಲ ಮುಖ ಎಂಬ ಪ್ರದೇಶದಲ್ಲಿ ಬ್ರಹ್ಮಪುತ್ರಾ ನದಿ ಹರಿಯುತ್ತದೆ. ಅಲ್ಲೇ ಈ ದ್ವೀಪ ಇರುವುದು. ನಾಲ್ಕು ದಶಕಗಳ ಹಿಂದೆ ಒಬ್ಬ ಹದಿಹರೆಯದ ಹುಡುಗ ತಾನಿರುವ ಜಾಗದಲ್ಲಿ ಹಾವುಗಳು ದೊಡ್ಡ ಸಂಖ್ಯೆಯಲ್ಲಿ ಸತ್ತು ಬಿದ್ದಿದ್ದನ್ನು ಗಮನಿಸುತ್ತಾನೆ. ಆ ಜಾಗ
ಗಿಡಮರಗಳಿಲ್ಲದ ಬೋಳು ಮರಳುದಿಣ್ಣೆ. ಪ್ರವಾಹದ ನೀರು ಈ ಸರೀಸೃಪಗಳನ್ನು ತಂದು ದಡಕ್ಕೆ ಎಸೆದಿತ್ತು.
ಆದರೆ ಅಲ್ಲಿ ಯಾವುದೇ ಗಿಡಮರ ಇಲ್ಲದೆ ಹಾಗೂ ಅತಿಯಾದ ಬಿಸಿಲಿನಿಂದಾಗಿ ಅವು ಒದ್ದಾಡಿ ಪ್ರಾಣ ಬಿಟ್ಟಿದ್ದವು. ಅಲ್ಲದೆ ವಲಸೆ ಹಕ್ಕಿಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಇದನ್ನು ನೋಡಿದ ಯುವಕ ಹೀಗೇಕೆ ಎಂದು ಗ್ರಾಮಸ್ಥರನ್ನು ಕೇಳುತ್ತಾನೆ. ಬೇಕಾಬಿಟ್ಟಿ ಕಾಡು ಕಡಿದುದರ ಪರಿಣಾಮ ಪಶುಪಕ್ಷಿಗಳಿಗೆ ಜಾಗ ಇಲ್ಲದಾಗಿದೆ. ಅದರ ಪರಿಣಾಮ ಇದು ಎಂದು ಹೇಳಿದರು. ನಾವೆಲ್ಲರೂ ಒಂದು ದಿನ ಈ ಹಾವಿನಂತೆಯೇ ಸತ್ತುಬಿಟ್ಟರೆ ಎನು ಗತಿ ಎಂಬ ಆತನ ಮುಗ್ಧ ಮತ್ತು ಆತಂಕ ಭರಿತ ಪ್ರಶ್ನೆಗೆ ಅವರೆಲ್ಲ ನಕ್ಕು
ಸುಮ್ಮನಾಗುತ್ತಾರೆ. ಏಕೆಂದರೆ ಅವರ ಬಳಿ ಅದಕ್ಕೆ ಆಗ ಬಹುಶಃ ಉತ್ತರವೂ ಇರಲಿಲ್ಲ. ಆದರೂ ಕೆಲವರು,‘ಮತ್ತೆ ಇಲ್ಲಿ ಗಿಡಮರ ಗಳು ಬೆಳೆದು ಹಸಿರು ನೆಲೆಸಿದರೆ ಗತವೈಭವ ಮರಳಬಹುದು. ನೀನು ಬೇಕಾದರೆ ಪ್ರಯತ್ನಿಸು’ ಎಂದರು.
ಆದರೆ ಜಾದವ್ ಪಾಯೆಂಗ್ ಎಂಬ ಈ ಯುವಕನ ತಲೆಯಲ್ಲಿ ಇದೇ ವಿಷಯ ಕೊರೆಯುತ್ತಿತ್ತು. ಹೇಗಾದರೂ ಮಾಡಿ ಇದಕ್ಕೊಂದು ಪರಿಹಾರ ಕಂಡುಹಿಡಿಯಬೇಕು ಎಂದು ಅಂದೇ ತೀರ್ಮಾನಿಸಿದ. ಇದು 1979 ರ ಸಮಯ. ಈ ವಿಷಯವನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಅದು ಅರಣ್ಯ ರೋದನವಾಯಿತು. ‘ನೀನೇ ಬೇಕಾದರೆ ಗಿಡನೆಡು’ ಎಂಬ ಬಿಟ್ಟಿ ಸಲಹೆ ನೀಡಿ ಕೈತೊಳೆದುಕೊಂಡು ಬಿಟ್ಟರು.
ಆದರೆ ಇದರಿಂದ ನಿರಾಶರಾಗದೆ, ಧೃತಿಗೆಡದೆ ಜಾದವ್ ಏಕಾಂಗಿಯಾಗಿ ಕಾರ್ಯತತ್ಪರರಾಗಿಯೇ ಬಿಟ್ಟರು. ಅಲ್ಲೇ ಹತ್ತಿರದಲ್ಲಿದ್ದ ಒಂದು ದ್ವೀಪವನ್ನು ಆಯ್ಕೆ ಮಾಡಿ ಬ್ರಹ್ಮಪುತ್ರಾ ನದಿದಡದಲ್ಲಿ 20 ಬಿದಿರು ಗಿಡಗಳನ್ನು ನೆಡುವುದರಿಂದ ಜಾದವ್ ಅಭಿಯಾನ
ಆರಂಭವಾಯಿತು ಹೀಗಿರುವಾಗ, ಮುಂದಿನ ವರ್ಷ, ಅಂದರೆ 1980ರಲ್ಲಿ ಗೋಲಾಘಾಟ್ ಜಿಲ್ಲೆಯ ಅರಣ್ಯ ವಿಭಾಗವು, ಕೋಕಿಲ ಮುಖಿಯಿಂದ ಐದು ಕಿಮೀ ದೂರದಲ್ಲಿರುವ ಅರುಣಾ ಚೋಪಾರಿ ಎಂಬಲ್ಲಿ 200 ಎಕರೆಯಷ್ಟು ಪ್ರದೇಶದಲ್ಲಿ ಸಾಮಾಜಿಕ ಅರಣ್ಯ ಯೋಜನೆ ಪ್ರಾರಂಭಿಸಿದಾಗ ಜಾದವ್ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಐದು ವರ್ಷಗಳ ಬಳಿಕ ಈ ಯೋಜನೆ ಮುಕ್ತಾಯವಾಯಿತು. ಎಲ್ಲ ಕಾರ್ಮಿಕರೂ ತೆರಳಿದರು. ಆದರೆ ಜಾದವ್ ಮಾತ್ರ ಅಲ್ಲಿಂದ ಕಾಲ್ತೆಗೆಯಲಿಲ್ಲ. ಗಿಡಗಳ ದೇಖರೇಖಿ ನೋಡಿಕೊಳ್ಳುವುದರ ಜತೆಗೆ ಹೊಸ ಹೊಸ ಗಿಡಗಳನ್ನು ನೆಟ್ಟರು. ಪ್ರತಿದಿನ ಗಿಡ ನೆಡುತ್ತ ನೆಡುತ್ತ ಹೋದ ಅವರು ಮೂವತ್ತು ವರ್ಷಗಳ ಬಳಿಕವೂ ಆ ಕೆಲಸವನ್ನು ನಿಲ್ಲಿಸಿಲ್ಲ. ‘ನಾನು ಸತ್ತ ದಿನವೇ ಈ ಕೆಲಸ ನಿಲ್ಲುವುದು’ ಎಂಬುದು ಅವರ ಹೇಳಿಕೆ. ಸಸಿಗಳನ್ನು ನೆಟ್ಟಿದ್ದೇನೋ ಆಯಿತು.
ಆದರೆ ಅದರ ಪಾಲನೆ – ಪೋಷಣೆ ಹೇಗೆ? ಅದಕ್ಕೆ ಒಂದು ಐಡಿಯಾ ಮಾಡಿದರು. ಪ್ರತಿ ಗಿಡದ ಮೆಲೆ ಬಿದಿರಿನ ಚಪ್ಪರ ನಿರ್ಮಿಸಿ ಅದರ ಮೇಲೆ ರಂಧ್ರಗಳಿರುವ ಮಡಕೆಯನ್ನಿರಿಸಿದರು. ಆ ನೀರು ಕೆಳಗಿನ ಗಿಡಕ್ಕೆ ಹನಿ ನೀರಾವರಿಯಂತೆ ನಿಧಾನವಾಗಿ ಬೀಳುತ್ತಿತ್ತು. ಬರಬರುತ್ತ ಈ ಅರಣ್ಯ ಬೆಳೆಸುವ ಹುಚ್ಚು ಎಷ್ಟು ಹೆಚ್ಚಾಯಿತು ಎಂದರೆ ಒಂದು ರೀತಿ ಕಿಚ್ಚು ಹೊತ್ತಿಸಿತು. ಜಾದವ್
ಕೆಲವೊಮ್ಮೆ ಅಲ್ಲಿಯೇ ಉಳಿದು ಗಿಡಗಳ ಆರೈಕೆ ಮಾಡುತ್ತಿದ್ದರು. ಅನೇಕ ಬಾರಿ ತಮ್ಮ ತೆಪ್ಪದಲ್ಲಿ ಇರುವೆ, ಎರೆಹುಳ, ಗೊಬ್ಬರ ಎಲ್ಲವನ್ನೂ ತಂದು ಈ ದ್ವೀಪದಲ್ಲಿ ಹಾಕಿದ್ದಾರೆ. ಇದರಿಂದಾಗಿ ಅಲ್ಲಿನ ಭೂಮಿ ಫಲವತ್ತಾಯಿತು.
ಅಸ್ಸಾಂನ ‘ಮಿಷಿಂಗ್’ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದ ಪೆಯೆಂಗ್ ತೋಟದವೊಂದರಲ್ಲಿ ಗುಡಿಸಲಿನಂಥ ಮನೆಯಲ್ಲಿ ವಾಸಿಸುತ್ತಾರೆ. ಮದುವೆ ಆಗಿದೆ. ಐವರು ಮಕ್ಕಳಿದ್ದಾರೆ. ದನಕರುಗಳಿವೆ. ಹಾಲು ಮಾರಿ ಜೀವನ ಸಾಗಿಸುತ್ತಾರೆ. ಇಷ್ಟೆಲ್ಲ ಸಂಸಾರ ತಾಪತ್ರಯದ ನಡುವೆಯೂ ಜಾದವ್ ತಮ್ಮ ಜೀವನದ ಬಹುಮುಖ್ಯ ಗುರಿಯನ್ನು ಮರೆಯಲಿಲ್ಲ. ಇಲ್ಲವೆ ಕಡೆಗಣಿಸಲಿಲ್ಲ.
ಮನೆಯಿಂದ ೨೦ ನಿಮಿಷ ನಡೆದುಕೊಂಡು ನದಿಗೆ ಬಂದು ತೆಪ್ಪದ ಮೂಲಕ ನದಿ ದಾಟುವುದು. ಬಳಿಕ ಮತ್ತೆ ಎರಡು ತಾಸು ನಡೆಯುತ್ತ ಅದೇ ಮರಳಿನ ದಿಣ್ಣೆ ತಲುಪುವುದು.
ದಿನಕ್ಕೊಂದರಂತೆ ವರ್ಷದ ಮೂರು ತಿಂಗಳು ಗಿಡ ನೆಡುವುದು ನಡೆದೇ ಇತ್ತು. ಈ ಕಾಯಕವನ್ನು ನಿರಂತರ 35 ವರ್ಷ ವ್ರತದಂತೆ ಪಾಲಿಸಿದರು. ಈ ತಪಸ್ಸಿನ ಫಲವೆಂಬಂತೆ ಆ ದ್ವೀಪವೀಗ ದಟ್ಟ ಕಾಡಾಗಿ ಪರಿವರ್ತನೆಯಾಗಿದೆ. 1360 ಎಕರೆಯಷ್ಟು ವಿಸ್ತಾರ ವಾಗಿದೆ. ಇದಕ್ಕೆ ‘ಮೊಲಾಯ್’ ಅರಣ್ಯ ಎಂದು ನಾಮಕರಣ ಮಾಡಲಾಗಿದೆ. ಮೊಲಾಯ್ ಎಂಬುದು ಜಾದವ್ ಅವರ ಮಧ್ಯದ ಹೆಸರು. ಅದೇ ಹೆಸರು ಇಡಲಾಗಿದೆ.
ಒಮ್ಮೆ ಈ ತಪಸ್ಸು ಫಲಿಸಿದ ಬಳಿಕ ಆ ಅರಣ್ಯದ ವೈಭವವನ್ನು ಏನೆಂದು ಬಣ್ಣಿಸುವುದು. ಅಲ್ಲಿ ಈಗ ಬಿದಿರು ಮಾತ್ರವಲ್ಲದೆ ಎಲ್ಲ ಥರದ, ಎಲ್ಲ ಜಾತಿಯ ಮರಗಳಿವೆ. 100ಕ್ಕೂ ಹೆಚ್ಚಿನ ಔಷಧಿಯ ಸಸ್ಯಗಳಿವೆ. ಬಗೆಬಗೆಯ ಹೂವು ಹಣ್ಣುಗಳ ಗಿಡಗಳು. ಮರ ಮುಟ್ಟು ನೀಡುವ ಗಿಡಗಳಿವೆ. ಸುಮಾರು 300 ಎಕರೆಯಷ್ಟು ಬಿದಿರೇ ಇದೆ. ಹಸಿರು ಹೆಚ್ಚಾಗಿ, ಕಾಡು ಬೆಳೆದಂತೆ ಪ್ರಾಣಿ ಪಕ್ಷಿ ಗಳೂ ಬರತೊಡಗಿದವು. ಪಕ್ಷಿಗಳ ಕಲರವ, ದುಂಬಿಗಳ ಝೇಂಕಾರ ಕೇಳಿಸತೊಡಗಿತು. ಅಷ್ಟು ಮಾತ್ರವಲ್ಲದೆ ಆನೆ, ಹುಲಿ, ಜಿಂಕೆ, ಘೇಂಡಾಮೃಗಗಳೂ ಇವೆ.
ಗಿಡ ನೆಡುತ್ತ, ಅರಣ್ಯ ಬೆಳೆಸುತ್ತ ತಮ್ಮ ಪಾಡಿಗೆ ತಾವು ಹಾಯಾಗಿದ್ದ ಪಾಯೆಂಗ್ ಪ್ರಚಾರದಿಂದ ಗಾವುದ ದೂರ ಇದ್ದರು. ಅರಣ್ಯ ಬೆಳೆಸಬೆಕು ಎಂಬುದಷ್ಟೆ ಅವರ ಏಕೈಕ ಉದ್ದೇಶವಾಗಿತ್ತು. ಆದರೆ ಅವರು ಮುಂಬೆಳಕಿಗೆ ಬಂದಿದ್ದಾರೂ ಹೇಗೆ? ಅದಕ್ಕೂ ಒಂದು ಕಥೆ ಇದೆ. ಆ ಭಾಗದ ವನ್ಯಜೀವಿ ಛಾಯಾಗ್ರಾಹಕರಾದ ಜಿತು ಕಲಿತ ಎಂಬುವರೊಬ್ಬರು ಹೀಗೇ ಸುತ್ತಾಡುತ್ತಿದ್ದಾಗ, ಒಂದು
ಹಚ್ಚಹಸಿರಿನ ಕಾಡು ಗೋಚರಿಸಿತು. ಇದೇನಿದು ಎಂದು ಹಾಗೇ ಒಳಹೊಕ್ಕರು. ಸ್ವಲ್ಪ ದೂರ ಸಾಗಿದಂತೆ ಅಲ್ಲೊಬ್ಬ ವ್ಯಕ್ತಿ ತಮ್ಮ ಪಾಡಿಗೆ ಗಿಡ ನೆಡುತ್ತಿದ್ದಾರೆ.
ಇವರಿಗೆ ಆಶ್ಚರ್ಯ. ಯಾರಿರಬಹುದು ಎಂದು ಕುತೂಹಲದಿಂದ ವಿಚಾರಿಸಲಾಗಿ ಈ ಅರಣ್ಯದ ರೂವಾರಿ ಇವರೇ ಎಂಬುದು ಗೊತ್ತಾಯಿತು. ಸ್ಥಳೀಯ ಪತ್ರಿಕೆಯಲ್ಲಿ ಈ ಅರಣ್ಯಬ್ರಹ್ಮನ ಬಗ್ಗೆ ವರದಿ ಪ್ರಕಟಿಸಿದರು. ಕ್ರಮೇಣ ಈ ಸುದ್ದಿ ಬಾಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ ಹರಡಿ ಜಾದವ್ ಅವರ ಸಾಧನೆ ಬೆಳಕಿಗೆ ಬಂದಿತು. ಇಂದಿಗೂ ಕಲಿತ ಮತ್ತು ಜಾದವ್ ಒಳ್ಳೆಯ ಸ್ನೇಹಿತರು.
2012ರಲ್ಲಿ ದೆಹಲಿಯ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದ ಕುಲಪತಿಗಳು ಪಾಯೆಂಗ್ ಅವರಿಗೆ ‘ದಿ ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ’ ಬಿರುದನ್ನಿತ್ತು ಗೌರವಿಸಿದ್ದಾರೆ. ಅದಾದ ಬಳಿಕ ಅನೇಕ ಪ್ರಶಸ್ತಿ, ಪುರಸ್ಕಾರ, ಗೌರವಗಳು ಅವರನ್ನು ಅರಸಿ ಬಂದಿವೆ. 2015ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಇವರ ಜೀವನ ಸಾಧನೆ ಕುರಿತ ಸಾಕ್ಷ್ಯ ಚಿತ್ರ ಕೂಡ ಮಾಡಲಾಗಿದೆ. ಅಮೆರಿಕದ ಬ್ರಿಸ್ಟಲ್ ಸ್ಕೂಲ್‌ನಲ್ಲಿ ಇವರ ಸಾಧನೆಯ ಬಗ್ಗೆ ಪಾಠ ಮಾಡಿದ್ದಿದೆ.
ನನ್ನ ಗೆಳೆಯರನೇಕರು ಎಂಜಿನಿಯರ್, ಡಾಕ್ಟರ್ ಏನೇನೋ ಆಗಿದ್ದಾರೆ. ನಗರಗಳಲ್ಲಿ ವಾಸಿಸುತ್ತ ಹಾಯಾಗಿದ್ದಾರೆ. ಆದರೆ ನಾನು ಮಾತ್ರ ಎಲ್ಲವನ್ನೂ ತ್ಯಾಗಮಾಡಿ ಇಲ್ಲೇ ಉಳಿದುಬಿಟ್ಟೆ. ಈಗ ಈ ಅರಣ್ಯವೇ ನನ್ನ ಮನೆ. ಆದರೆ ಇದರ ಬಗ್ಗೆ ನನಗೆ ಬೇಸರವೇನೂ
ಇಲ್ಲ ಎನ್ನುತ್ತಾರೆ ಜಾದವ್. ಪದ್ಮಶ್ರೀ ಮತ್ತಿತರ ಪ್ರಶಸ್ತಿ ಪುರಸ್ಕಾರಗಳಿಗೆ ಅವರು ಹೆಚ್ಚು ಮಹತ್ವ ಕೊಡುವುದಿಲ್ಲ. ‘ನನ್ನ ಜೀವನದ ಕೊನೆಯುಸಿರು ಇರುವವರೆಗೂ ಗಿಡ ನೆಡುವುದನ್ನು, ಕಾಡು ಬೆಳೆಸುವುದನ್ನು ಮುಂದುವರಿಸುತ್ತೇನೆ’ ಎನ್ನುತ್ತಾರೆ.
ಮಜುಲಿ ದ್ವೀಪ ಮಾತ್ರವಲ್ಲದೆ ಉಳಿದ ಕಡೆಗೂ ಕಾಡು ಬೆಳೆಸುವ ಇಚ್ಛೆ ಹೊಂದಿದ್ದಾರೆ. ಅಷ್ಟು ಮಾತ್ರವಲ್ಲದೆ ಜಲತಜ್ಞ ರಾಜೇಂದ್ರ ಸಿಂಗ್ ಜತೆ ಸೇರಿ ರಾಜಸ್ಥಾನದಲ್ಲೂ ಕಾಡು ಬೆಳೆಸುವ ಕನಸನ್ನು ಹೊಂದಿದ್ದಾರೆ. ಹಾವುಗಳ ಸಾವು ತಂದ ನೋವೇ ಒಬ್ಬ ವ್ಯಕ್ತಿಯನ್ನು ಈ ಪರಿಯಾಗಿ ಕಾಡಿ, ಅದು ಏಕಾಂಗಿಯಾಗಿ ಕಾಡು ಬೆಳೆಸುವ ಹಂತಕ್ಕೆ ಪ್ರೇರೇಪಿಸುತ್ತದೆ ಎಂಬುದೇ
ಅದ್ಭುತ. ಮನಸ್ಸಿದ್ದರೆ ಮಾರ್ಗ ಎಂಬ ಮಾತಿಗೆ ಜಾದವ್ ಜೀವಂತ ನಿದರ್ಶನ. ಹುಸಿ ಕಾಳಜಿ, ಪ್ರಚಾರಕ್ಕಾಗಿ ಗಿಡಮರ ಬೆಳೆಸುವ ಜನರ ಮಧ್ಯೆ, ಸರಕಾರ, ಅಧಿಕಾರಿಗಳ ಅಸಡ್ಡೆಯ ನಡುವೆ, ಪರಿಸರ ರಕ್ಷಣೆ ಕುರಿತು ಜನಸಾಮಾನ್ಯರಿಗೂ ಇರುವ ನಿಷ್ಕಾಳಜಿಯ ನಡುವೆ ನಮಗೆ ಜಾದವ್ ದೊಡ್ಡ ಪ್ರೇರಕ ಶಕ್ತಿಯಾಗಿ ಕಾಣುತ್ತಾರೆ.
ಪರಿಸರ ರಾಯಭಾರಿಯಾಗಿ ಗೋಚರಿಸುತ್ತಾರೆ. ಅವರ ಜೀವನ – ಸಾಧನೆ ನಮಗೂ ಪ್ರೇರಣೆ ಆಗಬೇಕು.
ನಾಡಿಶಾಸ್ತ್ರ
ಪರಿಸರ ರಕ್ಷಣೆ ಈಗ ಅರಣ್ಯರೋದನ
ಕೆಲವರ ಪಾಲಿಗೆ ಅದೇ ಭಾರಿ ಧನ
ಮತ್ತೆ ಹಲವರಿಗೆ ಪ್ರಚಾರ ಸಾಧನ
ಇರಲಿ ಜಾದವರಂಥವರ ಮಾರ್ಗದರ್ಶ