Wednesday, 11th December 2024

ದ ಪೋಯೆಟ್ರಿ ಫಾರ್ಮಸಿ : ಕವಿತೆಯಲ್ಲಿ ಅಡಗಿ ಕೂತ ಸಾಂತ್ವನದ ಹುಡುಕಾಟ

ಸಂಡೆ ಸಮಯ

ಸೌರಭ ರಾವ್, ಕವಯಿತ್ರಿ ಬರಹಗಾರ್ತಿ

ಫಿಲಿಪ್ ಲಾರ್ಕಿನ್ ಅವರು ಅವರ ಕಾಲದಲ್ಲಿ ಬರೆದಿದ್ದ ‘ಆಂಬ್ಯುಲೆನ್ಸಸ್’ ಪದ್ಯವನ್ನು ನೀವು ಈಗ ಓದಿದರೂ ಎಷ್ಟು ಪ್ರಸ್ತುತ ಎನಿಸುತ್ತದೆ. ಆಂಬ್ಯುಲೆನ್ಸ್‌ಗಳು ರಸ್ತೆಯಲ್ಲಿ ಚೀರಿಕೊಂಡು ಹೋಗುವ ಸದ್ದು ಯಾವಾಗ ಕೇಳಿದರೂ, ಅಥವಾ ಕಣ್ಮುಂದೆ
ಕಂಡರೂ ಯಾವಾಗಲೂ ತಳಮಳವಾಗುತ್ತದೆ.

ಅಂಥದ್ದರಲ್ಲಿ ಪಕ್ಕವೇ ನಿಂತು ರಸ್ತೆ ದಾಟಲು ಅಣಿಯಾದ ಒಬ್ಬ ವ್ಯಕ್ತಿಗೆ ವೇಗವಾಗಿ ಚಲಿಸುತ್ತಿದ್ದ ಕಾರೊಂದು ಡಿಕ್ಕಿ ಹೊಡೆದು ಆತ ಹಾರಿ ಎದುರಿನ ಫುಟ್ಪಾತ್ ಮೇಲೆ ಬೀಳುವುದನ್ನು ಕಣ್ಬಿಟ್ಟುಕೊಂಡೇ ಕನಸಿನಂತೆ ಕಂಡರೆ ಆಗುವ ಆಘಾತ ಹೇಗಿರಬಹುದು. ಅಂಥದ್ದೊಂದು ಅನುಭವವನ್ನು ಬ್ರಿಟನ್ನಿನ ಪ್ರಕಾಶಕ, ಕವಿತೆಯ ಪ್ರೇಮಿ ವಿಲಿಯಂ ಸೈಘಾರ್ಟ್ ತಮ್ಮ ಭಾಷಣಗಳಲ್ಲಿ, ಕಾರ್ಯಕ್ರಮಗಳಲ್ಲಿ ಹಂಚಿಕೊಂಡಿದ್ದಾರೆ.

ಅಪಘಾತವಾದ ವ್ಯಕ್ತಿಯ ಪುಣ್ಯವೇನೋ ಎಂಬಂತೆ ರಸ್ತೆಯಲ್ಲಿ ಹಾದುಹೋಗುತ್ತಿದ್ದ ಒಬ್ಬ ವ್ಯಕ್ತಿಗೆ ಸಿಪಿಆರ್ ತರಬೇತಿ ಇದ್ದು, ಆತ ಅವನ ನಾಡಿಮಿಡಿತ ಮರಳುವಂತೆ ಸಹಾಯ ಮಾಡುವಷ್ಟರಲ್ಲಿ ಒಂದು ಆಂಬ್ಯುಲೆನ್ಸ್ ಬಂದು ಪ್ರಜ್ಞೆತಪ್ಪಿದ ಮನುಷ್ಯ ನನ್ನು ತನ್ನೊಳಗೆ ಹೊತ್ತೊಯ್ಯುತ್ತದೆ. ಆ ಘಟನೆ ನಡೆದ ಹಲವು ದಿನಗಳವರೆಗೆ ಹೇಗೆ ಲಾರ್ಕಿನ್ ಎಂದೋ ಬರೆದಿದ್ದ ಕವನ ತಮಗಾದ ಮಾನಸಿಕ ಆಘಾತದಲ್ಲಿ ತಾನು ಒಂಟಿಯಲ್ಲ ಎಂಬ ಭಾವವನ್ನು, ಸಾಂತ್ವನವನ್ನು ಕೊಟ್ಟಿತ್ತು ಎಂದು ಸೈಘಾರ್ಟ್ ನೆನೆಯುತ್ತಿರುತ್ತಾರೆ.

ಪ್ರೀತಿ, ಮಮತೆಗಳು ಬಾಲ್ಯದ ದಿನಗಳನ್ನು ತುಂಬುಬೇಕಿರುವಾಗ ಅದ್ಯಾವುದೂ ಸಿಗದ ವಿಚಿತ್ರ ಶಿಸ್ತಿನ ಬೋರ್ಡಿಂಗ್ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿಬಿಡುವ ಕೆಲವು ಬ್ರಿಟಿಷ್ ಪೋಷಕರ ಪದ್ಧತಿಯ ಬಲಿಪಶುಗಳಲ್ಲಿ ನಾನೂ ಒಬ್ಬ ಎಂದು ಸೈಘಾರ್ಟ್ ಆಕ್ಸ್-ರ್ಡಿನ ಟೆಡ್ ಎಕ್ಸ್ ಭಾಷಣವೊಂದರಲ್ಲಿ ನೆನಪಿಸಿಕೊಳ್ಳುತ್ತಾರೆ. ಎಳೆಯ ವಯಸ್ಸಿನಲ್ಲಿ ಗೆಳೆಯರಿಲ್ಲದ ಅವರ ಒಂಟಿತನದ ಕ್ಷಣಗಳಲ್ಲಿ ಸಾಥಿಯಾಗಿದ್ದು ಕವಿತೆ. ದೊಡ್ಡವನಾಗುತ್ತಿದ್ದಂತೆ ಜೀವನದ ಬೇರೆ ಬೇರೆ ರೀತಿಯ ದುಃಖಗಳು, ಖಿನ್ನತೆಗಳು ಮನಸ್ಸನ್ನು ನಿರುತ್ಸಾಹಗೊಳಿಸಿದಾಗೆ ಅದಕ್ಕೆ ಮದ್ದು ನೀಡುವಂತೆ ಕವನಗಳನ್ನು ಹುಡುಕಿ ಹುಡುಕಿ ತನ್ನ ಸುತ್ತಮುತ್ತಲಿದ್ದವರ ನೋವಿಗೂ ಸ್ಪಂದಿಸುವಂತೆ ಕವನಗಳನ್ನು ಹಂಚುತ್ತಾ, ಇಂದು ಬ್ರಿಟನ್ನಿನ ಉದ್ದಗಲಕ್ಕೂ ‘ದ ಪೋಯೆಟ್ರಿ ಫಾರ್ಮಸಿ’ ಕೊಂಡೊಯ್ಯುತ್ತಿದ್ದಾರೆ.

ನೂರಾರು ರೀತಿಯ ವೇದನೆಗಳು, ಖಿನ್ನತೆ, ಖಾಲಿತನ, ಒಂಟಿತನ ಅನುಭವಿಸುತ್ತಿದ್ದ ಸಾವಿರಾರು ಜನರನ್ನು ಭೇಟಿ ಮಾಡಿ ಅವರ ಸಂದರ್ಭಕ್ಕೆ, ಅನುಭವಕ್ಕೆ ತಕ್ಕಂತೆ ಸಾಂತ್ವನ ನೀಡಬಲ್ಲ ಕವನಗಳನ್ನು ‘ಪ್ರಿಸ್ಕ್ರಿಪ್ಷನ್’ಗಳಂತೆ ಹಂಚಿಕೊಂಡು, ತಮ್ಮ ನೋವಿನಲ್ಲಿ ಯಾರೂ ಒಂಟಿಯಲ್ಲ, ನಮ್ಮ ಹಾಗೆ ಅದೆಷ್ಟು ಜನ ಅದೇ ಭಾವವನ್ನು ಅನುಭವಿಸಿದ್ದಾರೆ ಎಂದು ನಾಜೂಕಾಗಿ ಮನವರಿಕೆ ಮಾಡಿಕೊಡುತ್ತಿದೆ ದ ಪೋಯೆಟ್ರಿ ಫಾರ್ಮಸಿ’ ಎಂಬ ಅದ್ಭುತ ಪ್ರಯತ್ನ.

ದೇಹದ ವ್ಯಾಧಿಗಳಿರಲಿ, ಮನಸ್ಸಿನ ವ್ಯಾಕುಲತೆಗಳಿಗೂ ಮಾತೆತ್ತಿದರೆ ಮಾತ್ರೆಗಳನ್ನು ನುಂಗುವ ಪರಿಸ್ಥಿತಿಯೇ ಹೆಚ್ಚಾಗಿರುವ ಸಂದರ್ಭದಲ್ಲಿ ಈ ಪ್ರಯತ್ನ ಅದೆಷ್ಟು ಜನರ ಮನಸ್ಸನ್ನು ಮುಟ್ಟಿತೆಂದರೆ ಬಿಬಿಸಿ ರೇಡಿಯೋ ೪ ಮತ್ತು ಟೀವಿಯಲ್ಲಿ ಸೈಘಾರ್ಟ್ ಅವರನ್ನು ಅತಿಥಿ ಯನ್ನಾಗಿ ಕರೆಸಿತ್ತು. ಅವರನ್ನು ಪುನಃ – ಅದರಲ್ಲೂ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ – ಕರೆಯಿಸಲು ಯಾವ ಕಾರ್ಯಕ್ರಮಕ್ಕೂ ಬರದಿದ್ದಷ್ಟು ಪತ್ರಗಳು ಮಿಂಚಂಚೆ ಗಳು ರೇಡಿಯೋ ಚ್ಯಾನೆಲ್ಲಿಗೆ ತಲುಪುವಷ್ಟರ ಮಟ್ಟಿಗೆ ದ ಪೋಯೆಟ್ರಿ -ರ್ಮಸಿ ಪರಿಣಾಮಕಾರಿಯಾಗಿತ್ತು.

ಈ ಅನುಭವ ತಮ್ಮ ಜೀವನವನ್ನು ಹೇಗೆ ಅರ್ಥಪೂರ್ಣ ಗೊಳಿಸಿದೆ ಎನ್ನುತ್ತಾ, ಇದರಿಂದ ನನಗೆ ಮನವರಿಕೆಯಾದ ವಿಷಯ ಗಳೆಂದರೆ: ಒಬ್ಬ ಅಪರಿಚಿತನ ಮುಂದೆ ನೋವಿನಲ್ಲಿರುವ ಜನ ಹೇಗೆ ತಮ್ಮ ಮನಸ್ಸನ್ನು ತೆರೆದಿಡುವಷ್ಟು ನಂಬಿಕೆ ಇಡುತ್ತಾರೆ
ಎನ್ನುವುದು. ಲಿವರ್ಪೂಲಿನ ಒಂದು ಮಾನಸಿಕ ಸ್ವಾಸ್ಥ್ಯ ಘಟಕವಾಗಲೀ, ಅಥವಾ ಗ್ರಂಥಾಲಯಗಳಲ್ಲಿ ನಡೆಸಿದ ಕಾರ್ಯಕ್ರಮ
ಗಳಾಗಲೀ, ಜನರ ಜೊತೆ ಮಾತನಾಡಿದಾಗ ತಿಳಿಯುವುದೇನೆಂದರೆ ತೊಂದರೆಗಳು, ನೋವುಗಳು ಕೇವಲ ನಮಗೆ ಮಾತ್ರವಲ್ಲ, ನಮ್ಮಂತೆಯೇ ಎಲ್ಲರಿಗೂ ಅವರವರದ್ದೇ ತೊಂದರೆಗಳಿರುತ್ತವೆ.

ನಾನೇನೂ ವೈದ್ಯನಲ್ಲ, ಅಥವಾ ಮಾನಸಿಕ ಸ್ವಾಸ್ಥ್ಯತಜ್ಞನಲ್ಲ, ಆದರೆ ಜನರ ಮನಸ್ಸನ್ನು ಅರಿಯುವುದಕ್ಕೆ ನಾನೂ ಮುಕ್ತವಾಗಿ ತೆರೆದುಕೊಳ್ಳುವುದು ಮತ್ತು ಅವರ ತೊಂದರೆಗಳನ್ನು ತಾಳ್ಮೆಯಿಂದ ಕಿವಿಗೊಟ್ಟು ಕೇಳುವುದೇ ಎಷ್ಟೋ ಜನರು ಪೋಯೆಟ್ರಿ ಫಾರ್ಮಸಿಗೆ ಸ್ಪಂದಿಸಲು ಪ್ರೇರಣೆಯಾಯಿತು.

ನಾನು ಕಂಡಂತೆ ಜನ ಬಹಳವಾಗಿ ನರಳುವುದು ಒಂಟಿತನದಿಂದ. ಸಂಸಾರದಲ್ಲಿದ್ದರೂ, ಜನರ ಜೊತೆ ಪ್ರತಿದಿನ ಬೆರೆಯು ತ್ತಿದ್ದರೂ ಅನೇಕರು ತೀವ್ರ ಒಂಟಿತನದಿಂದ ಬಳಲುತ್ತಿರುತ್ತಾರೆ. ಸಾಮಾಜಿಕ ಜಾಲತಾಣಗಳು, ಇಂಟರ್ನೆಟ್ ಯುಗದ ಇದು ಹೆಚ್ಚಾಗುತ್ತಿರುವುದು ವಿಪರ್ಯಾಸ. ಎಲ್ಲರೂ ಪ್ರತಿದಿನ ಖುಷಿಯಿಂದಲೇ ಬದುಕುತ್ತಿರುವಂತೆ ಸಾಮಾಜಿಕ ಜಾಲತಾಣ ಗಳಲ್ಲಿ ತೋರಿಸಿಕೊಳ್ಳುತ್ತೇವೆ. ಯಾರಾದರೂ ತನಗೆ ಒಂಟಿತನ ಕಾಡುತ್ತಿದೆ, ತನಗೊಂದು ಸ್ವಚ್ಚಂದ ಗೆಳೆತನ ಬೇಕು, ತನಗೊಂದು ಅಪ್ಪುಗೆ ಬೇಕು ಎಂದು ಹೇಳಿಕೊಳ್ಳುತ್ತಾರೆಯೇ ಅಥವಾ ಹೇಳಿಕೊಳ್ಳಲಾಗುತ್ತದೆಯೇ? ಅಂತಹ ಪರಿಸರವನ್ನು ನಾವು ಪೋಷಿಸಿ ದ್ದೇವೆಯೇ? ಹಾಗಾಗಿ ಜನರು ಮುಕ್ತವಾಗಿ ಮಾತನಾಡುವ, ಅದನ್ನು ಕೇಳುವ ತಾಳ್ಮೆ ಇರುವ ಅವಕಾಶಗಳು ವಿರಳವಾಗಿವೆ. ದ ಪೋಯೆಟ್ರಿ ಫಾರ್ಮಸಿ ಇದರಿಂದಲೇ ಜನರ ಮನಸ್ಸಿಗೆ ಹತ್ತಿರವಾಗಿರಬಹುದು.

ಸೈಘಾಟ್ ಮುಂದುವರೆದು ಹೇಳುತ್ತಾರೆ: ನೂರಾರು ವರ್ಷಗಳ ಹಿಂದೆ ಪರ್ಷಿಯನ್ ಕವಿಯಾದ ಹಾಫೆಜ್ ಬರೆದ ಎರಡು ಸಾಲುಗಳು ನೆನಪಾಗುತ್ತಿರುತ್ತವೆ: ನಿನ್ನ ಒಂಟಿತನದ ಕ್ಷಣಗಳಲ್ಲಿ, ಅಥವಾ ಅಂಧಕಾರದಲ್ಲಿ, ನಿನಗೆ ನಿನ್ನದೇ ಅಸ್ತಿತ್ವದ ಬೆಳಕಿನ ವಿಸ್ಮಯವನ್ನು ನಿನಗೆ ತೋರಿಸಲಿಚ್ಛಿಸುತ್ತೇನೆ’. ಇದನ್ನು ನಾನು ಜನರಿಗೆ ಬಾಯಿಪಾಠ ಮಾಡಲು ಹೇಳುತ್ತೇನೆ, ಕನ್ನಡಿಯ ಮೇಲೋ, ತಮ್ಮ ಕೊನೆಯ ಗೋಡೆಯ ಮೇಲೋ ಬರೆದುಕೊಳ್ಳಲು ಹೇಳುತ್ತೇನೆ.

ಇತ್ತೀಚಿಗೆ ಒಬ್ಬ ಮಹಿಳೆ ನನ್ನ ಬಳಿ ಬಂದು, ನಿಮಗೆ ನನ್ನ ನೆನಪಿರಲಿಕ್ಕಿಲ್ಲ, ನಿಮ್ಮ ಪೋಯೆಟ್ರಿ ಫಾರ್ಮಸಿಯ ಒಂದು ಕಾರ್ಯ ಕ್ರಮಕ್ಕೆ ನಾನು ಬಂದಿದೆ. ಆಗ ನೀವು ಹಾಫೆಜ್ ಸಾಲುಗಳನ್ನು ನನಗೆ ಕೊಟ್ಟಿದ್ದಿರಿ. ಇತ್ತೀಚೆಗೆ ನನ್ನ ಮನೆಗೆ ನಾನಿಲ್ಲದಿದ್ದಾಗ ಕಳ್ಳರು ನುಗ್ಗಿ ಬೆಲೆಬಾಳುವ ಎಲ್ಲ ವಸ್ತುಗಳನ್ನೂ ಲೂಟಿಮಾಡಿಕೊಂಡು ಹೋದರು. ಆ ಆಘಾತದಲ್ಲಿದ್ದ ನನ್ನ ಕಣ್ಣಿಗೆ ನನ್ನ
ಕೋಣೆಯ ಮೇಲೆ ನಾನು ಬರೆದುಹಾಕಿದ್ದ ಆ ಸಾಲುಗಳು ಕಂಡವು. ಅವನ್ನು ಯಾರೂ ಕದಿಯಲು ಸಾಧ್ಯವಾಗಲಿಲ್ಲ, ಎಂದು ಹೇಳಿದರು. ಕಾವ್ಯದ ಶಕ್ತಿ ಬೇರೆ ಬೇರೆ ಹಿನ್ನೆಲೆಗಳಿಂದ, ಸಂಸ್ಕೃತಿಗಳಿಂದ, ಬೇರೆ ಬೇರೆ ದೇಶ – ಭಾಷೆಗಳಿಂದ ಬರುವ ಎಲ್ಲರನ್ನೂ ಹೇಗೆ ಒಂದು ಸಾಮೂಹಿಕ ಪ್ರಜ್ಞೆಯಲ್ಲಿ, ಒಂದೇ ನೆಲೆಯಲ್ಲಿ ಎಲ್ಲ ಭೇದಗಳನ್ನೂ ಮರೆತು ನಾವು ಒಂಟಿಯಲ್ಲ, ಮತ್ತು ನಮ್ಮಂತೆಯೇ ತೊಂದರೆಗಳಲ್ಲಿ ಸಾವಿರಾರು ಜನ ಇzರೆ ಎಂಬ ಅರಿವನ್ನು ಮೂಡಿಸಿ ಆ ಅರಿವಿನ ಮೂಲಕ ಸಾಂತ್ವನ ನೀಡುತ್ತದೆ. ಹತ್ತಾರು, ನೂರಾರು, ಸಾವಿರಾರು ವರ್ಷಗಳ ಹಿಂದೆ ಯಾರೋ ಬರೆದ ಸಾಲುಗಳನ್ನು ಈಗ ಓದಿದರೂ ನಮಗೆ ಏಕೆ ಹತ್ತಿರ ವಾಗುತ್ತದೆ? ನಮಗೆ ಹೇಳಿಕೊಳ್ಳಲಾಗದ ಭಾವನೆಗಳು ಬೇರೆಯವರ ಮೂಲಕ ಅಭಿವ್ಯಕ್ತಗೊಳ್ಳುವುದನ್ನು ನೋಡಿದಾಗ ಭರವಸೆ ಮೂಡುತ್ತದೆ. ನಮ್ಮ ಆತಂಕಗಳ ಬಗ್ಗೆ, ಭಯಗಳ ಬಗ್ಗೆ ನಮಗೆ ಯಾವ ರೀತಿಯ ಕೀಳರಿಮೆ ಬೇಡ. ಆತಂಕ, ನೋವುಗಳಿದ್ದರೆ ಅದು ದೌರ್ಬಲ್ಯವಲ್ಲ.

ಅದು ಸಂತೋಷ, ಧೈರ್ಯಗಳಂತೆಯೇ ಅತ್ಯಂತ ಮಾನವೀಯ ಭಾವಗಳು, ಅನುಭವಗಳು. ಯಾವುದೂ ಹೆಚ್ಚೂ ಅಲ್ಲ, ಯಾವುದೂ ಕಡಿಮೆಯೂ ಅಲ್ಲ. ಕಾವ್ಯಕ್ಕೆ ಇರುವ ಚಿಕಿತ್ಸಕ ಶಕ್ತಿಯ ಬಗ್ಗೆ ಮುಂದುರೆದು ಸೈಘಾಟ್ ಹೇಳುತ್ತಾರೆ: ಜನರು ತಮ್ಮ
ತೊಂದರೆಗಳನ್ನು ಹಂಚಿಕೊಂಡು, ಒಂದು ಮುಕ್ತ ಸಂಭಾಷಣೆಯ ನಂತರ ಒಂದು ಅಡಿ ಎತ್ತರ ಬೆಳೆದಂತೆ ಮನಸ್ಸು ಹಗುರಾಗಿ ಎದ್ದು ನಿಂತಾಗ ನನಗೆ ಸಿಗುವ ನೆಮ್ಮದಿ, ಸಂತೋಷ ಹೇಳಿಕೊಳ್ಳಲಾಗದ್ದು. ಮೂಲಭೂತವಾಗಿ ನಾವು ಎದುರಿಸುವ ಆಂತರಿಕ ಸವಾಲುಗಳು, ಆತಂಕಗಳು ಶತಮಾನಗಟ್ಟಲೆಯಿಂದ ಅವೇ ಆಗಿವೆ, ಆದ್ದರಿಂದಲೇ ಒಳ್ಳೆಯ ಸಾಹಿತ್ಯ, ಒಳ್ಳೆಯ ಕಾವ್ಯ ನಮಗೆ ಸಮಾಧಾನ ನೀಡುತ್ತವೆ, ಆಗ ಬರೆದು ಇಂದು ಇಲ್ಲವಾದ ಕವಿಗಳ ಜೊತೆಗೆ ಒಂದು ಸಾಂಗತ್ಯ ಬೆಳೆಸಿಕೊಳ್ಳುವಂತೆ ಮಾಡುತ್ತದೆ. ಅದು ಕಾಲಾತೀತ ಶಕ್ತಿ.

ನಮ್ಮೆಲ್ಲರಲ್ಲೂ ಭೇದ-ಭಾವ ಮೂಡಿಸಿ ಸಮಾಜದಲ್ಲಿ ಒಡಕನ್ನು ಹೆಚ್ಚಿಸುವ ಶಕ್ತಿಗಳೇ ಹೆಚ್ಚಾಗಿರುವ ಈ ಸಮಯದಲ್ಲಿ ಒಳ್ಳೆಯ
ಸಾಹಿತ್ಯ, ಕಾವ್ಯ ನಮ್ಮನ್ನು ಒಂದು ಮಾಡಲಿ.ನಾವು ಮನುಷ್ಯರು, ಮನುಷ್ಯರಾಗಿಯೇ ಬಾಳಲು ‘ದ ಪೋಯೆಟ್ರಿ ಫಾರ್ಮಸಿ’ ಯಂತಹ ಅನುಭವಗಳು ಇನ್ನೂ ಹೆಚ್ಚಾಗಲಿ. ಜೀವನವನ್ನು, ಎಲ್ಲ ಜೀವಿಗಳನ್ನು ಗೌರವಿಸಿ, ಪ್ರೀತಿಸುವ ಪ್ರಜ್ಞೆಯನ್ನು ನಮ್ಮಲ್ಲಿ ಬೆಳೆಸುತ್ತಿರಲಿ.