Friday, 13th December 2024

ಪ್ರಶ್ನೆೆ ಮಾಡದಿರಲು ಬ್ರಾಹ್ಮಣರೇನು ಮೇಲಿಂದ ಇಳಿದು ಬಂದವರಾ?

ಕೆಲವು ವಿಷಯಗಳನ್ನು ನೇರಾ ನೇರಾ ಹೇಳುತ್ತೇನೆ. ಪುರೋಹಿತರು ತಮ್ಮ ವೃತ್ತಿಿಯಲ್ಲಿ ಮಾಡುವ ಕೆಲವು ದೋಷಗಳನ್ನು ರಘುನಾಥ ಗುರೂಜಿ ಅವರು ಎತ್ತಿಿ ತೋರಿಸಿದ್ದಕ್ಕಾಾಗಿ ಬ್ರಾಾಹ್ಮಣ ಸಂಘದ ಕೆಲವು ಮಂದಿ ಅವರಿಗೆ ಕೊಡಬಾರದ ಮಾನಸಿಕ ಹಿಂಸೆ ಕೊಟ್ಟು, ಅವರಿಂದ ಬಲವಂತದಿಂದ ಕ್ಷಮೆ ಕೇಳಿಸಿ ವಿಕೃತ ಆನಂದ ಅನುಭವಿಸಿದ್ದಾರೆ. ರಘುನಾಥ ಗುರೂಜಿ ‘ವಿಶ್ವವಾಣಿ’ಯಲ್ಲಿ ಪುರೋಹಿತರ ಬಗ್ಗೆೆ ಬರೆದ ಲೇಖನದಲ್ಲಿ ಏನೇನೂ ತಪ್ಪಿಿರಲಿಲ್ಲ. ಪುರೋಹಿತರಲ್ಲಿರುವ ದೋಷಗಳನ್ನು ಎತ್ತಿಿ ತೋರಿಸಿದರೆ ಅವರಿಗೆ ಉಪಕೃತರಾಗಬೇಕಿತ್ತು.

ಅದು ಬಿಟ್ಟು ಪೊಲೀಸ್ ಠಾಣೆ ಮೆಟ್ಟಿಿಲೇರಿ ಅನಂತರ ಗುರೂಜಿ ಅವರನ್ನು ಗೋಳಾಡಿದ್ದು ಸರ್ವಥಾ ಸರಿಯಾದ ಕ್ರಮವಲ್ಲ. ಗುರೂಜಿ ಅವರ ನಿಲುವನ್ನು ಸಮರ್ಥಿಸಿ, ರಾಮಚಂದ್ರ ಶಾಸ್ತ್ರಿಿ ಹಾಗೂ ನಾನು ‘ವಿಶ್ವವಾಣಿ’ಯಲ್ಲಿ ಲೇಖನ ಬರೆದರೂ ನಮ್ಮ ಮೇಲೆ ಯಾರೂ ಕ್ರಮಕ್ಕೆೆ ಒತ್ತಾಾಯಿಸಲಿಲ್ಲ. ಇದನ್ನು ಪ್ರಕಟಿಸಿದ ಸಂಪಾದಕ ವಿಶ್ವೇಶ್ವರ ಭಟ್ ಅವರ ವಿರುದ್ಧ ಕ್ರಮಕ್ಕೆೆ ಆಗ್ರಹಿಸಲಿಲ್ಲ. ಗುರೂಜಿ ಅವರ ಮೇಲೆ ಮಾತ್ರ ಮುನಿಸೇಕೆ? ಇಲ್ಲಿ ಏನೋ ಇದೆ! ಇರಲಿ. ಬ್ರಾಾಹ್ಮಣರಿಗೆ ಅವರ ಜಾತಿಯ ಬಗ್ಗೆೆ ಕೆಲವು ಸಂಗತಿಗಳನ್ನು ತಿಳಿಸಿಕೊಡುವ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. (ನಾನು ಒಕ್ಕಲಿಗ ಸಮುದಾಯಕ್ಕೆೆ ಸೇರಿದವನೆಂದು ವಿಷಯಕ್ಕೆೆ ಜಾತಿಯ ಬಣ್ಣ ಬಳಿಯುವುದು ಬೇಡ.)
ಈ ವಿಷಯದ ಬಗ್ಗೆೆ ಚರ್ಚೆ ಮಾಡೋಣ. ಅದು ಬಿಟ್ಟು ಕೋರ್ಟ್, ಠಾಣೆ ಅಂದರೂ ನಾನು ತಯಾರು. ನನ್ನ ಅಂಕಣವನ್ನು ಯಥಾವತ್ತು ಸಂಪಾದಕ ವಿಶ್ವೇಶ್ವರ ಭಟ್ ಅವರು ಪ್ರಕಟಿಸುವ ಧೈರ್ಯ ತೋರಿದರೆ, ಅವರೂ ತಯಾರಿದ್ದರೆ ಎಂದು ಭಾವಿಸುತ್ತೇನೆ.

ನಾಲ್ಕು ಜನ ಸ್ವಪ್ರತಿಷ್ಠೆೆಯ ಬ್ರಾಾಹ್ಮಣರು ಸೇರಿದರೆ ಸಾಕು, ಬರಿಯ ಬ್ರಾಾಹ್ಮಣರ ಹೆಗ್ಗಳಿಕೆ, ನಾವೇ ಶ್ರೇಷ್ಠರು, ಜಗತ್ತಿಿನಲ್ಲಿ ನಮಗಿಂತ ಬೇರಾರೂ ಶ್ರೇಷ್ಠರಿಲ್ಲ ಎಂಬ ಅಹಮಿಕೆ, ನಾವೇ ಜಗತ್ತಿಿನ ಜ್ಞಾನದ ಸೃಷ್ಟಿಿಕರ್ತರು, ನಾವು ಜಗತ್ತಿಿಗೆ ಎಲ್ಲವನ್ನೂ ನೀಡಿದವರು ಎಂಬ ಒಣಜಂಭದಲ್ಲೇ ತುಂಬಿ ತುಳುಕುತ್ತಿಿರುತ್ತಾಾರೆ. ಇದನ್ನು ನನ್ನ ಹಾಗೆ ಉಳಿದವರೂ ಗಮನಿಸಿರಬಹುದು. ಅವರಾರೂ ತಮ್ಮ ಮೂಲವೇನು, ತಾವು ಎಲ್ಲಿಂದ ಬಂದವರು, ಶಾಸ್ತ್ರ ತಮ್ಮ ಹುಟ್ಟಿಿನ ಬಗೆಗೆ ಏನು ಹೇಳುತ್ತದೆ ಎಂಬ ಬಗ್ಗೆೆ ತಿಳಿದಿರುವುದಿಲ್ಲ ಅಥವಾ ಗೊತ್ತಿಿದ್ದೂ ಗೊತ್ತಿಿಲ್ಲದವರಂತೆ ಜಾಣತನ ತೋರ್ಪಡಿಸುತ್ತಾಾರೆ. ಬ್ರಾಾಹ್ಮಣರು ಸಮಾಜದಲ್ಲಿ ನಾವೇ ಶ್ರೇಷ್ಠರು ಎಂದು ನಂಬಿಸಿ, ಹಾಗೆ ಕಥೆಗಳನ್ನು ಕಟ್ಟಿಿ ಜನರ ತಲೆಯೊಳಗೆ ತುಂಬುವ ಕೆಲಸವನ್ನು ಶತಶತಮಾನಗಳಿಂದ ಮಾಡುತ್ತಲೇ ಬಂದಿದ್ದಾರೆ. ಬ್ರಾಾಹ್ಮಣರ ಸುದ್ದಿಗೆ ಹೋಗಬಾರದು, ಅವರು ಜ್ಞಾನಿಗಳು, ಅವರ ಕಾಕದೃಷ್ಟಿಿಗೆ ಒಳಗಾದರೆ ಒಳ್ಳೆೆಯದಾಗುವುದಿಲ್ಲ, ಅವರ ಶಾಪ ತಟ್ಟಿಿದರೆ ಒಳ್ಳೆೆಯದಾಗುವುದಿಲ್ಲ ಎಂಬ ಭಾವನೆಗಳನ್ನು ಜನರಲ್ಲಿ ತೇಲಿ ಬಿಡಲಾಗಿದೆ. ಇದರ ಪರಿಣಾಮ, ಬ್ರಾಾಹ್ಮಣರು ಎಲ್ಲೆಡೆ ಪಾರಮ್ಯ ಮೆರೆಯುತ್ತಿಿದ್ದಾರೆ.

ವೇದಗಳ ಕಾಲದಲ್ಲಿ ಯಾವುದೇ ಜಾತಿ ಇರಲಿಲ್ಲ, ಇದ್ದುದು ಒಂದೇ ಧರ್ಮ, ಅದು ಮಾನವಧರ್ಮ, ಹಿಂದೂ ಧರ್ಮ. ನಮ್ಮ ಧರ್ಮಗ್ರಂಥಗಳಲ್ಲಿ ಎಲ್ಲ ಕಡೆ ಮನುಷ್ಯನನ್ನು ಕುರಿತು ಹೇಳಲಾಗಿದೆಯೇ ಹೊರತು ಯಾವುದೇ ಜಾತಿಯ ಉಲ್ಲೇಖವಿಲ್ಲ. ಶ್ರೀ ಕೃಷ್ಣನೂ ಭಗವದ್ಗೀತೆಯಲ್ಲಿ ‘ಜಾತಿಗಳನ್ನು ಮಾಡಿದವನು ನಾನೇ, ಮನುಷ್ಯರ ಗುಣಾವಗುಣಗಳ ಆಧಾರದಲ್ಲಿ’ ಎಂದಿದ್ದಾನೆ. ಆತ ಹೇಳಿದ್ದು ಈ ನಾಲ್ಕು ಗುಣಗಳೂ ಪ್ರತಿಯೊಬ್ಬ ಮಾನವನಲ್ಲೂ ಇರಬೇಕು ಎಂಬರ್ಥದಲ್ಲಿಯೇ ಹೊರತು ನಾಲ್ಕು ಬೇರೆ ಜಾತಿಗಳಲ್ಲ.

‘ಬ್ರಾಾಹ್ಮಣ’ ಎಂದರೆ ಶ್ರೇಷ್ಠ. ಆದರೆ, ಬ್ರಾಾಹ್ಮಣ ಎಂಬ ಹೆಸರಿನ ಜಾತಿಯಲ್ಲಿ ಹುಟ್ಟುವವರೆಲ್ಲಾ ಶ್ರೇಷ್ಠರಲ್ಲ. ಅಸಲು ‘ಬ್ರಾಾಹ್ಮಣ’ ಎಂದರೆ ಒಂದು ಜಾತಿಯಲ್ಲ. ಅದೊಂದು ಗುಣವಾಚಕ ಪದ. ವೇದ, ಉಪನಿಷತ್ತಗಳಲ್ಲಿ ಇಲ್ಲದ ಜಾತಿಗಳನ್ನು ತಂದಿದ್ದು ಯಾರೋ ತಂದುಬಿಟ್ಟರು. ಬಹುಶಃ ವೇದ, ಉಪನಿಷತ್ತುಗಳ ನಂತರ ಮನುವಿನ ಕಾಲದಲ್ಲಿ ಈ ಜಾತಿಯ ಭೂತ ಬೆಳೆದಿರುವ ಕುರುಹುಗಳು ಸಿಗುತ್ತವೆ. ನಮ್ಮ ಜಾತಿಯೇ ಶ್ರೇಷ್ಠ ಎಂದು ಬಡಿದಾಡಿಕೊಳ್ಳುವ, ನಮಗಿಂತ ಉತ್ತಮರಿಲ್ಲ ಎನ್ನುವವರ ಭ್ರಾಾಂತಿ ಕಳಚಲು ವಜ್ರ ಸೂಚಿಕಾ ಉಪನಿಷತ್ ನ್ನೊೊಮ್ಮೆೆ ಓದಬೇಕು. ನಿಮ್ಮ ಜಾತಿ ಯಾವುದು? ‘ವಜ್ರಸೂಚಿಕಾ ಉಪನಿಷದ್’ ಪ್ರಕಾರ, ‘ಆತ್ಮ’ದಿಂದ ಜಾತಿ ನಿರ್ಧಾರವಾಗುವುದಾದರೆ ಆತ್ಮವು ಸಾವಿರಾರು ಜನ್ಮಗಳನ್ನು ಪಡೆದು ಹಲವು ಪ್ರಾಾಣಿಗಳ ದೇಹವೂ ಸೇರಿದಂತೆ ಮನುಷ್ಯ ದೇಹವನ್ನೂ ಹೊಂದುತ್ತದೆ. ಪ್ರಾಾಣಿ, ಮನುಷ್ಯ, ಹೀಗೆ ಪ್ರತಿ ಬಾರಿ ಬೇರೆ ಬೇರೆ ದೇಹ, ಬೇರೆ ಬೇರೆ ಜಾತಿಗಳಲ್ಲಿ ಜನಿಸುವ ಆತ್ಮವು ಹೇಗೆ ಜಾತಿ ಸೂಚಕವಾಗುತ್ತದೆ? ದೇಹವೇ ಜಾತಿ ಸೂಚಕವಾಗುವುದಾದರೆ, ಈ ಭೂಮಿಯ ಮೇಲಿನ ಎಲ್ಲ ಜಾತಿ, ಧರ್ಮದ ಮನುಷ್ಯರೂ ಪಂಚಭೂತಗಳಿಂದ ಆದವರು ಮತ್ತು ಎಲ್ಲ ಗಂಡು ಮತ್ತು ಹೆಣ್ಣಿಿನ ದೇಹಗಳೂ ಸಮಾನ ರೀತಿಯ ಅಂಗಾಂಗ, ದೈಹಿಕ ರಚನೆ ಹೊಂದಿರಬೇಕು. ಪ್ರಕೃತಿಯಲ್ಲಿ ಜಾತಿಗೊಂದು ತೆರನಾದ ದೇಹ ರಚನೆ ಇಲ್ಲ. ಹಾಗಾಗಿ ದೇಹದಿಂದಲೂ ಜಾತಿ ತೀರ್ಮಾನವಾಗುವುದಿಲ್ಲ. ನನ್ನ ತಂದೆಯ ಜಾತಿ ನನ್ನದು ಎನ್ನುವುದಾದರೆ ತಂದೆ ಸತ್ತ ಕೂಡಲೇ ನಮ್ಮ ಜಾತಿಯೂ ಸಾಯಬೇಕಲ್ಲವೇ?

ಪುರಾಣ, ಇತಿಹಾಸವನ್ನು ಗಮನಿಸಿದರೆ ಸಮಷ್ಟಿಿಯ ಗೆಲುವಿಗೆ, ಸಮಾಜದ ಶ್ರೇಯಕ್ಕೆೆ, ಹಿತಕ್ಕೆೆ ಶ್ರಮಿಸಿದವರನ್ನು ಬ್ರಾಾಹ್ಮಣ ಪಟ್ಟಕೊಡಲಾಗುತ್ತಿಿತ್ತು. ಸಾಧನೆಯೇ ಜಾತಿಯ ಮಾನದಂಡವಾಗಿತ್ತು ಹೊರತು ಹುಟ್ಟು ಜಾತಿಯ ನಿರ್ಧಾರವಾಗುವುದಿಲ್ಲ ಎಂಬುದು ಧರ್ಮಗ್ರಂಥಗಳ ಮತ್ತು ಹಿಂದೂ ಧರ್ಮದ ಆಶಯವಾಗಿತ್ತು. ವೇದಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆ ಸೇರಿದಂತೆ ಎಲ್ಲಾ ಧರ್ಮ ಗ್ರಂಥಗಳು ಒಪ್ಪಿಿಕೊಳ್ಳುವುದು ಮನುಷ್ಯನ ಗುಣವೇ ಅತ್ಯಂತ ಪ್ರಮುಖವಾದುದು. ಉತ್ತಮ ಗುಣ ಉಳ್ಳವನೇ ನಿಜವಾದ ಬ್ರಾಾಹ್ಮಣ, ಅಧಮ ಗುಣವುಳ್ಳವನು ಶೂದ್ರ. ಅಂದರೆ ಬ್ರಾಾಹ್ಮಣ ಮತ್ತು ಶೂದ್ರ ಜಾತಿಸೂಚಕ ಅಲ್ಲ, ಅವು ಕರ್ಮ ಸೂಚಕ ಎಂದು ಅನಾದಿಕಾಲದಿಂದಲೂ ನಂಬಲಾಗಿದೆ.

ಭಾರತವು ಹೆಸರಿಗೆ ಜಾತ್ಯತೀತ ರಾಷ್ಟ್ರ. ಆದರೂ ಇಲ್ಲಿ ಜಾತಿ ಪದ್ಧತಿಯು ಅತ್ಯಂತ ಕ್ರೂರ ಹಿನ್ನೆೆಲೆ ಹೊಂದಿದೆ. ವೇದಕಾಲದ ಜಾತಿಯ ಕಲ್ಪನೆಯೂ ಇಲ್ಲದ ಕಾಲದಿಂದ ನೂರಾರು ಜಾತಿಗಳ ಇಂದಿನ ಭಾರತವನ್ನು ಗಮನಿಸಿದರೆ, ಬಹುಶಃ ನಮ್ಮ ಜಾತಿ ಪದ್ಧತಿಯು ವೇದಕಾಲಗಳ ನಂತರದ ಕಾಲಘಟ್ಟದಲ್ಲಿ ಮಾನವನ ಕುಹಕ ಬುದ್ಧಿಿಯಿಂದ ನಿರ್ಮಾಣವಾದವು. ರಾಜಕಾರಣಿಗಳಂತೂ ಸಮಾಜವನ್ನು ಜಾತಿಗಳ ಹೆಸರಿನಲ್ಲಿ ಒಡೆದು ಪ್ರತಿ ಜಾತಿಯಲ್ಲೂ ನೂರಾರು ಒಳಜಾತಿಗಳು, ನಿರ್ಮಾಣವಾಗಿ ಜಾತಿ ಜಾತಿಗಳ ನಡುವೆ ಕಂದಕಗಳನ್ನು ನಿರ್ಮಿಸಿದ್ದಾರೆ. ಕೇವಲ ನಾಲ್ಕೈದು ಪಂಗಡಗಳಿದ್ದ ಬ್ರಾಾಹ್ಮಣರು ಈಗ ನೂರಾರು ಹೆಚ್ಚು ಜಾತಿಗಳಾಗಿದ್ದಾರೆ. ಲಿಂಗಾಯತರಲ್ಲಿ ನೂರಾರು ಜಾತಿಗಳಿವೆ, ಗೌಡರಲ್ಲಿ 25ಕ್ಕಿಿಂತ ಹೆಚ್ಚು ಜಾತಿಗಳಿವೆ. ನಾವು ಬೇರೆ ನೀವು ಬೇರೆ ಎಂದು ಹೊಡೆದಾಡಿಕೊಳ್ಳಲು ಹೇರಳ ಅವಕಾಶಗಳನ್ನು ಮಾಡಿಕೊಟ್ಟು ರಾಜಕೀಯದವರು ತಮ್ಮ ವೋಟ್ ಬ್ಯಾಾಂಕ್ ಭದ್ರಮಾಡಿಕೊಳ್ಳಲು ನಡೆಸಿದ ಷಡ್ಯಂತ್ರ ನಮ್ಮ ಹಿಂದೂ ಸಮಾಜಕ್ಕೆೆ ಶಾಪವಾಗಿ ಪರಿಣಮಿಸಿದೆ.

ಯಾವುದೇ ಶಾಸ್ತ್ರದಲ್ಲೂ ಬಿಸಿಯಾದ ಅಡುಗೆ ಊಟ ಮಾಡಬೇಕೆಂದು ಹೇಳಿದ್ದಾರೆಯೇ ಹೊರತು ಇತರ ಜಾತಿಯವರು ಮಾಡಿದ ಅಡುಗೆಯನ್ನು ತಿನ್ನ ಬಾರದೆಂದು ಬರೆದಿಲ್ಲ.
ಹಾಗಾದರೆ ಈ ಬ್ರಾಾಹ್ಮಣರು ಯಾರು, ಎಲ್ಲಿ ಅವರ ಮೂಲ?
ಬ್ರಾಾಹ್ಮಣರ ಅತ್ಯಂತ ಪವಿತ್ರ, ಜಗತ್ತಿಿನ ಶ್ರೇಷ್ಠ ‘ಗಾಯತ್ರಿಿ ಮಂತ್ರ’ದ ನಿರ್ಮಾತೃ ಕೌಶಿಕ ಮಹಾರಾಜ. ಆತ ಕ್ಷತ್ರಿಿಯ. ಕ್ಷತ್ರಿಿಯರು ಬರೆದ ಮಂತ್ರ ಬ್ರಾಾಹ್ಮಣರ ಮಂತ್ರವಾಗಿದ್ದು ಹೇಗೆ? ಅವನಿಗೇಕೆ ‘ಮಹಾಬ್ರಾಾಹ್ಮಣ’ನೆಂಬ ಪಟ್ಟ ಕಟ್ಟಿಿದರು? ಬ್ರಾಾಹ್ಮಣರಿಗಿಂತ ಕೀಳು ಜಾತಿಯವನು ಸೃಷ್ಟಿಿಸಿದ ‘ಗಾಯತ್ರಿಿ ಮಂತ್ರ’ ಬೇರಾವ ಜಾತಿಯವರೂ ಉಚ್ಚರಿಸಬಾರದೆಂದು ಕಟ್ಟಳೆಗಳನ್ನು ಮಾಡಿ ಅಬ್ರಾಾಹ್ಮಣ ಕೇಳಿದರೆ ಕಿವಿಗೆ ಕಾದ ಸೀಸ ಸುರಿಯುವ ಶಿಕ್ಷೆ ಏಕೆ? ಈಗ ಕ್ಷತ್ರಿಿಯರೇನಾದರೂ ‘ಗಾಯತ್ರಿಿ ಮಂತ್ರ’ ನಮ್ಮ ಮೂಲ ಪುರುಷನ ಕೊಡುಗೆ, ಅದರ ಹಕ್ಕು ಸ್ವಾಾಮ್ಯ ಪೂರ್ಣವಾಗಿ ನಮ್ಮದೇ, ಕ್ಷತ್ರಿಿಯರಲ್ಲದವರು ಅಥವಾ ಬ್ರಾಾಹ್ಮಣರು ಅದನ್ನು ಬಳಸಬಾರದು ಎಂದು ಕೋರ್ಟಿನಲ್ಲಿ ಹಕ್ಕು ಸ್ವಾಾಮ್ಯದ ಕೇಸ್ ಹಾಕಿ, ಗಾಯತ್ರಿಿ ಮಂತ್ರವನ್ನು ಬ್ರಾಾಹ್ಮಣರು ಬಳಸದಂತೆ ಮಾಡಿದರೆ?

ಮಂತ್ರಗಳ ಮಹತ್ವವೇನು ಎಂಬುದು ಸರ್ವವೇದ್ಯ. ಮಂತ್ರ ಉಚ್ಚಾಾರ ಮಾಡುವುದರಿಂದ ಮಿದುಳಿನ ಕ್ರಿಿಯಾತ್ಮಕ ಶಕ್ತಿಿ ವರ್ಧಿಸಿ ಜ್ಞಾನ ಉದ್ದೀಪನವಾಗುವುದೆಂದು ಜಗತ್ತಿಿನ ಶ್ರೇಷ್ಠ ವಿಜ್ಞಾನಿಗಳು ಪ್ರಮಾಣೀಕರಿಸಿದ್ದಾರೆ. ಮಂತ್ರಗಳ ಶ್ರೇಷ್ಠತೆ ಎಲ್ಲರಿಗೂ ಗೊತ್ತಿಿರುವಂಥದ್ದೇ. ಜಗತ್ತಿಿನ ಎಲ್ಲ ಜೀವಿಗಳು ಸುಖವಾಗಿರಲಿ ಎನ್ನುವ ಹಿಂದೂ ಧರ್ಮದ ಶ್ರೇಷ್ಠರೆಂದು ಬೆನ್ನುತಟ್ಟಿಿಕೊಳ್ಳುವ ಬ್ರಾಾಹ್ಮಣರು ಮಾತ್ರ ಮಂತ್ರ ಹೇಳಲು ಅರ್ಹರು, ಮತ್ತಾಾರೂ ಮಂತ್ರ ಹೇಳಬಾರದು ಎಂಬ ಫರ್ಮಾನು ಹೊರಡಿಸಿದ್ದು, ಬೇರೆ ಜಾತಿಯ ಮಕ್ಕಳು ವಿದ್ಯಾಾವಂತರು, ಬುದ್ಧಿಿವಂತರು ಆಗಬಾರದೆಂಬ ಕಾರಣಕ್ಕಾಾ? ಬೇರೆಯವರು ಉದ್ಧಾಾರವಾಗಬಾರದು ಎನ್ನುದು ಬ್ರಾಾಹ್ಮಣರ ಹುನ್ನಾಾರವೇ?

ಕುಂಬಳಕಾಯಿ ಈ ಜಗತ್ತಿಿನ ಅತಿ ಉತ್ತಮ ತರಕಾರಿ. ಅದನ್ನು ಬಳಸುವುದರಿಂದ ಮಿದುಳಿನ ಕೋಶಗಳು ಬೆಳೆದು ಬುದ್ಧಿಿ ಹೆಚ್ಚುತ್ತದೆನ್ನುವ ಅಂಶ ಜಾಹೀರಾಗಿದೆ. ಅದನ್ನು ಬ್ರಾಾಹ್ಮಣರು ಮಾತ್ರ ತಿನ್ನಬೇಕು, ಬೇರೆ ಯಾರೂ ಅದನ್ನು ತಿನ್ನಬಾರದು, ತಿಂದರೆ ಕೆಟ್ಟದಾಗುತ್ತದೆ ಎಂಬ ಅಭಿಪ್ರಾಾಯವನ್ನು ಸಮಾಜದಲ್ಲಿ ಬೆಳೆಸಿದವರು ಬ್ರಾಾಹ್ಮಣರೇ. ಅಂದರೆ ಬ್ರಾಾಹ್ಮಣರ ಮಕ್ಕಳು ಮಾತ್ರ ಬುದ್ಧಿಿವಂತರಾಗಬೇಕು, ಬೇರೆಯವರ ಮಕ್ಕಳು ದಡ್ಡರಾಗಿಯೇ ಸಾಯಲಿ ಎಂಬ ಹುನ್ನಾಾರವೇ?

ತಮಾಷೆಯ ವಿಷಯವೇನೆಂದರೆ ಈಗ ಇಡೀ ಜಗತ್ತು ಗೌರವಿಸುವ ಯಾವುದೇ ದೇವರುಗಳು ಮತ್ತು ಈಗ ನಾವೇ ಶ್ರೇಷ್ಠರೆಂದು ಹೇಳಿಕೊಳ್ಳುವ ಬ್ರಾಾಹ್ಮಣರು ಪೂಜಿಸುವ ಯಾವುದೇ ದೇವರು ಬ್ರಾಾಹ್ಮಣರಲ್ಲ, ಅವರೆಲ್ಲರೂ ಶೂದ್ರರೇ. ಜಗತ್ತಿಿನ ಪ್ರಥಮ ಪೂಜೆಯ ಹಕ್ಕುದಾರ ಗಣೇಶ ಬ್ರಾಾಹ್ಮಣನಲ್ಲ. ಶ್ರೀರಾಮ ಕ್ಷತ್ರಿಿಯ, ಶಿವ ಶೂದ್ರ, ಆತ ಸ್ಮಶಾನದಲ್ಲಿ ಜೀವನ ಸವೆಸುವವ. ಶ್ರೀಕೃಷ್ಣ ಗೊಲ್ಲರವನು. ಕಂಸನೆಂಬ ರಾಕ್ಷಸನ ತಂಗಿಯ ಮಗ ಅಂದರೆ ರಕ್ಕಸರ ಕುಲದವನು. ಹಾಗಾದರೆ ಶೂದ್ರ ದೇವರುಗಳನ್ನು ಪೂಜಿಸುವ ಬ್ರಾಾಹ್ಮಣರಿಗೆ ತಮ್ಮ ಜಾತಿಯ ಯಾರೂ ದೇವರುಗಳು ಸಿಗಲಿಲ್ಲವೇ? ಬ್ರಾಾಹ್ಮಣರಿಗೆ ಬ್ರಾಾಹ್ಮಣರೇ ಆದ ದೇವರಿಲ್ಲ. ಬ್ರಾಾಹ್ಮಣರು ಪೂಜಿಸುವ ಎಲ್ಲಾ ದೇವರುಗಳೂ ಕೆಳಜಾತಿಯವರೇ, ಶೂದ್ರರೇ. ಇಷ್ಟೆೆಲ್ಲಾ ಬುದ್ಧಿಿ ಇರುವ ಬ್ರಾಾಹ್ಮಣರಿಗೇಕೆ ಅವರದೇ ಜಾತಿಯ ದೇವರು ಸಿಗಲಿಲ್ಲ ಎಂಬುದು ಅತಿ ದೊಡ್ಡ ಪ್ರಶ್ನೆೆ. ಪಾರ್ವತಿ, ಗಣಪತಿ, ಷಣ್ಮುಖ ಈಶ್ವರನ ಜಾತಿಯವರೇ! ದುರ್ಗೆ, ಕಾಳಿ, ವೈಷ್ಣೋೋದೇವಿ, ಲಕ್ಷ್ಮಿಿ ಯಾರೂ ಬ್ರಾಾಹ್ಮಣರಲ್ಲ.

ಇನ್ನು ಬ್ರಹ್ಮದೇವ ಬ್ರಾಾಹ್ಮಣ. ಆದರೆ, ಅವನನ್ನು ಯಾರೂ ಪೂಜಿಸುತ್ತಲೇ ಇಲ್ಲ. ಇಡೀ ಜಗತ್ತಿಿನಲ್ಲಿ ಬ್ರಹ್ಮನಿಗೆ ಕೈಬೆರಳೆಣಿಕೆಯಷ್ಟು ದೇವಸ್ಥಾಾನಗಳಿರಬಹುದು. ಸರಸ್ವತಿ ಬ್ರಹ್ಮನ ಹೆಂಡತಿಯಾದ್ದರಿಂದ ಬ್ರಾಾಹ್ಮಣಳು. ಜಗತ್ತಿಿನ ಅತ್ಯಂತ ‘ಶ್ರೇಷ್ಠ ಬ್ರಾಾಹ್ಮಣ’ ಎಂಬ ಅಗ್ಗಳಿಕೆಗೆ ಪಾತ್ರನಾದ ರಾವಣ ರಾಕ್ಷಸ. ಆತನನ್ನು ಯಾರೂ ಪೂಜಿಸುವುದಿಲ್ಲ.
ಈಗಾಗಲೇ ಹೇಳಿದಂತೆ ‘ಗಾಯತ್ರಿಿ ಮಂತ್ರ’ದ ಸೃಷ್ಟಿಿಕರ್ತ ಕೌಶಿಕ ಮಹಾರಾಜನು ಕ್ಷತ್ರಿಿಯ ರಾಜ. ಆತ ವಸಿಷ್ಠ ಋಷಿಯಿಂದ ಸೋತ ಅವಮಾನದ ಸೇಡು ತೀರಿಸಿಕೊಳ್ಳಲು ಹಠ ಮಾಡಿ ಶ್ರೇಷ್ಠ ಬ್ರಾಾಹ್ಮಣನೆನಿಸಿಕೊಂಡು ವಿಶ್ವಾಾಮಿತ್ರನೆಂದು ಹೆಸರು ಪಡೆದವನು.
ಧರ್ಮಗ್ರಂಥಗಳು ನಿಯಮಿಸಿದ ಪ್ರಕಾರ, ಉತ್ತಮ ಗುಣವುಳ್ಳವರೆಲ್ಲಾ ಪರಿಶುದ್ಧ ಬ್ರಾಾಹ್ಮಣರೇ. ನನ್ನ ಪ್ರಕಾರ ಅಬ್ದುಲ್ ಕಲಾಂ ಶ್ರೇಷ್ಠ ಬ್ರಾಾಹ್ಮಣ. ತನ್ನ ಇಡೀ ಜೀವನದಲ್ಲಿ ಅಪ್ಪಿಿ ತಪ್ಪಿಿಯೂ ಯಾರ ಮನ ನೋಯಿಸಿದವರಲ್ಲ. ಮೊಸರನ್ನ ಮತ್ತು ಉಪ್ಪಿಿನಕಾಯಿ ಅವರ ಅತಿ ಪ್ರೀತಿಯ ಆಹಾರ. ಭಾರತದ ಸಂವಿಧಾನ ರಚನೆಯಲ್ಲಿ ಪ್ರಾಾಮುಖ್ಯ ಪಾತ್ರವಹಿಸಿ ದೇಶದ ದಲಿತರೆಲ್ಲರ ಶ್ರೇಯ ಬಯಸಿ ಅವರ ಉದ್ಧಾಾರಕ್ಕೇ ತನ್ನ ಜೀವ ಮುಡಿಪಿಟ್ಟ ಬಾಬಾ ಸಾಹೇಬ್ ಅಂಬೇಡ್ಕರ್ ಶ್ರೇಷ್ಠ ಬ್ರಾಾಹ್ಮಣ. ರಾಮಾಯಣಕ್ಕೆೆ ಹೊಸ ರೂಪ ಕೊಟ್ಟು, ಮಂತ್ರ ಮಾಂಗಲ್ಯವೆಂಬ ಪರಿಹಾರ ಸೂಚಿಸಿ ಜನರನ್ನು ಮೌಢ್ಯದಿಂದ ಹೊರತರಲು ಯೋಚಿಸಿ ಜನರ ಮನಸ್ಸಿಿನಲ್ಲಿ ಹೊಸ ಬೆಳಕು ತಂಡ ಕುವೆಂಪು, ಜಗತ್ತಿಿಗೆ ಸತ್ಯದ ಬೆಲೆತೋರಿಸಿದ ಸತ್ಯ ಹರಿಶ್ಚಂದ್ರ, ಕುಲಕುಲವೆಂದು ಹೊಡೆದಾಡದಿರಿ ಎಂದ ಕನಕದಾಸ, ಭಕ್ತಿಿ ಮಾರ್ಗದ ಉತ್ತುಂಗಕ್ಕೇರಿದ ಪುರಂದರದಾಸ, ವಿವೇಕಾನಂದ, ವೀರ ಸಾವರ್ಕರ್, ಡೇವಿಡ್ ಫ್ರಾಾಲೇ, ಸುಭಾಷ್‌ಚಂದ್ರ ಬೋಸ್, ಆ್ಯನಿಬೆಸೆಂಟ್, ನೆಲ್ಸನ್ ಮಂಡೇಲಾ, ರಾಮಕೃಷ್ಣ ಪರಮಹಂಸ , ಶಿರಡಿ ಸಾಯಿಬಾಬಾ, ಪುಟ್ಟಪರ್ತಿಯ ಸಾಯಿಬಾಬಾ ಮುಂತಾದವರೆಲ್ಲ ಜಗತ್ತನ ಶ್ರೇಯ ಬಯಸಿ ದುಡಿದವರು. ಅವರು ಹುಟ್ಟುವಾಗ ಯಾವುದೇ ಜಾತಿಯಲ್ಲಿ ಹುಟ್ಟಿಿದರೂ ಅವರೆಲ್ಲ ಶ್ರೇಷ್ಠ ಶ್ರೇಣಿಯ ಬ್ರಾಾಹ್ಮಣರೇ.

ಶಂಕರಾಚಾರ್ಯರು ಸ್ನಾಾನಘಟ್ಟದಲ್ಲಿ ಅಡ್ಡಬಂದ ಶೂದ್ರನನ್ನು ಶಿವನೆಂದು ಅಪ್ಪಿಿಕೊಂಡರು. ಶಂಕರಾಚಾರ್ಯರು ಶೂದ್ರರ ಮನೆಯಲ್ಲಿ ಭಿಕ್ಷೆ ಪಡೆದಿದ್ದು ಇತಿಹಾಸದಲ್ಲಿದೆ. ಅವರ ಅತ್ಯಂತ ಶ್ರೇಷ್ಠವಾದ ಸುವರ್ಣ ಸ್ತೋೋತ್ರ ಒಬ್ಬ ಭಿಕ್ಷುಕಿಗೆ ಉಪದೇಶಿಸಿದ್ದು. ಆದರೆ, ಅವರ ಶಿಷ್ಯರೆನಿಸಿಕೊಂಡು ಬೀಗುತ್ತಿಿರುವವರು ಇತರ ಬ್ರಾಾಹ್ಮಣರನ್ನೇ ಮುಟ್ಟುವುದಿರಲಿ ಹತ್ತಿಿರವೂ ಸೇರಿಸಿಕೊಳ್ಳುವುದಿಲ್ಲ. ಆದರೆ, ವಿಶಿಷ್ಟಾಾದ್ವೈತ ಪಂಥದ ಸ್ಥಾಾಪಕ ಶ್ರೀರಾಮಾನುಜಾಚಾರ್ಯರು, ತಮ್ಮ ಗುರುಗಳು ಏಕಾಂತದಲ್ಲಿ ಆಶೀರ್ವದಿಸಿದ ರಹಸ್ಯವಾದ ಪವಿತ್ರ ಮಂತ್ರವನ್ನು ತಾವು ನರಕಕ್ಕೆೆ ಹೋಗುವುದಕ್ಕೂ ತಯಾರಾಗಿ ಶೂದ್ರರಾದಿಯಾಗಿ ಎಲ್ಲರಿಗೆ ಹೇಳಿಕೊಡಲಿಲ್ಲವೇ? ಇಪ್ಪತ್ತೆೆಂಟು ಗೌಡ ಜಾತಿಯವರನ್ನು ಆಳ್ವಾಾರರೆಂದು ಕರೆದು ತಮ್ಮ ಜಾತಿಗೆ ಸೇರಿಸಿಕೊಂಡಿದ್ದು ಇತಿಹಾಸದಲ್ಲಿ ದಾಖಲಾದ ಪ್ರಸಂಗ. ಮಧ್ವಾಾಚಾರ್ಯರು ಪೂಜೆ ಮಾಡಿದ್ದು, ಕುಣಿದು ನಲಿದು ಮಾತನಾಡಿ ಸ್ನೇಹ ಮಾಡಿದ್ದು ಗೊಲ್ಲನಾದ ಶ್ರೀಕೃಷ್ಣನನ್ನು. ಶಂಕರಾಚಾರ್ಯರು, ಶ್ರೀರಾಮಾನುಜಾಚಾರ್ಯರು, ಮಧ್ವಾಾಚಾರ್ಯರು ಆಚರಿಸದ ಕರ್ಮಠತನವನ್ನು ಅವರ ಶಿಷ್ಯರು ಮುಗಿಲೆತ್ತರಕ್ಕೇರಿಸಿ ಬ್ರಾಾಹ್ಮಣರನ್ನುಳಿದು ಇತರರು ಮನುಷ್ಯರೆಂದು ಒಪ್ಪಿಿಕೊಳ್ಳುವುದಿಲ್ಲ. ಇದೆಂಥ ವಿಪರ್ಯಾಸ ನೋಡಿ.

ನಮ್ಮದು ಇಂಥಾ ಗೋತ್ರ, ನಮ್ಮದೇ ಶ್ರೇಷ್ಠ ಗೋತ್ರ ಎಂದು ಇಂದಿನ ಬ್ರಾಾಹ್ಮಣರು ಬೀಗುವ ನಮ್ಮ ಸಪ್ತ ಋಷಿಗಳೆಲ್ಲಾ ಅಬ್ರಾಾಹ್ಮಣರೇ. ನಮ್ಮ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಿದ ಎಲ್ಲಾ ಋಷಿ ಮುನಿಗಳೂ ಶೂದ್ರರೇ, ಭಾರತೀಯ ಶ್ರೇಷ್ಠ ಗ್ರಂಥ ಶ್ರೀರಾಮಾಯಣ ಬರೆದ ವಾಲ್ಮೀಕಿ, ಪೂರ್ವಾಶ್ರಮದಲ್ಲಿ ದರೋಡೆಕೋರ. ಮಹಾಭಾರತ, ಭಗವದ್ಗೀತೆಯಂಥ ಅದ್ಭುತ ಜ್ಞಾನದ ನಿಧಿಯನ್ನು ಜಗತ್ತಿಿಗೆ ನೀಡಿದ ‘ವೇದವ್ಯಾಾಸ’ ಶೂದ್ರಜಾತಿಯಲ್ಲಿ ಜನಿಸಿದವನು. ಹಿಂದೆಲ್ಲಾ ನಮ್ಮ ಋಷಿಮುನಿಗಳು, ರಾಜ ಮಹಾರಾಜರು ಸುಂದರಳಾದ, ಚೆಂದವಾಗಿ ತೋರಿದ ಹುಡುಗಿಯರನ್ನು ಅವರ ಜಾತಿ ನೋಡದೇ ವಿವಾಹವಾಗುತ್ತಿಿದ್ದರು ಎಂದು ಇತಿಹಾಸ ಹೇಳುತ್ತದೆ. ಈಗಿನ ಬ್ರಾಾಹ್ಮಣರೆಂದು ಕೊಚ್ಚಿಿಕೊಳ್ಳುವವರೂ ಅವಕಾಶ ಸಿಕ್ಕಾಾಗಲೆಲ್ಲಾ ಯಾವುದೇ ಪಾಪಪ್ರಜ್ಞೆಯಿಲ್ಲದೇ ಗುಟ್ಟಾಾಗಿ ಅನುಭವಿಸಿ ಬರುತ್ತಾಾರೆ. ಬಹಳವೆಂದರೆ ಕೆಲಸ ಮುಗಿದ ಮೇಲೆ ಸ್ನಾಾನ ಮಾಡಿ ಜನಿವಾರ ಬದಲಿಸಿ ಪಾಪ ವಿಮುಕ್ತರಾದೆವೆಂದು ಭಾವಿಸುತ್ತಾಾರೆ!

ವೇದ, ಉಪನಿಷತ್, ಭಗವದ್ಗೀತೆ ಮುಂತಾದ ಹಿಂದೂ ಧರ್ಮಗ್ರಂಥಗಳನ್ನು ಅಭ್ಯಸಿಸಿದರೆ ಜ್ಞಾನ ಸ್ಪುರಿಸುತ್ತದೆ, ಕತ್ತಲೆ ಓಡಿ ದಿವ್ಯ ಪ್ರಕಾಶ ಪ್ರಾಾಪ್ತಿಿಯಾಗುತ್ತದೆ ಎಂದು ಬ್ರಾಾಹ್ಮಣರು ಪುಂಗುತ್ತಾಾರೆ. ಆದರೆ, ಬ್ರಾಾಹ್ಮಣರು ಈ ಜ್ಞಾನಗಳನ್ನು ಅಭ್ಯಸಿಸಿ ಇನ್ನಷ್ಟು ಮೂಢರಾಗಿದ್ದಾರಲ್ಲ, ಇವುಗಳನ್ನು ಅಬ್ರಾಾಹ್ಮಣರು ಅಭ್ಯಸಿಸಿದರೆ ಅವರೆಲ್ಲಿ ಜ್ಞಾನವಂತರಾಗುತ್ತಾಾರೋ ಎಂಬ ಕಿಚ್ಚಿಿನಿಂದ ಅವುಗಳನ್ನು ಇತರರಿಂದ ಗುಪ್ತವಾಗಿರಿಸಿ ಜ್ಞಾಾನದ ಬೆಳಕು ಇತರ ಜಾತಿಯವರಿಗೆ ಸಿಗದಂತೆ ಗೋಡೆ ನಿರ್ಮಿಸುತ್ತಾಾರೆ. ಈಗ ಹೇಳಿ, ಬ್ರಾಾಹ್ಮಣರಂಥ ಹಿಪೊಕ್ರೇಟ್‌ಸ್‌ ಬೇರೆ ಯಾರಾದರೂ ಇದ್ದಾರಾ ಎಂದು ಎಂಥವರಿಗಾದರೂ ಅನಿಸುವುದಿಲ್ಲವಾ?
ಜಗತ್ತಿಿನಲ್ಲಿ ಶೂದ್ರರಾಗಿ ಹುಟ್ಟಿಿದವರೂ ತಮ್ಮ ವೈಚಾರಿಕತೆ, ಸಮಷ್ಟಿಿ ಹಿತದ ದೃಷ್ಟಿಿಕೋನ, ಜಗತ್ತಿಿಗೆ ತೋರಿದ ಪ್ರೀತಿ, ಸಂಸ್ಕಾಾರ, ಮುಂತಾದವುಗಳಿಂದ ಮಹಾನ್ ಎಂದು ಖ್ಯಾಾತರಾದರು. ಅವರನ್ನು ಯಾರೂ ಇಂಥ ಜಾತಿಯವನೆಂದು ಬೆರಳು ತೋರಿಸುವುದಿಲ್ಲ. ಹಾಗಾಗಿ ನೀವು ಸಮಾಜಕ್ಕಾಾಗಿ ಏನನ್ನೇ ಮಾಡಲು ಬಯಸಿದರೂ ನಿಮ್ಮ ಒಳ್ಳೆೆಯತನವನ್ನು ಸಮಾಜ ನೋಡುತ್ತದೆಯೇ ಹೊರತು ನಿಮ್ಮ ಜಾತಿ ಗಣನೆಗೆ ಬರುವುದಿಲ್ಲ.
ಈಗ ಕೇಳುತ್ತೇನೆ.. ಪವಿತ್ರವಾದ ಪುರೋಹಿತ ವೃತ್ತಿಿಯನ್ನು ವ್ಯಾಾಪಾರಕ್ಕಿಿಳಿಸಿ ಅಪವಿತ್ರಗೊಳಿಸಿದರೆ ಅದನ್ನೂ ಪ್ರಶ್ನಿಿಸಬಾರದೇ? ಇದೂ ಒಂದು ದೊಡ್ಡ ಮಹಾ ಅಪರಾಧವೇ?
ಪ್ರಾಾಜ್ಞರೇ, ಮೌನ ಮುರಿದು ಚರ್ಚಿಸಿ, ಬ್ರಾಾಹ್ಮಣ್ಯವನ್ನು ಉಳಿಸಿ!