ಮೂರ್ತಿಪೂಜೆ
ಕರ್ನಾಟಕದಲ್ಲಿ ಯಾತ್ರೆಗಳ ಪರಂಪರೆ ಶುರುವಾಗಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಶುರುವಾಗಿರುವ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಮುಂದುವರಿದಿದ್ದರೆ, ಮತ್ತೊಂದು ಕಡೆ ಬಿಜೆಪಿಯ ಜನಸಂಕಲ್ಪ ಯಾತ್ರೆ ಶುರುವಾಗಿದೆ.
ಇನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆಗೆ ದಿನಗಣನೆ ಶುರುವಾಗಿದೆ. ಹೀಗೆ ಕರ್ನಾಟಕದ ನೆಲೆಯಲ್ಲಿ ಶುರುವಾಗಿರುವ ರಾಜಕೀಯ ಪಕ್ಷಗಳ ಯಾತ್ರೆ ಮುಂದಿನ ವಿಧಾನಸಭಾ
ಚುನಾವಣೆಗಳವರೆಗೆ ನಡೆಯುತ್ತಲೇ ಇರುತ್ತದೆ.
ಒಂದು ಮೂಲದ ಪ್ರಕಾರ, ಕರ್ನಾಟಕದಲ್ಲಿ ತಮ್ಮ ಪಕ್ಷದ ಫೌಂಡೇಷನ್ನಿಗೆ ಭೂಮಿ ಅಗೆಯುತ್ತಿರುವ ದೆಹಲಿಯ ಮುಖ್ಯಮಂತ್ರಿ, ಅಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರಿಗೂ ಸಣ್ಣಯಾತ್ರೆ ಮಾಡುವ ಆಲೋಚನೆ ಇದೆಯಂತೆ. ಅರ್ಥಾತ್, ಕರ್ನಾಟಕದ ನೆಲ ಮುಂದಿನ ಚುನಾವಣೆಯಲ್ಲಿ ಹಿಂದೆಂದೂ ಕಾಣದ ಜಟಾಪಟಿಯನ್ನು ನೋಡಲಿದೆ.
ಎಲ್ಲಕ್ಕಿಂತ ಮುಖ್ಯವಾಗಿ ದಿಲ್ಲಿಯ ನಾಯಕರಷ್ಟೇ ಅಲ್ಲದೆ ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಬಿಹಾರ, ಉತ್ತರ ಪ್ರದೇಶ, ಕೇರಳ ಸೇರಿದಂತೆ ವಿವಿಧ ರಾಜ್ಯಗಳ ನಾಯಕರು ಕರ್ನಾಟಕದ ಚುನಾವಣೆಯಲ್ಲಿ ತಮ್ಮ ಶಕ್ತಿಯನ್ನೂ ಬಂಡವಾಳ ವಾಗಿ ಹೂಡುತ್ತಾರೆ. ಹೀಗಾಗಿ ಈಗಿನ ಪರಿಸ್ಥಿತಿ ನೋಡಿದರೆ ವಿವಿಧ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಸೇರಿ ಮುಂದಿನ ಚುನಾವಣೆಗಾಗಿ ಮಾಡಲಿರುವ ವೆಚ್ಚ ಸುಮಾರು 15 ಸಾವಿರ ಕೋಟಿ ರುಪಾಯಿ. ಈ ಮೊತ್ತ ಒಂದೇ ಬಾರಿ ಹೂಡಿಕೆಯಾ ಗುವುದಿಲ್ಲ.
2018ರ ವಿಧಾನಸಭಾ ಚುನಾವಣೆ ನಡೆದು ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೇ ಈ ಹೂಡಿಕೆ ಶುರುವಾಗಿದೆ. ಮುಂದಿನ ಚುನಾವಣೆಯಲ್ಲಿ ಮತ ಬೇಕೆಂದರೆ ಈಗಿನಿಂದಲೇ ಬಂಡವಾಳ ಹೂಡಬೇಕು ಎಂಬುದು ಅಘೋಷಿತ ನಿಯಮ. ಅಂದರೆ ಮುಂದಿನ ವಿಧಾನಸಭಾ ಚುನಾವಣೆ ಎಂಬುದು ಬಂಡವಾಳ ಹೂಡಿಕೆದಾರರ ಸಮಾವೇಶ ಎಂದರೆ ಅದು ಅಸಹಜವಲ್ಲ.
ಮುಂದಿನ ವಿಧಾನಸಭಾ ಚುನಾವಣೆಗಾಗಿ ಈ ಪ್ರಮಾಣದ ಹಣ ಬಂಡವಾಳವಾಗಿ ಹೂಡಿಕೆಯಾಗುತ್ತದೆ ಅಂದರೆ ಕೆಲವರಿಗೆ ಉತ್ಪ್ರೇಕ್ಷೆ ಅನ್ನಿಸಬಹುದು. ಆದರೆ ಇದು ನಿಜ. ಚುನಾವಣಾ ಆಯೋಗ ಅಭ್ಯರ್ಥಿಗಳ ವೆಚ್ಚವನ್ನು ನಿಗದಿಪಡಿಸಿದೆ ಎಂಬುದೇನೋ ಸರಿ. ಅದರ ಪ್ರಕಾರ ಅಭ್ಯರ್ಥಿಗಳೂ ಚುನಾವಣಾ ಆಯೋಗ ನಿಗದಿಪಡಿಸಿದ ಪ್ರಮಾಣ ಮೀರದಂತೆ ಲೆಕ್ಕ ಕೊಡುತ್ತಾರೆ. ಕಾನೂನಿನ ಪ್ರಕಾರ ಈ ಲೆಕ್ಕ ಸರಿಹೊಂದುತ್ತದೆ. ಆದರೆ ಇವತ್ತು ಒಂದು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಇದಕ್ಕಿಂತ ಹೆಚ್ಚಿನ ಹಣ ಬೇಕು ಅಂತ ಆತ್ಮಸಾಕ್ಷಿ ಇರುವವರಿಗೆ ಗೊತ್ತಿದೆ.
ಅಂದ ಹಾಗೆ, 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ಶಕ್ತಿಗಳು ಹೂಡಿದ ಬಂಡವಾಳದ ಪ್ರಮಾಣ 10500 ಕೋಟಿ ರುಪಾಯಿ ಅಂತ ದೆಹಲಿಯ ಸಂಸ್ಥೆಯೊಂದರ ಸಮೀಕ್ಷೆ ಹೇಳಿತ್ತು. ಚುನಾವಣೆಗಳಿಗೆ ಹೂಡಿಕೆಯಾ ಗುತ್ತಿರುವ ಬಂಡವಾಳದ ಪ್ರಮಾಣ ಯಾವ ಸರಾಸರಿಯಲ್ಲಿ ಮೇಲೇರುತ್ತಿದೆ ಅಂತ ಅದು ಗುರುತಿಸಿತ್ತು. ಇದು ಒಂದು ಭಾಗವಾದರೆ, ಮತ್ತೊಂದು ಕಡೆಯಿಂದ ಎಲೆಕ್ಷನ್ ಸ್ಪೆಷಲಿಸ್ಟುಗಳಿಗೆ ಇದರ ಹಿಂದಿನ ಸತ್ಯ ಗೊತ್ತೇ ಇದೆ.
ಅಂದರೆ ಮುಂದಿನ ವಿಧಾನಸಭಾ ಚುನಾವಣೆಗಾಗಿ ಹೂಡಿಕೆಯಾಗುವ ಒಟ್ಟು ಬಂಡವಾಳ 15 ಸಾವಿರ ಕೋಟಿ ರುಪಾಯಿ ಎಂಬುದು ಅಂದಾಜು. ಇದು ಹೆಚ್ಚೂ ಆಗಬಹುದು. ಜಾಗತೀಕರಣ ಈ ದೇಶಕ್ಕೆ ಕಾಲಿಡುವ ಮುನ್ನ ಚುನಾವಣೆಗಳಿಗೆ ಹೂಡಿಕೆಯಾಗುತ್ತಿದ್ದ ಬಂಡವಾಳದ ಪ್ರಮಾಣ ಕಡಿಮೆ. 1989ರ ಚುನಾವಣೆಯಲ್ಲಿ ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳು ಮತ್ತದರ ಅಭ್ಯರ್ಥಿಗಳು ಸೇರಿ ಮಾಡಿದ ವೆಚ್ಚ 10 ಕೋಟಿ ರುಪಾಯಿ.
ಆ ಚುನಾವಣೆಯ ಹೊತ್ತಿಗೆ ಜನತಾದಳ ಇಬ್ಭಾಗವಾಗಿದ್ದರ ಪರಿಣಾಮವನ್ನು ಮುನ್ನಂದಾಜಿಸಿದ ಮದ್ಯದ ಉದ್ಯಮಿಯೊಬ್ಬರು ಪ್ರಮುಖ ರಾಷ್ಟ್ರೀಯ ಪಕ್ಷವೊಂದಕ್ಕೆ ೫ ಕೋಟಿ ರುಪಾಯಿ ನೀಡಿದ್ದರು. ಅವತ್ತಿನ ಕಾಲಕ್ಕದು ರಾಜಕೀಯ ವಲಯಗಳಲ್ಲಿ ಭಾರಿ ಸದ್ದು ಮಾಡಿತ್ತು. ಸದರಿ ಮದ್ಯದ ಉದ್ಯಮಿ ಈ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳಿಗೆ ಪ್ರಚಾರ ಸಾಮಗ್ರಿ ಮತ್ತು ವೆಚ್ಚಕ್ಕೆ ಅಂತ
ತಲಾ ೪ ಲಕ್ಷ ರುಪಾಯಿ ಕೊಟ್ಟಿದ್ದಾರೆ ಎಂಬ ಮಾತು ಮುಂದೆ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯ ಕೇಂದ್ರಬಿಂದು ಆಗಿತ್ತು. ಇದಾದ ನಂತರ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಒಳಚರ್ಚೆಗಳು ನಡೆದಿದ್ದು 1996ರಲ್ಲಿ.
ಆ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಜನತಾದಳದಿಂದ ಸ್ಪಽಸಿದ ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚಕ್ಕಾಗಿ ತಲಾ ೫೦ ಲಕ್ಷ ರುಪಾಯಿ ನೀಡಲಾಗಿತ್ತು ಅಂತ ಹಲ ನಾಯಕರು ಪಿಸುಗುಡುತ್ತಿದ್ದರು. ಈ ಪ್ರಮಾಣದ ಹಣ ಹೂಡಿಕೆ ಮಾಡಿದ್ದ ರಿಂದಲೇ ದೇವೇಗೌಡರು ಪ್ರಧಾನಿ ಹುದ್ದೆಯವರೆಗೆ ನಡೆದುಕೊಂಡು ಹೋದರು ಅಂತ ಖುದ್ದು ರಾಮಕೃಷ್ಣ ಹೆಗಡೆ ಆಪ್ತರ ಬಳಿ ಹೇಳಿಕೊಂಡಿದ್ದರಂತೆ.
ಅರ್ಥಾತ್, ಚುನಾವಣೆಗಾಗಿ ಹೂಡಿಕೆಯಾಗುವ ಬಂಡವಾಳದ ಪ್ರಮಾಣ ಯಾವ ಮಟ್ಟದಲ್ಲಿ ಏರಿಕೆಯಾಗತೊಡಗಿತು ಎಂಬುದರ ಜಾಡು ಇಲ್ಲಿ ಸಿಗುತ್ತದೆ. ಜಾಗತೀಕರಣಕ್ಕೂ ಮುನ್ನಿನ ಚುನಾವಣೆಗಳಿಗೆ ಹೋಲಿಸಿದರೆ, ಜಾಗತೀಕರಣದ
ನಂತರದ ಚುನಾವಣೆಗಳ ಖರ್ಚು ಶೇ. ೨೦ರಿಂದ ೩೦ರಷ್ಟು ಏರಿಕೆಯಾಗಿದೆ ಎಂಬುದು ಒಂದು ಅಂದಾಜು.
ಅಂದ ಹಾಗೆ, ಚುನಾವಣೆಗಳಿಗೇಕೆ ಈ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಯಾಗುತ್ತದೆ? ಅಂತ ವಿಸ್ಮಯಪಡುವವರು ಕೆಲ ಸಂಗತಿಗಳತ್ತ ಗಮನ ಹರಿಸಬೇಕು. ತುಂಬ ದೂರ ಹೋಗಿ ನೋಡುವುದೇನೂ ಬೇಡ. ಉದಾಹರಣೆಗೆ ಕರ್ನಾಟಕವನ್ನೇ ತೆಗೆದುಕೊಳ್ಳಿ. ಕರ್ನಾಟಕ ಸರಕಾರದ 2022-23ನೇ ಸಾಲಿನ ಬಜೆಟ್ ಗಾತ್ರ ಸುಮಾರು 2.70 ಲಕ್ಷ ಕೋಟಿ ರುಪಾಯಿ. ಪ್ರತಿ ವರ್ಷವೂ ಈ ಪ್ರಮಾಣ ಏರಿಕೆಯಾಗುತ್ತಲೇ ಹೋಗುತ್ತದೆ.
ಅಂದರೆ ಮುಂದಿನ ವಿಧಾನಸಭಾ ಚುನಾವಣೆಯ ನಂತರ ಅಸ್ತಿತ್ವಕ್ಕೆ ಬರುವ ಸರಕಾರ ತನಗಿರುವ ೫ ವರ್ಷಗಳ ಅಧಿಕಾರಾ ವಧಿಯಲ್ಲಿ ಸುಮಾರು ೧೫ ಲಕ್ಷ ಕೋಟಿ ರುಪಾಯಿಗಳಷ್ಟು ಹಣವನ್ನು ವೆಚ್ಚ ಮಾಡಲಿದೆ. ಯೋಜನೆ, ಯೋಜನೇತರ ಬಾಬ್ತಿನಲ್ಲಿ ವೆಚ್ಚವಾಗುವ ಈ ಹಣದ ನೂರಕ್ಕೆ ನೂರರಷ್ಟು ಭಾಗ ನಿಗದಿತ ಉದ್ದೇಶಕ್ಕೆ ಬಳಕೆಯಾಗಬೇಕು ಎಂಬುದು ಪ್ರಜಾತಂತ್ರದ ಆಶಯ. ಆದರೆ ಆಶಯಕ್ಕೆ ಪೂರಕವಾಗಿ ಹಣ ವೆಚ್ಚವಾಗುತ್ತಿದ್ದರೆ ರಾಜಕೀಯ ಪಕ್ಷಗಳು ಭ್ರಷ್ಟಾಚಾರದ ಅಸ್ತ್ರ ಹಿಡಿದು ಪರಸ್ಪರರ ವಿರುದ್ಧ ದೋಷಾರೋಪ ಹೊರಿಸುವ ಕೆಲಸ ಮಾಡುತ್ತಿರಲಿಲ್ಲ.
ಇವತ್ತು ಯಾವ ರಾಜಕೀಯ ಪಕ್ಷವೂ ಭ್ರಷ್ಟಾಚಾರದ ಆರೋಪದಿಂದ ಹೊರತಲ್ಲ. ಹೀಗಾಗಿ ಎಲ್ಲ ಪಕ್ಷಗಳವರು, ‘ನಮ್ಮ ವಿರುದ್ಧ ಮಾತನಾಡಲು ನಿಮಗೆ ನೈತಿಕ ಹಕ್ಕಿಲ್ಲ’ ಎನ್ನುತ್ತಾರೆ. ಅರ್ಥಾತ್, ತಮಗಿಂತ ಹೆಚ್ಚು ಭ್ರಷ್ಟಾಚಾರ ಮಾಡಿದವರಿಗೆ ತಮ್ಮ ವಿರುದ್ದ ಮಾತನಾಡುವ ಹಕ್ಕಿಲ್ಲ ಎಂಬುದು ಅವುಗಳ ಮಾತಿನ ಹಿಂದಿರುವ ಧ್ವನಿ. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ಖುದ್ದು ಪ್ರಧಾನಿಗಳೇ ಕರ್ನಾಟಕಕ್ಕೆ ಬಂದು, ‘ಇದು ೧೦ ಪರ್ಸೆಂಟ್ ಸರಕಾರ’ ಅಂತ ಆರೋಪಿಸಿದ್ದರು.
ಈಗ ಅದು ೪೦ ಪರ್ಸೆಂಟಿಗೇರಿದೆ ಅಂತ ರಾಜ್ಯ ಗುತ್ತಿಗೆದಾರರ ಸಂಘ ಆರೋಪಿಸುತ್ತಿದೆ. ಈ ಆರೋಪದಲ್ಲಿ ಉತ್ಪ್ರೇಕ್ಷೆ ಇದೆ
ಅಂತ ಭಾವಿಸಿದರೂ ಸೋರಿಕೆಯ ಪ್ರಮಾಣ ಕನಿಷ್ಠ ಶೇ. ೨೦ರಷ್ಟಿದೆ ಎಂಬ ಮಾತು ಉನ್ನತ ಮಟ್ಟದಲ್ಲಿ ಕೇಳಿಬರುತ್ತಿದೆ.
ಅಂದರೆ ೫ ವರ್ಷಗಳ ಅವಽಯಲ್ಲಿ ಸರಕಾರಕ್ಕೆ ಲಭ್ಯವಾಗುವ ೧೫ ಲಕ್ಷ ಕೋಟಿ ರುಪಾಯಿಗಳ ಪೈಕಿ ೩ ಲಕ್ಷ ಕೋಟಿ
ರುಪಾಯಿಗಳಷ್ಟು ಹಣ ವಿವಿಧ ಸ್ತರಗಳಲ್ಲಿ ಹಂಚಿಕೆಯಾಗುತ್ತದೆ. ಆದರೆ ಇದು ಕೂಡ ಒಂದು ಭಾಗ.
ಏಕೆಂದರೆ ಸರಕಾರಕ್ಕೆ ೧೫ ಲಕ್ಷ ಕೋಟಿ ರುಪಾಯಿಗಳಷ್ಟು ಆದಾಯವಿದ್ದರೆ, ರಾಜ್ಯದ ಒಟ್ಟಾರೆ ಉತ್ಪನ್ನದ ಪ್ರಮಾಣ
೫೦೦ ಲಕ್ಷ ಕೋಟಿ ರುಪಾಯಿಗಳಿಗೂ ಅಧಿಕ. ಈ ಹಣ ಸೃಷ್ಟಿಸುವ ಆಸ್ತಿಗೂ ಅಽಕಾರದ ಕಬಂಧ ಬಾಹುಗಳು ಅಮರಿ ಕೊಳ್ಳುತ್ತವೆ. ಅಽಕಾರದ ಅಬ್ಬರಕ್ಕೆ ಈ ಬಾಬ್ತಿನಿಂದಲೂ ದೊಡ್ಡ ಪ್ರಮಾಣದ ಹಣ ಹಂಚಿಕೆಯಾಗುತ್ತದೆ. ಇಷ್ಟು ಹಣದಲ್ಲಿ ರಾಜಕಾರಣಿಗಳು, ಅಽಕಾರಿಗಳು, ಉದ್ಯಮಿಗಳು ಸೇರಿದಂತೆ ವಿವಿಧ ವಲಯಗಳ ಜನ ಪಾಲು ಪಡೆಯುತ್ತಾರೆ.
ಹೀಗೆ ಪಾಲು ಪಡೆದವರಿಗೆ ಅಧಿಕಾರ ಕೇಂದ್ರ ಎಂಬುದು ಬಹುಮುಖ್ಯ. ಅದನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ಏನಿದೆ, ಅದರಲ್ಲಿ ಪಾಲುದಾರರಾಗಲು ಈ ಎಲ್ಲರೂ ಬಯಸುತ್ತಾರೆ. ತಮ್ಮ ತಮ್ಮ ನೆಲೆಗಳಲ್ಲಿ ಎಷ್ಟು ಪ್ರಮಾಣದ ಬಂಡವಾಳ ಹೂಡಲು ಇವರು ಸಜ್ಜಾಗಬಹುದು ಎಂಬ ಅಂದಾಜು ಸಿಕ್ಕಿದರೆ ಮುಂದಿನ ಚುನಾವಣೆಯಲ್ಲಿ ಹೂಡಿಕೆಯಾಗುವ ಬಂಡವಾಳದ ಪ್ರಮಾಣ ಎಷ್ಟಿರ ಬಹುದು ಎಂಬುದು ಅರಿವಾಗುತ್ತದೆ. ಇದು ೧೫ ಸಾವಿರ ಕೋಟಿ ರುಪಾಯಿಗಳಿಗಿಂತ ಕಡಿಮೆ ಇರಲು ಸಾಧ್ಯವೇ?
ಅಂದ ಹಾಗೆ, ಒಂದು ಸರಕಾರದ ವಶಕ್ಕಾಗಿ ಮತ್ತು ಅದರ ಭಾಗವಾಗುವ ತವಕಕ್ಕಾಗಿ ನಡೆಯುವ ಕದನದಲ್ಲಿ ಎಲ್ಲರೂ
ಯಶಸ್ವಿಯಾಗದಿರಬಹುದು.
ಆದರೆ ಒಟ್ಟು ಅಧಿಕಾರದ ವ್ಯವಸ್ಥೆಯಲ್ಲಿ ಪಾಲು ಪಡೆಯಲು ಎಲ್ಲರೂ ಯತ್ನಿಸುವವರೇ. ಈ ಪೈಕಿ ಕೆಲವರು ಜನರಿಗಾಗಿ ಪಾಲು
ಪಡೆಯಲು ಯತ್ನಿಸುತ್ತೇವೆ ಅಂತ ಹೇಳಬಹುದು. ಆದರೆ ಅಂತಿಮವಾಗಿ ಇದು ಪಾಲು ಪಡೆಯಲು ತವಕಿಸುವ ವ್ಯವಸ್ಥೆ. ಸಾಮಾಜಿಕ ನ್ಯಾಯದ ಪರಿಕಲ್ಪನೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದಕ್ಕೆ ಇದೇ ಮುಖ್ಯ ಕಾರಣ.