Wednesday, 11th December 2024

ಇದು ನಮ್ಮವರಲ್ಲದ ನಮ್ಮವರ ಕಥೆ -2

ಶಿಶಿರ ಕಾಲ

ಶಿಶಿರ್‌ ಹೆಗಡೆ, ಚಿಕಾಗೋ

shishirh@gmail.com

ಪಾಶ್ಚಿಮಾತ್ಯರ ಸಕ್ಕರೆಯ ಸಿಹಿಯ ಹಿಂದಿನ ಭಾರತೀಯ ಕೂಲಿಗಳ ರಕ್ತದ ಒಗರು ಯಾರ ಅನುಭವಕ್ಕೂ ಬರಲೇ ಇಲ್ಲ. ಬ್ರಿಟಿಷರು ನಮ್ಮ ಇತಿಹಾಸವನ್ನು ಬರೆಯುವಾಗ ಬಚ್ಚಿಟ್ಟ ಸಂಗತಿ ಏನೆಂದರೆ ಭಾರತೀಯರ ಕೂಲಿಗಳ ಮೇಲೆ ಅವರು ನಡೆಸಿದ ದೌರ್ಜನ್ಯ.

ಈ ಲೇಖನ ಸರಣಿಗೆ ನಮ್ಮವರಲ್ಲದ ನಮ್ಮವರ ಕಥೆ’ ಎಂದು ಹೆಸರು ಕೊಡಲು ಕಾರಣವಿದೆ. ಅಂದು ಹಾಗೆ ನಮ್ಮಿಂದ ದೂರವಾದ ಭಾರತೀಯ ಕೂಲಿಗಳೆಲ್ಲ ಆಗ ನಮ್ಮವರೇ ಆಗಿದ್ದವರು. ಇಂದು ನಾವು ಅವರನ್ನು ನಮ್ಮಿಂದ ಬೇರ್ಪಟ್ಟವರೆಂಬ ಒಂದೇ ಕಾರಣಕ್ಕೆ ಮರೆತಿದ್ದೇವೆ. ಆದರೆ ಬ್ರಿಟಿಷರು ಸಹ ನಮ್ಮ ಇತಿಹಾಸ ಬರೆಯುವಾಗ ನಮ್ಮಿಂzಹೀ ಸಂಗತಿ ಬಚ್ಚಿಟ್ಟಿದ್ದಾರೆ. ದೌರ್ಜನ್ಯದಿಂದಾಗಿ ತಮ್ಮತನವನ್ನೇ ಕಳೆದುಕೊಂಡ ಅವರನ್ನು ನಾವು ನೆನಪಿಸಿಕೊಳ್ಳದೇ ಇನ್ಯಾರು ನೆನಪಿಸಿಕೊಂಡಾರು? 1833ರಲ್ಲಿ ಬ್ರಿಟಿಷರೇ ಮಾಡಿಕೊಂಡ ಕಾನೂನಿಂದ ಕಪ್ಪು ಜನರ ಗುಲಾಮಗಿರಿ ಕೊನೆಗೊಂಡದ್ದು, ಆ ಸ್ಥಾನಕ್ಕೆ ವಸಾಹತುಗಳಲ್ಲಿ ಭಾರತೀಯರನ್ನು ತುಂಬಿಸುವ ತಯಾರಿ, ಬ್ರಿಟಿಷರ ಮೋಸದ ನಡೆಗಳು, ಹಳ್ಳಿ ಹಳ್ಳಿಗಳಲ್ಲಿ ನಿರುದ್ಯೋಗಿಯಾಗಿ ಓಡಾಡಿ ಕೊಂಡವರಲ್ಲಿ ಒಂದೊಳ್ಳೆ ಸಂಬಳ, ಜೀವನ, ಮರಳಿ ಬಂದಾಗ ಅವರಲ್ಲಿರುವ ಸಂಪತ್ತು ಇತ್ಯಾದಿಗಳ ಕನಸನ್ನು ಹುಟ್ಟಿಸಿ ಅವರನ್ನೆಲ್ಲ ಹಡಗಿಗೆ ಹತ್ತಿಸಿದ್ದು,

ಹಾಗೆ ಕೋಲ್ಕತಾದಿಂದ ದಕ್ಷಿಣ ಅಮೆರಿಕಕ್ಕೆ ಹೋರಟ ಮೊದಲ ಹಡಗಿನಲ್ಲಿನ 400 ಮಂದಿಯಲ್ಲಿ 140 ಮಂದಿ ಸಮುದ್ರಮಧ್ಯದ ಸತ್ತು ಹೋದ್ದು – ಇವೆಲ್ಲ ಹಿಂದಿನ ವಾರ ಓದಿದ್ದಿರಿ. ಅಲ್ಲಿ ಹಾಗೆ ಮೋಸಕ್ಕೊಳಗಾಗಿ ಹೊರಟವರಿಗೆ ಸಮುದ್ರ ಎಂದರೇನು, ಅದರ ಅಗಲವೆಷ್ಟು – ಜಗತ್ತು, ಭೂಮಿ ಎಷ್ಟು ದೊಡ್ಡದು, ತಮ್ಮನ್ನು ಎಷ್ಟು ದೂರ ಒಯ್ಯಲಾಗುತ್ತದೆ ಎನ್ನುವ ಒಂದು ಹುಂಡು ಅಂದಾಜೂ ಇರಲೇ ಇಲ್ಲ. ಹಡಗನ್ನು ಹತ್ತಿ, ಪ್ರಯಾಣ ದುದ್ದಕ್ಕೂ ಪರಮ ಯಾತನೆ, ಸಾವು ನೋವು ಅನುಭವಿಸಿ, ಒಂಬತ್ತು ಸಾವಿರ ಮೈಲಿಯ, ಮೂರು ತಿಂಗಳ ಪ್ರಯಾಣದ ನಂತರ ಅದು ಹೇಗೋ 400 ರಲ್ಲಿ 260 ಮಂದಿ ಬದುಕಿಕೊಂಡುಬಿಟ್ಟರು.

ಹೀಗೆ ಮೀನಿಗೆ ಆಹಾರವಾಗದವರು ಮಾತ್ರ ಅಕ್ಷರಶಃ ಬದುಕಿರುವಾಗಲೇ ಹಡಗಿನಲ್ಲಿ ನರಕ ಕಂಡುಬಿಟ್ಟಿದ್ದರು. ಆದರೆ ಅವರಿಗೆ ಮುಂದಿರುವ ಇನ್ನಷ್ಟು ಘನ ಘೋರ ನರಕದ ಅಂದಾಜೂ ಆ ಕ್ಷಣಕ್ಕೆ ಇರಲಿಲ್ಲ. ಹಾಗೆ ಜೀವ ಇಟ್ಟುಕೊಂಡವರು ಅಂತೂ ಕೊನೆಗೆ ದಕ್ಷಿಣ ಅಮೆರಿಕದ ಬ್ರಿಟಿಷ್ ಗಯಾನಾದ ಡೆಮಾರೇರಾದ ಬಂದರಿಗೆ ಬಂದಿಳಿದರು. ಮೊದಲೇ ಬಡಕಲು ದೇಹದವರಾದ ಭಾರತೀಯರು; ಮೂರು ತಿಂಗಳಲ್ಲಿ ಇನ್ನಷ್ಟು ಕೃಶವಾಗಿ ಹೋಗಿದ್ದರು. ಅವರಿಗೆ ಹಗಲು ರಾತ್ರಿಯ ಲೆಕ್ಕಾಚಾರವೇ ತಪ್ಪಿ ಹೋಗಿತ್ತು. ಡೆಮರೇರಾದ ತಟದಲ್ಲಿ ಇಳಿದು ಸಮುದ್ರದತ್ತ ನೋಡುವಾಗ ಅವರಿಗೆ ಭಾರತ ಅ ಸಮುದ್ರದಲ್ಲಿ ಕಳೆದುಹೋದಂತೆ
ಅನ್ನಿಸಿತ್ತು. ಆದರೆ ಆಗ ಅವರಿಗೆ ತಾಯ್ನೆಲ ಕಳೆದುಕೊಂಡದ್ದು ಶಾಶ್ವತ ಎಂದು ಗೊತ್ತಿರಲಿಲ್ಲ.

ಬಂದಾಗಿದೆ – ಒಂದಿಷ್ಟು ಕಾಲ ಹೇಗೋ ಸವೆಸಿದರೆ ಮರಳಿ ತಮ್ಮ ನೆಲ, ಕುಟುಂಬ ಸೇರಬಹುದೆಂಬ ಆಸೆ ಯಿಂದ ಜೀವ ಹಿಡಿದಿಟ್ಟಿದ್ದರು. ಹೀಗೆ ಮೊದಲ ಬ್ಯಾಚ್‌ನ ಭಾರತೀಯ ಕೂಲಿಗಳು ಡೆಮರೇರಾಕ್ಕೆ ಬಂದು ಇಳಿದಾಗ ಅವರನ್ನು ನೋಡಲು ಅಲ್ಲಿನ ಜನರೆಲ್ಲ ಸೇರಿದ್ದರು. ಪ್ರಾಣಿಸಂಗ್ರಹಾಲಯಕ್ಕೆ ಹೊಸ ಪ್ರಾಣಿಗಳ ದಂಡು ಬಂದಾಗ ನೋಡುವಂತೆ. ಅವರನ್ನು ನೋಡಿ ‘ಕೂಲಿ ಕೂಲಿ’ ಎಂದು ಕೇಕೆಹಾಕುತ್ತಿದ್ದ ಬ್ರಿಟಿಷ್ ಮಕ್ಕಳೂ ಅಲ್ಲಿದ್ದರು. ಬ್ರಿಟಿಷ್ ಪ್ಲಾಂಟೇಷನ್ ಓನರ್‌ಗಳು ಎಲ್ಲಿಲ್ಲದ ಉತ್ಸಾಹದಿಂದ ಅಲ್ಲಿ ಸೇರಿದ್ದರು. ಕೂಲಿಗಳ ಅಂಗಿ – ಬಟ್ಟೆ ನ್ನು ಬಂದರಿನಲ್ಲೇ ಬಿಚ್ಚಿಸಲಾಯಿತು.

ವಿವಸ್ತ್ರಗೊಳಿಸಿ, ಕೆಳಗೆ ನಿಲ್ಲಿಸಿ ಎತ್ತರದಿಂದ ಅವರ ಮೇಲೆ ಬಕೆಟುಗಳಲ್ಲಿ ತಣ್ಣೀರನ್ನು ಹೊಯ್ಯಲಾಯಿತು. ಅವರಿಗೆಲ್ಲ ಹೆಸರು ಇತ್ತೋ ಅಥವಾ ಮರೆತುಹೋಗಿ ದ್ದರೋ!! ಎಲ್ಲರಿಗೆ ಸಂಖ್ಯೆ ಬರೆದ ಸ್ಲೇಟ್ ಒಂದು ಕೊಟ್ಟು – ಆ ಸಂಖ್ಯೆಯೇ ಅವರ ಹೆಸರಾಯಿತು. ರಾಮ್ ಶರ್ಮ ಅಲ್ಲಿ ‘ಕೂಲಿ ರಾಮ್ 7359’ ಆದ. ಅಮರ್ ದೀಪ್ ಸಿಂಗ್ ಅಲ್ಲಿ ‘ಕೂಲಿ ಸಿಂಗ್ 7360’ ಆದ. ಹೀಗೆ ಹಿಂದೆ ಕೂಲಿ ಮತ್ತು ಮುಂದೆ ಒಂದು ಸಂಖ್ಯೆ ಸೇರಿತು. ಹೆಸರನ್ನು, ಐಡೆಂಟಿಟಿಯನ್ನು ಅಷ್ಟೇ ಅಲ್ಲ, ಸಂಸ್ಕೃತಿ, ಭಾಷೆ, ಪರಂಪರೆ, ಹೀಗೆ ಎಲ್ಲವನ್ನು ಅವರಿಂದ ಬೇರ್ಪಡಿಸಿ ಜೀವಂತ ಶವವಾಗಿಸಿಬಿಟ್ಟರು. ಗಟ್ಟಿಯಿರುವ ದೇಹವನ್ನು ಹೆಚ್ಚಿನ ಹಣ ಕೊಟ್ಟು ಪ್ಲಾಂಟೇಷನ್ ಓನರ್‌ಗಳು ಹರಾಜಿನಲ್ಲಿ ಬಂದರಿನ ಖರೀದಿಸಿದ್ದರು.

ಬ್ರಿಟಿಷ್ ಮಾನವ ದಳಿಗಳು ಹೀಗೆ ಸಿಕ್ಕ ಅಷ್ಟೂ ಹಣವನ್ನು ತಮ್ಮ ಕಿಸೆಗಿಳಿಸಿಕೊಂಡರು. ಕೂಲಿಗಳನ್ನು ಮತ್ತು ಅದರ ಜತೆ ವಾರಸುದಾರಿಕೆ ಪತ್ರವನ್ನು
ಪ್ಲಾಂಟೇಷನ್ನಿನ ಯಜಮಾನರಿಗೆ ಹಸ್ತಾಂತರಿಸಿದರು. ಬಳಿಕ ಬಂದ ಹಡಗಿನಲ್ಲೇ ಸಕ್ಕರೆ ತುಂಬಿಸಿಕೊಂಡು ಸಮುದ್ರದ ಮಾಯವಾಗಿಬಿಟ್ಟರು. ಕೂಲಿಗಳಿಗೆ ಮಾತ್ರ ಏನಾಗುತ್ತಿದೆ ಎಂದೇ ತಿಳಿಯಲಿಲ್ಲ. ಇಂಗ್ಲಿಷ್ ಭಾಷೆ ಬರುತ್ತಿರಲಿಲ್ಲ. ಅವರನ್ನು ದನಗಳನ್ನು ಬಯಲಿಗೆ ಎಬ್ಬುವಂತೆ ಕಬ್ಬಿನ ಗzಗೆ ಕೆಲಸಕ್ಕೆ ಎಬ್ಬಲಾಯಿತು. ಹೀಗೆ ಆ ನೆಲಕ್ಕೆ ಬಂದಿಳಿದು ಒಂದೆರಡು ತಾಸಿನಲ್ಲಿ ಅವರ ಕೈಗೆ ಕತ್ತಿ ಕೊಟ್ಟು ಕಬ್ಬನ್ನು ಕಡಿಯಲು, ಹೊರಲು ಒಯ್ಯಲಾಯಿತು. ಅಲ್ಲಿಂದ ಮುಂದೆ ಅವರು ಅನುಭವಿಸಿದ್ದು ನರಕಕ್ಕಿಂತ ಕ್ರೂರ ಸ್ಥಿತಿ. ಕಣ್ಣೀರಿಡಲಿ, ಬೊಬ್ಬೆಯಿಡಲಿ – ಅದಕ್ಕೆಲ್ಲ ಬೆನ್ನಿಗೆ ಬರೆ ಬಿದ್ದದ್ದು ಮಾತ್ರ.

ಇದೆಲ್ಲ ಮಾಸ್ಟರ್ ಪ್ಲಾನಿನ ಹಿಂದೆ ಇದ್ದವನು ಜಾನ್ ಗ್ಲ್ಯಾಡ್ಸ್ಟೋನ್ ಎಂಬ ಬ್ರಿಟಿಷ್ ಪಾರ್ಲಿಮೆಂಟೇರಿಯನ್. ಆತ ಮುಂದಿನ ಬ್ರಿಟಿಷ್ ಪ್ರಧಾನಿ ವಿಲಿಯಂ ಗ್ಲ್ಯಾಡ್ಸ್ಟೋನ್ ನ ಅಪ್ಪ. ಭಾರತೀಯರನ್ನು ಈ ರೀತಿ ಮೋಸದಿಂದ ಕರೆದೊಯ್ದು ಜೀತಕ್ಕೊಡ್ಡುವ ಕುಕೃತ್ಯ ಬ್ರಿಟಿಷ್ ಪಾರ್ಲಿಮೆಂಟಿಗೆ, ಅಲ್ಲಿನ ರಾಣಿಯಾದಿ ಎಲ್ಲರಿಗೂ ತಿಳಿದಿತ್ತು. ಕಪ್ಪು ವರ್ಣೀಯರ ಜೀತವನ್ನು ಕೊನೆಗಾಣಿಸಿದ್ದನ್ನು ಹಿಂಪಡೆಯುವಂತಿರಲಿಲ್ಲ. ಇದೆಲ್ಲವನ್ನು ಒಪ್ಪದ ಕೆಲ ಬ್ರಿಟಿಷ್ ಮಂತ್ರಿಗಳಿದ್ದರೂ
ಅವರು ಬೆರಳೆಣಿಕೆಯಷ್ಟು. 1840: ಅದಾಗಲೇ ಲಕ್ಷದ ಲೆಕ್ಕ ದಲ್ಲಿ ಅಮಾಯಕ ಕೂಲಿಗಳನ್ನು ಹಡಗಿನಲ್ಲಿ ತುಂಬಿಸಿ ದೇಶಾಂತರ ಮಾಡಿಯಾಗಿತ್ತು.

ಆದರೆ ಅದರಲ್ಲಿ ಜೀವಂತ ವಾಗಿ ದಕ್ಷಿಣ ಅಮೆರಿಕ ತಲುಪಿ, ಇನ್ನೂ ಜೀವಂತವಾಗಿದ್ದವರು ಕೇವಲ ಇಪ್ಪತ್ತು ಸಾವಿರ ಮಂದಿ. ಉಳಿದೆಲ್ಲರೂ (ಶೇ.80)
ಸಮುದ್ರ ಮಧ್ಯದ ರೋಗದಿಂದಾಗಿ ಅಥವಾ ನಂತರದಲ್ಲಿ ದೌರ್ಜನ್ಯದಿಂದಾಗಿ ಕೊನೆಯಿಸಿರೆಳೆದಿದ್ದರು. ಇದೆಲ್ಲ ಸಾವುಗಳು 1841ರಲ್ಲಿ ಬ್ರಿಟಿಷ್ ಪಾರ್ಲಿ ಮೆಂಟಿನಲ್ಲಿ ಗಲಾಟೆಗೆ ಕಾರಣವಾಯಿತು. ಇದರಿಂದಾಗಿ ಬ್ರಿಟಿಷ್ ಸಂಸತ್ತು ಇನ್ನೊಮ್ಮೆ ಕ್ರೂರ ಗ್ಲ್ಯಾಡ್ಸ್ಟೋನ್ ನ ಈ ಪ್ರೋಗ್ರಾಮಿನತ್ತ ನೋಡುವಂಥ ಸ್ಥಿತಿ ನಿರ್ಮಾಣವಾಯಿತು. ಸಂಸತ್ತು ಸಂಖ್ಯೆಗಳನ್ನು ತರಿಸಿಕೊಂಡಿತು. ಅದನ್ನು ನೋಡಿ ಮರುಕವುಂಟಾಯಿತೋ ಗೊತ್ತಿಲ್ಲ – ಆದರೆ ಒಂದಿಷ್ಟು ದಿಗಿಲಾದದ್ದು ನಿಜ. ಅದು ಬ್ರಿಟಿಷ್ ಇತಿಹಾಸದಲ್ಲಿ ಕೂಡ ದಾಖಲಾಗಿದೆ. ಬ್ರಿಟಿಷ್ ವಿದೇಶಾಂಗ ಕಾರ‍್ಯದರ್ಶಿ ಲಾರ್ಡ್ ಜಾನ್ ರಸ್ಸೆಲ್ ಇದನ್ನೆಲ್ಲ ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಬಹಿರಂಗಪಡಿಸಿ ಪ್ರಶ್ನಿಸಿದ.

ಆದರೆ ಪ್ಲಾಂಟೇಷನ್ ಓನರ್‌ಗಳ ಪ್ರಾಬಲ್ಯ ಎಷ್ಟಿತ್ತೆಂದರೆ, ಲಾರ್ಡ್ ಜಾನ್ ರಸ್ಸೆಲ್ಸನ ಬಾಯಿ ಮುಚ್ಚಿಸಲಾಯಿತು. ಈ ನಂತರವಂತೂ ಭಾರತೀಯರನ್ನು ಗುಲಾಮಗಿರಿಗೆ ದೂಡುವ ಕೆಲಸಕ್ಕೆ ಲಂಗು ಲಗಾಮೇ ಇರಲಿಲ್ಲ. ಮುಂದಿನ ಎಂಬತ್ತು ವರ್ಷ ಭಾರತೀಯ ಕೂಲಿಗಳನ್ನು ಬ್ರಿಟಿಷ್ ಸಾಮ್ರಾಜ್ಯದ ಎಲ್ಲ ಮೂಲೆ ಮೂಲೆಗೂ ಅನಾಮತ್ತು ಮೋಸದಿಂದ ಒಪ್ಪಿಸಿ ಒಯ್ಯಲಾಯಿತು. ಅದು ಈಗಿನಂತೆ ಮೀಡಿಯಾ, ಕಮ್ಯುನಿಕೇಶನ್ ಇಲ್ಲದ ಸಮಯ. ಇದರಿಂದಾಗಿ ಬ್ರಿಟಿಷರ ಮೋಸ ಅಷ್ಟಾಗಿ ಭಾರತೀಯರಲ್ಲಿ ಹರಡಲಿಲ್ಲ. ಹೋದವರು ಕಾಣೆಯಾಗಿ ಹೋಗಿಬಿಟ್ಟರು.

ಮನೆಯವರು ಸ್ವಲ್ಪ ಕಾಲ ಅತ್ತು ಸುಮ್ಮನಾದರು. ಇದೆಲ್ಲ ಬ್ರಿಟಿಷರಿಗೆ ಇದನ್ನು ಮುಂದುವರಿಸಿಕೊಂಡು ಹೋಗಲು ಸುಲಭಮಾಡಿಕೊಟ್ಟಿತು. ಪ್ಲಾಂಟರ್‌ಗಳು ಇಡೀ ಸರಕಾರವನ್ನು ತಮ್ಮ ಅಂಕೆಗೆ ತಕ್ಕಂತೆ ನಡೆಯುವಂತೆ ನೋಡಿಕೊಳ್ಳುತ್ತಿದ್ದರು. ಇದನ್ನು ಪ್ರಶ್ನಿಸಿದ ಕೆಲ ಬ್ರಿಟಿಷ್ ಮಂತ್ರಿಗಳನ್ನು ಕಿಡ್ನಾಪ್ ಮಾಡಿ ಹಿಂಸೆ ಕೊಟ್ಟು
ಕೊಲ್ಲಲಾಯಿತು. ಇದನ್ನು ಕಂಡು ಉಳಿದವರು ತಮ್ಮ ಬಾಯಿ ಹೊಲಿದು ಕೊಂಡುಬಿಟ್ಟರು. ಇದೆಲ್ಲ ಕಾರಣದಿಂದ ಭಾರತ ಜಗತ್ತಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಕೂಲಿ ಜೀತ ಕಾರ್ಮಿಕರನ್ನು ಒದಗಿಸುವ ದೇಶವಾಯಿತು. ಆ ಸಮಯದಲ್ಲಿ ಭಾರತ ದಲ್ಲಿ ಲೂಟಿ ಮಾಡಲು ಏನೇನೂ ಬಾಕಿ ಉಳಿದಿರಲಿಲ್ಲ.

ರಾಜರ, ರಾಜ್ಯಗಳ ಲೂಟಿ ಅದಾಗಲೇ ನಡೆದು ಭಾರತ ಸೊರಗಿಯಾಗಿತ್ತು. ಇನ್ನು ಉಳಿದದ್ದು ಭಾರತೀಯರ ಜೀವ ಮಾತ್ರ. ಅದನ್ನೂ ಬಿಡಲಿಲ್ಲ ದರಿದ್ರ ಬ್ರಿಟಿಷರು. ಅಂದು ಪಾಶ್ಚಿಮಾತ್ಯ ದೇಶಗಳಲ್ಲಿ ಸಕ್ಕರೆಯೆಂದರೆ ಎಲ್ಲಿಲ್ಲದ ಗೀಳು. ಸಕ್ಕರೆಯ ಸಿಹಿಯ ಹಿಂದಿನ ಭಾರತೀಯ ಕೂಲಿಗಳ ರಕ್ತದ ಒಗರು ಯಾರ ರುಚಿಯ ಅನುಭವಕ್ಕೂ ಬರಲೇ ಇಲ್ಲ. ಭಾರತೀಯ ಕೂಲಿಗಳು ಬೆಳೆದ ಕಬ್ಬಿನಿಂದ ಮಾಡಿದ ಸಕ್ಕರೆ ಜಗತ್ತಿನ ಎಲ್ಲೆಡೆ ಮತ್ತು ಭಾರತೀಯರಿಗೆ ಕೂಡ ಮಾರಾಟ
ಮಾಡಲಾಯಿತು. ಸಕ್ಕರೆ ಆ ಕಾಲದ ಅತ್ಯಂತ ದುಬಾರಿ, ಸ್ಟೇಟಸ್ ಆಹಾರ. ಶೀಮಂತರಿಗಷ್ಟೇ ಕೈಗೆಟುಕುವ ಸರಕು.

1874 – ಫಿಜಿ ದ್ವೀಪ ಬ್ರಿಟಿಷರ ಅಮೂಲ್ಯ ವಸಾಹತು ಗಳಲ್ಲಿ ಒಂದಾಗಿತ್ತು. ಅಲ್ಲಿ ಕೂಡ ಕಬ್ಬು ಬೆಳೆಯಲು ಕೂಲಿಗಳು ಬೇಕಾದರು. ಹಾಗಾಗಿ ಕೂಲಿಗಳನ್ನು ತುಂಬಿದ ಹಡಗುಗಳು ಕ್ರಮೇಣ ದಕ್ಷಿಣ ಪೆಸಿಫಿಕ್‌ನತ್ತ ಹೋರಟವು. ಫಿಜಿಯಲ್ಲಿ ಕೂಡ ಕೂಲಿಗಳದ್ದು ಅಂಥದ್ದೇ ಬದುಕು. ಚಿಕ್ಕ ಜೋಪಡಿಗಳಲ್ಲಿ – ಒಂದಿಷ್ಟು ಜಾಗದಲ್ಲಿ ಕೂಲಿಗಳಿಗೆ ಗುಡಿಸಲು ಕಟ್ಟಿಕೊಳ್ಳಲು ಅವಕಾಶ ಕೊಡಲಾಯಿತು. ಒಂದು ಜೋಪಡಿ ನೂರು ಚದರಡಿ. ಅದರಲ್ಲಿ ಮೂವರು ಗಂಡಸರು ಅಥವಾ ಒಂದು ಕುಟುಂಬ. ಎಕರೆ ಜಾಗದಲ್ಲಿ ಮುನ್ನೂರಕ್ಕೂ ಜಾಸ್ತಿ ಜೋಪಡಿಗಳು. ಅದರಾಚೆ ಹೋಗುವಂತಿಲ್ಲ. ಇಷ್ಟು ಕಿಕ್ಕಿರಿದ ಜಾಗದಲ್ಲಿ ಕಾಲರಾ, ಟೈಫಾಯ್ಡ್, ಮಲೇರಿಯಾ
ಹರಡುತ್ತ ನೂರಾರು ಜನ ಒಮ್ಮೋಮ್ಮೆಯೇ ಸಾಯುತ್ತಿದ್ದರು.

ಕೂಲಿಗಳಿಗೆ ಯಾರು ವೈದ್ಯರು – ಎಲ್ಲಿಯ ಶಿಶ್ರೂಷೆ? ಹುಟ್ಟಿದ ಮಕ್ಕಳಲ್ಲಿ ಶೇ.62ರಷ್ಟು ತಿಂಗಳಾಚೆ ಬದುಕುತ್ತಿರಲಿಲ್ಲ. ಬ್ರಿಟಿಷರು ಭಾರತೀಯ ತಾಯಂದಿರಿಗೆ ಮಕ್ಕಳನ್ನು ನೋಡಿಕೊಳ್ಳಲೇ ಗೊತ್ತಿಲ್ಲ ಎಂದು ಸಮಜಾಯಿಷಿ ಕೊಟ್ಟರು. ಬೆಳಗ್ಗೆ ಎದ್ದರೆ ತುಂಬು ಗರ್ಭಿಣಿಯಿರಲಿ, ಅನಾರೋಗ್ಯವಿರಲಿ – ಕಬ್ಬಿನ ಗದ್ದೆಯ ಕೆಲಸಕ್ಕೆ ಹಾಜರಾಗಲೇಬೇಕು. ದೌರ್ಜನ್ಯದ ಜತೆ ಅಲ್ಲಿ ಬಂದಿಳಿದ ಭಾರತೀಯ ಹೆಂಗಸರನ್ನು ಅವರ ಗಂಡಸರೆದುರೇ ಅತ್ಯಾಚಾರ ಮಾಡಲೂ ಹಿಂಜರಿಯಲಿಲ್ಲ. ಹಾಗೆ
ಅತ್ಯಾಚಾರದಿಂದ ಹುಟ್ಟಿದವರನ್ನು ಬಿಳಿ ಕೂಲಿಗಳೆಂದು ಕರೆ ಯಲಾಯಿತು. ಅವರಿಗೆ ಮುಂದೆ ಅಲ್ಲಿಯೇ ಪ್ಲಾಂಟೇಷನ್ನಿನಲ್ಲಿ ಸ್ವಲ್ಪ ಮೇಲಿನ ಉದ್ಯೋಗ – ಅಧಿಕಾರ.

ಬೆಳಗ್ಗೆ ಮೂರು ಗಂಟೆಗೆ ಕುದುರೆ ಗಾಡಿಯಲ್ಲಿ ಬ್ರಿಟಿಷರು ಈ ಘೆಟ್ಟೋಗಳಿಗೆ ಬಂದು ಗಲಾಟೆಯೆಬ್ಬಿಸಿ ಎಲ್ಲರನ್ನು ಕೆಲಸಕ್ಕೆ ಹೊರಡಿಸುತ್ತಿದ್ದರು. ನಾಲ್ಕುಗಂಟೆ ಒಳಗೆ ಅಡುಗೆ, ಬೆಳಗ್ಗಿನ ತಿಂಡಿ, ಎಲ್ಲ ಮುಗಿಸಿ ಮಧ್ಯಾಹ್ನದ ಊಟ ಕಟ್ಟಿಕೊಂಡು ಕೆಲಸಕ್ಕೆ ಹೋರಡಬೇಕು. ವಾಪಸಾಗುವುದು ರಾತ್ರಿ ಒಂಬತ್ತಕ್ಕೆ. ಇದು ನಿತ್ಯ – ವೀಕೆಂಡು, ರಜೆ ಅಂಥದ್ದೆಲ್ಲ ಇಲ್ಲವೇ ಇಲ್ಲ. ಪ್ಲಾಂಟರ್‌ಗಳೆಂದರೆ ಅವರೇ ಅಲ್ಲಿ ಪ್ರಧಾನಿ, ನ್ಯಾಯಾಧೀಶ, ಮಂತ್ರಿ, ಪೊಲೀಸ್, ಸರ್ವಾಧಿಕಾರಿ, ರಾಜ ಎಲ್ಲವೂ. ಕೆಲ
ವೊಮ್ಮೆ ಈ ಪ್ಲಾಂಟರುಗಳ ಅರಮನೆ ಕಬ್ಬಿನ ಗದ್ದೆಯ ಮಧ್ಯ ದ ಇರುತಿತ್ತು. ಬಾಲ್ಕನಿಯಲ್ಲಿ ಕೂತು ಕೆಲಸದವರನ್ನೆಲ್ಲ ದುರ್ಬಿನ್‌ನಲ್ಲಿ ನೋಡುತ್ತಿದ್ದರು.

ಅವರ ಕಾಲು ಉಗುರನ್ನು ಕತ್ತರಿಸಲು, ಮಸಾಜಿಗೆ ಹೀಗೆ ಎಲ್ಲದಕ್ಕೂ ಕೂಲಿ ಹೆಂಗಸರು. ಅವರು ಬಯಸಿದ ಕೂಲಿ ಹೆಣ್ಣನ್ನು ಅನುಭವಿಸುತ್ತಿದ್ದರು. ಮನಸ್ಸಿಗೆ ಬಂದ ಶಿಕ್ಷೆ ಕೊಡಬಹುದಿತ್ತು. ಅವರು ಹೇಳಿದ್ದೇ ಕಾನೂನು. ಅವರ ವಿರುದ್ಧ ಸೊತ್ತಿದ ಕೂಲಿಯನ್ನು ಒಂದೇ ಗುಂಡಿಗೆ ಸಾಯಿಸಲು ಕೂಡ ಈ ಪ್ಲಾಂಟರ್‌ಗಳು ಹಿಂದೆ
ಮುಂದೆ ನೋಡುತ್ತಿರಲಿಲ್ಲ. ಪ್ಲಾಂಟರ್‌ನ ಒಂದೇ ಹೂಂಕಾರ ಕೂಲಿಯ ಬದುಕುವ ಹಕ್ಕನ್ನೇ ಕೊನೆಗಾಣಿಸಬಹುದಿತ್ತು.

ಈ ಕೂಲಿಗಳು ನಂತರದನಾದರು?- ಮುಂದಿನ ವಾರಕ್ಕೆ