Saturday, 14th December 2024

ವೈದ್ಯಕೀಯ ಶಾಸ್ತ್ರದ ಮೂರನೇ ಕಣ್ಣು

Mysuru News

ಸಕಾಲಿಕ
ರಾಜು ಭೂಶೆಟ್ಟಿ

ರೇಡಿಯೋಲಜಿ ಎಂಬುದು ಇಮೇಜಿಂಗ್ ತಂತ್ರಜ್ಞಾನದ ಮೂಲಕ ರೋಗವನ್ನು ಪತ್ತೆ ಹಚ್ಚುವುದಾಗಿದೆ.

ಇದು ಸಿ.ಟಿ ಸ್ಕ್ಯಾನ್, ಎಂ.ಆರ್.ಐ ಸ್ಕ್ಯಾನ್, ಮ್ಯಾಮೋಗ್ರಫಿ, ಎಕ್ಸ-ರೇ, ಪಿ.ಇ.ಟಿ ಇಮೇಜಿಂಗ್, ಪಿ.ಇ.ಟಿ ಸ್ಕ್ಯಾನ್‌ನಂಥ ಪರೀಕ್ಷೆ ಗಳನ್ನು ಒಳಗೊಂಡಿರುತ್ತದೆ. ರೇಡಿಯೋಲಜಿಯನ್ನು ವೈದ್ಯಕೀಯ ಶಾಸ್ತ್ರದಲ್ಲಿ ಮೂರನೇ ಕಣ್ಣು ಎಂದು ಕರೆಯಲಾಗುತ್ತದೆ.

ಏಕೆಂದರೆ ಮಾನವನ ದೇಹದ ಯಾವುದೇ ಭಾಗದಲ್ಲಿನ ತೊಂದರೆಗಳನ್ನು ಮನುಷ್ಯನ ಎರಡು ಕಣ್ಣುಗಳು ಗುರುತಿಸುವಲ್ಲಿ ವಿಫಲವಾದರೂ ಕೂಡ ಸ್ಕ್ಯಾನ್ ಮೂಲಕ ಪತ್ತೆ ಹಚ್ಚಲು ರೇಡಿಯೋಲಜಿಯ ಇಮೇಜಿಂಗ್‌ನಿಂದ ಸಾಧ್ಯವಾಯಿತು. ಕ್ಷ-ಕಿರಣ ವನ್ನು ಕಂಡುಹಿಡಿದ ಪ್ರಾರಂಭದ ದಿನಗಳಲ್ಲಿ ಮುರಿದ ಎಲುಬು ಅಥವಾ ಎಲುಬಿಗೆ ಸಂಬಂಧಿಸಿದ ರೋಗಗಳನ್ನು ಪತ್ತೆೆಹಚ್ಚಲು ಮಾತ್ರ ಬಳಸಲಾಗುತ್ತಿತ್ತು.

ಆದರೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಅದ್ಭುತವಾದ ಬೆಳವಣಿಗೆಯಿಂದಾಗಿ ನರ, ರಕ್ತನಾಳಗಳು, ಕಿಡ್ನಿ, ಮೆದುಳು ಇನ್ನೂ ಮುಂತಾದ ಅಂಗಗಳ ರಚನೆ, ರಚನೆಯಲ್ಲಿನ ವ್ಯತ್ಯಾಸಗಳನ್ನು, ರೋಗದ ಸ್ಥಿತಿ ಬಗ್ಗೆ ಮಾಹಿತಿ ಪಡೆಯುವುದು ಸಾಧ್ಯವಾಗಿದೆ. ಕ್ಷ-ಕಿರಣದಿಂದ ಮಾನವನ ಶರೀರವನ್ನು ಹೊಕ್ಕಿರಬಹುದಾದ ಬಂದೂಕಿನ ಗುಂಡು, ನಾಣ್ಯ, ಗುಂಡು ಸೂಜಿ, ಮತ್ತಿತರ ವಸ್ತು ಗಳನ್ನು ಪತ್ತೆ ಮಾಡಬಹುದಾಗಿದೆ.

ಕ್ಯಾನ್ಸರ್ ಮತ್ತು ಕೆಲವು ಚರ್ಮ ರೋಗಗಳ ಚಿಕಿತ್ಸೆಯಲ್ಲಿಯೂ ಕ್ಷ- ಕಿರಣಗಳನ್ನು ಉಪಯೋಗಿಸುತ್ತಾರೆ. ಎರಕಗಳಲ್ಲಿನ ಪೊಳ್ಳುಗಳು, ಬೆಸುಗೆಯಲ್ಲಿನ ಬಿರುಕುಗಳನ್ನು ಮತ್ತು ಯಂತ್ರಗಳು, ಸಾರಿಗೆ ವಾಹನಗಳ ಭಾಗಗಳಲ್ಲಿನ ದೋಷಗಳನ್ನು ಪತ್ತೆ
ಹಚ್ಚುವುದು ಹಾಗೂ ಹರಳುಗಳ ರಚನೆಯ ಅಧ್ಯಯನದಲ್ಲೂ ಸಹ ಕ್ಷ-ಕಿರಣಗಳನ್ನು ಉಪಯೋಗಿಸುತ್ತಾರೆ. ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ರೇಡಿಯೋಲಜಿಯ ಪಾತ್ರ ತುಂಬಾ ದೊಡ್ಡದು. ಆದ್ದರಿಂದ ಅವುಗಳೆಲ್ಲವನ್ನೂ ಸ್ಮರಿಸುವ ಉದ್ದೇಶ ದಿಂದ ಪ್ರತಿ ವರ್ಷ ನವೆಂಬರ್ -8ರಂದು ಜಗತ್ತಿನಾದ್ಯಂತ ವಿಶ್ವ ರೇಡಿಯೋಲಜಿ ದಿನವನ್ನು ಆಚರಿಸಲಾಗುತ್ತದೆ.

ಈ ಆಚರಣೆಯನ್ನು 2012ರ ನವೆಂಬರ್-8ರಿಂದ ಆರಂಭಿಸಲಾಯಿತು. ವಿಶ್ವ ರೇಡಿಯೋಲಜಿ ದಿನ ನವೆಂಬರ್-8ರಂದೇ ಏಕೆ ಆಚರಿಸಲಾಗುತ್ತದೆ? ನವೆಂಬರ್-8 ಎಂಬುದು ಎಕ್ಸ-ರೇ ಕಂಡುಹಿಡಿದ ವಾರ್ಷಿಕೋತ್ಸವದ ದಿನವಾಗಿದೆ. ಅಂದರೆ ಅದೇ ದಿನ ನವೆಂಬರ್-8, 1895ರಲ್ಲಿ ವಿಲ್‌ಹೆಲ್ಮ ರಾಂಟ್ ಜೆನ್ ಅವರು ಎಕ್ಸ-ರೇಯನ್ನು ಕಂಡುಹಿಡಿದ ಗೌರವಾರ್ಥವಾಗಿ ಅವರ ಕೊಡುಗೆಯನ್ನು ಸ್ಮರಿಸುವುದಕ್ಕಾಗಿಯೇ ವಿಶ್ವ ರೇಡಿಯೋಲಜಿ ದಿನವನ್ನು ಆಚರಿಸಲಾಗುತ್ತದೆ. ಇವರ ಈ ಎಕ್ಸ-ರೇ ಕಿರಣಗಳ ಸಂಶೋಧನೆಗಾಗಿ 1901ರಲ್ಲಿ ಪ್ರಥಮ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.

ವಿಲ್‌ಹೆಲ್ಮ ರಾಂಟ್‌ಜೆನ್ ಸ್ಮರಣೆ- ಎಕ್ಸ-ರೇ ಎಂಬ ಪದದ ಪರಿಚಯಲ್ಲದವರು ಈ ಕಾಲದಲ್ಲಿ ಯಾರೊಬ್ಬರು ಇರಲಾರರು. ಇದರಿಂದ ಪರೀಕ್ಷೆಗೆ ಒಳಗಾಗದವರು ತುಂಬಾ ಕಡಿಮೆ ಎಂದೇ ಹೇಳಬಹುದು. ಅಂದರೆ ಅಷ್ಟೊೊಂದು ಮಹತ್ವವನ್ನು ಎಕ್ಸ-ರೇ ಪಡೆದಿದೆ. ಇಂತಹ ಎಕ್ಸ-ರೇ ಕಂಡುಹಿಡಿದ ಇವರು 1845ರ ಮಾರ್ಚ್-22ರಂದು ಜರ್ಮನಿಯ ಲೆನೆಪ್ ಎಂಬಲ್ಲಿ ಜನಿಸಿದರು.

ಶಾಲಾ ವಿದ್ಯಾಭ್ಯಾಸ ಮಾಡಿದ್ದು ಹಾಲೆಂಡ್‌ನಲ್ಲಿ. ಮುಂದೆ ಝೂರಿಚ್‌ನ ಪಾಲಿಟೆಕ್ನಿಕ್ ಇನ್‌ಸ್ಟಿಟ್ಯೂಟ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದರು. ಇದೇ ಝೂರಿಚ್ ವಿಶ್ವವಿದ್ಯಾಲಯದಲ್ಲಿ ಅನಿಲಗಳ ಅಧ್ಯಯನ ಮೇಲೆ ಡಾಕ್ಟರೇಟ್ ಪದವಿ ಪಡೆದರು. 1888ರಲ್ಲಿ ಜರ್ಮನಿಯ ವೊಜ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ನೇಮಕವಾದರು. ಮುಂದೆ ಮ್ಯೂನಿಚ್ ವಿಶ್ವವಿದ್ಯಾಲಯದಲ್ಲಿ 1900ರಿಂದ ತನ್ನ ನಿವೃತ್ತಿಯವರೆಗೆ ಭೌತ ವಿಜ್ಞಾನ ವಿಭಾಗದ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸಿದರು.

ತನ್ನ ಸಂಶೋಧನೆಗಳನ್ನು ಎಂದಿಗೂ ಲಾಭದ ಉದ್ದೇಶಕ್ಕಾಗಿ ಬಳಸಿಕೊಳ್ಳಲಿಲ್ಲ. ಸಂಶೋಧನೆಗಳು ಸಮಾಜಕ್ಕಾಗಿ ಜನ ಸಾಮಾನ್ಯರ ಕಲ್ಯಾಣಕ್ಕಾಗಿರಬೇಕೆಂದು ಬಯಸಿದ ಮಾನವೀಯತೆಯುಳ್ಳ ಮಹಾನ್ ವಿಜ್ಞಾನಿಯಾಗಿದ್ದರು. ತನ್ನ ನಾಮಾಂಕಿತ ರಾಂಟ್ಜನ್ ಕಿರಣ, ರಾಂಟ್ಜನೋಗ್ರಫಿ, ರಾಂಟ್ಜನೈಸೇಷನ್‌ನಂಥ ವೈಜ್ಞಾನಿಕ ಪದಗಳನ್ನು ಬಳಸುವುದಕ್ಕೂ ಆತನ ಸಹಮತ ವಿರಲಿಲ್ಲ. ಅಷ್ಟೇ ಅಲ್ಲ ಅವರಿಗೆ ದೊರೆತಿದ್ದ ನೋಬೆಲ್ ಪ್ರಶಸ್ತಿಯ ಹಣವನ್ನು ಕೂಡ ವಿಶ್ವವಿದ್ಯಾಲಯಕ್ಕೆ ನೀಡಿದ್ದರು.

ಇಂತಹ ಮಹಾನ್ ವಿಜ್ಞಾನಿ ಕ್ಯಾನ್ಸರ್‌ನಿಂದ 1923ರಲ್ಲಿ ನಿಧನರಾದರು. ರಾಂಟ್‌ಜನ್ ಗೌರವಾರ್ಥ ಆಧುನಿಕ ಆವರ್ತಕ ಕೋಷ್ಟಕದಲ್ಲಿರುವ 111ನೇ ಧಾತುವನ್ನು ರಾಂಟ್ಜನಿಯಮ್ ಎಂದು ಹೆಸರಿಸಲಾಗಿದೆ. ರಾಂಟ್‌ಜನ್ ನಮ್ಮಿಿಂದ ದೂರವಾಗಿರ ಬಹುದು. ಆದರೆ ಅವರು ಕೊಡುಗೆ ನೀಡಿದ ಎಕ್‌ಸ್‌-ರೇ ಮೂಲಕ ಸದಾ ಕಾಲ ನಮ್ಮೊೊಂದಿಗೆ ಜೀವಂತವಾಗಿದ್ದಾರೆ ಎಂದೇ ಹೇಳಬಹುದು.