Wednesday, 11th December 2024

ಮದ್ಯಪಾನ ಮಾಡದವರಿಗೊಂದು ಚೆಂದದ ಪದ ಟೀಟೋಟಲರ್‌ !

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್‌

ಮೊನ್ನೆ ಹೀಗೇ ಆಯಿತು. ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸದಸ್ಯರೊಬ್ಬರಿಗೆ,’ನೀವು ಟೀಟೋಟಲರ್ರಾ?’ ಎಂದು ಕೇಳಿದರು.

ಅವರಿಗೆ ಕೇಳಿಸಿತೋ ಇಲ್ಲವೋ, ಅವರು ತಕ್ಷಣ ಉತ್ತರ ಹೇಳಲಿಲ್ಲ. ಕೊನೆಗೆ ಸಿದ್ದರಾಮಯ್ಯನವರೇ, ‘ನೀವು ಗುಂಡು ಹಾಕ್ತೀರಾ, ಇಲ್ಲವಾ?’ ಎಂದು ಕೇಳಿದರು. ಪ್ರಾಯಶಃ ಆ ಸದಸ್ಯರು ‘ಟೀಟೋಟಲರ್’ ಪದ ಕೇಳಿರಲಿಕ್ಕಿಲ್ಲ ಅಥವಾ ಸಿದ್ದರಾಮಯ್ಯ ಹೇಳಿದ್ದು ಕೇಳಿಸಿರಲಿಕ್ಕಿಲ್ಲ. ಮದಿರಪಾನ ಅಥವಾ ಆಲ್ಕೋಹಾಲ್ ಸೇವಿಸದವರಿಗೆ (a person who does not drink alcohol) ಇಂಗ್ಲೀಷಿನಲ್ಲಿ teetotaller ಅಂತಾರೆ.

ಜೀವನದಲ್ಲಿ ಗುಂಡು ಹಾಕದವರಿಗೆ ಈ ಪದದ ಅರ್ಥ ಗೊತ್ತಿರಬೇಕು. ತಮಾಷೆಯೆಂದರೆ ಗುಂಡು ಹಾಕದ ಅನೇಕರಿಗೇ ಈ ಪದದ
ಅರ್ಥ ಗೊತ್ತಿರುವುದಿಲ್ಲ ಮತ್ತು ಅವರು ಈ ಪದವನ್ನೇ ಕೇಳಿರುವುದಿಲ್ಲ. ‘ನೀನು ಟೀಟೋಟಲರ್ರಾ?’ ಎಂದು ಕೇಳಿದರೆ, ಹಿಂದೆ -ಮುಂದೆ ನೋಡುತ್ತಾರೆ. ಗುಂಡು ಹಾಕದವರಿಗಿಂತ, ಗುಂಡು ಹಾಕುವವರಿಗೆ ‘ಟೀಟೋಟಲರ್’ ಪದದ ಅರ್ಥ ಗೊತ್ತಿರುತ್ತದೆ ಮತ್ತು ಇದು ಅನುಭವದ ಮಾತು ಎಂದು ‘ನಿತ್ಯ ಗುಂಡುಗಲಿ’ ಪತ್ರಕರ್ತ ವೈಎನ್ಕೆ ಹೇಳುತ್ತಿದ್ದರು.

My friend worked at the Snapple (ಅಂದರೆ ಆಪಲ್ ಜ್ಯುಸ್) factory and got paid to count all the bottles. He was a real teetotaler ಎಂದು ವೈಎನ್ಕೆ ಪನ್ ಮಾಡುತ್ತಿದ್ದರು. ಟೀಟೋಟಲರ್ ಪದಕ್ಕೆ one who abstains from strong drink, sometimes
totally, sometimes tolerably totally ಎಂದೂ ಹಾಸ್ಯಮಯವಾಗಿ ವ್ಯಾಖ್ಯಾನಿಸುತ್ತಿದ್ದರು. ‘ಟೀಟೋಟಲರ್’ ಬಗ್ಗೆ ವೈಎನ್ಕೆ ಒಂದು ಜೋಕು ಹೇಳುತ್ತಿದ್ದರು.

ಒಮ್ಮೆ ಮದ್ಯಪಾನ ವಿರೋಧಿ ಸಂಘದ ಸದಸ್ಯರು ತೊಂಬತ್ತು ವರ್ಷದ ’ಟೀಟೋಟಲರ್’ನ್ನು ಭೇಟಿ ಮಾಡಿ, ’ಮದ್ಯಪಾನ
ಮಾಡದಿರುವುದರಿಂದಲೇ ನಾನು ಹೆಚ್ಚು ವರ್ಷ ಬದುಕಿದ್ದೇನೆ. ನನ್ನ ದೀರ್ಘ ಆಯುಷ್ಯದ ಗುಟ್ಟೇನೆಂದರೆ, ಮದ್ಯಪಾನ
ಮಾಡದಿರುವುದು ಎಂಬ ಹೇಳಿಕೆಯನ್ನು ನೀವು ನೀಡಿದರೆ, ಅದನ್ನು ನಾವು ನಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತೇವೆ’ ಎಂದು
ಹೇಳಿದರು. ಅದಕ್ಕೆ ಆ ವೃದ್ಧರು ಒಪ್ಪಿಕೊಂಡರು. ಆ ವೃದ್ಧ ಟೀಟೋಟಲರ್ ಮಾತುಗಳನ್ನು ರೆಕಾರ್ಡ್ ಮಾಡಿಕೊಳ್ಳಲು ಮತ್ತು ಅದನ್ನು ಚಿತ್ರೀಕರಿಸಿಕೊಳ್ಳಲು ಆ ಸದಸ್ಯರು ಸಿದ್ಧರಾಗುತ್ತಿರುವಾಗ, ಪಕ್ಕದ ಮನೆಯಿಂದ ಅಬ್ಬರದ ಹಾಡು, ಸಂಗೀತ ಕೇಳಿ ಬರುತ್ತಿತ್ತು.

‘ನಿಮ್ಮ ಮಾತುಗಳನ್ನು ರೆಕಾರ್ಡ್ ಮಾಡಿಕೊಳ್ಳಲು ಆಗುತ್ತಿಲ್ಲ, ಇದೇನು ಇಷ್ಟೊಂದು ಗಲಾಟೆ?’ ಎಂದು ಮದ್ಯಪಾನ ವಿರೋಧಿ ಸಂಘದ ಸದಸ್ಯರು ಕೇಳಿದರು. ಅದಕ್ಕೆ ಆ ತೊಂಬತ್ತು ವಯಸ್ಸಿನ ಟೀಟೋಟಲರ್ ಹೇಳಿದರು – ‘ಇನ್ನ್ಯಾರು, ನನ್ನ ತಂದೆಯವರು. ಬೆಳಗ್ಗೆಯಾಗುತ್ತಿದ್ದಂತೆ ಚೆನ್ನಾಗಿ ಗುಂಡು ಹಾಕಿ, ಜೋರಾಗಿ ಹಾಡು ಹಾಕಿಕೊಂಡು, ಡ್ಯಾನ್ಸ್ ಮಾಡುತ್ತಾರೆ.’ ಮದ್ಯಪಾನ ವಿರೋಧಿ ಸಂಘದ ಸದಸ್ಯರು ಪೆಚ್ಚಾದರು.

ಟೀಟೋಟಲರ್ ವ್ಯುತ್ಪತ್ತಿ
ಕುಡಿಯದಿರುವವರಿಗೆ ಟೀಟೋಟಲರ್ ಎಂದು ಯಾಕೆ ಕರೆಯುತ್ತಾರೋ? ಅದರ ಬದಲು non drinker ಎಂದು ಹೇಳಬಹುದು ಅಥವಾ sober ಎಂದೂ ಹೇಳಬಹುದು. ಆದರೆ ಯಾರೂ ಹಾಗೆ ಹೇಳುವುದಿಲ್ಲ. ಎಲ್ಲರೂ ತಾವು ಟೀಟೋಟಲರ್ ಎಂದೇ ಹೇಳಿಕೊಳ್ಳುತ್ತಾರೆ. ಟೀಟೋಟಲರ್ ಇದು ಬ್ರಿಟಿಷ್ ಮೂಲದ ಪದ. ಉಗ್ಗು ಮಾತಾಡುವವನೊಬ್ಬ ತಾನು ಕುಡಿಯುವುದಿಲ್ಲ, ನಾನು ಸಂಪೂರ್ಣ (Total) ಪಾನಮುಕ್ತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಾಗ ಟೀ ..ಟೀ… ಟೋಟಲ್ ಎಂದು ತೊದಲು ತ್ತಿದ್ದನಂತೆ. ಅಲ್ಲಿಯೇ ಇದ್ದ ಭಾಷಾ ತಜ್ಞ ರಿಚರ್ಡ್ ಬ್ಲಾಕ್ ಅವನಿಗೆ ಟೀಟೋಟಲರ್ ಎಂದು ಹೆಸರಿಟ್ಟನಂತೆ. ಅದೇ ಪದ ಕೊನೆಗೆ ಬಳಕೆಗೆ ಬಂದಿತು.

ಟೀಟೋಟಲರ್ ಪದಕ್ಕಿರುವ ಫೋರ್ಸ್ sober ಪದಕ್ಕಿಲ್ಲ ಎಂದು ಗುಂಡು ಹಾಕದ ಇಂಗ್ಲಿಷ್ ಬಲ್ಲವರ ಅಭಿಪ್ರಾಯ. ಹೀಗಾಗಿ ತಾನು sober ಎಂದು ಹೇಳಿಕೊಳ್ಳುವುದಕ್ಕಿಂತ ಎದೆಯುಬ್ಬಿಸಿ, ‘ನಾನು ಟೀಟೋಟಲರ್’ ಎಂದು ಹೇಳಿಕೊಳ್ಳುತ್ತಾರೆ. ಅದಕ್ಕಿಂತ  ಮುಖ್ಯವಾಗಿ, sober ಅಂದ್ರೆ ಗುಂಡು ಹಾಕುವುದನ್ನು ಬಿಟ್ಟವನು ಎಂಬ ಅರ್ಥವೂ ಇದೆ. ಅಂದರೆ ಆತ ಒಂದು ಕಾಲಕ್ಕೆ ಕುಡಿಯುತ್ತಿದ್ದವ. ಆದರೆ ಟೀಟೋಟಲರ್ ಹಾಗಲ್ಲ. ಆತ ಎಂದೂ ಗುಂಡಿನ ರುಚಿಯನ್ನೇ ನೋಡದವ.

ಟೀಟೋಟಲರ್ ಪದಕ್ಕೆ ಸಮರ್ಥವಾಗಿ straight – edge, non – alcholic ಅಥವಾ dry ಎಂಬ ಪದಗಳೂ ಇವೆ. ಆದರೆ ಅವನ್ನು ಅಷ್ಟು ಹೆಚ್ಚಾಗಿ ಬಳಸುವುದಿಲ್ಲ. ಹೀಗಾಗಿ ಆ ಪದಗಳನ್ನು ಬಳಸಿದರೆ ಟೀಟೋಟಲರ್ ಬಳಸಿದ ಪರಿಣಾಮ ಇಲ್ಲ. ಹದಿನೆಂಟನೇ ಶತಮಾನದ ಆರಂಭದಲ್ಲಿ ಇಂಗ್ಲೆಂಡಿನಲ್ಲಿ ಆಲ್ಕೋಹಾಲ್ ಬದಲಿಗೆ tea (ಚಹ) ಕುಡಿಯಿರಿ ಎಂಬ ಅಭಿಯಾನ ಆರಂಭವಾದದ್ದೇ ಟೀಟೋಟಲ್ ಪದದ ವ್ಯುತ್ಪತ್ತಿಗೆ ಕಾರಣವಾಯಿತು ಎಂದು ವಾದಿಸುವವರೂ ಇದ್ದಾರೆ.

ಸಂಪೂರ್ಣ (Total) ಚಹ (Tea) ಅಭಿಯಾನ ಈ ಪದದ ಹುಟ್ಟಿಗೆ ಕಾರಣವಾಯಿತು ಎಂದು ಹೇಳುವವರೂ ಇದ್ದಾರೆ. ಒಮ್ಮೆ ಜಾರ್ಜ್ ಬರ್ನಾರ್ಡ್ ಶಾ ಗೆ ‘ನೀವು ಟೀಟೋಟಲರಾ? ಎಂದು ಕೇಳಿದ್ದಕ್ಕೆ ಅವರು ಹೇಳಿದ್ದು – I’m only a beer teetotaler, not a champagne teetotaler; I don’t like beer. ಪಾರ್ಟಿಯಲ್ಲಿ ಯಾರಿಗೂ ಬೇಡದವನಾಗಿ ಒಬ್ಬನೇ , ಸುಮ್ಮನೆ ಮೂಲೆಯಲ್ಲಿ
ಕುಳಿತವನೂ ಟೀಟೋಟಲರ್ ಎಂದೂ ಹೇಳಬಹುದು.

ನಿಧನ ಮತ್ತು ಗೊಂದಲ
ಎಲ್ಲರಿಗೂ ಎಲ್ಲಾ ಶಬ್ದಗಳ ಅರ್ಥ ಗೊತ್ತಿರುವುದಿಲ್ಲ, ‘ಟೀಟೋಟಲರ್’ ಪದದಂತೆ. ಆದರೆ ಗೊತ್ತಿರುವಂತೆ ತಲೆ ಅಡಿಸುತ್ತಾರೆ. ಇದಕ್ಕೆ ಯಾರೂ ಹೊರತಲ್ಲ. ಇನ್ನು ಕೆಲವರು ಆ ಪದವನ್ನು ಕೇಳಿರುತ್ತಾರೆ. ಆದರೆ ಅದರ ಅರ್ಥವನ್ನು ತಪ್ಪಾಗಿ ಗ್ರಹಿಸಿರುತ್ತಾರೆ. ಅದಕ್ಕೆ ಇಂಗ್ಲಿಷಿನ passed away (ನಿಧನ ಹೊಂದುವುದು) ಒಂದು ಒಳ್ಳೆಯ ನಿದರ್ಶನ.

ಒಮ್ಮೆ ಬಾಸ್ ರೂಮಿನ ಮುಂದೆ ಕುಳಿತ ಅವರ ಸೆಕ್ರೆಟರಿಗೆ, ‘ಬಾಸ್ ಎಲ್ಲಿ?’ ಎಂದು ಕೇಳಿದರಂತೆ. ‘ಈಗ ತಾನೇ ನನ್ನ ಮುಂದೆಯೇ ಹಾದುಹೋದರಲ್ಲ’ ಎಂದು ಹೇಳಿದ್ದರೆ ಏನೂ ಸಮಸ್ಯೆ ಆಗುತ್ತಿರಲಿಲ್ಲ. ಅದರ ಬದಲು ಆಕೆ, ‘ಸರ್, He just passed away in front of me’ ಎಂದು ಹೇಳಿದಳಂತೆ. ಅವಳು passed away ಅಂದ್ರೆ ಹಾದು ಹೋಗುವುದು ಎಂದು ಭಾವಿಸಿದ್ದಳು.

ಒಮ್ಮೆ ರಾಜ್ಯ ಸರಕಾರದ ಮಂತ್ರಿಯೊಬ್ಬರು, ಅಸ್ವಸ್ಥರಾಗಿದ್ದ ಹಿರಿಯ ಸಾಹಿತಿಯೊಬ್ಬರನ್ನು ಕಂಡು ಅವರ ಆರೋಗ್ಯ
ವಿಚಾರಿಸಲೆಂದು ಅವರ ಮನೆಗೆ ಹೊರಟರಂತೆ. ಸಾಹಿತಿಯ ಮನೆಯ ಮುಂದೆ ಇನ್ನೇನು ಇಳಿಯಬೇಕು ಎನ್ನುವಷ್ಟರಲ್ಲಿ
ಅವರಿಗೆ ಮುಖ್ಯಮಂತ್ರಿಯಿಂದ ಫೋನ್ ಬಂದಿತು. ತಕ್ಷಣ ಬರುವಂತೆ ಸೂಚಿಸಿದರು. ಅಷ್ಟೊತ್ತಿಗೆ ಸಾಹಿತಿಯ ಮನೆ ತಲುಪಿದರು. ಅವರು ಕಾರು ಇಳಿಯುತ್ತಲೇ, ವಿದೇಶದಲ್ಲಿ ಓದಿದ ಸಾಹಿತಿಯ ಮಗ, Sir, he is already departed ಎಂದು ಹೇಳಿದ.

ಆ ಮಂತ್ರಿ departed ಅಂದ್ರೆ ಅದೇನು ಅರ್ಥ ಮಾಡಿಕೊಂಡರೋ ಏನೋ, ‘ನಿಮ್ಮ ಅಪ್ಪನಿಗೆ ಹೇಳಿ, ನಾನು ನಿಮ್ಮನ್ನು ನೋಡಲು ಬಂದಿದ್ದೆ, ಆದರೆ ಇಲ್ಲಿಗೆ ಬರುತ್ತಿರುವಾಗ, ಸಿಎಂ ಸಾಹೇಬ್ರ ಫೋನ್ ಬಂತು, ಅರ್ಜೆಂಟ್ ಆಗಿ ಬರಲು ಹೇಳಿದ್ದರಿಂದ, ತಕ್ಷಣ ಅವರನ್ನು ಕಾಣಲು ಹೋಗುತ್ತಿದ್ದೇನೆ. ನಾಳೆ ಬೆಳಗ್ಗೆ ನಿಮ್ಮನ್ನು ನೋಡಲು ಬರುತ್ತಿದ್ದೇನೆ ಅಂತ ತಿಳಿಸಿ ಬಿಡಿ’ ಎಂದು ಅಲ್ಲಿಂದ ಹೊರಟು ಬಿಟ್ಟರು. ಸಾಹಿತಿ ಮಗ ತಲೆತಲೆ ಚಚ್ಚಿಕೊಂಡ. departed ಅಂದ್ರೆ ನಿಧನರಾಗಿದ್ದಾರೆ ಎಂದು ಅವರಿಗೆ ಗೊತ್ತಾಗಿರಲಿಲ್ಲ.

ಯಾರಾದರೂ ನಿಧನರಾದಾಗ demise, expire, decease, succumb, no more ಮುಂತಾದ ಪದಗಳನ್ನು ಬಳಸಿದಾಗ, ಎಲ್ಲರಿಗೂ ಅರ್ಥವಾಗುತ್ತದೆ ಎಂದು ಭಾವಿಸಬಾರದು. ಕೆಲವರಾದರೂ ತಪ್ಪು ಭಾವಿಸುವ ಸಾಧ್ಯತೆಯಿರುತ್ತದೆ. ಒಮ್ಮೆ ಕನ್ನಡದ ಪ್ರಮುಖ ಪತ್ರಿಕೆಯ ಸುದ್ದಿಮನೆಯಲ್ಲಿ As many as 40 people have been feared dead ಎಂದು ಪಿಟಿಐ ಸುದ್ದಿ ಸಂಸ್ಥೆ ಕಳಿಸಿದ ವಾಕ್ಯ ವನ್ನು ಉಪಸಂಪಾದಕರೊಬ್ಬರು, ‘ಸುಮಾರು ನಲವತ್ತು ಮಂದಿ ಭಯದಿಂದ ಸತ್ತಿದ್ದಾರೆ’ ಎಂದು ಅನುವಾದ ಮಾಡಿದ್ದರು. ಆ
ವಾಕ್ಯದಲ್ಲಿ feared ಪದ ಅವರಲ್ಲಿ ‘ಭಯ’ವನ್ನು ಹುಟ್ಟಿಸಿತ್ತು!

ಯಾರಾದರೂ ಸತ್ತಾಗ, ಕನ್ನಡ ಬಲ್ಲವರಿಗೆ, ಕನ್ನಡದಲ್ಲಿಯೇ ಹೇಳಿದರೆ ಸಮಸ್ಯೆ ಆಗುವುದಿಲ್ಲ. ಇಂಗ್ಲಿಷಿನಲ್ಲಿ ಹೇಳಬೇಕೆನಿಸಿದಾಗ, dead, died ಎಂದರೂ ಸಮಸ್ಯೆ ಆಗುವುದಿಲ್ಲ. ಅದು ಬಿಟ್ಟು ಬೇರೆ ಪದಗಳನ್ನು ಬಳಸಿದರೆ, ಕೆಲವರಾದರೂ ತಪ್ಪು ಭಾವಿಸುತ್ತಾರೆ.

ಪರಸ್ಪರ ಅಭಿನಂದನೆ

ಇಂಗ್ಲಿಷ್ ಭಾಷೆಯಲ್ಲಿಯೇ ಅತ್ಯಂತ ಪ್ರಭಾವಶಾಲಿ ಡಿಕ್ಷನರಿ ಎಂದು ಹೆಸರುವಾಸಿಯಾದ ಅ Dictionary of the English Language  ಬರೆದವರು ಸ್ಯಾಮ್ಯುಯಲ್ ಜಾನ್ಸನ್. ಇದನ್ನು ಬರೆದ ೧೭೩ ವರ್ಷಗಳ ನಂತರ Oxford English Dictionary ಪ್ರಕಟವಾಯಿತು. ಅಲ್ಲಿ ತನಕ ಜಾನ್ಸನ್ ಬರೆದ ಡಿಕ್ಷನರಿಯನ್ನೇ ಎಲ್ಲರೂ ರೆಫರ್ ಮಾಡುತ್ತಿದ್ದರು.

ಒಮ್ಮೆ ಮಹಿಳೆಯೊಬ್ಬಳು ಜಾನ್ಸನ್ ಅವರನ್ನು ಭೇಟಿಯಾಗಿ, ‘ಮಿಸ್ಟರ್ ಜಾನ್ಸನ್, ನಾನು ನಿಮ್ಮನ್ನು ಅಭಿನಂದಿಸಲು
ಬಂದಿದ್ದೇನೆ’ ಎಂದು ಹೇಳಿದಳು. ಅದಕ್ಕೆ ಜಾನ್ಸನ್, ಯಾಕೆ ಎಂದು ಕೇಳಿದರು. ‘ನಾನು ನಿಮ್ಮ ಡಿಕ್ಷನರಿಯನ್ನು ಕಳೆದ ಎರಡು ತಿಂಗಳಿನಿಂದ ಕಣ್ಣಲ್ಲಿ ಕಣ್ಣಿಟ್ಟು ಓದಿದ್ದೇನೆ. ಅದರಲ್ಲಿ ಯಾವ ಅಶ್ಲೀಲ ಮತ್ತು ಅವಹೇಳನಕಾರಿ ಪದಗಳಿಲ್ಲ. ಅದಕ್ಕಾಗಿ ನಿಮ್ಮನ್ನು ಅಭಿನಂದಿಸಲೆಂದು ಬಂದಿದ್ದೇನೆ’ ಎಂದು ಹೇಳಿದಳು.

ಆಗ ಜಾನ್ಸನ್ ಹೇಳಿದರು – ‘ನನ್ನ ಡಿಕ್ಷನರಿಯಲ್ಲಿ ನೀವು ಎರಡು ತಿಂಗಳಿನಿಂದ ಅದಕ್ಕಾಗಿ ಹುಡುಕಾಟ ಮಾಡಿದಿರಾ? ಹಾಗಾದರೆ ನಾನು ನಿಮ್ಮನ್ನು ಅಭಿನಂದಿಸುತ್ತೇನೆ.’ ಎಲ್ಲವನ್ನೂ ಬರೆಯಬೇಕು, ಹೇಗೆ ? ಕೆಲವು ಸಲ ಗೊತ್ತಿರುವುದೆಲ್ಲವನ್ನೂ ಹೇಳಲಾಗುವು ದಿಲ್ಲ. ಹೇಳಲೂ ಬಾರದು. ಹಾಗಂತ ಹೇಳದೇ ಇರುವಂತೆಯೂ ಇಲ್ಲ. ಅಂಥ ಸಂದರ್ಭದಲ್ಲಿ ಹೇಗೆ ಹೇಳಬೇಕೋ, ಹಾಗೆ ಹೇಳಬೇಕು.

ಯಾರನ್ನೂ ನೋಯಿಸದೇ, ತಪ್ಪು ಅರ್ಥ ಉಂಟಾಗದಂತೆ, ಆದರೆ ಹೇಳಬೇಕಾದುದನ್ನೆಲ್ಲ ಹೇಳಬೇಕು. ಇದನ್ನು ಕೆಲವರು ಬಹಳ ಚೆಂದವಾಗಿ ಮೈಗೂಡಿಸಿಕೊಂಡಿರುತ್ತಾರೆ. ಅಂತ ಒಂದು ಪ್ರಸಂಗ. ಒಮ್ಮೆ ಶ್ರೀಮಂತ ಉದ್ಯಮಿಯೊಬ್ಬ ಬಾಲಿವುಡ್ ನಟಿಯೊಬ್ಬ ಳನ್ನು ಭೇಟಿಯಾದ. ಅವರಿಬ್ಬರಲ್ಲಿ ಮೊದಲ ನೋಟದಲ್ಲಿ ಪ್ರೇಮಾಂಕುರವಾಯಿತು. ಅವರಿಬ್ಬರೂ ಒಟ್ಟಿಗೆ ತಿರುಗಾಡಲಾ ರಂಭಿಸಿದರು. ಹದಿನೈದು ದಿನಗಳ ನಂತರ ಉದ್ಯಮಿಗೆ ಅವಳನ್ನು ಮದುವೆಯಾಗಬೇಕು ಎಂದೆನಿಸಿತು.

ಆದರೆ ಅವಳ ಹಿನ್ನೆಲೆಯೇನು ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದೆನಿಸಿತು. ಅದಕ್ಕಾಗಿ ಖಾಸಗಿ ಪತ್ತೇದಾರಿ ಸಂಸ್ಥೆಯ
ಮುಖ್ಯಸ್ಥನನ್ನು ಸಂಪರ್ಕಿಸಿದ. ಅವಳ ತಂದೆ-ತಾಯಿ, ಕುಟುಂಬ, ಅವಳ ಒಡನಾಟ, ನಡತೆ, ಸ್ನೇಹಿತರು, ಹವ್ಯಾಸ ಮುಂತಾದ ಖಾಸಗಿ ಸಂಗತಿಗಳ ಬಗ್ಗೆ ಮಾಹಿತಿ ನೀಡುವಂತೆ ಹೇಳಿದ. ಖಾಸಗಿ ಪತ್ತೇದಾರ ಮಾಹಿತಿ ಕಲೆ ಹಾಕಲಾರಂಭಿಸಿದ.

ಈ ಮಧ್ಯೆ, ಉದ್ಯಮಿ ಮತ್ತು ನಟಿಯ ಒಡನಾಟ ಗಾಢವಾಯಿತು. ಮಾಹಿತಿ ಕಲೆ ಹಾಕಲಾರಂಭಿಸಿದ ಕೆಲ ದಿನಗಳಲ್ಲಿ ಪತ್ತೇದಾರ ನಿಗೆ, ಉದ್ಯಮಿ ಮತ್ತು ನಟಿಯ ಲವ್ವಿ – ಡವ್ವಿ ಗೊತ್ತಾಯಿತು. ಅದನ್ನು ಹೇಗೆ ತನ್ನ ವರದಿಯಲ್ಲಿ ಬರೆಯಬೇಕು ಎಂಬ ಬಗ್ಗೆ ತಲೆ ಕೆಡಿಸಿಕೊಂಡ. ಸರಿಯಾದ ವರದಿ ನೀಡದಿದ್ದರೆ, ತಾನು ಸರಿಯಾಗಿ ಮಾಹಿತಿ ನೀಡಿಲ್ಲ ಎಂದು ಭಾವಿಸಬಹುದು. ಹಾಗೆಂದು ಇರುವುದನ್ನು ನೇರವಾಗಿ ಬರೆದರೆ, ಉದ್ಯಮಿ ತಪ್ಪು ಭಾವಿಸಬಹುದು ಎಂಬ ದ್ವಂದ್ವ ಕಾಡಲಾರಂಭಿಸಿತು. ಕೊನೆಗೆ ಆತ ಬಹಳ ಬುದ್ಧಿವಂತಿಕೆಯಿಂದ ಹೀಗೆ ಬರೆದ.

‘ಸದರಿ ನಟಿ ಸಮಾಜಿಕ ವಲಯದಲ್ಲಿ ಮತ್ತು ತನ್ನ ಕ್ಷೇತ್ರದಲ್ಲಿ ಒಳ್ಳೆಯ ಗೌರವ ಮತ್ತು ಉತ್ತಮ ಸ್ಥಾನಮಾನವನ್ನು ಹೊಂದಿದ್ದಾಳೆ. ಅವಳ ಹಿನ್ನೆಲೆಯೂ ಪರಿಶುದ್ಧವಾಗಿದೆ. ಅವಳ ನಡತೆ ಬಗ್ಗೆ ಯಾವ ಪುಕಾರುಗಳಿಲ್ಲ. ಅವಳ ಕುಟುಂಬಸ್ಥರು ಸಹ
ಮರ್ಯಾದಸ್ಥರಾಗಿzರೆ. ಅವರ ಮೇಲೆ ಯಾವ ಕಪ್ಪುಚುಕ್ಕೆಯೂ ಇಲ್ಲ. ಕೊನೆಯಲ್ಲಿ, ಗಮನಿಸಬೇಕಾದ ಒಂದು ಪ್ರಮುಖ ಸಂಗತಿಯೆಂದರೆ, ಕಳೆದ ಒಂದು ತಿಂಗಳಿನಿಂದ ಸದರಿ ನಟಿ, ಉದ್ಯಮಿಯೊಬ್ಬನ ಜತೆ ತಿರುಗಾಡುತ್ತಿದ್ದಾಳೆ. ಆತನ ಕ್ಯಾರೆಕ್ಟರ್ ಸರಿ ಇಲ್ಲ.’