Friday, 13th December 2024

ಈ ಸೈನಿಕರ ತ್ಯಾಗಕ್ಕೆ ಬೆಲೆಯೇ ಇಲ್ಲವೆ ?

ಶಶಾಂಕಣ

ಶಶಿಧರ ಹಾಲಾಡಿ

ಸ್ವಾತಂತ್ರ್ಯ ಹೋರಾಟಗಾರರ ಕುರಿತು ನಾಟಕವೊಂದನ್ನು ರಚಿಸಿದರೆ, ಅದನ್ನು ನಮ್ಮ ಸರಕಾರವೇ ಬ್ಯಾನ್ ಮಾಡುವ ಸಾಧ್ಯತೆ ಇದೆಯೆ? ಛೆ, ಎಲ್ಲಾದರೂ ಉಂಟೆ!

ದೇಶಾಭಿಮಾನವನ್ನು ಹೆಚ್ಚಿಸುವ, ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ತ್ಯಾಗವನ್ನು ನೆನಪಿಸುವ ನಾಟಕವೇ ಆಗಲಿ, ಸಿನಿಮಾವೇ ಆಗಲಿ, ಪುಸ್ತಕವೇ ಆಗಲಿ, ಹೆಚ್ಚಿನ ಜನಪ್ರಿಯತೆಯನ್ನು ಗಳಿಸಬಹುದೇ ಹೊರತು, ನಿಷೇಧಕ್ಕೆ ಒಳಗಾಗುವ ಸಂಭವ
ಕಡಿಮೆ, ಅಲ್ಲವೆ? ಆದರೆ, ಅಂದಿನ ಪಶ್ಚಿಮ ಬಂಗಾಳದ ಕಾಂಗ್ರೆೆಸ್ ಸರಕಾರದ ಗ್ರಹಿಕೆ ಭಿನ್ನ.

ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಕಥನವನ್ನು ಹೊಂದಿದ್ದ ನಾಟಕವನ್ನು ಸರಕಾರವೇ ನಿಷೇಧಕ್ಕೆೆ ಒಳಪಡಿಸಿತು, ಮಾತ್ರ ವಲ್ಲ ಅದನ್ನು ಪ್ರದರ್ಶಿಸಿದವರನ್ನು ಜೈಲಿಗೆ ಕಳುಹಿಸಿತು! ಇದು ನಡೆದದ್ದು 1965ರಲ್ಲಿ. ಖ್ಯಾತ ನಟ, ನಿರ್ದೇಶಕ ಮತ್ತು ನಾಟಕ ಕಾರ ಉತ್ಪಲ್ ದತ್ ಅವರು ಕಲ್ಲೋಲ್ (ಕಲ್ಲೋಲ) ಎಂಬ ನಾಟಕವನ್ನು ರಚಿಸಿ, ಪ್ರದರ್ಶನಕ್ಕೆ ತಂದರು. ಎಡಪಂಥೀಯ ಚಿಂತಕರಾದ ಉತ್ಪಲ್ ದತ್, ಆ ನಾಟಕದಲ್ಲಿ ನಮ್ಮದೇಶದ ಸ್ವಾತಂತ್ರ್ಯ ಹೋರಾಟದ ಒಂದು ಅಧ್ಯಾಯವನ್ನು ರಂಗ ರೂಪಕ್ಕೆ ಅಳವಡಿಸಿದ್ದರು. ಆ ನಾಟಕವು ಕೊಲ್ಕೊತ್ತಾದ ಮಿನರ್ವ ಥಿಯೇಟರ್‌ನಲ್ಲಿ ಅತಿ ದೀರ್ಘಕಾಲ ಪ್ರದರ್ಶನ ಕಂಡಿತು. ಆದರೇನು
ಮಾಡುವುದು, ಅಂದಿನ ಸರಕಾರವು ಆ ನಾಟಕವನ್ನು ಕಂಡು ಬೆದರಿತು.

1965ರಲ್ಲಿ ಅಲ್ಲಿದ್ದದ್ದು ಕಾಂಗ್ರೆಸ್ ಸರಕಾರ. ‘ಕಲ್ಲೋಲ’ ನಾಟಕವು ಜನರಿಗೆ ನೀಡುತ್ತಿದ್ದ ಸಂದೇಶವು ಅದೆಷ್ಟು ಪ್ರಬಲವಾಗಿ ತ್ತೆಂದರೆ, ಅದನ್ನು ಕಂಡ ಜನರು ಪ್ರಭಾವಿತರಾಗಿ ತಮ್ಮ ಸರಕಾರದ ವಿರುದ್ಧವೇ ಚಳವಳಿ ನಡೆಸಬಹುದು ಎಂದು ಸರಕಾರಕ್ಕೆ ಭಯವಾಯಿತು. ಕಲ್ಲೋಲ ನಾಟಕವನ್ನು ನಿಷೇಧಿಸಲಾಯಿತು. ನಿರ್ದೇಶಕ ಉತ್ಪಲ್ ದತ್ ಅವರನ್ನು ಹಲವು ತಿಂಗಳುಗಳ ಕಾಲ ಜೈಲಿನಲ್ಲಿ ಇರಿಸಲಾಯಿತು!

ಆ ನಾಟಕಕ್ಕೆ ಸ್ಫೂರ್ತಿ ನೀಡಿದ್ದ ನೌಕಾ ಸೇನೆಯ ಸೈನಿಕರ ಹೋರಾಟವು ಸರಕಾರವನ್ನೇ ನಡುಗಿಸಿದ ಪರಿ ಇದು. ‘ಕಲ್ಲೋಲ’ ನಾಟಕದ ವಿಷಯವೇನು ಗೊತ್ತಾಾ? 1946ರಲ್ಲಿ ಮುಂಬಯಿ ಮತ್ತು ಇತರ ಪ್ರದೇಶಗಳಲ್ಲಿ ನಡೆದ ‘ಮಿನಿ ಕ್ವಿಟ್ ಇಂಡಿಯಾ’ ಚಳವಳಿಯೇ ಆ ನಾಟಕದ ಹೂರಣ. ಸುಮಾರು 20,000ಕ್ಕೂ ನೌಕಾ ದಳದ ಸೈನಿಕರು (ರೇಟಿಂಗ್ಸ್‌ ಎಂದು ಕರೆಯಲ್ಪಟ್ಟಿದ್ದ
ನಾವಿಕರು) ಮತ್ತು ಮುಂಬಯಿಯ 1,00,000 ಜನಸಾಮಾನ್ಯರು, ವಿದ್ಯಾರ್ಥಿಗಳು ಭಾಗವಹಿಸಿದ ಈ ಬೃಹತ್ ಪ್ರಮಾಣದ ಹೋರಾಟವನ್ನು ಮರೆಯಲ್ಲಿಡದಲು ಅಂದಿನ ಕಾಂಗ್ರೆಸ್ ಪ್ರಯತ್ನ ನಡೆಸಿತ್ತೆ? ಅದಕ್ಕೇ, 1965ರಲ್ಲಿ, ಅಂದರೆ, ಆ ಹೋರಾಟ ನಡೆ
ದು 20 ವರ್ಷಗಳ ನಂತರ ಪ್ರದರ್ಶನಗೊಂಡ ‘ಕಲ್ಲೋಲ್’ ನಾಟಕವನ್ನು ಪಶ್ಚಿಮ ಬಂಗಾಲದ ಕಾಂಗ್ರೆಸ್ ಸರಕಾರ ಬ್ಯಾನ್ ಮಾಡಿತೆ? ಈ ರೀತಿ ತರ್ಕಿಸಲು ಹಲವು ಬಲವಾದ ಕಾರಣಗಳಿವೆ.

ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಅಧಿಕೃತ ಇತಿಹಾಸಕಾರರು, 1946ರಲ್ಲಿ ಮುಂಬಯಿ, ಕರಾಚಿ, ವಿಶಾಖಪಟ್ಟಣ ಮೊದ ಲಾದ ಸ್ಥಳಗಳಲ್ಲಿ ನಡೆದ ಈ ಸೈನಿಕರ ಮತ್ತು ನಾಗರಿಕರ ಹೋರಾಟವನ್ನು ಪ್ರಧಾನವಾಗಿ ಪ್ರಸ್ತಾಪಿಸುವುದೇ ಇಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದ ಆ ಸಾವಿರಾರು ಸೈನಿಕರ ತ್ಯಾಗ, 500 ಕ್ಕೂ ಹೆಚ್ಚು ನಾಗರಿಕರ ಸಾವು, ದೀರ್ಘ ಪ್ರಸ್ತಾಪಕ್ಕೇ ಅರ್ಹ ಎನಿಸದ ಕ್ಷುಲ್ಲಕ ಘಟನೆಯೇ, ನಮ್ಮ ಅಧಿಕೃತ ಇತಿಹಾಸಕಾರರಿಗೆ? 1946ರಲ್ಲಿ ಪ್ರಧಾನವಾಗಿ ಮುಂಬಯಿಯಲ್ಲಿ ನಡೆದ ಈ ಹೋರಾಟವು, ಬ್ರಿಟಿಷರನ್ನು ಭಾರತ ಬಿಟ್ಟು ಹೋಗುವಂತೆ ಮಾಡಿತು ಎಂಬುದಕ್ಕೆ ನಂತರದ ವರ್ಷಗಳಲ್ಲಿ ಹಲವು ಪ್ರಬಲವಾದ ಸಾಕ್ಷ್ಯಗಳು ದೊರೆತಿವೆ.

ನಮ್ಮ ದೇಶವನ್ನು ಬ್ರಿಟಿಷರು ತೊರೆದು ಹೋದಾಗ ಬ್ರಿಟನ್‌ನಲ್ಲಿ ಪ್ರಧಾನಿಯಾಗಿದ್ದವರು ಕ್ಲೆಮೆಂಟ್ ಆ್ಯಟ್ಲಿ. ಇವರು 1856ರಲ್ಲಿ ಭಾರತಕ್ಕೆ ಪ್ರವಾಸ ಬಂದಿದ್ದಾಗ, ಪಶ್ಚಿಮ ಬಂಗಾಳದ ಅಂದಿನ ರಾಜ್ಯಪಾಲ ಪಿ.ಬಿ.ಚಕ್ರವರ್ತಿಯ ಬಳಿ ಸಾಂದರ್ಭಿಕವಾಗಿ ಹೇಳಿ
ದ್ದರು ‘ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಕಟ್ಟಿದ ಐಎನ್‌ಎ ಸೈನ್ಯ ಮತ್ತು 1946ರಲ್ಲಿ ನಡೆದ ಮುಂಬಯಿಯ ಸೇನಾ ಪಡೆಯ ದಂಗೆ – ಇವೆರಡು ಘಟನೆಗಳು ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವಂತೆ ಮಾಡಿತು’.

ಇಷ್ಟು ಸ್ಪಷ್ಟವಾಗಿ ಆ್ಯಟ್ಲಿ ಹೇಳಿದ ಆ ‘ದಂಗೆ’ಯ ವಿವರಗಳೇನು? ನೋಡೋಣ. ಇದನ್ನು ಬ್ರಿಟಿಷ್ ಇತಿಹಾಸಕಾರರು ‘ದಂಗೆ’ ಎಂದು ಕರೆದಿದ್ದರಿಂದ, ನಮ್ಮ ದೇಶದ ನಂತರದ ಅಧಿಕೃತ ಇತಿಹಾಸಕಾರರು ಸಹ ಈ ಹೋರಾಟವನ್ನು ‘ದಂಗೆ’ ಎಂದೇ ಅಲ್ಲಲ್ಲಿ
ಬರೆದಿದ್ದಾರೆ. 1946ರ ಫೆಬ್ರವರಿ 17ನೆಯ ತಾರೀಕು. ಮುಂಬಯಿಯ ಕೊಲಾಬದಲ್ಲಿದ್ದ ನೌಕಾಸೇನೆ ಎಚ್ ಎಂಐಎಸ್ ತಲ್ವಾರ್‌ ನಲ್ಲಿರುವ ನೌಕಾದಳದ ಸೈನಿಕರಿಗೆ ಅವರ ಅಧಿಕಾರಿ ಅವಮಾನ ಮಾಡಿದ. ಆಗಿದ್ದಿಷ್ಟೆ. ಅಲ್ಲಿದ್ದ ಸುಮಾರು 1,000 ಸೈನಿಕರು ಉತ್ತಮ ಗುಣಮಟ್ಟದ ಆಹಾರ ಕೇಳಿದರು. ಹಿರಿಯ ಅಧಿಕಾರಿಗಳು ಕೊಡಲಿಲ್ಲ. ಎಲ್ಲರೂ ನಿಧಾನವಾಗಿ ಕೆಲಸ ಮಾಡುವ ತಂತ್ರ ವನ್ನು ಅಳವಡಿಸಿಕೊಂಡರು.

ಆ ಹಡಗಿನಲ್ಲಿದ್ದ ಕಮಾಂಡಿಂಗ್ ಆಫೀಸರ್, ಎಫ್. ಡಬ್ಲ್ಯು. ಕಿಂಗ್ ಎಂಬಾತ ಇವರನ್ನು ಬೈದು, ‘ಬೇಗ ಬೇಗ ಕೆಲಸ ಮಾಡಿರೋ ಕೂಲಿಗಳ ಮಕ್ಕಳಾ ಮತ್ತು …. ಮಕ್ಕಳಾ’ ಎಂದು ನಿಂದಿಸಿದ. ಸೈನಿಕರು ತಿರುಗಿಬಿದ್ದರು. ‘ಕ್ವಿಟ್ ಇಂಡಿಯಾ’ ಎಂದು ಘೋಷಣೆ ಕೂಗುತ್ತಾ, ಹಡಗಿನಲ್ಲೇ ಪ್ರತಿಭಟನೆ ನಡೆಸಿದರು. ಎರಡೇ ದಿನದಲ್ಲಿ ನೌಕಾಸೇನೆಯ ಸಿಬ್ಬಂದಿಯ ಮುಷ್ಕರ ಎಲ್ಲೆಡೆ ಹಬ್ಬಿತು. ಈ ನಡುವೆ ನವೆಂಬರ್ 1945ರಿಂದ ನಡೆಯುತ್ತಿದ್ದ ರೆಡ್ ಫೋರ್ಟ್ ವಿಚಾರಣೆಯು ಎಲ್ಲಾ ಸೈನಿಕರನ್ನು ಕೆರಳಿಸಿತ್ತು.

ಸುಭಾಷ್ ಚಂದ್ರ ಬೋಸ್ ಅವರ ಸೇನೆಯ ಸೈನಿಕರನ್ನು ಬಹಿರಂವಾಗಿ ಕೋರ್ಟ್ ಮಾರ್ಷಲ್ ನಡೆಸಲಾಗುತ್ತಿತ್ತು. ಈ ವಿವರಗಳು ನೌಕಾಸೇನೆಯ ಸಿಬ್ಬಂದಿಗೆ ತಲುಪಿತ್ತು. ಅದರ ಪರಿಣಾಮವೋ ಏನೋ, ಮುಂಬಯಿಯಲ್ಲಿ ಆರಂಭಗೊಂಡ ಸೈನಿಕರ ಮುಷ್ಕರವು, ಎರಡೇ ದಿನದಲ್ಲಿ ಕರಾಚಿ, ವಿಶಾಖಪಟ್ಟಣ, ಕೊಚ್ಚಿ ಮೊದಲಾದ ಸ್ಥಳಗಳಿಗೆ ಹಬ್ಬಿತು. ಮುಂಬಯಿಯಲ್ಲಿ ಸೈನಿಕರು
ಬೀದಿಗಿಳಿದು, ಲಾರಿಗಳಲ್ಲಿ ಸಂಚರಿಸುತ್ತಾ, ಸುಭಾಷ್ ಚಂದ್ರ ಬೋಸ್ ಮತ್ತು ಲೆನಿನ್ ಫೋಟೋಗಳನ್ನು ಹಿಡಿದು ಮೆರವಣಿಗೆ ಮಾಡಿದರು. ಹಲವು ಮುಂಬಯಿಯ ವಿ.ಟಿ. ಸನಿಹದ ರಸ್ತೆಗಳಲ್ಲಿ ಎರಡು ಗಂಟೆ ಪ್ರದರ್ಶನ ನಡೆಸಿದರು. ಕರಾಚಿಯಲ್ಲಿದ್ದ ಎಚ್
ಎಂಐಎಸ್ ಹಿಂದುಸ್ತಾನ್ ಹಡಗನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಎಲ್ಲರದ್ದೂ ಒಂದೇ ಬೇಡಿಕೆ – ಬಂಧನದಲ್ಲಿರಿಸಿದ್ದ ರಾಜಕೀಯ ನಾಯಕರನ್ನು ಬಿಡುಗಡೆ ಮಾಡಿ, ಉತ್ತಮ ಆಹಾರ ಕೊಡಿ, ಸಂಬಳ ಪರಿಷ್ಕರಿಸಿ. ಕೆಲವು ಹಡಗುಗಳಲ್ಲಿ ಕ್ವಿಟ್ ಇಂಡಿಯಾ ಘೋಷಣೆಯೂ ಕೇಳಿಬಂತು. ನೌಕಾ ಸೇನೆಯ 78 ಹಡುಗಗಳ ಪೈಕಿ, 60ಕ್ಕೂ ಹೆಚ್ಚಿನ ಹಡಗುಗಳ ನೌಕಾದಳ ಬ್ರಿಟಿಷರ ವಿರುದ್ಧ ತಿರುಗಿ ಬಿದ್ದಿತ್ತು. ಬ್ರಿಟಿಷ್ ಅಧಿಕಾರಿಗಳಿಗೆ ಎಡಗೈ ಸೆಲ್ಯೂಟ್
ಮಾಡುವ ಮೂಲಕ ಸೈನಿಕರು ತಮ್ಮ ಮನೋಗತವನ್ನು ಸ್ಪಷ್ಟವಾಗಿ ಸಾರಿಹೇಳಿದರು.

ಹಲವು ಹಡಗುಗಳಲ್ಲಿ ಮೂರು ಬಾವುಟಗಳನ್ನು ಹಾರಿಸಲಾಯಿತು – ಕಾಂಗ್ರೆಸ್‌ನ ತ್ರಿವರ್ಣ ಧ್ವಜ, ಮುಸ್ಲಿಂ ಲೀಗ್ ಧ್ವಜ ಮತ್ತು ಸಿಪಿಐ ಕೆಂಪು ಬಾವುಟ. ನೌಕೆಗಳಲ್ಲಿದ್ದ ಬ್ರಿಟಿಷ್ ಸಾರ್ವಭೌಮತ್ವ ಸಾರುವ ಬಾವುಟವನ್ನು ಕೆಳಗಿಳಿಸಲಾಯಿತು! ಈ ಹೋರಾಟ ದ ಹಿನ್ನೆಲೆಯಲ್ಲಿ ಕಮ್ಯುನಿಸ್ಟ್ ಚಿಂತನೆ ಇದ್ದದ್ದು ಸ್ಪಷ್ಟ. ಲೆಫ್ಟಿನೆಂಟ್ ಎಂ.ಎಸ್.ಖಾನ್ ಮತ್ತು ಮದನ್ ಸಿಂಗ್‌ರನ್ನು ಹೋರಾಟ ಸಮಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ನೌಕಾದಳದ ಈ ಹೋರಾಟಕ್ಕೆ, ರಾಯಲ್ ಏರ್‌ಫೋರ್ಸ್‌ನ ಕೆಲವು ಅಧಿಕಾರಿಗಳು ಸಹಾನುಭೂತಿ ವ್ಯಕ್ತಪಡಿಸಲು ಆರಂಭಿಸಿ ದ್ದರು. ಬ್ರಿಟಿಷ್ ಅಧಿಕಾರಷಾಹಿ ತಲ್ಲಣಗೊಂಡಿತು. ಆದರೇನು ಮಾಡುವುದು? ಅಂದಿನ ನಮ್ಮ ರಾಜಕೀಯ ನಾಯಕರು ಬೇರೆ ರೀತಿ ಯೋಚಿಸುತ್ತಿದ್ದರು. ಮಹಾತ್ಮಾ ಗಾಂಧಿ, ನೆಹರೂ, ಮಹಮದ್ ಆಲಿ ಜಿನ್ನಾ ಮೊದಲಾದವರು ನೌಕಾದಳದ ಸೈನಿಕರ ಈ ಮುಷ್ಕರಕ್ಕೆ ಬೆಂಬಲ ನೀಡಲಿಲ್ಲ. 1942ರಲ್ಲಿ ಕ್ವಿಟ್ ಇಂಡಿಯಾ ಹೋರಾಟದ ಸಮಯದಲ್ಲಿ ಜೈಲು ಸೇರಿದ್ದ ನಾಯಕರು (ಜಿನ್ನಾ ಜೈಲು ಸೇರಿಲ್ಲ) ಅದೇ ತಾನೆ ಜೈಲಿನಿಂದ ಹೊರಬಂದಿದ್ದರು. ತಮ್ಮ ಮಾರ್ಗವನ್ನು ಅನುಸರಿಸುತ್ತಿದ್ದ 20,000 ನೌಕಾ ಸೈನಿಕರು ಮತ್ತು ಅವರಿಗೆ ಬೆಂಬಲ ಸೂಚಿಸುತ್ತಿದ್ದ ಸಾವಿರಾರು ಮುಂಬಯಿ ನಾಗರಿಕರು ಅವರಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವಂತೆ ಕಾಣಿಸಲಿಲ್ಲವೇನೊ!

ಬದಲಿಗೆ, ತಮ್ಮದೇ ಶೈಲಿಯ ಹೋರಾಟದ ಹಾದಿಗೆ ಅಡ್ಡಲಾಗಿದ್ದ ಮುಳ್ಳುಗಳಂತೆ ಕಂಡರೇ? ಬ್ರಿಟಿಷರನ್ನು ಭಾರತದಿಂದ
ಒದ್ದೋಡಿಸಬೇಕೆಂದು ಮುಷ್ಕರ ಕೈಗೊಂಡಿದ್ದ ಈ ನೌಕಾದಳದ ಸೈನಿಕರ ಹೋರಾಟವನ್ನು ಗಾಂಧೀಜಿ ಸ್ಪಷ್ಟವಾಗಿ ಖಂಡಿಸಿದರು – ಅದ್ಯಾವ ಒಳಸಂಚಿಗೆ ಬಲಿಯಾಗಿ ಅವರು ಖಂಡಸಿದರೋ, ಸ್ಪಷ್ಟವಾಗುತ್ತಿಲ್ಲ!

ಇಂದಿಗೂ ಆಶ್ಚರ್ಯ ಎನಿಸುತ್ತಿದೆ – ಬ್ರಿಟಿಷರನ್ನು ಓಡಿಸಲು ಯತ್ನಿಸಿದ ಆ ಬೃಹತ್ ಹೋರಾಟವನ್ನು ಅಂದಿನ ರಾಜಕೀಯ ನಾಯಕರು ಸ್ಪಷ್ಟವಾಗಿ ಖಂಡಿಸುವ ಮತ್ತು ಆ ಹೋರಾಟಕ್ಕೆ ತಣ್ಣೀರೆರಚುವ ಕೆಲಸಕ್ಕೆ ಕೈಹಾಕಿದ್ದೇಕೆ? ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಅಧಿಕೃತ ಇತಿಹಾಸ ಮುಚ್ಚಿಟ್ಟ ರಹಸ್ಯವೇ, ಈ ಖಂಡನೆ? ಬ್ರಿಟಿಷರ ಎದೆಯಲ್ಲಿ ತಲ್ಲಣ ಹುಟ್ಟಿಸಿದ್ದ, ಅಧಿಕಾರ
ಶಾಹಿಯಲ್ಲಿ ಅಲ್ಲೋಲ ಕಲ್ಲೋಲ ತಂದಿದ್ದ ಈ ಹೋರಾಟವನ್ನು ಗಾಂಧೀಜಿ ಮತ್ತು ಜಿನ್ನಾ ಖಂಡಿಸಿದ ತಕ್ಷಣ, ಅಂದಿನ ಹೆಚ್ಚಿನ ರಾಜಕೀಯ ನಾಯಕರು ಮೌವಾದರು. ವಲ್ಲಭಭಾಯಿ ಪಟೇಲ್ ಮತ್ತು ಜಿನ್ನಾ ಅವರು ಈ ವಿಚಾರದಲ್ಲಿ ಒಗ್ಗಟ್ಟಾಗಿ, ಮುಷ್ಕರ
ಕೈಬಿಡುವಂತೆ ಸೂಚಿಸಿದರು.

ವಲ್ಲಭಭಾಯಿ ಪಟೇಲರು, ಬ್ರಿಟಿಷ್ ಸರಕಾರದ ಪರವಾಗಿ ಎಂಬಂತೆ, ಮುಷ್ಕರ ನಡೆಸುತ್ತಿದ್ದವರ ಜತೆ ಮಾತುಕತೆಗೆ ಇಳಿದರು.
ನೀವು ಹೋರಾಟವನ್ನು ತಕ್ಷಣ ನಿಲ್ಲಿಸಿ, ಬ್ರಿಟಿಷ್ ಅಧಿಕಾರಿಗಳು ಹೇಳಿದಂತೆ ಕೇಳಿ, ನಿಮಗೆ ಉತ್ತಮ ಆಹಾರ ನೀಡಲಾಗುವುದು ಎಂದು ಪಟೇಲರು ನೌಕಾದಳದ ಸೈನಿಕರನ್ನು ಮನವಿ ಮಾಡಿಕೊಂಡರು.

ಅತ್ತ, 23.2.1946ರಂದು ಕೆಲವು ಹಡಗುಗಳ ಮೇಲೆ ಬ್ರಿಟಿಷ್ ಪಡೆ ಗುಂಡು ಹಾರಿಸುತ್ತಿರುವಾಗಲೇ, ಇತ್ತ ಪಟೇಲರು ಮಾತುಕತೆ ನಡೆಸುತ್ತಿದ್ದರು. ನೌಕಾಪಡೆಯ ಸೈನಿಕರ ಆ ಬೃಹತ್ ಮತ್ತು ಶಕ್ತಿಶಾಲಿ ಮುಷ್ಕರವು ಸರಕಾರವನ್ನೇ ನಡುಗಿಸಿದ್ದು ಒಂದೆಡೆ ಯಾದರೆ, ಈ ಪರಿಸ್ಥಿತಿಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಿದ ಪಕ್ಷವೆಂದರೆ ಸಿಪಿಐ. ಅದುವರೆಗಿನ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಅಷ್ಟೇನೂ ಪ್ರಮುಖ ಪಾತ್ರ ವಹಿಸದೇ ಇದ್ದ ಸಿಪಿಐ ಪಕ್ಷವು, ಈ ಹೋರಾಟಕ್ಕೆ ತನ್ನ ಬೆಂಬಲ ಸೂಚಿಸಿತು.

ಮಾತ್ರವಲ್ಲ, 22.2.1946ರಂದು ಮುಂಬಯಿಯಲ್ಲಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದರು. ಆಗ ಜನರು ಸ್ಪಂದಿಸಿದ ಪರಿ ಅಭೂತಪೂರ್ವ. ಅದೇ ಸಮಯದಲ್ಲಿ ದೆಹಲಿಯಲ್ಲಿ ಐಎನ್‌ಎ ಸೈನಿಕರ ವಿರುದ್ಧ ವಿಚಾರಣೆಯನ್ನು ಬ್ರಿಟಿಷ್ ಸರಕಾರ ನಡೆಸು ತ್ತಿತ್ತು. ಅದನ್ನು ಕಂಡು ಬೇಸರಗೊಂಡಿದ್ದ ಜನ ಸಾಮಾನ್ಯರು, ಮುಂಬಯಿಯ ಆ ಮುಷ್ಕರದಲ್ಲಿ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ ದರು. ಅಂದು ಮುಂಬಯಿಯು ಅಕ್ಷರಶಃ ಅಲ್ಲೋಲ ಕಲ್ಲೋಲವಾಯಿತು. ವಿದ್ಯಾರ್ಥಿಗಳೂ ಸೇರಿದಂತೆ ಸುಮಾರು 1,00,000 ಜನರು ಮುಂಬಯಿಯ ಬೀದಿಗಳಲ್ಲಿ ಮುಷ್ಕರ, ದೊಂಬಿ ನಡೆಸಿದರು.

ಇದಕ್ಕೆ ಕಾಯುತ್ತಿರುವವರಂತೆ, ಬ್ರಿಟಿಷ್ ಸೈನಿಕರು ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದರು. ಅಂದು ಮೃತರಾದವರ ಸಂಖ್ಯೆ ಎಷ್ಟು ಗೊತ್ತೆ? ಸುಮಾರು 800ಕ್ಕೂ ಹೆಚ್ಚು ಎನ್ನುತ್ತವೆ ಕೆಲವು ಅಂದಾಜುಗಳು. ಇದು ಜಲಿಯನ್ ವಾಲಾಬಾಗ್ ಹತ್ಯಾ ಕಾಂಡಕ್ಕಿಂತ ಭೀಕರ. ಅಂದು ಮುಂಬಯಿಯಲ್ಲಿ ಹರಿದದ್ದು ರಕ್ತದ ಓಕುಳಿ. ಅತ್ತ ಕರಾಚಿ ಮತ್ತು ಮುಂಬಯಿಯಲ್ಲಿ ನೌಕಾ ದಳದ ಮೇಲೆ ಗುಂಡುಹಾರಿಸಿ, ಏಳು ಜನ ಸೈನಿಕರನ್ನು ಕೊಲ್ಲಲಾಗಿತ್ತು, 30ಕ್ಕೂ ಹೆಚ್ಚು ಸೈನಿಕರನ್ನು ಗಾಯಾಳುವನ್ನಾಗಿ ಮಾಡ ಲಾಗಿತ್ತು.

ಆದರೆ, ಬ್ರಿಟಿಷರ ವಿರುದ್ಧ ನಡೆಯುತ್ತಿದ್ದ ಈ ಮುಷ್ಕರವನ್ನು ನಿಲ್ಲಿಸಲು ಸ್ವತಃ ವಲ್ಲಭಬಾಯಿ ಪಟೇಲರೇ ಕಣಕ್ಕೆ ಇಳಿದಿದ್ದರು. ನೌಕಾಪಡೆಯ ಮುಷ್ಕರದ ನೇತೃತ್ವ ವಹಿಸಿದ್ದ ನಾಯಕರೊಂದು ಮಾತುಕತೆ ನಡೆಸಿ, ಮರುದಿನ ಅಂದರೆ 23.2.1946ರಂದು
ಮುಷ್ಕರ ನಿಲ್ಲಿಸುವಲ್ಲಿ ಯಶಸ್ವಿಯಾದರು. ಬ್ರಿಟಿಷ್ ಅಧಿಕಾರಿಗಳ ವಿರುದ್ಧ ದನಿ ಎತ್ತಿದ್ದ 476 ಜನ ನೌಕಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿ, ಮನೆಗೆ ಕಳಿಸಲಾಯಿತು. ಅವರ ತ್ಯಾಗವನ್ನು ಸ್ವತಂತ್ರ ಭಾರತ ತಕ್ಷಣ ಗುರುತಿಸಲಿಲ್ಲ. ಕೊನೆಗೂ, 1973ರಲ್ಲಿ ಕೆಲವು ಸೈನಿಕರ ತ್ಯಾಗವನ್ನು ಗುರುತಿಸಿ, ಮಾಸಾಶನ ದೊರೆಯುವಂತೆ ಮಾಡಲಾಯಿತು.

ಅಷ್ಟು ಹೊತ್ತಿಗೆ ಆ ಹೋರಾಟದಲ್ಲಿ ಪಾಲ್ಗೊಂಡ ಅದೆಷ್ಟೋ ನೌಕಾದಳದ ಸೈನಿಕರು ಸಹಜವಾಗಿ ಸಾವನ್ನಪ್ಪಿದ್ದರು. 1946ರ ಈ
ಹೋರಾಟವು ಬ್ರಿಟಿಷರ ಬೆನ್ನುಲುಬಿನಲ್ಲಿ ಹೆದರಿಕೆಯನ್ನು ಹುಟ್ಟುಹಾಕಿದ್ದಂತೂ ಸ್ಪಷ್ಟ. ಈ ಹೋರಾಟವು ಕ್ರಮೇಣ ಭೂ ಮತ್ತು ವಾಯು ಸೈನಿಕರಲ್ಲೂ ಹಬ್ಬಿದರೆ, ಬ್ರಿಟಿಷ್ ಅಧಿಕಾರಿಗಳು ಮತ್ತು ಅವರ ಕುಟುಂಬ ಪ್ರಾಣ ಕಳೆದುಕೊಳ್ಳುವ ಭಯವಿತ್ತು. ಭಾರತ ವನ್ನು ತೊರೆದು, ಬೇಗನೆ ತಮ್ಮ ದೇಶಕ್ಕೆ ವಾಪಸಾಗಬೇಕೆಂದು ಬ್ರಿಟಿಷರು ನಿರ್ಧಾರ ತೆಗೆದುಕೊಳ್ಳುವಲ್ಲಿ, ನೌಕಾದಳದ ಈ ಮುಷ್ಕರ ಮತ್ತು ಸುಭಾಷ್‌ರ ಐಎನ್‌ಎ ಸೈನ್ಯದ ಹೋರಾಟಗಳು ಬಹು ಮುಖ್ಯ ಕಾರಣ ಎನಿಸಿದವು.

ಆದರೆ, ಈ ಎರಡೂ ಹೋರಾಟಗಳಲ್ಲಿ ಭಾಗಿಯಾದವರು ಮಾಡಿದ ತ್ಯಾಗಕ್ಕೆ ಸೂಕ್ತ ಗೌರವ ನೀಡುವಲ್ಲಿ, ಸ್ವತಂತ್ರ ಭಾರತದ ಮೊದಮೊದಲ ನೇತಾರರು ನಿರ್ಲಕ್ಷ್ಯ ತೋರಿದ್ದಂತೂ ಸ್ಪಷ್ಟ. ಆ ಸೈನಿಕರ ತ್ಯಾಗಕ್ಕೆ ಬೆಲೆಯೇ ಇಲ್ಲದಂತಾಯಿತು.