Saturday, 14th December 2024

ಸಂಪಾದಕನಾದವನು ಆಪ್ತ ಸ್ನೇಹಿತನಾದಾಗ ಇಂಥ ಅಂಕಣಗಳು ಹೊಮ್ಮುತ್ತವೆ !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್‌

ಕಳೆದ ವಾರ ಡಾ.ಮಹಿಂದರ್ ವತ್ಸ (ಐವತ್ತೆಂಟು ವರ್ಷ ಸೆಕ್ಸ್ ಬಗ್ಗೆ ಬರೆದ ಜಂಟಲ್ ಮನ್ ಕುರಿತು) ಬಗ್ಗೆ ಬರೆದಿದ್ದೆ. ಅನೇಕ ಮಂದಿ ಓದುಗರು ಮೆಸೇಜ್ ಮಾಡಿ, ಡಾ.ವತ್ಸ ಅವರ ಸೆಕ್ಸ್ ಪ್ರಶ್ನೋತ್ತರ ಅಂಕಣಗಳನ್ನು ತಾವೂ ಓದುತ್ತಿದ್ದುದಾಗಿ ತಿಳಿಸಿದ್ದಾರೆ. ಇನ್ನು ಕೆಲವರು, ಅವರ ಇನ್ನಷ್ಟು ಪ್ರಶ್ನೋತ್ತರಗಳನ್ನು ಬರೆಯಬೇಕಿತ್ತು ಎಂದೂ ಹೇಳಿದ್ದಾರೆ. ನಿಮ್ಮ ಪತ್ರಿಕೆಯಲ್ಲೂ
ಅಂಥ ಒಂದು ಅಂಕಣವನ್ನು ಆರಂಭಿಸಿ ಎಂದು ಸಲಹೆ ಇತ್ತವರು ಅನೇಕರು.

ಪತ್ರಿಕೆಯಲ್ಲಿ Advice Column ಇರಬೇಕು ಎಂದು ಪ್ರತಿಪಾದಿಸುವವರಲ್ಲಿ ನಾನೂ ಒಬ್ಬ. ಓದುಗರಿಗೆ ಪತ್ರಿಕೆ ಒಬ್ಬ ಆಪ್ತ ಮಿತ್ರ ನಂತಿರಬೇಕು, ಸಂಗಾತಿಯಾಗಬೇಕು. ಓದುಗ ತನ್ನ ಕಷ್ಟ – ಸುಖ, ನೋವು – ನಲಿವು (ನೋವು – ನವಿಲು ಅಲ್ಲ), ಸಮಸ್ಯೆ – ಸಂಕಟ ಗಳನ್ನೆ ಹೇಳಿಕೊಳ್ಳಬೇಕು. ಪತ್ರಿಕೆ ಅದಕ್ಕೆ ಒಂದಷ್ಟು ಜಾಗವನ್ನು ಕಲ್ಪಿಸಿಕೊಡಬೇಕು. ಅದು ಇತರ ಓದುಗರಿಗೂ ಅನುಕೂಲ ವಾಗಬೇಕು. ಇದು ತಮ್ಮ ಸಮಸ್ಯೆಯೂ ಹೌದು ಎಂದು ಇತರರಿಗೂ ಅನಿಸಬೇಕು.

ಆದರೆ ಉತ್ತರ ಕೊಡುವವರು ಜಗದ್ಗುರು ಆಗಬಾರದು. ‘ನಾವು ಹೇಳಬಯಸುವುದೇನೆಂದರೆ..’ ಎಂಬ ಧಾಟಿಯಲ್ಲಿ ಮಾತಾಡ ಬಾರದು. ಅದು ಬುದ್ಧಿವಾದ, ಉಪದೇಶ, preachy ಆಗಬಾರದು. ಅದರ ಬದಲು, ಡಾ.ವತ್ಸ ಉತ್ತರ ಕೊಡುತ್ತಿದ್ದಂತೆ, ತಮಾಷೆ ಯಾಗಿರಬೇಕು, witty ಆಗಿರಬೇಕು, ಹಾಗಂತ ಗೇಲಿ ಮಾಡಕೂಡದು, ಜತೆಯಲ್ಲಿ ಸಮಸ್ಯೆಗೆ ಉತ್ತರವೂ ಸಿಗಬೇಕು. ಈ ಅಂಕಣ ವನ್ನು ನಿಭಾಯಿಸಲು ಸಾಕಷ್ಟು ಪ್ರಬುದ್ಧತೆ, ಮನವೊಲಿಸುವ ಧಾಟಿ ಬೇಕು. ಒಮ್ಮೆ ಡಾ.ವತ್ಸ ಅವರಿಗೆ ಒಬ್ಬ ಕೇಳಿದ್ದ – ‘ನನಗೆ ನಲವತ್ತೆರಡು ವರ್ಷ, ನನ್ನ ಪತ್ನಿಗೆ ಮೂವತ್ನಾಲ್ಕು ವರ್ಷ.

ನಮಗೆ ಮೂವರು ಮಕ್ಕಳು. ನಮ್ಮದು ಅವಿಭಕ್ತ ಕುಟುಂಬ. ನಮ್ಮ ಮನೆಯಲ್ಲಿ ನಾವು ಹದಿನಾಲ್ಕು ಜನ ವಾಸಿಸುತ್ತೇವೆ. ಆದರೆ ಮನೆಯಲ್ಲಿ ಇರೋದು ಮೂರೇ ರೂಮು. ನಾನು ಇಲ್ಲಿ ತನಕ ನನ್ನ ಹೆಂಡತಿಯನ್ನು ನಗ್ನವಾಗಿ ನೋಡಿಲ್ಲ. ಅದಕ್ಕೆ ಅವಕಾಶ ವೂ ಸಿಕ್ಕಿಲ್ಲ. ಈಗ ಆಕೆ ತನ್ನ ನಗ್ನದೇಹವನ್ನು ತೋರಿಸಲು ಬಹಳ ಸಂಕೋಚ ಪಡುತ್ತಾಳೆ. ನನ್ನ ದೇಹವನ್ನು ನೋಡಲೂ ಅವಳಿಗೆ ಮನಸ್ಸಿಲ್ಲ. ಏನು ಮಾಡಲಿ?’ ಅದಕ್ಕೆ ಡಾ.ವತ್ಸ ಸೊಗಸಾಗಿ ಉತ್ತರಿಸಿದ್ದರು – ‘ನೀನು ಪತ್ನಿಯ ನಗ್ನದೇಹವನ್ನು ನೋಡುವುದಕ್ಕೂ, ಮಕ್ಕಳಾಗುವುದಕ್ಕೂ ಸಂಬಂಧವಿಲ್ಲ.

ಅದನ್ನು ನೀನು ಈಗಾಗಲೇ ಸಾಬೀತು ಮಾಡಿದ್ದೀಯಾ. ಈಗ ಏಕಾಏಕಿ ನಿನಗೆ ಅವಳನ್ನು ನಗ್ನವಾಗಿ ನೋಡಬೇಕು ಎಂದು ಆಸೆ
ಬಂದಿದ್ದು ಸಹಜವೇ. ಈ ಕೆಲಸವನ್ನು ನೀನು ಮೊದಲ ರಾತ್ರಿಯೇ ಮಾಡಬೇಕಿತ್ತು. ತಡವಾಗಿಯಾದರೂ ನಿನಗೆ ಜ್ಞಾನೋದಯ ವಾಗಿರುವುದು ಒಳ್ಳೆಯ ಸೂಚನೆ. ಮನೆಯಲ್ಲಿ ನಿನಗೆ ಅಂಥ ಅವಕಾಶ ಸಿಗಲಿಕ್ಕಿಲ್ಲ. ಬೇರೆ ಊರಿಗೆ, ‘ಸೈಟ್ ಸೀಯಿಂಗ್’ಗೆ ಹೋಗ್ತೇನೆ ಅಂತ ಹೇಳಿ, ಒಂದೆರಡು ದಿನ ಹೊಟೇಲಿನಲ್ಲಿ ಉಳಿದು ನಿನ್ನ ಮನೋರಥವನ್ನು ಈಡೇರಿಸಿಕೊಂಡು ಬಾ. ಆದರೆ ಜತೆಯಲ್ಲಿ ಮೂವರು ಮಕ್ಕಳನ್ನು ಕರೆದುಕೊಂಡು ಹೋಗಬೇಡ.’

ಬಹಳ ವರ್ಷಗಳ ಹಿಂದೆ, ‘ಪ್ರಜಾಮತ’ ವಾರಪತ್ರಿಕೆಯಲ್ಲಿ ‘ಗುಪ್ತ ಸಮಾಲೋಚನೆ’ ಎಂಬ ಅಂಕಣ ಪ್ರಕಟವಾಗುತ್ತಿತ್ತು. ಅದರಲ್ಲಿ ಓದುಗರು ತಮ್ಮ ಲೈಂಗಿಕ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು. ತಜ್ಞ ವೈದ್ಯರು ಅವುಗಳಿಗೆ ಉತ್ತರಿಸುತ್ತಿದ್ದರು. ಆದರೆ ಅದರಲ್ಲಿ ವಿಡಂಬನೆ, ನವಿರು ಹಾಸ್ಯ ಇರುತ್ತಿರಲಿಲ್ಲ. ಆ ದಿನಗಳಲ್ಲಿ ಆ ಅಂಕಣ ಬಹಳ ಜನಪ್ರಿಯವಾಗಿತ್ತು. ಕೆಲವು ಮನೆಗಳಲ್ಲಿ ‘ಪ್ರಜಾ ಮತ’ ಬರುತ್ತಿದ್ದಂತೆ, ಮನೆಯ ಯಜಮಾನ ನಾದವನು (ತಂದೆ) ಆ ಅಂಕಣ ಪ್ರಕಟವಾಗುತ್ತಿದ್ದ ಪುಟವನ್ನು ಹರಿದು, ಟೀಪಾಯ್ ಮೇಲಿಡುತ್ತಿದ್ದ. ಇದು ಎಲ್ಲರ ಮನೆಗಳ ಹಣೆಬರಹ! ಅಷ್ಟಾಗಿಯೂ ಆ ಅಂಕಣ ಯಾಕೆ ಜನಪ್ರಿಯವಾಗಿತ್ತೆಂದರೆ, ಆ ದಿನಗಳಲ್ಲಿ ಅದರಲ್ಲಿ ಬರುತ್ತಿದ್ದ ವಿಚಿತ್ರವಾದ ಲೈಂಗಿಕ ಸಮಸ್ಯೆಗಳು ಓದುಗನನ್ನು ಗಲಿಬಿಲಿಗೊಳಿಸುತ್ತಿದ್ದವು.

ಕಾರಣ ಆ ದಿನಗಳಲ್ಲಿ ಲೈಂಗಿಕ ವಿಷಯಗಳ ಬಗ್ಗೆ ಮಾತಾಡುವುದೇ ನಿಷಿದ್ಧವಾಗಿತ್ತು. ಯಾರೂ ಆ ವಿಷಯವನ್ನು ಈಗಿನಂತೆ (?) ಮುಕ್ತವಾಗಿ ಮಾತಾಡುತ್ತಿರಲಿಲ್ಲ. ಹೀಗಿರುವಾಗ ಒಂದು ಜನಪ್ರಿಯ ಪತ್ರಿಕೆಯಲ್ಲಿ ಅಂಥ ಅಂಕಣ ಪ್ರಕಟವಾಗುವುದೇ ಸೋಜಿಗ ವಾಗಿತ್ತು. ಈಗ ಆ ಅಂಕಣವನ್ನು ಪ್ರಕಟಿಸಿದರೆ, ಆಗಿನಂತೆ ಓದುಗರು ಉಸಿರು ಬಿಗಿ ಹಿಡಿದು ಓದಲಿಕ್ಕಿಲ್ಲ. ಈ ಅಂಕಣವನ್ನು ಪ್ರಕಟಿಸಲು ಹೆಚ್ಚಿನ ಪಾಲು ಸಂಪಾದಕರಿಗೆ ಮಡಿವಂತಿಕೆ ಇರಲಿಕ್ಕಿಲ್ಲ. ಆದರೆ ಅವರ ಸಮಸ್ಯೆ ಅಂದ್ರೆ ಅಂಥ ಅಂಕಣವನ್ನು ನಿಭಾಯಿಸುವವರು ಅಥವಾ ಬರೆಯುವವರು ಸಿಗಲಿಕ್ಕಿಲ್ಲ. ಎಲ್ಲರಿಗೂ ಡಾ.ವತ್ಸ ಅವರಂಥವರು ಸಿಗಲಿಕ್ಕಿಲ್ಲ.

ಬೇರೆಯವರೂ ಅವರಂತೇ ಬರೆದರೆ ಅದೂ ಏಕತಾನತೆಯಿಂದ ಸೊರಗಬಹುದು, ಚರ್ವಿತಚರ್ವಣ ಆಗಬಹುದು. ಈ ದೃಷ್ಟಿ ಯಿಂದ ಡಾ.ವತ್ಸ ಬಿಟ್ಟರೆ, ನಾನು ಇಷ್ಟಪಟ್ಟಿದ್ದು ಬಹುಮುಖ ಪ್ರತಿಭೆಯ ಸುಹೇಲ್ ಸೇಥ್ ಅಂಕಣ. ಅದು ಲೈಂಗಿಕ ಸಮಸ್ಯೆಗಳ
ಅಂಕಣವಲ್ಲ. ದೈನಂದಿನ ಜೇವನದಲ್ಲಿ ಜನ ಎದುರಿಸುವ  ಮಸ್ಯೆಗಳಿಗೆ ಪರಿಹಾರ, ಸಾಂತ್ವನ ನೀಡುವ ಅಂಕಣ.

ಅವರು ಕೊಲ್ಕೊತಾದಿಂದ ಪ್ರಕಟವಾಗುವ ‘ದಿ ಟೆಲಿಗ್ರಾಫ್’ ಪತ್ರಿಕೆಯಲ್ಲಿ ಭಾನುವಾರ Survival Strategies ಎಂಬ ಅಂಕಣ ವನ್ನು ಬರೆಯುತ್ತಿದ್ದರು. ನನ್ನ ಬಳಿ ಆ ಎಲ್ಲಾ ಅಂಕಣಗಳ ಕಟಿಂಗ್ಸ್ ಇದೆಯೆಂದರೆ ನಾನು ಯಾವ ಪರಿ ಆ ಅಂಕಣದ ಹಿಂದೆ ಬಿದ್ದಿದ್ದೆ ಊಹಿಸಿ. ಆ ಅಂಕಣದ ವೈಶಿಷ್ಟ್ಯವೆಂದರೆ, ಹಾಸ್ಯಮಿಶ್ರಿತ ನೇರ ನುಡಿ. ಓದುಗರೊಬ್ಬರು ಸೇಥ್ ಅವರಿಗೆ ಕೇಳಿದ್ದರು – ‘ನನ್ನ ಹೆಂಡತಿ ಏರಿದ ದನಿಯಲ್ಲಿ ಮಾತಾಡುತ್ತಾಳೆ, ಕಿರುಚದೇ ಅವಳಿಗೆ ಮಾತಾಡಲು ಬರುವುದಿಲ್ಲ. ಅವಳು ಮಾತಾಡಿದರೆ, ಅಕ್ಕ-ಪಕ್ಕದ ಮನೆಯವರೆ ನೋಡುತ್ತಾರೆ. ನಾನು ಏನು ಮಾಡಲಿ?’ ಅದಕ್ಕೆ ಸೇಥ್ ಉತ್ತರಿಸಿದ್ದರು – ‘ನಿನ್ನ ಸಮಸ್ಯೆ ಅರ್ಥವಾಗು ತ್ತದೆ. ಆದರೆ ಒಂದು ಸಂಗತಿ ನೆನಪಿಟ್ಟುಕೋ, ನೀನು ಮಮತಾ ಬ್ಯಾನರ್ಜಿ ಅಥವಾ ಮಾಯಾವತಿಯನ್ನು ಮದುವೆಯಾಗಿಲ್ಲ, ಹೀಗಾಗಿ ಪುಣ್ಯವಂತ.

ಅವರಲ್ಲಿ ಒಬ್ಬರನ್ನು ಮದುವೆಯಾಗಿದ್ದಿ ಎಂಬುದನ್ನು ಒಂದು ನಿಮಿಷ ಕಲ್ಪಿಸಿಕೋ, ಅವರು ಮಾತಾಡಿದರೆ ಅಕ್ಕ-ಪಕ್ಕದ
ಮನೆಯಲ್ಲ, ಅದು ಅಕ್ಕ-ಪಕ್ಕದ ರಾಜ್ಯ ಮತ್ತು ಇಡೀ ದೇಶಕ್ಕೇ ಕೇಳುತ್ತದೆ. ಅವರ ಮುಂದೆ ನಿನ್ನ ಹೆಂಡತಿ ಕಿರುಚುವುದು ಏನೇನೂ ಅಲ್ಲ. ಪ್ರೀತಿಗೆ ಕರಗದ ಹೆಂಡತಿ ಭೂಮಿ ಮೇಲೆ ಇಲ್ಲ. ನಿನ್ನ ಹೆಂಡತಿಗೆ ಇನ್ನಷ್ಟು ಪ್ರೀತಿ ಕೊಡು.’

ಮತ್ತೊಂದು ಪ್ರಶ್ನೆ – ‘ನಾನು ಇಪ್ಪತ್ತು ವರ್ಷದ ಹುಡುಗಿ. ಲಂಡನ್ನಿನಲ್ಲಿ ಡಿಗ್ರಿ ಮುಗಿಸಿ ಕಳೆದ ತಿಂಗಳು ಬಂದಿದ್ದೇನೆ. ಲಂಡನ್ನಿ ನಲ್ಲಿ ಇದ್ದಾಗ ನನ್ನ ಕ್ಲಾಸ್ ಮೇಟ್ ಜತೆ ಡೇಟ್ ಮಾಡುತಿದ್ದೆ. ಈಗ ಭಾರತಕ್ಕೆ ಬಂದ ನಂತರ ನನ್ನ ಎಕ್ಸ್-ಬಾಯ್ ಫ್ರೆಂಡ್ ಹತ್ತಿರವಾಗಿದ್ದಾನೆ. ನಾನು ನನ್ನ ಲಂಡನ್ ಬಾಯ್  ಫ್ರೆಂಡ್‌ಗೆ ಮೋಸ ಮಾಡುತ್ತಿಲ್ಲ ತಾನೇ?’ ಈ ಪ್ರಶ್ನೆಗೆ ಸೇಥ್ ಉತ್ತರಿಸಿದ್ದರು – ‘ನೀನು ಮಹಾ ಛತ್ರಿ ಕಣಮ್ಮ. ಇದ್ದರೆ ನಿನ್ನ ಹಾಗೆ ಇರಬೇಕು. The bird in the hand is always better ಎಂಬುದು ನಿನಗೆ ಚೆನ್ನಾಗಿ ಅರಿವಾಗಿದೆ. ನಿನ್ನ ಲಂಡನ್ ಬಾಯ್ ಫ್ರೆಂಡ್ ಬ್ರೆಕ್ಸಿಟ್ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನಿನ್ನ ಒಂದು ಕಾಲದ ಮಾಜಿ ಈಗ ಹಾಲಿ ಆಗಿದ್ದಾನೆ. ಹಾಲಿಯಿದ್ದವ ಮಾಜಿ ಆಗಿದ್ದಾನೆ. ಜೀವನವಿರುವುದು ಇಷ್ಟೇ. ಯಾರು ಹಾಲಿ ಇರುತ್ತಾನೋ ಅವನ ಜತೆ ಚೆನ್ನಾಗಿರು. ಮಾಜಿ ಯಾವತ್ತೂ ಸವಕಲು.

ಮುಂದೆ ಯಾವತ್ತೋ ನೀನು ಲಂಡನ್‌ಗೆ ಹೋದಾಗ, ಅಲ್ಲಿ ಒಂದು ವಾರ ಇದ್ದರೆ, ಅಲ್ಲಿ ನೀನು ಯಾರನ್ನೂ ಹುಡುಕಬೇಕಿಲ್ಲ ವಲ್ಲ?’ ಸುಹೇಲ್ ಸೇಥ್ ಅಂಕಣ ಅದೆಷ್ಟು ಜನಪ್ರಿಯವಾಗಿತ್ತೆಂದರೆ, ಅವರ ಮೊಬೈಲ್ ನಂಬರ್ ಕೊಡುವಂತೆ, ಅವರ ಮನೆ ವಿಳಾಸ ನೀಡುವಂತೆ, ಪ್ರತಿದಿನ ನೂರಾರು ಜನ ಪತ್ರಿಕಾ ಕಚೇರಿಗೆ ಫೋನ್ ಮಾಡುತ್ತಿದ್ದರು. ‘ನೀವೇಕೆ ಕೌನ್ಸಿಲಿಂಗ್ ಸೆಂಟರ್ ಓಪನ್ ಮಾಡಬಾರದು?’ ಎಂದು ಜನ ಅವರನ್ನು ಕೇಳುತ್ತಿದ್ದರು.

‘ಇಲ್ಲ, ನಾನು ಹವ್ಯಾಸ, ಟೈಂಪಾಸ್‌ಗೆ ಇದನ್ನು ಮಾಡುತ್ತಿದ್ದೇನೆ’ ಅಂದರೂ ಕೇಳುತ್ತಿರಲಿಲ್ಲ. ಒಮ್ಮೆ ಅವರ ಅಂಕಣದಲ್ಲಿ ಒಬ್ಬ ಕೇಳಿದ್ದ – ‘ನನಗೆ ಇಪ್ಪತ್ತು ವರ್ಷ. ನನಗಿಂತ ಒಂದು ವರ್ಷ ಕಿರಿಯ ಹುಡುಗಿ ಜತೆ ಕ್ರಶ್ ಆಗಿದೆ. ಆದರೆ ಕಳೆದ ಕೆಲವು ದಿನಗಳಿಂದ
ನಿನ್ನ ಮುಖ ನೋಡಲು ಮನಸ್ಸಾಗುತ್ತಿಲ್ಲ ಎಂದು ಹೇಳುತ್ತಿದ್ದಾಳೆ. ಏನು ಮಾಡಲಿ?’ ಅದಕ್ಕೆ ಸೇಥ್ ಉತ್ತರಿಸಿದ್ದರು – ‘ನಿನ್ನ ಹುಡುಗಿಯದು ಕುಮಾರಸ್ವಾಮಿ ಮೆಂಟಾಲಿಟಿ. ಇಂದಿನ ಸ್ನೇಹಿತ ನಾಳೆ ವೈರಿ. ನಿನ್ನೆಯ ವೈರಿ ಇಂದಿನ ಸ್ನೇಹಿತ. ನಿನ್ನ ಮುಖ ನೋಡಲು ಬಯಸದ ಯಾರ ಹಿಂದೆಯೂ ಹೋಗಬೇಡ. ಅವಳ ಬಗ್ಗೆ ಯೋಚಿಸಿ ನಿನ್ನ ಸಮಯ ಹಾಳು ಮಾಡಬೇಡ. ಬಂದ ಹಾಗೆ ಪೀಡೆಗಳು ತೊಲಗುತ್ತವೆ ಎಂದು ಅಂದುಕೊಂಡು ಸುಮ್ಮನಾಗು. ಕನ್ನಡಿಯಲ್ಲಿ ಮುಖ ನೋಡಿಕೊಂಡು ಪೌಡರ್‌ ಹಚ್ಚಿಕೋ, ಸಾಕು’

‘ನನಗೆ ಇಪ್ಪತ್ತಾರು ವರ್ಷ. ನನ್ನ ಯಜಮಾನರಿಗೆ ಇಪ್ಪತ್ತೆಂಟು. ಇಬ್ಬರ ಪ್ರೀತಿಗೆ ಮಿತಿಯಿಲ್ಲ. ನಮ್ಮಿಬ್ಬರ ಮಧ್ಯೆ ಸಮಸ್ಯೆಯೂ ಇಲ್ಲ. ಆದರೂ ಒಮ್ಮೊಮ್ಮೆ ನನಗೆ ಅನಿಸುತ್ತೆ, ನನ್ನವರು ನನಗಿಂತ ಹೆಚ್ಚಾಗಿ ಹಿಂದಿ ನಟಿ ಕರೀನಾ ಕಪೂರ್ ಳನ್ನು ಇಷ್ಟಪಡ್ತಾರೆ ಅಂತ. ಏನು ಮಾಡಲಿ?’ ಎಂದು ಒಬ್ಬಳು ಕೇಳಿದ್ದಳು. ಅದಕ್ಕೆ ಸೇಥ್ ಉತ್ತರಿಸಿದ್ದರು – ‘ನಿನ್ನ ಗಂಡ ನಿದ್ದೆಯಲ್ಲಿ ಅವಳ ಹೆಸರನ್ನು ಹೇಳಿ ಕನವರಿಸಿದರೆ, ತಪ್ಪು ಭಾವಿಸಬೇಡ. ಅದು ನಿನ್ನ ಗಂಡನೊಬ್ಬನದೇ ಅಲ್ಲ, ಭಾರತೀಯ ಗಂಡಸರ ಚಟ.

ಹಾಗಂತ ಕರೀನಾ ನಿಮ್ಮ ಮನೆಗೆ ಬಂದು ಸಂಸಾರ ಮಾಡುವುದಿಲ್ಲ. ನಿನ್ನ ಗಂಡ ಹೋದರೂ ಸೇರಿಸಿಕೊಳ್ಳುವುದಿಲ್ಲ. ಕನಸಿನಲ್ಲಿ ಅವಳು ಆಗಾಗ ಬಂದು ಹೋದರೆ, ಹೋಗಲಿ. ಅದರಿಂದ ನಿನಗೇನೂ ಸಮಸ್ಯೆಯಿಲ್ಲ. ಅದರಿಂದ ಖರ್ಚೂ ಆಗುವುದಿಲ್ಲ. ಕರೀನಾ
ಜತೆ ಬೇರೆ ನಟಿಯರೂ ಬಂದು ಹೋಗಲಿ ಎಂದು ಪ್ರಾರ್ಥಿಸು. ಕೈಗೆಟುಕದ ದ್ರಾಕ್ಷಿ ಹುಳಿ ಎಂದು ಸುಮ್ಮನಾಗುತ್ತಾನೆ.’

ಇದೇ ರೀತಿ, ಬಹಳ ವರ್ಷ ಅಮೆರಿಕದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ Dear Abby  ಎಂಬ ಅಂಕಣ ಜನಪ್ರಿಯವಾಗಿತ್ತು. ಅಬಿಗೈಲ್ ವ್ಯಾನ್ ಬುರೇನ್ ಎಂಬ ಹೆಸರಿನಲ್ಲಿ ಪೌಲಿನ್ ಫಿಲಿಪ್ಸ್ ಎಂಬಾಕೆ ಇದನ್ನು ಬರೆಯುತ್ತಿದ್ದಳು. 1956ರಿಂದ ಆರಂಭವಾದ ಈ ಅಂಕಣ ಮೂವತ್ತೊಂದು ವರ್ಷಗಳ ತನಕ ಮುಂದುವರಿದುಕೊಂಡು ಬಂದಿತು. ಆನಂತರ ಅವಳ ಮಗಳು ಈ ಅಂಕಣ ವನ್ನು ಮುಂದುವರಿಸಿದಳು. ಇವಳ ಅಂಕಣವೂ ಬಹಳ ಸ್ವಾರಸ್ಯವಾಗಿರುತ್ತಿದ್ದವು.

ಒಮ್ಮೆ ಓದುಗಳೊಬ್ಬಳು ಒಂದು ಪ್ರಶ್ನೆ ಕೇಳಿದ್ದಳು – ‘ಮೊನ್ನೆ ನಾನು ಆಫೀಸಿಗೆ ಹೊರಟೆ. ಆಗ ನನ್ನ ಗಂಡ ಮನೆಯಲ್ಲಿ ಟಿವಿ ನೋಡುತ್ತಿದ್ದರು. ಸುಮಾರು ಒಂದು ಕಿಮಿ ಹೋಗಿರಬೇಕು, ನನ್ನ ಕಾರು ಕೆಟ್ಟು ನಿಂತಿತು. ನನ್ನ ಗಂಡನನ್ನು ಕರೆದುಕೊಂಡು ಹೋಗಲು, ನಾನು ಅಲ್ಲಿಂದ ನಡೆಯುತ್ತಾ ಮನೆಗೆ ಬಂದೆ. ನನಗೆ ನನ್ನ ಕಣ್ಣುಗಳನ್ನೇ ನಂಬಲು ಆಗಲಿಲ್ಲ. ನನ್ನ ಯಜಮಾನರು ಪಕ್ಕದ ಮನೆಯವರ ಮಗಳ ಜತೆ ಬೆಡ್ ರೂಮಿನಲ್ಲಿ ಮಲಗಿದ್ದರು.

ನನ್ನ ವಯಸ್ಸು ಮೂವತ್ತೆರಡು ಮತ್ತು ನನ್ನ ಯಜಮಾನರದು ಮೂವತ್ನಾಲ್ಕು. ಪಕ್ಕದ ಮನೆ ಹುಡುಗಿ ವಯಸ್ಸು ಇಪ್ಪತ್ತು. ನಾವು ಮದುವೆಯಾಗಿ ಹತ್ತು ವರ್ಷಗಳಾದವು. ನನ್ನ ಮುಂದೆ ಸಿಕ್ಕಿ ಬಿದ್ದ ಯಜಮಾನರು ತಮ್ಮ ತಪ್ಪು ಒಪ್ಪಿಕೊಂಡು ಕ್ಷಮಿಸು ವಂತೆ ಹೇಳಿದರು. ಕಳೆದ ಆರು ತಿಂಗಳಿನಿಂದ ಆ ಹುಡುಗಿ ಜತೆ ಈ ಚಕ್ಕಂದ ನಡೆದಿದೆ ಎಂದು ಹೇಳಿದರು. ಅವರು ಕೌನ್ಸೆಲಿಂಗ್‌ಗೆ ಹೋಗುತ್ತಿಲ್ಲ. ಈ ಘಟನೆಯಿಂದ ನಾನು ಜರ್ಜರಿತಳಾಗಿದ್ದೇನೆ. ನನಗೆ ನಿಮ್ಮ ಸಲಹೆ ಬೇಕಾಗಿದೆ.’

ಅದಕ್ಕೆ ಉತ್ತರ – ‘ನೀವು ಮನೆಯಿಂದ ಹೊರಟು ಸ್ವಲ್ಪ ದೂರ ಕ್ರಮಿಸಿದ ಬಳಿಕ ಕಾರು ಹಾಳಾಗುವುದಕ್ಕೆ ಹಲವು ಕಾರಣಗಳಿವೆ. ಯಾವತ್ತೂ ಹೊರಡುವ ಮುನ್ನ, ಪೆಟ್ರೋಲ್ ಹರಿಯುವ ಕೊಳವೆಯಲ್ಲಿ ಯಾವ ಸಮಸ್ಯೆಯೂ ಇಲ್ಲ ಎಂಬುದನ್ನು ಪರೀಕ್ಷಿಸಿ ಬೇಕು. ಕಾರನ್ನು ಸ್ಟಾರ್ಟ್ ಮಾಡುತ್ತಿದ್ದಂತೆ, ಜೋರಾಗಿ ಎಕ್ಸಿಲರೇಟರನ್ನು ಅದುಮಬೇಕು. ಅದು ಕ್ಲಿರ್ಯ ಆದ ನಂತರ, ವಾಕ್ಯೂಮ್ ಪೈಪ್ ಪರೀಕ್ಷಿಸಬೇಕು. ಕೆಲವು ಸಲ ಗ್ರೌಂಡಿಂಗ್ ವೈರ್ ಗಳಿಂದಲೂ ಸಮಸ್ಯೆ ಎದುರಾಗಬಹುದು. ಇವೆಲ್ಲವೂ ಸರಿಯಾಗಿದ್ದರೆ,  ಫ್ಯೂಯೆಲ್ ಪಂಪ್‌ನಲ್ಲಿ ಸಮಸ್ಯೆ ಯಿರಬಹುದು. ಅದೂ ಸರಿಯಿದ್ದರೆ, ಕಾರ್ಬೋರೇಟರ್‌ನಲ್ಲಿ ನೀರು ಹೊಕ್ಕಿದೆಯಾ ಎಂಬುದನ್ನು ಪರೀಕ್ಷಿಸಬೇಕು. ಇವೆಲ್ಲವನ್ನೂ ಪರೀಕ್ಷಿಸದೇ ಮನೆಯಿಂದ ಹೋಗಬಾರದು. ಅಷ್ಟಾಗಿಯೂ ದಾರಿ ಮಧ್ಯದಲ್ಲಿ ಕಾರು ಕೆಟ್ಟು ನಿಂತರೆ, ಗಂಡನಿಗೆ ಬರುವಂತೆ ಫೋನ್ ಮಾಡಬೇಕು.

ಗಂಡನನ್ನು ಕರೆದುಕೊಂಡು ಹೋಗಲು ಮನೆಗೆ ಬಂದಾಗ, ಅಲ್ಲಿ ಪೊಲೀಸರು ಕಾರನ್ನು ಟೋ ಮಾಡಿಕೊಂಡು ಹೋಗಬಹುದು. ಒಮ್ಮೆ ಮನೆಯಿಂದ ಆಫೀಸಿಗೆ ಹೋದರೆ, ಗಂಡನಿಗೆ ತಿಳಿಸಿ ಮನೆಗೆ ಬರುವುದು ಸಭ್ಯತೆ ಮತ್ತು ಸರಿಯಾದ ಶಿಷ್ಟಾಚಾರ.
ಇಲ್ಲದಿದ್ದರೆ ಈ ರೀತಿಯ ಭಾನಗಡಿಗಳಾಗುತ್ತವೆ. ನಾನು ‘ಕನ್ನಡ ಪ್ರಭ’ ಸಂಪಾದಕನಾಗಿದ್ದಾಗ, ಅದೇ ಸಂಸ್ಥೆಯಿಂದ ಪ್ರಕಟವಾಗುತ್ತಿದ್ದ ‘ಸಖಿ’ ಎಂಬ ವಾರಪತ್ರಿಕೆಗೆ ಕೆಲ ಕಾಲ ಸಂಪಾದಕನಾಗಿದ್ದೆ. ಅದರಲ್ಲಿ ಇಂಥದೇ ಅಂಕಣ ಆರಂಭಿಸಿದ್ದೆ. ನಾನೇ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದೆ. ಅದು ಮಜವಾಗಿತ್ತು. ಖುಷಿ ಕೊಡುತ್ತಿತ್ತು. ಈಗ ಇಂಥ ಒಂದು ಅಂಕಣಕ್ಕೆ space ಇದೆ. ಯಾವ ಪತ್ರಿಕೆಗಳೂ ಅಂಥವನ್ನು ಪ್ರಕಟಿಸುತ್ತಿಲ್ಲ. ನೋಡೋಣ..