Saturday, 14th December 2024

ಅವರು ಹಾಗೆ, ಇವರು ಹೀಗೆ…ಹಾಗಾದರೆ ನಾವು ?

ಶ್ವೇತಪತ್ರ

shwethabc@gmail.com

ಸಹಾನುಭೂತಿ ನಮ್ಮ ವ್ಯಕ್ತಿತ್ವದ ಮೂಲ ಗುಣವಾಗಲಿ. ಬೇರೆಯವರ ಜಾಗದಲ್ಲಿ ನಿಂತು ಅವರನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡೋಣ. ನಮ್ಮ ಮನಸ್ಸಿನ ತೃಪ್ತಿಗಾಗಿ ಬೇರೆಯವರನ್ನು ಜಡ್ಜ್ ಮಾಡುವುದು ಎಷ್ಟರ ಮಟ್ಟಿಗೆ ಸರಿ? ನಮ್ಮ ಖುಷಿಗಾಗಿ ನಮ್ಮ ಬಗ್ಗೆ ನಾವು ಪ್ರೀತಿಯನ್ನು ಬೆಳೆಸಿಕೊಳ್ಳೋಣ ನಮ್ಮನ್ನು ನಾವು ಹೇಗಿದ್ದೇವೇಯೋ ಹಾಗೆ ಒಪ್ಪಿಕೊಳ್ಳೋಣ.

ಅವಳಿಗೆ ಸಿಕ್ಕಾಪಟ್ಟೆ ದುರಹಂಕಾರ. ಎದೆ ಸೆಟೆಸಿಕೊಂಡೆ ನಡೀತಾಳೆ. ಏಯ್, ಅವನು ಸರಿ ಇಲ್ವಂತೆ. ಎಲ್ಲ ಲಾಸ್ ಆಗಿ ಬಿಟ್ಟಿದ್ದಾನಂತೆ. ಆಚೆ ಮನೆಯವನು ವಿಪರೀತ ತರ್ಲೆ, ಇವಳು ಸಿಕ್ಕಾಪಟ್ಟೆ ಅಧಿಕ ಪ್ರಸಂಗಿ, ಅವಳಿಗೆ ಎಷ್ಟು ಕೊಬ್ಬು ಅಂತೀಯಾ? ಅವರು ಜಾಸ್ತಿ ತಲಹರಟೆಗಳು. ಹಠಕ್ಕೆ ಬಿದ್ದವರಂತೆ ಬೇರೆಯವರ ಬಗ್ಗೆ ಜಡ್ಜ್‌ಮೆಂಟಲ್ ಆಗಿಬಿಡ್ತೀವಿ, ಇದು ಮನುಷ್ಯನ ಸಹಜ ಪ್ರವೃತ್ತಿ.

ಮನುಷ್ಯನ ಸ್ವಭಾವದ ಸಹಜ ಭಾಗ. ಆದರೆ ನಾವೆಲ್ಲ ಯಾಕೆ ಬೇರೆಯವರನ್ನು ಜಡ್ಜ್ ಮಾಡ್ತೀವಿ? ಬೇರೆಯವರ ಜೀವನದ ಬಗ್ಗೆ ನಾವು ತೀರ್ಪುಗಾರರಾಗಿ ಬಿಡ್ತೀವಿ ಯಾಕೆ? ಇದಕ್ಕೆ ಕಾರಣ ಹುಡುವುದು ತುಂಬಾ ಕಷ್ಟ. ನಮ್ಮ ಜಗತ್ತಿನೊಳಗೆ ಕುಳಿತು ಬೇರೆಯ ವರ ಜಗತ್ತನ್ನು ಅಳೆಯುವುದು ತುಂಬಾ ಸುಲಭ. ಅದಕ್ಕೇ ನಾವೆಲ್ಲ ಸುಲಭವಾಗಿ ಜಡ್ಜ್‌ಮೆಂಟಲ್ ಆಗಿಬಿಡ್ತೀವಿ. ಯೋಚನೆ ಮಾಡುವುದಕ್ಕೆ ನಮಗೆ ತಾಳ್ಮೆ, ಸಹಾನು ಭೂತಿ, ವಿಶಾಲವಾಗಿ ಯೋಚಿಸುವ ಮನಸ್ಸು ಬೇಕಿರುತ್ತದೆ.

ಇಷ್ಟೆಲ್ಲ ನಮಗೆಲ್ಲಿಂದ ಬರಬೇಕು? ಥಟ್ಟಂತ ಎದುರಿಗಿರುವವರನ್ನ ಅಳೆದು-ತೂಗಿ ಬಿಟ್ಟಿರುತ್ತೇವೆ ಯೋಚಿಸದೆ- ಅರ್ಥೈಸದೇ. ನಮ್ಮೆಲ್ಲರ ಈ ಪರಿಪಾಠವನ್ನು ಮಾನವರ ವರ್ತನೆಯ ಸಂಶೋಧನೆಯಲ್ಲಿ ತೊಡಗಿರುವ ಡಾ. ಜಾನ್ ಡಿಮಾರ್ಟಿನಿ ಸ್ವ-ನೀತಿವಂತಿಕೆ (ನಾನು ಸರಿ ಬೇರೆಯವರು ತಪ್ಪು) ಎಂದು ಬಣ್ಣಿಸುತ್ತಾನೆ. ಜಡ್ಜ್ ಮಾಡುವುದೆಂದರೆ ನಾವು ಭೇಟಿ ಮಾಡುವ ಎಲ್ಲರನ್ನೂ- ಎಲ್ಲವನ್ನೂ ಹೆಚ್ಚು-ಕಡಿಮೆ ಎಂದು ತೂಗಿ ನೋಡುವ ಮೇಲ್ದರ್ಜೆ, ಕೆಳದರ್ಜೆಯ ಎಂದು ಅಂದಾಜಿಸುವ ಪ್ರಯತ್ನವೇ ಆಗಿರುತ್ತದೆ. ನಾವೆಲ್ಲ ಯಾವಾಗಲೂ ನಾವೇ ಸರಿ, ನಾವೇ ಉತ್ತಮರು, ನಾವೇ ಅತ್ಯುತ್ತಮರು ಎಂಬ ವಿಚಾರವನ್ನು ಪ್ರಯತ್ನಪೂರ್ವಕವಾಗಿ ಜನ್ಮಜಾತವಾಗಿ ರೂಢಿಸಿಕೊಂಡಿರು ವವರು. ಈ ರೂಢಿ ಸಹಜವಾಗಿಯೇ ನಮ್ಮ ಸುತ್ತಲಿನ ಜಗತ್ತನ್ನು ತಪ್ಪಾ? ಸರಿಯಾ?ಎನ್ನುವ ದೃಷ್ಟಿಕೋನದ ನೋಡುವಂತೆ ಮಾಡುತ್ತದೆ.

ಹಾಗಾಗಿ ನಾವೆಲ್ಲ ವ್ಯಕ್ತಿಗಳನ್ನುಳೆಯಲು ಶುರುವಿಟ್ಟುಕೊಳ್ಳುತ್ತೇವೆ. ಹೀಗೆ ಬೇರೆಯವರನ್ನು ಅಳೆಯುವಲ್ಲಿ ನಮ್ಮ ವ್ಯಕ್ತಿತ್ವವೂ ಅತ್ಯಂತ ನಿರ್ಣಾಯಕ. ಆಸ್ಕರ್ ವೈಲ್ಡನ ಅದ್ಭುತ ಒಂದು ಮಾತಿದೆ- ಜೀವನ ದಲ್ಲಿ ನೀವು ಸೋತಿರಾ ಅಥವ ಗೆದ್ದಿರಾ ಎನ್ನುವುದು ಮುಖ್ಯವಲ್ಲ, ಎಷ್ಟು ಚೆನ್ನಾಗಿ ಸೋಲಿನ ಹೊಣೆಗಾರಿಕೆಯನ್ನು ಬೇರೆಯವರ ತಲೆಗೆ ಕಟ್ಟುತ್ತೀರಿ ಎನ್ನುವುದರಲ್ಲಿ ಮನುಷ್ಯನ ನಿಜವಾದ ನೈತಿಕತೆ ಅಡಗಿದೆ ಎಂದು. ಜಡಜ್‌ಮೆಂಟಗಿ ಬಿಡುವ ನಮ್ಮ ಮನಃಸ್ಥಿತಿಗೂ ಈ ಮಾತು ಹೆಚ್ಚು ಒಪ್ಪುತ್ತದೆ.

ನಮ್ಮ ನಮ್ಮ ವರ್ತನೆಗಳಿಗೆ ಮನುಷ್ಯರಾದ ನಾವು ಅನೇಕ ಕಾರಣಗಳನ್ನು ಕೊಡುತ್ತ ಹೋಗುತ್ತೇವೆ. ತಪ್ಪು ನಮ್ಮಿಂದಾದರೂ ಅದಕ್ಕೆ ಕಾರಣ ನಾವಲ್ಲ ಎಂಬು ದನ್ನು ನಾವು ಹೆಚ್ಚಾಗಿ ಪ್ರತಿಪಾದಿಸುತ್ತೇವೆ. ನಮ್ಮ ತಪ್ಪುಗಳನ್ನು ಬೇರೆಯವರಲ್ಲಿ ಹುಡುಕುವ ಪ್ರಯತ್ನ ಮಾಡುತ್ತೇವೆ. ನಮ್ಮ ಪ್ರಜ್ಞಾಪೂರ್ವಕ ಮನಸ್ಸಿಗೆ ಗೊತ್ತಿರುತ್ತದೆ ನಮ್ಮ ತಪ್ಪಿನ ಬಗ್ಗೆ. ಹಾಗಾಗಿ ಅದನ್ನು ಸದಾ ಮುಚ್ಚಿ ಹಾಕುವ ಪ್ರಯತ್ನದ
ನಾವಿರುತ್ತೇವೆ. ಹೀಗೆ ಮುಚ್ಚಿಹಾಕುವ ಪ್ರಯತ್ನದಲ್ಲಿ ನಾವು ಮೊದಲು ಮಾಡುವ ಕೆಲಸವೇ ತಪ್ಪನ್ನು ಹಿಗ್ಗಿಸಿ ಬೇರೆಯವರ ಮೇಲೆ ಕಟ್ಟಿ ಬಿಡುವುದು. ಆ ಮೂಲಕ ನಮ್ಮೊಳಗಿನ ಕೆಟ್ಟದ್ದನ್ನು ಬೇರೆಯವರಲ್ಲಿ ಕಾಣುವ ಪ್ರಯತ್ನ ಮಾಡತೊಡಗುತ್ತೇವೆ. ತಪ್ಪನ್ನು ಮೊದಲು ನಾವು ನಿರಾಕರಿಸುತ್ತೇವೆ.

ನಂತರದಲ್ಲಿ ಅದನ್ನು ನಾವು ಪ್ರತ್ಯಾರೋಪಿಸುತ್ತೇವೆ. ಇದು ನಮ್ಮ ನೆರಳನ್ನು ಯಾರಿಗೂ ಕಾಣದಂತೆ ಬಚ್ಚಿಟ್ಟುಕೊಳ್ಳುವ ಪ್ರಯತ್ನ. ನಮ್ಮದೇ ವ್ಯಕ್ತಿತ್ವದ ಮತ್ತೊಂದು ಕರಾಳ ಮುಖ. ಪ್ರತ್ಯಾರೋಪ ಅಥವಾ ಪ್ರೊಜೆಕ್ಷನ್ ನಮ್ಮ ಕೀಳರಿಮೆಯನ್ನು ಬೇರೆಯವರ ನೈತಿಕ ಕೊರತೆ ಎಂದು ಎತ್ತಿ ಹಿಡಿಯುವ ಪ್ರಯತ್ನವೇ ಆಗಿರುತ್ತದೆ. ವ್ಯಕ್ತಿತ್ವದ ಆಳದಲ್ಲಿ ಮನುಷ್ಯರೆಲ್ಲರೂ ಒಂದೇ. ಎಲ್ಲ ಮನುಷ್ಯರಲ್ಲೂ ಹೆಚ್ಚು ಕಡಿಮೆ ಒಂದೇ ತೆರನಾದ ಗುಣ ಲಕ್ಷಣಗಳಿರುತ್ತವೆ. ಆದರೆ ನಾವು ವಿಭಿನ್ನರಾಗೋದು ಹೇಗೆಂದರೆ ಈ ಗುಣಲಕ್ಷಣಗಳನ್ನು ಅಭಿವ್ಯಕ್ತಿಸುವ ವಿಧಾನದಲ್ಲಿ. ಪ್ರತಿ ವ್ಯಕ್ತಿಯೂ ಸಂದರ್ಭಕ್ಕನುಗುಣವಾಗಿ ಬದುಕಿನ ಬೇರೆ ಬೇರೆ ಸ್ತರಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ತನ್ನ ಗುಣವನ್ನು ವ್ಯಕ್ತಪಡಿಸುತ್ತಾನೆ.

ಕೆಲವು ವ್ಯಕ್ತಿಗಳು ತಮ್ಮ ಅನಿಸಿಕೆಗಳನ್ನು ಪ್ರಬಲವಾಗಿ ತೋರ್ಪಡಿಸಿದರೆ ಕೆಲವರು ಬಹಳ ಸುಪ್ತವಾಗಿ ಅಭಿವ್ಯಕ್ತಿಸುತ್ತಾರೆ. ಹೀಗೆನ್ನುತ್ತಾನೆ
ವ್ಯಕ್ತಿತ್ವದ ಬಗ್ಗೆ ದೀರ್ಘವಾದ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದ ಬ್ರಿಟಿಷ್ ಅಮೆರಿಕದ ಮನೋವಿಜ್ಞಾನಿ ರೇಮಂಡ್ ಕೆಟಲ. ನಾವು ಯಾರನ್ನಾದರೂ ಜಡ್ಜ್ ಮಾಡ್ತಾ ಇದೀವಿ ಅಂದರೆ ನಮ್ಮನ್ನ ನಾವು ಜಡ್ಜ್ ಮಾಡಿಕೊಳ್ಳುತ್ತಿರುತ್ತೇವೆ ಅಂತಲೇ ಲೆಕ್ಕ. ಆದರೆ ಅದನ್ನು
ಒಪ್ಪಿಕೊಳ್ಳುವ ಮನಸ್ಥಿತಿ ನಮ್ಮದಾಗಿರುವುದಿಲ್ಲವಷ್ಟೇ.

ನಾವೆಲ್ಲ ಬೇರೆಯವರನ್ನು ಜಡ್ಜ ಮಾಡುವಾಗ ಸಾಮಾನ್ಯವಾಗಿ ತೊಡಗಿಸಿಕೊಳ್ಳುವ ಸುಲಭದ ರೀತಿಯೆಂದರೆ ಬೇರೆ ವ್ಯಕ್ತಿಯ ನಡತೆ ಯನ್ನು ನಿರ್ಣಯಿಸುವುದು. ಉದಾಹರಣೆಗೆ ಯಾರೋ ಹೆಣ್ಣುಮಗಳು ತನ್ನ ಗಂಡನನ್ನ ಗಟ್ಟಿಯಾದ ದನಿಯಲ್ಲಿ ಎಲ್ಲರ ಮುಂದೆ ಹೆಸರಿಡಿದು ಕರೆದರೆ ಅವಳನ್ನು ನಾವು ‘ಎಷ್ಟು ದುರಹಂಕಾರ ಅವಳಿಗೆ ಅಲ್ಲವಾ?’ ಅಂತಲೂ, ಇನ್ಯಾರೋ ಬಡತನದಿಂದ ಮೇಲೆ ಬಂದು ಸ್ವಲ್ಪ ಸ್ಟೈಲಿಶ್ ಆಗಿದ್ರೆ ‘ತಲೆನೇ ನಿಲ್ಲಲ್ಲ ಇವನಿಗೆ’ ಅಂತಲೂ, ಸ್ವಲ್ಪ social ಆಗಿ ಎಲ್ಲರ ಜತೆ ಮೂವ್ ಮಾಡಿದ್ರೆ‘ಅದ್ ಏನ್ ಒಳ್ಳೆ ಅಸಹ್ಯವಾಗಿ ಆಡ್ತಾಳೆ’ ಅಂತಲೂ ಆ ಕ್ಷಣದ ಆ ವ್ಯಕ್ತಿಗಳ ವರ್ತನೆಗೆ ಅನುಸಾರವಾಗಿ ಅವರನ್ನು ಜಡ್ಜ್ ಮಾಡಿಬಿಟ್ಟಿರುತ್ತೇವೆ. ನಿಜವಾಗಿ ನಮಗೆ ನಾವು ಜಡ್ಜ್ ಮಾಡಿದ ವ್ಯಕ್ತಿಗಳ ಪೂರ್ಣ ಪರಿಚಯವೇ ಇರುವುದಿಲ್ಲ, ಹೀಗಿದ್ದರೂ ಅವತ್ತಿನ ಆ ಸಂದರ್ಭವನ್ನು analyze ಮಾಡುವುದನ್ನು ಬಿಟ್ಟು ಅವರ ಆ ಸಂದರ್ಭದ ವರ್ತನೆಯನ್ನು ಅವರ ವ್ಯಕ್ತಿತ್ವಕ್ಕೆ ಹೋಲಿಸಿ ಆರೋಪಿಸಿ ಬಿಟ್ಟಿರುತ್ತೇವೆ.

ನಾವು ಬೇರೆಯವರನ್ನು ಜಡ್ಜ್ ಮಾಡ್ಲಿಕ್ಕೆ ಶುರುವಿಟ್ಟುಕೊಂಡರು ನಮ್ಮ ಮಿದುಳಿನ ಬಹುತೇಕ ಭಾಗವನ್ನು ಅದೇ ನೆಗೆಟಿವಿಟೀ ಆವರಿಸಿ ಕೊಂಡು ಬಿಟ್ಟಿರುತ್ತದೆ. ನಾವೆಲ್ಲ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕಾದ ಅಂಶವೆಂದರೆ ಬೇರೆಯವರನ್ನು judge ಮಾಡ್ತ-ಮಾಡ್ತ ನಮ್ಮ ವ್ಯಕ್ತಿತ್ವವೇ ಹೆಚ್ಚು negative ಆಗಿಬಿಟ್ಟಿರುತ್ತದೆ. ನಮ್ಮ ನೆಮ್ಮದಿ, ಖುಷಿ, ಶಕ್ತಿಯನ್ನು ಬೇಡದ ಋಣಾತ್ಮಕ ಅಂಶಗಳಿಗೆ ವಿನಿಯೋಗಿಸಿ ಟೊಳ್ಳಾಗಿ ಬಿಟ್ಟಿರುತ್ತೇವೆ. ಅನೇಕ ಕಾರಣಗಳಿಗೆ ನಾವು ಜನರನ್ನ judge ಮಾಡ್ತೀವಿ ಅದರಲ್ಲೂ ಮುಖ್ಯವಾಗಿ ಎದುರಿಗಿರುವ ವ್ಯಕ್ತಿ ನಮಗೆ ಹೆಚ್ಚು ಪರಿಚಿತವಲ್ಲದಿರುವಾಗ, ಆತನ ಅಥವಾ ಆಕೆಯ ವೈಯಕ್ತಿಕ ನಂಬಿಕೆಗಳು, ಮೌಲ್ಯಗಳು ಅಥವಾ ವರ್ತನೆಯ ಜತೆ ನಾವು ಗುರುತಿಸಿಕೊಳ್ಳಲು ಆಗದೇ ಹೋದಾಗ ಅಥವಾ ಎದುರಿಗಿರುವ ವ್ಯಕ್ತಿಯ ಮುಂದೆ ನಮ್ಮನ್ನ ನಾವು ಕಡಿಮೆಯೆಂದು ಗುರುತಿಸಿಕೊಂಡಾಗ We start judging people.

ಇತ್ತೀಚೆಗೆ ಸ್ಟೂಡೆಂಟ್ ಒಬ್ಬಳಿಗೆ ಕೌನ್ಸೆಲಿಂಗ್ ಮಾಡ್ತಾ ಇದ್ದೆ. ಆ ಹುಡುಗಿ ತಾನು ತನ್ನ ದೇಹವನ್ನು ಇತರ ಹುಡುಗಿಯರ ದೇಹದ ಜತೆ ಹೋಲಿಸಿಕೊಂಡು ಆ ಕೀಳರಿಮೆಯಿಂದ ಹೊರಬರಲು ಬೇರೆಯವರನ್ನು ಹೇಗೆ judge ಮಾಡ್ತಾ ಇದ್ದೆ ಎನ್ನುವ ತನ್ನ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದಳು. ಅವಳ ಪ್ರಕಾರ ಸಿಕ್ಕಾಪಟ್ಟೆ ಚೆಂದಕ್ಕಿರುವ ತನ್ನದೇ ವಯಸ್ಸಿನ ಹುಡುಗಿಯರ ದೇಹದ ಜತೆ ತನ್ನ ದೇಹವನ್ನು ಹೋಲಿಸಿಕೊಂಡಾಗಲೆಲ್ಲ ಅವಳಿಗೆ ಒಂಥರಾ ವಿಚಿತ್ರವಾದ ಭಯ ಉಂಟಾಗುತ್ತಾ ಇತ್ತು.

ಯಾಕೆಂದರೆ ನಾನು ಅವರಷ್ಟು ಅಂದವಾಗಿಲ್ಲವಲ್ಲ ಅನ್ನುವ ಕೀಳರಿಮೆ ಅವಳನ್ನು ಕಾಡುತ್ತಿತ್ತು. ಆಗೆಲ್ಲ ನಾನು ಆ ಚೆಂದಕ್ಕಿರುವ
ಹುಡುಗಿಯರನ್ನ judge ಮಾಡಿ ಮಾತಾಡೋಕೆ ಶುರುಮಾಡಿದೆ. ಈ ಹುಡುಗಿಯರು ನೋಡು ಹೆಂಗೆ ಬಟ್ಟೆ ಹಾಕ್ತಾರೆ ಅಸಹ್ಯವಾಗಿ, ಯಾರ್ ಯಾರೋ ಹುಡುಗರ ಜತೆ ತಿರುಗುತ್ತಾರೆ, ತುಂಬ ಕೊಬ್ಬು ತೋರಿಸ್ತಾರೆ…ಹಿಂಗೆ ಪ್ರತಿಸಲ ಅವರ ಬಗ್ಗೆ ಏನೆನೋ judge  ಮಾಡಿದಾಗಲೆಲ್ಲ ಆ ತಳಮಳಗಳೆಲ್ಲವೂ ನನ್ನ ಮನಸ್ಸಿನ ಒಳಗಿನವೇ ಆಗಿದ್ದವು. ಮೊದಲು ನಾನು ಅವರೊಟ್ಟಿಗೆ ನನ್ನನ್ನ ನಾನು
compare ಮಾಡಿಕೊಂಡೆ. ಯಾವಾಗ ಅವರೆಲ್ಲ ನನಗಿಂತ ಚೆನ್ನಾಗಿದ್ದಾರೆ ಎನ್ನುವ ಭಾವನೆ ಬರತೊಡಗಿತೋ I
started judging them ಆ ಮೂಲಕವಾದರು ಅವರು ನನಗಿಂತ ಕಡಿಮೆ ಅನ್ನುವ ಭಾವನೆಯನ್ನ ನಾನು ಮೂಡಿಸಿಕೊಳ್ಳಬೇಕಿತ್ತು.

ಹೀಗೆ ನನ್ನ ಸ್ಟೂಡೆಂಟ್ ಮಾತು ಮುಂದುವರಿಸುತ್ತಿದ್ದಳು. ಅಕ್ಷರಶಃ ಅವಳ ಮಾತುಗಳು ನಿಜವೆನಿಸಿದವು. ನಾವು ಬೇರೆಯವರ ಬಗ್ಗೆ ವ್ಯಕ್ತಪಡಿಸುವ ತೀರ್ಪು ನಮ್ಮದೇ ಮನಸ್ಸಿನ ಭಾವನೆಗಳ ರಿಫ್ಲೆಕ್ಷನ್ ಆಗಿರುತ್ತದೆ. ಬೇರೆಯವರನ್ನು judge ಮಾಡುತ್ತ ನಾವು ಅವರನ್ನ
define ಮಾಡಿರಲ್ಲ. ನಮ್ಮನ್ನ ನಾವು define ಮಾಡಿಕೊಂಡಿರುತ್ತೇವೆ. ಇಡೀ ನಮ್ಮ ಸುತ್ತಲಿನ ಪ್ರಪಂಚವೇ ಒಂದು ಕನ್ನಡಿ ಇದ್ದ ಹಾಗೆ. ಅದು ಬೇರೆಯವರನ್ನುನಿರೂಪಿಸುವುದಿಲ್ಲ. ನಮ್ಮನ್ನು ನಮಗೆ ಪರಿಚಯಿಸುತ್ತದೆ.

ಬೇರೆಯವರನ್ನು bಜಛಿ ಮಾಡುವ ಅಂಶಗಳು ನಮಗೆ ನಾವೇ ಒಪ್ಪಿಕೊಳ್ಳಲಾರದ ಪ್ರತಿಬಿಂಬಿತ ವಿಚಾರಗಳಾಗಿರುತ್ತವೆ. ಬೇರೆಯವ ರನ್ನು ಯಾವ ಅಳತೆಗೋಲಿನಿಂದ ನಾವು ಅಳೆಯಲ್ಪಡುತ್ತಿರುತ್ತೇವೋ, ಅದೇ ಅಳತೆಗೋಲು ನಮ್ಮನ್ನು ಅಳೆಯು ತ್ತಿರುತ್ತದೆ. ಬೇರೆ ಯವರನ್ನು ಕಂಡಾಗ ನಮಗೊಂದಿಷ್ಟು ಇರಿಟೇಶನ್ ಗಳಿರುತ್ತವೆ ಆವು ಸದ್ದಿಲ್ಲದೆ ನಮ್ಮವೇ ಇರಿಟೇಶನ್ ಗಳು ಸಹ ಆಗಿಬಿಟ್ಟಿರಬಹುದು. ಈ ಸ್ವಯಂ ಜಾಗೃತಿಯನ್ನು ನಾವು ಬೆಳೆಸಿಕೊಂಡುಬಿಟ್ಟರೆ ಕಡಿಮೆ ಜಡ್ಜ್ ಮಾಡತೊಡಗುತ್ತೇವೆ.

judging ಅನ್ನೋದ ನಮ್ಮ ನಂಬಿಕೆಯ-ಅರ್ಥೈಸುವಿಕೆಯ ಹೋಲಿಕೆಯೇ ಆಗಿರುತ್ತದೆ. ಆದ್ದರಿಂದ ಜಡ್ಜಿಂಗ್ ಅನ್ನುವುದು ಬೇರೆಯ ವ್ಯಕ್ತಿಯನ್ನ ನಮ್ಮ ದೃಷ್ಟಿಕೋನ ದಲ್ಲಿ, ನಮ್ಮ ಮನೋಭಾವದಲ್ಲಿ, ನಮ್ಮ ಮನಸ್ಸಿನ ಚೌಕಟ್ಟಿನೊಳಗಿನಿಂದ ಗುರುತಿಸುವುದೇ ಆಗಿರುತ್ತದೆ. ತೀರ್ಪು ಕೊಡುವುದರ ಮೂಲಕ ನಾವು negative ಆಗುತ್ತೇವೆ. ಆದರೆ ಅರ್ಥಮಾಡಿಕೊಳ್ಳುವುದರ ಮೂಲಕ ನಾವು ಬೆಳೆಯುತ್ತೇವೆ. ಬೇರೆಯವರನ್ನು judge ಮಾಡುತ್ತ ಕುಣಿಕೆಗೆ ಕೊರಳೊಡ್ಡುತ್ತ ಹಗ್ಗವನ್ನು ನಮ್ಮ ಕುತ್ತಿಗೆಗೆ ನಾವೇ ಸುತ್ತಿಕೊಳ್ಳುತ್ತೇವೆ.

ಈ ಪ್ರವೃತ್ತಿಯನ್ನು ನಿಲ್ಲಸೋಣ. ವಿಶಾಲ ಮನಸ್ಸನ್ನ ಬೆಳೆಸಿಕೊಳ್ಳೋಣ. ಎಲ್ಲ ವಿಷಯವನ್ನು ಒಪ್ಪಿಕೊಳ್ಳುವ ಮನಸ್ಸು ನಮ್ಮದಾಗಲಿ. ಸಂದರ್ಭವನ್ನು ಸರಿಯಾಗಿ ಅರ್ಥೈಸದೇ ಯಾವುದೇ ತೀರ್ಮಾನಕ್ಕೆ ಬರುವುದು ತಪ್ಪು. ಸಹಾನುಭೂತಿ ನಮ್ಮ ವ್ಯಕ್ತಿತ್ವದ ಮೂಲ ಗುಣವಾಗಲಿ. ಬೇರೆಯವರ ಜಾಗದಲ್ಲಿ ನಿಂತು ಅವರನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡೋಣ. ನಮ್ಮ ಮನಸ್ಸಿನ ತೃಪ್ತಿಗಾಗಿ ಬೇರೆಯವರನ್ನು ಜಡ್ಜ್ ಮಾಡುವುದು ಎಷ್ಟರ ಮಟ್ಟಿಗೆ ಸರಿ? ನಮ್ಮ ಖುಷಿಗಾಗಿ ನಮ್ಮ ಬಗ್ಗೆ ನಾವು ಪ್ರೀತಿಯನ್ನು ಬೆಳೆಸಿಕೊಳ್ಳೋಣ ನಮ್ಮನ್ನು ನಾವು ಹೇಗಿದ್ದೇವೇಯೋ ಹಾಗೆ ಒಪ್ಪಿಕೊಳ್ಳೋಣ.

ಪ್ರತಿದಿನ ಕತ್ತಲೇ ಪ್ರಪಂಚಕ್ಕೆ ಬೆಳಕಾಗುವ ಅವಕಾಶ ನಮಗೆ ದೊರೆಯುತ್ತದೆ. ಈ ಅವಕಾಶವನ್ನು ಬೇರೆಯವರನ್ನು judge ಮಾಡುತ್ತ ಕೂತು ಟೈಮ್ ವೇಸ್ಟ್ ಮಾಡಿಕೊಳ್ಳುವುದು ಬೇಡ ನಮ್ಮ ಸುತ್ತಲಿನ ಪ್ರಪಂಚವನ್ನು ಹೆಚ್ಚು ಪ್ರಶಂಶಿಸುತ್ತಲೂ, ಸಹಾನುಭೂತಿಯಿಂದ
ಕಾಣುತ್ತಲೂ ಬದುಕೋಣ!