ವಿದ್ಯಮಾನ
ಅನುಪಮಾ ಬೆಟ್ಟದಪುರ
ವಿದೇಶಗಳಿಂದ ಶೀಘ್ರವಾಗಿ ಹಣವೆತ್ತಬಲ್ಲ ಜಾಣ್ಮೆ ಇರುವಂಥವರನ್ನೇ ಪಾಕಿಸ್ತಾನದಲ್ಲಿ ವಿದೇಶಾಂಗ ಸಚಿವರನ್ನಾಗಿ ಮಾಡಲಾಗುತ್ತದೆ. ಅಮೆರಿಕದ ಹಬೀಬಿ ಬ್ಯಾಂಕಿನ ನಿರ್ವಹಣೆಯನ್ನು ಸೂಕ್ತವಾಗಿ ಮಾಡದೆ ಕಾಳಧನ ಮಾಡುವುದರಲ್ಲಿ ಕುಖ್ಯಾತಿ ಪಡೆದಾತ ಅಲ್ಲಿನ ಅರ್ಥಸಚಿವ.
ದಿನ ಬೆಳಗಾದರೆ ಬಾಂಬ್ ಸ್ಫೋಟಿಸಿ, ಬೇರೆಯವರ ನೋವಲ್ಲಿ ನಲಿದಾಡುತ್ತಿದ್ದ ಪಾಕಿಸ್ತಾನ ಈಗ ತಿರುಪೆ ಎತ್ತುವ ಸ್ಥಿತಿಗೆ ತಲುಪಿದೆ. ನಮ್ಮ ‘ಕಾಮಿಡಿ ಸರ್ಕಸ್
’ನಲ್ಲಿ ಆಗುವುದಕ್ಕಿಂತ ಹೆಚ್ಚು ಮೋಜು, ನಗೆಚಟಾಕಿಗಳ ಸಾಲುಸಾಲು ಪ್ರಸಂಗಗಳ ಸುದ್ದಿಗಳು ಪಾಕಿಸ್ತಾನದಿಂದ ಬಿತ್ತರವಾಗುತ್ತಿವೆ. ದಿನಕ್ಕೊಂದು ಚಿಂದಿ ಕಥೆ. ಇದರಿಂದಾಗಿ ಭಾರತದ ಕಾಮಿಡಿ ಷೋಗಳ ಟಿಆರ್‌ಪಿ ಕುಸಿಯುವ ಎಲ್ಲಾ ಲಕ್ಷಣಗಳಿವೆ.
ತೀರಾ ಪ್ರಯಾಸದಿಂದ ಚುನಾವಣೆಯನ್ನು ನಡೆಸಿ ಶೆಹಬಾಜ್ ಷರೀಫ್ ರನ್ನು ಪ್ರಧಾನಿಯನ್ನಾಗಿ ಮಾಡಿದೆ ಪಾಕಿಸ್ತಾನ. ಎಲ್ಲಾ ದೇಶಗಳಲ್ಲಿ ಪ್ರಧಾನಿಯಾಗು ವುದೆಂದರೆ ಹೆಮ್ಮೆ ಮತ್ತು ಗೌರವದ ಸಂಗತಿಯೇ. ಆದರೆ ಪಾಕಿಸ್ತಾನದಲ್ಲಿ ಪ್ರಧಾನಿಯಾದವವರಿಗೆ ಇಂಥ ಸ್ಥಿತಿ ದಕ್ಕುವುದು ಕೊಂಚ ದುಸ್ತರವೇ. ಅಲ್ಲಿ ಪ್ರಧಾನಿ ಹುದ್ದೆಗೆ ಏರುವವರನ್ನು ಕಂಡಾಗ ‘ಅಯ್ಯೋ ಪಾಪ’ ಎನಿಸುತ್ತದೆ. ದಿವಾಳಿಯ ಹಂತಕ್ಕೆ ಬಂದು ನಿಂತಿರುವ ದೇಶವೊಂದರ ನೇತೃತ್ವ ವಹಿಸಲು ಮುಂದೆ ಬಂದವರನ್ನು ಕಂಡಾಗ ಹೀಗೆನಿಸುವುದು ಸಹಜವೇ.
ಪಾಕಿಸ್ತಾನದಲ್ಲಿ ಪ್ರಧಾನಿ ಪಟ್ಟ ಅಲಂಕರಿಸಿದವರಿಗೆ ಸ್ವತಂತ್ರವಾಗಿ ಯಾವುದೇ ನಿಲುವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ; ಸೇನೆ ಹೇಳಿದಂತೆ ಕುತ್ತಿಗೆಯನ್ನು ಆಡಿಸಿದರಷ್ಟೇ ಆತ ಪ್ರಧಾನಿಯಾಗಿ ಮುಂದುವರಿಯಬಹುದು ಮತ್ತು ಬದುಕಬಹುದು. ಎಲ್ಲಕ್ಕಿಂತ ಹೆಚ್ಚಾಗಿ, ಸೇನೆ ಹೇಳಿದಾಗ ಸೂಟು ಬೂಟು ಧರಿಸಿ, ‘ಯಾಕೆ? ಏನು?’ ಎಂದು ಕೇಳದೆ, ವಿಶ್ವದ ಮುಂದೆ ಭಿಕ್ಷೆ ಬೇಡಲು ತೆರಳಬೇಕು. ಇಲ್ಲದಿದ್ದರೆ ಅವನನ್ನು ಗುಂಡಿಟ್ಟು ಕೊಲ್ಲುವುದೋ, ಸೆರೆಮನೆಗೆ ತಳ್ಳುವುದೋ ಪಾಕಿಸ್ತಾನ ದಲ್ಲಿ ನಡೆದುಬಂದಿರುವ ಸಂಪ್ರದಾಯ!
ಪಾಕಿಸ್ತಾನಕ್ಕೆ ಈಗ ಎಲ್ಲಾ ಸಂಕಟಗಳು ಒಟ್ಟೊಟ್ಟಿಗೆ ಬಂದೆರಗುತ್ತಿವೆ. ನಮ್ಮಲ್ಲಿರುವ ಎಲ್ಲ ದೇವ-ದೇವತೆಗಳು ಅವರನ್ನು ಸಾಮೂಹಿಕವಾಗಿ ಶಪಿಸಿರುವಂತೆ ಅದು ವಿಲವಿಲ ಒದ್ದಾಡುತ್ತಿದೆ. ಅಲ್ಲಿನ ಜನಕ್ಕೆ ತಿನ್ನಲು ಹಿಟ್ಟಿಲ್ಲ ಅನ್ನೋದು ಹಳೆಯ ಕಥೆ. ಇದೀಗ ಕಾಶ್ಮೀರದಲ್ಲಿ ರಾವಿ ನದಿಗೆ ಸೇತುವೆ ಕಟ್ಟಿದ ನಂತರ ನೀರಿಗೂ ಹಾಹಾಕಾರವೆದ್ದಿದೆ. ಅದರೊಟ್ಟಿಗೆ ಆ-ನ್, ಬಲೂಚ್‌ಗಳಿಂದ ರಾಕೆಟ್‌ಗಳು ಎರಗಿ ಬೀಳುತ್ತಿವೆ. ಯಾವ ಸಮಸ್ಯೆಯನ್ನು ಮೊದಲು ಎದುರಿಸಬೇಕೆಂಬ ಗೊಂದಲ ಈಗ ಪಾಕಿಸ್ತಾನಕ್ಕೆ. ಅವರ ಜನಸಂಖ್ಯಾ ಸೋಟವನ್ನಂತೂ ಕೇಳಲೇ ಬೇಡಿ. ಮಾಡಲು ಯಾವ ಕೆಲಸವಿಲ್ಲದಿದ್ದರೂ ಅಲ್ಲಿ ಮಕ್ಕಳನ್ನು ಯಥೇಚ್ಛವಾಗಿ ಹೆರಲು ಯಾವುದೇ ಸಮಸ್ಯೆಯಿಲ್ಲ.
ವಿಶ್ವದಲ್ಲೇ ಅತಿ ಹೆಚ್ಚಿನ ಜನನ ಪ್ರಮಾಣ ಅಫ್ಘಾನಿಸ್ತಾನದಲ್ಲಿ ದಾಖಲಾದರೆ, ನಂತರದ ಸ್ಥಾನ ಪಾಕಿಸ್ತಾನದ್ದು. ಜನಸಂಖ್ಯಾ ಸ್ಫೋಟದಿಂದ ಅಲ್ಲಿ ಉತ್ತಮ ತಳಿಗಳ ಉತ್ಪಾದನೆಯಾಗುತ್ತಿದೆಯಾ ಎಂದರೆ ಅದೂ ಇಲ್ಲ. ಇದಕ್ಕೆ ಇಂಬುಕೊಟ್ಟಂತೆ, ಪಾಕಿಸ್ತಾನದಲ್ಲಿ ಅಣ್ಣ-ತಮ್ಮಂದಿರು, ದಾಯಾದಿ, ಚಿಕ್ಕಪ್ಪ- ದೊಡ್ಡಪ್ಪ ಎಂಬ ಭೇದ ವಿಲ್ಲದೆ ಎಲ್ಲರೊಂದಿಗಿನ ವಿವಾಹ ಹಾಗೂ ಸಂಬಂಧದಿಂದ ಹುಟ್ಟಿರುವ ಮಕ್ಕಳಿಗೆ ಆನುವಂಶಿಕ ರೋಗಗಳು ಹೆಚ್ಚುತ್ತಿವೆ. ಹುಟ್ಟುವ ಮಕ್ಕಳಲ್ಲಿ ಏನಾದರೊಂದು ಕುಂದುಕೊರತೆ ಇದ್ದೇ ಇರುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹಿಂದಿನ ಪೀಳಿಗೆಯ ಪಾಕಿಸ್ತಾನೀಯರು ೬ ಅಡಿಗೂ ಹೆಚ್ಚು ಎತ್ತರವಿದ್ದು ದೃಢಕಾಯರಾಗಿರುತ್ತಿದ್ದುದನ್ನು ನೆನಪಿಸಿಕೊಳ್ಳಬಹುದು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಪಾಕಿಸ್ತಾನದಲ್ಲಿ ಗರ್ಭಿಣಿಯರು ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಆರೋಗ್ಯವಂತ ಮಕ್ಕಳು ಹುಟ್ಟುತ್ತಿಲ್ಲ. ಇನ್ನು ಮಹಿಳೆಯರು ಮಕ್ಕಳನ್ನು ಹೆರುವ ಯಂತ್ರಗಳಾಗಿರುವುದರ ಬಗ್ಗೆ ಮಾತನಾಡದಿರುವುದೇ ಸೂಕ್ತ. ಇನ್ನು, ಹುಟ್ಟಿದ ಸರಾಸರಿ ಮಕ್ಕಳಲ್ಲಿ ಹಲವರು ೫-೬ನೇ ತರಗತಿಯವರೆಗೆ ಓದಿ ದಡಸೇರಿದರೆ ಹೆಚ್ಚು. ಬಡತನದಿಂದಾಗಿ ಶಾಲೆಯನ್ನು ಬಿಡಿಸುವುದು ಅಲ್ಲಿ ಸಾಮಾನ್ಯ. ಇನ್ನು ಓದಲು ಶಕ್ತರಿರುವ ಮಕ್ಕಳಾದರೂ ಜಗತ್ತಿನ ವೇಗಕ್ಕೆ
ಅನುಗುಣವಾಗಿ ಬೆಳೆಯುತ್ತಿರುವ ತಂತ್ರಜ್ಞಾನಗಳಿಗೆ, ಕೃತಕ ಬುದ್ಧಿಮತ್ತೆಯಲ್ಲಿ ಆಗುತ್ತಿರುವ ಕ್ಷಿಪ್ರ ಕ್ರಾಂತಿಗಳಿಗೆ ಅವರು ಅಪ್‌ಡೇಟ್ ಆಗುತ್ತಿಲ್ಲ. ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ, ಇತರ ಮುಂದುವರಿದ ದೇಶಗಳ ವಿದ್ಯಾರ್ಥಿಗಳ ಸಮಕ್ಕೆ ಬರಲು ಅವರಿಗೆ ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಅದನ್ನು ಎದುರಿಸಿ ಬೆಳೆದರೂ, ಚಿಕ್ಕ ವಯಸ್ಸಿನಿಂದಲೂ ಬಾವಿಯೊಳಗಿನ ಕಪ್ಪೆಯಂತೆ ಬೆಳೆಸಿದ ಕಾರಣಕ್ಕೆ ಮತ್ತು ಉಣಬಡಿಸಿದ ಭಾರತ-ದ್ವೇಷದ ವಿಷದಿಂದಾಗಿ ಎಲ್ಲರೊಂದಿಗೆ ಹೊಂದಿಕೊಳ್ಳಲು ಅವರಿಗೆ ಕಷ್ಟ.
ಗರ್ಭಿಣಿಯರು ನಿರಂತರ ಕೋಪ, ದ್ವೇಷ, ಭೀಭತ್ಸದ ವರ್ತನೆಗಳನ್ನೇ ಕಂಡು ದ್ವೇಷದ ದಳ್ಳುರಿಯಲ್ಲಿ ಮಕ್ಕಳನ್ನು ಹೊತ್ತಾಗ, ಹುಟ್ಟುವ ಮಕ್ಕಳಲ್ಲೂ ಕಾಣ ಬರುವುದು ದ್ವೇಷವೇ. ಆ ದ್ವೇಷ ಯಾರ ಕಡೆಗೆ ಎಂಬುದು ನಂತರ ಬರುವ ಪ್ರಶ್ನೆ. ಹಾಗಾಗಿ ಅಲ್ಲಿನ ಬಹುತೇಕ ಜನರಲ್ಲಿ ಭಾರತದ ಬಗ್ಗೆ ಅತೀವ ದ್ವೇಷವಿದೆ.
ಇವೆಲ್ಲದರಿಂದಾಗಿ ಜಗತ್ತಿನ ಯಾವ ದೇಶಕ್ಕೂ ಬಾರದ ದುಸ್ಥಿತಿ ಈಗ ಪಾಕಿಸ್ತಾನಕ್ಕೆ ಬಂದಿದೆ. ಒಂದು ಸಮೀಕ್ಷೆಯ ಪ್ರಕಾರ, ಪಾಕಿಸ್ತಾನದ ಪ್ರತಿ ೬ನೇ ವ್ಯಕ್ತಿಯು ‘ವೃತ್ತಿಪರ ಭಿಕ್ಷುಕ’ ಎಂದರೆ ದಿಗ್ಭ್ರಮೆಯಾಗುತ್ತದೆ. ಇದೀಗ ಅಲ್ಲಿನ ಭಿಕ್ಷುಕರ ಸಂಖ್ಯೆ ೮ ಮಿಲಿಯನ್ ದಾಟಿದೆ. ಅಲ್ಲಿನ ಕೆಲವೊಂದು ನಗರಗಳ ಬೀದಿಬೀದಿಗಳಲ್ಲಿ ೧.೨ ಮಿಲಿಯನ್ ಮಕ್ಕಳು ಭಿಕ್ಷೆ ಎತ್ತುತ್ತಿದ್ದಾರೆ. ಪಾಕಿಸ್ತಾನದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಉದ್ಯಮವೆಂದರೆ ಭಿಕ್ಷೆ ಎನ್ನಲಾಗುತ್ತಿದೆ.
ಅಲ್ಲಿನ ಪ್ರಧಾನಿಯೇ ೪೦ ಕೋಟಿ ಪಾಕಿಸ್ತಾನೀಯರಿಗಾಗಿ ಬೇಡುವಾಗ, ಪ್ರಜೆಗಳು ಅದನ್ನು ಪಾಲಿಸುವುದರಲ್ಲಿ ಅತಿ ಶಯವಿಲ್ಲ. ಅಲ್ಲಿನ ಪ್ರಧಾನಿ ಶಹಬಾಜ್ ಷರೀಫರನ್ನು ‘ಸ್ಪೀಡ್ ಷರೀಫ್’ ಎಂದು ಕರೆಯಲು ಕಾರಣವೇ, ಅವರು ಅತಿ ಶೀಘ್ರವಾಗಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಾರೆಂಬುದು. ಅವರು ಅಷ್ಟೇ ಶೀಘ್ರವಾಗಿ ಭಿಕ್ಷೆಯನ್ನೂ ತರುತ್ತಾರೆ ಎಂಬ ಖ್ಯಾತಿಯೂ ಇದೆ. ನಂಬುವಿರೋ ಇಲ್ಲವೋ, ಅವರು ಪ್ರಧಾನಿಯಾದ ತಕ್ಷಣ ವಿದೇಶಕ್ಕೆ ತೆರಳಿ ಹೇಳಿಕೆ ನೀಡಿದ್ದು- ‘ನಾವು ಭಿಕ್ಷುಕರಲ್ಲ, ಆದರೆ ನಮಗೆ ಮತ್ಯಾವ ಆಯ್ಕೆಯೂ ಇಲ್ಲ’ ಎಂದು!
ಹೀಗೆ ವಿದೇಶಗಳಿಂದ ಶೀಘ್ರವಾಗಿ ಹಣವೆತ್ತಬಲ್ಲ ಸಾಮರ್ಥ್ಯ ಹಾಗೂ ಮಾಡಿರುವ ಸಾಲವನ್ನು ಮರುಪಾವತಿಸದೇ ಇರುವ ಜಾಣ್ಮೆ ತೋರುವಂಥವರನ್ನೇ ಅಲ್ಲಿ ವಿದೇಶಾಂಗ ಸಚಿವರನ್ನಾಗಿ ಮಾಡಲಾಗುತ್ತದೆ. ಅಮೆರಿಕದ ಹಬೀಬಿ ಬ್ಯಾಂಕಿನ ನಿರ್ವಹಣೆಯನ್ನು ಸೂಕ್ತವಾಗಿ ಮಾಡದೆ ಕಾಳಧನ ಮಾಡುವುದರಲ್ಲಿ ಕುಖ್ಯಾತಿ ಯನ್ನು ಪಡೆದ ಮೊಹಮ್ಮದ್ ಔರಂಗಜೇಬ್ ಅಲ್ಲಿನ ಅರ್ಥಸಚಿವ. ಹಣ ಲಪಟಾಯಿಸಲು ಸುಲಭವಾಗಲೆಂದು ಅವರನ್ನು ವಿತ್ತ ಸಚಿವರನ್ನಾಗಿ ಮಾಡಿರಬಹುದಾ? ಇವರ ಕಾರ್ಯದಕ್ಷತೆ ಎಷ್ಟೆಂದರೆ, ಪಾಕಿಸ್ತಾನದ ರಿಸರ್ವ್ ಬ್ಯಾಂಕಿನಿಂದ ಮುದ್ರಣವಾಗಿ ಹೊರಬಂದ ನೋಟಿನ ಕಂತೆಯಲ್ಲಿ ಹಲವಾರು ನೋಟುಗಳ ಹಿಂಬದಿ ಯಲ್ಲಿ ಮುದ್ರಣ ಕಾಣದೆ ಮಾಧ್ಯಮದ ಮುಂದೆ ನಗೆಪಾಟಲಿಗೆ ಈಡಾಗಿದ್ದರು!
ಇದಕ್ಕಿಂತಲೂ ಹಾಸ್ಯಾಸ್ಪದ ಸಂಗತಿಯೆಂದರೆ ದೇಶದ ಅಧ್ಯಕ್ಷರದ್ದು. ಪಾಕಿಸ್ತಾನದ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಅವರು ತಮ್ಮ ಮಗಳು ಆಸೀಫ್ ಭುಟ್ಟೋ ಜರ್ದಾರಿಯನ್ನು ದೇಶದ ಮೊದಲ ಮಹಿಳೆಯನ್ನಾಗಿ ಘೋಷಿಸಿದ್ದಾರೆ. ವಿಶ್ವದ ಯಾವುದೇ ದೇಶದಲ್ಲಿ ‘ಫಸ್ಟ್ ಲೇಡಿ’ ಎಂದರೆ ಸಾಮಾನ್ಯವಾಗಿ ಒಂದೇ ಪರಿಕಲ್ಪನೆ ಇರುತ್ತದೆ. ಆದರೆ ಪಾಕಿಸ್ತಾನದ ಮೊದಲ ಮಹಿಳೆ ಇವರ ಮಗಳು! ಇದನ್ನು ನೋಡಿದಾಗ, ‘ಇದು ಎಂಥಾ ಲೋಕವಯ್ಯಾ’ ಎಂಬ ಹಾಡು ನೆನಪಾಗುತ್ತದೆ. ಮೊದಲೆಲ್ಲ, ಪಾಕಿಸ್ತಾನೀಯರ ನಡತೆಯನ್ನು ನೋಡುತ್ತಿದ್ದರೆ ಕೋಪ ಮತ್ತು ಅಸಹ್ಯ ಉಂಟಾಗುತ್ತಿತ್ತು. ಆದರೆ ಈಗ ವಿಷಾದದ ನಗೆ ಹೊಮ್ಮುತ್ತದೆ. ತನ್ನಲ್ಲೇ ಇಷ್ಟೊಂದು ಹುಳುಕುಗಳನ್ನು ಇಟ್ಟುಕೊಂಡಿದ್ದರೂ ಪಾಕಿಸ್ತಾನಕ್ಕೆ ಭಾರತದ ಕುರಿತೇ ಚಿಂತೆ!
ಭಾರತದ ಪ್ರಧಾನಿ ಏನು ತಿಂದರು? ಯಾವ ದೇಶಕ್ಕೆ ಹೋದರು? ಯಾವ ಕಾನೂನು ತಂದರು? ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿದ್ದು ಸರಿಯಾ?
ಎಂದೆಲ್ಲಾ ಸಲ್ಲದ ವಿಷಯಗಳಲ್ಲಿ ಮೂಗು ತೂರಿಸುವ ಬುದ್ಧಿಯನ್ನು ಅದಿನ್ನೂ ಬಿಟ್ಟಿಲ್ಲ. ಭಾರತ ತನ್ನೊಂದಿಗೆ ವ್ಯಾಪಾರ-ವ್ಯವಹಾರ ನಡೆಸಲಿ ಎಂಬ ಆಸೆಯೂ ಅದಕ್ಕಿದೆ. ಆದರೆ ಅದು ಸದ್ಯೋಭವಿಷ್ಯದಲ್ಲಿ ಕೈಗೂಡುವ ಸಾಧ್ಯತೆಯಿಲ್ಲ.
(ಲೇಖಕಿ ಹವ್ಯಾಸಿ ಬರಹಗಾರ್ತಿ)