Saturday, 14th December 2024

ಸಮರ್ಥರಿಗೆ ಟಿಕೆಟ್ ಕೊಡುವುದೇ ಧ್ಯೇಯವಾಗಲಿ

ಕದನ ಕುತೂಹಲ

ಜಿ.ಪ್ರತಾಪ್ ಕೊಡಂಚ

ದೇಶದಲ್ಲಿ ಲೋಕಸಭಾ ಚುನಾವಣೆಯ ಕಾವೇರುತ್ತಿದ್ದರೂ, ರಾಜಕೀಯ ಪಕ್ಷಗಳು ಟಿಕೆಟ್ ಹಂಚಲು ಈ ಬಾರಿ ಹೆಚ್ಚೇ ತಿಣುಕಾಡುತ್ತಿವೆ. ಇದು ತಂತ್ರಗಾರಿಕೆ ಎಂಬುದು ಕೆಲವರ ಅಭಿಪ್ರಾಯ. ಕೆಲವೆಡೆ ಮೈತ್ರಿ,  ಹಂಚಿಕೆಯ ಮಾತುಕತೆ ಅಡ್ಡಿಯಾಗಿದ್ದರೆ, ಕೆಲವೆಡೆ ನಡೆಯುತ್ತಿರುವುದು ಟಿಕೆಟ್ ಸಿಗದವರನ್ನು ಕರೆತಂದು ಶಾಲು ಹೊದಿಸಿ ಅಭ್ಯರ್ಥಿಯಾಗಿಸುವ ತಂತ್ರ-ಕುತಂತ್ರ.

‘ಅಬ್ ಕಿ ಬಾರ್, ಚಾರ್ ಸೌ ಪಾರ್’ ಎಂಬ ಗುರಿಯೊಂದಿಗೆ ಕಣಕ್ಕಿಳಿದಿರುವ ಬಿಜೆಪಿಗೆ, ವಿಧಾನಸಭಾ ಚುನಾವಣೆಯ ಸೋಲಿನ ನಂತರ ಕರ್ನಾಟಕದ
ಕುರಿತು ಅತೀವ ಆಸಕ್ತಿಯೇನೂ ಇದ್ದಂತಿಲ್ಲ. ಕಳೆದ ಬಾರಿ ೨೫ ಬಿಜೆಪಿ ಸಂಸದರನ್ನು ಆರಿಸಿ ಕಳಿಸಿದ ಕರ್ನಾಟಕದ ಮೇಲೆ, ಚುನಾವಣೆಗೆ ಹೊರತಾದ ಸಂದರ್ಭಗಳಲ್ಲಿ ಬಿಜೆಪಿ ಹೈಕಮಾಂಡಿಗೆ ವಿಶೇಷ ಮಮತೆಯೇನೂ ಇರಲಿಲ್ಲ. ಕರ್ನಾಟಕದಲ್ಲಿ ಅವರದ್ದೇ ನೇತೃತ್ವದ ‘ಆಪರೇಷನ್ ಸರಕಾರ’ ಗಳಿದ್ದಾ ಗಲೂ, ಕೇಂದ್ರ ಸರಕಾರ, ಬಿಜೆಪಿ ವರಿಷ್ಠರ ದೃಷ್ಟಿಯಲ್ಲಿ ಕರ್ನಾಟಕವೆಂಬುದು ಕಡೆಗಣಿಸಲ್ಪಟ್ಟ ಶಿಶುವೆಂಬುದು ಆಗಾಗ ಪ್ರಕಟಗೊಂಡಿದ್ದು ಸುಳ್ಳಲ್ಲ.

‘ರಾಜಾಹುಲಿ’ ಯಡಿಯೂರಪ್ಪರು ಸ್ವ- ಸಾಮರ್ಥ್ಯದ ಸರಕಾರ ರಚಿಸಿಕೊಂಡಾಗ ಸರಿಸುಮಾರು ೨೫ ದಿನಗಳ ಕಾಲ ನಡೆಸಿದ್ದು, ಸಚಿವ ಸಂಪುಟ ರಹಿತ
ಏಕಮೇವಾದ್ವಿತೀಯ ಆಳ್ವಿಕೆ. ಅಂದು ಪ್ರವಾಹ ಸಮಯದಲ್ಲಿ ಕೇಂದ್ರದ ವರಿಷ್ಠರನ್ನು ಭೇಟಿಯಾಗಲೂ ಅವಕಾಶ ವಂಚಿತರಾಗಿದ್ದ ಯಡಿಯೂರಪ್ಪರ
ಪರದಾಟಗಳು ಕರ್ನಾಟಕದ ಬಗೆಗಿನ ಕೇಂದ್ರದ ಮಮಕಾ(ಖಾ)ರದ ಪರಿಚಯ ಮಾಡಿಸಿತ್ತು. ನಂತರವೂ ‘ಡಬಲ್ ಎಂಜಿನ್ ಸರಕಾರ’, ‘ಅಭಿವೃದ್ಧಿಯೇ ನಮ್ಮ ಗುರಿ’ ಎಂಬ ಹೇಳಿಕೆಗಳು ಮೊಳಗಿತ್ತಾದರೂ ಕರ್ನಾಟಕದ ಮಟ್ಟಿಗೆ ಕಾಣಿಸಿದ್ದು ದೆಹಲಿಯ ಎಂಜಿನ್ ಮುನ್ನೆಲೆಗೆ ತಂದ ಕೆಲ ಯೋಜನೆಗಳಷ್ಟೇ. ಅದನ್ನು ಬಿಟ್ಟರೆ ಕೇಳಿಸಿದ್ದು ರಾಜ್ಯದ ಎಂಜಿನ್ ಆಗಾಗ ಹೊರಹಾಕುತ್ತಿದ್ದ ಆಂತರಿಕ ಗುದ್ದಾಟದ ಸೌಂಡು, ಕಂಡಿದ್ದು ತತ್ಪರಿಣಾಮವಾಗಿ
ಹೊರಹೊಮ್ಮುತ್ತಿದ್ದ ಹೊಗೆ ಮಾತ್ರ!

ತಮ್ಮ ಮಟ್ಟಿಗೆ ಅಭಿವೃದ್ಧಿ ಕಂಡುಕೊಂಡ ರಾಜ್ಯ ಬಿಜೆಪಿ ನಾಯಕರು ಮತ್ತೆ ಚುನಾವಣೆ ಎದುರಿಸಿದ್ದು ಮೋದಿಯವರ ನಾಮಬಲದ ಮೇಲೆ. ಅದೇ
ಕಾರಣಕ್ಕೆ ಇನ್ನಷ್ಟು ಸ್ಥಾನ ಗಳಿಸಿಕೊಳ್ಳುವ ಅವಕಾಶವಿದ್ದರೂ, ಅವರು ತಾಕತ್ತಿನ ಪ್ರದರ್ಶನದಲ್ಲಿ ಕತ್ತು ಹಿಸುಕಿ ಕೆಡವಿದ್ದು ಮಾತ್ರ ತಮ್ಮವರನ್ನೇ!
ಅವೆಲ್ಲವನ್ನೂ ಮುಚ್ಚಿಕೊಳ್ಳಲು ‘ಸೋಲಿಗೆ ಕಾಂಗ್ರೆಸ್ಸಿನ ಗ್ಯಾರಂಟಿಗಳೇ ಕಾರಣ’ವೆಂದು ತಿಪ್ಪೆ ಸಾರಿಸಿದರೆನ್ನಿ. ಗ್ಯಾರಂಟಿಗಳಿಂದ ಬೊಕ್ಕಸ ಬರಿದಾಗು ತ್ತದೆಂದು ಬೊಬ್ಬಿರಿದಿದ್ದ ರಾಜ್ಯ ಬಿಜೆಪಿ, ಅರ್ಹರಿಗೆ ಯೋಜನೆ ತಲುಪಬೇಕೆಂಬ ನಿಲುವನ್ನೇ ಪ್ರತಿಪಾದಿಸಿ ಅಧಿಕೃತ ವಿಪಕ್ಷವಾಗಿ ಸರಕಾರವನ್ನು ಎಚ್ಚರಿಸಬಹುದಿತ್ತು.

ಆದರೆ ವಚನಭ್ರಷ್ಟತೆಯ ಕೊಂಕೆತ್ತಿ, ಬೊಕ್ಕಸ ಬರಿದಾಗಿಸಲು ಕಿರುಕಾಣಿಕೆ ಸಲ್ಲಿಸಿದ್ದು ರಾಜ್ಯದಲ್ಲಿ ಬಿಜೆಪಿಯ ಈ ತನಕದ ಮಹತ್ಸಾಧನೆ. ಬಿಜೆಪಿಯ ರಾಷ್ಟ್ರೀಯ ನೇತಾರರು ಹೇಳುತ್ತಿರುವುದು, ತಮ್ಮದು ಅಭಿವೃದ್ಧಿಯ ರಾಜಕೀಯ ಮತ್ತು ಪರಿವಾರವಾದದ ಎದುರಿನ ಸೆಣಸಾಟ ಅಂತ. ಆದರೆ
ಕರ್ನಾಟಕದ ಪಾಲಿಗೆ ಅಭಿವೃದ್ಧಿ ಎಂದರೇನೆಂಬುದನ್ನು ವಿರೋಽಗಳೂ ಒಪ್ಪುವ ರೀತಿಯಲ್ಲಿ ಸಾಧಿಸಿ ತೋರಿಸಿದ ರಾಜ್ಯ ಬಿಜೆಪಿಯ ಏಕೈಕ ಸಂಸದ
ಪ್ರತಾಪ್ ಸಿಂಹ. ಆದರೆ ಪ್ರತಾಪರಿಗೇ ಟಿಕೆಟ್ ನೀಡದೆ, ಆ ನಿರಾಕರಣೆಗೆ ಸಕಾರಣವನ್ನೂ ಮುಂದಿಡದೆ ಮೈಸೂರಿನಲ್ಲಿ ಯದುವೀರರಿಗೆ ಅವಕಾಶ
ಕಲ್ಪಿಸಿದ್ದಾರೆ ವರಿಷ್ಠರು.

ಪ್ರತಾಪ್ ಬರೀ ಕ್ಷೇತ್ರದ ಅಭಿವೃದ್ಧಿ ಮಾತ್ರ ಮಾಡಿ ತಾವು ಮತ್ತು ತಮ್ಮವರ ಅಭಿವೃದ್ಧಿಯತ್ತ ಲಕ್ಷ್ಯ ಕೊಡದಿದ್ದುದೇ ಇದಕ್ಕೆ ಕಾರಣವಿರಬಹುದು! ಬಿಜೆಪಿಯ ಇಂಥ ಪ್ರಯೋಗಗಳನ್ನು ಸಾಮಾನ್ಯರು ಅರಗಿಸಿಕೊಳ್ಳಲಾರರು. ಯದುವೀರ ಅವರಂಥ ಸುಶಿಕ್ಷಿತರು, ಸಂಭಾವಿತರು ರಾಜಕಾರಣಕ್ಕೆ ಅವಶ್ಯ ನಿಜ. ಹಾಗಾಗಿ ಅವರಿಗೆ ಅವಕಾಶ ಸ್ವಾಗತಾರ್ಹ. ಆದರೆ ‘ಮೈಸೂರಿಗೊಬ್ಬರು ಒಬಿಸಿ ಅಭ್ಯರ್ಥಿ ಬೇಕಿತ್ತು, ಅದಕ್ಕೆ ಯದುವೀರರಿಗಿಂತ ಸಮರ್ಥರಾರು?’ ಎಂಬ ಚರ್ಚೆಯಾಗಿತ್ತು ಎಂಬುದು ದುರ್ದೈವ!

ಬಿಜೆಪಿಯ ಹೈಕಮಾಂಡ್ ಸಶಕ್ತವೆಂಬ ಚಿತ್ರಣ ವಿದ್ದರೂ, ಕರ್ನಾಟಕದ ಮಟ್ಟಿಗೆ ಸರ್ವಶಕ್ತರೆಂದು ಕಾಣಿಸುತ್ತಿರುವುದು ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರೂ, ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷರೂ ಆಗಿರುವ ಅವರ ಸುಪುತ್ರ ವಿಜಯೇಂದ್ರ! ಕರ್ನಾಟಕದಲ್ಲಿ ಯಾರಿಗೆಲ್ಲ ಟಿಕೆಟ್ ದೊರೆತಿದೆ, ಯಾರಿಗೆಲ್ಲ ತಪ್ಪಿದೆ? ಎಂಬುದನ್ನೊಮ್ಮೆ ಸಮೀಕ್ಷೆ ಮಾಡಿಕೊಂಡು ಬಂದರೆ ಈ ಅಂಶ ಹೊರಹೊಮ್ಮು
ತ್ತದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ದೆಹಲಿಗೆ ಹೋದರೆ ಪ್ರಧಾನಿ, ಗೃಹ ಮಂತ್ರಿಗಳಾದಿಯಾಗಿ ಕೇಂದ್ರ ಸಚಿವರ, ಪದಾಧಿಕಾರಿಗಳ
ಭೇಟಿಗೂ ಅವಕಾಶ ಸಿಗದೆ ವಾಪಸಾಗುತ್ತಿದ್ದ ದಿನಗಳಿದ್ದವು. ಅಂದಿನ ತಪ್ಪಿಗೆ ಪ್ರಾಯಶ್ಚಿತ್ತ ವೇನೋ ಎಂಬಷ್ಟು ಗೌರವವನ್ನು ಹೈಕಮಾಂಡ್ ಈಗ ಕೊಡುತ್ತಿರುವುದು ನೋಡಿದರೆ ಯಡಿಯೂರಪ್ಪನವರ ಸಾಮರ್ಥ್ಯದ ಅರಿವಾಗದಿರದು.

ದಾವಣಗೆರೆಯ ಹಾಲಿ ಎಂಪಿ ಸಿದ್ದೇಶ್ವರರ ಬದಲು ಸಾರ್ವಜನಿಕವಾಗಿ ಅಷ್ಟೊಂದು ಕಾಣಿಸಿಕೊಳ್ಳದ ಅವರ ಪತ್ನಿಗೆ, ಚಿಕ್ಕೋಡಿಯಲ್ಲಿ ಮಾಜಿ ಮಂತ್ರಿ ಶಶಿಕಲಾ ಜೊಲ್ಲೆಯವರ ಪತಿ, ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆಯವರಿಗೆ, ಶಿವಮೊಗ್ಗದಲ್ಲಿ ಯಡಿಯೂರಪ್ಪರ ಮಗ, ಹಾಲಿ ಸಂಸದ
ರಾಘವೇಂದ್ರರಿಗೆ ಬಿಜೆಪಿಯ ಟಿಕೆಟ್ ಸಿಕ್ಕಿದೆ. ಹಾಗಾದರೆ ಬಿಜೆಪಿಯೂ ‘ಕುಟುಂಬದ ಪಕ್ಷ’ವೇ ಆಯಿತಲ್ಲವೇ?!

ಪರಿವಾರದ ಪರವೆಂದೇ ಬಿಂಬಿತವಾಗಿರುವ ಕಾಂಗ್ರೆಸ್ಸಿನದು ಕರ್ನಾಟಕದಲ್ಲಿ ವಿಚಿತ್ರ ಸನ್ನಿವೇಶ! ಪ್ರಬಲ ಸ್ಪರ್ಧೆಯ ಉದ್ದೇಶದಿಂದ, ಚುನಾವಣಾ
ಕಣಕ್ಕಿಳಿಯಿರಿ ಎಂದು ಹಲವು ಹಿರಿಯ ಮಂತ್ರಿಗಳಿಗೆ ಕಾಂಗ್ರೆಸ್ ಹೈಕಮಾಂಡ್, ಕೆಪಿಸಿಸಿ ನಾಯಕರು ತಾಕೀತು ಮಾಡುತ್ತಿದ್ದಾರೆ. ‘ನಾನೊಲ್ಲೆ, ಆದರೆ
ಮಗನೋ, ಮಗಳೋ, ಅಕ್ಕ, ತಂಗಿಯರನ್ನೋ ನಿಲ್ಲಿಸಿ ಗೆಲ್ಲಿಸಿಕೊಂಡು ಬರುತ್ತೇವೆ’ ಎಂಬ ಮಾತು ಈ ಮಂತ್ರಿಗಳದ್ದು. ಒಟ್ಟಾರೆ ಹೇಳುವುದಾದರೆ,
ಪರಿವಾರವಾದದ ದೃಷ್ಟಿಯಲ್ಲಿ ಕರ್ನಾಟಕದಲ್ಲಿನ ಮೂರೂ ಪಕ್ಷಗಳದ್ದು ಜಿದ್ದಾಜಿದ್ದಿಯ ಹೋರಾಟ! ವೈದ್ಯರ ಮಕ್ಕಳು ವೈದ್ಯರಾಗುವ, ಶಿಲ್ಪಿಗಳ ಮಕ್ಕಳು ಶಿಲ್ಪಿಗಳಾಗುವ, ವ್ಯಾವಹಾರಿಕ ಕುಟುಂಬದ ಹಿನ್ನೆಲೆ ಯವರು ವ್ಯವಹಾರದಲ್ಲೇ ನೈಪುಣ್ಯ ಗಳಿಸಿಕೊಳ್ಳುವ ಅವಕಾಶಗಳು ಮತ್ತು ಆಸಕ್ತಿ ಹುಟ್ಟುವುದು ವಾಸ್ತವ.

ಅದೇ ರೀತಿ, ರಾಜಕೀಯದ ಪಡಸಾಲೆಯಲ್ಲಿ ಪವಡಿಸಿರುವ ಕುಟುಂಬಿಕರಿಗೆ ರಾಜಕೀಯದ ಪಟ್ಟುಗಳನ್ನು ಸುಲಭವಾಗಿ ಕರಗತಗೊಳಿಸಿಕೊಳ್ಳಬಲ್ಲ
ವಿಪುಲ ಅವಕಾಶಗಳು ದೊರಕುವುದಂತೂ ನಿಜ. ಹಾಗಾಗಿ, ರಾಜಕೀಯ ಹಿನ್ನೆಲೆಯ ಕುಟುಂಬದಿಂದಲೇ ಹೆಚ್ಚೆಚ್ಚು ರಾಜಕಾರಣಿಗಳು ಹೊರಹೊಮ್ಮು
ವುದು ಸಹಜ. ಹಾಗಿರುವಾಗ ಕುಟುಂಬ ರಾಜಕಾರಣ, ಪರಿವಾರವಾದ ತಪ್ಪು ಎನ್ನುವುದು ಸರಿ ಎನಿಸಲಿಕ್ಕಿಲ್ಲ. ವ್ಯಕ್ತಿಯೊಬ್ಬ ಸಮರ್ಥನಿದ್ದರೆ, ರಾಜಕೀಯ ಹಿನ್ನೆಲೆಯ ಕುಟುಂಬದವರು ಎಂಬುದೇ ಆತನಿಗೆ ಹಿನ್ನಡೆಯಾಗಬಾರದು. ಅದೇ ರೀತಿ ಕುಟುಂಬದ ಹಿನ್ನೆಲೆಯೇ ವ್ಯಕ್ತಿಯೊಬ್ಬನ ಸಾಮರ್ಥ್ಯವೂ ಆಗಬಾರದು.

ಅಸಮರ್ಥರನ್ನು ಗುರುತಿಸಿ, ಪ್ರೋತ್ಸಾಹಿಸದೇ ಇರುವ ಶಕ್ತಿ ಮತದಾರರಿಗಿದೆ. ಮತದಾರ ಒಮ್ಮೆ ಎಡವಿದರೂ, ಪದೇ ಪದೆ ಎಡವಿ ಅದೇ ತಪ್ಪನ್ನು
ಮಾಡಲಿಕ್ಕಿಲ್ಲ. ಅಸಮರ್ಥ, ಪದೇ ಪದೆ ಎಡವಿದ ರಾಜಕೀಯ ಬಲಾಢ್ಯರ ಮುಂದಿನ ತಲೆಮಾರುಗಳು ಕಿಂಚಿತ್ತೂ ಸಾಮರ್ಥ್ಯವಿಲ್ಲದೇ ಬಹುಕಾಲ ಗೆದ್ದು
ಬೀಗಿದ ಉದಾಹರಣೆಗಳು ಕಡಿಮೆ. ಯಾವ ರೀತಿಯ ಸಾಮರ್ಥ್ಯ ಹೊಂದಿದ್ದಾರೆ? ಎಂಬುದು ಚರ್ಚಾಸ್ಪದವಾದರೂ, ಕುಟುಂಬದ ಹೆಸರೊಂದೇ ಅಲ್ಲದೆ, ಇನ್ನಾವುದೋ ರೀತಿಯ ಮೋಡಿ ಮಾಡುವ ನೈಪುಣ್ಯ ಅಂಥವರಿಗಿದೆ ಎನ್ನುವುದು ಸ್ಪಷ್ಟ.

ಹಾಗಾಗಿ, ಪರಿವಾರವಾದ, ಕುಟುಂಬ ರಾಜಕಾರಣ ಕೊನೆಗಾಣಿಸಲು ಮುಂದಿನ ತಲೆಮಾರಿಗೆ ಅಧಿಕಾರ ಹಸ್ತಾಂತರ ವಿರೋಧಿಸಬೇಕು ಎಂಬ ನಿಲುವಿ ಗಿಂತ ರಾಜಕೀಯೇತರ ಹಿನ್ನೆಲೆಯಿಂದ ಬಂದಿರುವ ಸಮರ್ಥರನ್ನು ಇನ್ನಷ್ಟು ಬೆಂಬಲಿಸಿ ಪ್ರೋತ್ಸಾಹಿಸುವ ನಿಲುವನ್ನು ಎಲ್ಲ ರಾಜಕೀಯ ಪಕ್ಷಗಳೂ ತೆಗೆದುಕೊಳ್ಳ ಬೇಕಾಗಿರುವುದು ಅವಶ್ಯ. ಹೀಗಾಗದಿದ್ದರೆ ತಾನೂ ವ್ಯವಸ್ಥೆಯ ಭಾಗವಾಗಬೇಕೆಂಬ ತುಡಿತದ ಸಾಮಾನ್ಯ ಹಿನ್ನೆಲೆಯ ಯುವಜನಾಂಗ ವ್ಯವಸ್ಥೆಯಿಂದ ದೂರವೇ ಉಳಿದೀತು. ಆ ಪಕ್ಷದಲ್ಲಿ ಎಷ್ಟು ಕುಟುಂಬಿಕರು ಚಲಾವಣೆಯಲ್ಲಿದ್ದಾರೆ? ಈ ಪಕ್ಷದಲ್ಲಿ ಎಷ್ಟು ಜನ ಕುಟುಂಬಿಕರಿದ್ದಾರೆ? ಎಂಬ ಮೂದಲಿಕೆಯ ಬದಲು, ರಾಜಕೀಯೇತರ ಹಿನ್ನೆಲೆಯ ಆಸಕ್ತರನ್ನು ಯಾರು ಎಷ್ಟು ಪ್ರೋತ್ಸಾಹಿಸುತ್ತಾರೆ ಎಂಬುದು ಸಮಭಾಗಿತ್ವದ
ಪ್ರಜಾಪ್ರಭುತ್ವಕ್ಕೆ ಮಾನದಂಡವಾಗಬೇಕಾಗಿದೆ.

(ಲೇಖಕರು ಹವ್ಯಾಸಿ ಬರಹಗಾರರು)