Friday, 20th September 2024

ಹುಲಿರಾಯನ ಸಂರಕ್ಷಣೆ ನಮ್ಮ ಕರ್ತವ್ಯ

ಹುಲಿಹೆಜ್ಜೆ

ವಿನಾಯಕ ವಿ.ಎಂ.

ವರ್ತಮಾನದ ಅಂಕಿ-ಅಂಶಗಳನ್ನೇ ಪರಿಗಣಿಸುವುದಾದರೆ, ಹುಲಿ ಒಂದರ್ಥದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿ. ಇದು ಜನವಸತಿ ಪ್ರದೇಶಗಳಲ್ಲಿ ಕಂಡುಬರುವು ದಿಲ್ಲ. ಥಾಯ್ಲೆಂಡ್ ಮುಂದಾದ ದೇಶಗಳಲ್ಲಿನ ಸಾಧುಗಳು ಅವನ್ನು ಸಾಕುವುದನ್ನು ಹೊರತುಪಡಿಸಿದರೆ, ಪ್ರಾಣಿ ಸಂಗ್ರಹಾಲಯ ಅಥವಾ ಸಂರಕ್ಷಿತ ಅರಣ್ಯ ಪ್ರದೇಶಗಳೇ ಇವುಗಳ ನೆಲೆಗಳು. ಸಿಂಹಗಳಂತೆ ಹುಲಿಗಳು ಗುಂಪಾಗಿ ಬೇಟೆಯಾಡುವುದಿಲ್ಲ; ಗಟ್ಟಿಮುಟ್ಟಾಗಿರುವ ವ್ಯಾಘ್ರವು ಸ್ವತಃ ಬೇಟೆಯಾಡಿಯೇ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತದೆ.

ಸಿಂಹಗಳು ಯಾವಾಗಲೂ ಗುಂಪಿನಲ್ಲಿರುತ್ತವೆ, ಅವಕ್ಕೆ ಒಬ್ಬ ನಾಯಕನಿರುತ್ತಾನೆ. ಹೀಗಾಗಿ, ಸಿಂಹಗಳನ್ನು ಹಿಡಿಯಬೇಕೆಂದರೆ ಅವನ್ನು ಬೇರ್ಪಡಿಸಿ, ಗುಂಪಿನಲ್ಲಿ ತೆರಳಿ ಬಹಳ ಎಚ್ಚರಿಕೆಯಿಂದ ವಶಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಸಿಂಹಕ್ಕೆ ಹೋಲಿಸಿದರೆ ಹುಲಿಗಳನ್ನು ಹಿಡಿಯುವುದು ಸುಲಭ. ಏಕಾಂತ ಬಯಸುವ ಪ್ರಾಣಿ ಗಳಾದ ಹುಲಿಗಳಿಗೆ ಒಬ್ಬಂಟಿಯಾಗಿ ಕಾಡಿನಲ್ಲಿ ಸುತ್ತಾಡುವ ಸ್ವಭಾವವಿದೆ. ಕಾಡಿನ ವ್ಯಾಘ್ರ ನಾಡಿಗೆ ಬರುವುದು ಅಪರೂಪ; ಬಂದರೂ ಅದಕ್ಕೆ ಒಂದೇ ಕಾರಣ ವಿರುತ್ತದೆ- ಹಾಗೆ ಗ್ರಾಮ ಅಥವಾ ಜನವಸತಿ ಪ್ರದೇಶಕ್ಕೆ ಬರುವ ಹುಲಿಯ ಕೋರೆಹಲ್ಲುಗಳು ಇಲ್ಲವಾಗಿರುತ್ತವೆ.

ಹುಲಿಗಳು ತಮ್ಮ ಕೋರೆಹಲ್ಲುಗಳನ್ನು ಬಳಸುವುದು, ಬಲಿಷ್ಠ ಪ್ರಾಣಿಗಳ ಕತ್ತನ್ನು ಹಿಡಿದು ಅವುಗಳ ಉಸಿರಾಟವನ್ನು ನಿಲ್ಲಿಸಲು ಹಾಗೂ ಅವುಗಳ ಮಾಂಸವನ್ನು
ಮೂಳೆಗಳಿಂದ ಬೇರ್ಪಡಿಸಲು. ಕೋರೆಹಲ್ಲು ಇರದ ಹುಲಿಯು ಬಲಿಷ್ಠ ಪ್ರಾಣಿಗಳನ್ನು ಹಿಡಿಯಲು ಆಗುವುದಿಲ್ಲ; ಹಿಡಿದರೂ ಅಂಥ ಕಾಡುಪ್ರಾಣಿಗಳು ತಪ್ಪಿಸಿ ಕೊಂಡುಬಿಡುತ್ತವೆ. ಹೀಗಾಗಿ ಹುಲಿಗಳು ಅನ್ಯಮಾರ್ಗವಿಲ್ಲದೆ ಗ್ರಾಮ ಅಥವಾ ಜನವಸತಿ ಪ್ರದೇಶಗಳ ಕಡೆಗೆ ಮುಖಮಾಡುತ್ತವೆ. ಕಾರಣ, ಊರುಗಳಲ್ಲಿ
ಮಾನವರು ಸಾಕುವ ಮೃದುಮಾಂಸದ ಪ್ರಾಣಿಗಳನ್ನು ತಿನ್ನುವುದು ಸುಲಭ. ಜತೆಗೆ ಅವನ್ನು ಹಿಡಿಯಲು ಮತ್ತು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲು ಹುಲಿಗಳಿಗೆ ಕೋರೆಹಲ್ಲಿನ ಅಗತ್ಯ ಇರುವುದಿಲ್ಲ. ಹೀಗಾಗಿ, ಕೋರೆಹಲ್ಲುಗಳನ್ನು ಕಳೆದುಕೊಂಡ ಹುಲಿಗಳು, ಮನುಷ್ಯರನ್ನು ಅಥವಾ ಅವರು ಸಾಕಿದ ಪ್ರಾಣಿಗಳನ್ನು ತಿನ್ನುವ ಹುಲಿಗಳಾಗಿ ಸಹಜವಾಗಿ ಮಾರ್ಪಡುತ್ತವೆ.

ಹೀಗೆ ಅನಾಮತ್ತಾಗಿ ಊರಿನೊಳಗೆ ಪ್ರವೇಶಿಸುವ ಹುಲಿ ಅಥವಾ ಇನ್ನಾವುದೇ ಹಿಂಸ್ರಪಶುವನ್ನು ಹಿಡಿಯಬಲ್ಲ ಸಾಧನ-ಸಲಕರಣೆಗಳು ನಮ್ಮ ಅರಣ್ಯ ಇಲಾಖೆ ಯಲ್ಲಿ ಗಣನೀಯ ಪ್ರಮಾಣದಲ್ಲಿ ಇಲ್ಲದಿರುವುದು ವಿಷಾದನೀಯ. ಹೀಗೆ ನುಗ್ಗುವ ಹುಲಿಗಳನ್ನು ಹಿಡಿಯಲು ಸೂಕ್ತ ತರಬೇತಿ ಪಡೆದವರೂ ನಮ್ಮಲ್ಲಿಲ್ಲ. ಅರಣ್ಯ ಇಲಾಖೆಯವರು ಹಿಂದೊಮ್ಮೆ ಹುಲಿ ಹಿಡಿಯಲೆಂದು, ಹಂದಿ ಹಿಡಿಯುವ ಜನಾಂಗದವರ ಮತ್ತು ಸನಿಹದ ಪಶುವೈದ್ಯರ ಸಹಾಯ ಪಡೆದ ಘಟನೆ ನಡೆದಿತ್ತು.

ಹುಲಿಗಳು ಕೋರೆಹಲ್ಲನ್ನು ಕಳೆದುಕೊಳ್ಳುವುದು ಹೇಗೆ? ಎಂಬ ಪ್ರಶ್ನೆಯಿಲ್ಲಿ ಉದ್ಭವಿಸುವುದು ಸಹಜ. ಇದಕ್ಕೆ ಎರಡು ಸಂಭಾವ್ಯ ಕಾರಣಗಳಿವೆ. ಮೊದಲನೆಯದು,
ಬೇಟೆಯಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಂಡೆಗೆ ಹುಲಿಯು ಅಪ್ಪಳಿಸಿ ಅದರ ದಂತಭಗ್ನವಾಗಿರಬಹುದು. ಎರಡನೆಯದಾಗಿ, ಹುಲಿಗಳನ್ನು ನರಭಕ್ಷಕ ರನ್ನಾಗಿಸಲು ಕೆಲವೊಂದು ಸಮಾಜಘಾತುಕರು ಅವನ್ನು ಹಿಡಿದು ಕೋರೆಹಲ್ಲನ್ನು ಕಿತ್ತಿರಬಹುದು. ಇಂದಿನ ಪರಿಸ್ಥಿತಿಯಲ್ಲಿ ಸಮಾಜ ರಕ್ಷಕರಿಗಿಂತ ಸಮಾಜ ಘಾತುಕರ ಬಳಿಯೇ ಆಧುನಿಕ ಸಾಧನಗಳು/ಶಸ್ತ್ರಾಸ್ತ್ರಗಳು ಹೆಚ್ಚಾಗಿವೆ. ಹೀಗಾಗಿ ನಮ್ಮ ಅರಣ್ಯ ಇಲಾಖೆಯ ರಕ್ಷಣಾ ಸಜ್ಜಿಕೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಪಶ್ಚಿಮ ಬಂಗಾಳದಲ್ಲಿ ಎನ್ ಎಸ್‌ಜಿ ಯೋಧರು ಅರಣ್ಯ ಇಲಾಖೆಯ ಸಿಬ್ಬಂದಿಗೆ ತರಬೇತಿ ನೀಡುತ್ತಿದ್ದಾರೆ; ಅಲ್ಲಿನ ಗಡಿಭಾಗವು ಅರಣ್ಯದೊಟ್ಟಿಗೆ
ತಾಗಿಕೊಂಡಿರುವುದರಿಂದ ಅಲ್ಲಿ ಅದರ ಅನಿವಾರ್ಯವಿದೆ.

ಇಂಥ ಉಪಕ್ರಮಗಳಿಗೆ ನಮ್ಮ ಅರಣ್ಯ ಇಲಾಖೆಯೂ ಮುಂದಾಗಬೇಕಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವುದರ ಜತೆಗೆ, ಕ್ರೂರ ಪ್ರಾಣಿಗಳನ್ನು ಹಿಡಿಯುವಲ್ಲಿ ನೆರವಾಗುವ ಸಾಧನ-ಸಲಕರಣೆಗಳನ್ನು (ಡ್ರಾಟ್ ಗನ್, ಬೋನು ಮುಂತಾದವು) ಒದಗಿಸಬೇಕಾಗಿದೆ. ನಮ್ಮ ಮೈಸೂರು ಮೃಗಾಲಯ ಹೊರತುಪಡಿಸಿ, ಇತರ ಅನೇಕ ಜಿಲ್ಲೆಗಳಲ್ಲಿ ಪುಟ್ಟ ಪುಟ್ಟ ಮೃಗಾಲಯಗಳು ಕಾಡಿಗೆ ಅಂಟಿಕೊಂಡಂತಿವೆ. ಅವುಗಳಲ್ಲಿ ಕಾಡುಪ್ರಾಣಿಗಳನ್ನು
ಹಿಡಿಯಲು ಸಮರ್ಪಕ ಬೋನುಗಳಿರಲಿ ಇರುವ ಪ್ರಾಣಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡುವ ವೈದ್ಯರೂ ಇಲ್ಲ. ಈ ನ್ಯೂನತೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸರಕಾರವು ಗಮನ ಹರಿಸಬೇಕು.

ಹುಲಿಯ ಸಂರಕ್ಷಣೆಯ ವಿಷಯದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯ ಹೊಣೆಗಾರಿಕೆ ಮಾತ್ರವೇ ಮುಖ್ಯವಾಗುವುದಿಲ್ಲ. ನಾಡಿನ ಪ್ರಜ್ಞಾವಂತ ನಾಗರಿಕರಾಗಿ
ನಮ್ಮದೂ ಒಂದಷ್ಟು ಜವಾಬ್ದಾರಿಗಳಿವೆ. ಅಳಿವಿನಂಚಿನಲ್ಲಿರುವ ಹುಲಿಗಳ ಸಂರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವ ಉತ್ಸಾಹಿ ಸಂಸ್ಥೆಗಳಿಗೆ ಶಕ್ತಿ ತುಂಬುವ ಕೆಲಸವು ನಮ್ಮಿಂದಾಗಬೇಕು. ಪುಟ್ಟ ಪುಟ್ಟ ಪ್ರಾಣಿ ಸಂಗ್ರಹಾಲಯಗಳಲ್ಲಿರುವ ಪ್ರಾಣಿಗಳ, ಅದರಲ್ಲೂ ನಿರ್ದಿಷ್ಟವಾಗಿ ಹುಲಿಗಳ ನಿರ್ವಹಣೆ-ನಿಭಾವಣೆಗೆ ಮತ್ತು ಆಹಾರದ ಪೂರೈಕೆಗೆ ತಗಲುವ ವೆಚ್ಚವನ್ನು ಸ್ವಲ್ಪವಾದರೂ ಭರಿಸುವ ಯತ್ನ ನಮ್ಮದಾಗಬೇಕು. ಅವನ್ನು ದತ್ತು ತೆಗೆದುಕೊಳ್ಳುವ ಪರಿಪಾಠಕ್ಕೂ ನಾಗರಿಕರು ಮುಂದಾಗ ಬಹುದು.

ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಅರಣ್ಯ ಹಾಗೂ ವನ್ಯಜೀವಿ ಸಂಪತ್ತನ್ನು ಕಾಪಿಟ್ಟುಕೊಳ್ಳುವಲ್ಲಿ ಇನ್ನಿಲ್ಲದಂತೆ ಶ್ರಮಿಸುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗಕ್ಕೆ ನಾವು ಅನುಗಾಲವೂ ಕೃತಜ್ಞತೆಯನ್ನು ಸಲ್ಲಿಸಬೇಕು ಹಾಗೂ ಅವರ ಕೆಲಸ ಕಾರ್ಯಗಳು, ತ್ಯಾಗಗಳನ್ನು ಶ್ಲಾಘಿಸಿ ಅವರಲ್ಲಿ ಮತ್ತಷ್ಟು ಉತ್ಸಾಹವನ್ನು
ತುಂಬಬೇಕು. ‘ಕಾಡಿದ್ದರೆ ನಾಡು, ಹುಲಿಗಳಂಥ ವನ್ಯಜೀವಿಗಳಿದ್ದರೇನೇ ಕಾಡಿಗೆ ಸೊಬಗು’ ಎಂಬ ಮಾತನ್ನು ಮರೆಯದಿರೋಣ.

(ಲೇಖಕರು ಸಹಾಯಕ ಪ್ರಾಧ್ಯಾಪಕರು)