ಅಭಿಮತ
ಡಾ. ಕೆ.ಪಿ. ಪುತ್ತೂರಾಯ
drputhuraya@yahoo.co.in
ಆ ಕಾಲ ಪುಟ್ಟ ಬಾಲಕನೊಬ್ಬ ತನ್ನ ತಾತನನ್ನು ಕೇಳುತ್ತಾನೆ. ‘ಅಜ್ಜಾ ನೀವು ಮಕ್ಕಳಾಗಿದ್ದಾಗ, ನಮಗಿರುವಂತೆ ನಿಮಗೆಲ್ಲಾ smart phone,
computer, internet ಗಳು ಇರಲಿಲ್ಲ. facebook ಗಳಿಲ್ಲ, Twitter ಗಳಿಲ್ಲ, ಮೊಬೈಲ್ ಇಲ್ಲ. ಇವುಗಳೆಲ್ಲಾ ಇಲ್ಲದೆ ಇರಲು ಹೇಗೆ ಸಾಧ್ಯವಾಯಿತು? ಅಂತಯೇ ವಾಹನ ಸೌಕರ್ಯಗಳಿರಲಿಲ್ಲ. ಮನೆಯಲ್ಲಿ washing machine, fridge, grinder, mixer, oven, gas stove ಗಳು ಏನೂ ಇಲ್ಲವಾಗಿತ್ತು.
ಆದರೂ ಹೇಗೆ ಜೀವನ ಮಾಡಿದಿರಿ?’ ಉತ್ತರವಾಗಿ ತಾತ ಹೇಳಿದ. ‘ಹೌದು ಮಗು, ನಮಗೆ ಯಾವ ಯಂತ್ರೋಪಕರಣಗಳ ಸೌಕರ್ಯ ಸೌಲಭ್ಯಗಳೂ ಇಲ್ಲವಾ ಗಿತ್ತು. ಆದರೂ ನಾವೆಲ್ಲಾ ಆರೋಗ್ಯವಂತರಾಗಿ, ನೆಮ್ಮದಿಯಿಂದ ಸಂತೋಷದ ದಿನಗಳನ್ನು ಕಳೆದೆವು ಮೊಬೈಲ್, ಇಲ್ಲದಿದ್ದುದ್ದರಿಂದ ನಮಗೆ ಓದಲು ನಮಗೆ ಹೆಚ್ಚು ಸಮಯ ಸಿಗುತ್ತಿತ್ತು. ಬೇಡದ ವಿಚಾರಗಳತ್ತ ನಮ್ಮ ಗಮನ ಹರಿಯಲಿಲ್ಲ. ನಿನಗೆ ಗೊತ್ತಲ್ಲ ಮಗು! ಪುಸ್ತಕ ಹೇಳುತ್ತೆ ‘ತಲೆ ತಗ್ಗಿಸಿ ಜೀವನದಲ್ಲಿ ನನ್ನನ್ನು ಯಾವಾಗಲೂ ಓದುತ್ತಾ ಇರು; ಜೀವನದಲ್ಲಿ ನಿನ್ನನ್ನು ತಲೆ ಎತ್ತಿ ನಡೆಯುವಂತೆ ಮಾಡುತ್ತೇನೆ.
ಆದರೆ ಮೊಬೈಲ್ ಹೇಳುತ್ತೆ ‘ತಲೆತಗ್ಗಿಸಿ ನನ್ನ ಜತೆಯೇ ಆಟವಾಡುತ್ತಾ ಇರು; ಜೀವನದಲ್ಲಿ ನಿನ್ನನ್ನು ಎಂದೂ ತಲೆ ಎತ್ತದಂತೆ ಮಾಡುತ್ತೇನೆ,.’ ಇನ್ನು ಮನೆಕೆಲಸಗಳಿಗೆ ಯಾವುದೇ ಯಂತ್ರೋಪಕರಣಗಳೂ ಇಲ್ಲವಾಗಿದ್ದ ಕಾರಣ ಬಾವಿಯಿಂದ ನೀರು ಸೇದುವುದರಿಂದ ಹಿಡಿದು, ಕುಟ್ಟುವ, ರುಬ್ಬುವ, ಬೀಸುವ ಒಗೆಯುವ, ಕಟ್ಟಿಗೆ ಒಡೆಯುವ, ಎಲ್ಲಾ ಕೆಲಸಗಳನ್ನು ದೈಹಿಕ ಶ್ರಮದಿಂದ ಮಾಡುತ್ತಿದ್ದೆವು. ಹೀಗಾಗಿ ಯಾರಿಗೂ BP, Sugar problem, ಬೆನ್ನು ನೋವು, ಮಂಡಿನೋವು, ಇರುತ್ತಿರಲಿಲ್ಲ. ಶಾಲೆಗಳಿಂದ ಹಿಡಿದು ಬಂಧು ಮಿತ್ರರ ಮನೆಗೂ ಕಾಲ್ನಡಿಗೆಯಿಂದಲೇ ಹೋಗಿ ಬರುತ್ತಿದ್ದೆವು.
ಆದುದರಿಂದಲೇ ಇನ್ನೂ ನಮ್ಮ ಕೈಕಾಲುಗಳು ಗಟ್ಟಿಯಾಗಿವೆ. ನಮ್ಮ ಬಳಿ pocket money ಇರುತ್ತಿರಲಿಲ್ಲ. ಹಾಗಾಗಿ ಯಾವುದೇ ದುಶ್ಚಟ-ದುರಾಭ್ಯಾಸಗಳಿಗೆ ನಾವುಗಳು ಬಲಿಯಾಗಲಿಲ್ಲ. ಆಹಾರವೂ ಅಷ್ಟೆ ನಮ್ಮ ತೋಟದಲ್ಲೇ, ಬೆಳೆದ ಧವಸ ಧಾನ್ಯ ಹಣ್ಣು ಹಂಪಲು ತರಕಾರಿಗಳನ್ನೇ ಬಳಸುತ್ತಿದ್ದೆವು. ಏನೂ ಸಿಗದಿದ್ದರೆ, ಗುಡ್ಡೆಯಲ್ಲಿ ಸಿಗುವ ಅಪರೂಪದ ಔಷಧಿಯುಕ್ತ ತರತರದ ಚಿಗುರು ಎಲೆಗಳ ತಂಬುಳಿಗಳು. ಇಲ್ಲವೇ ಮಳೆಗಾಲಕ್ಕೆಂದು ನೇತು ಹಾಕಿದ ಸೌತೆಕಾಯಿ, ಕುಂಬಳ ಕಾಯಿ, ಒಟ್ಟಿನಲ್ಲಿ ಈಗಿನ ಕಾಲದಲ್ಲಿರುವಂತೆ ತರತರದ ತಿಂಡಿ ತಿನಿಸುಗಳು ಲಭ್ಯವಿರದಿದ್ದರೂ ಕಲಬೆರಕೆ ಇಲ್ಲದ ಸರಳ ಸ್ವಾದಿಷ್ಟ ಸಾತ್ವಿಕ ಆಹಾರಕ್ಕೆ ಕೊರತೆ ಇರುತ್ತಿರಲಿಲ್ಲ. ಅದಕ್ಕೆ ಆರೋಗ್ಯವಂತ ರಾಗಿದ್ದೇವೆ”.
ಹೌದು, ಆ ಕಾಲವೆಂದರೆ ಬಹಳ ಹಳೆಯ ಕಾಲವೇನೂ ಅಲ್ಲ. ಆರೇಳು ದಶಕಗಳ ಹಿಂದೆ ನಾನು ಕೂಡಾ ಕಳೆದ ಕಾಲ. ಆಗೆಲ್ಲಾ ಅವಿಭಕ್ತ ಕುಟುಂಬಗಳೇ ಸರ್ವೇ
ಸಾಮಾನ್ಯವಾಗಿದ್ದ ಕಾಲ. ಮನೆತುಂಬಾ ಜನ, ಈ ಪದ್ಧತಿಯ ರೀತಿ ಕೂಡಿಬಾಳುವ ಕಲೆ, ಪರಸ್ಪರ ಗೌರವ, ಕಾಳಜಿ, ಜವಾಬ್ದಾರಿ, ತಾಳ್ಮೆ, ಸಹನೆ, ಒಟ್ಟಿಗೆ
ಉಣ್ಣುವ ಕ್ರಮ, ಹಂಚಿ ತಿನ್ನುವ ರೀತಿ, ಮುಂತಾದ ಅನೇಕ ಮೌಲ್ಯಗಳನ್ನು ಕಲಿಸಿಕೊಟ್ಟಿತು. ತುಂಬು ಸಂಸಾರದಿಂದ ದೊರೆಯುವ ಪ್ರೀತಿ-ವಾತ್ಸಲ್ಯಗಳೂ
ವರ್ಣಿಸಲು ಅಸಾಧ್ಯ. ಅಪ್ಪ ಹೊಡೆದಾಗ ಅಜ್ಜ ಸಂತೈಸಿದ ರೀತಿ, ಅಜ್ಜಿ ಹೇಳಿದ ಕತೆಗಳು, ಚಿಕ್ಕಪ್ಪ ತನ್ನ ಹೆಗಲ ಮೇಲೆ ನನ್ನನ್ನು ಹೊತ್ತುಕೊಂಡು ಊರ ಜಾತ್ರೆಗೆ ಹೋದ ದಿನ, ಅತ್ತಿಗೆ ಮಾಡಿಸಿದ ಸ್ನಾನ, ಅಕ್ಕ ಜೋಗುಳ ತೂಗಿದ್ದು, ತಂಗಿ ತನ್ನ ಬಟ್ಟೆಗಳನ್ನು ಒಗೆದಿದ್ದು, ಇಂತಹ ಮಧುರ ನೆನೆಪುಗಳನ್ನು ಮರೆಯಲು ಸಾಧ್ಯವೇ? ಎಲ್ಲವೂ ಸಂಬಂಧಗಳನ್ನು ಭಾವನಾತ್ಮಕವಾಗಿ ಗಟ್ಟಿ ಮಾಡುತ್ತಿದ್ದವು.
ಅವಿಭಕ್ತ ಕುಟುಂಬ ಪದ್ಧತಿಯಲ್ಲಿ ಪ್ರತಿಯೊಬ್ಬ ಸದಸ್ಯರಲ್ಲಿ ಸುರಕ್ಷತಾ ಭಾವವಿರುತ್ತಿತ್ತು. ಕಾರಣ ಪ್ರತಿಯೊಬ್ಬ ಸದಸ್ಯರ ಕಷ್ಟ ನಷ್ಟಗಳು, ನೋವು ಅವರೊಬ್ಬರ ಸಮಸ್ಯೆಯಾಗಿಯೇ ಉಳಿಯದೆ ಎಲ್ಲರ ಸಮಸ್ಯೆಯಾಗಿರುತ್ತಿತ್ತು. ಮಕ್ಕಳು ಬರೇ ಹೆತ್ತವರ ಆರೈಕೆ-ಮಮತೆಗಳಿಗೆ ಮಾತ್ರ ಒಳಗಾಗದೆ, ಕುಟುಂಬದ ಎಲ್ಲರ ಪ್ರೀತಿ
ವಾತ್ಸಲ್ಯವನ್ನು ಅನುಭವಿಸುವ ಭಾಗ್ಯವಂತರಾಗಿದ್ದರು. ಮನೆಯ ಕೆಲಸಗಳನ್ನು ಎಲ್ಲರೂ ಹಂಚಿಕೊಳ್ಳುತ್ತಿದ್ದರು. ಹಬ್ಬಗಳ ದಿನವಂತೂ ಸಂಭ್ರಮವೇ ಸಂಭ್ರಮ. ಒಬ್ಬ ಹೂ ತಂದ, ಇನ್ನೊಬ್ಬ ಹಣ್ಣು ತಂದ. ಒಬ್ಬ ಚಪ್ಪರ ಹಾಕಿದ. ಇನ್ನೊಬ್ಬ ತೋರಣ ಕಟ್ಟಿದ. ಒಬ್ಬಾಕೆ ಅಡಿಗೆ ಮಾಡಿದರೆ, ಇನ್ನೊಬ್ಬಾಕೆ ರಂಗೋಲಿ ಹಾಕಿದಳು. ಇನ್ನೂ ಶಾಲೆಗಳು ಅಷ್ಟೆ, ಜಡಿಮಳೆ ಬರಲಿ, ಉರಿಬಿಸಿಲು ಇರಲಿ, ತರಗತಿಗಳು ಸಮಯಕ್ಕೆ ಸರಿಯಾಗಿ ಆರಂಭಗೊಳ್ಳುತ್ತಿದ್ದವು.
ಟ್ಯೂಷನ್ ಪದ್ಧತಿ, ಇಲ್ಲವೇ ಪರೀಕ್ಷೆಗಳಲ್ಲಿ ನಕಲು ಹೊಡೆಯುವ ಪದ್ಧತಿ ಇಲ್ಲವೇ ಇಲ್ಲವಾಗಿತ್ತು. Supervisors ಇಲ್ಲದೇನೇ ಪರೀಕ್ಷೆಗಳು ನಡೆಯುತ್ತಿದ್ದವು. ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರವೆಂಬುದೇ ಇಲ್ಲವಾಗಿತ್ತು. ಪರ ಊರಿಗೆ ಹೋಗುವಾಗಲೂ ಮನೆಗೆ ಬೀಗ ಹಾಕುವ ಕ್ರಮವಿಲ್ಲವಾಗಿತ್ತು; ಬಾಗಿಲನ್ನು
ಎಳಕೊಂಡರೆ ಸಾಕಿತ್ತು. ಮನೆಯ ಹೊರಗೆ ತಂತಿಯ ಮೇಲೆ ಒಣಗಲು ಹಾಕಿದ ಬಟ್ಟೆಗಳೂ ಹಾಗೆನೇ ಇರುತ್ತಿದ್ದವು. ತಮ್ಮದಲ್ಲದ ಕಾರಣ ಯಾರೂ ಅದನ್ನು
ಮುಟ್ಟುತ್ತಿರಲಿಲ್ಲ. ಮನೆಗಳಿಗೆ ಸಿ.ಸಿ ಕ್ಯಾಮೆರಾಗಳೂ ಇರುತ್ತಿರಲಿಲ್ಲ. ಪಕ್ಕದ ಮನೆಯವರ ಕಣ್ಣುಗಳೇ ಆ ಕೆಲಸಗಳನ್ನು ಮಾಡುತ್ತಿದ್ದವು. ಆಗ ಇದ್ದಿದ್ದು ಕಪ್ಪು
ಬಿಳುಪು photography ಮಾತ್ರ. ಆದರೆ ನೆನಪುಗಳು ಮಾತ್ರ colourful. ಬೆಲೆಗಳೂ ಅಷ್ಟೆ ರೂಪಾಯಿ ಒಂದಕ್ಕೆ ಕೆಜಿ ಅಕ್ಕಿ, ಲೀಟರ್ ಪೆಟ್ರೋಲ್.
೫ ರುಪಾಯಿಗೆ. ಚೀಲ ತುಂಬ ತರಕಾರಿ ತರುತ್ತಿದ್ದ ಕಾಲ. ಅತಿಥಿ ಸತ್ಕಾರವೂ ಬಹಳವಾಗಿತ್ತು.
‘ನಮ್ಮಲ್ಲಿಗೂ ಬಂದು ನಾಲ್ಕಾರು ದಿನ ಇದ್ದು ಹೋಗಿ’ ಎನ್ನುವವರು ಹಾಗೂ ಬಂದವರನ್ನು ಆತ್ಮೀಯವಾಗಿ ಉಪಚರಿಸುವವರು. ಹಿಂದಿನ ಕಾಲದ ಜನ
ಹೇಳುವಷ್ಟು ಸುಶಿಕ್ಷಿತರಲ್ಲದಿದ್ದರೂ, ಸುಂಸಂಕ್ಕೃತರಾಗಿದ್ದರು. ಮೌಲ್ಯಗಳಿಗೆ ಮಣೆ ಹಾಕುತ್ತಿದ್ದವರು, ನಂಬಿಕೆ, ಪರಿಶ್ರಮ, ಪ್ರಾಮಾಣಿಕತೆ, ಪರೋಪಕಾರ,
ಇವರ ಜೀವನ ಕ್ರಮವಾಗಿರುತ್ತಿತ್ತು. ಹೊಂದಾಣಿಕೆ, ತ್ಯಾಗ-ತಾಳ್ಮೆ, ಸಂಸಾರವನ್ನು ನಡೆಸುವ ಸೂತ್ರವಾಗಿರುತ್ತಿತ್ತು. ಈಗ ಇರುವಂತೆ Baby sitting,
Lover’s day, mothers day, fathers day, living together. ವೃದ್ಧಾಶ್ರಮ, ವಿವಾಹ ವಿಚ್ಛೇದನಗಳು ಇವರಿಗೆ ತಿಳಿಯದ ವಿಷಯಗಳಾಗಿದ್ದವು. ಧಾರ್ಮಿಕ, ಶೈಕ್ಷಣಿಕ ಸಂಸ್ಥೆಗಳು ಮತ್ತು ರಾಜಕೀಯ ಸಮಾಜ ಸೇವೆಯನ್ನು ಮಾಡುವ ಪವಿತ್ರ ಕ್ಷೇತ್ರಗಳಾಗಿದ್ದವು.
ಈ ಕಾಲ: ನಾವಿರುವ ಈ ಕಾಲದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಅಭಿವೃದ್ಧಿಗಳೇನೋ ಆಗಿದೆ ನಿಜ. ಆದರೆ ಅಷ್ಟೇ ಸಮಸ್ಯೆಗಳೂ ಜೀವಂತವಾಗಿದೆ. ಜಾಗತಿಕವಾಗಿ ನೋಡಿದರೆ ಅಂರ್ತಜಾಲಗಳ ಮೂಲಕ ದೇಶ ದೇಶಗಳೇನೋ ಹತ್ತಿರವಾಗಿದೆ; ಆದರೆ, ಜನರ ಹೃದಯಗಳು ಹತ್ತಿರವಾಗಿವೆ. ಎಲ್ಲರ
ಮನಸ್ಸಲ್ಲೂ ಏನೋ ಒಂದು ಆತಂಕ. ಅನಿಶ್ಚಿತತೆ, ಅಸಹಾಯಕತೆ, ಅಸಹಿಷ್ಣುತೆ ಮನೆ ಮಾಡಿದೆ. ತಂತ್ರಜ್ಞಾನ ಬೆಳೆದಿದೆ. ಆದರೆ ಮೌಲ್ಯಗಳ ಮಾನವೀಯತೆಯ ಪರಿಜ್ಞಾನ ಇಳಿದಿದೆ. ಇಲ್ಲವಾದರೆ ಕರೋನಾದಂತಹ ವಿಷಕಾರಿ ವೈರಾಣುವನ್ನು ಏಕೆ ಸೃಷ್ಟಿಸಬೇಕಿತ್ತು? ದೇಶ ದೇಶಗಳ ನೆಮ್ಮದಿ, ಸುಖ ಸಂತೋಷಗಳನ್ನು ಏಕೆ ಹಾಳು ಮಾಡಬೇಕಿತ್ತು? ಯಾರು ಯಾರನ್ನೂ ನಂಬದಂತಾಗಿದೆ. ದೇಶದ ಭದ್ರತೆಗೆಂದು ವ್ಯಯ ಮಾಡುವ ಹಣ, ದೇಶದ ಜನರ ಜೀವನಕ್ಕೆ ನೆರವಾಗುವ ಹಣಕ್ಕಿಂತ ಅಽಕ ಪಟ್ಟು ಹೆಚ್ಚಾಗಿದೆ. ಭಯ-ಭಯೋತ್ಪಾದನೆ ಎಲ್ಲಾ ಕಡೆ ಹೊಂಚು ಹಾಕಿದೆ. ಎಲ್ಲರ ಮನದೊಳಗೆ ಏನೋ ಹಗೆ; ಏನೋ ಧಗೆ, ವಿಶ್ವಶಾಂತಿ ಇಲ್ಲವಾಗಿದೆ. ರಾಜಕಾರಣಿಗಳ ಸಂಖ್ಯೆ ಏರಿದೆ; ಆದರೆ ಮೌಲ್ಯಾಧಾರಿತ ರಾಜಕಾರಣ ನಡೆಸುವವರ ಸಂಖ್ಯೆ ಕುಸಿದಿದೆ.
ಇವರದು ಪಾಲನೆ ಇಲ್ಲದ ಭೋಧನೆ; ಚಾಲನೆ ಇಲ್ಲದ ಯೋಜನೆ ಹಾಗೂ ತತ್ವವಿಲ್ಲದ ರಾಜಕಾರಣ. ಕೈಗೆ ಸಿಗದ ಕಳ್ಳರಿವರು! ದೇಶದಲ್ಲಿ ಜೈಲಿನ ಒಳಗಿರುವ ಕೈದಿಗಳಿಗಿಂತ ಹೊರಗಿರುವವರ ಸಂಖ್ಯೆಯೇ ಅಽಕವಾಗಿದೆ. ಒಟ್ಟಿನಲ್ಲಿ ಪ್ರಜಾಪ್ರಭುತ್ವ ನಿಜವಾದ ಅರ್ಥವನ್ನು ಕಳೆದುಕೊಂಡಿದೆ. ರಾಜಕಾರಣ ಸಮಾಜ ಸೇವೆಗಲ್ಲ; ಸ್ವಾರ್ಥ ಸಾಧನೆಯ ಕ್ಷೇತ್ರವಾಗಿದೆ. ಇದುವರೆಗೆ ಯಾವ ಹಗರಣವೂ ಇತ್ಯರ್ಥವಾಗಿಲ್ಲ; ಯಾವ ಭ್ರಷ್ಠ ರಾಜಕಾರಿಣಿಗೂ ಶಿಕ್ಷೆ ಆಗಿಲ್ಲ. ಒಟ್ಟಿನಲ್ಲಿ
ದೇಶ ಹಲವಾರು ಸಮಸ್ಯೆಗಳ ಬೀಡಾಗಿದೆ. ಗೊಂದಲಗಳ ಗೂಡಾಗಿದೆ.
ಸಾಮಾಜಿಕವಾಗಿ ನೋಡಿದರೆ ಸಮಾಜದಲ್ಲಿ ಅಸಮಾನತೆ ಇದೆ; ಸಮಾನ ಅವಕಾಶಗಳಿಲ್ಲ. ಅವಕಾಶವಿದ್ದವರಿಗೆ ಪ್ರತಿಭೆ ಇಲ್ಲ; ಪ್ರತಿಭೆ ಇದ್ದವರಿಗೆ
ಅವಕಾಶವಿಲ್ಲ. ಯೋಗ್ಯತೆ ಇದ್ದವರಿಗೆ ಯೋಗ ಇಲ್ಲ; ಯೋಗ ಇದ್ದವರಿಗೆ ಯೋಗ್ಯತೆ ಇಲ್ಲ. ಯಾರ‍್ಯಾರೂ ಎಲ್ಲೆಲ್ಲಿ ಇರಬೇಕೋ ಅಲ್ಲಲ್ಲಿ ಇಲ್ಲ, ಯಾರ‍್ಯಾರು
ಎಲ್ಲೆಲ್ಲಿ ಇರಬಾರದೋ ಅವರು ಅಲ್ಲಲ್ಲಿ ಸೇರಿಕೊಂಡಿದ್ದಾರೆ. ತೂರಿಕೊಂಡಿದ್ದಾರೆ. ಸಾಮಾಜಿಕ ಜೀವನದಲ್ಲಿ ಸಾಮರಸ್ಯ ಮರೆಯಾಗಿದೆ. ಇಲ್ಲವಾದರೆ ಆಗಾಗ
ನಡೆಯುವ ಈ ಕೋಮು ಗಲಭೆಗಳು ಏಕೆ ಬೇಕು? ಭ್ರಷ್ಟಾಚಾರ ಎಲ್ಲಾ ಕ್ಷೇತ್ರಗಳಲ್ಲೂ ತಾಂಡವಾಡುತ್ತಿದೆ.
ಧನಬಲ-ಜಾತಿಬಲ-ಬಾಹುಬಲವಿಲ್ಲದೆ ಯಾವ ಚುನಾವಣೆಯನ್ನು ಗೆಲ್ಲಲಾಗದು. ನಿರುದ್ಯೋಗ ಸಮಸ್ಯೆ, ಬಡತನ ಇನ್ನೂ ಜೀವಂತವಾಗಿದೆ. ಒಪ್ಪೊತ್ತು
ಉಣ್ಣುವವರು ಕೋಟ್ಯಾನು ಕೋಟಿ. ಒಪ್ಪೊತ್ತೂ ಉಣದವರು ಇನ್ನೆಷ್ಟು ಕೋಟಿ! ಹೊಟ್ಟೆಗಿದ್ದರೆ ಬಟ್ಟೆಗಿಲ್ಲ; ಬಟ್ಟೆಗಿದ್ದರೆ ಹೊಟ್ಟೆಗಿಲ್ಲ. ಒಟ್ಟಿನಲ್ಲಿ ಬಡವರ ಸ್ಥಿತಿ ನೆಟ್ಟಗಿಲ್ಲ. ರಾತ್ರಿಯೆಲ್ಲಾ ಕಲ್ಲುಬೆಂಚಿನಲ್ಲಿ ಮಲಗುವವರ. ದಿನ ಬೆಳಗಾದರೆ ಕಸದ ತೊಟ್ಟಿಯನ್ನು ಹುಡುಕುವವರ ದೃಶ್ಯ ಸರ್ವೇ ಸಾಮಾನ್ಯ. ಶಾಲಾ ಕಾಲೇಜು ಗಳಲ್ಲಿ ಫೀ ಕಟ್ಟಲು ಹಣವಿಲ್ಲದೆ ತಮ್ಮ ವಿಧ್ಯಾಭ್ಯಾಸವನ್ನು ನಿಲ್ಲಿಸುವ, ಸರಿಯಾದ ಚಿಕಿತ್ಸೆ ಇಲ್ಲದೆ ಇಲ್ಲವೇ ಚಿಕಿತ್ಸೆಗೆ ಹಣವಿಲ್ಲದೆ ಒದ್ದಾಡುವವರ ಸಂಖ್ಯೆಯೂ ಕಡಿಮೆಯಿಲ್ಲ. ಏರುತ್ತಿರುವ ಬೆಲೆಗಳು, ಜನಸಂಖ್ಯೆ ಕುಸಿಯುತ್ತಿರುವ ಮೌಲ್ಯಗಳು, ಜಾತೀಯತೆ, ಕಲಬೆರಕೆ, ಪರಿಸರ ಮಾಲಿನ್ಯ, ಮೂಢನಂಬಿಕೆ, ಅನುಮಾನ, ದೇಶದ್ರೋಹಿ ಕೃತ್ಯಗಳು ಸಾಮಾಜಿಕ ಪ್ರಗತಿಗೆ ಹಿನ್ನೆಡೆಯಾಗಿವೆ. ನೆರಳು ಎಲ್ಲರಿಗೂ ಬೇಕು.
ಆದರೆ ಯಾರು ಮರಗಳನ್ನು ಬೆಳೆಸೊಲ್ಲ; ಮಳೆ ಎಲ್ಲರಿಗೂ ಬೇಕು ಆದರೆ ಯಾರೂ ಕಾಡನ್ನು ಉಳಿಸೊಲ್ಲ; ಆಹಾರ ಎಲ್ಲರಿಗೂ ಬೇಕು, ಆದರೆ ರೈತರಿಗೆ ಗೌರವ ಪ್ರೋತ್ಸಾಹವಿಲ್ಲ. ಎಲ್ಲರಲ್ಲೂ ಸಾಕಷ್ಟು ಸೊತ್ತು ಇದೆ. ಆಧರೆ ಇತರರಿಗಾಗಿ ಪುರುಸೊತ್ತು ಇಲ್ಲ.
ಸಾಂಸಾರಿಕವಾಗಿ : ಅವಿಭಕ್ತ ಕುಟುಂಬಗಳು ಮಾಯವಾಗಿ ವಿಭಕ್ತ ಕುಟುಂಬಗಳೇ ಜಾಸ್ತಿ ಆಗಿವೆ. ಗಂಡ ಹೆಂಡತಿ ಜತೆಗಿದ್ದರೆ, ಅದುವೇ ಅವಿಭಕ್ತ ಕುಟುಂಬ ವೆಂದೆನಿಸಿದೆ. ವಿವಾಹ ವಿಚ್ಛೇದನಗಳು, ವೃದ್ಧಾಶ್ರಮಗಳು ಹೆಚ್ಚಾಗಿವೆ. ಯುವಕರಿಗೂ ಮಾರ್ಗಸೂಚಿಗಳಿಲ್ಲ; ಮಾರ್ಗದರ್ಶನವಿಲ್ಲ. ಇವರಲ್ಲಿ ಶಿಕ್ಷಣವಿದೆ; ಆದರೆ ಸಂಸ್ಕಾರವಿಲ್ಲ. ‘ಅಪ್ಪಾ ನಿನ್ನ ಬಟ್ಟೆಗಳನ್ನು ತೊಳೆದು ಹಾಕಿದ್ದೇನೆ ಎಂದು ಮಗ ಅಂದಾಗ ‘ನಿಮಗಿಲ್ಲದ ಹೊಸಬಟ್ಟೆ ನನಗೂ ಬೇಡ’ ಎನ್ನುವ ಮಡದಿ ಅಂದಾಗ ಸಿಗುವ ಆನಂದಕ್ಕೆ ಎಣೆಯುಂಟೇ? ಸಂಬಂಧಿಕರು ಲಾಭ ಇದ್ದರೆ ಮಾತ್ರ ಸಂಬಂಧಗಳನ್ನು ಇಟ್ಟುಕೊಳ್ಳುತ್ತಾರೆ. ಹಿಂದಿನ ಕಾಲದ ಮಕ್ಕಳು ಅಜ್ಜಿ ಮನೆಯಲ್ಲಿ ಹುಟ್ಟಿದರೆ ಈಗಿನ ಕಾಲದ ಮಕ್ಕಳು ಆಸ್ಪತ್ರೆಯಲ್ಲಿ ಹುಟ್ಟುತ್ತಾರೆ. ದೇವರ ಮೇಲಿನ ಭಕ್ತಿ ಹೆಚ್ಚಾಗಿದೆ. ಕಾರಣ ಮಾಡಿದ ಪಾಪದ ಹೊರೆ ಭಾರವಾಗಿದೆ. ಇಂದಿನ ಕಾಲದಲ್ಲಿ ಅಮ್ಮ ಟ್ಯಾಬ್‌ನಲ್ಲಿ ಅಪ್ಪ ಕ್ಲಬ್‌ನಲ್ಲಿ ಅಣ್ಣ ಪಬ್‌ನಲ್ಲಿ ಮತ್ತು ಮಕ್ಕಳು Baby center ನಲ್ಲಿ, ಮುದುಕರು ವೃದ್ಧಾಶ್ರಮದಲ್ಲಿ ಮಳೆ ನಿಂತ ಮೇಲೆ, ಕೈಯ್ಯಲ್ಲಿರುವ ಛತ್ರಿಯೇ ಭಾರವಾಗುವಂತೆ ಅವಶ್ಯಕತೆ ಮುಗಿದ ಮೇಲೆ ಮಕ್ಕಳಿಗೆ ಹೆತ್ತವರು ಭಾರವಾಗಿದ್ದಾರೆ. ಸಂಬಂಧಗಳು ದೂರವಾಗುತ್ತಿವೆ.
ಕಲಿಕಾಲ : ನಾಲ್ಕರಲ್ಲಿ ಮೂರನೇ ಪಾದಷ್ಟು ಅಧರ್ಮ, ಅನ್ಯಾಯಗಳು ನಡೆದು, ಉಳಿದು ಒಂದು ಪಾದದಷ್ಟು ಮಾತ್ರ ನ್ಯಾಯಧರ್ಮಗಳು ಉಳಿದಿರುವ ಕಲಿಕಾಲದ ಮುಂಬರುವ ದಿನಗಳಲ್ಲಿ ಏನೆಲ್ಲಾ ನಡೆಯಬಹುದು ಎಂಬುದನ್ನು ಊಹಿಸಿಕೊಳ್ಳಲೂ ಸಾಧ್ಯವಾಗದು. ತನ್ನ ಸೌಂದರ್ಯ ಕೆಟ್ಟು ಹೋದಿತೆಂಬ ಭಯದಿಂದ ತಾಯಿ ಹೆತ್ತ ಹಸುಳೆಗೆ ಹಾಲನ್ನು ನೀಡಳು, ಬಾಡಿಗೆಗೆ ತಾಯಿತನ ಲಭ್ಯವಾದೀತು, ಸೇವೆ ಮಾಡಬೇಕಾದ ಮಕ್ಕಳು ಹೆತ್ತವರನ್ನೇ ಕೊಂದಾರು; ಅಪ್ಪನೇ ಮಗಳನ್ನು ರೇಪ್ ಮಾಡಿಯಾನು, ಕಾಮಪಿಶಾಚಿಗಳು ಹೆಣವನ್ನೇ ಸಂಭೋಗಿಸಿಯಾರು- ಇನ್ನು ಏನೇನೋ!
ಒಟ್ಟಿನಲ್ಲಿ ‘ದೀಪ ನಂದುತಿದೆ; ತೈಲವೆಲ್ಲಿಹುದು; ಪಾಪ ಬೆಳೆಯುತಿದೆ; ಧರ್ಮವೆಲ್ಲಿಹುದು? ಒಲೆಹತ್ತಿ ಉರಿದೊಡೆ ನಿಲಬಹುದು. ಧರೆ ಹತ್ತಿ ಉರಿದರೆ ಏನು
ಮಾಡಲಿ?’ ಎಂದು ಚೀತ್ಕರಿಸುವಂತಾಗಿದೆ.