Wednesday, 11th December 2024

ಊರು ಸುತ್ತುವ ನಮಗೆ ಹಾರುವ ಹಕ್ಕಿಗಳ ಬಗ್ಗೆ ಎಷ್ಟು ಗೊತ್ತು ?

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ಕೆಲ ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾಕ್ಕೆ ಹೋದಾಗ ಉಷ್ಟ್ರ (ಆಸ್ಟ್ರಿಚ್) ಪಕ್ಷಿಗಳ ಜತೆಗೆ ಅರ್ಧದಿನ ಕಳೆಯುವ ಅವಕಾಶ ಸಿಕ್ಕಿತ್ತು. ಇವು ಪಕ್ಷಿಗಳಲ್ಲೇ ಅಪವಾದ. ಕಾರಣ ಅವು ಹಾರಲಾರವು. ಆದರೆ ಎರಡು ಕಾಲಿನ ಪ್ರಾಣಿಗಳಲ್ಲೇ ಅತಿ ವೇಗವಾಗಿ ಓಡುವ ‘ಪಕ್ಷಿ’.

ಇವು ಗಂಟೆಗೆ ಎಪ್ಪತ್ತು ಕಿಮಿ ವೇಗದಲ್ಲಿ ಓಡಬಲ್ಲವು. ಒಂದು ಹೆಜ್ಜೆ ಇಟ್ಟರೆ ಐದು ಮೀಟರ್‌ವರೆಗೆ ದಾಪು ! ಎಲ್ಲ ಪ್ರಾಣಿಪಕ್ಷಿಗಳಿಗಿಂತ ಭಗವಂತ ಇದಕ್ಕೆ ದೊಡ್ಡ ಕಾಲುಗಳನ್ನು ಕೊಟ್ಟಿದ್ದಾನೆ. ವಿಚಿತ್ರ ಅಂದ್ರೆ, ಅದರ ಮಿದುಳಿಗಿಂತ ಕಣ್ಣುಗಳೇ ದೊಡ್ಡದು. ಉಷ್ಟ್ರಪಕ್ಷಿಯೇ ನಾದರೂ ಝಾಡಿಸಿ ಒದ್ದರೆ ಬೇರೆ ಪ್ರಾಣಿಗಳೇನು, ಮನುಷ್ಯರೂ ಗೊಟಕ್. ಅದರ ಕಾಲು, ಉಗುರು ಅಷ್ಟು ಬಲಿಷ್ಠ. ದೇವರು ಅದಕ್ಕೆ ಎಲ್ಲ ಕೊಟ್ಟ. ಆದರೂ ಪಕ್ಷಿ ಕುಲದಲ್ಲಿ ಹುಟ್ಟಿಸಿ ಹಾರುವುದನ್ನು ಮಾತ್ರ ಹೇಳಿ ಕೊಡಲಿಲ್ಲ. ರೆಕ್ಕೆಗಳನ್ನು ಕೊಟ್ಟೂ ಹಾರಲಾರದಂತೆ ಮಾಡಿದ.

ನಾವು ಹೋದ ಫಾರ್ಮ್‌ನಲ್ಲಿ ಒಂದು ಉಷ್ಟ್ರಪಕ್ಷಿ ನಾಲ್ಕೈದು ಮೊಟ್ಟೆಗಳನ್ನು ಹಾಕಿತ್ತು. ನಮ್ಮ ಜತೆಯಲ್ಲಿದ್ದ ಗೈಡ್, ಆ ಮೊಟ್ಟೆಗಳ ಮೇಲೆ ನಿಂತುಕೊಳ್ಳಿ ಎಂದ. ನಾನು ಅನುಮಾನ ವ್ಯಕ್ತಪಡಿಸಿದೆ. ‘ನೀವು ಅಷ್ಟೇನೂ ಭಾರವಿಲ್ಲ ಬಿಡಿ, ನಿಂತುಕೊಳ್ಳಿ’ ಎಂದ. ನಾನು ನಿಧಾನವಾಗಿ ಆ ಮೊಟ್ಟೆಗಳ ಮೇಲೆ ನಿಂತುಕೊಂಡೆ. ಏನೂ ಆಗಲಿಲ್ಲ. ನನಗಿಂತ ದಢೂತಿ ಕಾಯದ ಆಸಾಮಿ ಆ ಮೊಟ್ಟೆಗಳ ಮೇಲೆ ನಿಂತುಕೊಂಡ. ಸಾಲದೆಂಬಂತೆ ಜೋರಾಗಿ ಆ ಮೊಟ್ಟೆಗಳ ಮೇಲೆ ಜಿಗಿದ. ಕಾಲಲ್ಲಿ ಹೊಸಕಿ ಹಾಕಲು ಪ್ರಯತ್ನಿಸಿದ. ಆ ಮೊಟ್ಟೆ ಸ್ವಲ್ಪವೂ ಹಜಕಾಡಲಿಲ್ಲ.

ದಿನದ ಬಹುಸಮಯ ನಿಂತೇ ಇರುವ ಈ ಪಕ್ಷಿ ದನಕರುಗಳು ಮಲಗಿದಂತೆ ಮಲಗುತ್ತದೆ. ನೀರಿಲ್ಲದೇ ತಿಂಗಳುಗಟ್ಟಲೇ ಕಳೆಯುವ ಉಷ್ಟ್ರಪಕ್ಷಿಗಳು ಜೋರಾಗಿ ರೆಕ್ಕೆ ಬಡಿದರೂ, ದೇಹ ಮಾತ್ರ ಕದಲುವುದೇ ಇಲ್ಲ. ಆಫ್ರಿಕಾ ಬಿಟ್ಟರೆ ಮತ್ತೆಲ್ಲೂ ಈ ಪಕ್ಷಿ ಇಲ್ಲ. ಏಕಾಂಗಿಯಾಗಿರುವುದನ್ನು ಇಷ್ಟಪಡುವ ಈ ಪಕ್ಷಿ ಕೆಲವೊಮ್ಮೆ 200-300 ಸಂಗಾತಿಗಳೊಂದಿಗೆ ತೆರಳುತ್ತದೆ. ಉಷ್ಟ್ರಪಕ್ಷಿ ಕರ್ಣನ ಹಾಗೆಯೇ ಎಲ್ಲ ಇದ್ದೂ ಹತಭಾಗ್ಯ. ಯಾವುದು ಇರಬೇಕೋ ಅದೇ ಇಲ್ಲ. ಪಕ್ಷಿಗಳೂ ಇದನ್ನು ಪಕ್ಷಿ ಎಂದು ಸ್ವೀಕರಿಸುವುದಿಲ್ಲ. ಪ್ರಾಣಿಗಳೂ ಹಾಗೇ. ಇದರ ಬಗ್ಗೆ ತಿಳಿದುಕೊಳ್ಳುತ್ತಾ ಹೋದಂತೆಲ್ಲ ನಾನು ಕೌತುಕದ ತಿರುವುಗಳಲ್ಲಿ ಕಳೆದು ಹೋದೆ. ಹೆಚ್ಚು ಕಮ್ಮಿ ಉಷ್ಟ್ರಪಕ್ಷಿಯನ್ನೇ ಹೋಲುವ -ಮಿಂಗೋ ಗಳು ಸರಿ ವಿರುದ್ಧ. ಅವು ಸಾವಿರಾರು ಕಿಮೀ ದೂರ ಹಾರಬಲ್ಲವು.

ಎಂಥ ವಿಚಿತ್ರ ಅಂದರೆ, ಭೂಮಿಯ ಮೇಲೆ ಹತ್ತು ಸಾವಿರಕ್ಕಿಂತ ಹೆಚ್ಚು ವಿವಿಧ ಜಾತಿ, ಪ್ರಭೇದಗಳ ಪಕ್ಷಿಗಳಿವೆ. ಒಂದಕ್ಕಿಂತ ಮತ್ತೊಂದು ಭಿನ್ನ. ಕಳೆದ ನೂರಾ ಇಪ್ಪತ್ತು ವರ್ಷಗಳಲ್ಲಿ ಮುನ್ನೂರು ಜಾತಿ ಹಕ್ಕಿಗಳು ಕಣ್ಮರೆಯಾಗಿವೆ. ಎಲ್ಲರ ಮನೆಗಳಲ್ಲಿ ಇರುತ್ತಿದ್ದ ಗುಬ್ಬಿ ವಿನಾಶದ ಅಂಚಿಗೆ ತಲುಪಿದೆ. ಹೀಗೆಲ್ಲ ಯೋಚಿಸುತ್ತಿರು ವಾಗ, ಹಕ್ಕಿಗಳ ಅದ್ಭುತ ಲೋಕ ನನ್ನ ಮನಸ್ಸಿನಲ್ಲಿ ಹಾರುತ್ತಿದ್ದಾಗ, ‘ನ್ಯಾಶನಲ್ ಜಿಯಾಗ್ರಫಿಕ್ ಮ್ಯಾಗಜಿನ್’ನ ಸಂಪಾದಕಿ ಸೂಸನ್ ಗೋಲ್ಡ್‌ಬರ್ಗ್ ಮಾಡಿದ ಟ್ವೀಟ್ ಗಮನ ಸೆಳೆಯಿತು -“If you take care of the birds, you take care of most of the big problems in the world.’ ಈ ಸಾಲು ಗಳನ್ನು ಓದುತ್ತಿದ್ದಂತೆ, ಅದೇ ಮ್ಯಾಗಜಿನ್ ಹೊಸವರ್ಷದ ಮೊದಲ ಸಂಚಿಕೆಯನ್ನು ಪಕ್ಷಿಗಳಿಗಾಗಿ ಮುಡಿಪಾಗಿಟ್ಟಿದೆಯೆಂದು ತಿಳಿಯಿತು.

ಆ ಮ್ಯಾಗಜಿನ್‌ನನ್ನು ಓದುವಾಗ ಗೊತ್ತಾಗಿದ್ದೇನೆಂದರೆ, ಅಪರೂಪದ ಪಕ್ಷಿ ಸಂಕುಲವನ್ನು ಸಂರಕ್ಷಿಸಲೆಂದು ರೂಪಿಸಿದ Migratory Bird Treaty Act  ಜಾರಿಗೆ ಬಂದು ಈ ವರ್ಷ ನೂರು ತುಂಬಿತು. ಈ ನೂರು ವರ್ಷಗಳಲ್ಲಿ, ಈ ಕಾನೂನು ಜಗತ್ತಿನಾದ್ಯಂತ ಜಾರಿಗೆ ಬಂದಿದ್ದರೂ ಮುನ್ನೂರಕ್ಕೂ ಹೆಚ್ಚು ವಿವಿಧ ಪಕ್ಷಿಗಳು ಕಣ್ಮರೆಯಾಗಿದ್ದು ಹೇಗೆ ಎಂಬ ಪ್ರಶ್ನೆ ಹಾಗೇ ಉಳಿಯಿತು. ಈ ಹಿನ್ನೆಲೆಯಲ್ಲಿ ಸೂಸನ್ ಗೋಲ್ಡ್‌ಬರ್ಗ್ ಹೇಳಿದ ‘ಪಕ್ಷಿಗಳ ದೇಖರೇಖಗಳನ್ನು ಸರಿಯಾಗಿ ನೋಡಿಕೊಂಡರೆ ಜಗತ್ತಿನ ಬಹುತೇಕ ಸಮಸ್ಯೆಗಳನ್ನೂ ನಿಭಾಯಿಸಬಹುದು’ ಎಂಬ ಮಾತು ಸಾಂತ್ವನದ ಮೇಲುದನಿಯಂತೆ, ಎಚ್ಚರಿಕೆಯ ಗಂಟೆಯಂತೆ ಕೇಳಿಸುತ್ತದೆ.

ಪಕ್ಷಿಗಳನ್ನು ಬಿಟ್ಟು ಈ ಜಗತ್ತನ್ನು ಸುಂದರವಾಗಿ ಕಟ್ಟಲು ಸಾಧ್ಯವೇ ಇಲ್ಲ. ನಾವು ವಾಸಿಸುವ ಪರಿಸರ ಅಷ್ಟೊಂದು ಹಿತಕರವಾಗಿಲ್ಲ ಅಂದರೆ, ನಾವು ಪಕ್ಷಿಗಳಿಗೆ ಆದ್ಯತೆ ನೀಡಿಲ್ಲ ಎಂದೇ ಅರ್ಥ. ಮನುಷ್ಯ ಇಷ್ಟೆಲ್ಲ ಬುದ್ಧಿವಂತನಾದರೂ ಅವನಿಗೆ ಪಕ್ಷಿಗಳ ಮಹತ್ವ ಅರ್ಥವಾಗುತ್ತಿಲ್ಲ. ತಂತ್ರಜ್ಞಾನ, ಅಭಿವೃದ್ಧಿಯಲ್ಲಿ ಎಷ್ಟೇ ಪ್ರಗತಿ ಸಾಽಸಿರಬಹುದು, ಎಷ್ಟೇ ಆಧುನಿಕ ಬದುಕನ್ನು ರೂಪಿಸಿಕೊಂಡಿರಬಹುದು, ಅಲ್ಲಿ ಪಕ್ಷಿಗಳಿಗೂ ಆದ್ಯತೆ ಇಲ್ಲದಿದ್ದರೆ ಈ ಎಲ್ಲ ‘ಹೆಚ್ಚುಗಾರಿಕೆ’ಗಳಿಗೆ ಅರ್ಥವೇ ಇಲ್ಲ. ನೀವು ಹಾರ್ನ್‌ಬಿಲ್ ಪಕ್ಷಿಯನ್ನು ಎಲ್ಲಾದರೂ ಕಂಡರೆ, ತಕ್ಷಣ ಹೇಳಬಹುದು, ಆ ಪ್ರದೇಶ ಸಮೃದ್ಧ ಕಾಡುಗಳಿಂದ ಆವೃತವಾಗಿದೆ, ಆ ಕಾಡಿನಲ್ಲಿ ಹಣ್ಣು ಬಿಡುವ ಮರಗಳಿವೆ, ಆ ಕಾಡಿನಲ್ಲಿ ನೀರಿನ ಮೂಲ ಶ್ರೀಮಂತವಾಗಿದೆ, ಆ ಕಾಡಿನಲ್ಲಿ ಕಾಡು ಪ್ರಾಣಿಗಳೂ ಇವೆ, ಆ ಕಾಡಿನಲ್ಲಿ ಜೀವ ವೈವಿಧ್ಯ ಆಗಾಧವಾಗಿದೆ.

ಕಾರಣ ಇಷ್ಟೆಲ್ಲ ಗುಣಕಥನಕಗಳಿರುವ ಪ್ರದೇಶಗಳಲ್ಲೇ ಹಾರ್ನ್‌ಬಿಲ್ ಇರುವುದು. ಹಾರ್ನ್‌ಬಿಲ್ ಮಹಾ ಹೊಟ್ಟೆಬಾಕ, ಹಾಗಂತ ಹಣ್ಣುಗಳನ್ನು ಬಿಟ್ಟು ಮತ್ತೇನನ್ನೂ ತಿನ್ನುವುದಿಲ್ಲ. ಅಂದರೆ ಹಣ್ಣು ಬಿಡುವ ಕಾಡುಗಳಲ್ಲೇ ಅವು ಜೀವಿಸುತ್ತವೆ. ತಿಂದ ಹಣ್ಣಿನ ಬೀಜಗಳನ್ನು ಅಲ್ಲಿಯೇ ಎಸೆಯುವುದರಿಂದ, ಅವು ಮರವಾಗಿ ಹಣ್ಣು ಗಳನ್ನು ಬಿಡುತ್ತವೆ. ಹಾರ್ನ್‌ಬಿಲ್ ಇರುವೆಡೆ ಹಣ್ಣು ಬಿಡುವ ಅರಣ್ಯವಿದೆಯೆಂದು ಥಟ್ಟನೆ ಹೇಳಬಹುದು. ಇದೇ ರೀತಿ ಪ್ರತಿಪಕ್ಷಿಗೂ ಅದರದ್ದೇ ಆದ ವೈಶಿಷ್ಟ್ಯಗಳಿವೆ. ಕಾಗೆ ಕಂಡರೆ ಊರಿದೆಯೆಂದು ಅರ್ಥ.

ನವಿಲು ಕಂಡರೆ ಜಲಸಮೃದ್ಧಿಯಿದೆ ಎಂದರ್ಥ. ಗುಬ್ಬಿ ಇರುವೆಡ ಹತ್ತಿರದಲ್ಲೇ ಮನೆಗಳಿವೆ ಎಂದರ್ಥ. ಕೋಗಿಲೆ ಕಂಡರೆ ವಾತಾವರಣ ಆಹ್ಲಾದಕರವಾಗಿದೆ ಯೆಂದರ್ಥ. ಕೆಂಬೂತ ಕಂಡರೆ ಮಂಜಿನ ಧಾರೆಯಾಗಿದೆಯೆಂದೂ, ಕಾಜಾಣ ಕಂಡರೆ ಸುತ್ತೆಲ್ಲ ಹಸುರು ಆವರಿಸಿದೆಯೆಂದೂ, ಕೆಂಪು ಮೂತಿ ಗಿಣಿ ಹಾರಿದ್ದು ಕಂಡರೆ ಹತ್ತಿರದ ಮರಗಳಲ್ಲಿ ಹಣ್ಣುಬಿಟ್ಟಿವೆಯೆಂದೂ ಭಾವಿಸಬಹುದು. ಪಕ್ಷಿಗಳು ನಮ್ಮ ಪರಿಸರದ ಸಂಕೇತಗಳಿದ್ದಂತೆ. ಮರುಭೂಮಿಯಲ್ಲಿ ಮಾತ್ರ ಪಕ್ಷಿಗಳನ್ನು ಕಾಣಲು ಸಾಧ್ಯವಿಲ್ಲ. ಅಂದರೆ ಪಕ್ಷಿಗಳಿಲ್ಲದ ಪರಿಸರವೆಂದರೆ ಮರುಭೂಮಿಗೆ ಸಮ. ಪಕ್ಷಿಯಿದ್ದರೆ ಪರಿಸರ. ಪಕ್ಷಿಗಳೇ ಇಲ್ಲದಿದ್ದರೆ ಅದೆಂಥ ಪರಿಸರ ? ಹದಗೆಡುತ್ತಿರುವ ಪರಿಸರಕ್ಕೆ ಪಕ್ಷಿಗಳು ಮಾತ್ರ ತೋರುದೀಪಗಳಾಗಬಹುದು.

They are our last, best connec on to a natural world, that is otherwise receding ಎಂಬ ಗೋಲ್ಡ್‌ಬರ್ಗ್ ಮಾತುಗಳು ಮಾರ್ಮಿಕ. ನಾನು ಅದೇ ಮ್ಯಾಗಜಿನ್‌ನಲ್ಲಿ ಖ್ಯಾತ ಪಕ್ಷಿ ತಜ್ಞ ಜೋನಾಥನ್ ಫ್ರಾಂಜೆನ್ ಬರೆದ Why Birds Ma er ಎಂಬ ಪ್ರಬಂಧ ಓದುತ್ತಿದ್ದೆ. ಈ ಪರಿಸರ, ಜೀವ ವೈವಿಧ್ಯ ವನ್ನು ರೂಪಿಸುವಲ್ಲಿ ಪಕ್ಷಿಗಳ ಪಾತ್ರ ಅತ್ಯಂತ ಮಹತ್ವವಾದುದು. ಪಕ್ಷಿಗಳನ್ನು ಅರಿಯದೇ ಮನುಷ್ಯ ಪರಿಪೂರ್ಣ ಆಗಲಾರ. ಹಕ್ಕಿಗಳಿಲ್ಲದ ಪರಿಸರವೂ ಅಪೂರ್ಣ. ಹಕ್ಕಿಗಳೆಂದರೆ ಬರೀ ಪರಿಸರಕ್ಕೆ ಮಾತ್ರ ಸಂಬಂಧಿಸಿದ್ದು ಎಂದು ಭಾವಿಸಬೇಕಿಲ್ಲ. ಅವು ನಮ್ಮ ಮನಸ್ಸು, ಹೃದಯಕ್ಕೂ ಸೂಕ್ಷ್ಮವಾಗಿ ತಟ್ಟುವ ಸಾಮರ್ಥ್ಯ ಹೊಂದಿದವು. ಗಾಳಿಯಂತೆ ಅಗೋಚರವಾಗಿಯೂ ತನ್ನ ಇರುವಿಕೆಯನ್ನು ಸಾರುವ ಸಾಮರ್ಥ್ಯ ಹೊಂದಿರುವ ಹಕ್ಕಿಗಳು, ಪರಿಸರವನ್ನು ನಿಯಂತ್ರಿ ಸುವ ಟ್ರಾಫಿಕ್ ಪೊಲೀಸರು !

ಹಕ್ಕಿಗಳ ಜಗತ್ತು ಹೇಗಿದೆ ನೋಡಿ. ಜಗತ್ತಿನಲ್ಲಿರುವ ಎಲ್ಲ ಪಕ್ಷಿಗಳನ್ನು ನೀವು ನೋಡಿದ್ದೇ ಆದಲ್ಲಿ, ನೀವು ಇಡೀ ಜಗತ್ತನ್ನು ನೋಡಿದ್ದೀರಿ ಎಂದರ್ಥ. ಮನುಷ್ಯನಿ ಗಿಂತ ಸರ್ವಾಂತರ್ಯಾಮಿಯಾದ ಮತ್ತೊಂದು ಜೀವಿಯಿದ್ದರೆ ಅವು ಪಕ್ಷಿಗಳು. ನೆಲದ ಮೇಲೊಂದೇ ಅಲ್ಲ, ನೀರು ಹಾಗೂ ಆಕಾಶದಲ್ಲೂ ಆವರಿಸಿ ಕೊಂಡಿರು ವುದು ಅವೊಂದೇ. ಭೂಮಿಯ ಮೇಲಿನ ಅತ್ಯಂತ ಒಣ ಪ್ರದೇಶಗಳಲ್ಲೊಂದಾದ ಚಿಲಿ ದೇಶದ ಅಟಕಾಮ ಮರುಭೂಮಿಯಲ್ಲಿ ಗ್ರೇಗಲ್ ಪಕ್ಷಿ ತನ್ನ ಮರಿಗಳನ್ನು ಪೋಷಿಸಿ ಬೆಳೆಸುತ್ತದೆ, ಅಂಟಾರ್ಟಿಕಾದ ಚಳಿಯಲ್ಲಿ ಎಂಪರರ್ ಪೆಂಗ್ವಿನ್ ಗಳು ಮೊಟ್ಟೆಗೆ ಕಾವು ಕೊಟ್ಟು ಮರಿಗಳನ್ನು ಹುಟ್ಟಿಸುತ್ತವೆ.

ಬಿಜ್ಜು ಹಕ್ಕಿ (Goshawks) ಗಳು ಬರ್ಲಿನ್‌ನಲ್ಲಿ ನಟಿ ಮರ್ಲಿನ್ ಡಯಟ್ರಿಚ್‌ಳನ್ನು ಸಮಾಧಿ ಮಾಡಿದ ಜಾಗದಲ್ಲಿ ಗೂಡುಕಟ್ಟಿ ಸಂಸಾರ ಮಾಡುತ್ತವೆ. ಚುಕ್ಕಿ ಗುಬ್ಬಿಗಳು ನ್ಯೂಯಾರ್ಕ್‌ನ ಮ್ಯಾನಹಟನ್ ಟ್ರಾಫಿಕ್ ದೀಪಗಳ ಸಂದು-ಪಡಿಕಿನಲ್ಲಿ ಗೂಡುಕಟ್ಟಿ ಜೀವಿಸುತ್ತವೆ. ಕಂದು ಬಾನಾಡಿಗಳು ಸಮುದ್ರ ತೀರದ
ಪೊಟರೆಗಳಲ್ಲಿ ಬದುಕುತ್ತವೆ. ಒಂದೊಂದು ಹಕ್ಕಿಯದು, ಒಂದೊಂದು ರೀತಿಯ ಬಾಳ್ವೆ. ಮನುಷ್ಯನಂತೆ ಎಂತಹ ವಾತಾವರಣ, ಪರಿಸರದಲ್ಲೂ ಪಕ್ವವಾಗುವ ಹೊಂದಾಣಿಕೆ ಗುಣ. ಒಂಬತ್ತು ಅಡಿ ಎತ್ತರದ ಉಷ್ಟ್ರಪಕ್ಷಿ ಎಲ್ಲಿ, ಮುಷ್ಟಿಯೊಳಗೆ ಮುಡುಗುವ ಹಮ್ಮಿಂಗ್ ಬರ್ಡ್ ಎಲ್ಲಿ.

ಆಸ್ಟ್ರೇಲಿಯಾದಲ್ಲಿ ಮಾತ್ರ ಕಾಣಸಿಗುವ ರೇನ್ ಬೋ ಲೋರಿಕೀಟ್‌ನದು ಎಂಥ ಹೂವನ್ನಾದರೂ ನಾಚಿಸುವಂಥ ವರ್ಣ, ಸೌಂದರ್ಯ. ದಕ್ಷಿಣ ಏಷಿಯಾದ
ಸನ್ ಬರ್ಡ್ ಬಣ್ಣಗಳನ್ನೆಲ್ಲ ಹೊದ್ದುಕೊಂಡ ಮೋಹಕ ಚೆಲುವೆ. ಕೆಲವು ಪ್ಯಾರಕೀಟ್(ಗಿಣಿ)ಗಳು ಕಸ, ಕಡ್ಡಿ, ಕೋಲುಗಳಿಂದಲೇ ತಮ್ಮದೇ ಒಂದು ನಗರ ಕಟ್ಟಿ ಬಿಡಬಲ್ಲವು. ನೀರುಮುಳುಕ (Dipper) ಇದೆಯಲ್ಲ, ಅದಕ್ಕೆ ಜತೆಯಲ್ಲಿ ಯಾರೂ ಇರಕೂಡದು. ಅದೊಂಥರ ಜೆನ್ ಧರ್ಮಗುರುವಿನಂತೆ. ಒಂಟಿಯಾಗಿ ಹೆಜ್ಜೆ ಹಾಕುತ್ತದೆ. ಕಡಲಕೋಳಿಗಳು ತನ್ನ ಸಂಗಾತಿಯ ಹೆಗಲ ಮೇಲೆ ಕೂತು ಐನೂರು ಮೈಲಿ ಪ್ರಯಾಣ ಮಾಡಬಲ್ಲುದು.

ನ್ಯೂಜಿಲ್ಯಾಂಡ್‌ನ ಫ್ಯಾನ್‌ಟೇಲ್ ಪಕ್ಷಿ ಒಂದು ಸಲ ಪರಿಚಯವಾದರೆ, ಯಾವತ್ತೂ ನಿಮ್ಮನ್ನು ಮರೆಯಲಾರದು. ರೋಡ್ ರನ್ನರ್‌ಗಳು ಬುಡಬುಡಿಕೆ (Ra lesnakes) ಗಳನ್ನು ಉಪಾಯವಾಗಿ ಸಾಯಿಸಬಲ್ಲವು. ಥಿಕ್-ಬಿಲ್ಲ್‌ಡ್ ಮರ್ರೆಗಳು ಏಳು ನೂರು ಅಡಿ ಆಳದವರೆಗೆ ಡ್ರೈವ್ ಮಾಡಬಲ್ಲವು. ಕಂದು ಗಿಡುಗ ಗಂಟೆಗೆ 300 ಕಿಮಿ ವೇಗದಲ್ಲಿ ಅಧೋಮುಖವಾಗಿ ಹಾರಬಲ್ಲವು.

ಪುಟಾಣಿ ಹಾಡು ಹಕ್ಕಿ ಇಡೀ ಬದುಕನ್ನು ಅರ್ಧ ಎಕರೆ ಜಾಗದೊಳಗೆ ಕಳೆಯಬಲ್ಲುದು. ಕಡುನೀಲಿ ಕೋಗಿಲೆ (Cerulean Warbler) ಆರು ತಿಂಗಳು ಹಾರುತ್ತಾ ಪೆರು ತಲುಪಿ, ಅಲ್ಲಿ ಕೆಲ ತಿಂಗಳು ಕಳೆದು, ಪುನಃ ಆರು ತಿಂಗಳು ಹಾರುತ್ತಾ, ನ್ಯೂಜೆರ್ಸಿಯಲ್ಲಿನ ಮರವೊಂದರ ತನ್ನ ಗೂಡನ್ನು ಸೇರಬಲ್ಲದು. ಹಕ್ಕಿಗಳನ್ನು ನಾಯಿಯಂತೆ, ಬೆಕ್ಕಿನಂತೆ ಮುದ್ದಾಡಲು ಆಗುವುದಿಲ್ಲ. ಆದರೂ ಅಪ್ಯಾಯ, ಆಪ್ತ. ಮನುಷ್ಯನಂತೆ ಅವು ಬೆಚ್ಚನೆ ಮನೆ (ಗೂಡು) ಕಟ್ಟುತ್ತವೆ. ಮನುಷ್ಯನಿಂದಲೂ ಈ ಗೂಡುಗಳನ್ನು ನಿರ್ಮಿಸಲು ಸಾಧ್ಯವಿಲ್ಲ. ಗೀಜಗ ಹಕ್ಕಿ ಎರಡು ಮೂರು ಅಂತಸ್ತು ಗಳ ಗೂಡು ಕಟ್ಟುತ್ತದೆ. ಗೀಜಗನ ಗೂಡನ್ನು ಯಾವ ತಂತ್ರಜ್ಞಾನ ಬಳಸಿಯೂ ಮನುಷ್ಯನಿಂದ ತದ್ರೂಪಿ ಗೂಡು ಕಟ್ಟುವುದು ಅಸಾಧ್ಯ.

ಕೆಲವು ಪಕ್ಷಿಗಳು ಚಳಿಗಾಲದಲ್ಲಿ ಗೂಡಿನಿಂದ ಹೊರಗೇ ಬರದೇ ಮೂರ್ನಾಲ್ಕು ತಿಂಗಳು ವಿಶ್ರಾಂತಿ ಪಡೆಯುತ್ತವೆ. ಅಲ್ಲಿ ತನಕ ಬೇಕಾದ ಕಾಳು-ಕಡಿಗಳನ್ನು
ಸಂಗ್ರಹಿಸಿಟ್ಟುಕೊಳ್ಳುತ್ತವೆ. ಕೊಕಟೂನ್ ಎಂಬ ಪಕ್ಷಿ ಚಿಂಪಾಂಜಿಯ ಥರವೇ ಯೋಚಿಸುತ್ತದೆ. ಹಾರುವುದು, ಬೇಕಂತಲೇ ಬಿದ್ದಂತೆ ನಟಿಸಿ, ಪುನಃ ಮೇಲೆ ಹಾರುವ ಚೇಷ್ಟೆ ಮಾಡುತ್ತದೆ. ಚಿಕಾಡಿಸ್ ಎಂಬ ಪಕ್ಷಿ ವಿಚಿತ್ರವಾಗಿ ಕೂಗಿ ತನ್ನ ಸಂಗಾತಿ ಯನ್ನು ಎಚ್ಚರಿಸುತ್ತದೆ. ಅಲ್ಲದೇ ಬೇರೆ ಜಾತಿಯ ಪಕ್ಷಿಗಳಿಗೆ ಇನ್ನೊಂದು ರೀತಿ ಯಲ್ಲಿ ಕೂಗಿ ಬೆರಗುಗೊಳಿಸುತ್ತದೆ. ಹಮ್ಮಿಂಗ್‌ಬರ್ಡ್ ಹಾರುತ್ತಲೇ ಗಾಳಿಯಲ್ಲಿ ನಿಶ್ಚಲವಾಗಿರಬಲ್ಲವು. ಕಡಲಕೋಳಿಗಳು ಹತ್ತುವರ್ಷಗಳ ಕಾಲ ಸಮುದ್ರ ಸುತ್ತು ಹಾಕುತ್ತಾ ಇರಬಲ್ಲವು.

ಕೊಂಚೆಹಕ್ಕಿ (Bar -tailed godwit) ಬಗ್ಗೆ ಕೇಳಿರಬಹುದು, ಇದು ಅಲಸ್ಕಾದಿಂದ ನ್ಯೂಜಿಲೆಂಡ್‌ವರೆಗೆ, ಸುಮಾರು ಏಳು ಕಾಲು ಸಾವಿರ ಮೈಲು ದೂರವನ್ನು ಒಂಬತ್ತು ದಿನಗಳಲ್ಲಿ ಕ್ರಮಿಸಬಲ್ಲವು. ಕೆಂಪು ಕತ್ತಿನ ಕಡಲಹಕ್ಕಿ ಪ್ರತಿವರ್ಷವೂ ಟಿಯೆರಾ ಡೆಲ್ ಫ್ಯೂಗೋ ಹಾಗೂ ಕೆನಡಾದ ಆರ್ಕಟಿಕ್ ನಡುವೆ ರೌಂಡ್‌ಟ್ರಿಪ್ ಮಾಡುತ್ತವೆ. ಮಂಡೆಕಾಗೆ (Raven) ಮನುಷ್ಯನ ದನಿಯನ್ನು ಪಕ್ಕಾ ಅನುಕರಿಸಬಲ್ಲವು. ಕೆಲವು ಬಾತುಕೋಳಿಗಳು ಒಂದು ಕಣ್ಣನ್ನು ತೆರೆದೇ ಗಾಢನಿದ್ದೆ ಮಾಡ ಬಲ್ಲವು. ಕೆಲವು ಗಿಣಿಗಳು ನೂರಾರು ಪದಗಳನ್ನು ಕಲಿತು, ವ್ಯವಹರಿಸಬಲ್ಲವು. ಮರಕುಟಿಗ ಹಕ್ಕಿಗೆ ಸಿಂಧೂ ವೃಕ್ಷದ ಹಣ್ಣುಗಳೆಂದರೆ ಪಂಚಪ್ರಾಣ, ದೊಡ್ಡ ಮರ ಗಳಲ್ಲಿ ರಂಧ್ರ ಕೊರೆದು ಸುಮಾರು ೫೦ಸಾವಿರ ಹಣ್ಣುಗಳನ್ನು ‘ಅಕ್ರಮ ದಾಸ್ತಾನು’ ಮಾಡಿಡುತ್ತವೆ.

ಗಿಳಿಯನ್ನು ಹೋಲುವ (Budgerigars) ಪಕ್ಷಿಯೊಂದಿದೆ. ಒಂದು ಆಕಳಿಸಿದರೆ ಉಳಿದೆಲ್ಲವೂ ಆಕಳಿಸುತ್ತವೆ. ಇವುಗಳಿಗೆ ಆಕಳಿಕೆ ಮನುಷ್ಯರಂತೆ ಸಾಂಕ್ರಾಮಿಕ. ಗೂಬೆಗಳಿವೆಯಲ್ಲ, ಅವು ತಮ್ಮ ತಲೆಯನ್ನು 360 ಡಿಗ್ರಿ ತಿರುಗಿಸಬಲ್ಲವು. ಆದರೆ ಕಣ್ಣುಗಳನ್ನು ತಿರುಗಿಸಲಾರವು. ಪಕ್ಷಿಗಳಿಗೂ ಮನಸ್ಸಿದೆ. ಅಂತಃಕರಣವಿದೆ. ಮಾನವಂತ ಹೃದಯವಿದೆ. ಕಾಗೆಗೆ ಪೆಟ್ಟಾದರೆ ಇಡೀ ಬಳಗಕ್ಕೆ ಗೊತ್ತಾಗುವವರೆಗೆ, ಕೂಗಿ ಕರೆಯದೇ ಸುಮ್ಮನಾಗುವುದಿಲ್ಲ. ಸೆಂಟ್ರಲ್ ಮಿಷಿಗನ್‌ನ ಅತ್ಯಂತ ಅಪರೂಪದ ಕಿಟ್ ಲ್ಯಾಂಡ್ ವಾರ್‌ಬ್ಲೆರ್ ಹಕ್ಕಿಯ ಮರಿಗೆ ಏನಾದರೂ ಆದರೆ, ತಾಯಿ ಹಕ್ಕಿ ಆಹಾರ ಸೇವಿಸದೇ ಸತು ಹೋಗುತ್ತದೆ. ವೆಸ್ಟರ್ನ್ ರೊಸೆಲ್ಲಾ ಎಂಬ ಹಕ್ಕಿ ತನ್ನ ಸಂಗಾತಿಗಾಗಿ ಎಂಥ ತ್ಯಾಗಕ್ಕೂ ರೆಡಿ.

ಮಂಗಟ್ಟೆ (ಹಾರ್ನ್‌ಬಿಲ್)ಹಕ್ಕಿಯೂ ತನ್ನ ಸಂಗಾತಿಗಾಗಿ ಯಾವ ಬಲಿದಾನಕ್ಕೂ ಸಿದ್ಧ. ಒಮ್ಮೆ ಜೀವನದಲ್ಲಿ ಒಂದು ಸಂಗಾತಿ ಯನ್ನು ಆರಿಸಿಕೊಂಡರೆ, ಕೊನೆಯ ತನಕವೂ ಅದರ ಜತೆಗೆ ಕಳೆಯುತ್ತದೆ. ಕೆಲವು ಸಲ ಮರದ ಆಹಾರ ಅರಸಲು ಹೋದ ಗಂಡು ವಾಪಸ್ ಬರದಿದ್ದರೆ, ಸತ್ತು ಹೋದರೆ, ಪೊಟರೆಯಲ್ಲಿದ್ದ ಹೆಣ್ಣು ಮಂಗಟ್ಟೆ ಅಲ್ಲಿಯೇ ಸತ್ತು ಹೋಗುತ್ತದೆ. ಪ್ರಾಣ ಹೋದರೂ ಸರಿಯೇ, ಮತ್ತೊಂದು ಸಂಗಾತಿ ಜತೆಗೆ ಸೇರುವುದಿಲ್ಲ. ಇಂಥ ಸಂಬಂಧ, ಪ್ರೇಮ, ಏಕಪತಿ-ಪತ್ನಿ ವೃತವನ್ನು ಮನುಷ್ಯರಲ್ಲೂ ಕಾಣಲು ಸಾಧ್ಯವಿಲ್ಲ. ಇವೆಲ್ಲವೂ ಮಾನವೀಯ ಗುಣಗಳನ್ನು ಉದ್ದೀಪನಗೊಳಿಸುವ, ಹೊಳಪನ್ನು ಹೆಚ್ಚಿಸುವ ಗುಣಗಳು.

ಪಕ್ಷಿಗಳು ನಮ್ಮ ಪರಿಸರವೊಂದನ್ನೇ ಅಲ್ಲ, ಸಂಸ್ಕೃತಿಯನ್ನೂ ಮೆರೆಸುವ ಜೀವಿಗಳು. ನಮ್ಮ ಬದುಕಿನ ಒಟ್ಟಂದವನ್ನು ಇಮ್ಮಡಿಗೊಳಿಸುವ, ಮನುಷ್ಯನಿಗೆ ತನ್ನ ಬದುಕಿನ ಸೊಗಸುಗಾರಿಕೆಯನ್ನು ಹೆಚ್ಚಿಸುವ ಜೀವಿಗಳು. ಅವುಗಳನ್ನು ಒಳಗೊಂಡು, ಆವರಿಸಿಕೊಂಡು ಬದುಕುವುದರಲ್ಲಿ ನಮ್ಮ ಶ್ರೇಷ್ಠತೆಯಿದೆ. ಅವುಗಳ ರಕ್ಷಣೆ, ಸಂರಕ್ಷಣೆ ನಮ್ಮ ಆದ್ಯತೆಯಾಗಬೇಕು, ಆಗ್ರಹವಾಗಬೇಕು. ಅದಕ್ಕಾಗಿ ನಾವು ತ್ಯಾಗ ಮಾಡಬೇಕಿಲ್ಲ. ಆದರೆ ಅವುಗಳ ತಂಟೆಗೆ ಹೋಗದಿದ್ದರೆ ಸಾಕು. ಗೂಡಿಗೆ ಕೈ ಹಾಕದಿದ್ದರೆ ಸಾಕು. ನಮ್ಮ ಬದುಕಿನ ಆದ್ಯತೆಗಳನ್ನು ರೂಪಿಸಿಕೊಳ್ಳುವಾಗ, ಅವುಗಳಿಗಾಗಿ ಏನನ್ನೂ ತೆಗೆದಿಡಬೇಕಿಲ್ಲ. ಆದರೆ ಕಿತ್ತುಕೊಳ್ಳದಿದ್ದರೆ ಸಾಕು. ನಮ್ಮ ಬದುಕಿನಲ್ಲಿ ಅವೂ ಇರಲಿ. ಎಷ್ಟೆಂದರೂ ನಾವು ಖುದ್ದು ಹಾರಲಾರದ ಹೆಳವರು !