Friday, 13th December 2024

ನೀರು ಉಳಿಸಲು ಇವರು ಮನೆಮನೆ ನಲ್ಲಿ ರಿಪೇರಿ ಮಾಡ್ತಾರೆ!

ಒಂದರ್ಥದಲ್ಲಿ ಜೀವಂತ ದಂತಕಥೆ ಎನಿಸಿಕೊಂಡಿರುವ ಅಬಿದ್ ಸುರತಿ, ಕಥೆ, ಕಾವ್ಯ, ಕಾದಂಬರಿಗಳ ಮಧ್ಯೆಯೇ ಕಳೆದು ಹೋದವರಲ್ಲ. ಅವರು ಕಳೆದ ನಲವತ್ತು ವರ್ಷಗಳಿಂದಲೂ ಹಿಂದಿ ಹಾಗೂ ಗುಜರಾತಿ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಾರೆ. ವ್ಯಂಗ್ಯಚಿತ್ರ ರಚಿಸುತ್ತಾರೆ. ಪೇಂಟಿಂಗ್ ಮಾಡುತ್ತಾರೆ. ಪರಿಸರ ಸಂಬಂಧಿ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.

ಅಬಿದ್ ಸುರತಿ ಎಂಬ ಹೆಸರನ್ನು ನೀವೆಲ್ಲ ಕೇಳಿರಬಹುದು. ಭಾರತ ಕಂಡ ಹೆಸರಾಂತ ಲೇಖಕರಲ್ಲಿ ಅಬಿದ್ ಸುರತಿ ಕೂಡ ಒಬ್ಬರು. ಹಿಂದಿ ಹಾಗೂ ಗುಜರಾತಿ ಭಾಷೆಯಲ್ಲಿ ಸಣ್ಣ ಕಥೆಗಳು, ಕಾದಂಬರಿಗಳು, ನಾಟಕಗಳು, ಏಕಾಂಕಗಳನ್ನು ಬರೆದಿರುವುದು ಅಬಿದ್ ಸುರತಿಯವರ ಹೆಚ್ಚುಗಾರಿಕೆ. ಅವರ ಕೃತಿಗಳು ಹತ್ತಕ್ಕೂ ಹೆಚ್ಚು ಭಾಷೆಗೆ ಅನುವಾದವಾಗಿವೆ. ಸಾಹಿತ್ಯ ಕ್ಷೇತ್ರದಲ್ಲಿನ ಶ್ರೇಷ್ಠ ಸಾಧನೆಯನ್ನು ಪರಿಗಣಿಸಿ,
ಅವರಿಗೆ ರಾಷ್ಟ್ರೀಯ ಪುರಸ್ಕಾರ ನೀಡಲಾಗಿದೆ. ಜತೆಗೆ, ಹಿಂದಿ ಸಾಹಿತ್ಯ ಸಂಸ್ಥಾ ಪ್ರಶಸ್ತಿ, ಗುಜರಾತ್ ಸರಕಾರ ನೀಡುವ ಗುಜರಾತ್ ಗೌರವ್ ಪ್ರಶಸ್ತಿ ಕೂಡ ಅಬಿದ್ ಸುರತಿಯವರ ಪಾಲಾಗಿದೆ. ಇವತ್ತು ಹಿಂದಿ ಅಥವಾ ಗುಜರಾತಿ ಭಾಷೆಯಲ್ಲಿ ಬರೆಯುವ ಪ್ರತಿಯೊಬ್ಬರೂ, ತಮ್ಮ ಬರಹಗಳನ್ನು ಅಬಿದ್ ಗಮನಿಸಲಿ ಎಂದು ಬಯಸುತ್ತಾರೆ.

ಒಂದರ್ಥದಲ್ಲಿ ಜೀವಂತ ದಂತಕಥೆ ಎನಿಸಿಕೊಂಡಿರುವ ಅಬಿದ್ ಸುರತಿ, ಕಥೆ, ಕಾವ್ಯ, ಕಾದಂಬರಿಗಳ ಮಧ್ಯೆಯೇ ಕಳೆದು ಹೋದವರಲ್ಲ. ಅವರು ಕಳೆದ ನಲವತ್ತು ವರ್ಷಗಳಿಂದಲೂ ಹಿಂದಿ ಹಾಗೂ ಗುಜರಾತಿ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಾರೆ. ವ್ಯಂಗ್ಯಚಿತ್ರ ರಚಿಸುತ್ತಾರೆ. ಪೇಂಟಿಂಗ್ ಮಾಡುತ್ತಾರೆ. ಪರಿಸರ ಸಂಬಂಧಿ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ – ಆಡು ಮುಟ್ಟದ ಸೊಪ್ಪಿಲ್ಲ ಎಂಬ ಮಾತಿದೆಯಲ್ಲ, ಆ ವರ್ಗಕ್ಕೆ ಸೇರಿದವರು ಅಬಿದ್ ಸುರತಿ. ಅವರ ಪ್ರತಿಯೊಂದು ಮಾತು, ವರ್ತನೆ ಮತ್ತು ಕೆಲಸದ ಹಿಂದೆ ಜನಪರ ಕಾಳಜಿ ಇದ್ದೇ ಇರುತ್ತದೆ. ಇಂಥ ಹಿನ್ನೆಲೆಯ ಅಬಿದ್ ಸುರತಿ ಅವರಿಗೆ ಕೆಲವು ವರ್ಷಗಳ ಹಿಂದೆ ರಾಷ್ಟ್ರಪತಿ ಕಚೇರಿಯಿಂದ ಒಂದು ಪತ್ರ ಬಂತು. ಸಾಹಿತ್ಯ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಪರಿಗಣಿಸಿ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ. ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ, ನೀವು ದಯವಿಟ್ಟು ಪ್ರಶಸ್ತಿ ಸ್ವೀಕರಿಸಲು ರಾಜಧಾನಿ ದೆಹಲಿಗೆ ಬರಬೇಕು ಎಂಬುದು ಪತ್ರದ ಸಾರಾಂಶ. ಬೇರೆ ಯಾರೇ ಆಗಿದ್ದರೂ, ಈ ಪತ್ರ ಕಂಡಾಕ್ಷಣ ಕುಣಿದಾಡುತ್ತಾ ಒಪ್ಪಿಗೆ ಪತ್ರ ಬರೆದು ಬಿಡುತ್ತಿದ್ದರೇನೋ. ಆದರೆ ಅಬಿದ್ ಸುರತಿ ಹಾಗೆ ಮಾಡಲಿಲ್ಲ.

ಪತ್ರ ಬಂದಿರುವುದು ರಾಷ್ಟ್ರಪತಿಗಳ ಕಾರ‍್ಯಾಲಯದಿಂದ ಎಂದು ಗೊತ್ತಿದ್ದರೂ ತಕ್ಷಣವೇ ಹೀಗೊಂದು ಉತ್ತರ ಬರೆದರು, ‘ನಾನೊಂದು ಹೊಸ ಕಾದಂಬರಿ ರಚನೆಗೆ ಸಿದ್ಧತೆ ನಡೆಸುತ್ತಿದ್ದೇನೆ. ದೆಹಲಿಗೆ ಬಂದು ಹೋಗುವ ಉತ್ಸಾಹ ಮತ್ತು ಸಮಯ ಎರಡೂ ನನಗಿಲ್ಲ. ನಿಮ್ಮ ಆಹ್ವಾನವನ್ನು ತಿರಸ್ಕರಿಸುತ್ತಿರುವುದಕ್ಕೆ ಕ್ಷಮೆಯಿರಲಿ… ಸ್ವಾರಸ್ಯದ ಸಂಗತಿಯೊಂದಿದೆ ಕೇಳಿ, ದೇಶದ ಪ್ರಥಮ ಪ್ರಜೆ ಅನ್ನಿಸಿಕೊಂಡಿರುವ ರಾಷ್ಟ್ರಪತಿಯೇ ಕರೆದರೂ, ಸಾರಿ, ನನಗೆ ಟೈಂ ಇಲ್ಲ ಎಂದಿದ್ದ ಸುರತಿ, ಕಳೆದ ಏಳು ವರ್ಷಗಳಿಂದಲೂ ನಲ್ಲಿ ರಿಪೇರಿ ಮಾಡುವ ಉಪಕರಣಗಳನ್ನು ಹಿಡಿದುಕೊಂಡು ಪ್ರತಿ ಭಾನುವಾರವು ಮುಂಬಯಿಯ ಬಡಾವಣೆಗಳನ್ನು ಸುತ್ತುತ್ತಾರೆ. ತಮಗೆ ಎದುರಾದ ನಾಗರಿಕರನ್ನು ನಿಲ್ಲಿಸಿ ಕೇಳುತ್ತಾರೆ – ‘ನಿಮ್ಮ ಮನೆ ಅಥವಾ ಏರಿಯಾದಲ್ಲಿ ನಲ್ಲಿಗಳನ್ನು ರಿಪೇರಿ ಮಾಡಬೇಕಿದೆಯಾ? ಹಾಗೇನಾದ್ರೂ ಇದ್ರೆ ತಕ್ಷಣವೇ ಹೇಳಿ, ನಾನು ರಿಪೇರಿ ಮಾಡಿಕೊಡ್ತೀನಿ. ಈ ಕೆಲಸಕ್ಕೆ ನಯಾ ಪೈಸೆಯ ಫೀ ಇಲ್ಲ. ಎಲ್ಲವನ್ನೂ ಉಚಿತವಾಗಿ ಮಾಡಿ ಕೊಡ್ತೇನೆ… ಕಥೆ, ಕಾದಂಬರಿ ಹಾಗೂ ನಾಟಕಗಳಲ್ಲಿ ಅದ್ಭುತ ರಮ್ಯ ಪಾತ್ರಗಳನ್ನು ಸೃಷ್ಟಿಸುವ, ಅವುಗಳಿಂದ ನಮ್ಮ ಮನಸ್ಸಿನಲ್ಲಿರುವ ಮಾತುಗಳನ್ನೇ ಹೇಳಿಸುವ ಕಾದಂಬರಿಕಾರ, ಹೀಗೆ ಉಚಿತವಾಗಿ ನಲ್ಲಿ ರಿಪೇರಿ ಮಾಡುವಂಥ ಕೆಲಸಕ್ಕೆ ಮುಂದಾಗಿರುವುದಾದರೂ ಏಕೆ? ಇಂಥದೊಂದು ಸೇವೆಗೆ ಮುಂದಾಗುವಂತೆ ಸುರತಿಯವರನ್ನು ಪ್ರೇರೇಪಿಸಿದ ಸಂದರ್ಭವಾದರೂ ಯಾವುದು ಎಂದು ಪ್ರಶ್ನಿಸಿದರೆ ಅವರು ಉತ್ತರಿಸುವುದು ಹೀಗೆ – ಕೆಲವು ವರ್ಷಗಳ ಹಿಂದೆ ವಿಶ್ವಸಂಸ್ಥೆಯ ಮುಖ್ಯಸ್ಥರಾದ ಬುಟ್ರೋಸ್ ಘಾಲಿ ಅವರ ಸಂದರ್ಶನವೊಂದು ಪ್ರಕಟವಾಗಿತ್ತು.

ಘಾಲಿಯವರು ತುಂಬ ಸ್ಪಷ್ಟವಾಗಿ ಹೇಳಿದರು – ೨೦೨೫ರ ವೇಳೆಗೆ ಪ್ರಪಂಚದ ೪೦ಕ್ಕೂ ಹೆಚ್ಚು ರಾಷ್ಟ್ರಗಳು ಕುಡಿಯುವ ನೀರಿನ ತೊಂದರೆಯಿಂದ ಪರದಾಡುವುದು ಗ್ಯಾರಂಟಿ. ನೀರಿನ ಮಹತ್ವ ನಮ್ಮ ಜನರಿಗೆ
ಗೊತ್ತೇ ಇಲ್ಲ. ಕಣ್ಣೆದುರೇ ವ್ಯರ್ಥವಾಗಿ ನೀರು ಹರಿದು ಹೋಗುತ್ತಿದ್ದರೂ ಅದನ್ನು ಉಳಿಸುವ ಸಣ್ಣ ಪ್ರಯತ್ನವನ್ನೂ ಯಾರೂ ಮಾಡುತ್ತಿಲ್ಲ… ಅವರ ಮಾತುಗಳನ್ನು ಕೇಳುತ್ತಿದ್ದಂತೆಯೇ ನನಗೆ ಬಾಲ್ಯದ ಬದುಕು ನೆನಪಾಯಿತು. ಆಗ ಒಂದು ಕೊಡ ನೀರಿಗೂ ವಿಪರೀತ ಕಷ್ಟ ಪಡಬೇಕಿತ್ತು. ಮೈಲುಗಟ್ಟಲೆ ದೂರದಿಂದ ನೀರನ್ನು ಹೊತ್ತು ತರಬೇಕಾಗಿತ್ತು. ಎಷ್ಟೋ ಬಾರಿ, ನೀರಿಗೆಂದು ಮರಳಲ್ಲಿ ಗುಂಡಿ ತೋಡುತ್ತಿದ್ದೆವು. ಆದರೆ ನೀರೇ ಬರುತ್ತಿರಲಿಲ್ಲ. ಅಂಥ ಸಂದರ್ಭಗಳಲ್ಲಿ ಒಂದು ಕೊಡ ನೀರು ಸಂಗ್ರಹಿಸುವ ವೇಳೆಗೆ ತಲೆ ಕೆಟ್ಟು ಹೋಗುತ್ತಿತ್ತು. ೨೦೦೭ರ ಸಂದರ್ಭದಲ್ಲಿ ಗೆಳೆಯನ ಮನೆಯಲ್ಲಿ ಹರಟುತ್ತಾ ಕೂತಿದ್ದರು ಸುರತಿ. ಮನೆಯ ಎದುರಿನ ನಲ್ಲಿಯ ಕ್ಯಾಪ್ ಸಡಿಲಾಗಿದ್ದ ಕಾರಣದಿಂದ ಸುಮ್ಮನೆ ನೀರು ಹರಿಯುತ್ತಲೇ ಇತ್ತು. ‘ಅಯ್ಯೋ ತುಂಬಾ ಹೊತ್ತಿಂದ ನೀರು ಹರಿದು ಹೋಗ್ತಾ ಇದೆಯಲ್ಲ?’ ಎಂದು ಉದ್ಗರಿಸುತ್ತಾ ಗೆಳೆಯರ ಗಮನಕ್ಕೆ ತಂದರು ಸುರತಿ. ಆದರೆ ಯಾರೊಬ್ಬರೂ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಜತೆಗೆ ಒಂದೇ ಒಂದು ನಲ್ಲಿ ರಿಪೇರಿ ಮಾಡಲು ಅವತ್ತಿನ ಸಂದರ್ಭದಲ್ಲಿ ಯಾರೂ ಬರುತ್ತಿರಲಿಲ್ಲ.

ನಲ್ಲಿ ರಿಪೇರಿ ಮಾಡುವವರನ್ನು ಕರೆ ತಂದರೆ ಅವರಿಗೆ ಕಾಫಿ, ತಿಂಡಿ, ಬೀಡಿಯ ಖರ್ಚಿನ ಜತೆಗೆ ಇಡೀ ದಿನದ ಕೂಲಿ ಕೊಟ್ಟು ಕಳಿಸಬೇಕಿತ್ತು. ಇದೆಲ್ಲಾ ದುಬಾರಿ ವ್ಯವಹಾರ.  ಬೇಕಿದ್ದರೆ ಜಲ ಮಂಡಳಿಯವರು ಈ ಬಗ್ಗೆ ತಲೆಕೆಡಿಸಿಕೊಳ್ಳಲಿ ಎಂದು ಎಲ್ಲರೂ ಹೇಳಿಬಿಟ್ಟರು. ಕೆಲ ದಿನಗಳ ನಂತರ, ಪತ್ರಿಕೆಯಲ್ಲಿ ವರದಿಯೊಂದು ಪ್ರಕಟವಾಯಿತು. ನಾಗರಿಕರು ಹಾಗೂ ಜಲಮಂಡಳಿಯವರ ನಿರ್ಲಕ್ಷ್ಯದಿಂದ ಪ್ರತಿದಿನವೂ ಹೇಗೆಲ್ಲಾ ನೀರು
ಪೋಲಾಗುತ್ತಿದೆ, ಕೇವಲ ಒಂದು ಗಂಟೆಯ ಅವಧಿಗೆ ಒಂದು ನಲ್ಲಿಯ ಕ್ಯಾಪ್ ಸಡಿಲಾದರೆ ಎಷ್ಟು ಸಾವಿರ ಲೀಟರ್ ನೀರು, ಅನ್ಯಾಯವಾಗಿ ಪೋಲಾಗುತ್ತದೆ ಎಂಬುದನ್ನು ಆ ವರದಿಯಲ್ಲಿ ಅಂಕಿ ಅಂಶಗಳೊಂದಿಗೆ ವಿವರಿಸಲಾಗಿತ್ತು. ಸುರತಿ, ಅವತ್ತೇ ನಿರ್ಧರಿಸಿದರು. ‘ಇಂದಿನಿಂದ ನೀರು ಪೋಲಾಗುವುದನ್ನು ತಡೆಯುವುದೇ ನನ್ನ ಗುರಿ, ಮನೆಮನೆಗೆ, ಬಡಾವಣೆಯಿಂದ ಬಡಾವಣೆಗೆ ಅಲೆದಾಡಿದರೂ ಸೈ, ನಾನು ಆದಷ್ಟೂ ನೀರು ಪೋಲಾಗದಂತೆ ತಡೆಯಲೇಬೇಕು.’

ಮನೆಮನೆಗೆ ಹೋಗಿ ನಲ್ಲಿ ರಿಪೇರಿ ಮಾಡುವುದು ಖಂಡಿತ ಸುಲಭವಲ್ಲ. ಮೊದಲಿಗೆ ಆ ಏರಿಯಾದ ಜನರ ವಿಶ್ವಾಸ ಸಂಪಾದಿಸಬೇಕು. ನಂತರ ಅವರಿಗೆ ನಲ್ಲಿ ರಿಪೇರಿಯವರು ಬರುತ್ತಿದ್ದಾರೆ ಎಂದು ಗೊತ್ತಾಗಬೇಕು. ಅದನ್ನು ಪ್ರಚಾರ ಮಾಡಲು ಜನ ಬೇಕು. ಪಾಂಪ್ಲೆಟ್ ಮೂಲಕ ಜಾಹೀರಾತು ನೀಡಲು ಹಣ ಬೇಕು. ಇದಕ್ಕೆಲ್ಲಾ ಸ್ವಲ್ಪ ಫಂಡ್ ಜೊತೆಗಿಟ್ಟುಕೊಂಡರೆ ಒಳ್ಳೆಯದು ಎಂದು ಸುರತಿ ಅಂದುಕೊಂಡರು. ಆದರೆ, ಅವತ್ತಿಗೆ ಅವರಲ್ಲಿ ಹೆಚ್ಚು ಹಣವಿರಲಿಲ್ಲ. ಮುಂದೇನು ಎಂದು ಅವರು ಯೋಚಿಸುತ್ತಿದ್ದಾಗ ಆಕಸ್ಮಿಕವೊಂದು ನಡೆದು ಹೋಯಿತು. ಸಾಹಿತ್ಯ ಕ್ಷೇತ್ರಕ್ಕೆ ಸುರತಿಯವರ ಕೊಡುಗೆಯನ್ನು ಪರಿಗಣಿಸಿ, ಹಿಂದಿ ಸಾಹಿತ್ಯ ಸಂಸ್ಥಾನವು ಒಂದು ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಿತು. ಈ ಹಣವನ್ನೇ ಮೂಲ ಬಂಡವಾಳ ಮಾಡಿಕೊಂಡ ಅಬಿದ್ ಸುರತಿ, ಅವತ್ತೇ Drop Deadಹೆಸರಿನ ಎನ್‌ಜಿಒ ಆರಂಭಿಸಿದರು. ಮಾರುಕಟ್ಟೆಗೆ ಹೋಗಿ ನಲ್ಲಿಗೆ ಹಾಕುವ ವಿವಿಧ ಅಳತೆಯ ನಟ್ಟು ಹಾಗೂ ಬೋಲ್ಟುಗಳನ್ನು ನೂರರ ಸಂಖ್ಯೆಯಲ್ಲಿ ಖರೀದಿಸಿದರು. ತಮ್ಮೊಂದಿಗೆ ಕೆಲಸ ಮಾಡಲು ರಿಯಾಜ್ ಎಂಬ ಪಳಗಿದ ನಲ್ಲಿ ರಿಪೇರಿ ಕೆಲಸಗಾರನನ್ನೂ, ತೇಜಾಲ್ ಎಂಬ ಸಮಾಜ ಸೇವಾ ಕಾರ‍್ಯಕರ್ತೆಯನ್ನೂ ಸೇರಿಸಿಕೊಂಡರು. ಆಮೇಲೆ ಏನಾಯಿತು ಗೊತ್ತಾ?

ತಮ್ಮ ತಂಡದ ಸದಸ್ಯರೊಂದಿಗೆ ಪ್ರತಿ ಭಾನುವಾರವೂ ಅಬಿದ್ ಸುರತಿ ಮುಂಬಯಿಯ ಬಡಾವಣೆಗಳಿಗೆ ಭೇಟಿ ಕೊಡಲಾರಂಭಿಸಿದರು. ಅಷ್ಟಕ್ಕೂ ಅಂದಿನ ದಿನವೇ, ತೇಜಾಲ್ ತಮ್ಮ ತಂಡದ ಕೆಲಸ ಮತ್ತು ಉದ್ದೇಶ ವಿವರಿಸುವ ಪಾಂಪ್ಲೆಟ್ ಹಾಗೂ ಪೋಸ್ಟರ್‌ಗಳನ್ನು ಅಂಟಿಸಿರುತ್ತಾರೆ. ಅದನ್ನು ಗಮನಿಸಿದ ಜನ, ಫ್ರೀಯಾಗಿ ಕೆಲಸ ಮಾಡಿಕೊಡ್ತಾರೆ ಎಂಬ ಆಸೆಯಿಂದ ನಲ್ಲಿಗಳ ಕ್ಯಾಪ್‌ಗಳನ್ನು ಟೈಟ್ ಮಾಡಿಸಿಕೊಂಡಿದ್ದಾರೆ. ನಂಬಿ ಸ್ವಾಮಿ ಹೀಗೆ, ೨೦೦೭ ರಲ್ಲಿ ಅಬಿದ್ ಸುರತಿ ಮತ್ತು ಸಂಗಡಿಗರು ೧೫೫೩ ಮನೆಗಳಿಗೆ ಭೇಟಿ ನೀಡಿದರು. ೪೦೦ಕ್ಕೂ ಹೆಚ್ಚು ನಲ್ಲಿಗಳ ರಿಪೇರಿ ಮಾಡಿದರು. ಆ ಮೂಲಕ, ಸಾವಿರಾರು ಲೀಟರ್ ನೀರು ಪೋಲಾಗುವುದನ್ನು
ತಪ್ಪಿಸಿದರು. ೨೦೦೮ ರಲ್ಲಿ ಜಲ ಸಂರಕ್ಷಣೆಯ ವಿಷಯವಾಗಿ ಒಂದು ಸಿನಿಮಾ ನಿರ್ಮಾಣದ ಉತ್ಸಾಹದಲ್ಲಿದ್ದ ಹೆಸರಾಂತ ನಿರ್ದೇಶಕ ಶೇಖರ್ ಕಪೂರ್‌ಗೆ ಅಬಿದ್ ಸುರತಿ ಮತ್ತು ತಂಡದವರ ಪ್ರತಿ-ಲಾಪೇಕ್ಷೆಯಿಲ್ಲದ ಕೆಲಸದ ಬಗ್ಗೆ ತಿಳಿಯಿತು. ಆತ ತಕ್ಷಣವೇ ತನ್ನ ವೆಬ್‌ಸೈಟ್‌ನಲ್ಲಿ ಹೀಗೆ ಬರೆದರು – ‘ಪ್ರಿಯ ಅಬಿದ್ ಸುರತಿಯವರೇ, ನೀವು ಆರಂಭಿಸಿರುವ ಅಪರೂಪದ ಕೆಲಸಕ್ಕೆ ಅಭಿನಂದನೆಗಳು, ಸೇವೆಯೇ ಜೀವನ ಎಂದು ಭಾವಿಸುವ ನಿಮ್ಮಂಥ ಹಲವರು ಈ ಲೋಕದಲ್ಲಿದ್ದಾರೆ ಎಂಬುದು ನಮ್ಮ ಹೆಮ್ಮೆ. ನಿಮ್ಮ ಕೆಲಸ ಈ ಲೋಕದ ಎಲ್ಲರಿಗೂ ಸೂರ್ತಿ ನೀಡುವಂಥದು… ಮುಂದೆ ಸುರತಿಯವರ Drop Dead ತಂಡ ಮತ್ತು ಅದರ ಉದ್ದೇಶದ ಬಗ್ಗೆ ಸ್ಥಳೀಯ ಪತ್ರಿಕೆಗಳು ವಿಶೇಷ ವರದಿಗಳನ್ನು ಪ್ರಕಟಿಸಿದವು.

ಪರಿಣಾಮವಾಗಿ, ಮಹಾರಾಷ್ಟ್ರದ ಮೂಲೆಮೂಲೆಗಳಿಂದಲೂ ಸುರತಿಯವರನ್ನು ಅಭಿನಂದಿಸುವ ಇ-ಮೇಲ್‌ಗಳು ಸಾವಿರದ ಸಂಖ್ಯೆಯಲ್ಲಿ ಬಂದವು. ಹೀಗೆ ಮೇಲ್ ಕಳಿಸಿದವರ ಪಟ್ಟಿಯಲ್ಲಿ ಅನಾಮಿಕರಿದ್ದರು, ಅಧಿಕಾರಿಗಳಿದ್ದರು, ಸೆಲೆಬ್ರಿಟಿಗಳೂ ಇದ್ದರು. ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಬಾಲಿವುಡ್‌ನ ಬಾದ್‌ಶಾ ಎಂದೇ ಹೆಸರಾಗಿರುವ ಶಾರೂಖ್ ಖಾನ್ ಕೂಡ ಇದ್ದ. ಪತ್ರಿಕಾ ವರದಿಯಲ್ಲಿ “City of Angels’  ಎಂಬ ಹೆಡ್ಡಿಂಗ್‌ನೊಂದಿಗೆ ಸುರತಿ ಮತ್ತು ಸಂಗಡಿಗರ ಕೆಲಸವನ್ನು ಹೊಗಳಲಾಗಿತ್ತು. ತನ್ನ ಪ್ರತಿಕ್ರಿಯೆಯಲ್ಲಿ ಶಾರೂಖ್ ಹೀಗೆ ಬರೆದಿದ್ದ – ಸರ್‌ಜಿ, ಚಿಕ್ಕಂದಿನಲ್ಲಿ ನೀವು ಸೃಷ್ಟಿಸಿದ ಕಾರ್ಟೂನ್‌ಗಳನ್ನೂ, ಕಥೆಗಳನ್ನೂ ಓದುತ್ತಾ ಬೆರಗಾದವನು ನಾನು. ಈಗ ಬೇರೊಂದು ಬಗೆಯ ಮಹಾನ್ ಕೆಲಸದಿಂದ ನನ್ನ ಮನಸ್ಸು ಗೆದ್ದಿದ್ದೀರಿ, ಈ ಲೇಖನ ಓದಿದ ನಂತರ, ದೇವತೆಗಳು ನಮ್ಮ ಸುತ್ತಮುತ್ತಲಲ್ಲೇ ಇದ್ದಾರೆ ಎಂಬುದು ಅರ್ಥವಾಗಿದೆ.
ನಿಮಗೆ ನಮಸ್ಕಾರ, ಅಭಿನಂದನೆ…

ಜಲಸಂರಕ್ಷಣೆಗೆ ಅಬಿದ್ ಸುರತಿಯವರು ನಡೆಸುತ್ತಿರುವ ಹೋರಾಟವನ್ನು ಗಮನಿಸಿದ ಸಿಎನ್‌ಎನ್, ಐಬಿಎನ್ ಚಾನೆಲ್, ಮೊದಲು ಈ ಬಗ್ಗೆ ವಿಶೇಷ ಕಾರ‍್ಯಕ್ರಮ ಪ್ರಸಾರ ಮಾಡಿತು. ಕೆಲ ದಿನಗಳ ನಂತರ “Be
the Changer’ ಎಂಬ ಪ್ರಶಸ್ತಿಗೆ ಸುರತಿಯವರನ್ನೇ ಆಯ್ಕೆ ಮಾಡಿತು. ಇದೇ ಸಂದರ್ಭದಲ್ಲಿ ಬರ್ಲಿನ್‌ನ ಚಾನೆಲ್ ಕೂಡ ವಿಶೇಷ ಕಾರ‍್ಯಕ್ರಮವನ್ನು ಪ್ರಸಾರ ಮಾಡಿತು. ಪರಿಣಾಮವಾಗಿ ಸುರತಿಯವರ ‘ಸೇವೆ’
ಪ್ರಪಂಚದ ಎಲ್ಲರನ್ನೂ ತಲುಪಿತು. ಅನ್ಯಾಯವಾಗಿ ಚರಂಡಿ ಪಾಲಾಗುತ್ತಿರುವ ನೀರನ್ನು ಉಳಿಸಲು ಕಳೆದ ಏಳು ವರ್ಷಗಳ ಅವಧಿಯಲ್ಲಿ ಸುರತಿಯವರು ಅದೆಷ್ಟು ಬಡಾವಣೆ ಸುತ್ತಿದರು? ಎಷ್ಟು ಮನೆಗಳ ಬಾಗಿಲು ಬಡಿದರು, ಅದೆಷ್ಟು ನಲ್ಲಿಗಳ ನಟ್ಟು, ಬೋಲ್ಟ್‌ಗಳನ್ನು ಸರಿಪಡಿಸಿದರು. ನಯಾ ಪೈಸೆ ಆದಾಯವಿಲ್ಲದ ಈ ಕೆಲಸಕ್ಕಾಗಿ ಅದೆಷ್ಟು ಜತೆ ಚಪ್ಪಲಿಗಳನ್ನು ಸವೆಸಿದರು. ಈ ಪ್ರಶ್ನೆಗಳಿಗೆ ಖಚಿತ ಉತ್ತರ ಯಾರಿಗೂ ಗೊತ್ತಿಲ್ಲ. ಆದರೆ, ತನ್ನ ಏಕಾಂಗಿ ಹೋರಾಟದಿಂದ ಸುರತಿಯವರು ಈ ೭ ವರ್ಷಗಳಲ್ಲಿ ಕಡಿಮೆಯೆಂದರೂ ೫ ಲಕ್ಷ ಲೀಟರ್ ನೀರು ಉಳಿಸಿದ್ದಾರೆ ಎಂದು ಅವರ ಕೆಲಸವನ್ನು ಹತ್ತಿರದಿಂದ ಕಂಡವರೆಲ್ಲಾ ಹೇಳುತ್ತಾರೆ.

ಬೇಸಿಗೆ ಎಂಬುದು ಒಂದೊಂದೇ ಹೆಜ್ಜೆ ಇಡುತ್ತಾ ಬರುತ್ತಿರುವ ಸಂದರ್ಭದಲ್ಲಿ ದೇಶದ ಹಲವು ಮಹಾನಗರಗಳಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಅದನ್ನು ಗಮನಿಸಿರುವ ಸುರತಿ ಹೇಳುತ್ತಾರೆ – ‘ನೀರೆಂಬುದು
ಕೇವಲ ಹನಿಯಲ್ಲ. ಅದು ಜೀವಜಲ, ಅಮೃತ. ಅದನ್ನು ಕಾಪಾಡುವುದು ಎಲ್ಲರ ಕರ್ತವ್ಯವಾಗಬೇಕು. ಜಲಸಂರಕ್ಷಣೆಯ ಕೆಲಸಕ್ಕೆ ಹೆಚ್ಚಿನ ಹಣದ ಅವಶ್ಯಕತೆಯಿಲ್ಲ. ನಾಯಕತ್ವದ ಹಂಗೂ ಬೇಕಿಲ್ಲ. ಈ ಕೆಲಸವನ್ನು ಭವಿಷ್ಯದ ಬಗ್ಗೆ ಕಾಳಜಿ ಹೊಂದಿರುವ ಎಲ್ಲರೂ ತಾವಿರುವ ಜಾಗದಲ್ಲೇ ಆರಂಭಿಸಬಹುದು. ಇವತ್ತು ನಾವು ನೀರನ್ನು ಉಳಿಸಿದರೆ ಮಾತ್ರ ನಾಳೆ ನಮ್ಮ ಬದುಕು ಸುಂದರವಾಗುತ್ತದೆ… ದೂರದ ಮುಂಬಯಿಯಲ್ಲಿ ನಿಂತು ಸುರತಿಯವರು ಹೇಳಿರುವ ಮಾತುಗಳು ಈಗಾಗಲೇ ನೀರಿನ ಸಮಸ್ಯೆಗೆ ತುತ್ತಾಗಿರುವ ಕರ್ನಾಟಕದ ಎಲ್ಲರಿಗೂ ಹಿರಿಯನೊಬ್ಬ ಹೇಳುವ ಎಚ್ಚರಿಕೆಯ ಮಾತುಗಳಂತೆ ಕೇಳಿಸುತ್ತಿದೆಯಲ್ಲವೆ? ಮಿತ್ರ ಶ್ರೀನಿವಾಸ ರೈತ ಅವರು ಅಬಿದ್ ಸುರತಿ ಬಗ್ಗೆ ಕಳಿಸಿದ ಲೇಖನವೊಂದು ಈ ಸಂದರ್ಭದಲ್ಲಿ ನಮ್ಮೆಲ್ಲರಲ್ಲಿ ನೀರಿನ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಲಿ.