Friday, 13th December 2024

ಟೋಬಿ ಕುರಿತ ಮಾತುಕತೆ

ತುಂಟರಗಾಳಿ

ಸಿನಿಗನ್ನಡ

ಇತ್ತೀಚೆಗೆ ಹಾಸ್ಟೆಲ್ ಹುಡುಗರು ಚಿತ್ರದ ಜೊತೆಯಲ್ಲಿ ಆಚಾರ್ ಅಂಡ್ ಕೋ ಅನ್ನೋ ಸಿನಿಮಾ ಕೂಡಾ ರಿಲೀಸ್ ಆಗಿತ್ತು. ಸಿಂದು ಶ್ರೀನಿವಾಸ್ ಮೂರ್ತಿ ಅವರು ನಟಿಸಿ ನಿರ್ದೇಶಿಸಿರೋ ಸಿನಿಮಾ ಇದು. ಅವರ ಜೊತೆಯಲ್ಲಿ, ಸುಧಾ ಬೆಳವಾಡಿ, ವಂಶಿರ್ಧ, ಹರ್ಷಿಲ, ಅನಿರುದ್ಧ, ಶಿಲ್ಪಾ ರುದ್ರಪ್ಪ ಮುಂತಾದವರು ಅಭಿನಯಿಸಿದ್ದಾರೆ. ೬೦ರ ದಶಕದ ಕಥೆ ಇರೋ ಸಿನಿಮಾ ಅಂತಲೇ ಈ ಚಿತ್ರ ಸದ್ದು ಮಾಡಿತ್ತು. ಮಕ್ಕಳಿರಲವ್ವ ಮನೆ ತುಂಬ ಎನ್ನುವಂತೆ ಹತ್ತು ಮಕ್ಕಳನ್ನು ಹೆತ್ತ ತಾಯಿಯ ಮನೆಯಲ್ಲಿ ತಂದೆ ಇಲ್ಲವಾದಾಗ ಹೆಣ್ಣುಮಕ್ಕಳ ಮದುವೆ ಅನ್ನೋದು ಮೊದಲ ಮತ್ತು ಅತಿ ದೊಡ್ಡ ಸಮಸ್ಯೆ ಆಗುತ್ತದೆ. ಅದೇ ಕಥಾ ಹಂದರ ಈ ಸಿನಿಮಾದ್ದು.

ಬಹಳ ಹಿಂದೆ ಮಿಥಿಲೆಯ ಸೀತೆಯರು ಅನ್ನೋ ಸಿನಿಮಾ ಬಂದಿತ್ತು. ಅದರಲ್ಲೂ ಮೂವರು ಹೆಣ್ಣುಮಕ್ಕಳ ಕಥೆ ಇತ್ತು. ಆದರೆ ಅದು ಕೊಂಚ ಗಂಭೀರ ಮತ್ತು ಎಮೋಷನಲ್ ಸಿನಿಮಾ. ಆಚಾರ್ ಅಂಡ್ ಕೋ ಆ ಸಿನಿಮಾ  ದಂತೆ ಗಂಭೀರ ಎನಿಸದಿದ್ದರೂ ಕೊಂಚ ಕಾಮಿಡಿ ಟಚ್ ಕೊಟ್ಟು ವಾಸ್ತವದ ಕಥೆ ಹೇಳಿದ್ದಾರೆ ಅನ್ನಿಸೋದು, ಯೂಟ್ಯೂಬ್‌ನಲ್ಲಿ ಈ ಚಿತ್ರದ ಟ್ರೈಲರ್ ಮತ್ತು ಹಾಡುಗಳನ್ನು ನೋಡಿದಾಗ. ಅಂದಹಾಗೆ ಮಾವಿನ ಹಣ್ಣಿನ ಬಗ್ಗೆ ಇರೋ ಹಾಡು ಕೂಡಾ ಇಂಟರೆಸ್ಟಿಂಗ್ ಆಗಿದೆ.

ಈ ಚಿತ್ರ ಪ್ರೇಕ್ಷಕರಿಗೆ ರುಚಿಸುತ್ತದೋ ಇಲ್ಲವೋ ಅನ್ನೋ ವಿಷಯದಲ್ಲೂ ಮಾವು ಉಪ್ಪಿನಕಾಯಿಯೂ ಆಗಬಹುದು, ಸ್ವೀಕರಣೆಯೂ ಆಗಬಹುದು. ಅದು ಪ್ರೇಕ್ಷಕರಿಗೆ ಬಿಟ್ಟಿದ್ದು. ಸದ್ಯಕ್ಕೆ ಚಿತ್ರ ಇನ್ನೂ ಚಿತ್ರಮಂದಿರ ಗಳಲ್ಲಿ ಇದೆ. ಅಂದಹಾಗೆ, ಈ ಹಾಡಿನಲ್ಲಿ ಉಪ್ಪಿನಕಾಯಿಯ ಪ್ರಸ್ತಾಪ ಬಂದಿದ್ದು ನೋಡಿ ಅನ್ನಿಸಿದ್ದು, ಆಚಾರ್ ಅಂಡ್ ಕೋ ಸಿನಿಮಾ ಹಿಟ್ ಆಗಿ ಹಿಂದಿಗೆ ರಿಮೇಕ್ ಆದರೆ ಅದಕ್ಕೆಅಲ್ಲಿ ಅಚಾರ್ ಅಂಡ್ ಕೋ’ ಅಂತ ಹೆಸರಿಡಬಹುದು. ಹಿಂದಿಯಲ್ಲಿ ಅರ್ಚಾ ಅಂದ್ರೆ ಉಪ್ಪಿನಕಾಯಿ.

ಲೂಸ್ ಟಾಕ್

ರಾಜ್ ಬಿ.ಶೆಟ್ಟಿ

ಏನ್ ಶೆಟ್ರೇ ಟೋಬಿ ಅಂತ ಕುರಿ ತೋರಿಸಿ ಸಿನಿಮಾ ಮಾಡ್ತಾ ಇದ್ದೀರಲ್ಲ?
– ದಯಾನಂದ್ ಅವರು ಈ ಸಬ್ಜೆಕ್ಟ್ ಹೇಳಿದಾಗ, ಅದನ್ನ ಕುರಿ’ತು ಚರ್ಚೆ ಮಾಡಿದ್ವಿ. ಇಷ್ಟ ಆಯ್ತು ಅದಕ್ಕೆ ಸಿನಿಮಾ ಮಾಡಿದ್ವಿ.

ಓಹೋ, ಅದ್ಸರಿ, ನಿಮ್ಮ ತಲೆ ಮೇಲೆ ಕೂದಲು ಬಂದುಬಿಟ್ಟಿದ್ದಿಯಲ್ಲ, ಏನ್ ಸಮಾಚಾರ?
– ಮೊನ್ನೆ ಕಾಂತಾರ ಆಂಟಿ ಸಿಕ್ಕಿದ್ರು, ಕಾಡಲ್ಲಿ ಸೊಪ್ಪು ಎಲ್ಲಿ ಸಿಕ್ತದೆ ಅಂತ ವಿಚಾರಿಸಿದೆ. ಅಷ್ಟೇ..

ಓಹೋ, ಗುಡ್ ಲುಕ್ ಅಂಡ, ಗುಡ್ ಲಕ್, ಸರಿ, ಈ ಟಗರು, ಟಗರು ಪಲ್ಯ, ಟೋಬಿ ಅಂತ ಸಿನಿಮಾರಂಗದಲ್ಲಿ ಕುರಿ ಸಬ್ಜೆಕ್ಟ್ ಗಳು ಜಾಸ್ತಿ ಆಗ್ತಾ ಇವೆ ಅಲ್ವಾ?
– ಹಂಗಂತ, ಕುರಿ ಸಿನಿಮಾ ಮಾಡಿದ್ರೆ ನಿರ್ಮಾಪಕರನ್ನ, ಪ್ರೇಕ್ಷಕರನ್ನ ಸುಲಭವಾಗಿ ಬಕ್ರಾ ಮಾಡಬಹುದು ಅಂತೆ ಅಪಪ್ರಚಾರ ಮಾಡ್ಬೇಡಿ ಆಮೇಲೆ.

ಅಯ್ಯೋ, ಇಲ್ಲರೀ. ಸರಿ, ಕುರಿ ಬಗ್ಗೆ ಸಿನಿಮಾ ಮಾಡ್ತೀವಿ ಅಂದಾಗ ಗಾಂಧಿನಗರ ಏನಂತು?
– ನೀವು ಮಂಗ’ಳೂರು ಜನ ಕುರಿ’ ಬಗ್ಗೆ ಯಾಕೆ ಸಿನಿಮಾ ಮಾಡ್ತೀರಾ ಅಂತ ಕಾಲೆಳೆದ್ರು

ಕೊನೆಗೆ, ನಿಮ್ಮ ಟೋಬಿಯ ಟೋ. ಬಿ. ಅಂದ್ರೆ ಟೋಟಲ್ ಬ್ಯುಸಿನೆಸ್ ಎಷ್ಟಾಗಬಹುದು ಅಂತ ನಿಮ್ಮ ಅಂದಾಜು?
– ನಮ್ಮ ಪ್ರಚಾರದ ಎಂಜಿನ್ ಓಡ್ತಾ ಇರೋ ಸ್ಪೀಡ್ ನೋಡಿದ್ರೆ ೧೦೦ ಸಿಸಿ ಅಂದ್ರೆ, ೧೦೦ ಕ್ರೋರ‍್ ಕ್ಲಬ್ ಸೇರಬಹುದು ಅನ್ಸುತ್ತೆ.

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್
ಖೇಮು ಮತ್ತವನ ಸಂಸಾರ ಒಂದು ನಗರದಿಂದ ದೂರದ ಹಳ್ಳಿಯಲ್ಲಿ ವಾಸವಾಗಿತ್ತು. ಆ ಹಳ್ಳಿಯ ಪಕ್ಕದ ಅಂಟಿಕೊಂಡಂತೆ ಒಂದು ದಟ್ಟವಾದ ಕಾಡು ಇತ್ತು. ಅಲ್ಲಿ ಖೇಮುಗೆ ಅನೇಕ ಗೆಳೆಯರೂ ಇದ್ದರು. ಒಂದು ದಿನ ಖೇಮು ಮನೆಯಿಂದ ಹೊರಟ. ಹಳ್ಳಿ ದಾರಿಯಲ್ಲಿ ಹೋಗುವಾಗ ಅಲ್ಲಿ ಅವನ ಸ್ನೇಹಿತ ರಾಮು, ಬೀಡಿ ಸೇದ್ತಾ ಕೂತಿದ್ದ. ಅವನನ್ನು ನೋಡಿದ ಖೇಮು, ಲೋ ರಾಮು, ಬೀಡಿ ಸೇದೋದು ಕೆಟ್ಟದ್ದು ಕಣೋ, ಅದನ್ನೆ ಬಿಟ್ಟು ನನ್ನ ಜೊತೆ ಬಾ. ಕಾಡಿನ ಒಳಗೆ ನಿನಗೆ ಒಂದು ಸರ್ಪ್ರೈಸ್ ಇದೆ. ತೋರಿಸ್ತೀನಿ ಅಂದ. ಸರಿ ರಾಮು ಖೇಮು ಜತೆ ಹೊರಟ.

ಇಬ್ಬರೂ ಹೋಗ್ತಾ ಇದ್ರು. ಅಲ್ಲಿ ಇನ್ನೊಬ್ಬ ಸ್ನೇಹಿತ ಸೋಮು ಹೆಂಡ ಕುಡೀತಾ ಕೂತಿದ್ದ. ಅವನನ್ನು ನೋಡಿದ ಖೇಮು ಲೋ ಸೋಮು, ಹೆಂಡ ಕುಡಿಯೋದು ಕೆಟ್ಟದ್ದು ಕಣೋ, ಅದನ್ನೆ ಬಿಟ್ಟು ನನ್ನ ಜೊತೆ ಬಾ. ಕಾಡಿನ ಒಳಗೆ ನಿನಗೆ ಒಂದು ಸರ್ಪ್ರೈಸ್ ಇದೆ. ತೋರಿಸ್ತೀನಿ ಅಂದ. ಸರಿ ಸೋಮು ಕೂಡ ಅವರಿಬ್ಬರ ಜೊತೆ ಹೊರಟ. ಮುಮದೆ ಹಗುವಾಗ ಅಲ್ಲಿ ಇನ್ನಷ್ಟು ಸ್ನೇಹಿತರು ಇಸ್ಪೀಟ್ ಆಡ್ತಾ ಕೂತಿದ್ರು. ಅವರನ್ನು ನೋಡಿದ ಖೇಮು ಲೇ, ಇಸ್ಪೀಟ್ ಆಡೋದು ಕೆಟ್ಟದ್ದು ಕಣ್ರೋ, ಅದನ್ನೆ ಬಿಟ್ಟು ನನ್ನ ಜೊತೆ ಬನ್ನಿ. ಕಾಡಿನ ಒಳಗೆ ನಿಮಗೆ ಒಂದು ಸರ್ಪ್ರೈಸ್ ಇದೆ. ತೋರಿಸ್ತೀನಿ ಅಂದ. ಸರಿ ಗುಂಪುಗೂಡಿಕೊಂಡು ಎಲ್ಲರೂ ಖೇಮುವಿನ ಜೊತೆ ಹೊರಟರು.

ಮುಂದೆ ದಾರಿಯಲ್ಲಿ ಅವರಿಗೆ ಇನ್ನೊಬ್ಬ ಗೆಳೆಯ ಮಾರ ಸಿಕ್ಕಿದ. ಅವನು ಹೊಗೆಸೊಪ್ಪು ಅಗಿಯುತ್ತಾ ಕೂತಿದ್ದ. ಅವನನ್ನು ನೋಡಿದ ಖೇಮು ಲೋ ಮಾರ,
ಹೊಗೆ ಸೊಪ್ಪು ತಿನ್ನೋದು ಕೆಟ್ಟದ್ದು ಕಣೋ, ಅದನ್ನೆ ಬಿಟ್ಟು ನನ್ನ ಜೊತೆ ಬಾ. ಕಾಡಿನ ಒಳಗೆ ನಿನಗೆ ಒಂದು ಸರ್ಪ್ರೈಸ್ ಇದೆ. ತೋರಿಸ್ತೀನಿ ಅಂದ. ಅದಕ್ಕೆ ಮಾರ
ಇದ್ದಕ್ಕಿದ್ದಂತೆ ಖೇಮು ಕಡೆ ನುಗ್ಗಿ ಬಂದು ಅವನನ್ನ ಹಿಗ್ಗಾ ಮುಗ್ಗಾ ಹೊಡೆಯೋಕೆ ಶುರು ಮಾಡಿದ. ಎಲ್ಲರೂ ಸೇರಿ ಅವನನ್ನು ಬಿಡಿಸಿ, ಅ ಮಾರ, ಪಾಪ ಅವನು
ಒಳ್ಳೇದು ಹೇಳಿದ್ರೆ ನೀನು ಹಿಂಗಾ ಹೊಡೆಯೋದು ಅಂತ ಕೇಳಿದಾಗ ಮಾರ ಹೇಳಿದ, ನಿಮಗ್ ಗೊತ್ತಿಲ್ಲ, ಈ ಬಡ್ಡೀಮಗ ಖೇಮು, ಹೋದ್ ವಾರ ಕೂಡ
ಹಿಂಗೇ ಗಾಂಜಾ ಹೊಡ್ಕೊಂಡು ಬಂದು, ಏನೋ ತೋರಿಸ್ತೀನಿ ಅಂತ ಇಡೀ ಕಾಡೆ ಸುತ್ತಿಸಿದ್ದ.

ಲೈನ್ ಮ್ಯಾನ್ 

ಮಳೆಗಾಲದಲ್ಲಿ ಚಿತ್ರರಂಗದ ರಿಯಾಕ್ಷನ್
ಯೋಗರಾಜ್ ಭಟ್
ಭೂಮಿನೇ ಬಚ್ಚಲ್ ಮನೆ ನಾವೇನ್ ಮಾಡಣ, ಎರೂ ಬೆಡ್ ಶೀಟ್ ಹೊದ್ಕಂಡ್ ಸ್ನಾನ ಮಾಡಣ

ರವಿಚಂದ್ರನ್
ಏ, ನಡೀರೋ, ಮಂಜಿನ ಹನಿ’ಸಾಂಗ್ ಶೂಟಿಂಗ್ ಮಾಡಣ

ಗಣೇಶ್
ಎಷ್ಟೇ ಮಳೆ ಬಂದ್ರೂ ಮತ್ತೊಂದು ಮುಂಗಾರು ಮಳೆ ಬರೋಕಾಗಲ್ಲ.

ಆರ್ಟಿಫಿಶಿಯಲ್ ರೈನ್ ಮಶೀನ್ ಇಟ್ಟುಕೊಂಡವನು
ಥತ್, ಈ ದರಿದ್ರ ಮಳೆ ಯಾವಾಗ್ ನಿಲ್ಲುತ್ತಪ್ಪಾ

ಅನಾಮಿಕ ನಿರ್ದೇಶಕ
ಮುಹೂರ್ತದ ಟೈಮ್ ಕ್ಲೈಮ್ಯಾಕ್ಸ ಸೀನ್ ಬಂತಲ್ಲಪ್ಪ

ರಾಜಮೌಳಿ
ನಡೀರೋ ಶೂಟಿಂಗ್ ಮಾಡಣ, ಗ್ರಾಫಿಕ್ಸ್ ನಲ್ಲಿ ಮಳೆನಾ ಎಡಿಟ್ ಮಾಡಿ ತೆಗೆದಾಕಿಸ್ತೀನಿ

ಸೀರಿಯಲ್ ನೋರು
ನಮಗೇನು ಪ್ರಾಬ್ಲಮ್ ಇಲ್ಲ, ನಾವ್ ಬರೀ ಇಂರ್ಡೋ ಶೂಟಿಂಗ್ ಮಾಡೋದು

ಮಲೆನಾಡಿನ ಜನ
ನಾವು ಮಳೆಯ ಜೀವನ ಮಾಡತೀವಿ, ಇವ್ರಿಗ್ ಒಂದ್ ಸಿನಿಮಾ ಮಾಡೋಕಾಗಲ್ವಾ?

ಮಳೆ ನೋಡಿ ಐಟಿ ಉದ್ಯೋಗಿಗಳು ಏನ್ ಹೇಳ್ತಾರೆ? 
ಕ್ಲೌಡ್ ಸ್ಟೋರೇಜ’ ಜಾಸ್ತಿ ಆಗಿದೆ

ಮಳೆಯಅನಾನುಕೂಲ
ರಸ್ತೆ ರಿಪೇರಿ ಕೆಲಸನಿಂತ ನೀರಾಗುತ್ತೆ’

ಕನ್ನಡ ಚಿತ್ರರಂಗದಲ್ಲಿ ಶತ್ರುಗಳೂ ಜೈಕಾರ ಹಾಕೋ ಒಬ್ಬನೇ ನಟ
ಜೈಜಗದೀಶ್

ಗರ್ಲ್ ಫ್ರೆಂಡ್ ನ ದಿನಾ ಪಿಕ್ ಅಪ್ ಡ್ರಾಪ್ ಮಾಡೋ ಹುಡುಗನದ್ದು
ಹಕ್ಕಿಪಿಕ್ಕಿ ಜನಾಂಗ