ವಿದ್ಯಮಾನ
ಆದರ್ಶ್ ಶೆಟ್ಟಿ ಉಪ್ಪಿನಂಗಡಿ
ದೇಶದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗಾಗಿಯೇ ಸರಕಾರಗಳು ಸಾಕಷ್ಟು ಅನುದಾನವನ್ನು ಮೀಸಲಿಡುತ್ತವೆ. ನಮ್ಮ ರಾಜ್ಯ ಅಥವಾ ದೇಶದಲ್ಲಿ ಸಾಕಷ್ಟು ಪ್ರವಾಸೋದ್ಯಮ ಪ್ರದೇಶವನ್ನಾಗಿ ಮಾರ್ಪಾಡು ಮಾಡಬಹುದಾದ ಜಾಗಗಳಿವೆ. ಅಲ್ಲಿಗೆ ಸೂಕ್ತ ಮೂಲಭೂತ ಸೌಕರ್ಯಗಳ ಕೊರತೆಯಿಂದ, ಸರಿಯಾದ ವ್ಯವಸ್ಥೆಗಳಿಲ್ಲದೆ ಅಭಿವೃದ್ಧಿ ಮರೀಚಿಕೆಯಾಗಿ ನನೆಗುದಿಗೆ ಬಿದ್ದ ಅದೆಷ್ಟೋ ಕ್ಷೇತ್ರಗಳು ನಮ್ಮ ಊರಿನಲ್ಲಿವೆ.
ಒಂದು ಊರಿನ ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಸರಕಾರದ ಬೊಕ್ಕಸಕ್ಕೆ ಆದಾಯ, ಆ ಊರಿನ ಅಭಿವೃದ್ಧಿ ಜೊತೆಗೆ ಆ ಊರು ಆರ್ಥಿಕವಾಗಿ ಬಲಗೊಳ್ಳುವುದರ ಜೊತೆಗೆ ಸಾಕಷ್ಟು ಜನರಿಗೆ ಉದ್ಯೋಗ, ವ್ಯಾಪಾರದ ಮೂಲಕ ಜೀವನ ಕಟ್ಟಿಕೊಳ್ಳಲು ಒಂದು ಒಳ್ಳೆಯ ದಾರಿ ಸಿಕ್ಕಂತಾಗುತ್ತದೆ. ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಸುಂದರವಾದ ರಮಣೀಯ ತಾಣಗಳ ಮೂಲಕ ಆ ಊರು ಕುಗ್ರಾಮವಾಗಿದ್ದರೂ ಪ್ರೇಕ್ಷ
ಣೀಯ ಜಾಗಗಳ ಮೂಲಕ ಹತ್ತೂರಿಗೆ ಪ್ರಸಿದ್ದಿಯನ್ನು ಪಡೆದಿರುತ್ತವೆ.
ಪ್ರವಾಸೋದ್ಯಮ ಬೆಳೆದರೆ ಆ ದೇಶದ ಅಭಿವೃದ್ಧಿಗೆ ಕೂಡ ಅಡಿಪಾಯ ಹೊಂದಿದಂತೆ. ನಮ್ಮ ಊರಿನಲ್ಲಿ ಪ್ರವಾಸಿ ತಾಣಗಳು ಬೆಳೆದರೆ ಅಥವಾ ತಾಣ ಗಳಿದ್ದರೆ ಅದನ್ನು ಪೋಷಿಸುವ ಮತ್ತು ಅದರ ಪಾವಿತ್ರ್ಯತೆಯನ್ನು ಕಾಪಾಡುವ ಹೊಣೆಗಾರಿಕೆ ಪ್ರeವಂತ ನಾಗರಿಕರ ಮೇಲಿರುತ್ತದೆ. ಪ್ರಕೃತಿಯ ಸೊಬಗು ಎಂದರೆ ಅದೊಂದು ದೇವರ ಸೃಷ್ಟಿ. ಶುದ್ದ ಗಾಳಿ, ಶುದ್ಧ ವಾತಾವರಣ, ಶುದ್ಧ ನೀರು ಇವೆಲ್ಲವೂ ಪ್ರಕೃತಿ ದತ್ತವಾಗಿ ನಮಗೆ ದೊರಕಿರುವ ವರ ಎಂದರೆ ತಪ್ಪಾಗಲಾರದು.
ಒಂದು ಐತಿಹಾಸಿಕ ಪ್ರವಾಸಿ ಸ್ಥಳಗಳಿಗೆ ಅನ್ಯರಾಜ್ಯ, ಜಿಲ್ಲೆ, ಊರುಗಳಿಂದ ಪ್ರವಾಸಿಗರು ಅಥವಾ ಜನಸಾಮಾನ್ಯರು ಭೇಟಿ ನೀಡುವ ಸಂದರ್ಭ ಅದೇ ಊರಿನ ಕೆಲ ಪುಂಡ ಗುಂಪುಗಳು, ಅಮಾಯಕ ಜನರ ಮೇಲೆ ತೋರುವ ದೌರ್ಜನ್ಯ, ವಸೂಲು ಬಾಜಿತನ, ಹೆಣ್ಣು ಮಕ್ಕಳ ಮೇಲೆ ಶೋಷಣೆ, ಸಾರ್ವಜನಿಕ
ಶಾಂತಿ ಭಂಗ, ಚುಡಾವಣೆಯಂತಹ ಘಟನೆಗಳು ಸಾಕಷ್ಟು ಕಂಡು ಬರುತ್ತವೆ. ಮಂಗಳೂರಿನಂದು ತಣ್ಣೀರು ಬಾವಿ ಎಂಬ ಬೀಚ್ ಪ್ರದೇಶವಿದೆ. ಇಲ್ಲಿಗೆ ಸಾಕಷ್ಟು ನವವಿವಾಹಿತರು, ಪ್ರೇಮಿಗಳು ಅಥವಾ ದೂರದ ಊರಿನಿಂದ ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ.
ಈ ಪರಿಸರದಲ್ಲಿ ಕೂಡ ಒಂದಷ್ಟು ಡ್ರಗ್, ಗಾಂಜಾ, ಅಮಲು ಪದಾರ್ಥ ವ್ಯಸನದ ಗುಂಪು ಅಮಾಯಕ ಅಪರಿಚಿತ ಪ್ರವಾಸಿಗರ ದರೋಡೆ, ದೌರ್ಜನ್ಯ, ಪ್ರೇಮಿಗಳು, ನವಜೋಡಿಗಳನ್ನು ಬೆದರಿಸಿ ಲೈಂಗಿಕ ಶೋಷಣೆ ನಡೆಸಿದ ಪ್ರಕರಣಗಳು ಈ ಹಿಂದೆ ಬೆಳಕಿಗೆ ಬಂದಿದ್ದವು. ಇಂತಹ ಘಟನೆಗಳಿಂದ ಮರ್ಯಾದೆ ಮತ್ತು ಘನತೆಗೆ ಅಂಜಿ ಪ್ರವಾಸಿಗರು ದೂರು ನೀಡಲು ಹಿಂದೇಟು ಹಾಕುವ ಕಾರಣಕ್ಕೆ ಸಾಕಷ್ಟು ಪ್ರಕರಣಗಳು ಮುಚ್ಚಿ ಹೋಗಿವೆ. ಕೆಲ ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ಹೊರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿರುವ ನವದಂಪತಿಗಳನ್ನು ಕೂಡ ಈ ಗ್ಯಾಂಗ್ ದರೋಡೆ ನಡೆಸಿ, ಅನುಚಿತವಾಗಿ ವರ್ತಿಸಿರುವ ಘಟನೆ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು.
ಅಂದು ಸಂತ್ರಸ್ತ ಜಿಲ್ಲಾಧಿಕಾರಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಈ ಗ್ಯಾಂಗ್ ಅನ್ನು ಇಲಾಖೆ ಹೆಡೆಮುರಿ ಕಟ್ಟಿತ್ತು. ಅಲ್ಲದೇ ಅಂದು ಜಿಲ್ಲೆಯಲ್ಲಿ ಸಾಕಷ್ಟು ಕೋಲಾಹಲ ಸೃಷ್ಟಿಸಿದ ಕಾಲೇಜು ವಿದ್ಯಾರ್ಥಿನಿ ಯೋರ್ವಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ, ವಿಹಾರಕ್ಕೆಂದು ಬಂದ ಪ್ರೇಮಿಗಳ ಅಸಹಾಯಕತೆಯನ್ನು ಬಳಸಿ ಪುಂಡರ ಗುಂಪು ಇಂತಹ ಕೃತ್ಯ ಎಸಗಿದೆ ಎಂಬ ಗುಮಾನಿ ಕೂಡ ನಾಗರಿಕ ವಲಯದಲ್ಲಿ ವ್ಯಕ್ತವಾಗಿತ್ತು. ಇತ್ತೀಚೆಗೆ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿರುವ ಸಕಲೇಶಪುರ ತಾಲೂಕಿನ ಪಟ್ಲಬೆಟ್ಟ ಎಂಬ ಪ್ರವಾಸಿ ನಿಸರ್ಗಧಾಮವನ್ನು ವೀಕ್ಷಿಸಲು ತೆರಳಿದ ಅಮಾಯಕ ಪ್ರವಾಸಿಗರ ಮೇಲೆ ಹಲ್ಲೆ ಹಾಗೂ ಪುಂಡಾಟ ಮೆರೆದಿರುವ ಘಟನೆಯನ್ನೇ ಗಮನಿಸುವುದಾದರೆ ಈ ಪ್ರದೇಶಕ್ಕೆ ಹೊರಭಾಗದಿಂದ ಬಂದ ಪ್ರವಾಸಿಗರು ತಮ್ಮ ಸ್ವಂತ ವಾಹನದಲ್ಲಿ ಪಟ್ಲ ಬೆಟ್ಟಕ್ಕೆ ಭೇಟಿ ನೀಡಬಾರದಂತೆ.
ಅಲ್ಲಿಗೆ ಯಾರು ಭೇಟಿ ನೀಡುವುದಿದ್ದರೂ ತಮ್ಮ ಸ್ವಂತ ವಾಹನ ಬದಿಗಿಟ್ಟು ಈ ಸೀಮಿತ ವಾಹನ ಚಾಲಕರ ಪಿಕ್ ಅಪ್, ಜೀಪ್ ಅನ್ನು ಬಾಡಿಗೆ ಮಾಡಿಕೊಂಡು ವೀವ್ ಪಾಯಿಂಟ್‌ಗೆ ತೆರಳ ಬೇಕು ಇದು ನಮ್ಮ ಊರು ಇದು ನಮ್ಮ ಆದೇಶ ಅನ್ನುತ್ತಲೇ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ ವೀಡಿಯೋ ವೈರಲ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಜನಸಾಮಾನ್ಯರಿಂದ ಸಾಕಷ್ಟು ಆಕ್ರೋಶ ವ್ಯಕ್ತವಾದ ಬಳಿಕ ಹಾಸನ ಜಿ ಎಸ್.ಪಿಯವರ ಸೂಚನೆ ಮೇರೆಗೆ ಪೋಲೀಸರು ಪುಂಡಾಟ ಮೆರೆದವರ ಇತ್ತೀಚೆಗೆ ಹೆಡೆಮುರಿ ಕಟ್ಟಿದ್ದರು. ಇಲ್ಲೂ ಪ್ರವಾಸಿಗರನ್ನು ಅಪಾಯಕಾರಿಯಾಗಿ ವಾಹನದಲ್ಲಿ ತುಂಬಿಸಿಕೊಂಡು ಪ್ರವಾಸಿಗರಿಂದ ೩-೪ ಪಟ್ಟು ಬಾಡಿಗೆ ದೋಚುವ ದಂಧೆ, ಪ್ರವಾಸಿ ಹೆಣ್ಣು ಮಕ್ಕಳ ಮೇಲೆ ಅನುಚಿತ ವರ್ತನೆಯ ಆರೋಪಗಳು ಹಲವಾರು ಬಾರಿ ಕೇಳಿ ಬಂದಿದೆ. ನಿರ್ಜನ ಹಾಗೂ ಜನ ವಿರಳ ಪ್ರದೇಶವಾಗಿರುವುದರಿಂದ ಇಲ್ಲಿ ನೋವು ನುಂಗಿ ಅಸಹಾಯಕತೆ ವ್ಯಕ್ತಪಡಿಸುವ ಪ್ರವಾಸಿಗರೇ ಹೆಚ್ಚು.
ಈ ಪಟ್ಲ ಬೆಟ್ಟ, ಮಡಿಕೇರಿ ಹಾಗೂ ರಾಜ್ಯದ ಕೆಲ ಗ್ರಾಮೀಣ ಪ್ರದೇಶದ ಪ್ರವಾಸಿ ತಾಣಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮೂಲಭೂತ ಸೌಕರ್ಯ, ರಸ್ತೆಗಳ ಅಭಿವೃದ್ಧಿಗೆ ಇಲ್ಲಿನ ಇಂತಹ ಪುಂಡರೇ ಅಡ್ಡಿ ವ್ಯಕ್ತಪಡಿಸುವುದು, ಪ್ರವಾಸಿಗರ ವಾಹನಗಳು ತೆರಳಲು ಅನಾನುಕೂಲವಾಗುವಂತೆ ರಸ್ತೆಗಳಿಗೆ ಗುಂಡಿ ಅಗೆಯುವುದು ಆ ಮೂಲಕ ಪ್ರವಾಸಿಗರು ತಮ್ಮ ಸ್ವಂತ ವಾಹನದಲ್ಲಿ ತೆರಳದೆ ಬಾಡಿಗೆ ವಾಹನದಲ್ಲಿ ತೆರಳುವ ಅನಿವಾರ್ಯತೆ ಸೃಷ್ಟಿಸುವ ಮಂದಿಯೂ ಇದ್ದಾರೆ.
ಇನ್ನು ನಮ್ಮ ಪ್ರಕೃತಿ ಸೌಂದರ್ಯದ ಹೊಣೆಗಾರಿಕೆಯನ್ನು ಹೊತ್ತು ಕೊಳ್ಳಬೇಕಾದವರು ನಾವೇ. ಆದರೆ ಬಹುತೇಕ ಪ್ರವಾಸಿ ಪ್ರದೇಶಗಳು ಮದ್ಯದ ಬಾಟಲ, ಪಾನ್ ಪರಾಗ್, ಗುಟ್ಕಾ, ಸಿಗರೇಟ್ ಪ್ಯಾಕೆಟ್, ಅನೈತಿಕ ಚಟುವಟಿಕೆಗಳ ಮೂಲಕ ಪಾವಿತ್ರ್ಯತೆಯನ್ನು ಕಳೆದುಕೊಳ್ಳುವುದರ ಜೊತೆಗೆ ಸಭ್ಯ ನಾಗರಿಕರು ಮುಖ ತಿರುಗಿಸಿ ನಡೆಯಬೇಕಾದ ಪರಿಸ್ಥಿತಿ ಎದುರಾಗುತ್ತವೆ. ನಮ್ಮ ಊರಿನಲ್ಲಿ ಅಥವಾ ದೇಶದಲ್ಲಿ ಶೋಭಿಸಲ್ಪಡುವ ಯಾವುದೇ ಒಂದು ಪ್ರೇಕ್ಷಣೀಯ ಸ್ಥಳದ ಮಹತ್ವ ಹಾಗೂ ಅದರ ಉದ್ದೇಶದ ಬಗ್ಗೆ ಮೊತ್ತ ಮೊದಲು ನಮಗೆ ಅಭಿಮಾನ ಹೆಮ್ಮೆ ಎಂಬುದು ಮೂಡಬೇಕು. ಇನ್ನು ಕೆಲ ಪ್ರವಾಸಿ ಜಾಗಗಳಲ್ಲಿ ಸುಂದರ ಕಟ್ಟಡ, ಅಲ್ಲಿನ ಸೌಕರ್ಯಗಳನ್ನು ಪ್ರವಾಸಿಗರೇ ವಿರೂಪಗೊಳಿಸುವುದು, ಅಂದಗೆಡಿಸುವುದು, ಅಶ್ಲೀಲ ಬರಹಗಳನ್ನು ಗೋಡೆಗಳ ಮೇಲೆ ಕೆತ್ತುವುದು, ಸ್ಥಳಗಳನ್ನು ಮಲೀನಗೊಳಿಸುವಂತಹ ಕಿಡಿಗೇಡಿ ವಿಕೃತ ಮನಸ್ಥಿತಿ ಇದೆಯಲ್ಲ ಅದು ದೇಶದ್ರೋಹಕ್ಕೆ ಸಮಾನವೆಂದರೂ
ಅತಿಶಯೋಕ್ತಿಯಾಗಲಾರದು.
ಇನ್ನು ಸರಕಾರಗಳು ಕೂಡ ಪ್ರವಾಸಿಗರ ಆಕರ್ಷಣೆಯ ಪ್ರದೇಶ, ಪ್ರವಾಸಿ ತಾಣಗಳಲ್ಲಿನ ಸುರಕ್ಷತೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತಿಲ್ಲ.ದಟ್ಟ ಕಾಡು ನಿರ್ಜನ ಪ್ರದೇಶ ವ್ಯಾಪ್ತಿಯನ್ನು ಒಳಗೊಂಡ ಪ್ರದೇಶಗಳಲ್ಲಿ ಟ್ರೆಕ್ಕಿಂಗ್, ಚಾರಣ ಕ್ಕೆಂದು ಬರುವ ಪ್ರವಾಸಿಗರು ನಾಪತ್ತೆಯಾಗುವ ಪ್ರಕರಣಗಳು ಹಲವಾರು ಬಾರಿ ಕಂಡು ಬರುತ್ತವೆ. ಇಂದು ಪೋಲಿಸ್ ಸಿಬ್ಬಂದಿ, ಚೆಕ್ ಪೋ, ಅಥವಾ ಬೀಟ್ ಪೋಲಿಸ್ ವ್ಯವಸ್ಥೆಯ ಕಡೆ ಗೃಹ ಹಾಗೂ ಪ್ರವಾಸೋ ದ್ಯಮ ಇಲಾಖೆ ಗಮನ ಹರಿಸುವಂತಾಗಬೇಕು. ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಪ್ರವಾಸೋದ್ಯಮ ಇಲಾಖೆ ಇದ್ದರೂ ಪ್ರವಾಸಿ ತಾಣಗಳ ಅಭಿವೃದ್ಧಿಗೆ
ಸಾಕಷ್ಟು ವಿಪುಲ ಅವಕಾಶಗಳಿದ್ದರೂ ಅಂದು ಮೂಲಭೂತ ಸೌಕರ್ಯಗಳು,ಪ್ರವಾಸಿಗರಿಗೆ ಅನುಕೂಲಕರ ವಾತಾವರಣ ವನ್ನು ಸೃಷ್ಟಿಸಿದರೆ ಪ್ರವಾಸೋದ್ಯಮ ಬೆಳೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.
ಭಾರತದ ಅತಿ ದೊಡ್ಡ ಸೇವಾ ವಲಯದಲ್ಲಿ ಪ್ರವಾಸೋದ್ಯಮವು ಕೂಡ ಒಂದು. ಪ್ರವಾಸೋದ್ಯಮ ಉದ್ಯೋಗ ರಂಗಕ್ಕೂ ಕೂಡ ಮಹತ್ವದ ಕೊಡುಗೆ
ಯನ್ನು ನೀಡುತ್ತಾ ಬಂದಿದೆ. ಈ ಸಾಲಿಗೆ ಪ್ರಮುಖವಾಗಿ ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳು, ಸಾಂಸ್ಕೃತಿಕ ನಗರಗಳು, ಬೀಚ್, ಜಲಪಾತಗಳು ಅರಣ್ಯ ಪ್ರದೇಶಗಳು ಪ್ರಮುಖವಾಗಿ ಜನರನ್ನು ಕೈಬೀಸಿ ಕರೆಯುತ್ತಿದೆ. ದೇಶದ ವಿವಿಧ ರಾಜ್ಯಗಳು ಪ್ರವಾಸೋದ್ಯಮದ ಕ್ಷೇತ್ರಗಳನ್ನು ಹೊಂದಿರುವ ಕಾರಣ
ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತವೆ.
ವಿಶೇಷವಾಗಿ ಗೋವಾ, ಹಿಮಾಚಲ ಪ್ರದೇಶ, ಕೇರಳ, ರಾಜಸ್ಥಾನ, ಪಂಜಾಬ, ಆಂಧ್ರಪ್ರದೇಶ, ದೆಹಲಿ, ಜಮ್ಮು ಕಾಶ್ಮೀರ, ಕರ್ನಾಟಕ ಸೇರಿದಂತೆ ವಿವಿಧ ಪ್ರದೇಶಗಳು ದೇಶ ವಿದೇಶಿಗರನ್ನು ತನ್ನ ಹಲವು ವೈಶಿಷ್ಟ್ಯಗಳಿಂದ ತನ್ನತ್ತ ಸೆಳೆಯುತ್ತಿದೆ. ಪ್ರವಾಸೋದ್ಯಮ ಎಂಬುವುದು ದೇಶದ ಶಾಂತಿ, ಸಾಮರಸ್ಯ ಮತ್ತು ಸಂಸ್ಕೃತಿಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಯುರೋಪ್ ಮತ್ತು ಅಮೆರಿಕ ಸೇರಿದಂತೆ ಇನ್ನಿತರ ಕೆಲ ರಾಷ್ಟ್ರಗಳ ಆರ್ಥಿಕತೆ ಯ ಆಧಾರ ಪ್ರವಾಸೋದ್ಯಮವೇ ಆಗಿರುವುದರಿಂದ ಆ ದೇಶಗಳಲ್ಲಿ ಪರಿಸರ ಮತ್ತು ಸಾಂಸ್ಕೃತಿಕ ಕಟ್ಟಡಗಳು ತನ್ನ ವೈವಿಧ್ಯತೆಯನ್ನು ವಿಸ್ತರಿಸುತ್ತಿದೆ.
ಪ್ರವಾಸಿ ತಾಣಗಳಲ್ಲಿ ಪ್ರಮುಖವಾಗಿ ದೇಶೀಯ ಪ್ರವಾಸೋದ್ಯಮ, ಒಳನಾಡಿನ ಪ್ರವಾಸೋದ್ಯಮ ಹಾಗೂ ಹೊರನಾಡಿನ ಪ್ರವಾಸೋದ್ಯಮ ಎಂಬ ಮೂರು ಪ್ರಕಾರಗಳನ್ನು ಒಳಗೊಂಡಿದೆ. ಆಧುನಿಕ ಯುವ ಪೀಳಿಗೆಗೆ ದೇಶದ ಇತಿಹಾಸ ದರ್ಶನ, ವೈವಿಧ್ಯಮಯ ಕಲೆ, ಸಂಸ್ಕೃತಿ, ವಾಸ್ತುಶಿಲ್ಪ, ಧರ್ಮ,
ಪ್ರಕೃತಿ, ಪರಂಪರೆಗಳ ಪರಿಚಯಗಳು ಪ್ರವಾಸೋದ್ಯಮ ದಿಂದಲೇ ದೊರಕುವುದರಿಂದ ಇದು ಕೂಡ ಶಿಕ್ಷಣದ ಒಂದು ಭಾಗವೆನ್ನಬಹುದು. ಒಂದು ರಾಜ್ಯ ಹಲವು ಜಗತ್ತು ಎಂಬ ದ್ಯೇಯದಡಿಯಲ್ಲಿ ಕಾರ್ಯನಿರ್ವಹಿಸುವ ಕರ್ನಾಟಕದ ಪ್ರವಾಸೋದ್ಯಮ ದೇಶದಲ್ಲಿ ನಾಲ್ಕನೇ ಸ್ಥಾನವನ್ನು ಹೊಂದಿದೆ.
ಉಳಿದ ರಾಜ್ಯಗಳಿಗೆ ಹೋಲಿಸಿದರೆ ಅಭಿವೃದ್ಧಿಯಲ್ಲಿ ಮಂದಗತಿಯಲ್ಲಿರುವುದು ಕೂಡ ಅಷ್ಟೇ ವಾಸ್ತವಿಕ. ಪ್ರವಾಸೋದ್ಯಮ ಎಂಬುವುದು ಸುಂದರ ಪರಿಸರದ ಅನಾವರಣದ ಜೊತೆಗೆ ಪ್ರಾಕೃತಿಕ ಸೌಂದರ್ಯ ಹಾಗೂ ಪ್ರಕೃತಿಯ ಶಿಕ್ಷಣದ ಒಂದು ಭಾಗ. ಇದನ್ನು ಉಳಿಸಿ ಬೆಳೆಸುವ ಜೊತೆಗೆ ಪಾವಿತ್ರ್ಯತೆ
ಯನ್ನು ಕಾಪಾಡುವ ಹೊಣೆಗಾರಿಕೆಯು ನಮ್ಮೆಲ್ಲರದ್ದಾಗಿದೆ.