ವಿಶ್ಲೇಷಣೆ
ವಿನಯ್ ಸಹಸ್ರೆಬುದ್ದೆ, ರಾಜ್ಯಸಭಾ ಸದಸ್ಯ
ಈ ಶತಮಾನದ ಆರಂಭದಲ್ಲಿ ಸಾಮಾಜಿಕ ಜಾಲತಾಣಗಳು ನಮ್ಮ ಜೀವನವನ್ನು ಪ್ರವೇಶಿಸಿದಾಗ ಯಾರಿಗೂ ಮುಂದೊಂದು
ದಿನ ಇವು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ ಎಂಬುದು ಗೊತ್ತಿರಲಿಲ್ಲ. ಆದರೆ,
ಇಂದು ಸಾಮಾಜಿಕ ಜಾಲತಾಣಗಳಿಂದಾಗಿ ಜನರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಹಲವಾರು ವೇದಿಕೆಗಳು ದೊರೆ ತಿರುವು ದರಿಂದ ಅಭಿಪ್ರಾಯ ಗಳನ್ನು ರೂಪಿಸುವ ಪ್ರಕ್ರಿಯೆಯೇ ಅತ್ಯಂತ ಪ್ರಜಾಸತಾತ್ಮಕವಾಗಿ ಬದಲಾವಣೆಗೊಂಡಿದೆ.
ಇಂದು ಯಾವುದೂ, ಅಕ್ಷರಶಃ ಯಾವುದೂ, ನಿಮಗೆ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಅಡ್ಡಿಪಡಿಸುವುದಿಲ್ಲ. ನಿಮಗೇನು ಅನ್ನಿಸುತ್ತದೆಯೋ ಅದನ್ನು ಹೇಳುವುದಕ್ಕೆ ಸೂರ್ಯನ ಕೆಳಗಿರುವ ಯಾವುದೂ ನಿಮಗೀಗ ಅಡ್ಡಿಪಡಿಸಲಾರದು. ಮುಖ್ಯ ವಾಹಿನಿಯ ಸುದ್ದಿ ಮಾಧ್ಯಮಗಳಿಗಿದ್ದ ಏಕಸ್ವಾಮ್ಯ ಈಗ ಸಂಪೂರ್ಣ ನಾಶವಾಗಿದೆ. ಮೊದಮೊದಲು ಸಾಮಾಜಿಕ ಜಾಲತಾಣ ಗಳು ಮುಖ್ಯ ವಾಹಿನಿಯ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದುದನ್ನೇ ತಮ್ಮಲ್ಲೂ ಹೇಳುತ್ತಿದ್ದವು. ಆದರೆ ಈಗ ತದ್ವಿರುದ್ಧ ವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಏನು ಕಾಣಿಸುತ್ತದೆಯೋ ಅದೇ ನಂತರ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ.
ಅಷ್ಟೇ ಮಹತ್ವಪೂರ್ಣ ಸಂಗತಿಯೇನೆಂದರೆ, ತಪ್ಪೋ ಸರಿಯೋ, ಜನರು ಇಂದು ಎಲ್ಲದರ ಕುರಿತು ತಮ್ಮದೇ ಆದ ಅಭಿಪ್ರಾಯ ಹೊಂದಿದ್ದಾರೆ. ಅಷ್ಟೇ ಅಲ್ಲ, ಅದನ್ನು ಧೈರ್ಯವಾಗಿ ವ್ಯಕ್ತಪಡಿಸುತ್ತಾರೆ ಕೂಡ. ಯಾವುದೇ ಪ್ರಜಾಪ್ರಭುತ್ವಕ್ಕೆ ಇದು ಬಹಳ ಮುಖ್ಯ. ಆದರೆ, ಸೋಷಿಯಲ್ ಮೀಡಿಯಾಗಳ ನೆಗೆಟಿವ್ ಮುಖಗಳೂ ಈಗ ಒಂದಾದ ಮೇಲೊಂದರಂತೆ ಹೊರಬರುತ್ತಿವೆ. ಟ್ರೈಸ್ಟನ್ ಹ್ಯಾರಿಸ್ ಅವರ ಸಾಕ್ಷ್ಯಚಿತ್ರ ದಿ ಸೋಷಿಯಲ್ ಡೈಲೆಮಾ ಎಲ್ಲೆಡೆ ಸುದ್ದಿ ಮಾಡುತ್ತಿದೆಯಷ್ಟೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುವುದೇ ಈಗ ಎಲ್ಲರ ಅಚ್ಚುಮೆಚ್ಚಿನ ಟೈಂಪಾಸ್ ವಿಧಾನವಾಗಿರುವುದರಿಂದ ಈ ನವ ಮಾಧ್ಯಮಗಳ ಮೂಲ ಉದ್ದೇಶವಾಗಿದ್ದ ಜನರು ತಮ್ಮ ಚಿಂತನೆ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ವಿಚಾರ ಹಿನ್ನೆಲೆಗೆ ಸರಿದು ಬಿಟ್ಟಿದೆ.
ಯಾರನ್ನೋ ಮೆರೆಸುವುದು, ಇನ್ನಾರೋ ಲೈಕುಗಳಿಗಾಗಿ ಆಸೆಪಡುವುದರ ಮುಂದೆ ತರ್ಕಬದ್ಧ ಹಾಗೂ ಅರ್ಥಪೂರ್ಣವಾದ, ಚರ್ಚೆಗಳಿಗೆ ಆದ್ಯತೆ ಕಡಿಮೆಯಾಗಿದೆ. ಇದರ ಜೊತೆಗೆ, ಜನರು ಅತಿಯಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವು ದರಿಂದ ಸಾಮಾನ್ಯವಾಗಿ ಎಲ್ಲ ರಂಗದಲ್ಲೂ ಗುಣಮಟ್ಟ ಕಡಿಮೆಯಾಗುತ್ತಿದೆ. ಒಂದು ಸಂಗತಿಯನ್ನು ನಾವು ನೆನಪಿಡಬೇಕು. ಮಿತಿಯಿಲ್ಲದ ಅಭಿವ್ಯಕ್ತಿ ಸ್ವಾತಂತ್ರ್ಯದ ಜೊತೆಗೇ ಜವಾಬ್ದಾರಿಯೂ ಬರುತ್ತದೆ. ಹೀಗಾಗಿ ಪ್ರತಿಯೊಬ್ಬರೂ ನಾವು ಹಂಚಿಕೊಳ್ಳುವ ಅಪರೀಕ್ಷಿತ ಮಾಹಿತಿ ಮತ್ತು ಬೇಜವಾಬ್ದಾರಿಯಿಂದ ಬಳಕೆ ಮಾಡುವ ಪದಗಳು ಎಷ್ಟು ಹಾನಿ ಉಂಟುಮಾಡಬಲ್ಲವು ಎಂಬು ದನ್ನು ತಿಳಿದು ಕೊಂಡಿರಬೇಕು.
ಇದರ ಜೊತೆಗೆ ಇಂದು ಸೋಷಿಯಲ್ ಮೀಡಿಯಾಗಳು ಅತಿ ಎನ್ನಿಸುವಂತೆ ಗೀಳಾಗಿ ಪರಿವರ್ತನೆಯಾಗಿವೆ. ಒಬ್ಬ ವ್ಯಕ್ತಿಯ ಮೇಲೆ ಹಾಗೂ ಒಂದು ಕುಟುಂಬದ ಮೇಲೆ ಮತ್ತು ಸಾಮಾಜಿಕ ಜೀವನದ ಮೇಲೆ ಇದರಿಂದ ಉಂಟಾಗುವ ಗಂಭೀರ ಪರಿಣಾಮವನ್ನು ಕಡೆಗಣಿಸು ವಂತಿಲ್ಲ. ಸುದೀರ್ಘ ಕಾಲ ಸ್ಕ್ರೀನ್ ನೋಡುವುದು ಆರೋಗ್ಯಕ್ಕೂ ಹಾನಿ ಉಂಟುಮಾಡುತ್ತದೆ. ಅದೇನೇ ಇದ್ದರೂ ಸಾಮಾಜಿಕ ಜಾಲತಾಣಗಳು ಸಾಕಷ್ಟು ಕಾರಣಗಳಿಗಾಗಿ ಇನ್ನೂ ಬಹಳ ಕಾಲ ನಮ್ಮೊಂದಿಗೆ ಉಳಿಯುತ್ತವೆ. ಅಭಿಪ್ರಾಯ ರೂಪಿಸುವ ಪ್ರಕ್ರಿಯೆಯನ್ನು ನಿಜವಾದ ಅರ್ಥದಲ್ಲಿ ಪ್ರಜಾಸತ್ತಾತ್ಮಕಗೊಳಿಸಿರುವುದರ ಜೊತೆಗೆ ಇದು ತ್ವರಿತ ಪ್ರತಿಕ್ರಿಯೆಯ ಮಾಧ್ಯಮವಾಗಿಯೂ ಹೊರಹೊಮ್ಮಿದೆ.
ವೇಗವೇ ಮುಖ್ಯವಾಗಿರುವ ಇಂದಿನ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಶರವೇಗದಲ್ಲಿ ಅಭಿಪ್ರಾಯಗಳು ಹೊರ ಹೊಮ್ಮುವುದು ಅತ್ಯಂತ ಪ್ರಮುಖ ಸಂಗತಿಯಾಗಿ ಪರಿಣಮಿಸಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಜನರ ವೈಯಕ್ತಿಕ ಹಾಗೂ ಸಾರ್ವಜನಿಕ ಸಹಭಾಗಿತ್ವಕ್ಕೆ ಅವಕಾಶಗಳು ಕಡಿಮೆ. ಆದರೆ ಸೋಷಿಯಲ್ ಮೀಡಿಯಾಗಳು ಇವೆರಡೂ ಸಂಗತಿಗಳಿಗೆ ಏಕಕಾಲದಲ್ಲಿ ಅವಕಾಶ ಮಾಡಿಕೊಡುತ್ತವೆ. ಈ ಕಾರಣದಿಂದಲೇ ಒಂದು ಸಮಾಜ ವಾಗಿ ನಾವು ಸಾಮಾಜಿಕ ಜಾಲತಾಣಗಳ ಕುರಿತು ಇನ್ನಷ್ಟು ಜವಾಬ್ದಾರಿಯುತ ನಿಲುವು ಹೊಂದುವ ಅಗತ್ಯವಿದೆ.
ಸ್ವಯಂ ನಿಯಂತ್ರಣವೇ ಯಾವತ್ತೂ ಅತ್ಯುತ್ತಮ ಮಾದರಿಯ ನಿಯಂತ್ರಣ. ಒಳ್ಳೆಯ ವಿಚಾರಗಳು ಖಂಡಿತ ಸೋಷಿಯಲ್ ಮೀಡಿಯಾಗಳಲ್ಲಿ ಒಳ್ಳೆಯ ವಾತಾವರಣವನ್ನು ಸೃಷ್ಟಿಸಬಲ್ಲವು. ಜೊನಾಥನ್ ಹೈಟ್ ಮತ್ತು ತೋಬಿಯಸ್ ರೋಸ್ ಸ್ಟಾಕ್
ವೆಲ್ ಅವರು ದ ಅಟ್ಲಾಂಟಿಕ್‌ನಲ್ಲಿ ಸುಮಾರು ಒಂದು ವರ್ಷದ ಂದೆ ಬರೆದ ಲೇಖನದಲ್ಲಿ, ತತ್ವಶಾಸಜ್ಞರಾದ ಜಸ್ಟಿನ್ ತೋಸಿ
ಮತ್ತು ಬ್ರಾಂಡನ್ ವಾರ್ಮ್ಕ್ ಅವರು ಮಾರಲ್ ಗ್ರಾಂಡ್ ಸ್ಟಾಂಡಿಂಗ್ (ನೈತಿಕವಾಗಿ ಎತ್ತರದಲ್ಲಿ ನಿಲ್ಲುವುದು) ಎಂಬ ಉಕ್ತಿ ಯೊಂದನ್ನು ಬಳಸಿದ್ದಾರೆ.
ಜನರು ಸಾರ್ವಜನಿಕ ವೇದಿಕೆಯಲ್ಲಿ ತಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳಲು ನೈತಿಕವಾಗಿ ಮಾತನಾಡಿದಾಗ ಏನಾಗುತ್ತದೆ ಎಂಬು ದಕ್ಕೆ ಅವರು ಈ ಉಕ್ತಿಯನ್ನು ಹೇಳುತ್ತಾರೆ. ಅವರ ಪ್ರಕಾರ ನೈತಿಕವಾಗಿ ಎತ್ತರದ ಸ್ಥಾನದಲ್ಲಿ ನಿಲ್ಲುವವರು ಸಾಮಾನ್ಯವಾಗಿ ನೈತಿಕತೆಯ ಬಗ್ಗೆಯೇ ಹೆಚ್ಚು ಮಾತನಾಡುತ್ತಾರೆ, ಜನರಿಗೆ ಮುಜುಗರ ಉಂಟು ಮಾಡುವಂಥ ವಿಷಯಗಳ ಬಗ್ಗೆ ಹೇಳುತ್ತಾರೆ, ತಾವು ಹೇಳಿದ್ದನ್ನು ಒಪ್ಪದಿರುವವರು ಖಂಡಿತ ತಪ್ಪು ಮಾಡುತ್ತಿದ್ದಾರೆ ಎನ್ನುತ್ತಾರೆ ಅಥವಾ ಭಾವನಾತ್ಮಕ ಸಂಗತಿಗಳನ್ನು ಇನ್ನಷ್ಟು ಉತ್ಪ್ರೇಕ್ಷೆ ಮಾಡಿ ಹೇಳುತ್ತಾರೆ. ಪ್ರೇಕ್ಷಕರ ಒಪ್ಪಿಗೆ ಪಡೆಯುವ ಈ ಸ್ಪರ್ಧೆಯಲ್ಲಿ ಸೂಕ್ಷ್ಮಗಳು ಹಾಗೂ ಸತ್ಯ ಸಂಗತಿಗಳು ಸತ್ತು ಬೀಳುತ್ತವೆ ಎಂದು ಹೇಳುತ್ತಾರೆ.
ಇಲ್ಲಿ ಇನ್ನೂ ಒಂದು ಸಂಗತಿಯನ್ನು ಗಮನಿಸಬೇಕು. ಸೋಷಿಯಲ್ ಮೀಡಿಯಾಗಳಲ್ಲಿ ವಿರೋಧಿಗಳನ್ನು ಸಾರ್ವಜನಿಕವಾಗಿ ಹಣಿಯುವುದನ್ನು ಎಲ್ಲರೂ ಬಹಳ ಸುರಕ್ಷಿತ ಎಂದು ಭಾವಿಸಿದ್ದಾರೆ. ಅದು ಒಂದು ರೀತಿಯಲ್ಲಿ ಸುಳ್ಳು ಆತ್ಮತೃಪ್ತಿಯನ್ನು ನೀಡುತ್ತದೆ. ತಮಗೆ ಈ ಬಗ್ಗೆ ಏನೂ ಗೊತ್ತಿಲ್ಲವೆಂಬುದು ಗೊತ್ತಿಲ್ಲದೆಯೇ ಯಾರದೋ ಪರ ನಿಲ್ಲುವ ಮೂಲಕ ತಾನೇನೋ ದೊಡ್ಡ ಕೆಲಸ ಮಾಡಿದ್ದೇನೆ ಎಂದು ಬಹಳ ಜನ ಅಂದುಕೊಳ್ಳುತ್ತಾರೆ.
ಈ ಸಮಸ್ಯೆಯನ್ನು ಸರಿಪಡಿಸಲು ಮೂರು ದಾರಿಗಳಿವೆ. ಮೊದಲನೆಯದಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ
ಒಗ್ಗಟ್ಟಿನಿಂದ ಒಂದು ನೀತಿ ಸಂಹಿತೆಯನ್ನು ಪಾಲಿಸಲು ತಳಮಟ್ಟದಲ್ಲಿ ಕೆಲ ನಿಯಮಗಳನ್ನು ರೂಪಿಸಿಕೊಳ್ಳುವುದು. ಜೊತೆಗೆ, ಯಾವುದಾದರೂ ರೀತಿ ಯಲ್ಲಿ ರಚನಾತ್ಮಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು. ನೀತಿ ಸಂಹಿತೆಯ ವಿಷಯದಲ್ಲಿ ನಾನು ಮತ್ತೆ ದಿ ಅಟ್ಲಾಂಟಿಕ್ ಪತ್ರಿಕೆಯ ಲೇಖನಕ್ಕೇ ಹೋಗುತ್ತೇನೆ. ನಮ್ಮನ್ನು ನಾವು ಸಾರ್ವಜನಿಕವಾಗಿ ವ್ಯಕ್ತಪಡಿಸುವ ತೀವ್ರತೆ ಯನ್ನೂ, ಅದರ ಸಂಖ್ಯೆಯನ್ನೂ ಕಡಿಮೆ ಮಾಡುವುದು ಇದಕ್ಕೆ ಪರಿಹಾರ ಎಂದು ಲೇಖನ ಹೇಳುತ್ತದೆ.
ಇದನ್ನು ಎಲ್ಲರೂ ಸ್ವಯಂ ಪ್ರೇರಿತರಾಗಿ ಮಾಡಿದರೆ ಒಳ್ಳೆಯದು. ಸಾಮಾಜಿಕ ಜಾಲತಾಣಗಳಲ್ಲಿ ಕಡಿಮೆ ಸಮಯ ಕಳೆಯು ವುದು, ನಮ್ಮ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಆಯ್ದುಕೊಳ್ಳುವ ವಿಷಯಗಳ ಸಂಖ್ಯೆಯನ್ನು ಕಡಿಮೆ ಮಾಡುವುದು, ದಿನಕ್ಕೆ
ಗರಿಷ್ಠ ಇಷ್ಟೇ ಪೋಸ್ಟ್ ಮಾಡುತ್ತೇನೆ ಅಥವಾ ಇಷ್ಟೇ ಕಮೆಂಟ್ ಮಾಡುತ್ತೇನೆಂದು ನಮಗೆ ನಾವೇ ಮಿತಿ ನಿಗದಿಪಡಿಸಿಕೊಳ್ಳು ವುದು ಮುಂತಾದ ಕ್ರಮಗಳ ಕುರಿತೂ ಚಿಂತನೆ ನಡೆಸಬಹುದು.
ಎರಡನೆಯ ದಾರಿಯು ಸೋಷಿಯಲ್ ಮೀಡಿಯಾ ವೇದಿಕೆಗಳ ಸ್ವರೂಪವನ್ನೂ ಹಾಗೂ ಕ್ರಮೇಣ ಅವುಗಳ ಪಾತ್ರವನ್ನೂ ನಿಗದಿ ಪಡಿಸುವುದಕ್ಕೆ ಸಂಬಂಧಿಸಿದೆ. ಎರಡು ವರ್ಷಗಳ ಹಿಂದೆ ಸಂಸತ್ತಿನ ಮಾಹಿತಿ ತಂತ್ರಜ್ಞಾನ ಸ್ಥಾಯಿ ಸಮಿತಿಯು ಚರ್ಚೆ ನಡೆಸಿದ ಹಾಗೆ ಸಾಮಾಜಿಕ ಜಾಲತಾಣದ ವೆಬ್‌ಸೈಟ್‌ಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅವು ಮೊದಲಿನಂತೆ ಈಗ ಕೇವಲ ಒಂದು ವೇದಿಕೆಯಲ್ಲ. ಇಲ್ಲಿ ಅವುಗಳಿಗೀಗ ಕೇವಲ ಪರೋಕ್ಷ ಪಾತ್ರವಷ್ಟೇ ಇಲ್ಲ. ನಿಜ ಹೇಳ ಬೇಕೆಂದರೆ ಸಾಮಾಜಿಕ ಜಾಲತಾಣಗಳು ಇನ್ನಾವುದೇ ಪತ್ರಿಕೆಯಂತೆ ಇಂದು ನೇರವಾಗಿ ತಮ್ಮಲ್ಲಿ ಏನು ಪ್ರಕಟವಾಗಬೇಕು ಮತ್ತು ಏನು ಪ್ರಕಟವಾಗಬಾರದು ಎಂಬುದನ್ನು ನಿರ್ಧಾರ ಮಾಡುತ್ತಿವೆ.
ಹೀಗಾಗಿ ಅವು ಯಾವುದೇ ಬೇಜವಾಬ್ದಾರಿಯುತ ಅಥವಾ ಪ್ರಚೋದನಕಾರಿ ಪೋಸ್ಟ್‌ಗಳ ವಿಷಯದಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಒಮ್ಮೆ ತಾವೂ ಕೂಡ ಒಂದು ಪತ್ರಿಕೆಯಿದ್ದಂತೆ ಎಂಬುದನ್ನು ಒಪ್ಪಿಕೊಂಡ ಮೇಲೆ ನಿರ್ದಿಷ್ಟ ಕಾಯ್ದೆ ಯಡಿ ಅವುಗಳನ್ನೂ ಉತ್ತರದಾಯಿ ಮಾಡಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳನ್ನು ಪರಿಶೀಲಿಸುವ ವಿಧಾನ ವನ್ನು ಇನ್ನಷ್ಟು ಕಠಿಣಗೊಳಿಸುವುದರಿಂದ ಅಲ್ಲಿ ಹರಿಯುವ ವಿಷ ಮತ್ತು ಅಪಾಯಕಾರಿ ಸರಕುಗಳ ಪ್ರಮಾಣವನ್ನು ಕಡಿಮೆ ಮಾಡಬಹುದು. ಜೊತೆಗೆ, ಬೇಜವಾಬ್ದಾರಿತನದ ಪ್ರದರ್ಶನಕ್ಕೂ ಕಡಿವಾಣ ಹಾಕಬಹುದು.
ಮೂರನೆಯ ಹಾಗೂ ಅತ್ಯಂತ ಪರಿಣಾಮಕಾರಿ ವಿಧಾನವೆಂದರೆ ರಚನಾತ್ಮಕ ಸಾಮಾಜಿಕ ಜಾಲತಾಣವನ್ನು ಪ್ರೋತ್ಸಾಹಿಸು ವುದು. ಮುಖ್ಯವಾಹಿನಿಯ ಸುದ್ದಿ ಮಾಧ್ಯಮಗಳ ರೀತಿಯಲ್ಲೇ ಇಂದು ಸಾಮಾಜಿಕ ಜಾಲತಾಣಗಳೂ ಕೂಡ ಜನಪ್ರಿಯತೆಗೆ ಹಾಗೂ ತೋರಿಕೆಗೆ ಹೆಚ್ಚು ಮಹತ್ವ ನೀಡುತ್ತಿವೆ. ಅದರಿಂದಾಗಿ ಸಾಮಾಜಿಕ ಜಾಲತಾಣಗಳಿಂದ ಉಂಟಾಗುವ ದುಷ್ಪರಿಣಾಮ ಗಳು ಇನ್ನೂ ಹೆಚ್ಚಾಗಿವೆ. ಅದೇ ವೇಳೆ, ಸಾಮಾಜಿಕ ಜಾಲತಾಣಗಳ ಮೂಲಕ ಅತ್ಯುತ್ತಮ ವಿಚಾರಗಳನ್ನೂ ಚಿಂತನೆಗಳನ್ನೂ ಕಲೆಹಾಕಿದ ಅಸಂಖ್ಯ ಉದಾಹರಣೆಗಳು ಕೂಡ ಇವೆ. ಅನೇಕ ಪ್ರತಿಭೆಗಳು ಇಲ್ಲಿಂದಾಗಿ ಬೆಳಕಿಗೆ ಬಂದಿವೆ.
ಬಹಳಷ್ಟು ಜನರು ಸೋಷಿಯಲ್ ಮೀಡಿಯಾಗಳನ್ನು ರಚನಾತ್ಮಕ ಉದ್ದೇಶಗಳಿಗೇ ಬಳಸಿಕೊಂಡಿದ್ದಾರೆ. ಇತ್ತೀಚಿನ ಉದಾಹರಣೆ ಯೆಂದರೆ ದೆಹಲಿಯ ಬಾಬಾ ಕಾ ಢಾಬಾ ಪ್ರಕರಣ. ಢಾಬಾ ನಡೆಸುತ್ತಿದ್ದ ಎಂಭತ್ತು ವರ್ಷ ದಾಟಿದ ದಂಪತಿಯೊಂದು ತಮ್ಮ ಕಷ್ಟವನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಾಗ ಅದು ವೈರಲ್ ಆಗಿ ಅವರಿಗೆ ದೊಡ್ಡ ಪ್ರಮಾಣದಲ್ಲಿ ನೆರವು ಹರಿದು ಬಂದಿತ್ತು. ನಾಸಿಕ್‌ನಲ್ಲಿ ಫೇಸ್ ಬುಕ್ ಸ್ನೇಹಿತರ ಗುಂಪೊಂದು ಹಣ ಸಂಗ್ರಹಿಸಿ, ಬೆಟ್ಟಗುಡ್ಡಗಳ ಮೇಲಿರುವ ಒಂದು ಡಜನ್‌ಗೂ ಹೆಚ್ಚು ಹಳ್ಳಿಗಳಿಗೆ ನೀರಿನ ಪೈಪ್ ಲೈನ್ ಎಳೆದು ವಾಟರ್ ಟ್ಯಾಂಕರ್‌ನಲ್ಲಿ ನೀರು ತರಿಸಿಕೊಳ್ಳುವ ಕಷ್ಟದಿಂದ ಮುಕ್ತಿ ನೀಡಿತ್ತು.
ಸಾಮಾಜಿಕ ಜಾಲತಾಣಗಳು ಇಂದು ತಮ್ಮನ್ನು ಅರ್ಥಪೂರ್ಣವಾಗಿ ಎಲ್ಲ ರಂಗಗಳಲ್ಲಿ ತೊಡಗಿಸಿಕೊಳ್ಳುವ ರೀತಿಯಲ್ಲಿ ಬದಲಾಗಬೇಕು. ಇದನ್ನು ಸಾಧ್ಯವಾಗಿಸಲು ಇರುವ ಏಕೈಕ ದಾರಿಯೆಂದರೆ ಸಾಮಾಜಿಕ ಜಾಲತಾಣಗಳು ನಮ್ಮ ಬದುಕಿಗೆ ನಿಜ ವಾಗಿಯೂ ಇನ್ನಷ್ಟು ಅನುಕೂಲ ಮಾಡಿಕೊಡಬೇಕು. ಇದನ್ನು ಬೇಕಾದರೆ ಸೋಷಿಯಲ್ ಮೀಡಿಯಾ ಪ್ಲಸ್ ಎಂದು ಕರೆಯೋಣ. ಇದು ಸಾಧ್ಯವಾಗದೇ ಹೋದರೆ ಮುಖ್ಯವಾಹಿನಿಯ ಮಾಧ್ಯಮಗಳಿಗೆ ಇಂದು ಬಂದೊದಗಿರುವ ದುಸ್ಥಿತಿಯೇ ಮುಂದೊಂದು ದಿನ ಸಾಮಾಜಿಕ ಜಾಲತಾಣಗಳಿಗೂ ಬರಲಿದೆ.
ಮುಖ್ಯವಾಹಿನಿಯ ಮಾಧ್ಯಮಗಳು ಯಾವಾಗಲೂ ವಸ್ತುನಿಷ್ಠವಾಗಿ ವರ್ತಿಸುವುದರಲ್ಲಿ, ಜನರನ್ನು ಒಳಗೊಳ್ಳುವ ಮೂಲಕ ಅವರಲ್ಲಿ ವಿಶ್ವಾಸ ಮೂಡಿಸುವಲ್ಲಿ ಹಾಗೂ ಅವರನ್ನು ಶಿಕ್ಷಿತಗೊಳಿಸುವಲ್ಲಿ ವಿಫಲವಾಗಿವೆ. ಇದಕ್ಕಾಗಿ ಮಾಧ್ಯಮ ಸಂಸ್ಥೆಗಳನ್ನೇ ನೇರವಾಗಿ ದೂಷಿಸಬೇಕು. ಆದರೆ, ಈಗ ಇವುಗಳಿಗಿಂತ ಹೆಚ್ಚು ಪ್ರಜಾಸತ್ತಾತ್ಮಕವಾಗಿರುವ ಸಾಮಾಜಿಕ ಜಾಲತಾಣಗಳೂ ವಿಫಲ ವಾದರೆ ನಾವೆಲ್ಲರೂ ಅದಕ್ಕೆ ಹೊಣೆಗಾರರಾಗುತ್ತೇವೆ. ಹೀಗಾಗಿ ಸೋಷಿಯಲ್ ಮೀಡಿಯಾ ಪ್ಲಸ್‌ಗಾಗಿ ಒಂದು ಜನಾಂದೋಲನ ಕಡ್ಡಾಯವಾಗಿ ಆರಂಭವಾಗಬೇಕಿದೆ!