Sunday, 8th September 2024

ತಿಗಣೆಯೂ ಇಲ್ಲ, ಟವೆಲ್ಲೂ ಇಲ್ಲ; ಟವರ್‌ ಇದೆಯಲ್ಲ !

ವಿದೇಶವಾಸಿ

dhyapaa@gmail.com

ಅತಿ ಹೆಚ್ಚು ವಿದೇಶಿ ಪ್ರವಾಸಿಗರನ್ನು ಸೆಳೆಯುವ ದೇಶ ಯಾವುದು? ಅಮೆರಿಕವೂ ಅಲ್ಲ, ಇಂಗ್ಲೆಂಡೂ ಅಲ್ಲ, ಸಿಂಗಾಪುರ, ಥೈಲೆಂಡ್, ಊಹೂಂ, ಯಾವುದೂ
ಅಲ್ಲ. ವಿಶ್ವದ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ದೇಶ ಎಂದರೆ ಫ್ರಾನ್ಸ್.

ವಿಶ್ವಸಂಸ್ಥೆಯ ಪ್ರಕಾರ, ೨೦೧೦ ರಿಂದ ಪ್ರತಿ ವರ್ಷ ಸುಮಾರು ಏಳೂಮುಕ್ಕಾಲು ಕೋಟಿ ಜನ ಫ್ಯಾನ್ಸ್‌ಗೆ ಭೇಟಿ ನೀಡುತ್ತಾರೆ. ಕೋವಿಡ್ ಒಕ್ಕರಿಸುವ
ಮೊದಲು, ಅಂದರೆ ೨೦೧೯ರಲ್ಲಿ ಬರೊಬ್ಬರಿ ಹತ್ತು ಕೋಟಿ ಜನ ಈ ದೇಶಕ್ಕೆ ಬಂದು ಹೋಗಿದ್ದಾರಂತೆ. ಅದರಲ್ಲೂ ಶೇಕಡಾ ಮೂವತ್ತರಷ್ಟು ಜನ ಅಲ್ಲಿರುವ
ಡಿಸ್ನಿ ಲ್ಯಾಂಡ್‌ಗೆ ಹೋಗಿ ಬಂದರೆ, ಶೇಕಡಾ ಹತ್ತಕ್ಕೂ ಹೆಚ್ಚು ಜನ ಐಫೆಲ್ ಟಾವರ್ ಕಂಡು ಬರುತ್ತಾರಂತೆ. ಕೇವಲ ಪ್ರೇಕ್ಷಣೀಯ ಸ್ಥಳಗಳಿಗಷ್ಟೇ ಅಲ್ಲ, ಫ್ಯಾಷನ್ ಅಥವಾ ಸೌಂದರ್ಯಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲೂ ಸಾಕಷ್ಟು ಹೆಸರು ಮಾಡಿರುವುದು ಫ್ರಾನ್ಸ್ ದೇಶಕ್ಕೆ ಇರುವ ಪ್ಲಸ್ ಪಾಯಿಂಟ್.

ಪರ್ಫ್ಯೂಮ್ ಎಂದರೆ ಮೊದಲು ನೆನಪಾಗುವುದು ಫ್ರಾನ್ಸ್. ಶನೆಲ, ಕ್ಲೋಯಿ, ಲ್ಯಾಂಕಮ, ನೀನಾ ರಿಚ್ಚಿ, ಕ್ರಿಷ್ಟಿಯಾನ್ ಡಿಯೋರ್‌ನಂತಹ ಪರ್ಫ್ಯೂಮ್, ಲೂಯಿ ವಿಟ್ಟೋ, ಜಿವಾನ್ಶಿಯಂತಹ ಬ್ಯಾಗ್, ಖಾರ್ಟಿಯೆ ಕನ್ನಡಕ, ವೈಎಸ್‌ಎಲ್ (ಇವ್ ಸೈನ್ ಲೋನ್) ಚರ್ಮದ ಉತ್ಪನ್ನ, ಲೋ’ರೆಯಾಲ, ಗಾರ್ನಿಯೇ ಸೌಂದರ್ಯ
ವರ್ಧಕಗಳು, ಎಲ್ಲವೂ ಫ್ರಾನ್ಸ್ ಉತ್ಪಾದನೆಗಳೇ. ಕಣ್ಣು-ಮೈ ಎರಡಕ್ಕೂ ಭರಪೂರು ವಸ್ತು ಈ ದೇಶದಲ್ಲಿ ಲಭ್ಯ ಎಂದರೆ ಕೇಳಬೇಕೆ? ಇತ್ತೀಚೆಗೆ ಯುರೋಪ್ ಮತ್ತು ಯುಕೆ ಪ್ರವಾಸಕ್ಕೆ ಹೋಗುವುದು ಎಂದು ನಿರ್ಧರಿಸಿದಾಗ ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್‌ಗೂ ಹೋಗಬೇಕೆಂದು ನಿರ್ಣಯಿಸಿ ಆಗಿತ್ತು. ಅದಕ್ಕೆ ತಕ್ಕಂತೆ ಯಾವ ಮಾರ್ಗದಲ್ಲಿ ಹೋಗಬೇಕು, ಎಲ್ಲಿ ಉಳಿದುಕೊಳ್ಳಬೇಕು ಎಂಬ ವಿಷಯಗಳೂ ನಿರ್ಧಾರಗೊಂಡಿದ್ದವು.

ಲಂಡನ್ನಲ್ಲಿರುವ ಸ್ನೇಹಿತರೂ, ‘ಕನ್ನಡಿಗರುಯುಕೆ’ ಸಂಘದ ಅಧ್ಯಕ್ಷರೂ ಆದ ಗಣಪತಿ ಭಟ್ ಅವರ ಕಾರಿನಲ್ಲಿ ಯುರೋ ಟನೆಲ್ ಮೂಲಕ ಪ್ಯಾರಿಸ್‌ಗೆ ಹೋಗುವುದು, ಅಲ್ಲಿ ಎರಡು ದಿನ ಇದ್ದು, ನಂತರ ಬೆಲ್ಜಿಯಮ್‌ಗೆ ಭೇಟಿ ಕೊಟ್ಟು ಲಂಡನ್‌ಗೆ ಹಿಂತಿರುಗುವುದು ಎಂದೂ ನಿರ್ಧರಿಸಿದ್ದೆವು. ಜತೆಯಲ್ಲಿ ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ್ ಭಟ್ ಮತ್ತು ಇನ್ನೊಬ್ಬ ಸ್ನೇಹಿತರು, ಒಟ್ಟೂ ನಾಲ್ಕು ಜನರ ಪುಟ್ಟ ಟೋಳಿ. ‘ಪ್ಯಾರಿಸ್ ಪ್ರವಾಸಕ್ಕೆ ಜಯವಾಗಲಿ’ ಎಂದು ನಮ್ಮನಮ್ಮೋಳಗೇ ಹೇಳಿಕೊಳ್ಳುತ್ತಾ ‘ಯೂರೋ ಟನೆಲ’ ತಲುಪಿದೆವು.

ಯೂರೋ ಟನೆಲ್ (ಇದನ್ನು ಚಾನೆಲ್ ಟನೆಲ್ ಎಂದೂ ಹೇಳುವುದಿದೆ) ಕುರಿತು ಸಂಕ್ಷಿಪ್ತವಾಗಿ ಹೇಳುವುದಾದರೆ, ಯುನೈಟೆಡ್ ಕಿಂಗ್ಡಮ್ ಮತ್ತು ಫ್ರಾನ್ಸ್ ದೇಶವನ್ನು ಬೇರ್ಪಡಿಸಿದ ಇಂಗ್ಲಿಷ್ ಕಡಲ್ಗಾಲುವೆಯ ತಳದಲ್ಲಿ ನಿರ್ಮಿಸಿದ ಸುರಂಗ ಮಾರ್ಗ. ಈ ಕಡಲನ್ನು ದಾಟಲು ಒಂದು ಕಡೆ -ರ್ರ‍ಿ ಇದ್ದರೆ ಇನ್ನೊಂದು ಕಡೆ ಈ ಸುರಂಗವಿದೆ. ಇಂಗ್ಲೆಂಡ್‌ನ ಫೋಕ್‌ಸ್ಟನ್‌ನಿಂದ ಫ್ರಾನ್ಸ್‌ನ ಕಾಲೈಸ್ ನಡುವೆ ಸುಮಾರು ಐವತ್ತು ಕಿಲೋಮೀಟರ್ ಉದ್ದದ ಈ ಸುರಂಗ ನಿರ್ಮಿಸಲು ಸುಮಾರು ಎಂಟು ವರ್ಷಗಳೇ ಹಿಡಿದವು. ೧೯೯೪ ರಿಂದ ಸುರಂಗ ಕಾರ್ಯಾರಂಭ ಮಾಡಿದ್ದು, ರೈಲು ಸಂಚಾರ ಆರಂಭವಾಗಿದೆ.

ಹೌದು, ಈ ಸುರಂಗದಲ್ಲಿ ರೈಲು ಸಂಚಾರ ಮಾತ್ರ ಇದೆಯೇ ಹೊರತು, ಕಾರು, ಬಸ್ಸು ಅಥವಾ ವಾಹನ, ಜನ ಸಾಗಣೆಯ ಇನ್ಯಾವುದೇ ವಾಹನ ಸಂಚರಿಸುವುದಿಲ್ಲ. ಆದಾಗ್ಯೂ, ಇಪ್ಪತ್ತನೆಯ ಶತಮಾನ ತಂತ್ರಜ್ಞಾನದ ಸಾಧನೆಯ ಪುಟದಲ್ಲಿ ಇದು ಮಹತ್ತರವಾದ ಸ್ಥಾನ ಪಡೆದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಈ ರೈಲು ತನ್ನೊಳಗೆ ಕಾರನ್ನೂ ತುಂಬಿಸಿಕೊಂಡು ಸಂಚರಿಸುತ್ತದೆ. ಏಕಕಾಲದಲ್ಲಿ ನೂರ ಇಪ್ಪತ್ತು ಕಾರನ್ನು (ಅದರೊಳಗಿನ ಜನರ
ಸಹಿತ) ಹೊತ್ತು ಗಂಟೆಗೆ ಸುಮಾರು ನೂರ ಅರವತ್ತು ಕಿಲೋಮೀಟರ್ ವೇಗದಲ್ಲಿ ಸಂಚರಿಸಿ, ಅರ್ಧ ಗಂಟೆಯಲ್ಲಿ ಒಂದು ದಡದಿಂದ ಇನ್ನೊಂದು ದಡ ತಲುಪುತ್ತದೆ. ಅದರ ಕುರಿತಂತೆ ತಂತ್ರಜ್ಞಾನದ ಅಥವಾ ಹೆಚ್ಚಿನ ಮಾಹಿತಿ ಕುತೂಹಲಕಾರಿಯೇ ಹೌದಾದರೂ ಈಗ ಬೇಡ.

ಕಾಲೈಸ್‌ನಿಂದ ಪ್ಯಾರಿಸ್‌ಗೆ ಹೋಗುವ ಮುನ್ನೂರು ಕಿಲೋಮೀಟರ್ ದಾರಿಯ ಇಕ್ಕೆಲಗಳಲ್ಲೂ ಹಸಿರೋ ಹಸಿರು. ಅದೂ ಸುಮ್ಮನೆ ಹುಲ್ಲು ಹಾಸಲ್ಲ. ಒಂದು ಇಂಚೂ ಬರಡು ಬಿಡದೆ ಬೆಳೆದ ತರಕಾರಿ, ಹೂವು-ಹಣ್ಣಿನ ತೋಟ, ಧಾನ್ಯದ ತೆನೆ ಹೊತ್ತು ನಿಂತ ಗದ್ದೆ. ಸುಮಾರು ಮೂರು ಗಂಟೆಯ ಪ್ರಯಾಣದ ನಂತರ ಪ್ಯಾರಿಸ್‌ನ ‘ಎಕ್ಸೆಕುಟಿವ್ ಹೊಟೇಲ್ ತಲುಪಿದೆವು. ಅಲ್ಲಿ ಎರಡು ರಾತ್ರಿ ಉಳಿಯಲು, ಒಂದು ರೂಮಿನಲ್ಲಿ ಇಬ್ಬರು ಉಳಿಯುವಂತೆ, ಎರಡು ರೂಮ್ ಬುಕ್ ಆಗಿತ್ತು. ರೂಮಿನ ಒಳಕ್ಕೆ ಹೋಗುತ್ತಿದ್ದಂತೆ ನಾನು ಮೊದಲು ಹುಡುಕಿದ್ದು ತಿಗಣೆಯನ್ನು!

ಇತ್ತೀಚೆಗೆ ಪ್ಯಾರಿಸ್ ಹೆಚ್ಚು ಚರ್ಚೆಯಾದದ್ದು ತಿಗಣೆಯಿಂದ. ಪ್ಯಾರಿಸ್‌ನಲ್ಲಿ ಹತ್ತರಲ್ಲಿ ಒಂದಾದರೂ ಹೊಟೇಲ್ ಅಥವಾ ಮನೆಯಲ್ಲಿ ತಿಗಣೆ ಕಂಡುಬರುತ್ತಿದೆ, ಮನೆಯಲ್ಲಷ್ಟೇ ಅಲ್ಲ, ರೈಲು, ಮೆಟ್ರೋ, ಬಸ್ಸು, ಚಿತ್ರಮಂದಿರ, ಈಗ ಆಸ್ಪತ್ರೆಯನ್ನೂ ತಲುಪಿವೆ. ಔಷಧಕ್ಕೂ ಜಗ್ಗದೆ, ಪ್ರತಿರೋಧ ಒಡ್ಡಿ ಇವುಗಳ ಸಂತತಿ ಬೆಳೆಯುತ್ತಿದೆ. ಇತ್ಯಾದಿ ಸುದ್ದಿಗಳು ಎಲ್ಲಕಡೆ ಹರಿದಾಡುತ್ತಿತ್ತು. ಅಷ್ಟೊಂದು ಪ್ರವಾಸಿಗರು ಬರುತ್ತಾರೆ ಎಂದರೆ, ಊಹಿಸಬಹುದಾದದ್ದೇ ಎನ್ನಿ. ಆತಂಕಕಾರಿ ವಿಷಯ ಎಂದರೆ, ತಿಗಣೆಗಳು ಪ್ರವಾಸಿಗರ ಬ್ಯಾಗು, ಬಟ್ಟೆಯೊಳಗೆ ಸೇರಿಕೊಂಡು ಬೇರೆ ದೇಶಗಳಿಗೂ ತಲುಪುತ್ತಿವೆ ಎನ್ನುವುದು.

ವಿದೇಶದಿಂದ ನೆನಪಿನ ಕಾಣಿಕೆ ತರುವುದಾದರೆ ಹೌದು, ತಿಗಣೆ ತಂದರೆ ಬೈಗುಳಾರ್ಚನೆ ನಿಶ್ಚಿತ, ಖಂಡಿತ. ಒಟ್ಟಿನಲ್ಲಿ ಪ್ಯಾರಿಸ್ ನ ತಿಗಣೆಯ ಸುದ್ದಿ ಐಫೆಲ್ ಟಾವರ್ಗಿಂತ ಹೆಚ್ಚು ಎತ್ತರದಲ್ಲಿತ್ತು. ಅದೃಷ್ಟವಶಾತ್ ನಮ್ಮ ರೂಮಿನಲ್ಲಿ ತಿಗಣೆಯ ಯಾವ ಸುಳಿವೂ ಇರಲಿಲ್ಲ. ಆದರೆ ಒಂದು ಗೋಡೆ ವಿಚಿತ್ರವಾಗಿತ್ತು.
ಒಮ್ಮೊಮ್ಮೆ ಹಾಗಾಗುತ್ತದೆ. ಅತಿಯಾದ ಅಲಂಕಾರ ಕೆಲವೊಮ್ಮೆ ಅನಾನುಕೂಲಕ್ಕೆ ಕಾರಣವಾಗುತ್ತದೆ. ನಮ್ಮ ರೂಮಿನ ಒಂದು ಗೋಡೆ ಲಂಬವಾಗಿರದೆ ಸ್ವಲ್ಪ ಓರೆಯಾಗಿತ್ತು. ಅದನ್ನು ಕಟ್ಟುವಾಗಲೇ, ಬೇಕಂತಲೇ ಹಾಗೆ ಕಟ್ಟಿದ್ದು. ಪಾಶ್ಚಿಮಾತ್ಯ ದೇಶಗಳಲ್ಲಿ ಅದೂ ಒಂದು ಸ್ಟೈಲ್.

ಅದರಿಂದ ಕಟ್ಟಡದ ಅಂದ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಸರಿಯಾಗಿ ಯೋಚಿಸಿ ಕಟ್ಟಿದರೆ ಯಾವ ತೊಂದರೆಯೂ ಇಲ್ಲ. ನಾವು ಉಳಿದ ಹೊಟೇಲು ಮಾತ್ರ ಅದ್ಯಾವ ಇಂಜಿನಿರ್ಯ ತಲೆ ಓಡಿಸಿದನೋ ಗೊತ್ತಿಲ್ಲ, ಬಾಗಿಲು ತೆಗೆದು ಮಂಚದ ಒಂದು ಕಡೆ ಬರುವವರೆಗೆ ಸರಿ, ಇನ್ನೊಂದು ಕಡೆ ಹೋಗಬೇಕೆಂದರೆ ಅಥವಾ ಸ್ನಾನಕ್ಕೆ ಹೋಗಬೇಕೆಂದರೆ ಬಗ್ಗಿ ನಡೆದು ಹೋಗಬೇಕಿತ್ತು. ಸಾಲದು ಎಂಬಂತೆ ಅದೇ ಗೋಡೆಗೆ ಟಿವಿ ಬೇರೆ ನೇತು ಹಾಕಿದ್ದರು. ನೆಟ್ಟಗೆ ನಡೆದರೆ ಟಿವಿ ನಮ್ಮ
ಹೆಗಲಿಗೆ ಬಡಿಯುತ್ತಿತ್ತು, ಗೋಡೆ ತಲೆಗೆ ತಾಗುತ್ತಿತ್ತು. ಪ್ಯಾರಿಸ್ನಲ್ಲಿ ತಗ್ಗಿ-ಬಗ್ಗಿ ನಡೆಯಬೇಕು ಎಂಬುದನ್ನು ಸಾಂಕೇತಿಕವಾಗಿ ಹೇಳಿರಬೇಕು ಎಂದು ನಕ್ಕು
ಸಮ್ಮನಾದೆವು. ಒಂದು ಸಮಾಧಾನವೆಂದರೆ, ಕಿಟಕಿಯಿಂದ ಸುಂದರವಾದ ಪ್ಯಾರಿಸ್ ನಗರ ಕಾಣುತ್ತಿತ್ತು.

ಸ್ನಾನಕ್ಕೆಂದು ಹೋದಾಗ ಒಂದು ಆಶ್ಚರ್ಯ ಕಾದಿತ್ತು. ಅಲ್ಲಿ ಒಂದು ಸ್ನಾನದ ಟವೆಲ, ಒಂದು ಕೈ ಒರೆಸುವ ಟವೆಲ್ ಮತ್ತು ಒಂದು ನೆಲಕ್ಕೆ ಹಾಸುವ ಟವೆಲ್ ಇತ್ತು. ಸಾಮಾನ್ಯವಾಗಿ ಯಾವ ಹೊಟೇಲಿಗೆ ಹೋದರೂ, ಇಬ್ಬರು ಉಳಿಯುವ ರೂಮಿನಲ್ಲಿ ಒಂದು ಜೊತೆ ಟವೆಲ್‌ನ ಸೆಟ್ ಇರುತ್ತದೆ. ಒಂದು ಸೆಟ್‌ನಲ್ಲಿ ಸ್ನಾನಕ್ಕೆ, ಕೈ ಒರೆಸಲು ಮತ್ತು ಮುಖ ಒರೆಸಲು, ಹೀಗೆ ಮೂರು ಬೇರೆ ಬೇರೆ ಗಾತ್ರದ ಟವೆಲ್ ಇರುತ್ತದೆ. ಅಂದು ರಾತ್ರಿ ನಾವು ಐಫೆಲ್ ಟಾವರ್ ನೋಡಲು ಹೊರಟ ಕಾರಣ ಟವೆಲ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಮಾರನೆ ದಿನ ಬೆಳಿಗ್ಗೆ ರಿಸೆಪ್ಷನ್‌ನಲ್ಲಿ ಕೇಳಿದಾಗ ‘ಟವೆಲ್ ಬರುವಾಗ ಹತ್ತುಗಂಟೆಯಾಗುತ್ತದೆ’ ಎಂದರು.

ನಾವು ಲಂಡನ್‌ನಿಂದ ಹೊರಟು, ಪುನಃ ಲಂಡನ್ನಿಗೇ ಹಿಂತಿರುಗಿ ಬರಬೇಕಾದದ್ದರಿಂದ ನಮ್ಮ ನಮ್ಮ ಟವೆಲನ್ನು ಲಂಡನ್ ನಲ್ಲಿಯೇ ಬಿಟ್ಟು ಹೋಗಿದ್ದೆವು. ಸಾಮಾನ್ಯವಾಗಿ ನಾವೆಲ್ಲರೂ ಎಲ್ಲಾ ಪ್ರವಾಸಕ್ಕೆ ಹೋಗುವುದಾದರೂ ಒಂದು ಟವೆಲ್ ಇಟ್ಟುಕೊಂಡೇ ಹೋಗುವವರು; ಅಂದು ಲಂಡನ್ನಲ್ಲಿಯೇ ಬಿಟ್ಟು ಹೋಗಿದ್ದೆವು. ಫ್ಯಾಷನ್ನಗರಿ ಪ್ಯಾರಿಸ್‌ನಲ್ಲಿ ಟವೆಲ್‌ಗೆ ಬರ ಬರಬಹುದೆಂಬ ಕಿಂಚಿತ್ ಅನುಮಾನವೂ ಯಾರ ಮನಸ್ಸಿನಲ್ಲಿಯೂ ಇರಲಿಲ್ಲ. ಇರಲಿ, ಇನ್ನು ಟವೆಲ್ ಬರುವ ತನಕ ಕಾಯುವುದು ಸಮಯ ವ್ಯರ್ಥ ಎಂದು ಇದ್ದ ಎರಡು ಟವೆಲ್‌ನಲ್ಲಿಯೇ ಅಡ್ಜಸ್ಟ್ ಮಾಡಿಕೊಂಡು ಸ್ನಾನ ಮುಗಿಸಿ ಹೊರ ನಡೆದೆವು.

ಅಂದು ರಾತ್ರಿ ರೂಮಿಗೆ ಬಂದು ನೋಡಿದರೆ ಒಂದೂ ಟವೆಲ್ ಇರಲಿಲ್ಲ. ನೆಲಕ್ಕೆ ಹಾಸುವ ಟವೆಲ್ ಸಮೇತ ಬೆಳಿಗ್ಗೆ ಉಪಯೋಗಿಸಿದ್ದನ್ನೂ ಎತ್ತುಕೊಂಡು
ಹೋಗಿದ್ದರು. ಮತ್ತೆ ರಿಸೆಪ್ಷನ್‌ನಲ್ಲಿ ಕೇಳಿದಾಗ ಆಸಾಮಿ ‘ಟವೆಲ್ ಇಲ್ಲ’ ಎಂದು ಕೈ ತಿರುಗಿಸಿದ. ‘ಹೊಟೇಲ್ ಮತ್ತು ಟವೆಲ್ ಪೂರೈಸುವ ಕಂಪನಿಯ ನಡುವೆ ಜಗಳವಾದದ್ದರಿಂದ ಟವೆಲ್ ತಂದುಕೊಡುವುದನ್ನು ನಿಲ್ಲಿಸಿದ್ದಾರೆ, ನಾಳೆ ಬೆಳಿಗ್ಗೆಯೂ ಬರುವುದಿಲ್ಲ’ ಎಂದ. ಹೊಟೇಲಿನ ಬಟ್ಟೆ ಒಗೆಯಲು ಲಾಂಡ್ರಿಯವರನ್ನು
ನೇಮಿಸಿಕೊಳ್ಳುವುದು ಗೊತ್ತಿತ್ತು. ಆದರೆ ಟವೆಲ್ ಪೂರೈಸಲೆಂದೇ ಒಂದು ಕಂಪನಿ ಇರುತ್ತದೆ ಎಂದು ಮೊದಲ ಬಾರಿ ಗೊತ್ತಾಯಿತು.

‘ಟವೆಲ್ ಇಲ್ಲದಿದ್ದರೆ ಕಷ್ಟ, ನಮಗೆ ಬೇಕೇ ಬೇಕು ಎಂದು ಹೇಳಿದೆ. ಆತ ಟವೆಲ್ ಬದಲು ಅದಕ್ಕಿಂತಲೂ ದೊಡ್ಡದಾದ ಬೆಡ್ ಶೀಟ್ ನೀಡುವುದಾಗಿ ಹೇಳಿದ. ಬೇರೆ
ಉಪಾಯವಿಲ್ಲದೆ ಒಪ್ಪಿzಯಿತು. ಮಹಾಶಯ ಒಂದು ಬೆಡ್‌ಶೀಟ್ ಕೊಟ್ಟ. ನಾವು ಇಬ್ಬರಿದ್ದೇವೆ, ಇನ್ನೊಂದು ಕೊಡು ಎಂದಿದ್ದಕ್ಕೆ, ಇದು ಟವೆಲ್‌ನ ನಾಲ್ಕು ಪಟ್ಟು ದೊಡ್ದದಿದೆ, ಇಬ್ಬರು ಆರಾಮದಲ್ಲಿ ಮೈ ಒರೆಸಿಕೊಳ್ಳಬಹುದು ಎಂದಾಗ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಎರಡು ಬೇಕೇ ಬೇಕು ಎಂದು ಹಠ ಹಿಡಿದ ನಂತರ ಇನ್ನೊಂದನ್ನು ಕೊಟ್ಟ. ಅಂತೂ ಪ್ಯಾರಿಸ್‌ನಲ್ಲಿ ಬೆಡ್‌ಶೀಟ್‌ನಿಂದ ಮೈ ಒರೆಸಿಕೊಂಡಾಯ್ತು.

ಅದೆಲ್ಲ ಸರಿ, ಬೆಳಗಿನ ತಿಂಡಿಯಾದರೂ ಸರಿಯಾಗಿತ್ತೇ ಎಂದರೆ ಅದೂ ಇಲ್ಲ. ಆ ಹೊಟೇಲಿನಲ್ಲಿ ಇದ್ದದ್ದೇ ನಾಲ್ಕು ಐಟಂ. ಕಾನ್ -ಕ್ಸ್, ಕ್ರೊಸೆಂಟ್, ಬ್ರೆಡ್, ಕೇಕ್. ಅದರಲ್ಲಿ ಯಾವುದಾದರೂ ಖಾಲಿಯಾದರೆ, ಕೂಡಲೇ ತಂದು ಹಾಕುತ್ತಿರಲಿಲ್ಲ. ಅದಕ್ಕಾಗಿಯೇ ಕಾಯಬೇಕಿತ್ತು, ಒಮ್ಮೆ ತಂದರೂ ರೇಶನ್ ಅಂಗಡಿಯಂತೆ ಲೆಕ್ಕ ಮಾಡಿ ತಂದು ಇಟ್ಟಂತೆ ಇಡುತ್ತಿದ್ದರು. ಒಟ್ಟಾರೆ ಪ್ಯಾರಿಸ್ ನಲ್ಲಿ ತಿಂಡಿಯೂ ಇಲ್ಲ, ಟವೆಲ್ಲೂ ಇಲ್ಲ, ಸಮಾಧಾನವೆಂದರೆ ತಿಗಣಿಯೂ ಇಲ್ಲ; ಆದರೆ ಐಫೆಲ್ ಟಾವರ್ ಇದೆಯಲ್ಲ ಎನ್ನುತ್ತಾ ಪ್ಯಾರಿಸ್ ಸುತ್ತಿದೆವು. ಆಡು ಭಾಷೆಯಲ್ಲಿ ಹೇಳುವುದಾದರೆ, ‘ಸಖತ್ ಎಂಜಾಯ್ ಮಾಡಿದೆವು, ಪ್ಯಾರಿಸ್‌ನ ಚಿಂದಿ ಉಡಾಯಿಸಿದೆವು’.

ಊರು, ದೇಶ ಎಲ್ಲವೂ ಇಷ್ಟವಾಯಿತು. ಹೊಟೇಲಿನ ಅಪಸವ್ಯಗಳನ್ನೆಲ್ಲ ಅಲ್ಲಿಯೇ ಬಿಟ್ಟು ಬಂದಿದ್ದೇವಲ್ಲ! ಪ್ರವಾಸಕ್ಕೆ ಹೋದಾಗ ಕೆಲವರು ಸಣ್ಣ ಸಣ್ಣ
ವಿಷಯಗಳಿಗೇ ಸಿಟ್ಟುಮಾಡಿಕೊಳ್ಳುವುದು, ಸ್ಥಿಮಿತ ಕಳೆದುಕೊಳ್ಳುವುದು, ತಲೆ ಕೆಡಿಸಿಕೊಳ್ಳುವುದೂ ಇದೆ. ಅಲ್ಲಿ ಕೆಲವರು ತಕರಾರನ್ನೂ ಮಾಡುತ್ತಿದ್ದರು. ಆದರೆ
ನಮ್ಮಲ್ಲಿ ಯಾರಿಗೂ ಈ ವಿಷಯಗಳೆಲ್ಲ ಅಸಹನೀಯ ಎಂದು ಅನಿಸಲೇ ಇಲ್ಲ. ಈ ಕ್ಷಣಗಳನ್ನೆಲ್ಲ ನಾವು ಹಗುರವಾಗಿ ತೆಗೆದುಕೊಂಡು ನಕ್ಕು ಇನ್ನಷ್ಟು ಹಗುರಾಗುತ್ತಿದ್ದೆವು. ಕಾರಣ ಏನು ಗೊತ್ತೇ? ನಮಗೆ ಊರು ಸುತ್ತುವುದು, ಪ್ರೇಕ್ಷಣೀಯ ಸ್ಥಳಗಳನ್ನು ಕಾಣುವುದು, ಅಲ್ಲಿಯ ಆಹಾರ ಸೇವಿಸುವುದು, ಇತ್ಯಾದಿಗಳು
ಪ್ರಮುಖವಾಗಿದ್ದವೇ ವಿನಃ, ಬೆಳಗ್ಗೆಯ ತಿಂಡಿ, ಟವೆಲ, ರೂಮಿನ ಗೋಡೆ, ಯಾವುದೂ ಮುಖ್ಯವಾಗಿರಲಿಲ್ಲ. ಅವುಗಳಲ್ಲಿ ಯಾವುದೂ ನಾವು ಸರಿಪಡಿಸಬಹು ದಾದಂತಹ ಸಮೆಸ್ಯೆ ಆಗಿರಲಿಲ್ಲ.

ನಾವು ಎಷ್ಟೇ ತಲೆ ಕೆಡಿಸಿಕೊಂದರೂ, ಜಗಳ ಮಾಡಿದರೂ, ಆ ಸಮಸ್ಯೆ ಬಗೆಹರಿಯುತ್ತಿರಲಿಲ್ಲ. ಆದ್ದರಿಂದ ಸಮಸ್ಯೆಗೆ ನಾವೇ ಹೊಂದಿಕೊಂಡಿದ್ದೆವು. ಪ್ರವಾಸದಲ್ಲಿ ಇಂತಹ ಸಂಗತಿಗಳು ಸಾಮಾನ್ಯ. ಒಂದೊಂದು ಕಡೆ ಒಂದೊಂದು ಬಗೆಯ ಶಾವರ್, ಎಷ್ಟೋ ಬಾರಿ ಅದು ಹೇಗೆ ಕೆಲಸ ಮಾಡುತ್ತದೆ ಎಂದು ಅರ್ಥವಾಗುವು ದಕ್ಕೇ ಅರ್ಧ ಗಂಟೆ ಹಿಡಿಯುತ್ತದೆ. ಶಾವರ್ ಸರಿ ಇತ್ತು ಎಂದುಕೊಳ್ಳಿ, ಕನ್ನಡಕ ಹಾಕಿದರೂ ಓದಲಾಗದಷ್ಟು ಸಣ್ಣ ಅಕ್ಷರದಲ್ಲಿ ಬರೆದ ಶಾವರ್ ಜೆಲ, ಶಾಂಪೂ,
ಕಂಡೀಷನರ್, ಲೋಷನ್ ಡಬ್ಬಗಳು. ಕನ್ನಡಕ ಹಾಕಿ ಸ್ನಾನ ಮಾಡುವವರು ಯಾರಾದರೂ ಇದ್ದಾರೆಯೇ? ಕೆಲವು ಹೊಟೇಲಿನವರು ಇಂತಹ ಸಾಮಾನ್ಯ ಜ್ಞಾನವನ್ನೂ ಬಳಸುವುದಿಲ್ಲ. ಆದರೆ ಅವರು ಮಾಡುವ, ಅಥವಾ ಅವರಿಂದ ಆಗುವ ತಪ್ಪಿಗೆ ನಾವು ತಲೆ ಕೆಡಿಸಿಕೊಂಡು ಕುಳಿತರೆ, ನಮ್ಮ ಇಡೀ ದಿನ
ಕಿತ್ತುಕೊಂಡು ಹೋಗುವುದರಲ್ಲಿ ಅನುಮಾನವಿಲ್ಲ.

ಅಷ್ಟಕ್ಕೂ ನಾವು ಉಳಿದುಕೊಳ್ಳುತ್ತಿರುವ ಸ್ಥಳ ನಮ್ಮ ಮನೆಯಲ್ಲ. ನಾವೇನು ತಿಂಗಳುಗಟ್ಟಲೆ ಅಲ್ಲಿ ಉಳಿಯುವುದೂ ಇಲ್ಲ. ಒಂದೆರಡು ದಿನಕ್ಕೋಸ್ಕರ ಉಳಿಯುವಾಗ, ಇಂಥವುಗಳನ್ನು ಸಹಿಸಿಕೊಂಡರೆ, ಅದೇ ಸವಿ ನೆನಪಾಗಿ ಉಳಿಯುತ್ತದೆ, ಮುಂದೊಂದುದಿನ ಹಾಸ್ಯದ, ನಗುವಿನ ವಸ್ತುವೂ ಆಗುತ್ತದೆ. ಯಾವುದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಕು ಎಂಬ ಅರಿವು ಇದ್ದರೆ, ಪ್ರವಾಸ ಹೆಚ್ಚು ಸಂತೋಷದಾಯಕವೂ, ಅವಿಸ್ಮರಣೀಯವೂ ಆಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!