Saturday, 14th December 2024

ಬದಲಾವಣೆಯಿಂದ ಪರಂಪರೆಗೆ ಕುಂದು ?

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ಸೂಕ್ಷ್ಮವಾಗಿ ಗಮನಿಸಿದರೆ, ಕೆಲವು ವಿಷಯಗಳು ನಿಮ್ಮ ಗಮನಕ್ಕೂ ಬಂದಿರಬಹುದು – ಹಬ್ಬಗಳ ಆಚರಣೆಯಲ್ಲಿ ಹಿಂದೆ ಇದ್ದ ಬದ್ಧತೆ, ಪರಂಪರೆಯನ್ನು ಕಾಯ್ದುಕೊಳ್ಳುವ ನಿಷ್ಠೆ ಇಂದು ಕಡಿಮೆಯಾಗುತ್ತಾ ಬಂದಿದೆಯೆ? ತಂತ್ರಜ್ಞಾನದ ಈ ದಿನಗಳಲ್ಲಿ ಇಂತಹ ಬದಲಾವಣೆ ಸಹಜ ಎಂದು ಹೇಳಬಹುದೆ?

ಪ್ರತಿವರ್ಷದಂತೆ ಈ ವರ್ಷವೂ ಯುಗಾದಿ ಬಂದಿದೆ. ಆದರೆ 2022ರ ಯುಗಾದಿಗೆ ತುಸು ವಿಶೇಷತೆಯಿದೆ – ಏನು ಅಂತ ಕೇಳ್ತೀರಾ? ಈ ಯುಗಾದಿಯಲ್ಲಿ ಜನರಿಗೆ ‘ಸ್ವಾತಂತ್ರ್ಯ’ ದೊರಕಿದೆ! 2020 ಮತ್ತು 2021ರ ಯುಗಾದಿ ದಿನಗಳಲ್ಲಿ ಕೋವಿಡ್ ಸೋಂಕಿನ ಭೂತ ನಮ್ಮ ದೇಶವನ್ನೇ ಕಾಡುತ್ತಿತ್ತು.

ಯಾರೂ ಸಹ ಮುಕ್ತವಾಗಿ ಹೊರಗೆ ಹೋಗುವಂತಿರಲಿಲ್ಲ, ಬೇವು – ಬೆಲ್ಲ ಪರಸ್ಪರ ಹಂಚಿ ಕೊಳ್ಳುವಂತಿರಲಿಲ್ಲ, ಯುಗಾದಿಗೆಂದು ಹೊರಗೆ ಹೋಗಿ ಬಟ್ಟೆ ಖರೀದಿಸಲೂ ಭಯವಿತ್ತು. ಅಂಗಡಿಗೆ ಹೋದರೆ, ಬೇರೆಯವರೊಂದಿಗೆ ಮಾತನಾಡಿದರೆ, ಎಲ್ಲಿ ವೈರಸ್ ಬಂದು
ಅಮರಿಕೊಂಡುಬಿಡುತ್ತದೋ ಎಂಬ ಭಯ. ಈ ವರ್ಷ, ಅದೃಷ್ಟವಶಾತ್ ನಮ್ಮ ದೇಶದಲ್ಲಿ ಕರೋನಾ ಭಯ ಕಡಿಮೆಯಾಗಿ, ವೈರಸ್ ನಿಯಂತ್ರಣಕ್ಕಾಗಿ ಸರಕಾರ ವಿಧಿಸಿರುವ ಕಟ್ಟುಪಾಡುಗಳು ಸಹ ಕಡಿಮೆಯಾಗಿವೆ. ಬೇವು ಬೆಲ್ಲವನ್ನು ನಾವೂ ತಿನ್ನಬಹುದು, ನೆರೆಹೊರೆ ಯವರಿಗೆ ಧೈರ್ಯದಿಂದ ಹಂಚಬಹುದು.

ಪಕ್ಕದ ಮನೆಯವರು ಮಾಡಿದ ಯುಗಾದಿ ಒಬ್ಬಟ್ಟನ್ನು ಪಡೆದು, ಸ್ವಾಹಾ ಮಾಡಬಹುದು, ಅವರೂ ನಮ್ಮ ಮನೆಯ ಒಬ್ಬಟ್ಟನ್ನು ಪಡೆಯಬಹುದು. ಅಷ್ಟರ ಮಟ್ಟಿಗೆ ನಾವೆಲ್ಲಾ ಇಂದು ಅದೃಷ್ಟವಂತರು. ಈ ‘ಅದೃಷ್ಟವಂತರು’ ಎಂಬ ಪದ ಏಕೆ ಬಳಸಿದೆ ಎಂದರೆ, 2020ರ ಎಪ್ರಿಲ್ ತಿಂಗಳನ್ನು ನೆನಪಿಸಿಕೊಳ್ಳಿ – ಮಾರ್ಚ್ ಕೊನೆಯ ವಾರ ಲಾಕ್‌ಡೌನ್ ಘೋಷಣೆ. ಕೋವಿಡ್-19 ವೈರಸ್ ಯಾವ ರೀತಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂಬ ಸ್ಪಷ್ಟತೆ ಇರಲಿಲ್ಲ. ಯಾರೂ ಹೊರಗೆಬರುವಂತಿಲ್ಲ ಎಂದು ಘೋಷಿಸಿ, ರೈಲು – ಬಸ್‌ ಗಳನ್ನು ಸಹ ಬಂದ್ ಮಾಡಿದ್ದರು. ಜನರು ಟಿವಿಗಳಲ್ಲಿ ಬರುವ ಸುದ್ದಿ ನೋಡಿ ಭಯಭೀತರಾಗಿದ್ದರು.

ಅಂತಹ ಸಂದರ್ಭದಲ್ಲಿ 2020ರ ಯುಗಾದಿಯನ್ನು ಆಚರಿಸಬೇಕಾಯಿತು. ಮನೆಯೊಳಗೇ ಬಂಧಿಯಾಗಿ ಅಲ್ಲೇ ಹಬ್ಬ ಆಚರಿಸಿ, ಅಲ್ಲೇ ಸಂಭ್ರಮಿಸುವ ಅನಿವಾರ್ಯತೆ. ಮನೆಯಿಂದ ಹೊರಹೋಗಿ ಬೇವಿನ ಎಲೆಯನ್ನೋ, ಹೂವನ್ನೋ ತರಲು ಸಹ ಅಂದು ಭಯವಿತ್ತು.
2021ರಲ್ಲೂ ಮುಕ್ತ ಓಡಾಟಕ್ಕೆ ಅವಕಾಶವಿರಲಿಲ್ಲ. ಬೇವು ಬೆಲ್ಲವನ್ನು ಬೇರೆಯವರಿಂದ ಪಡೆದರೂ ಸೋಂಕು ಹರಡುವ ಭಯ. ಅಂತಹ ಭಯ ಹುಟ್ಟಿಸುವ ವಾತಾವರಣ ಈಗ ಕಣ್ಮರೆಯಾಗಿರುವುದು ನಿಜಕ್ಕೂ ಸಂತಸದ ವಿಷಯ.

ಈಗ ನಮ್ಮ ದೇಶದಲ್ಲಿ ಕೋವಿಡ್ ಸೋಂಕು ಕಡಿಮೆಯಾಗಿರುವುದು ನೆಮ್ಮದಿ ತಂದಿದೆ- ಅದೇಕೋ ಜಗತ್ತಿನ ಕೆಲವು ದೇಶಗಳಲ್ಲಿ
ಈಗಲೂ ಕೋವಿಡ್ ಸೋಂಕು ಹೊಸ ಅಲೆಯ ರೂಪದಲ್ಲಿ ಹರಡುತ್ತಿರುವ ಸುದ್ದಿ ಬರುತ್ತಲೇ ಇದೆ. ಈ ವರ್ಷ ನಾವು ಸಂಭ್ರಮದಿಂದ
ತೆರೆದುಕೊಂಡಿರುವುದು ನಿಜವಾದರೂ, ಅದೇಕೋ ಒಂದು ಅನುಮಾನ ಕಾಡುತ್ತಿದೆ.

ನಮ್ಮ ಹಬ್ಬಗಳ ಸಂಭ್ರಮ, ಪ್ರಾಮಾಣಿಕ ಆಚರಣೆಯು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆಯೆ? ಮನಃಪೂರ್ವಕವಾಗಿ, ನಿಷ್ಠೆ ಯಿಂದ, ಭಕ್ತಿಯಿಂದ ಆಚರಣೆಗೊಳ್ಳುತ್ತಿದ್ದ ಹಲವು ಹಬ್ಬಗಳು ಕ್ರಮೇಣ ಮೇಲ್ನೋಟದ ಸಂಭ್ರಮಕ್ಕೆ, ಹೊಸ ಹೊಸ ತಿನಿಸುಗಳ ಸ್ವೀಟ್‌ಪ್ಯಾಕೆಟ್‌ಗಳ ಖರೀದಿಗೆ, ಜಗಮಗಿಸುವ ಲೈಟಿಂಗ್‌ಗೆ, ವಾಟ್ಸಾಪ್ ಸ್ಟಾಟಸ್‌ಗೆ ಸೀಮಿತವಾಗುತ್ತಿದೆಯೆ? ಕಾಲವು ಆಧುನಿಕ ವಾದಂತೆಲ್ಲ, ಭಾರತೀಯರು ಮೂಲ ಹಬ್ಬದಾಚರಣೆಗೆ ಕಡಿಮೆ ಪ್ರಾಮುಖ್ಯತೆ ನೀಡುತ್ತಿದ್ದಾರೆಯೆ? ತಮ್ಮ ಅನುಕೂಲಕ್ಕೆ ತಕ್ಕಂತೆ ಹಬ್ಬದಾಚರಣೆ ಮಾಡುವ ಸುಲಭ ವಿಧಾನವನ್ನು ಅನುಸರಿಸು ತ್ತಿದ್ದಾರೆಯೆ? ಯುಗಾದಿ ಮಾತ್ರವಲ್ಲ, ದೀಪಾವಳಿ, ನವರಾತ್ರಿ ಮೊದಲಾದ ಹಬ್ಬಗಳನ್ನು ಕಂಡರೂ, ಹಿಂದೆ ಇದ್ದ ನಿಷ್ಠೆ, ಕಟ್ಟುನಿಟ್ಟು, ವೃತಾಚರಣೆ, ಮೂಲಕ್ಕೆ ಅಂಟಿಕೊಳ್ಳುವ ಬದ್ಧತೆ ಇವೆಲ್ಲವೂ ಕಡಿಮೆಯಾಗು ತ್ತಿದೆಯೆ? ಇಂದಿನ ಕಾಲಕ್ಕೆ ತಕ್ಕಂತೆ ನಮ್ಮಷ್ಟಕ್ಕೆ ನಾವೇ ಬದಲಾವಣೆಗಳನ್ನು ಮಾಡಿಕೊಂಡು, ಮೂಲ ಆಚರಣೆಗಳನ್ನು ಡೈಲ್ಯೂಟ್ ಮಾಡುತ್ತಿದ್ದೇವೆಯೆ? ಕೆಲವು ಸನ್ನಿವೇಶ, ಸಂದರ್ಭಗಳನ್ನು ಕಂಡರೆ ಹಾಗನ್ನಿಸುತ್ತಿದೆ.

ಇಂತಹ ಬದಲಾವಣೆ ಕೆಲವು ಬಾರಿ ಅನಿವಾರ್ಯವೂ ಹೌದು ಎಂದಿದ್ದರೂ, ಅಂತಹ ಅನಿವಾರ್ಯ ಬದಲಾವಣೆಗಳೇ ಹಬ್ಬದ ಉದ್ದೇಶವನ್ನೇ ಮರೆಮಾಚುವಂತಾಗಬಾರದು ಎಂಬುದೇ ಈ ಕಳಕಳಿಯ ಉದ್ದೇಶ. ಯುಗಾದಿಯನ್ನೇ ತೆಗೆದುಕೊಳ್ಳಿ. ಹಾಗೆ ನೋಡ ಹೋದರೆ, ಯುಗಾದಿಯು ನಮ್ಮ ದೇಶದ ಬಹುದೊಡ್ಡ ಹಬ್ಬ – ಹೊಸ ವರ್ಷವನ್ನು ಸ್ವಾಗತಿಸುವ ಹಬ್ಬ. ಪಾಶ್ಚಾತ್ಯ ಜನರಿಗೆ, ಪಾಶ್ಚಾತ್ಯ ಜನರ ಪದ್ಧತಿಗಳನ್ನು ಅನುಕರಣೆ ಮಾಡುವವರಿಗೆ ಜನವರಿ 1 ಮತ್ತು ಅದಕ್ಕೆ ಸಂಬಂಧಿಸಿದ ಆಚರಣೆಯು ಎಷ್ಟು ಸಂಭ್ರವನ್ನು ತರುತ್ತದೆಯೋ, ಯುಗಾದಿಯು ಅಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಸಂಭ್ರಮವನ್ನು ತರಬೇಕಿತ್ತು.

ಪಾಶ್ಚಾತ್ಯರು ಹೊಸ ವರ್ಷದ ಆಚರಣೆಯನ್ನು ವಿಶ್ವಪ್ರಸಿದ್ಧವನ್ನಾಗಿಸಿದ್ದಾರೆ. ನಮ್ಮ ದೇಶದವರಿಗೆ ಯುಗಾದಿಯೇ ಹೊಸ ವರ್ಷ. ಆದರೂ, ‘ನ್ಯೂ ಇಯರ್’ ಎಂದಾಕ್ಷಣ ನಮಗೆಲ್ಲರಿಗೂ ನೆನಪಾಗುವುದೇ ಡಿಸೆಂಬರ್ ಕೊನೆಯ ದಿನ, ಬ್ರಿಗೇಡ್ ರಸ್ತೆಯ ಬಣ್ಣ ಬಣ್ಣದ ದೀಪಗಳ ಆ ದಿನ. ನಮ್ಮ ಜನಪದರ ಹಬ್ಬವಾಗಿರುವ, ನಮ್ಮ ನೆಲಮೂಲದ ಹಬ್ಬವಾಗಿರುವ ಯುಗಾದಿಯು ಅಂತಹ ಪ್ರಮುಖ ಸ್ಥಾನವನ್ನು ಪಡೆದು ಕೊಳ್ಳಬೇಕು ಎಂದು ಈಚಿನ ಕೆಲವು ವರ್ಷಗಳಲ್ಲಿ ಕೆಲವರು ಆಂದೋಲನವನ್ನು ರೂಪಿಸಲು ಪ್ರಯತ್ನಿಸಿದ್ದರೂ, ಅದೇಕೋ ಯುಗಾದಿಯ ಹೊಸ ವರ್ಷ ಪಡೆದುಕೊಳ್ಳಬೇಕಾದ ಸ್ಥಾನವನ್ನು ಇನ್ನೂ ಪಡೆದುಕೊಂಡಿಲ್ಲ.

ಯುಗಾದಿಯನ್ನು ನಮ್ಮ ದೇಶದ ಎಲ್ಲಾ ರಾಜ್ಯಗಳಲ್ಲೂ ಪುರಾತನ ಕಾಲದಿಂದಲೂ ಹೊಸ ವರ್ಷವನ್ನು ಸ್ವಾಗತಿಸುವ ಹಬ್ಬವೆಂದೇ ಆಚರಿಸುತ್ತಿದ್ದಾರೆ. ಆದರೂ, ಆಚರಣೆಯ ವಿಧಾನದಲ್ಲಿ ತುಸು ವ್ಯತ್ಯಾಸವುಂಟು. ನಾನು ಹುಟ್ಟಿಬೆಳೆದ ಕರಾವಳಿಯಲ್ಲಿ ಯುಗಾದಿ ಬರುವುದು ಪ್ರತಿವರ್ಷ ಏಪ್ರಿಲ್ ೧೪ರಂದು. ಅದು ಸೌರಮಾನ ಪದ್ಧತಿಯ ಯುಗಾದಿ. ಮುಖ್ಯವಾಗಿ ಅದು ಕೃಷಿ ಸಂಬಂಧಿ ಆಚರಣೆಗೆ ಮಾತ್ರ ಸೀಮಿತವಾಗಿದೆ.

ಯುಗಾದಿಯ ದಿನ ಗದ್ದೆಯನ್ನು ಉಳಬೇಕು ಎಂಬುದು ಸಂಪ್ರದಾಯ; ಅದಾಗಿ ಸುಮಾರು ಹತ್ತು ದಿನಗಳ ನಂತರ, ಹತ್ತರಾವಽ ಎಂಬ
ದಿನದಂದು ಬೀಜವನ್ನು ಬಿತ್ತಬೇಕು, ಆಗ ಬೀಜ ಬಿತ್ತಿದರೆ, ನೆಲದಾಳದಿಂದ ಅದೇ ದಿನ ಮೇಲಕ್ಕೆ ಬರುವ ನೀರಿನ ಪಸೆಯಿಂದಾಗಿ, ಬತ್ತದ
ಬೀಜಗಳು ಚೆನ್ನಾಗಿ ಮೊಳಕೆಯೊಡೆಯುತ್ತವೆ ಎಂಬ ನಂಬಿಕೆ. ಸುತ್ತಲೂ ರಣ ರಣ ಬಿಸಿಲಿದ್ದರೂ, ಆ ಬಿಸಿಲಿನಲ್ಲೇ ‘ಹತ್ತರಾವಧಿ’ ದಿನ ಬಿತ್ತಿದ
ಬೀಜಗಳು ಹಸಿರಾಗಿ ಮೊಳಕೆಯೊಡೆಯುತ್ತಿದ್ದವು. ಈ ರೀತಿ ಯುಗಾದಿಗೂ, ಬತ್ತದ ಕೃಷಿಗೂ ಅವಿನಾಭಾವ ಸಂಬಂಧ. ಅಂದಿನ ಜನರು ಪುರಾತನ ಕಾಲದಿಂದ ಹವಾಮಾನವನ್ನು ಗಮನಿಸಿ, ಬಿರುಬಿಸಿಲಿನಲ್ಲೂ ಬೀಜ ಬಿತ್ತಿದರೆ ಮೊಳಕೆಯೊಡೆಯುವ ದಿನಗಳನ್ನು ಗುರುತಿಟ್ಟು ಕೊಂಡಿದ್ದರು. ಅತ್ತ ಮಂಗಳೂರು ಕಡೆ ಬಿಶು, ಕೇರಳದತ್ತ ಸಾಗಿದರೆ ವಿಶು ಹಬ್ಬವೂ ಇದೇ ಯುಗಾದಿಯ ಆಚರಣೆ.

ಚಾಂದ್ರಮಾನ ಪದ್ಧತಿಯ ಪ್ರಕಾರ ಆಚರಿಸುವ ಯುಗಾದಿ ನಮ್ಮ ರಾಜ್ಯದ ಬಹುಪಾಲು ಜಿಲ್ಲೆಗಳಲ್ಲಿ ಬಹು ಸಂಭ್ರಮದ ಹಬ್ಬ. ಯುಗಾದಿಯ ದಿನ ಮಧ್ಯಾಹ್ನ ಮೈತುಂಬಾ ಎಣ್ಣೆ ಹಚ್ಚಿಕೊಂಡು, ಬಿಸಿಲಿನಲ್ಲಿ ಸಾಕಷ್ಟು ಓಡಾಡಿ, ನಂತರ ಸ್ನಾನ ಮಾಡುವುದು ಹಲವರಿಗೆ ಖುಷಿ. ಮನೆ ಯಲ್ಲಿ ಹೋಳಿಗೆ ಅಥವಾ ಒಬ್ಬಟ್ಟು ತಯಾರಿಸುವುದು ಮಹಿಳೆಯರಿಗೆ ಸಂಭ್ರಮ. ಯುಗಾದಿಯ ಮರು ದಿನ ವರ್ಷದ ತೊಡಕು ಹಬ್ಬ, ಚಂದ್ರನನ್ನು ನೋಡುವುದು, ಚಂದ್ರ ಕಾಣಿಸುವ ವಿನ್ಯಾಸಕ್ಕೆ ಅನುಗುಣವಾಗಿ ಶಾಸ್ತ್ರ ಹೇಳುವುದು, ಪಂಚಾಂಗ ಕೇಳುವುದು, ದೇಗುಲ ದರ್ಶನ ಎಲ್ಲವೂ ಯುಗಾದಿಯ ಭಾಗಗಳೇ.

ಇದರಲ್ಲಿ ವರ್ಷದ ತೊಡಕು ಹಬ್ಬಕ್ಕೆ ವಿಶೇಷ ಸ್ಥಾನ. ಯುಗಾದಿಯ ಮರುದಿನ ಏನು ಮಾಡುತ್ತೇವೋ, ಅದನ್ನು ವರ್ಷವಿಡೀ ಮಾಡ ಬೇಕಾಗುತ್ತದೆಂಬ ನಂಬಿಕೆ. ಆದ್ದರಿಂದ, ಆ ದಿನವಿಡೀ ಒಳ್ಳೆಯದನ್ನೇ ಮಾಡಬೇಕೆಂಬ ತುಡಿತ. ಹಿರಿಯೂರು, ಚಿತ್ರದುರ್ಗ, ಆಂಧ್ರ ಪ್ರದೇಶದ ಕೆಲವು ಕಡೆ ಯುಗಾದಿಯ ಮರುದಿನ ನಡೆಯುವ ಇಸ್ಪೀಟು ಆಟದ ಖದರನ್ನು ನೋಡಿಯೇ ನಂಬಬೇಕು. ವಿಶೇಷ
ಶಾಮಿಯಾನಾ ಹಾಕಿ, ಸಾಕಷ್ಟು ಬಾಜಿಕಟ್ಟಿ ಆಡುವ ಆ ದಿನದ ಇಸ್ಪೀಟು ಎಂದರೆ ಊರಿನ ಹಲವರಿಗೆ ಎಲ್ಲಿಲ್ಲದ ಕುತೂಹಲ. ಆದರೆ, ಈಚಿನ ವರ್ಷಗಳಲ್ಲಿ ಅದು ಹಬ್ಬದ ಭಾಗವಲ್ಲ, ಬದಲಿಗೆ ಅದು ಜೂಜು, ಆದ್ದರಿಂದ ಕಾನೂನು ಬಾಹಿರ ಎಂದು ಕಾನೂನು ಪಾಲಕರು ಕ್ರಮಕೈಗೊಂಡು, ಯುಗಾದಿಯ ಭಾಗವಾಗಿರುವ ಈ ಒಂದು ಆಚರಣೆಯ ಮೇಲೆ ನಿಯಂತ್ರಣ ಹೇರಿದ್ದಾರೆ.

ಅಷ್ಟಕ್ಕೂ ಯುಗಾದಿಯ ಆಚರಣೆಗೂ, ಹಣ ಕಟ್ಟಿ ಜೂಜಾಡುವುದಕ್ಕೂ ಏನು ಸಂಬಂಧ ಎಂದು ಕೇಳಿದರೆ, ಉತ್ತರ ತುಸು ಕಷ್ಟವೇ ಸರಿ.
ಆದರೆ, ಪಟ್ಟಣ ಸೇರಿದವರು, ಇಂಗ್ಲಿಷ್ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದವರು, ಆಧುನಿಕತೆಯ ಗಾಳಿ‘ಸೋಂಕಿ’ಗೆ ಒಳಗಾದವರು
ಯುಗಾದಿಯಂತಹ ಹಬ್ಬಗಳಲ್ಲಿ ಮನಃಪೂರ್ವಕವಾಗಿ, ನಮ್ಮ ಹಿಂದಿನವರಷ್ಟು ಬದ್ಧತೆಯಿಂದ ಭಾಗವಹಿಸುತ್ತಿಲ್ಲವೆಂದೇ ನನ್ನ ಅನಿಸಿಕೆ. ಈ ಒಂದು ಬದಲಾವಣೆ, ಸಣ್ಣ ನಿರ್ಲಕ್ಷ್ಯವು ಒಮ್ಮೆಗೇ ಬಂದಿದ್ದಲ್ಲ, ಕ್ರಮೇಣ ಚೂರು ಚೂರೇ ನಮ್ಮ ದಿನಚರಿಯನ್ನು ಆಕ್ರಮಿಸಿದ ಸೋಮಾರಿ ತನ ಅದು.

ನಮ್ಮ ನಾಡಿನ ಹಳೆಯದೆಲ್ಲವೂ ಅಷ್ಟೇನೂ ಶ್ರೇಷ್ಠವಲ್ಲ ಎಂದು ವಸಾಹತುಶಾಹಿಯು ನಮ್ಮ ಮೇಲೆ ಹೇರಿದ ಬ್ರೈನ್‌ವಾಶ್‌ನ ಫಲವೂ ಇದಾಗಿರಬಹುದು. ಸಣ್ಣ ಸಣ್ಣ ಉದಾಹರಣೆಗಳಿಂದಲೇ ಇದನ್ನು ಗಮನಿಸಬಹುದು. ಯುಗಾದಿಯ ದಿನ ಒಬ್ಬಟ್ಟು ತಯಾರಿಸುವ ಸಂಪ್ರದಾಯವನ್ನೇ ತೆಗೆದುಕೊಂಡರೆ, ಕೆಲವೇ ವರ್ಷಗಳ ಹಿಂದೆ ಒಬ್ಬಟ್ಟನ್ನು ಮನೆಯಲ್ಲೇ ತಯಾರಿಸುವುದು ಶ್ರೇಷ್ಠ ಎಂಬ ಅಭಿಪ್ರಾಯ ವಿತ್ತು, ಕಷ್ಟವಿದ್ದರೂ ಮನೆಯಲ್ಲಿ ತಯಾರಿಸುತ್ತಿದ್ದರು. ಇಂದು ಅಂಗಡಿಯಿಂದ ತಂದರೇನು ತೊಂದರೆ, ಅದೂ ಒಬ್ಬಟ್ಟೇ ತಾನೆ ಎಂಬ ಭಾವ ಬಹುಪಾಲು ಸಾರ್ವತ್ರಿಕ ಎನಿಸಿದೆ. ಒಬ್ಬಟ್ಟಿಗೆ ಸಂಬಂಧಿಸಿದ ಪರಿಕರಗಳನ್ನು ಜೋಡಿಸಿ, ಮನೆಯಲ್ಲೇ ತಯಾರಿಸು ವುದು ರಗಳೆ ಎಂಬ ಭಾವನೆಯಿಂದಾಗಿ, ಅಂಗಡಿಗಳಲ್ಲಿ ಸಿಗುವ ತರಹೇವಾರಿ ಹೋಳಿಗೆ ಮತ್ತು ಒಬ್ಬಟ್ಟುಗಳು ಯುಗಾದಿ ಹಬ್ಬವನ್ನು ಸಿಹಿಗೊಳಿಸುತ್ತಿವೆ!

ನಿಜ, ಇಂದಿನ ಆಧುನಿಕ ಬದುಕಿನಲ್ಲಿ, ಹೊರಗೆ ದುಡಿಯುವವರೇ ಜಾಸ್ತಿ ಸಂಖ್ಯೆಯಲ್ಲಿರುವುದರಿಂದ, ಮನೆಯಲ್ಲೇ ಒಬ್ಬಟ್ಟು, ಹೋಳಿಗೆ, ಪಾಯಸ, ಉಂಡಿ, ಚಕ್ಕುಲಿ, ಕಾರಶೇವು ಗಳನ್ನು ತಯಾರಿಸುವುದು ಕಷ್ಟ ಎಂಬ ವಾದ ಇದ್ದೇ ಇದೆ, ಅದು ನಿಜವೂ ಹೌದು. ಆದರೆ, ಇಂತಹ ವಾದದ ಎದುರು ಹಬ್ಬದ ಪಾವಿತ್ರ್ಯತೆಯನ್ನು ಚೂರು ಚೂರೇ ಡೈಲ್ಯೂಟ್ ಮಾಡುವ ನಮ್ಮ ಸಮಾಜದ ಮನಸ್ಥಿತಿಯು, ಒಟ್ಟಾರೆ ಹಬ್ಬಗಳಿಗೇ ಸಣ್ಣ ಮಟ್ಟದ ನಿರ್ಲಕ್ಷ್ಯ ತೋರಿದಂತೆ ಅಲ್ಲವೆ? ಇದು ಒಂದು ಒಬ್ಬಟ್ಟು ಅಥವಾ ಒಂದು ಉಂಡಿಯ ವಿಚಾರವಲ್ಲ.

ಕೃತಕ ಮಾವಿನ ತೋರಣ, ಝಗಮಗಿಸುವ ಬಲ್ಬುಗಳು, ಅಂಗಡಿಯಿಂದ ತರುವ ನಾನಾ ರೀತಿಯ ತಿಂಡಿ ತಿನಿಸು, ಇವೆಲ್ಲವೂ ಕೆಲವೇ ವರ್ಷಗಳ ಹಿಂದೆ ಹಬ್ಬದ ದಿನದಂದು ಬಳಸಲು ಉತ್ತಮವಲ್ಲ ಎಂಬ ಭಾವನೆ ಇದ್ದ ವಸ್ತುಗಳು. ಉಪ್ಪಿನ ಕಾಯಿ, ಮೊಸರುಗಳನ್ನು ಸಹ ಇಂದು ಹೊರಗಿನಿಂದ ತರುವ ಪರಿಪಾಠ ಬೆಳೆದಿದೆ. ಇವು ಪರಂಪರೆಗ ತೋರುವ ಅಗೌರವ ಎಂದೇ ಹೇಳಬಹುದು. ಇದರ ಕುರಿತು ಹಲವು ನೆಪಗಳನ್ನು ಮುಂದೆ ಮಾಡುವುದು ಸುಲಭ – ಮನೆ ಕೆಲಸ ಮಾಡಲು ಜನ ಸಿಗುವುದಿಲ್ಲ, ವೃತ್ತಿಯ ನಡುವೆ ಸಮಯ ದೊರೆಯು ವುದಿಲ್ಲ, ಮನೆಯಲ್ಲಿ ಮಾಡುವು ದಕ್ಕಿಂತ ತರುವುದೇ ಅಗ್ಗ ಮತ್ತು ಸುಲಭ, ಅದೇ ಹೆಚ್ಚು ರುಚಿಕರ, ಮನೆಯಲ್ಲಿ ಅಂತಹ ಕಠಿಣ ಕೆಲಸ ಮಾಡಲು ಸಾಕಷ್ಟು ಜನರು ಇಂದು ಇಲ್ಲ – ಈ ರೀತಿಯ ಹಲವು ನೆಪಗಳನ್ನು ಮುಂದೊಡ್ಡುವುದುಂಟು.

ಇಂದಿನ ತಂತ್ರಜ್ಞಾನದ ಯುಗದಲ್ಲಿ ಅಂತಹ ನೆಪಗಳಲ್ಲಿ ಸಾಕಷ್ಟು ಹುರುಳಿದೆ. ವೈಯಕ್ತಿಕವಾಗಿ ನಾನೂ, ನೀವೂ ಈ ಕಾರಣಗಳನ್ನು,
ನೆಪಗಳನ್ನು ಸುಲಭವಾಗಿ ಒಪ್ಪಬಹುದು. ಇದರಿಂದಲೇ ತಾನೆ, ಹಳೆಯ ಸಂಪ್ರದಾಯಗಳು ಡೈಲ್ಯೂಟ್ ಆಗುತ್ತಾ ಹೋಗುತ್ತಿವೆ ಎನ್ನುವುದು? ಒಮ್ಮೊಮ್ಮೆ ಸೋಜಿಗ ಎನಿಸುವುದುಂಟು, ಈ ರೀತಿ ನಮ್ಮ ಸಂಪ್ರದಾಯಗಳು, ಹಬ್ಬಗಳು, ಆಚರಣೆ ಗಳು ಪ್ರತಿ ವರ್ಷ ತುಸು ತುಸುವಾಗಿ ತಮ್ಮ ಪ್ರಾಮುಖ್ಯತೆ ಕಳೆದುಕೊಂಡು, ಆಚರಣೆಗಳಲ್ಲಿ ಡೈಲ್ಯೂಟ್ ಆಗುತ್ತಾ ಹೋದರೆ, ಇನ್ನು ಕೆಲವೇ ದಶಕ ಗಳಲ್ಲಿ ಹಬ್ಬಗಳ ಸ್ವರೂಪವೇ ಬದಲಾಗಬಹುದೆ ಎಂದು!

ಇರಲಿ, ಇಂತಹ ಯೋಚನೆ, ಚಿಂತನೆಗಳು ನಿಮ್ಮ ಮನಸ್ಸನ್ನು ತುಸುವೇ ತಟ್ಟಿದರೆ, ಅದೇ ಈ ಯುಗಾದಿಯ ಸಾರ್ಥಕತೆ ಎನ್ನಬಹುದು! ಕಳೆದ ಎರಡು ವರ್ಷಗಳ ಯುಗಾದಿಯಂದು ಕಾಡಿದ ಕೋವಿಡ್ ಭಯ ಈ ವರ್ಷ ಇಲ್ಲವೆಂಬುದೇ ಸಂತಸ, ಸಂಭ್ರಮದ ಸುದ್ದಿ. ಮತ್ತಿನ್ನೇಕೆ ತಡ, ಈ ವರ್ಷದ ಯುಗಾದಿ ಹಿಂದಿಗಿಂತ ವಿಜ್ರಂಭಣೆಯಿಂದ ಬರಲಿ, ಹೆಚ್ಚು ಅರ್ಥಪೂರ್ಣವಾಗಿ ಆಚರಣೆಗೊಳ್ಳಲಿ!