Wednesday, 11th December 2024

ಸಂಚಾರ ಸುರಕ್ಷೆಗೆ ಸಾರ್ವಜನಿಕ ಕಣ್ಣು ಅಗತ್ಯ

ಅಭಿಮತ

ಶಿವಕುಮಾರ್‌

ಉದ್ಯಾನನಗರಿ ಬೆಂಗಳೂರು ಈಗ ದಿನೇ ದಿನೇ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯಿಂದ ಕಂಗೆಟ್ಟಿದೆ. ನಮ್ಮ ನಗರವು ಇತ್ತೀಚಿನ ವರ್ಷಗಳಲ್ಲಿ ಶರವೇಗದಲ್ಲಿ ಬೆಳೆಯುತ್ತಿರುವು ದರಿಂದ, ಈ ನಾಗಾಲೋಟದ ಬೆಳವಣಿಗೆ ರಸ್ತೆಗಳಲ್ಲಿ ವಾಹನಗಳ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಈಗ ಒಂದು ಕೋಟಿಗೂ ಮಿಗಿಲಾಗಿ ನೋಂದಾಯಿತ ವಾಹನಗಳಿವೆ. ಇವಲ್ಲದೆ ಸುತ್ತಲಿನ ಪ್ರದೇಶಗಳಿಂದ ಮತ್ತು ಹೊರ ರಾಜ್ಯಗಳಿಂದ ಬರುವ ವಾಹನಗಳನ್ನೂ ಪರಿಗಣನೆಗೆ ತೆಗೆದುಕೊಂಡರೆ, ಸಂಚಾರ ದಟ್ಟಣೆ ಯಾವ ಮಟ್ಟಿಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ತಿಳಿಯುತ್ತದೆ.

ಈ ಹಿಂದೆ ಸರಕಾರಗಳು ಉದ್ಯೋಗಾವಕಾಶ ಒದಗಿಸುವುದಕ್ಕೆ ಒತ್ತನ್ನು ನೀಡಿ ಐಟಿಬಿಟಿ ಸಂಸ್ಥೆಗಳಿಗೆ ಅನುಕೂಲವಾಗುವಂತೆ ಸೂಕ್ತ ಕಾನೂನುಗಳನ್ನು ರೂಪಿಸಿದವು. ಆದರೆ ಸಮಾನಾಂತರವಾಗಿ ಮೂಲಸೌಕರ್ಯಗಳ ಕೊರತೆ ಮತ್ತು ಅಸಮರ್ಪಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮುಂದುವರೆದು, ನಗರದಲ್ಲಿನ ಸಂಚಾರ ಅವ್ಯವಸ್ಥೆಯನ್ನು ಹೆಚ್ಚಿಸಿದವು. ಈ ನಗರವು ಇಷ್ಟು ದೊಡ್ಡದಾಗಿ ಬೆಳೆಯಬಹುದೆಂದು ಯಾರೊಬ್ಬರೂ ಊಹಿಸಿರಲಿಲ್ಲ. ಹೀಗಾಗಿ, ಅಸಮರ್ಪಕ ರಸ್ತೆಗಳು ಮತ್ತು ಜನಸಂಖ್ಯೆಗೆ ಸರಿಹೊಂದುವಷ್ಟು ಸಾರ್ವಜನಿಕ ಸಾರಿಗೆಯ ಕೊರತೆಯಿಂದಾಗಿ ನಗರದಲ್ಲಿ ವಾಹನಗಳನ್ನು ಉಪಯೋಗಿಸುವುದು ನರಕ ಸದೃಶವಾದ ದಿನನಿತ್ಯದ ಬವಣೆ ಯಾಯಿತು.

ಬೆಂಗಳೂರಿನ ಸಂಚಾರ ದಟ್ಟಣೆ ನಗರವಾಸಿಗಳ ಆತಂಕಕ್ಕೆ ಕಾರಣವಾಗಿದೆ. ರಸ್ತೆಗಳು ವಾಹನಗಳಿಂದ ತುಂಬಿಹೋಗಿದ್ದು, ಜನರು
ಅನಿವಾರ್ಯವಾಗಿ ಬಹಳ ಗಂಟೆಗಳ ಪ್ರಯಾಸದ ಪ್ರಯಾಣ ಮಾಡುವಂತಾಗಿದೆ. ಟ್ರಾಫಿಕ್ ಜಾಮ್ ದಿನನಿತ್ಯದ ಸಮಸ್ಯೆ ಯಾಗಿದ್ದು, ಜನರು ತಮ್ಮ ಸ್ಥಳಗಳನ್ನು ಸರಿಯಾದ ಸಮಯಕ್ಕೆ ತಲುಪಲು ಕಷ್ಟಪಡುತ್ತಾರೆ. ವಾಹನಗಳು ಬಸವನ ವೇಗದಲ್ಲಿ ಚಲಿಸುತ್ತವೆ, ಇದು ಪ್ರಯಾಣಿಕರಲ್ಲಿ ಹತಾಶೆ ಮತ್ತು ಒತ್ತಡವನ್ನು ಉಂಟುಮಾಡುತ್ತದೆ. ಅಸಮರ್ಪಕ ಯೋಜನೆ ಮತ್ತು ಮೂಲ ಸೌಕರ್ಯಗಳ ಕೊರತೆಯೇ ಬೆಂಗಳೂರಿನ ಟ್ರಾಫಿಕ್ ದುಃಸ್ಥಿತಿಗೆ ಪ್ರಮುಖ ಕಾರಣ.

ದಿನೇದಿನೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಗೆ ಅನುಗುಣವಾಗಿ ರಸ್ತೆಗಳು ಅಗಲವಾಗದಿರುವುದರಿಂದ, ಸಂಚಾರ ದಟ್ಟಣೆ ಉಂಟಾಗುತ್ತಿದೆ. ಮೆಟ್ರೋ ರೈಲಿನ ಸಂಪರ್ಕ ವಿಸ್ತರಣೆ ಆಮೆ ಗತಿಯಲ್ಲಿ ಸಾಗುತ್ತಿರುವುದರಿಂದ ವಾಹನಗಳು ರಸ್ತೆಗಿಳಿಯುವುದು ಅನಿವಾರ್ಯವಾಗಿದೆ. ಬಸ್ ಕ್ಷಿಪ್ರ ಸಾರಿಗೆ ವ್ಯವಸ್ಥೆ ಮತ್ತು ಉಪನಗರ ರೈಲು ಮಾರ್ಗಗಳಂಥ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ
ಕೊರತೆಯಿಂದಾಗಿ ಜನರು ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸುವುದು ಕಷ್ಟಕರವಾಗಿದೆ. ಇದರಿಂದ ಜನರು ತಮ್ಮ ವೈಯಕ್ತಿಕ ವಾಹನಗಳನ್ನೇ ಆಶ್ರಯಿಸಬೇಕಾಗಿದ್ದು, ಮತ್ತಷ್ಟು ಸಂಚಾರ ದಟ್ಟಣೆ ಉಂಟಾಗುತ್ತಿದೆ.

ಟ್ರಾಫಿಕ್ ಪರಿಸ್ಥಿತಿಯನ್ನು ನಿಭಾಯಿಸಲು, ಮೂಲಸೌಕರ್ಯ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಸರಕಾರ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು. ವಿಶಾಲವಾದ ರಸ್ತೆಗಳು, ಮೇಲ್ಸೇತುವೆಗಳು ಮತ್ತು ಕೆಳಸೇತುವೆಗಳನ್ನು
ನಿರ್ಮಿಸುವುದರಿಂದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಬಹುದು. ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಮತ್ತು ಹೊಸ ಸಾರಿಗೆ ವಿಧಾನಗಳನ್ನು ಪರಿಚಯಿಸುವ ಮೂಲಕ ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಉತ್ತೇಜಿಸಲು ಸರಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಬೈಕ್ ಟ್ಯಾಕ್ಸಿ ಮತ್ತು ಕಾರ್‌ಪೂಲಿಂಗ್ ಯೋಜನೆಗಳ ಪ್ರೋತ್ಸಾಹಕ್ಕೆ ಸೂಕ್ತವಾದ ಕಾನೂನುಗಳನ್ನು ಪರಿಚಯಿಸಿ ರಸ್ತೆಗಳಲ್ಲಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಇದೆಲ್ಲದರ ನಡುವೆ ಟ್ರಾಫಿಕ್ ಪೊಲೀಸರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇತ್ತೀಚೆಗೆ ಡಾ.ಎಂ.ಎ.ಸಲೀಮ್ ಬೆಂಗಳೂರು ನಗರ ಸಾರಿಗೆ ವ್ಯವಸ್ಥೆಯ ವಿಶೇಷ ಕಮಿಷನರ್ ಹುದ್ದೆಗೆ ನೇಮಕಗೊಂಡಿದ್ದಾರೆ. ಅವರೊಂದಿಗೆ ಎಂ.ಎನ್. ಅನುಚೇತ್ ಜಂಟಿ ಟ್ರಾಫಿಕ್ ಕಮಿಷನರ್ ಹುದ್ದೆಗೆ ನೇಮಕಗೊಂಡಿದ್ದಾರೆ.

ಟ್ರಾಫಿಕ್ ವ್ಯವಸ್ಥೆ ನಿಭಾಯಿಸುವುದರ ಬಗ್ಗೆ ಸಲೀಂ ಅವರು ಅಧ್ಯಯನ ಮಾಡಿ ‘ಮೆಟ್ರೋಪಾಲಿಟನ್ ನಗರಗಳಲ್ಲಿ ಸಂಚಾರ ನಿರ್ವಹಣೆ: ಸಂಚಾರ ದಟ್ಟಣೆಯನ್ನು ನಿವಾರಿಸಲು ಮತ್ತು ರಸ್ತೆಯಲ್ಲಿ ಹೆಚ್ಚಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸುಸ್ಥಿರ
ಕಾರ್ಯತಂತ್ರಗಳನ್ನು ಒದಗಿಸುವ ಚೌಕಟ್ಟು’ ಎಂಬ ತಮ್ಮ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಡಾ.ಸಲೀಂ ಸಂಚಾರ ವ್ಯವಸ್ಥೆಯ ನಿರ್ವಹಣೆಯ ಬಗ್ಗೆ ಒಲವು ಹೊಂದಿರುವ ಅಪರೂಪದ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ ಮತ್ತು ಬೆಂಗಳೂರಿನಲ್ಲಿ ಸಂಚಾರ ನಿರ್ವಹಣೆಯ ಸುದೀರ್ಘ ಅಧಿಕಾರಾವಧಿಯನ್ನೂ ಹೊಂದಿದ್ದಾರೆ. ಈ ಹಿಂದೆ ಅವರು ಹಲವು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ: ಶಾಲೆಗಳಿಗೆ ಹೋಗಲು ಸುರಕ್ಷಿತ ಮಾರ್ಗಗಳು, ಸ್ಥಳೀಯ ಪ್ರದೇಶ ಸಂಚಾರ ನಿರ್ವಹಣಾ ಸಮಿತಿಗಳು ಮತ್ತು ಸಾರ್ವಜನಿಕರ ಹೆಚ್ಚಿನ ಭಾಗವಹಿಸುವಿಕೆಗಾಗಿ ‘ಸಾರ್ವಜನಿಕ ಕಣ್ಣು’, ನಗರದಲ್ಲಿ ಆಟೋ ಮೇಷನ್ ಜಾರಿ ಕೇಂದ್ರ ಮತ್ತು ಆಟೋ ಚಾಲಕರ ಗುರುತಿನ ಪ್ರದರ್ಶನ ಕಾರ್ಡ್‌ಗಳನ್ನು ಜಾರಿಗೆ ತಂದಿದ್ದಾರೆ.

ಅವರು ಅಧಿಕಾರವಹಿಸಿಕೊಂಡಾಗಿನಿಂದ ಸಂಚಾರ ದಟ್ಟಣೆಯ ನಿರ್ವಹಣೆಯಲ್ಲಿ ಗಮನಾರ್ಹವಾದ ಸುಧಾರಣೆ ಕಾಣುತ್ತಿದೆ. ಬೆಂಗಳೂರಿನ ಹೊರ ವರ್ತುಲ ರಸ್ತೆ ಪ್ರದೇಶಗಳಲ್ಲಿ ಸಮರ್ಪಕ ಸಾರಿಗೆ ನಿರ್ವಹಣೆ ಮಾಡುವ ಉದ್ದೇಶದಿ೦ದ ಹೆಣ್ಣೂರು, ತಲಘಟ್ಟಪುರ, ಬೆಳ್ಳಂದೂರು ಮತ್ತು ಮಹದೇವಪುರದಲ್ಲಿ ನಾಲ್ಕು ಹೊಸ ಸಂಚಾರ ಪೊಲೀಸ್ ಠಾಣೆಗಳನ್ನು ಸ್ಥಾಪಿಸುತ್ತಿದ್ದಾರೆ. ಬಿಎಂಟಿಸಿ ಬಸ್ ಗಳನ್ನು ನಿಲುಗಡೆ ಮಾಡುವ ಸ್ಥಳಗಳನ್ನು ನಗರದ ಹಲವು ಭಾಗಗಳಲ್ಲಿ ಸ್ಥಳಾಂತರಿಸಿ, ಸಂಚಾರ ದಟ್ಟಣೆ ಯನ್ನು ಸಾಕಷ್ಟು ಮಟ್ಟಿಗೆ ಸಡಿಲಗೊಳಿಸಿದ್ದಾರೆ. ಹೊರ ವರ್ತುಲ ರಸ್ತೆಯಲ್ಲಿ ‘ನಮ್ಮ ಮೆಟ್ರೋ’ ಕಾಮಗಾರಿ ಪೂರ್ಣಗೊಂಡರೆ, ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳದವರೆಗೆ ಈ ಹಿಂದೆ ಅಸ್ತಿತ್ವದಲ್ಲಿದ್ದ ‘ಬಸ್ ಆದ್ಯತಾ ಲೇನ್’ ಮತ್ತೆ ಸಂಚಾರ ಮುಕ್ತವಾಗುತ್ತದೆ.

ಬಸ್ ಆದ್ಯತೆಯ ಲೇನ್ ಮತ್ತು ಮೆಟ್ರೋ ಪೂರಕವಾಗಿ ಕಾರ್ಯ ನಿರ್ವಹಿಸುವುದರಿಂದ ಸಾರ್ವಜನಿಕ ಸಾರಿಗೆಗೆ ಉತ್ತೇಜನ ದೊರೆಯುತ್ತದೆ. ಸರಕಾರಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯನ್ನು ಸರಿಯಾಗಿ ಮಾಡದೆ ಹೋದಾಗ ನಾವೆಲ್ಲರೂ ಎಷ್ಟು ಬೇಗ ಅವರ ಮೇಲೆ ಬೈಗುಳಗಳನ್ನು ಸುರಿಸುತ್ತೇವೆ. ಆದರೆ, ಅವರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತ, ವ್ಯವಸ್ಥೆಯಲ್ಲಿರುವ ಸೀಮಿತ ಕಟ್ಟುಪಾಡುಗಳ ನಡುವೆಯೂ ಸಾರ್ವಜನಿಕರ ಜೀವನವನ್ನು ತಕ್ಕಮಟ್ಟಿಗೆ ಹಸನಾಗಿಸಿದಾಗ ಅವರನ್ನು ನಾವು ಶ್ಲಾಘಿಸಲೂಬೇಕು.

ತಮ್ಮ ಇಲಾಖೆಯ ಕಾರ್ಯವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಂಡು, ಬಿಬಿಎಂಪಿ, ಬಿಎಂಟಿಸಿ, ನಮ್ಮ ಮೆಟ್ರೋ, ಬಿಡ್ಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ ಮುಂತಾದ ಇತರ ಇಲಾಖೆಗಳನ್ನೂ ತಮ್ಮೊಂದಿಗೆ ಕೊಂಡೊಯ್ಯುತ್ತ, ಎಷ್ಟು ಸಾಧ್ಯ ವೋ ಅಷ್ಟರಮಟ್ಟಿಗೆ ಜನರ ಟ್ರಾಫಿಕ್ ಬವಣೆಗಳನ್ನು ಪರಿಹರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಡಾ.ಸಲೀಂರವರ ಕ್ರಮಗಳು ಬಹಳ ಪ್ರಶಂಸಾರ್ಹ.

ಸಾರ್ವಜನಿಕರಾದ ನಾವು ನಮ್ಮ ಬಾಧ್ಯತೆಗಳನ್ನೂ ಅರಿತು, ಜವಾಬ್ದಾರಿಯುತ ರಸ್ತೆ ಬಳಕೆದಾರರಾಗಿ ನಮ್ಮ ಪಾತ್ರ ನಿರ್ವಹಿಸಿ ದರೆ, ಈ ನಗರದಲ್ಲಿ ಸಂಚಾರ ಮಾಡುವುದು ಸ್ವಲ್ಪ ಮಟ್ಟಿಗಾದರೂ ಹಸನಾಗುತ್ತದೆ. ನಾವು ತಲುಪಬೇಕಾದ ಗಮ್ಯಕ್ಕೆ ಹೋಗುವು ದನ್ನಷ್ಟೇ ಮನಸ್ಸಿನಲ್ಲಿಟ್ಟುಕೊಂಡು ಬೇಜವಾಬ್ದಾರಿಯಿಂದ ವಾಹನಗಳನ್ನು ಚಲಾಯಿಸದೇ, ಇತರ ರಸ್ತೆ ಬಳಕೆದಾರರಿರೆ ತೊಂದರೆಯಾಗದಂತೆ ರಸ್ತೆ ನಿಯಮಗಳನ್ನು ಪಾಲಿಸುವುದು ನಮ್ಮ ಆದ್ಯ ಕರ್ತವ್ಯ. ಹೀಗೆ ಮಾಡಿದರೆ ಮಾತ್ರ ನಮ್ಮ ನಗರ ಒಂದು ಬದುಕಲು ಸಹ್ಯವಾದ ನಗರವಾಗುತ್ತದೆ.

ಕೊನೆಯದಾಗಿ, ಬೆಂಗಳೂರಿನ ಟ್ರಾಫಿಕ್ ಪರಿಸ್ಥಿತಿಯು ಒಂದು ಪ್ರಮುಖ ಕಾಳಜಿಯಾಗಿದೆ ಮತ್ತು ಇದರ ಮೇಲೆ ಸಂಬಂಧಪಟ್ಟ ಎಲ್ಲರ ತಕ್ಷಣದ ಗಮನದ ಅಗತ್ಯವಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರಕಾರ ಮತ್ತು ನಾಗರಿಕರು ಒಟ್ಟಾಗಿ ಶ್ರಮಿಸ ಬೇಕು. ಮೂಲಸೌಕರ್ಯ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವುದು, ಸಾರ್ವಜನಿಕ ಸಾರಿಗೆಯ ಬಳಕೆ ಯನ್ನು ಉತ್ತೇಜಿಸುವುದು ಮತ್ತು ಪರ್ಯಾಯ ಸಾರಿಗೆ ವಿಧಾನಗಳನ್ನು ಉತ್ತೇಜಿಸುವುದರಿಂದ ಟ್ರಾಫಿಕ್ ದಟ್ಟಣೆ ಕಡಿಮೆ ಯಾಗುತ್ತದೆ. ಬೆಂಗಳೂರಿನ ರಸ್ತೆಗಳನ್ನು ಸುರಕ್ಷಿತವಾಗಿಸಿ ಎಲ್ಲರಿಗೂ ಸುಲಭವಾಗಿ ಉಪಯೋಗಿಸಲಾಗುವಂತೆ ಮಾಡಲು ನಾವೆಲ್ಲರೂ ಟೊಂಕ ಕಟ್ಟೋಣ.

Read E-Paper click here