ಅಲೆಮಾರಿ ಡೈರಿ
ಸಂತೋಷ್ ಕುಮಾರ್ ಮೆಹೆಂದಳೆ
ಅಲೆಮಾರಿತನ ಎಂಬುವುದು ಶುದ್ಧ ಪಾಠಶಾಲೆಯಲ್ಲದೇ ಬೇರೇನಲ್ಲ. ಕಾರಣ ಇತಿಹಾಸದಲ್ಲಿ ಅಲೆಮಾರಿತನ ಇಲ್ಲದೆ ಹೋಗಿದ್ದರೆ ಜಗತ್ತು ಇಷ್ಟೆಲ್ಲ ಬೆಳೆಯುತ್ತಲೇ ಇರಲಿಲ್ಲ. ವಿಪರೀತ ಕಡುಕಷ್ಟಗಳ ಮಧ್ಯೆ, ಭಯಾನಕ ನೈಸರ್ಗಿಕ ವೈಫರಿತ್ಯಗಳಿದ್ದಾಗ್ಯೂ ಜಗತ್ತು
ಅಥವಾ ಭೂಮಿ ಎಂದರೆ ಏನೆನ್ನುವುದೇ ಗೊತ್ತಿಲ್ಲದಿದ್ದಾಗಲೂ ಮಾನವ ಮೊದಲು ಆರಂಭಿಸಿದ್ದೆ ಅಲೆಮಾರಿತನ.
ಬಹುಶಃ ಆವತ್ತು ಹೀಗೊಂದು ಹುಕಿ ಬಾರದಿದ್ದರೆ ಮನುಷ್ಯ ಜಗತ್ತು ಕಂಡುಹಿಡಿಯಲೇ ಇನ್ನೂ ಒಂದು ಶತಮಾನ ಬೇಕಾಗು ತ್ತಿತ್ತೇನೋ. ಭೂಮಿಯ ಮೇಲೆ ಮೊದಲು ಸಂಶೋಧನೆ ಅಥವಾ ಇನ್ನೇನಾದರೂ ಘಟಿಸಿದೆ ಎಂದಾಗಿದ್ದೇ ಆದರೆ ಅದಕ್ಕೆ ಮೂಲವೇ ಅಲೆಮಾರಿತನ. ಬದುಕಿದ್ದಾಗಲೇ ಒಮ್ಮೆ ಕಾಶಿ ನೋಡಬೇಕಿತ್ತು ಎನ್ನುವವರೂ ಇವತ್ತು ಕೌಬಾಯ್ ಹ್ಯಾಟ್ ಹಾಕಿ ಕೊಂಡು ಕೌಲಾಲಂಪುರ ಸುತ್ತಿ ಬರುತ್ತಿದ್ದಾರೆ. ಕ್ಯಾಂಪಸ್ಸಿಗೆ ಕಾಲಿಡದಿದ್ದವರೂ ಕಾಲಿಗುಲನ ತವರು ಮನೆ ಮಲೇಷ್ಯಾಗೆ
ಸಲೀಸಾಗಿ ಕಾಲು ಚಾಚಿ ಬರುತ್ತಾರೆ.
ಸಾಲವೋ ಮೊದಲೊಮ್ಮೆ ಬಾಲಿಗೂ, ಮಾರಿಷಸ್‌ಗೂ ಹೋಗಿ ಮುಖ ತೋರಿಸಿ ಬರಬೇಕು ಎಂದು ಅದಕ್ಕೆ ತಕ್ಕ ಬಡ್ಜೆಟ್
ಹಾಕಿಕೊಳ್ಳುವ ಹದಿಹರೆಯದವರ ಹನಿಮೂನು ಹುಟ್ಟಿದ್ದೇ ಜೀನ್ಸ್‌ಗಳಲ್ಲಿ ಅಡರಿರುವ ಅಲೆಮಾರಿತನದಿಂದ. ಮನುಷ್ಯ ಹುಟ್ಟಾ ಅಲೇಮಾರಿ. ಏನೂ ಮಾಡದಿದ್ದರೂ ನಾಲ್ಕು ದಿನ ತಿರುಗಾಡಬೇಕಿತ್ತು ಮಾರಾಯ ಎಂದು ಬಡಬಡಿಸುತ್ತಾನೆ. ಕಾರಣ ತಿರುಗಾಟ, ಅಲೆಮಾರಿತನ, ಕಾಲಲ್ಲಿ ನಾಯಿ ಗೆರೆಗಳಿವೆ, ಅವನೋ ಬರೀ ತಿರಗ್ತಾನೆ ಮಾರಾಯ, ಅವಳಾ ಊರೂರು ಸುತ್ತೋದ್ರಲ್ಲೆ ಅವಳ
ಜೀವನ ಮುಗೀತು, ಆಕೀ ಬಿಡ್ರಿ ಬರೆ ಅಡ್ಯಾಡೊದೇ ಆಯ್ತು ಎಂಬೆಲ್ಲ ಕಮೆಂಟುಗಳಾಚೆಗೆ ನಿಂತು ನೋಡಿ.
ಎಲ್ಲೆಡೆ ಇರೋದು ಶುದ್ಧ ಕಬೋಜಿಯಂತೆ ಸುತ್ತಲು ಹೋದ ಆ ಮೂಲಕ ಒಂದು ದಶಕಕ್ಕಾಗುವಷ್ಟು ಅನುಭವದ ಕತೆಗಳನ್ನು ಹೊತ್ತು ತಂದವರ ಅಭಿವ್ಯಕ್ತಿಗಳೇ. ಹಾಗೆ ತಿರುಗಾಡಿದವರ ಕತೆಗಳ ಮುಂದೆ ಉಳಿದದ್ದು ಏನೇನೂ ಅಲ್ಲ. ಏನುಂಟು ಏನಿಲ್ಲ ತಿರುಗುತ್ತಾ ಹೋದಂತೆ ಅಲೆಮಾರಿತನ ದಲ್ಲಿ ಕತೆಗಳಿವೆ, ನೋವುಗಳಿವೆ, ಜವಾಬ್ದಾರಿ ಯಿದೆ, ಸಾಹಿತ್ಯದ ಹಲವು ಸರಕುಗಳಿವೆ, ಕಲೆಯ ಬಲೆಯಿದೆ, ಸಂಗೀತಕ್ಕೆ ಅಲ್ಲಲ್ಲೆ ನಿಲ್ಲಿಸುವ ನಾದವಿದೆ, ಕಂಡೂ ಕಾಣದ ಜೀವ ಜಲದ ಒಳಸುಳಿಗಳಿವೆ, ಸಾಯು ವವರಿಗಾಗೇ ಯಾವಾಗ ಸಾಯುತ್ತಾರೆ ಎಂದು ಕಾಯುತ್ತಾ ಕೂರುವ ಮನೆಗಳಿವೆ, ಮಾನವ ಭಕ್ಷಕರ ವಿಪರೀತಗಳಿವೆ, ಕದ್ದು
ಬದುಕುವವರ ಭಾನಗಡಿಗಳಿವೆ.
ಎಲ್ಲದಕ್ಕೂ ಮಿಗಿಲಾಗಿ ಪ್ರತಿ ಕಡೆಯಲ್ಲೂ ಹೋದಲ್ಲೆಲ್ಲ ಬದುಕು ಭಿನ್ನವಾಗಿದೆ ಮತ್ತು ಯಾರ ಬದುಕೂ ಬದುಕಲಾರದಷ್ಟು ನಿಕೃಷ್ಟವಲ್ಲ ಎನ್ನುವ ಧನಾತ್ಮಕ ಸಂವೇದನೆ ಹೊರಡಿಸುವ ತಾಕತ್ತಿದ್ದರೆ ಅದು ಅಲೆಮಾರಿತನಕ್ಕೆ ಮಾತ್ರ. ಅದು ದೂರದ ಮಣಿಪುರದ ಯಾಂಖುಲ್ಲೇನ್ ಎಂಬ ಆರ್ಯರು ಭಾರತಕ್ಕೆ ಪ್ರವೇಶಿದರೆನ್ನಲಾದ ಭಾಗಕ್ಕೆ ಸಾಲಾಗಿ ನೆಟ್ಟ ಕಲ್ಲಿನ ತೋರಣ ಇರಬಹುದು, ಮೇಘಾಲಯದ ಜೀವಂತ ಹಾವುಗಳನ್ನು ಬಿಸಿನೀರಿನಲ್ಲದ್ದಿ ಅಲ್ಲೆ ಮಾರುವ ಕಾಂಜೀಕ್ ಬುಡಕಟ್ಟಿನವರ ಅಹಾರವಿರಬಹುದು, ಓಡಿಸ್ಸಾದ ಕಂಚಿನ ತಟ್ಟೆಯ ಮೇಲೆ ಬಿಸಿ ಆರುವ ಮೊದಲೇ ಸವಿಯುವ ಅರೆ ಹುಳಿ ಮೊಸರಿನ ಪರಿಮಳ, ಬಂಗಾಲದ ಮುತ್ತುಗದೆಲೆಯ ರಸಗುಲ್ಲಾ, ಶೆಂಡಿಬಾ-, ಜೈಸಲ್ಮೇರ್ ಕೊಟ್ಟಕೊನೆಯ ತುದಿಯಲ್ಲಿ ರಾತ್ರಿಚಳಿಗೆ ದುನಿ ಕಾಯಿಸುವಾಗ ಕಲ್ಬೇಲಿಯಾ ನೃತ್ಯ ನೋಡುತ್ತಾ ಸವಿಯುವ ಸಾವಿರ ರು. ಕೆ.ಜಿ ತರಕಾರಿ ಎಂದೇ ಹೆಸರಾದ ಕೇರ್ ಸಾಂಗ್ಡಿಯ ಖಾರಕ್ಕೆ ಸಣ್ಣಗೆ ಬೆವರುತ್ತಾ, ಲಡಾಕಿನ ಬುಡಾರ್ ಖುರ್ದ್‌ನ ಕೆಂಡದ ರೊಟ್ಟಿಗೆ ಆಲೂ ಮೇಲೆ ಕರಿಮೆಣಸು ಪುಡಿ ಉದುರಿಸಿ ತಿನ್ನುತ್ತಾ, ಹಿಮದ ನಾಡಿನಲ್ಲಿ ಸ್ಕಿಯಿಂಗ್ ಮಾಡುವ ಬಯಕೆಗೆ ಪಕ್ಕಾಗಿ, ಎರಡ್ಮೂರು ಡಿಗ್ರಿ ಕೊರೆವ ಚಳಿಯಲ್ಲಿ ಯಾವ ದೇಶ, ನಾಡು ಎನ್ನುವುದನ್ನೂ ನೋಡದೆ ಒತ್ತೊತ್ತಾಗಿ ಮುದುರಿ ಮಲಗುವ ಖಿಲೋನ್‌ಭಾಗ್ ಹೀಗೆ ಲೆಕ್ಕಕ್ಕೇ ಸಿಗದ ಅದ್ಭುತ ಭಾರತ ಜಗತ್ತಿಗೇ ಅತಿ ಕಡಿಮೆ ಬೆಲೆಯ, ಸುಂದರ ಪ್ರವಾಸಿ ನಾಡು.
ಅಷ್ಟಕ್ಕೂ ಇವತ್ತಿನ ತಲೆಮಾರಿನ ಆಸ್ಥೆ ಇರುವುದೇ ಅಲೆಮಾರಿತನದಲ್ಲಿ. ಅಲ್ಲೆಲ್ಲ ಹುಟ್ಟುವ, ದಕ್ಕುವ ಅಪರೂಪದ ಕತೆಗಳಲ್ಲಿ. ಅಂತಿಮವಾಗಿ ಆಕೆಯ ಆಸ್ಥೆ ಎಂದರೆ ತಿರುಗಾಟವೇ. ಅವನ ಹುಡುಗಾಟದ ಪಸೆ ಇರುವುದೇ ಓಡಾಟದಲ್ಲಿ, ಅವಳೊಬ್ಬಳ ಸೊಲೊ ಟ್ರಾವೆಲ್ ಜೀವನ ಅತಿ ದೊಡ್ಡ ಅದ್ಭುತ. ಇವನೊಬ್ಬ ಕೈಯ್ಯಲ್ಲಿ ಕಾಸಿಲ್ಲದಿದ್ದರೂ ಹತ್ತಾರು ದೇಶ ತಿರುಗುವ ಕನಸಿಸುತ್ತಾ, ಅದೆಲ್ಲ ಆಗದಿದ್ದರೂ ಹತ್ತಾರು ರಾಜ್ಯವನ್ನು ಬರಿಗೈಯ್ಯಲ್ಲೆ ಸುತ್ತಿಬಿಡುತ್ತಾನೆ.
ಆದರೆ ನಾವುಗಳು ವಿದೇಶಿಗರನ್ನು ನೋಡುವ ಅಚ್ಚರಿಯ ಕಂಗಳಲ್ಲಿ ನಮ್ಮ ಸುತ್ತ ಮುತ್ತಲ ಅಚ್ಚರಿಗಳನ್ನು ದಿಟ್ಟಿಸುತ್ತಿಲ್ಲ. ಆದರೆ ಅಲೆಮಾರಿತನ ಹಾಗಲ್ಲ. ಎಲ್ಲವನ್ನು ಒಂದೇಟಿಗೆ ಆದರೆ ಅತ್ಯಂತ ಕರಾರುವಕ್ಕಾಗಿ ಕಲಿಸಿಬಿಡುತ್ತದೆ. ಎಂಥೆಂಥವನೂ
ಕಕಾಬಿಕ್ಕಿಯಾಗಿ ನಿಲ್ಲುವ ಪರಿಸ್ಥಿತಿ ತಂದೂ, ಅಷ್ಟೇ ವೇಗದಲ್ಲಿ ಬದುಕು ಕಟ್ಟಿಕೊಳ್ಳುವ ಅದ್ಭುತ ಚಾಕಚಕ್ಯತೆಯನ್ನೂ ಕಲಿಸುತ್ತದೆ. ಅದಕ್ಕಾಗೆ ಒಂದು ಮಾತು ಚಾಲ್ತಿಯಲ್ಲಿದೆ.
ಹಿಂದೂಸ್ತಾನ ನಹೀ ದೇಖಾ,
ತೋ
ದುನಿಯಾ ಮೇ ಕುಚ್ ನಹೀ ದೇಖಾ.. ಇದನ್ನು ಉತ್ತರ ಭಾರತದ ಕಡೆಯಲ್ಲಿ ಅಂತಾರಾಷ್ಟ್ರೀಯ ಗೈಡುಗಳು ಮಾತಿಗೊಮ್ಮೆ
ವಿದೇಶಿಗರಿಗೆ ಪುನರುಚ್ಚರಿಸುತ್ತಾರೆ. ಕಾರಣ ಪ್ರತಿ ನೂರು ಮೀಟರಿಗೊಮ್ಮೆ ಬದಲಾಗುವ, ಊರಿಗೊಂದಾವರ್ತಿ ವಿಶೇಷವಾಗುವ ದೇಶ ಭಾರತ. ಇದರ ನೆಲ, ಜಲದ ಭಿನ್ನತೆ ಬರೀ ಸ್ಥಿರಚಿತ್ರಣದಲ್ಲಷ್ಟೆ ಅಲ್ಲ, ರುಚಿ ಮತ್ತು ಉಡುಗೆ ತೊಡುಗೆಯಲ್ಲೂ ವೈವಿಧ್ಯತೆ ಎದ್ದು ಕಾಣುತ್ತಲೇ ಇರುತ್ತದೆ.
ಪ್ರತಿ ರಾಜ್ಯ, ಅದರ ಜಿಲ್ಲೆಯ ಒಂದೊಂದು ಭಾಗವೂ ಪ್ರವಾಸಕ್ಕೆ ಯೋಗ್ಯ ಸ್ಥಳವಾಗಿ ಇತಿಹಾಸ ಹೊಂದಿದ್ದರೆ, ನಾವು ಮಾತ್ರ ಕಡಿಮೆ ಬೆಲೆಯ ದೇಶ ಪ್ರವಾಸ ಯಾವುದಿದೆ ಎಂದು ಹುಡುಕುವ ಅರ್ಜೆಂಟಿಗೆ ಬಿದ್ದಿರುತ್ತೇವೆ. ಚಿತ್ರವೆಂದರೆ ಒಂದು ಹೊಡೆತಕ್ಕೆ ನೋಡಿ ಪೂರೈಸುವ ದೇಶವಲ್ಲ ಭಾರತ ಎಂದು ತಿಂಗಳುಗಟ್ಟಲೇ ಇದ್ದ ನಂತರವೂ ಮತ್ತೊಂದು ತುದಿಯನ್ನು ನೋಡಲು ವಿದೇಶಿಗರು ಮರುವರ್ಷವೂ ಮತ್ತೊಮ್ಮೆ ಭಾರತಕ್ಕೆ ದಾಂಗುಡಿಯಿಡುವ ಯೋಜನೆ ರೂಪಿಸುತ್ತಿರುತ್ತಾರೆ.
ಕೋಟೆ ಕೊತ್ತಲ, ಸಮುದ್ರ, ಜಲಪಾತ, ಪರ್ವತ ಪ್ರದೇಶ, ಟ್ರೆಕ್ಕಿಂಗು, ಯೋಗ ಮೆಡಿಟೇಶನ್ನು, ನೀರ ಮೇಲಿನ ಸಾಹಸ, ಸೈಕ್ಲಿಂಗು, ಸ್ವಿಮಿಂಗು, ಫ್ಯಾಮಿಲಿ ಕ್ಯಾಂಪು, ಸ್ಟಡೀ ಟೂರು, ಬಂಡೆಗಳ ನಾಡು, ಬಯಲು ಪ್ರದೇಶ, ಬರೀ ಹಸಿರು ಕಣಿವೆ, ಮಂಜು ಹೊದ್ದ ಗುಡ್ಡಗಳು, ಹಿಮ ಉದುರಿಸುತ್ತಾ ವರ್ಷವಿಡೀ ಬೆಳ್ಳಗೆ ನುಲಿಯುವ ಪರ್ವತಗಳು, ಸಾಲುಸಾಲು ಪಾಸ್‌ಗಳು, ಜಗತ್ತಿನ ಅತೀ
ಎತ್ತರದ ಮೋಟಾರು ಚಲಿಸುವ ರಸ್ತೆ, ಅತೀ ಕೆಳಮಟ್ಟದ ಕಾಲ್ದಾರಿ, ಮರದ ಮೇಲಿನ ನಡಿಗೆ, ಸಮುದ್ರದೊಳಗೆ ಇದ್ದು
ಒದ್ದೆ ಯಾಗದಂತೆ ಓಟ, ಮುಳುಗಿಸಲೊಲ್ಲದ ಸಾಗರಗಳು, ಮನುಷ್ಯ ಕಾಲೇ ಇಡದ ಕಾಡುಗಳು, ಹುಲಿ ಚಿರತೆಗಳು ರಸ್ತೆಗೆ ಬರುವ ಅಪರೂಪದ ಅಭಯಾರಣ್ಯಗಳು, ಬತ್ತಲೊಲ್ಲದ ನದಿಗಳು, ದಿನವಿಡೀ ಚಲಿಸಿದರೂ ಮುಗಿಯದ ಮರಳುಗಾಡು, ನೂರಾರು ಕಿ.ಮೀ.ಗಳ ಸಪಾಟು ಮೈದಾನಗಳು, ಒದ್ದೆ ಮರುಭೂಮಿಗಳು, ಸೂರ್ಯನ ಸುಳಿವೂ ಬಿಟ್ಟುಕೊಳ್ಳಲೊಪ್ಪದ ಕಗ್ಗಾನು
ಮಲೆಗಳು, ಎಲ್ಲ ಮರೆತು ಯಾವ ಸಿಗ್ನಲ್ಲೂ ಬಾರದ ಜಾಗದಲ್ಲಿ ಕೂತಿದ್ದು ಬರುವ ಅಪ್ಪಟ್ಟ ಎತ್ತರದ ಹಸಿರು ಹಳ್ಳಿಗಳು, ಈಗಲೂ ರಸ್ತೆಯೇ ಇರದ, ಆದರೆ ಯಾವೊಬ್ಬ ಪ್ರವಾಸಿಯೂ ತಪ್ಪದೇ ಭೇಟಿಕೊಡುವ ಸರಹದ್ದಿನ ಊರುಗಳು, ಒಂದಾ ಎರಡಾ..? ನಿರಂತರವಾಗಿ ಕಳೆದ ಎರಡು ದಶಕಗಳಿಂದ ನಾನು ಪ್ರತೀ ರಾಜ್ಯವನ್ನೂ ಸುತ್ತುತ್ತಲೇ ಇದ್ದೇನೆ.
ಹುಡುಕಿದಷ್ಟೂ ಅಕ್ಷಯ ಪಾತ್ರೆ ಇದ್ದಂತೆ ಹೊಸ ರೂಪದ ಹಲವು ಸ್ಥಳಗಳು ಕಾಲಿಗಡರುತ್ತಲೇ ಇರುತ್ತವೆ. ಕತೆಗಳಿಗೆ ಬರಲ್ಲ. ನೋಡಿದಷ್ಟೂ ಮುಗಿಯುತ್ತಿಲ್ಲ. ಇವತ್ತಿಗೂ ಬನರಾಸ್‌ನಲ್ಲಿಯೇ ಇರುವವರಿಗೆ ಝಾನ್ಸಿಯ ಹುಟ್ಟಿನ ಸ್ಥಳವೇ ಗೊತ್ತಿರುವುದಿಲ್ಲ. ಪ್ರಯಾಗಕ್ಕೆ ಹೋದರೆ ಅಜಾದ್ ಎನ್ನುವ ದೇಶಪ್ರೇಮಿಯ ಜಾಗದ ಸುಳಿವು ಅಪರೂಪ. ತುಳಸಿಘಾಟ್‌ನಲ್ಲಿ ದಿನಬೆಳಗಾದರೆ
ಸಾಂಪ್ರದಾಯಿಕ ಕುಸ್ತಿ ನಡೆಯುತ್ತದೆ. ಲಡಾಕಿನ ಬುಡದಲ್ಲೊಂದು ಗುಪ್ತವಾದ ಪುರಾಂಗ್ ಲಾ ಅಭೇದ್ಯವಾಗೇ ಉಳಿದಿದ್ದರೆ, ಇತ್ತ ಗುಜರಾತಿನ ವಾವ್ ಗಳಿಗೂ ಕೊಪ್ಪಳದ ಬಾವಿಗಳಿಗೂ ಇರುವ ಸಾಮ್ಯದ ಮಾಹಿತಿಯೇ ನಮಗಿಲ್ಲ.
ಹಾಗೆ ಆ ನೋಟ, ಊಟ, ಉಡುಗೆ ತೊಡುಗೆ, ಹಲವು ಭಾವನೆಗಳ ಕಥಾನಕಗಳ ನಾಡು, ಹೋದಲ್ಲಿ ಬಂದಲ್ಲಿ ಕಾಲಿಗಡರುವ ಕತೆಗಳು ಎಲ್ಲ ತಾಕಿದ್ದು ಇಂಥ ಅಲೆಮಾರಿತನದಿಂದಲೇ. ಪ್ರತೀ ಪ್ರವಾಸವೂ ಒಂದೊಂದು ಹೊಸ ಕತೆಗಳ ಸಂಗಮ. ಪ್ರವಾಸ ಎಂದರೆ ಬರೀ ತಿರುಗುವುದಲ್ಲ, ಸೆಲಿ ಕ್ಲಿಕ್ಕಿಸುವುದಲ್ಲ, ಹೇಗೆ ಒಂದು ದೇಶವನ್ನು ನೋಡಬೇಕು, ಹೇಗೆ ವಿವರಗಳನ್ನು ಕಲೆ ಹಾಕ ಬೇಕು..? ಹೇಗೆ ಪಾರಂಪರಿಕ ಮೌಲ್ಯಗಳನ್ನು ಮರೆಯದೆ ಅರಿಯಬೇಕು ಎನ್ನುವುದನ್ನು ತಿಳಿಸುವುದು ಇದರ ಉದ್ದೇಶ. ಬರುವ ವಾರದಿಂದ ಒಂದೊಂದು ರಾಜ್ಯ ಹತ್ತಾರು ತಾಣ.. ಪ್ರತಿ ವಾರ.. ಹೊಸ ಹೊಸ ವಿಶೇಷ, ಹೊಸ ತರಹದ ಕಥಾನಕ ಗಳೊಂದಿಗೆ ನಿರಂತರವಾಗಿ, ಅಲೆಮಾರಿಯ ಡೈರಿ…