Wednesday, 11th December 2024

ಚಿಕಿತ್ಸಾ ಪದ್ದತಿಗಳ ನಡುವಿನ ಸಂಘರ್ಷಕ್ಕೆ ಸಂಯೋಜಿತ ಚಿಕಿತ್ಸೆ

ಅಭಿವ್ಯಕ್ತಿ 

ಗಣೇಶ್ ಭಟ್‌, ವಾರಣಾಸಿ

ganeshabhatv@gmail.com

ಭಾರತದಲ್ಲಿ ಜನರು ರೋಗಗಳ ಚಿಕಿತ್ಸೆಗಾಗಿ ವಿವಿಧ ಚಿಕಿತ್ಸಾ ಪದ್ಧತಿಗಳ ಮೊರೆ ಹೋಗುತ್ತಾರೆ. ಆಧುನಿಕ ವೈದ್ಯಕೀಯ ಪದ್ಧತಿ(ಅಲೋಪತಿ), ಆಯುರ್ವೇದ, ಹೋಮಿಯೋಪತಿ, ಪ್ರಕೃತಿ ಚಿಕಿತ್ಸೆ (ನ್ಯಾಚುರೋಪತಿ),ಯುನಾನಿ, ಯೋಗ, ಸಿದ್ಧ, ಸೋವರಿಗ್ಪಾ(ಟಿಬೇಟಿಯನ್ ಸಾಂಪ್ರದಾಯಿಕ ಚಿಕಿತ್ಸೆ) ಮೊದಲಾದ
ವೈದ್ಯಕೀಯ ಪದ್ಧತಿಗಳು ಭಾರತದಲ್ಲಿ ಬಳಕೆಯಲ್ಲಿವೆ.

ಅಲೋಪತಿ ಮತ್ತು ಹೋಮಿಯೋಪತಿಗಳು ವಿದೇಶಗಳಲ್ಲಿ ಬೆಳೆದು ಬಂದರೆ, ಆಯುರ್ವೇದ ಮೊದಲಾದ ಚಿಕಿತ್ಸಾ ವಿಧಾನಗಳು ಭಾರತೀಯ ಉಪಖಂಡ ದಲ್ಲಿ ಬೆಳೆದುಬಂದವು ಗಳು. ಭಾರತೀಯ ಔಷಧ ಪದ್ಧತಿಗಳು ಸಾವಿರಾರು ವರ್ಷ ಗಳಿಂದ ಬೆಳೆದುಬಂದಿವೆ. ಆಯುರ್ವೇದಕ್ಕೆ ಚರಕ ಸಂಹಿತೆ, ಸುಶ್ರುತ ಸಂಹಿತೆ, ಅಷ್ಟಾಂಗ ಹೃದಯಂ ಮತ್ತು ಅಷ್ಟಾಂಗ ಸಂಗ್ರಹ, ಶಾಂಧರ ಸಂಹಿತಾ, ಮಾಧವ ನಿದಾನಂ, ಭಾವ ಪ್ರಕಾಶ ಮೊದಲಾದ ಪ್ರಾಚೀನ ಗ್ರಂಥಗಳಿವೆ.

ಆಯುರ್ವೇದ ದಲ್ಲಿ ವ್ಯಕ್ತಿಯ ಪ್ರಕೃತಿ, ದೋಷ, ಧಾತು, ಮಲ, ಅಗ್ನಿ(ಜೀರ್ಣ) ಹಾಗೂ ಸ್ರೋತಗಳ ಆಧಾರದಲ್ಲಿ ದರ್ಶನ, ಸ್ಪರ್ಷನ ಹಾಗೂ ಪ್ರಶ್ನ ಹಾಗೂ ನಾಡಿ ಪರೀಕ್ಷೆ ವಿಧಾನಗಳ ಮೂಲಕ ರೋಗವನ್ನು ಪತ್ತೆ ಮಾಡಲಾಗುತ್ತದೆ. ಅಲೋಪತಿ ಅಥವಾ ಆಧುನಿಕ ವೈದ್ಯ ಶಾಸಕ್ಕೆ ಸುಮಾರು 200 ವರ್ಷಗಳ ಇತಿಹಾಸ ವಿದೆ. ರೋಗ ನಿರ್ಣಯವನ್ನು ದೈಹಿಕ ಪರೀಕ್ಷೆಯ ಮೂಲಕ ಹಾಗೂ ರೋಗ ಲಕ್ಷಣಗಳ ಮೂಲಕ ಮಾಡಲಾಗುವುದಾದರೂ ಅಲ್ಲಿ ಆಧುನಿಕ ಪ್ರಯೋಗಾಲಯಗಳ ಹಾಗೂ ತಂತ್ರಜ್ಞಾನಗಳ ಸಹಾಯವನ್ನು ಪಡೆಯಲಾಗುತ್ತದೆ.

ಪ್ರಯೋಗಾಲಯ ಗಳು ದಿನಕಳೆದಂತೆ ಅತ್ಯಾಧುನಿಕವೂ ನಿಖರವೂ ಆಗುತ್ತಿವೆ. ಆಧುನಿಕ ಸಂಶೋಧನೆಗಳು, ವಿಕಾಸ ಹೊಂದಿದ ಪ್ರಯೋಗಾಲಯಗಳು, ತಂತ್ರಜ್ಞಾನ, ಸ್ಕ್ಯಾನಿಂಗ್, ಸಿಟಿ ಸ್ಕ್ಯಾನಿಂಗ್ ,ಎಮ್‌ಆರ್‌ಐ ಸ್ಕ್ಯಾನಿಂಗ್ ಮೊದಲಾದ ಸೌಕರ್ಯಗಳಿಂದ ಆಧುನಿಕ ವೈದ್ಯಕೀಯ ಪದ್ಧತಿಯು ಹೆಚ್ಚು ತಂತ್ರಜ್ಞಾನಾ ಧಾರಿತ ಎಂದು ನಿರೂಪಿಸಲ್ಪಟ್ಟಿತು. ಆಧುನಿಕ ವೈದ್ಯಕೀಯ ಪದ್ಧತಿಯ ಅಭಿವೃದ್ಧಿಗೆ ಸಿಕ್ಕಿದ ಪ್ರೋತ್ಸಾಹ ಭಾರತೀಯ ವೈದ್ಯಪದ್ಧತಿಗಳಿಗೆ ಸಿಕ್ಕಿಲ್ಲ. ಆಧುನಿಕ ವೈದ್ಯಕೀಯ ಪದ್ಧತಿ ಜಾಗತಿಕವಾಗಿ ಮಾನ್ಯತೆ ಪಡೆದ ಪದ್ಧತಿ. ಮುಂದುವರಿದ ದೇಶಗಳಲ್ಲಿ ಆಧುನಿಕ ವೈದ್ಯಕೀಯ ವ್ಯವಸ್ಥೆಯ ಬೆಳವಣಿಗೆಗೆ ಹಾಗೂ ಹೊಸ
ಹೊಸ ಆವಿಷ್ಕಾರಗಳಿಗೆ ಕೋಟಿ ಕೋಟ್ಯಂತರ ಡಾಲರ್‌ಗಳನ್ನು ವ್ಯಯಿಸಲಾಗುತ್ತಿದೆ. ಆದರೆ ಭಾರತೀಯ ಚಿಕಿತ್ಸಾ ವ್ಯವಸ್ಥೆಗಳ ಅಭಿವೃದ್ಧಿಗೆ ಪ್ರೋತ್ಸಾಹ ಸಿಕ್ಕಿದ್ದು ತೀರಾ ಇತ್ತೀಚೆಗೆ.

ಆಯುರ್ವೇದ, ಹೋಮಿಯೋಪತಿ, ನ್ಯಾಚುರೋಪತಿ, ಯುನಾನಿ, ಯೋಗ, ಸಿದ್ಧ ಮತ್ತು ಸೋವ ರಿಗ್ಪಾಗಳಿಗೆ ಉತ್ತೇಜನ ನೀಡಲು ಆಯುಷ್ ಇಲಾಖೆಯು ಅಸ್ತಿತ್ವಕ್ಕೆ ಬಂದುದು 2003ರಲ್ಲಿ ಹಾಗೂ ಪ್ರತ್ಯೇಕ ಆಯುಷ್ ಮಂತ್ರಾಲಯವು (ಮಿನಿಸ್ಟ್ರಿ ಆಫ್ ಆಯುಷ್) ರೂಪುಗೊಂಡದ್ದು 2014ರಲ್ಲಿ. ಪ್ರೋತ್ಸಾಹದ ಕೊರತೆ ಯಿಂದಾಗಿ ಭಾರತೀಯ ಚಿಕಿತ್ಸಾ ಪದ್ಧತಿಯು ಆಧುನಿಕ ಔಷಽಯ ಪದ್ಧತಿಯ ಜತೆಗಿನ ಸ್ಪರ್ಧೆಯಲ್ಲಿ ಹಿಂದುಳಿಯಿತು. ಇತ್ತೀಚೆಗಿನ ದಿವಸಗಳಲ್ಲಿ ಭಾರತದಲ್ಲಿ ಆಧುನಿಕ ವೈದ್ಯಕೀಯ ಹಾಗೂ ಭಾರತೀಯ ವೈದ್ಯಕೀಯ ವ್ಯವಸ್ಥೆಗಳ ಪ್ರತಿಪಾದಕರ ನಡುವೆ ಬಹಳ ಸಂಘರ್ಷಗಳು ನಡೆಯುತ್ತಿದೆ. ಕರೋನಾ ಔಷಧಿಯ ವಿಚಾರವಾಗಿ ಅಲೋಪತಿ ವೈದ್ಯರ ಒಕ್ಕೂಟ ಸಂಸ್ಥೆಯಾದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐಎಂಎ) ಹಾಗೂ ಭಾರತೀಯ ವೈದ್ಯ ಪದ್ಧತಿಯ ಪ್ರತಿಪಾದಕ ರಾಗಿರುವ ಪತಂಜಲಿಯ ಬಾಬಾ ರಾಮ್ ದೇವ್ ನಡುವೆ ಮಾತಿನ ಚಕಮಕಿ ನಡೆದಿದೆ.

ಉತ್ತರಾಖಂಡ್‌ನ ಐಎಂಎ ಘಟಕ ಸಂಸ್ಥೆಯು ರಾಮ್ ದೇವ್ ಮೇಲೆ 1000 ಕೋಟಿ ರುಪಾಯಿಗಳ ಮಾನನಷ್ಟ ಮೊಕದ್ದಮೆಯನ್ನೂ ಹೂಡಿದೆ. ಈ ವಿಷಯವಾಗಿ ದೇಶಾದ್ಯಂತ ಪರ ವಿರೋಧ ಚರ್ಚೆಗಳಾಗುತ್ತಿದೆ. ಚಿಕಿತ್ಸಾ ಪದ್ಧತಿ ಪ್ರಾಚೀನವಾಗಲಿ, ಆಧುನಿಕವಾಗಲಿ, ಇವುಗಳೆರಡರ ಗುರಿಯೂ ಮನುಕುಲವನ್ನು ರೋಗ ಗಳಿಂದ ಮುಕ್ತಗೊಳಿಸುವುದು. ಪರಸ್ಪರ ಸಂಘರ್ಷ ಮಾರ್ಗವನ್ನು ಹಿಡಿದರೆ ನಷ್ಟವಾಗುವುದು ಮಾನವ ಜನಾಂಗಕ್ಕೇ!

ಆಧುನಿಕ ವೈದ್ಯಕೀಯ ವ್ಯವಸ್ಥೆಯಲ್ಲಿ ತುರ್ತು ಹಾಗೂ ತೀವ್ರ ತರ ರೋಗಗಳಿಗೆ ಅತ್ಯುತ್ತಮ ಚಿಕಿತ್ಸೆ ಇದೆ. ರೋಗದ ಕಾರಣಗಳನ್ನು ವಿಶ್ಲೇಷಿಸುವ ತಂತ್ರಜ್ಞಾನ ಹಾಗೂ ಡಾಟಾಗಳ ಲಭ್ಯತೆಯಿರುವುದರಿಂದ ಅಲೋಪತಿ ಚಿಕಿತ್ಸಾ ಪದ್ಧತಿಯು ರೋಗಗಳಿಗೆ ಕ್ಷಿಪ್ರ ಪರಿಹಾರವನ್ನು ಕೊಡುತ್ತದೆ. ಆದರೆ ದೀರ್ಘಕಾಲೀನ ರೋಗ ಗಳ ಉಪಶಮನದ ವಿಷಯದಲ್ಲಿ ಆಧುನಿಕ ಚಿಕಿತ್ಸಾ ಪದ್ಧತಿ ಅಷ್ಟು ಪರಿಣಾಮಕಾರಿಯಾಗಿಲ್ಲ. ದೀರ್ಘಕಾಲೀನ ರೋಗಗಳ ಉಪಶಮನದಲ್ಲಿ ಆಯುರ್ವೇದ ಮೊದಲಾದ ಭಾರತೀಯ ಚಿಕಿತ್ಸಾ ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿಯಾಗಿದೆ.

ಏಕೆಂದರೆ ಆಯುರ್ವೇದ ವೈದ್ಯಕೀಯ ವ್ಯವಸ್ಥೆಯಲ್ಲಿ ರೋಗಗಳ ಚಿಕಿತ್ಸೆಯ ವಿಚಾರವಾಗಿ ಬಹಳಷ್ಟು ವಿವರಣೆ ಕೊಡಲಾಗಿದೆ. ಆಯುರ್ವೇದ ಹಾಗೂ ಆಧುನಿಕ ವೈದ್ಯಕೀಯ ಪದ್ಧತಿಗಳೆರಡರಲ್ಲೂ ರೋಗಿಗಳ ಪರೀಕ್ಷೆ ಸರಿಸುಮಾರಾಗಿ ಒಂದೇ ರೀತಿಯಿದೆ. ಆಯುರ್ವೇದ ಚಿಕಿತ್ಸಾ ಕ್ರಮಕ್ಕೆ ಆಧುನಿಕ ತಂತ್ರಜ್ಞಾನವನ್ನು
ಅಳವಡಿಸಿಕೊಂಡು ಸಂಯೋಜಿತ ಚಿಕಿತ್ಸೆಯನ್ನು (ಇಂಟೆಗ್ರೇಟೆಡ್ ಟ್ರೀಟ್ಮೆಂಟ್) ಕೊಡುವ ಯಶಸ್ವಿ ಕೆಲಸವು ದಕ್ಷಿಣ ಕನ್ನಡ ಜಿಲ್ಲೆಯ ಸಮೀಪದ ಕೇರಳ ರಾಜ್ಯದ ಕಾಸರಗೋಡಿನ ಕನ್ನಡಿಗ, ಡಾ.ಎಸ್ ಆರ್.ನರಹರಿ, ಎಂ.ಡಿ. ಡರ್ಮೆಟಾಲಜಿ(ಚರ್ಮರೋಗ ಚಿಕಿತ್ಸಾ ತಜ್ಞ) ಇವರ ನೇತೃತ್ವದ ಇನ್ಸ್ಟಿಟ್ಯೂಟ್ ಆಫ್ ಅಪ್ಲೆ ಡ್
ಡರ್ಮೆಟಾಲಜಿ(ಐಎಡಿ)ಯಲ್ಲಿ ನಡೆಯುತ್ತಿದೆ. ಡಾ ನರಹರಿಯವರು ಸಮಾನ ಮನಸ್ಥಿತಿಯ ತಜ್ಞರ ಜೊತೆಗೂಡಿ 1999ರಲ್ಲಿ ಐಎಡಿ ಸಂಸ್ಥೆಯನ್ನು ರೂಪಿಸಿದರು. ಇದೊಂದು ಲಾಭರಹಿತ ಸಂಸ್ಥೆಯಾಗಿದೆ.

ದೀರ್ಘಕಾಲೀನ ಚರ್ಮ ರೋಗಗಳ ಉಪಶಮನಕ್ಕೆ ಸಂಶೋಧನೆ ಗಳನ್ನು ನಡೆಸುವುದು ಈ ಸಂಸ್ಥೆಯ ಉದ್ದೇಶವಾಗಿದೆ. ಸ್ವತಃ ಅಲೋಪತಿ ವೈದ್ಯರಾಗಿದ್ದು ಕೊಂಡು ಆ ವೈದ್ಯ ಪದ್ಧತಿಯ ವ್ಯಾಪ್ತಿ ಹಾಗೂ ಮಿತಿಗಳನ್ನು ಅರಿತವರಾಗಿರುವ ಡಾ.ನರಹರಿಯವರು ಭಾರತೀಯ ವೈದ್ಯಕೀಯ ವ್ಯವಸ್ಥೆಯ ಬಗೆಗೆ ವಿಶೇಷ ಪ್ರೀತಿ ಹಾಗೂ ಜ್ಞಾನವನ್ನು ಹೊಂದಿದವರು. ಐಎಡಿ ಸಂಸ್ಥೆಯಲ್ಲಿ ಅಲೋಪತಿಗೇ ಸವಾಲಾಗಿರುವ ವಿವಿಧ ಚರ್ಮ ರೋಗಗಳಿಗೆ ಆಧುನಿಕ ವೈದ್ಯಕೀಯ ವ್ಯವಸ್ಥೆ ಯೊಂದಿಗೆ, ಆಯುರ್ವೇದ, ಯೋಗ, ಸ್ವೇದನ ಮೊದಲಾದ ವಿಧಾನಗಳ ಚಿಕಿತ್ಸೆಯನ್ನು ಕೊಡಲಾಗುತ್ತಿದೆ. ಐಎಡಿ ಸಂಸ್ಥೆಯಲ್ಲಿ ಆಧುನಿಕ ವೈದ್ಯಕೀಯ ತಜ್ಞರು, ಆಯುರ್ವೇದ ವೈದ್ಯರು, ಯೋಗ ತಜ್ಞರು, ಮಸಾಜರ್‌ಗಳು ಇದ್ದಾರೆ.

ಐಎಡಿ ಸಂಸ್ಥೆಯು ಸಂಯೋಜಿತ ಚಿಕಿತ್ಸೆಗೆ ಮೊದಲು ಎತ್ತಿಕೊಂಡ ರೋಗ ಲಿಂಫಾಟಿಕ್ ಫೈಲೇರಿಯಾಸಿಸ್(ಆನೆಕಾಲು ರೋಗ) ಹಾಗೂ ಲಿಂಫಾಡಿಮಾ (ದುಗ್ಧನಾಳಗಳ ತಡೆಯಿಂದ ಬರುವ ಕಾಲು ಅಥವಾ ಕೈಗಳ ಊತದ ಸಮಸ್ಯೆ). ವುಚೆರೆರಿಯಾ ಬ್ಯಾಂಕ್ರೋಫ್ಟಿ ಹಾಗೂ ಬ್ರೂಗಿಯಾ ಮಲಾಯಿ ಅನ್ನುವ ಸೂಕ್ಷ್ಮ ಪರಾವಲಂಬೀ ಜೀವಿಗಳು ಆನೆಕಾಲು ರೋಗಕ್ಕೆ ಕಾರಣ ವಾಗುತ್ತವೆ. ಈ ರೋಗಾಣುಗಳನ್ನು ಕ್ಯೂಲೆಕ್ಸ್, ಏಡಿಸ್,ಅನೋಫಿಲಿಸ್ ಹಾಗೂ ಮಾನ್ಸೋನಿಯಾ ಅನ್ನುವ ಸೊಳ್ಳೆಗಳು ರೋಗಿಯಿಂದ ಇತರರಿಗೆ ಹರಡಿಸುತ್ತವೆ. ದೇಶದ ಸುಮಾರು ೨.೩ ಕೋಟಿ ಜನರು ಆನೆಕಾಲು ರೋಗದಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಸ್ತನದ ಕ್ಯಾನ್ಸರಿನ  ಚಿಕಿತ್ಸೆಯ ಭಾಗವಾಗಿ ದುಗ್ಧರಸ ಗ್ರಂಥಿಗಳನ್ನು ಶಸಚಿಕಿತ್ಸೆ ಮಾಡುವುದ ರಿಂದ ಆನೆಕಾಲಿನಂತೆ ಕೈಯೂ ಬಾತು ಕೊಳ್ಳುತ್ತದೆ.

ಇದನ್ನು ಲಿಂಫಾಡಿಮಾ ಎಂದು ಕರೆಯಲಾಗುತ್ತದೆ. ದೇಶದ ಆನೆಕಾಲು ರೋಗಿಗಳ ಪೈಕಿ ಶೇ.17 ರೋಗಿಗಳು ಬಿಹಾರ, ಶೇ.15.7 ರೋಗಿಗಳು ಕೇರಳ ಹಾಗೂ ಶೇ.14.6 ರೋಗಿಗಳು ಉತ್ತರ ಪ್ರದೇಶದಲ್ಲಿದ್ದಾರೆ. ಮನುಷ್ಯನ ದೇಹವನ್ನು ಸೇರುವ ಸೂಕ್ಷ್ಮ ಪರಾವಲಂಬಿ ರೋಗಾಣುಗಳು ದೇಹದ ದುಗ್ಧರಸ ನಾಳಗಲ್ಲಿ ನೆಲೆಸಿ ದುಗ್ಧರಸ ಪ್ರವಾಹಕ್ಕೆ ಅಡ್ಡಿಯನ್ನುಂಟು ಮಾಡುತ್ತವೆ. ದುಗ್ಧ ರಸವು ಸಂಗ್ರಹಗೊಂಡು ಕ್ರಮೇಣ ಕಾಲಿನಲ್ಲಿ ಊತವು ಕಂಡುಬರುತ್ತದೆ. ಕಾಲ ಕಳೆದಂತೆ ಕಾಲು ದಪ್ಪವಾಗುತ್ತಾ ವಿಕಾರವಾಗಿ ಬೆಳೆದು ಆನೆಯಕಾಲಿನಂತೆ ತೋರುತ್ತದೆ. ದಪ್ಪವಾದ ಕಾಲಿನಲ್ಲಿ ಚರ್ಮದ ಮಡಿಕೆಗಳು ರೂಪುಗೊಂಡು ಅಲ್ಲಿ ನೀರು ನಿಂತು ಅಲ್ಲಿ ವ್ರಣ ಹಾಗೂ ಕೀವುಗಳಾಗುತ್ತದೆ. ಕಾಲು ದಪ್ಪಗೊಂಡು ಚರ್ಮ ಒಡೆದು ಗಾಯಗಳಾಗುವುದೂ ಇದೆ. ಈ ಹುಣ್ಣುಗಳು ಹಾಗೂ ಗಾಯಗಳ ಮೂಲಕ ದೇಹ ವನ್ನು ವಿವಿಧ ರೀತಿಯ ಸೋಂಕುಗಳು ಪ್ರವೇಶಿಸಿ ರೋಗಿಗೆ ಆಗಾಗ ಜ್ವರ ಬರುತ್ತದೆ. ಆನೆಕಾಲು ರೋಗಿಗಳ ಕಾಲು ಎಷ್ಟು ದಪ್ಪವಾಗುತ್ತದೆ ಎಂದರೆ ರೋಗಿಗಳಿಗೆ ಈ ಕಾಲನ್ನು ಎತ್ತಿ ನಡೆಯಲು ಸಾಧ್ಯವಾಗದಷ್ಟು.

ರೋಗ ಬಾಧಿತ ಕಾಲು 25-30 ಕಿಲೋಗ್ರಾಂಗಳಷ್ಟು ತೂಗುವುದೂ ಇದೆ. ಆಧುನಿಕ ವೈದ್ಯಕೀಯ ವ್ಯವಸ್ಥೆಯಲ್ಲಿ ಆನೆಕಾಲು ರೋಗಕ್ಕೆ ಸೂಕ್ತ ಚಿಕಿತ್ಸೆ ಇಲ್ಲ. ದಪ್ಪವಾಗಿ ಬೆಳೆದ ಕಾಲಿಗೆ ಶಸ ಚಿಕಿತ್ಸೆ ಮಾಡುವುದು ಮಾತ್ರ ಅಲ್ಲಿರುವ ತಾತ್ಕಾಲಿಕ ಪರಿಹಾರ. ಆದರೆ ಶಸ್ತ್ರ ಚಿಕಿತ್ಸೆಯಿಂದ ಕಾಲು ಪುನಃ ದಪ್ಪಗಾಗುವುದನ್ನು ತಡೆಯಲು ಸಾಧ್ಯವಾಗುವುದಿಲ್ಲ. ದುಗ್ಧರಸ ನಾಳಗಳಲ್ಲಿನ ತಡೆಯನ್ನು ನಿವಾರಿಸಲು ಆಗುವುದಿಲ್ಲ. ಶಸ ಚಿಕಿತ್ಸೆ ಮಾಡಿದ ಕೆಲ ಕಾಲದ ನಂತರ ಕಾಲು ಪುನಃ ದಪ್ಪಗಾಗಲು ತೊಡಗುತ್ತದೆ. ಶಸಚಿಕಿತ್ಸೆಯ ಗಾಯಗಳು ಒಣಗದೆ ರೋಗಿಯು ಇನ್ನಷ್ಟು ಕಷ್ಟಕ್ಕೆ ಒಳಗಾಗುತ್ತಾನೆ. ಇದರ ಜೊತೆಗೆ ರೋಗಿಗೆ ರೋಗದಿಂದಾಗಿ ಉದ್ಯೋಗ ಮಾಡಲಾಗುವುದಿಲ್ಲ, ಆರ್ಥಿಕವಾಗಿ ಬಾಧಿಸಲ್ಪಡುತ್ತಾನೆ ಹಾಗೂ ಆನೆಕಾಲಿನ ಕೀವು, ಹುಣ್ಣುಗಳಿಂದಾಗಿ ರೋಗಿಯು ಬಂಧು ಬಳಗ ಹಾಗೂ ಇತರ ರಿಂದ ತಿರಸ್ಕೃತನಾಗುತ್ತಾನೆ.

ಆನೆಕಾಲು ರೋಗಿಗಳ ರೋಗ ಉಪಶಮನ, ಅವರ ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನಗಳನ್ನು ಮೇಲೆತ್ತುವ ಉದ್ದೇಶದಿಂದ ಐಎಡಿ ಸಂಸ್ಥೆಯು ಆನೆಕಾಲು ರೋಗದ ಚಿಕಿತ್ಸೆಗೆ ಚಿಕಿತ್ಸಾ ಪದ್ಧತಿಯನ್ನು ರೂಪಿಸುವ ಕೆಲಸವನ್ನು ಮಾಡಿತು. ಮೊದಲಿಗೆ ಐಎಡಿಯ ಆಯುರ್ವೇದ ಹಾಗೂ ಇತರ ತಜ್ಞರು ಜತೆಗೆ ಕುಳಿತು
ಆಯುರ್ವೇದದಲ್ಲಿ ಆನೆಕಾಲು ರೋಗಕ್ಕೆ ಇರುವ ಚಿಕಿತ್ಸೆಯ ಕುರಿತು ಮಾಹಿತಿಗಳನ್ನು ಕಲೆಹಾಕಿದರು. ಆನೆಕಾಲು ರೋಗವನ್ನು ಆಯುರ್ವೇದದಲ್ಲಿ ಶ್ಲೀಪಾದ (ಆನೆಕಾಲು) ಎಂದು ಗುರುತಿಸಲಾಗಿದೆ. ಐಎಡಿಯ ಆನೆಕಾಲು ರೋಗದ ಸಂಯೋಜಿತ ಚಿಕಿತ್ಸೆಯಲ್ಲಿ ರೋಗಿಯ ಕಾಲಿನಲ್ಲಿರುವ ಹುಣ್ಣು ಹಾಗೂ ಗಾಯ ಗಳನ್ನು ಗುಣಪಡಿಸಲು ಆಯುರ್ವೇದದ ಕಷಾಯದಿಂದ ಗಾಯವನ್ನು ತೊಳೆಯಲಾಗುತ್ತದೆ ಹಾಗೂ ಕಾಲನ್ನು ನಿರ್ದಿಷ್ಟ ಅವಧಿವರೆಗೆ ಕಷಾಯದಲ್ಲಿ ಮುಳುಗಿಸ ಲಾಗುತ್ತದೆ. ಇದರ ಪರಿಣಾಮವಾಗಿ ಹುಣ್ಣುಗಳು ಮತ್ತು ಗಾಯಗಳು ಕ್ಷಿಪ್ರ ಅವಧಿಯಲ್ಲಿ ಗುಣವಾಗುತ್ತದೆ.

ನಂತರ ಬಾಧಿತ ಕಾಲಿಗೆ ನಿರ್ದಿಷ್ಟ ಆಯುರ್ವೇದದ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಲಾಗುತ್ತದೆ. ಕಾಲಿಗೆ ಉಗಿಸ್ನಾನವನ್ನೂ ಮಾಡಿಸಲಾಗುತ್ತದೆ. ಊದಿ ಕೊಂಡ ಕಾಲಿನ ಗಾತ್ರದ ಸಂಕೋಚನಕ್ಕಾಗಿ ಕಂಪ್ರೆಶನ್ ಬ್ಯಾಂಡೇಜ್ ಮಾಡಲಾಗುತ್ತದೆ. ಚಿಕಿತ್ಸಾ ಅವಧಿಯಲ್ಲಿ ರೋಗಿಗೆ ವಿವಿಧ ರೀತಿಯ ಯೋಗ ಹಾಗೂ ಫಿಸಿಯೋಥೆರಪಿಗಳನ್ನೂ ಮಾಡಿಸಲಾಗುತ್ತದೆ. ಚಿಕಿತ್ಸಾ ಅವಽಯಲ್ಲಿ ರೋಗಿಗೆ ಯಾವುದೇ ರೀತಿಯ ಸೋಂಕು ತಗಲದಂತೆ ಆಧುನಿಕ ವೈದ್ಯಕೀಯ ವಿಧಾನದಲ್ಲಿ ಚಿಕಿತ್ಸೆಯನ್ನು ಕೊಡಲಾಗುತ್ತದೆ. ಸಾಂಸ್ಥಿಕ ಚಿಕಿತ್ಸಾ(ಇನ್ಸ್ಟಿಟ್ಯೂಶನಲ್ ಟ್ರೀಟ್ಮೆಂಟ್) ಅವಧಿಯು ಎರಡರಿಂದ ಮೂರು ವಾರಗಳ ಕಾಲವಾಗಿದ್ದು ಈ ಅವಧಿಯ ಕಾಲಿನ ಗಾಯಗಳು ವಾಸಿಯಾಗಿರುತ್ತವೆ, ಸೋಂಕು  ನಿಂತಿರುತ್ತದೆ ಹಾಗೂ ಕಾಲಿನ ಗಾತ್ರದಲ್ಲಿ ಗಣನೀಯ ಇಳಿಕೆಯಾಗಿರುತ್ತದೆ.

ಸಾಂಸ್ಥಿಕ ಚಿಕಿತ್ಸಾ ಅವಧಿಯಲ್ಲಿ ರೋಗಿಯು ಮನೆಗೆ ತೆರಳಿದ ನಂತರ ಸ್ವಾವಲಂಬಿಯಾಗಿ ಚಿಕಿತ್ಸೆಯನ್ನು ಹೇಗೆ ಮುಂದುವರಿಸಿಕೊಂಡು ಹೋಗಬೇಕು ಎಂಬುದನ್ನು ಕಲಿಸಿಕೊಡಲಾಗುತ್ತದೆ. ಸಾಂಸ್ಥಿಕ ಚಿಕಿತ್ಸಾ ಅವಽಯು ಕಳೆದು ಮನೆಗೆ ತೆರಳಿದ ನಂತರವೂ ರೋಗಿಗಳು ಕಲಿಸಿಕೊಡಲಾದ ಪ್ರಕ್ರಿಯೆಯನ್ನು
ಮುಂದುವರಿಸ ಬೇಕಾಗುತ್ತದೆ. ಯೋಗ ಮುಂತಾದ ಸೂಚಿತ ಚಟುವಟಿಕೆಗಳನ್ನೂ ಮಾಡಬೇಕು. ನಿರ್ದಿಷ್ಟ ಕಾಲದ ನಂತರ ಬಾಧಿತ ಕಾಲು ತನ್ನ ಗಾತ್ರವನ್ನು ಕುಗ್ಗಿಸಿಕೊಂಡು ಬಹುತೇಕ ಹಿಂದಿನ ಸ್ಥಿತಿಗೇ ಮರಳುತ್ತದೆ.

ಐಎಡಿಯು ಜಾಗತಿಕವಾಗಿ ಆನೆಕಾಲು ರೋಗಕ್ಕೆ ಲಭ್ಯವಿರುವ ಅತ್ಯುತ್ತಮವಾದ ಚಿಕಿತ್ಸಾ ಕೇಂದ್ರಗಳಲ್ಲಿ ಒಂದು ಎಂದು ವಿಶ್ವ ಆರೋಗ್ಯ ಸಂಸ್ಥೆಯು 2010 ಪ್ರಕಟಿಸಿರುವ ವರದಿಯೇ ಹೇಳಿದೆ. ಐಎಡಿ ಸಂಸ್ಥೆಯು ಆನೆಕಾಲಿಗೆ ಸಂಯೋಜಿತ ಚಿಕಿತ್ಸೆಯನ್ನು ನೀಡಲು ಮಾರ್ಗದರ್ಶನ ನೀಡಿದ್ದ ಇಂಗ್ಲೆಂಡ್‌ನ ಆಕ್ಸ್ ಫರ್ಡ್
ವಿಶ್ವವಿದ್ಯಾಲಯದ ಡರ್ಮೆಟಾಲಜಿ (ಚರ್ಮರೋಗ ಶಾಸ್ತ್ರ) ವಿಭಾಗದ ಭೂತಪೂರ್ವ ಮುಖ್ಯಸ್ಥರಾಗಿದ್ದ ಡಾ ಟೆರೆನ್ಸ್ ಜೆ.ರಯಾನ್ ಅವರು ಆನೆಕಾಲು ರೋಗಕ್ಕೆ ಫಲಪ್ರದವಾದ ಅತ್ಯಪೂರ್ವ ಚಿಕಿತ್ಸಾ ವಿಧಾನವನ್ನು ರೂಪಿಸಿದ ಐಎಡಿಯಂತಹ ಸಂಸ್ಥೆ ಜಗತ್ತಿನಲ್ಲಿ ಬೇರೊಂದಿಲ್ಲ.

ಅದರ ಚಿಕಿತ್ಸಾ ಮಟ್ಟವಂತೂ ಶಿಖರಪ್ರಾಯವಾದುದು ಎಂದು ಹೇಳಿದ್ದಾರೆ. ಸೈಂಟ್ ಜಾರ್ಜ್ ಯುನಿವರ್ಸಿಟಿಯ ಡರ್ಮೆಟಾಲಜಿ ಮತ್ತು ಲಿಂಫಾವ್ಯಾಸ್ಕ್ಯುಲಾರ್
ಮೆಡಿಸಿನ್ ವಿಭಾಗದ ಪ್ರೊಫೆಸರ್ ಆಗಿರುವ ಡಾ. ಫೀಟರ್ ಮೋರ್ಟೈಮರ್ ಇವರು ಐಎಡಿ ಸಂಸ್ಥೆಯು ಆನೆಕಾಲು ರೋಗದ ಬಗ್ಗೆ ಅತ್ಯುತ್ತಮ ಸಂಶೋಧನೆಯನ್ನು ನಡೆಸುತ್ತಿರುವ ಸಂಸ್ಥೆಯಾಗಿದೆ, ಐಎಡಿಯ ಸಂಶೋಧನಾ ಚಟುವಟಿಕೆಗಳಲ್ಲಿ ಸೈಂಟ್ ಜಾರ್ಜ್ ಯುನಿವರ್ಸಿಟಿಯು ಪಾಲ್ಗೊಳ್ಳಲು ಬಯಸುತ್ತದೆ ಎಂದು ಹೇಳಿದ್ದಾರೆ.

ಐಎಡಿ ಸಂಸ್ಥೆಯಲ್ಲಿ 2005ನೇ ಇಸವಿಯಿಂದ ಇದುವರೆಗೂ 4638 ಆನೇಕಾಲು ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಾಗಿದೆ. ಇಲ್ಲಿ ಇದುವರೆಗೂ ಕೇರಳ ರಾಜ್ಯದ ರೋಗಿಗಳಲ್ಲದೆ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಗುಜರಾತ್ ಮೊದಲಾದ ರಾಜ್ಯಗಳಿಂದ, ಮುಂಬೈ, ದೆಹಲಿ, ಬೆಂಗಳೂರು, ಕೋಲ್ಕತಾ ಮೊದಲಾದ ಮಹಾನಗರಗಳಿಂದಲೂ ರೋಗಿಗಳು ಬಂದು ಚಿಕಿತ್ಸೆ ಪಡೆದಿದ್ದಾರೆ. ಅಮೆರಿಕಾ ,ಇಂಗ್ಲೆಂಡ್,ಈಜಿಪ್ಟ್, ಸೌದೀ ಆರೇಬಿಯಾ, ಕುವೈತ್, ಯುಎಇ, ಚೀನಾ, ದಕ್ಷಿಣ ಆಫ್ರಿಕಾ ಮೊದಲಾದ ದೇಶಗಳ ರೋಗಿಗಳೂ ಐಎಡಿಯಿಂದ ಚಿಕಿತ್ಸೆ ಪಡೆದಿzರೆ. ಭಾರತದ ಕೇಂದ್ರ ಅರೋಗ್ಯ ಸಚಿವರಾದ ಡಾ.
ಹರ್ಷವರ್ಧನ್ ಅವರು ಐಎಡಿಯ ಆನೆಕಾಲು ಚಿಕಿತ್ಸಾ ವಿಧಾನದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ದೇಶದ ಆಯುಷ್ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿರುವ ಪ್ರೊ.ರಾಜೇಶ್ ಕೊಟೆಚಾ ಅವರು ಆಯುಷ್ ವ್ಯವಸ್ಥೆಯ ಅಡಿಯಲ್ಲಿ ಆನೆಕಾಲು ರೋಗಕ್ಕೆ
ಐಎಡಿಯ ಚಿಕಿತ್ಸಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮಾತುಗಳನ್ನಾಡಿದ್ದಾರೆ. ಅಮೇರಿಕದ ಆರಿಝೋನಾದಲ್ಲಿರುವ ಅಂತಾರಾಷ್ಟ್ರೀಯ ಲಿಂ-ಲಜಿ ಸೊಸೈಟಿ ಹಾಗೂ ಲಂಡನ್‌ನ ಇಂಟರ್‌ನ್ಯಾಷನಲ್ ಲಿಂಫಾಡಿಮಾ ಫ್ರೇಮ್‌ವರ್ಕ್‌ಗಳು ಐಎಡಿ ಸಂಸ್ಥೆಗೆ ಎಕ್ಸಲೆನ್ಸ್ ಅವಾರ್ಡ್ ಅನ್ನು ಕೊಟ್ಟಿವೆ. ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಡರ್ಮೆಟಾಲಜಿ, ಟ್ರಾನ್ಸಾಕ್ಷನ್ಸ್ ಆಫ್ ರಾಯಲ್ ಸೊಸೈಟಿ ಆಫ್ ಲಂಡನ್ ಮೊದಲಾದ ವಿವಿಧ ಪ್ರತಿಷ್ಠಿತ ವೈದ್ಯಕೀಯ ಹಾಗೂ ವಿಜ್ಞಾನ ನಿಯತ ಕಾಲಿಕಗಳಲ್ಲಿ ಐಎಡಿಯ ಆನೆಕಾಲು ರೋಗದ ಸಂಯೋಜಿತ ಚಿಕಿತ್ಸಾ ವ್ಯವಸ್ಥೆಯ ಕುರಿತು 86 ಸಂಶೋಧನಾ ಲೇಖನಗಳು ಪ್ರಕಟವಾಗಿವೆ ಹಾಗೂ ಈ ಕುರಿತು ದೇಶ ವಿದೇಶಗಳ ತಜ್ಞರು ಪಾಲ್ಗೊಂಡ 10 ಅಂತಾರಾಷ್ಟ್ರೀಯ ಸಮ್ಮೇಳನಗಳು ನಡೆದಿವೆ.

ಇಂಡಿಯನ್ ನ್ಯಾಷನಲ್ ಡರ್ಮೆಟಾಲಜಿ ಅಸೋಸಿಯೇಶನ್ ಕೂಡಾ ಐಎಡಿಯ ಸಂಶೋಧನಾ ಚಟುವಟಿಕೆಗಳಿಗೆ ಸಹಮತವನ್ನು ಸೂಚಿಸಿದೆ. ಚಿಕಿತ್ಸಾ ಪದ್ಧತಿ ಗಳ ಸಂಘರ್ಷದ ಕಾಲದಲ್ಲಿ ಐಎಡಿ ಸಂಸ್ಥೆಯು ಆಧುನಿಕ ಹಾಗೂ ಭಾರತೀಯ ವೈದ್ಯಕೀಯ ಪದ್ಧತಿಗಳನ್ನು ವೈಜ್ಞಾನಿಕವಾಗಿ ಸಮನ್ವಯಗೊಳಿಸಿ ಸಂಯೋಜಿತ ಚಿಕಿತ್ಸಾ ಪದ್ಧತಿಯನ್ನು ರೂಪಿಸಿದೆ. ವೈದ್ಯಕೀಯ ಸಂಶೋಧನಾ ವಲಯದ ಎಥಿಕ್ಸ್ ಅಗತ್ಯತೆಗಳನ್ನು ಪೂರೈಸಿಯೇ ಈ ಚಿಕಿತ್ಸಾ ವಿಧಾನವನ್ನು ರೂಪಿಸಲಾಗಿದೆ. ಎವಿಡೆನ್ಸ್ ಬೇಸ್ಡ್ ಟ್ರೀಟ್ಮೆಂಟ್(ಸಾಕ್ಷಿ ಆಧಾರಿತ ಚಿಕಿತ್ಸಾ ಪದ್ಧತಿ) ವ್ಯವಸ್ಥೆಯನ್ನು ಅಲ್ಲಿ ಅನುಸರಿಸಲಾಗುತ್ತಿದೆ.

ಆನೆಕಾಲು ರೋಗದ ಚಿಕಿತ್ಸೆ ಅಲ್ಲದೆ, ಸೋರಿಯಾಸಿಸ್, ವಿಟಿಲಿಗೋ(ಬಿಳಿತೊನ್ನು), ಲಿಚೆನ್ ಪ್ಲಾನಸ್ ಮೊದಲಾದ ಇತರ ದೀರ್ಘಕಾಲೀನ ಚರ್ಮರೋಗಗಳ ಬಗೆಗೂ ಅಲ್ಲಿ ಸಂಶೋಧನೆಗಳು ನಡೆಯುತ್ತಿದೆ. ಐಎಡಿಯಲ್ಲಿ ನಡೆಯುತ್ತಿರುವಂತಹ ಸಂಯೋಜಿತ ಚಿಕಿತ್ಸೆಯ ಸಂಶೋಧನೆಗಳು ಉಳಿದ ಎಲ್ಲಾ ವೈದ್ಯಕೀಯ
ವಲಯಗಳಲ್ಲೂ ಆಗಬೇಕಿದೆ. ಸಂಯೋಜಿತ ಚಿಕಿತ್ಸೆಗೆ ಜಾಗತಿಕ ಮಾನ್ಯತೆಯನ್ನು ತಂದುಕೊಟ್ಟ, ಸಂಯೋಜಿತ ಚಿಕಿತ್ಸೆಯ ಹರಿಕಾರ ಡಾ ಎಸ್ ಆ ನರಹರಿ ಓರ್ವ ಕನ್ನಡಿಗರು ಎನ್ನುವುದು ಕನ್ನಡಿಗರೆಲ್ಲರಿಗೆ ಹೆಮ್ಮೆಯ ವಿಷಯ.