Wednesday, 9th October 2024

ಜೀವ ರಕ್ಷಿಸುವ ಸುವರ್ಣಾವಧಿ ಚಿಕಿತ್ಸೆ

ಸ್ವಾಸ್ಥ್ಯ ಸಂಪದ

yoganna55@gmail.com

ಸುವರ್ಣ ಅವಧಿಯೊಳಗಿನ ಚಿಕಿತ್ಸೆ ನಮ್ಮ ದೇಶದಲ್ಲಿ ಎಲ್ಲರಿಗೂ ಲಭಿಸುವುದು ಮರೀಚಿಕೆ. ಅದೃಷ್ಟವಂತ ಪಟ್ಟಣದ ವಾಸಿಗಳಿಗೆ ಮಾತ್ರ ಲಭಿಸಬಹುದೇನೋ? ವೈದ್ಯರೇ ಇಲ್ಲದ, ಆಸ್ಪತ್ರೆಗಳೇ ಇಲ್ಲದ, ಇದ್ದರೂ ಸುಸಜ್ಜಿತ ವ್ಯವಸ್ಥೆ ಗಳಿಲ್ಲದ, ಸುಸಜ್ಜಿತ ಆಂಬ್ಯುಲೆನ್ಸ್‌ಗಳಿಲ್ಲದ ಗ್ರಾಮೀಣ ಪ್ರದೇಶದವರಿಗೆ ಸುವರ್ಣ ಅವಽಯೊಳಗಿನ ಚಿಕಿತ್ಸೆ ಕನಸಿನ ಮಾತು.

ಕಾಲ ಮನುಷ್ಯನ ಬದುಕಿನಲ್ಲಿ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಗರ್ಭಾವಸ್ಥೆಯ ದಿನದಿಂದ ಹಿಡಿದು ಶೈಶವಾವಸ್ಥೆ, ಬಾಲ್ಯಾವಸ್ಥೆ, ಹದಿಹರೆಯ, ವಯಸ್ಕ, ಮುಪ್ಪು ಹೀಗೆ ಆಯಾಯ ಕಾಲಾವಧಿಗಳಲ್ಲಿ ಜರುಗಬೇಕಾದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗಳು ಮತ್ತು ಬದಲಾವಣೆಗಳು ಕರಾರುವಾಕ್ಕಾಗಿ ಪೂರ್ವನಿಗದಿತ ಕ್ರಿಯೆಗಳಂತೆ ಜರುಗುತ್ತಿರುತ್ತವೆ.

ಕಾಲದ ಮಹಿಮೆಯಿದು. ನಿರ್ದಿಷ್ಟ ಕಾಲದಲ್ಲಿ ಕೈಗೊಳ್ಳಬೇಕಾದ ಕಾರ್ಯವನ್ನು ಮೈ ಮರೆತರೆ ಅದು ಮತ್ತೊಮ್ಮೆ ಆ ಅವಕಾಶ ಬದುಕಿನಲ್ಲಿ ಲಭಿಸದಿರಬಹುದು. ಉದಾ ಸೀನತೆಯಿಂದ ಅಮೃತಗಳಿಗೆಯೂ ವಿಷಗಳಿಗೆಯಾಗಬಲ್ಲದು! ‘ಆಲಸ್ಯಂ ಅಮೃತಂ ವಿಷಂ’ (ಉದಾಸೀನ ಮಾಡಿದಲ್ಲಿ ಅಮೃತವೂ ವಿಷವಾಗುತ್ತದೆ.) ಜಾಗರೂಕತೆ ಇದ್ದಲ್ಲಿ ವಿಷಗಳಿಗೆಯನ್ನೂ ಸಹ ಅಮೃತ ಗಳಿಗೆ ಯನ್ನಾಗಿ ಪರಿವರ್ತಿಸಿಕೊಳ್ಳಬಹುದು. ಇದೇ ಬದುಕಿನ ಚಮತ್ಕಾರ! ಜೀವವನ್ನು ಬಲಿತೆಗೆದುಕೊಳ್ಳುವ ಕಾಯಿಲೆಗಳನ್ನು ಸೃಷ್ಟಿಸಿದ ಸೃಷ್ಟಿಕರ್ತ ಅವುಗಳಿಂದ ಪಾರಾಗುವ ಕಾಲಾವಧಿಯನ್ನೂ ನೀಡಿ ಸುವರ್ಣಾವಕಾಶ ವನ್ನೂ ಕಲ್ಪಿಸಿದ.

ಚಿಕಿತ್ಸೆ ಮಾಡಿದಲ್ಲಿ ಬದುಕಿ ಉಳಿಯುವ ಕಾಲಾವಧಿಯೇ ಸುವರ್ಣ ಗಂಟೆ. ಇದನ್ನು ಸುವರ್ಣ ಗಂಟೆ ಎಂದು ಸಂಬೋಽಸಿದರೂ ಇದು ‘ಅತ್ಯಂತ ಬೇಗ’ (4 ರಿಂದ 8 ಗಂಟೆ) ಎಂಬುದನ್ನು ಸೂಚಿಸುತ್ತದೆ. ಸುವರ್ಣಾವಽ (ಗೋಲ್ಡನ್ ಹವರ್) ಎಂದರೇನು?
ಕೆಲವು ಕಾಯಿಲೆಗಳಿಗೆ ಅದರಲ್ಲೂ ಹೃದಯಾಘಾತ, ಮೆದುಳಿನ ರಕ್ತನಾಳಗಳ ಆಘಾತ ಇವುಗಳಿಗೆ ಸಂಭವಿಸಿದ 4 ರಿಂದ 6 ಗಂಟೆ ಗಳೊಳಗೆ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಸಾವು ಸಂಭವಿಸಬಹುದು. ಕಾಯಿಲೆಗಳನ್ನು ವಾಸಿಮಾಡುವಲ್ಲಿ ಮೊದಲು ಚಿಕಿತ್ಸೆ ನೀಡುವ ಅವಧಿ ಗಣನೀಯ ಪಾತ್ರ ವಹಿಸುತ್ತದೆ.

ಕಾಯಿಲೆ ಪ್ರಾರಂಭವಾದಾಕ್ಷಣ ಅದನ್ನು ಗುರುತಿಸಿ ಸೂಕ್ತಚಿಕಿತ್ಸೆ ನೀಡಿದಲ್ಲಿ ಸಂಭವಿಸಬಹುದಾದ ಅವಘಡಗಳು ಮತ್ತು ಸಾವಿನಿಂದ ಪಾರಾಗಬಹುದು. ಕಾಲ ಮಿಂಚಿದಲ್ಲಿ ಕೆಲ ಕಾಯಿಲೆಗಳಲ್ಲಿ ವೈದ್ಯ ಕೈ ಚೆಲ್ಲಿ ಕೂರಬೇಕಾಗುತ್ತದೆ. ಕಾಯಿಲೆಯನ್ನು ಸಕಾಲದಲ್ಲಿ ಗುರುತಿಸಿ ಸೂಕ್ತಚಿಕಿತ್ಸೆ ನೀಡದಿದ್ದಲ್ಲಿ ನಂತರ ನೀಡುವ ಚಿಕಿತ್ಸೆಗಳು ಸಂಭವಿಸಬಹುದಾದ ಅವಘಡಗಳನ್ನು ತಡೆಯಲು ಮತ್ತು ಸಾವಿನಿಂದ ಪಾರುಮಾಡಲು ಸಾಧ್ಯವಾಗದಿರಬಹುದು. ಅದರಲ್ಲೂ ದಿಢೀರನೆ ಕಾಣಿಸಿಕೊಂಡು ಜೀವವನ್ನೇ ಬಲಿತೆಗೆದುಕೊಳ್ಳುವ, ಹಾರ್ಟ್ ಅಟ್ಯಾಕ್, ಮೆದುಳಿನ ರಕ್ತ ನಾಳಗಳ ಆಘಾತ, ಅಪಘಾತಗಳಲ್ಲುಂಟಾಗುವ ಮೆದುಳಿನ ಮತ್ತು ನರಮಂಡಲಗಳ ಪೆಟ್ಟುಗಳು ಇವು ಸಂಭವಿಸಿದ 4 ರಿಂದ 8 ಗಂಟೆಯೊಳಗೆ ಸೂಕ್ತ ಚಿಕಿತ್ಸೆ ಮಾಡಿದಲ್ಲಿ ರೋಗಿ ಬದುಕುವ ಸಂಭವ ಹೆಚ್ಚಾಗಿರುತ್ತದೆ.

ಕಾಲ ಮೀರಿದಂತೆಲ್ಲಾ ಅಂಗಾಂಶಗಳು ಸಾವಿಗೀಡಾಗಿ ಶಾಶ್ವತ ಊನತೆ ಅಥವಾ ಸಾವು ಉಂಟಾಗುವ ಸಾಧ್ಯತೆ ಹೆಚ್ಚು. ಜೀವಹಾನಿ ಮಾಡುವ ಅನಾರೋಗ್ಯಕರ ಘಟನೆಗಳಿಗೆ, ಅವು ಸಂಭವಿಸಿದ ಸುವರ್ಣ ಅವಽಯೊಳಗೆ ಚಿಕಿತ್ಸೆ ನೀಡಿದಲ್ಲಿ ಅಂಗಾಂಶಗಳ ಸಾವನ್ನು ತಡೆದು ಸಾವಿನಿಂದ ಅಥವಾ ಶಾಶ್ವತ ನ್ಯೂನತೆಯಿಂದ ಪಾರಾಗಬಹುದು. ಸೂಕ್ತ ಚಿಕಿತ್ಸೆ ನೀಡಿದಲ್ಲಿ ಸಾವಿನಿಂದ ಪಾರಾಗುವ ಅವಧಿಯನ್ನು ‘ಸುವರ್ಣ ಕಾಲಾವಧಿ’ ಎಂದು ಕರೆಯಲಾಗುತ್ತದೆ. ಈ ಅವಧಿಯೊಳಗೆ ರೋಗಿಗೆ ಚಿಕಿತ್ಸೆ ಲಭಿಸು ವಂತಾಗಬೇಕು. ಇದನ್ನು ಮನಗಂಡು ಘಟನೆ ಸಂಭವಿಸಿದ ತಕ್ಷಣ ರೋಗಿಯನ್ನು ಸುಸಜ್ಜಿತ ಸೇವೆ ಲಭ್ಯವಿರುವ ಆಸ್ಪತ್ರೆಗಳಿಗೆ ಸಾಗಿಸಬೇಕು.

ಯಾವ ಯಾವ ಕಾಯಿಲೆಗಳಲ್ಲಿ ಸುವರ್ಣ ಕಾಲಾವಧಿ ಚಿಕಿತ್ಸೆ ಅತಿ ಮುಖ್ಯ, ಈ ಅವಧಿಯೊಳಗೆ ರೋಗಿಯನ್ನು ಜರೂರಾಗಿ ಸಾಗಿಸುವುದು ಹೇಗೆ? ಮತ್ತು ನೀಡಬೇಕಾದ ಚಿಕಿತ್ಸೆಗಳೇನು? ಎಂಬುದರ ಬಗ್ಗೆ ಅರಿವು ಮೂಡಿಸುವ ಲೇಖನವಿದು. ಸುವರ್ಣ
ಕಾಲಾವಧಿ ಪ್ರಮುಖ ಪಾತ್ರ ವಹಿಸುವ ಕಾಯಿಲೆಗಳು ಹೀಗಿವೆ.

ಹಾರ್ಟ್ ಅಟ್ಯಾಕ್ (ಹೃದಯಾಘಾತ): ಹೃದಯದ ಶುದ್ಧರಕ್ತನಾಳಗಳ ದಿಢೀರ್ ಅಡಚಣೆಯಿಂದ ಹೃದಯಸ್ನಾಯುವಿನ ಭಾಗವೊಂದಕ್ಕೆ ರಕ್ತ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಂಡು ಆ ಭಾಗದ ‘ಹೃದಯ ಸ್ನಾಯುವಿನ ನಿರಕ್ತ ಸಾವು’
(ಮಯೋಕಾರ್ಡಿಯಲ್ ಇನ್ ಫೆಕ್ಷನ್) ಉಂಟಾಗಿ ಹೃದಯದ ವಿಫಲತೆಯುಂಟಾಗಿ ಸಾವು ಸಂಭವಿಸಬಹುದು. ಸಕಾಲಕ್ಕೆ ಚಿಕಿತ್ಸೆ ನೀಡದಿದ್ದಲ್ಲಿ ಸಾವು ಸಂಭವಿಸಬಹುದು. ತೀವ್ರ ಪ್ರಮಾಣದ ದಿಢೀರ್ ಎದೆನೋವು, ಸುಸ್ತು, ಸಂಕಟ, ಮೈ ಬೆವರುವಿಕೆ, ದಮ್ಮು, ಮಲಗಲಾರದೆ ಹೊರಳಾಡುವಿಕೆ, ಕೆಮ್ಮು, ರಕ್ತವಾಂತಿ ಇವು ಹಾರ್ಟ್ ಅಟ್ಯಾಕ್‌ನ ರೋಗಲಕ್ಷಣ ಗಳಾಗಿದ್ದು, ಇವುಗಳಲ್ಲಿ ಯಾವು ದಾದರೊಂದು ತೊಂದರೆ ಕಾಣಿಸಿಕೊಂಡ ತಕ್ಷಣ ರೋಗಿಯನ್ನು ಆಂಜಿಯೋಪ್ಲಾಸ್ಟಿ ಮಾಡುವ ಸೌಲಭ್ಯ ಮತ್ತು ‘ತೀವ್ರ ಹೃದ್ರೋಗ ನಿಗಾ ಘಟಕ’ವಿರುವ ಆಸ್ಪತ್ರೆಗೆ ಕಾಲಹರಣ ಮಾಡದೆ ಕೊಂಡೊಯ್ಯಬೇಕು.

ಕಾಯಿಲೆಯನ್ನು ಖಚಿತಪಡಿಸಿಕೊಂಡ ನಾಲ್ಕು ಗಂಟೆಯ ಒಳಗೆ ಮಾಡುವ ‘ಆಂಜಿಯೋಪ್ಲಾಸ್ಟಿ’ ಚಿಕಿತ್ಸೆಯಿಂದ ಹೃದಯದ ಸ್ನಾಯು ಸಾವನ್ನು ತಡೆಯಬಹುದು ಅಥವಾ ವ್ಯಾಪಕತೆಯನ್ನು ತಗ್ಗಿಸಬಹುದು. ಹೃದಯ ಸ್ನಾಯುವಿಗೆ ಪುನರೋತ್ಪತ್ತಿ
ಸಾಮರ್ಥ್ಯ ಇಲ್ಲದಿರುವುದರಿಂದ ಒಮ್ಮೆ ಸಾವಿಗೀಡಾದ ಹೃದಯದ ಭಾಗ ಪುನರೋತ್ಪತ್ತಿಯಾಗದೆ ಶಾಶ್ವತ ಕಲೆಯುಂಟಾಗುವು ದರಿಂದ ಅದನ್ನು ತಡೆಯಲು ಸುವರ್ಣ ಕಾಲಾವಧಿಯೊಳಗೆ ಚಿಕಿತ್ಸೆ ನೀಡುವುದು ಅತ್ಯವಶ್ಯಕ.

ಹಾಗೆಯೇ ಹೃದಯದ ನಲಯಮಿಡಿತಗಳಾದ(ಅರ‍್ಹಿತ್‌ಮಿಯಾಸ್) ಹೃತ್ಕುಕ್ಷಿ ಬಡಿತೇರಿಕೆ (ವೆಂಟ್ರಿಕ್ಯೂಲಾರ್‌ಟೆಕಿಕಾರ್ಡಿಯ) ಮತ್ತು ಹೃತ್ಕುಕ್ಷಿ ಕಂಪನ(ವೆಂಟ್ರಿಕ್ಯೂಲಾರ್ ಫಿಬ್ರಿಲೇಷನ್) ಗಳನ್ನು ತಕ್ಷಣ ಗುರುತಿಸಿ ಚಿಕಿತ್ಸೆ ನೀಡದಿದ್ದಲ್ಲಿ ಸಾವು ಖಚಿತ. ಇವುಗಳನ್ನು ತಕ್ಷಣ ಗುರುತಿಸಿ ಚಿಕಿತ್ಸೆ ನೀಡುವ ತರಬೇತಿ ವೈದ್ಯಸಿಬ್ಬಂದಿ ಗಳಿಗೆ ಅತ್ಯವಶ್ಯಕ. ಉದಾಸೀನ ಮಾಡಿ ತಡವಾದಲ್ಲಿ
ಸಾವು ಖಚಿತ.

ಮಿದುಳು ರಕ್ತನಾಳಗಳ ಆಘಾತ(ಸೆರೆಬ್ರೋ ವ್ಯಾಸ್ಕ್ಯುಲಾರ್ ಆಕ್ಸಿಡೆಂಟ್): ಇದನ್ನು ಸ್ಟ್ರೋಕ್ ಎಂದೂ ಸಹ ಕರೆಯ ಲಾಗುತ್ತದೆ. ಮಿದುಳು ರಕ್ತನಾಳಗಳಲ್ಲಿ ದಿಢೀರ್ ರಕ್ತ ಹೆಪ್ಪುಗಟ್ಟುವಿಕೆ ಅಥವಾ ರಕ್ತಸ್ರಾವವಾಗುವಿಕೆಯಿಂದ ಲಕ್ವ ಇತ್ಯಾದಿ ವಿವಿಧ ಬಗೆಯ ಅವಘಡಗಳು ಸಂಭವಿಸುತ್ತವೆ. ತಕ್ಷಣ ಸಾವುಂಟಾಗುವ ಸಂಭವವಿರುತ್ತದೆ. ಮಿದುಳಿನ ಶುದ್ಧ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿ ಅಡಚಣೆಗೊಂಡು ಮಿದುಳಿನ ಆ ಭಾಗಕ್ಕೆ ರಕ್ತ ಸರಬರಾಜು ಸ್ಥಗಿತಗೊಂಡು, ಸಂಬಂಽಸಿದ ಆ ಭಾಗ ಶಾಶ್ವತ ಸಾವಿಗೀಡಾಗುತ್ತದೆ. ಮಿದುಳಿನ ಜೀವಕೋಶಗಳಿಗೂ ಪುನರೋತ್ಪತ್ತಿ ಸಾಮರ್ಥ್ಯ ಇಲ್ಲದಿರುವುದರಿಂದ ಒಮ್ಮೆ ಸಾವಿಗೀಡಾದ ಸಂಬಂಧಿಸಿದ ಮೆದುಳಿನ ಭಾಗ ಶಾಶ್ವತ ಊನತೆಗೀಡಾಗುವುದರಿಂದ ಸುವರ್ಣ ಕಾಲಾವಧಿಯೊಳಗೆ ರಕ್ತ ಹೆಪ್ಪು ಕರಗಿಸುವ ಚಿಕಿತ್ಸೆಗಳನ್ನು ನೀಡಿದಲ್ಲಿ ಮತ್ತು ತಕ್ಷಣ ಸೂಕ್ತ ಶಸಕ್ರಿಯೆಗಳಿಂದ ಶಾಶ್ವತನ್ಯೂನತೆಗಳಿಂದ ಹಾಗೂ ಸಾವಿನಿಂದ ಪಾರುಮಾಡ ಬಹುದು.

ಮಿದುಳಿನ ರಕ್ತನಾಳಗಳು ಒಡೆದು ಮಿದುಳಿನೊಳಕ್ಕೆ ರಕ್ತ ಸ್ರಾವವಾದಲ್ಲಿ ಮಿದುಳು ಸಾವಿಗೀಡಾಗುವುದಲ್ಲದೆ ತಲೆಬುರುಡೆ ಯೊಳಗಿನ ಒತ್ತಡವು ಅಧಿಕವಾಗಿ ಸಾವುಂಟಾಗುವ ಸಾಧ್ಯತೆ ಹೆಚ್ಚಾಗುವುದರಿಂದ ಸುವರ್ಣ ಕಾಲಾವಧಿಯೊಳಗೆ ಗುರುತಿಸಿ ತಲೆಬುರುಡೆಸೀಳಿಕೆ (ಕ್ರೆನಿಯಾಟಮಿ) ಶಸಚಿಕಿತ್ಸೆ ಮುಂತಾದ ಚಿಕಿತ್ಸೆಗಳಿಂದ ಬದುಕುವ ಸಂಭವ ಹೆಚ್ಚು. ಅತೀವ ತಲೆನೋವು, ತಲೆತಿರುಗು, ಫಿಟ್ಸ್, ಪ್ರಜ್ಞಾ ಅವ್ಯವಸ್ಥೆಗಳು, ಕ್ಷಣಿಕ ಶಕ್ತಿಹೀನತೆ, ಬೆಂಡಾಗುವಿಕೆ, ದೃಶ್ಯತೊಂದರೆಗಳು, ಲಕ್ವ ಉಂಟಾದಲ್ಲಿ ಈ ಸಾಧ್ಯತೆಯನ್ನು ಶಂಕಿಸಿ ತಕ್ಷಣ ವೈದ್ಯರನ್ನು ಕಾಣಬೇಕು. ಸ್ಟ್ರೋಕ್ ಹೊಡೆಯುವ ಮುನ್ನ ಕೆಲ ಸಮಯ ತಾತ್ಕಾಲಿಕವಾಗಿ ಶಕ್ತಿಹೀನತೆ, ದೃಶ್ಯ ಹೀನತೆ, ತಲೆನೋವು, ಕ್ಷಣಿಕ ಪ್ರಜ್ಞಾಹೀನತೆಗಳುಂಟಾಗುತ್ತವೆ ಇದನ್ನು ‘ತಾತ್ಕಾಲಿಕ ರಕ್ತ ಕುಂದಿಕೆಯ
ಅವಘಡ’ ಟ್ರಾನ್ಸಿಎಂಟ್ ಇಸ್ಕೀಮಿಕ್ ಅಟ್ಯಾಕ್ ಎನ್ನಲಾಗುತ್ತದೆ. ಈ ಸಮಯದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಸಂಭವಿಸಬಹು ದಾದ ಲಕ್ವ ಮತ್ತು ಸಾವನ್ನು ತಡೆಯಬಹುದು.

ಅಪಘಾತಗಳು (ಆಕ್ಸಿಡೆಂಟ್ಸ್): ರಸ್ತೆ ಅಪಘಾತಗಳಲ್ಲಿ ಉಂಟಾಗುವ ತಲೆಪೆಟ್ಟು, ಕತ್ತು ಮತ್ತು ಬೆನ್ನು ಸ್ಥಂಭದ ಪೆಟ್ಟುಗಳು ಹಾಗೂ ಕೈ ಕಾಲಿನ ದೊಡ್ಡ ಮೂಳೆ ಮುರಿತಗಳಿಂದ ಜೀವಹಾನಿಯಾಗಬಹುದು. ಅತೀವ ರಕ್ತಸ್ರಾವದಿಂದ ರಕ್ತ ಒತ್ತಡ ಕುಸಿದು ಸಾವು ಸಂಭವಿಸಬಹುದಾದುದರಿಂದ ಸುವರ್ಣ ಕಾಲಾವಧಿಯೊಳಗಿನ ಚಿಕಿತ್ಸೆ ಅತ್ಯವಶ್ಯಕ. ಅಪಘಾತದ ರೋಗಿಗಳನ್ನು ಸಾಗಿಸು ವಾಗ ತಲೆ, ಬೆನ್ನು ಮತ್ತು ಕಾಲುಗಳನ್ನು ಹೆಚ್ಚು ಅಲುಗಾಡಿಸದೆ ಯಥಾಸ್ಥಿತಿಯಲ್ಲಿಯೇ ಜರೂರಾಗಿ ಆಸ್ಪತ್ರೆಗೆ ಸಾಗಿಸಬೇಕು. ರಕ್ತಸ್ರಾವದ ಜಾಗಕ್ಕೆ ಅದುಮಿಕೆಯೊಂದನ್ನು ಇಟ್ಟು ರಕ್ತಸ್ರಾವವನ್ನು ನಿಯಂತ್ರಿಸಿ ಸುವರ್ಣ ಕಾಲಾವಧಿಯೊಳಗೆ ಆಸ್ಪತ್ರೆಗೆ ಸಾಗಿಸಬೇಕು. ಮೂಳೆ ಮುರಿದ ಕೈ ಕಾಲುಗಳನ್ನು ಅಲುಗಾಡಿಸಿದಲ್ಲಿ ರಕ್ತಸ್ರಾವ ಹೆಚ್ಚಾಗುವುದಲ್ಲದೆ ಜಿಡ್ಡಿನ ಅಂಶ ರಕ್ತ ಸೇರಿ ಶ್ವಾಸಕೋಶದ ಶುದ್ಧರಕ್ತನಾಳಗಳನ್ನು ಅಡಚಣೆಗೊಳಿಸಿ ಶ್ವಾಸಕೋಶದ ಸಾವನ್ನುಂಟುಮಾಡಿ, ದಿಢೀರ್ ಸಾವು ಸಂಭವಿಸ ಬಹುದು. ಇದಕ್ಕೆ ಜರೂರು ಚಿಕಿತ್ಸೆ ಅವಶ್ಯವಿದ್ದು, ಅಡಚಣೆಯನ್ನು ಗುರುತಿಸಿದ ತಕ್ಷಣ ರಕ್ತ ಹೆಪ್ಪು ಕರಗುವ ಔಷಧಗಳನ್ನು ನೀಡುವುದರಿಂದ ಸಾವಿನಿಂದ ರಕ್ಷಿಸಬಹುದು.

ಹೆರಿಗೆಯ ಅವಘಡಗಳು: ಅಡಚಣೆಯ ಹೆರಿಗೆಗಳು ಮತ್ತು ಗರ್ಭಕೂಸಿನ ಕತ್ತಿನ ಸುತ್ತ ಸುತ್ತಿದ ಹೊಕ್ಕಳಬಳ್ಳಿ ಇವುಗಳಲ್ಲಿ ಹೆರಿಗೆ ನಿಧಾನವಾದಲ್ಲಿ ಗರ್ಭಕೂಸಿಗೆ ರಕ್ತಸಂಚಾರ ಕಡಿಮೆಯಾಗಿ ಗರ್ಭಕೂಸು ಉಸಿರುಗಟ್ಟಿ ಸುವರ್ಣ ಅವಧಿಯೊಳಗೆ ಚಿಕಿತ್ಸೆ ಲಭಿಸ ದಿದ್ದಲ್ಲಿ ಗರ್ಭಕೂಸು ಸಾವಿಗೀಡಾಗಬಹುದು. ಹೆರಿಗೆಯ ಸಂದರ್ಭದಲ್ಲಿ ಈ ಸಾಧ್ಯತೆಗಾಗಿ ವೈದ್ಯ ಸಿಬ್ಬಂದಿ ನಿಗಾ ಇಡುವುದು ಅತ್ಯವಶ್ಯಕ.

ವಿಷಜಂತುಗಳ ಕಚ್ಚುವಿಕೆ: ವಿಷದ ಹಾವು, ಚೇಳುಗಳು ಅಥವಾ ಜೇನು ಕಚ್ಚಿದ ಅಲ್ಪ ಅವಧಿಯಲ್ಲಿ ಚಿಕಿತ್ಸೆ ಅತ್ಯವಶ್ಯಕ. ನಿಧಾನವಾಗಿ ನೀಡುವ ಚಿಕಿತ್ಸೆಗಳು ಪರಿಣಾಮಕಾರಿಯಾಗದಿರಬಹುದು. ವಿಷಜಂತುಗಳು ಕಚ್ಚಿದಾಗ ಸಮಯವನ್ನು ಹಾಳು ಮಾಡದೆ ಬಹುಬೇಗ ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಅತ್ಯವಶ್ಯಕ.

ಸುಸಜ್ಜಿತ ಆಂಬ್ಯುಲೆನ್ಸ್ ಸೇವೆ: ಸುವರ್ಣ ಕಾಲಾವಽಯೊಳಗೆ ರೋಗಿಯನ್ನು ಸುಸಜ್ಜಿತ ಆಸ್ಪತ್ರೆಗೆ ಸಾಗಿಸುವುದು ಅತಿಮುಖ್ಯ ವಾಗಿದ್ದು, ಸುಸಜ್ಜಿತ ಆಂಬ್ಯುಲೆನ್ಸ್ ಸೇವೆಯ ಸೌಲಭ್ಯ ಸುವರ್ಣ ಕಾಲಾವಧಿಯ ಚಿಕಿತ್ಸೆ ಲಭಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಬಹುಪಾಲು ಸಂದರ್ಭಗಳಲ್ಲಿ ಉದಾಸೀನತೆ, ಅರಿವಿಲ್ಲದಿರುವಿಕೆ, ರೋಗಿಯನ್ನು ಈ ಅವಽಯೊಳಗೆ ಸಾಗಿಸಲು ಸೌಲಭ್ಯವಿಲ್ಲ ದಿರುವಿಕೆ ಇವು ಸುವರ್ಣ ಅವಧಿಯೊಳಗೆ ಚಿಕಿತ್ಸೆ ಲಭ್ಯವಾಗದಿರಲು ಬಹುಮುಖ್ಯ ಕಾರಣಗಳು. ಸಮುದಾಯದಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ನುರಿತ ವೈದ್ಯಕೀಯ ಸಿಬ್ಬಂದಿಗಳನ್ನುಳ್ಳ ಸುಸಜ್ಜಿತ ಆಂಬ್ಯುಲೆನ್ಸ್ ಸೇವೆಯನ್ನು ಧಾರಾಳವಾಗಿ ಒದಗಿಸುವುದರಿಂದ ಮಾತ್ರ ಸುವರ್ಣ ಕಾಲಾವಧಿಯೊಳಗಿನ ಚಿಕಿತ್ಸೆ ಸಾಧ್ಯ. ‘ಚಾಲಿತ ಸುಸಜ್ಜಿತ ಐಸಿಯು’ ಸೇವೆಯಿರುವ ಆಂಬುಲೆನ್ಸ್‌ನಲ್ಲಿ ಜೀವ ಉಳಿಸುವ ವೆಂಟಿಲೇಟರ್, ಡೀಫಿಬ್ರಿಲೇಟರ್, ರಕ್ತಹೆಪ್ಪು ಕರಗಿಸುವ ಔಷಧಗಳು, ವಿಶೇಷ ತರಬೇತಿ
ಪಡೆದ ಸಿಬ್ಬಂದಿ ಎಲ್ಲವುಗಳು ಇದ್ದು ಈ ಸೇವೆ ವ್ಯಾಪಕವಾಗಿ ಸಮುದಾಯಕ್ಕೆ ಲಭಿಸಿದಲ್ಲಿ ಮಾತ್ರ ಸುವರ್ಣ ಕಾಲಾವಧಿಯ ಚಿಕಿತ್ಸೆ ಕನಸು ನನಸಾಗುತ್ತದೆ.

ಸುಸಜ್ಜಿತ ಆಸ್ಪತ್ರೆ: ತುರ್ತು ಸಂದರ್ಭಗಳಲ್ಲಿ ರೋಗಿಯನ್ನು ಅವಶ್ಯಕ ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆಗೆ ಕೊಂಡೊಯ್ಯಬೇಕು. ಚಿಕಿತ್ಸೆ ಲಭ್ಯವಿಲ್ಲದ ಚಿಕ್ಕ ಪುಟ್ಟ ಆಸ್ಪತ್ರೆಗೆ ಕೊಂಡೊಯ್ದು ಸಮಯವನ್ನು ಹಾಳು ಮಾಡಬಾರದು. ಎಲ್ಲ ಸೌಲಭ್ಯಗಳು ಲಭ್ಯ ವಿರುವ ಸುಸಜ್ಜಿತ ಆಸ್ಪತ್ರೆ ಬಹುದೂರವಿದ್ದ ಸಂದರ್ಭಗಳಲ್ಲಿ ಮಾತ್ರ ಪ್ರಥಮ ಚಿಕಿತ್ಸೆಗಾಗಿ ಚಿಕ್ಕ ಆಸ್ಪತ್ರೆಗಳಿಗೆ ಕೊಂಡೊ ಯ್ದು, ಅನಂತರ ಜರೂರಾಗಿ ಸುಸಜ್ಜಿತ ಆಸ್ಪತ್ರೆಗಳಿಗೆ ರೋಗಿಯನ್ನು ಕರೆದೊಯ್ಯಬೇಕು.

ಸುವರ್ಣ ಅವಽಯೊಳಗಿನ ಚಿಕಿತ್ಸೆ ನಮ್ಮ ದೇಶದಲ್ಲಿ ಎಲ್ಲರಿಗೂ ಲಭಿಸುವುದು ಮರೀಚಿಕೆ. ಅದೃಷ್ಟವಂತ ಪಟ್ಟಣದ ವಾಸಿಗಳಿಗೆ ಮಾತ್ರ ಲಭಿಸಬಹುದೇನೋ? ವೈದ್ಯರೇ ಇಲ್ಲದ, ಆಸ್ಪತ್ರೆಗಳೇ ಇಲ್ಲದ, ಇದ್ದರೂ ಸುಸಜ್ಜಿತ ವ್ಯವಸ್ಥೆಗಳಿಲ್ಲದ, ಸುಸಜ್ಜಿತ ಆಂಬ್ಯುಲೆನ್ಸ್‌ಗಳಿಲ್ಲದ ಗ್ರಾಮೀಣ ಪ್ರದೇಶದವರಿಗೆ ಸುವರ್ಣ ಅವಧಿಯೊಳಗಿನ ಚಿಕಿತ್ಸೆ ಕನಸಿನ ಮಾತಾದರೂ ಸರಕಾರ ದೃಢ ಮನಸ್ಸು ಮಾಡಿದಲ್ಲಿ ಕಷ್ಟಸಾಧ್ಯವಲ್ಲ. ಸುವರ್ಣ ಅವಧಿಯೊಳಗಿನ ಸೇವೆ ಲಭಿಸಲು ಸುಸಜ್ಜಿತ ತಂತ್ರಜ್ಞಾನವುಳ್ಳ ಆಸ್ಪತ್ರೆಗಳು, ಸಿಬ್ಬಂದಿ, ಇದರ ಅರಿವು ಮತ್ತು ತುರ್ತು ಸಾಗಾಣಿಕೆ ವ್ಯವಸ್ಥೆಗಳ ಮೂಲ ಭೂತ ಸೌಕರ್ಯಗಳು ಮತ್ತು ಚಾಲಿತ ಐಸಿಯು ಆಂಬುಲೆನ್ಸ್‌ಗಳು ಅತ್ಯವಶ್ಯಕವಾಗಿದ್ದು, ಇವು ಎಲ್ಲರಿಗೂ ಲಭಿಸುವ ಸುವರ್ಣ ಕಾಲ ಕೂಡಿ ಬರಲೆಂದು ಆಶಿಸೋಣವೇ ?