ಡಾ.ಗಾಯತ್ರಿ ಜೈಪ್ರಕಾಶ
1970 ರಲ್ಲಿ ಜಾರಿಯಾದ ಅರಣ್ಯ ಹಾಗೂ ಪರಿಸರ ಮುಂತಾದ ಸಂರಕ್ಷಣಾ ಕಾಯ್ದೆಗಳ ಅಡಿಯಲ್ಲಿ ಜಾರಿಗೆ ಬಂದ ಸಂರಕ್ಷಿತ ಅರಣ್ಯ ಪ್ರದೇಶ, ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿಧಾಮ, ಪಕ್ಷಿಧಾಮ ಈ ಎಲ್ಲ ರಾಷ್ಟ್ರೀಯ
ಅಭಿವೃದ್ಧಿ ಹೆಸರಿನ ಯೋಜನೆಗಳಿಂದ ಹೆಚ್ಚಾಗಿ ನಲುಗಿ ಹೋಗಿರುವುದು ಪಾರಂಪರಿಕ ಅರಣ್ಯ ನಿವಾಸಿಗಳು.
ಇವು ಇಷ್ಟೇ ಅಲ್ಲದೇ ಅಣೆಕಟ್ಟು ನಿರ್ಮಾಣ ಹಾಗೂ ಗಣಿಗಾರಿಕೆ ಯೋಜನೆ ಗಳಿಂದಲೂ ಆ ನಿಗದಿತ ಪ್ರದೇಶದಲ್ಲಿ ತಲೆತಲಾಂತರಗಳಿಂದ ವಾಸವಿದ್ದ ಮೂಲನಿವಾಸಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇವರುಗಳ ಸಂಕಷ್ಟವನ್ನು ಉಪಶಮನಗೊಳಿಸಲೆಂದು ‘ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರ ದಾಯಿಕ ಅರಣ್ಯ ನಿವಾಸಿಗಳ ಅರಣ್ಯ ಹಕ್ಕುಗಳ ಮಾನ್ಯತೆ ಕಾಯ್ದೆ-
2006’ ಜಾರಿಗೊಳಿಸಲಾಯಿತಾದರೂ ಅರಣ್ಯನಿವಾಸಿಗಳಿಗೆ ಬುಡಕಟ್ಟು ಅರಣ್ಯ ಹಕ್ಕು ಪೂರ್ತಿಯಾಗಿ ಲಭ್ಯವಾಗಲಿಲ್ಲ.
ಅಧಿಕಾರಿ ವರ್ಗ ಮತ್ತು ಅರಣ್ಯವಾಸಿಗಳ ನಡುವಿನ ಸಂಘರ್ಷ ದಶಕ ಗಳಿಂದಲೂ ಉರಿಯುತ್ತಿರುವ ಕೆಂಡದಂತಿದ್ದು ಆಗಾಗ ಭುಗಿಲೇಳುತ್ತಿರುತ್ತದೆ. ವರ್ತಮಾನದ ಇಂತಹ ಒಂದು ಸಮಾಜೋ-ಆರ್ಥಿಕ ಜ್ವಲಂತ ಸಮಸ್ಯೆ ಯೊಂದನ್ನು ಅರ್ಥಮಾ ಡಿಕೊಂಡು ಬಿಂಬಿಸಿದ್ದು ಕಾಂತಾರ. ಅರಣ್ಯವಾಸಿಗಳ ಜಮೀನಿನ ಹಕ್ಕು, ಅರಣ್ಯದ ಬದುಕಿನ ಹಕ್ಕು ಗಳನ್ನು ಅನುಭವಿಸುವಲ್ಲಿ ನಡೆಯುವ ಸಂಘರ್ಷವನ್ನು ಅಧ್ಯಯನ ಮಾಡಿ ಕಥಾವಸ್ತುವಾಗಿ ಎತ್ತಿಕೊಳ್ಳಲಾಗಿದೆ.
ಆ ಮೂಲನಿವಾಸಿ ಜನರ ಆರಾಧನಾ ದೈವ ಗುಳಿಗನ ಮುಖಾಂತರ ವಕಾಲತ್ತು ನಡೆಸಿ ದಿಟ್ಟವಾಗಿ ಅರಣ್ಯವಾಸಿಗಳ ಬದುಕಿಗೆ
ನ್ಯಾಯಯುತವಾದ ತೀರ್ಮಾನವನ್ನು ಪ್ರತಿರೋಧಕ ಪಾತ್ರದ ಮೂಲಕ ನೀಡಲಾಗಿದೆ. ಇಲ್ಲಿ ಒಂದು ಧ್ವನಿಯಿಲ್ಲದ
ಸಮುದಾಯ ತಮ್ಮ ಹಕ್ಕನ್ನು, ತಮ್ಮ ಬದುಕನ್ನು ಹೇಗೆ ತಮ್ಮ ನಂಬುಗೆಯ ಮೂಲಕ ಪಡೆದುಕೊಂಡಿತು ಎಂಬುದನ್ನು
ಬಹಳ ವಿಸ್ಮಯಕಾರಿಯಾಗಿ ಅಭಿವ್ಯಕ್ತಿಗೊಳಿಸಲಾಗಿದೆ.
ಚಲನಚಿತ್ರದ ಹೆಸರಿನ ಆಶಯದಂತೆ ಇದರಲ್ಲಿ ಅರಣ್ಯ ವಾಸಿಗಳ ದಿನನಿತ್ಯದ ಬದುಕು, ಅವರ ಬದುಕಿನ ಬಗೆಹರಿಯದ ಸಂಘರ್ಷಗಳು ಮತ್ತು ಅವರ ಸಾಂಸ್ಕೃತಿಕ ಬದುಕಿನ ನಿಗೂಢತೆಯೆಡೆಗೆ ಪರಿಣಾಮಕಾರಿಯಾಗಿ ಬೆಳಕು ಚೆಲ್ಲಲಾಗಿದೆ. ಅರಣ್ಯವಾಸಿ ಹಿಂದುಳಿದ ಸಮುದಾಯಗಳು ಭೂಮಾಲೀಕನದಿಂದ ಎದುರಿಸುತ್ತಿದ್ದ ಧೋರಣೆ, ತನ್ನ ಸ್ವಾರ್ಥ ಸಾಧನೆಗಾಗಿ ತಳಸಮುದಾಯಗಳ ಹುಡುಗರನ್ನು ಬಳಸಿ ಕೊಳ್ಳುವುದು.
ಮತ್ತೆ ಅವರ ಮೇಲೆ ನಡೆಸುವಋಣಾತ್ಮಕ ಧೋರಣೆ, ತಾನು ಅವರ ಜತೆಗಿದ್ದೇನೆಂದು ನಟಿಸಿ ಅವರ ದಮನಕ್ಕೆ ಕತ್ತಿ ಮಸೆಯುವುದು, ಆಡಳಿತ ಪಟ್ಟಭದ್ರ ಹಿತಾಸಕ್ತಿಗಳ ಜತೆ ಸೇರಿ ತಳ ಸಮುದಾಯಗಳ ಜಮೀನಿನ ಮಾಲಿಕತ್ವ ಕಸಿದುಕೊಳ್ಳಲು ಪ್ರಯತ್ನಿಸುವುದು, ಅಧಿಕಾರಿ ವ್ಯವಸ್ಥೆಯನ್ನೇ ತಳಸಮುದಾಯಗಳ ವಿರುದ್ಧ ಎತ್ತಿಕಟ್ಟುವುದು, ತನಗೆ ಬೇಕಾದ್ದಷ್ಟು ಆಸ್ತಿ ಇದ್ದರೂ, ತನ್ನ ವಂಶವೇ ಸಂಕಷ್ಟದಲ್ಲಿದ್ದರೂ ತಳಸಮುದಾಯಗಳ ಮೇಲೆ ದೌರ್ಜನ್ಯವೆಸಗುವುದು, ಅವರನ್ನು ನಿರ್ವಂಶಮಾಡಿ ತಾನು ಸುಖವಾಗಿ ರಬಹುದೆಂಬ ಆಸೆಯಿಂದ ಭೀಕರವಾಗಿ ಬಡಿ ದಾಟವನ್ನು ಮಾಡುವುದು, ಅರ್ಸ್ಪೃಶ್ಯತೆ, ಲೈಂಗಿಕ ಲಾಲಸೆ ಮತ್ತು ದೌರ್ಜನ್ಯ ರೀತಿಯಾದ ದಣಿ-ಒಕ್ಕಲು ಸಂಬಂಧದ ಭೀಕರತೆಯನ್ನು ಅಮೂ ಲಾಗ್ರವಾಗಿ ತೋರಿಸಲಾಗಿದೆ.
ಅರಣ್ಯ ವಾಸಿಗಳ ಹಕ್ಕನ್ನು ವ್ಯವಸ್ಥೆ ಹೇಗೆ ಮಾನ್ಯಮಾಡಿ ಸಾಮರಸ್ಯದಿಂದ ಬದುಕಬೇಕು ಎಂಬುದನ್ನು ಚಲನಚಿತ್ರದ ಕೊನೆಯ ಭಾಗದಲ್ಲಿ ಅರಣ್ಯ ವಾಸಿಗಳ ಅಸ್ಮಿತೆಯಾದ ದೈವದ ರೂಪದಲ್ಲಿ ಪ್ರತಿಪಾದನೆ ಮಾಡಲಾಗಿದೆ. ಈ ಚಲನಚಿತ್ರ ದಿಂದ ತಿಳಿದುಕೊಳ್ಳಬೇಕಾದದ್ದು ಸಮುದಾಯದ ನಂಬಿಕೆ ವ್ಯವಸ್ಥೆಗಿಂತ ನಂಬಿಕೆಗೆ ವ್ಯವಸ್ಥೆಗಿಂತ ದೊಡ್ಡ ಶಕ್ತಿಯಿದೆ ಎಂಬುದು. ‘ನಂಬಿದವರಿಗೆ ದೈವ ಅಭಯ ನೀಡುತ್ತದೆ; ಕೊಟ್ಟ ಮಾತಿಗೆ ತಪ್ಪಿದರೆ ದೈವ ನಾಶಮಾಡುತ್ತದೆ’ ಎಂಬುದು ತುಳುನಾಡಿಗರ ನಂಬಿಕೆ.
‘ಪಂಜುರ್ಲಿ ಬುಡಿ ಯೆಂಡಲಾ ಗುಳಿಗೆ ಬುಡಯೇ’ ಎಂಬ ವಾಕ್ಯದ ಮೂಲಕ ಅರಣ್ಯವಾಸಿಗಳ ಅಸೀಮ ನಂಬಿಕೆಯನ್ನು ಕಾಡು-ಪ್ರಕೃತಿಯ ಬಗೆಗಿನ ಆರಾಧ್ಯ ಭಾವವನ್ನು ಸಾರಲಾಗಿದೆ. ತೆರೆಯಮರೆಯಲ್ಲಿ ಆಗಾಗ ಝೇಂಕರಿಸುವ ಭೂತದ ಗಗ್ಗರದ ಸದ್ದು
ಹಾಗೂ ಓಓ ಎನ್ನುವ ಶಬ್ದ ಅರಣ್ಯ ವಾಸಿಗಳ ಕಾಡಿನ ಅಸ್ತಿತ್ವದ ಅನಿಶ್ಚಿತತೆಯನ್ನು ಹೋಗಲಾ ಡಿಸಲು ನಾನಿದ್ದೇನೆ ಎಂದು
ಪ್ರತಿನಿಽಸುವಂತಿದೆ. ದುಷ್ಟರಿಗೆ, ದುಷ್ಟ ಕೆಲಸಕ್ಕೆ ಎಚ್ಚರಿಕೆಯ ಗಂಟೆಯಂತಿತ್ತು. ಆವಾಗಾವಾಗ ಕೇಳಿಬರುವ ಓ…ಎನ್ನುವ
ಶಬ್ದ ತಳಸಮುದಾಯದ ಆಗಾಗ ಆರ್ತನಾದವೂ ಆಗುತ್ತದೆ.
ಇನ್ನು ಚಲನಚಿತ್ರದ ಕುರಿತಾಗಿ ಎದ್ದಿರುವ ಆಕ್ಷೇಪಗಳ ಬಗ್ಗೆ ಲೋಕದೃಷ್ಟಿಯಲ್ಲಿ ಹೇಳುವುದಾದರೆ; ‘ಶೋಕಿ ಆಚರಣೆಗಳಿಂದ ಪ್ರಾಣಿ ಪಕ್ಷಿಗಳಿಗೆ ತೊಂದರೆ, ದೈವ ಬಂದು ಮಾಡುತ್ತಾ, ಅಪ್ಪ ಮಗ ಬೀದಿದಾಸಯ್ಯನ ತರಹ ಭೂತ ನೇಮ ಮಾಡುತ್ತೀರಿ, ಬೇಕು ಎಂದಿದ್ದನ್ನು ಕೊಂಡೊಯ್ಯಲು ಕಾಡು ನಿಮ್ಮ ಅಪ್ಪಂದಾ?’ ಎಂಬ ಅರಣ್ಯಾಧಿಕಾರಿ ಮಾತು ತಳಸಮುದಾಯದವರಿಗೆ ಅವಹೇಳನವಂತಲ್ಲ. ಇದು ಇಲಾಖೆಯ ಅಧಿಕಾರಿ ವರ್ಗಗಳಲ್ಲಿರುವ ನಿಜವಾದ ಧೋರಣೆಯೇ ಅಲ್ಲವೇ? ಗುಳಿಗನ ರೂಪದಲ್ಲಿ ದೈವ ಭೂ ಒಡೆಯನ ಮೇಲೆ ಸೇಡು ತೀರಿಸಿಕೊಳ್ಳುವಂಥದ್ದು.
ಭೂತ ನರ್ತಕನಿಗೆ ಭೂತ ಆವಾಹನೆಗೊಂಡು ತನ್ನನ್ನು ತಾನು ಮೇಲ್ಚಲನೆಗೊಂಡು, ಉಗ್ರರೂಪ ತಾಳಿ ಕೇಡಿಗೆ ಶಿಕ್ಷೆಯನ್ನು
ವಿಽಸುವ ವಿಚಾರಕ್ಕೆ ಸಂಬಂಽಸಿದಂತೆ ದೈವಗಳು ಹೀಗೆ ಮಾಡುವುದಿಲ್ಲ ಎನ್ನುವ ವಿಚಾರ. ಒಂದು ದೈವೀ ಶಕ್ತಿ ಕೆಡುಕು
ಗಳಿಗೆ ತಕ್ಕ ಪಾಠ ಕಲಿಸುವ ಇಂತಹ ವಿವಿಧ ಉದಾಹರಣೆ ಗಳನ್ನು ನಾವು ಪಾಡ್ದನಗಳಲ್ಲಿ ಕಾಣಬಹುದಾಗಿದೆ. ‘ದಲಿತ
ರನ್ನು ಅಸ್ಪೃಶ್ಯರ ಹಾಗೆ, ದಲಿತರ ಹುಡುಗರನ್ನು ಪೋಲಿಗಳ ಹಾಗೆ, ಮಹಿಳೆಯರನ್ನು ಅನೈತಿಕವಾಗಿ, ಭೂತಕಟ್ಟುವವರನ್ನು
ಕೆಟ್ಟವರನ್ನಾಗಿ ತೋರಿಸಲಾಗಿದೆ’ ಎಂಬುದರ ಕುರಿತು- ಅದು ಜನಮಾನಸದ ಧೋರಣೆಯ ಪ್ರತೀಕ. ಹೀಗೆಲ್ಲ ಕಾಣಲಾ
ಗುತ್ತಿದೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ.
ಆದರೆ ನಿಜಾಂಶ ಏನೆಂದರೆ ಕಟ್ಟಕಡೆಯದಾಗಿ ಸಿನಿಮಾ ಎತ್ತಿಹಿಡಿಯುವ, ಪ್ರತಿಪಾದಿಸುವ, ಆಶಿಸುವ ಮಾನವಿಕ ಮೌಲ್ಯಗಳು ಮುಖ್ಯವಾಗುತ್ತವೆಯೇ ಹೊರತು ಅದರ ಮಧ್ಯ ಭಾಗಗಳನ್ನು ತುಂಡರಿಸಿ ಅಪಾರ್ಥಮಾಡಿಕೊಳ್ಳುವುದು ಜವಾಬ್ದಾರಿಯುತ ವಿವೇಚನೆ ಅಲ್ಲ. ಶಿವ ಎನ್ನುವ ಪೋಲಿ ಹುಡುಗನನ್ನು ಸರಿ ದಾರಿಗೆ ತಂದು ಅವನನ್ನು ತಳಸಮುದಾಯಗಳ ಪ್ರತಿನಿಧಿಯಾಗಿಸ ಲಿಲ್ಲವೇ? ಅಸ್ಪೃಶ್ಯತೆಯ ವಿರುದ್ಧ, ಮಹಿಳಾ ದೌರ್ಜನ್ಯದ ವಿರುದ್ಧ ಸೆಟೆದು ನಿಲ್ಲಲಿಲ್ಲವೇ? ಜಮೀನ್ದಾರನಿಗೆ ತಕ್ಕ ಪಾಠ ಕಲಿಸಿ ವ್ಯವಸ್ಥೆ ಯನ್ನು ತನ್ನ ದಿವ್ಯತ್ವದಿಂದ ಒಗ್ಗೂಡಿಸಿ ತನ್ನ ಸಮುದಾಯಕ್ಕೆ ನ್ಯಾಯ ತಂದುಕೊಡಲಿಲ್ಲವೇ? ಎಷ್ಟೋ ಚಲನಚಿತ್ರ ಗಳು ಹೇಗೆ ಕೊನೆಯಾಗುತ್ತವೆ ಎಂಬುದನ್ನು ನಾವು ನಮಗೆ ತಿಳಿದಂತೆ ಅರ್ಥೈಸಬೇಕಾಗಿಕೊಳ್ಳುತ್ತದೆ.
ಕಾಂತಾರಾ ಪೂರ್ಣದೃಷ್ಟಿಯ ಚಿತ್ರ. ಅದರ ಕ್ಲೈಮ್ಯಾಕ್ ನಲ್ಲಿ ಸಮುದಾಯದೆಡೆಗಿನ, ಸಮಸ್ಯೆಯೆಡೆಗಿನ ನಿರ್ದೇಶಕನ
ಆಶಯವನ್ನು ಕಣ್ಣಿಗೆ ರಾಚುವಂತೆ, ಮನಸ್ಸಿನಾಳಕ್ಕೆ ಇಳಿಯುವಂತೆ, ಹೃದಯಾಂತ ರಾಳದಲ್ಲಿ ಭಾವನೆಗಳು ಮೂಡುವಂತೆ,
ಯಾರೇ ಆಗಲಿ ಎದ್ದು ನಿಂತು ಭಕ್ತಿಯಿಂದ ಕೈಮುಗಿದು ನಿಲ್ಲುವಂತಹ ಅಮೋಘವಾದ ಅಂತ್ಯ ಮಾಡಿದ್ದಾರೆ.
ಈ ಚಿತ್ರವು ಭೂತ, ಭೂತಕೋಲ, ಭೂತ ನರ್ತಕರನ್ನೂ ಗೌರವ ನೀಡುವ ವಿಶ್ವ ವ್ಯಾಪಿ ಐಡೆಂಟಿಟಿ ತಂದುಕೊಟ್ಟಿದೆ. ನಂಬಿಕೆ,
ಆಚರಣೆ, ಜೀವನ ಮೌಲ್ಯಗಳು, ಅಗತ್ಯತೆಗಳು, ಹಕ್ಕುಗಳು, ಸಮಸ್ಯೆಗಳು ಇವುಗಳನ್ನು ಸಮಾಜಕ್ಕೆ ಅರಿವು ಮೂಡಿಸಿ ಅವರ
ಶ್ರೇಯೋಭಿವೃದ್ಧಿಯನ್ನು ತಮ್ಮ ನಂಬಿಕೆಯ ಮೂಲಕ ಎತ್ತಿ ಹಿಡಿಯುವ ಪೂರ್ಣ ದೃಷ್ಟಿಯ ಸಮೃದ್ಧ ಚಲನಚಿತ್ರದಲ್ಲಿ ನಮ್ಮನ್ನು ಕೀಳಾಗಿ ನೋಡಲಾಗಿದೆ ನಮ್ಮನ್ನು ಅವಮಾನಿಸ ಲಾಗಿದೆ ಎಂದರೆ ಹೇಗೆ? ಭೂತಾ ರಾಧನೆಯ ಬಗ್ಗೆ ಗೊತ್ತಿಲ್ಲದವರು ಬೆರಗು ಗಣ್ಣಿನಿಂದ ನೋಡುವ ಹಾಗೆ ಮಾಡಿದ ಚಿತ್ರ ಇದು. ಇಲ್ಲಿ ಯಾವುದನ್ನೂ ಯಾರ ಮೇಲೂ ಹೇರುತ್ತಿಲ್ಲ, ದೂಷಿಸುತ್ತಿಲ್ಲ, ಅಸಹ್ಯವಾಗಿ ತೋರಿಸುತ್ತಿಲ್ಲ.
ಆಳುವ ವರ್ಗದ ವಿರುದ್ಧ, ಬಲಾಢ್ಯರ ವಿರುದ್ಧ ಶೋಷಿತರ ಪ್ರತಿ ರೋಧವನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಳಿಸ ಲಾಗಿದೆ. ಭಾರತದ ೧೯೪೭-೨೦೦೦ರವರೆಗೆ ಸುಮಾರು ೬೦ ಮಿಲಿಯನ್‌ಗಿಂತಲೂ ಅಽಕ ಮೂಲನಿವಾಸಿಗಳನ್ನು ನಾನಾ
ಯೋಜನೆಯಡಿ ಒಕ್ಕಲೆಬ್ಬಿಸಲಾಗಿದೆ. ಅದರಲ್ಲಿ ಶೇ.೪೦ ಕ್ಕಿಂತಲೂ ಹೆಚ್ಚು ಬುಡಕಟ್ಟುಗಳು. ಆಳುವ ಪಾರಮ್ಯ ಅವರನ್ನು
ದಿಕ್ಕಾಪಾಲಾಗಿಸಿದವು. ಕಾಡು ಎನ್ನುವುದು ಅರಣ್ಯ ವಾಸಿಗಳ ಅಸ್ತಿತ್ವ, ಉಸಿರು, ಜೀವನ, ಮೌಲ್ಯ, ಅಸ್ಮಿತೆ. ಸ್ಥಳಾಂತರದಿಂ
ದಾಗಿ ದೇಶೀ ಜನವರ್ಗ, ಕಿರು ಸಮುದಾಯ ಅವರ ಅಂದದ ಚೆಂದದ ಸಂಸ್ಕೃತಿ ತಲ್ಲಣಗೊಂಡಿತು.
ಇವಿಷ್ಟೇ ಅಲ್ಲದೇ ಅವರ ಜತೆ ಅವರ ಆರಾಧನಾ ದೈವಗಳನ್ನೂ ದಿಕ್ಕಿಲ್ಲದಂತೆ ಮಾಡಲಾಗಿದೆ. ಇಂದಿಗೂ ಅವರ ಆರ್ತನಾದ ಆಳುವವರ ಕಿವಿಗೆ ಬೀಳದಾಗಿದೆ, ಕೇಳದಾಗಿದೆ. ಕಾಂತಾರಾ ಸಾಮಾಜಿಕ ನ್ಯಾಯ ಮೌಲ್ಯವನ್ನು ಎತ್ತಿಹಿಡಿದ ಚಲನಚಿತ್ರ. ಬುಡಕಟ್ಟು ಆಶ ಯಗಳಿಗೆ ಪೂರಕವಾದ ಚಲನಚಿತ್ರ. ತಳಸಮುದಾಯಗಳ ಸಂಸ್ಕೃತಿಗೆ, ಅರಣ್ಯವಾಸಿಗಳ ಹಕ್ಕಿಗೆ ಚೈತನ್ಯ ತುಂಬಿದ ಚಿತ್ರವಾಗಿದೆ. ಆದರೆ ಈ ಚಲನಚಿತ್ರ ಅಂತ್ಯವಲ್ಲ ಆರಂಭದ ಮುನ್ನುಡಿ.
ಅರಣ್ಯವಾಸಿಗಳ ಅರಣ್ಯದ ಹಕ್ಕು ಪ್ರಭುತ್ವದ ಧೋರಣೆಯಿಂದ ಕೈಗೆಟಕದೇ ಕಗ್ಗಂಟಾಗಿ ಉಳಿದಿದೆ. ಅರಣ್ಯವಾಸಿ ಸಮುದಾಯಗಳು ವ್ಯವಸ್ಥೆಗೆ ಘೋರವಾದ ಪ್ರತಿರೋಧವನ್ನು ಒಡ್ಡಿ ತಮ್ಮ ಮೂಲ ಹಕ್ಕನ್ನು ತಮ್ಮದಾಗಿಸಿಕೊಳ್ಳಬೇಕಾಗಿದೆ. ಅರಣ್ಯದ ಜನರ ಬದುಕು, ನಂಬಿಕೆ, ಭಾವನೆ, ಆಶಯ, ಅಗತ್ಯತೆಗಳು, ಅರಣ್ಯ ಪೋಷಿಸುವಲ್ಲಿ ಅವರ ಪಾತ್ರವನ್ನು ಅರಿತುಕೊಂಡು ಅದಕ್ಕೆ ಗೌರವ ಕೊಟ್ಟು ಪ್ರಭುತ್ವ ಅವರ ಹಕ್ಕನ್ನು ಅನುಭವಿಸಲು ಅವಕಾಶ ಮಾಡಿಕೊಡಬೇಕಾಗಿದೆ.