Tuesday, 17th September 2024

ಅಬ್ ಕಿ ಬಾರ‍್ ಟ್ರಂಪ್ ಸರ್ಕಾರ‍್ ?

ಶಿಶಿರ ಕಾಲ

shishirh@gmail.com

ಕುಮಟಾದ ಮೋಹನ್ ಶೆಟ್ರು ಸತತ ೨ ಬಾರಿ ಶಾಸಕರಾದವರು. ಮೂರನೇ ಬಾರಿ ಕೇವಲ ೨೦ ವೋಟ್‌ನಿಂದ ಸೋತುಬಿಟ್ಟರು. ರಾಜಕೀಯಕ್ಕೆ
ಬರುವುದಕ್ಕಿಂತ ಮುಂಚಿನಿಂದಲೂ ಅವರನ್ನು ಹತ್ತಿರದಿಂದ ಕಂಡವನು ನಾನು. ಕೊಡುಗೈ ದಾನಿ, ಸಜ್ಜನ. ಕಷ್ಟ ಹೇಳಿಕೊಂಡು ಬಂದವರನ್ನು ಬರಿಗೈಯಲ್ಲಿ ಕಳಿಸಿದ್ದಿಲ್ಲ. ಒಳ್ಳೆಯ ರಾಜಕಾರಣಿ. ಅಽಕಾರದ ಅಮಲು, ದರ್ಪ ಎಷ್ಟು ಬೇಕೋ ಅಷ್ಟಿತ್ತು. ಆದರೆ ಜನಾನುರಾಗಿ. ಅಧಿಕಾರದಲ್ಲಿದ್ದಾಗ ಅವರ ಮನೆಯ ಎದುರು ಯಾವತ್ತೂ ಜನಜಂಗುಳಿ. ಶೆಟ್ರು ಹೊರ ಚಾವಡಿಯಲ್ಲಿ ಲುಂಗಿ-ಬನಿಯನ್ ಧರಿಸಿ ಕೂತು ಜನರ ಅಹವಾಲು ಕೇಳುತ್ತಿದ್ದರು.

ಬಂದವರಿಗೆ ಚಹಾ-ತಿಂಡಿ ವ್ಯವಸ್ಥೆ, ಸಮಸ್ಯೆಯನ್ನು ಆಲಿಸುವುದು, ಪರಿಹರಿಸುವುದು, ಯಾರದ್ದೋ ಮಗಳ ಮದುವೆಗೆ, ಕ್ರಿಕೆಟ್-ವಾಲಿಬಾಲ್
ಟೂರ್ನಮೆಂಟುಗಳಿಗೆ, ದೇವಸ್ಥಾನಕ್ಕೆ ಹೀಗೆ ದೇಣಿಗೆ ಕೇಳಿ ಬರುವವರನ್ನು ಸಂತೈಸಬೇಕು. ಬಂದವರಿಗೆ ಖಾಲಿ ಕೈ ಕಳುಹಿಸುವಂತಿಲ್ಲ. ನಡುನಡುವೆ ಏನೋ ಒಂದು ಮುಖ್ಯ ಫೋನ್ ಕರೆ, ಕಿವಿಯಲ್ಲಿ ಗುಸುಗುಸು ಹೇಳುವ ಅವರ ಅಧಿಕಾರಿ ವರ್ಗ, ಇದೆಲ್ಲದರ ನಡುವೆ ಒಮ್ಮಿಂದೊಮ್ಮೆಲೇ ಅವರು ಏನೋ ಒಂದು ಅಜೆಂಟ್ ಕೆಲಸ ಬಂದು ಹೊರಟು ಬಿಡುವುದು. ಶಾಸಕರ ಮನೆಯನ್ನು ಹೊಸಬರು ಕಂಡರೆ ‘ಮದುವೆ ಮನೆಯಿರಬಹುದು’ ಎಂದುಕೊಳ್ಳುತ್ತಿದ್ದರು.

ಅವರ ಮನೆ ಮುಖ್ಯ ರಸ್ತೆಯಲ್ಲಿಯೇ ಇದ್ದುದರಿಂದ ಈ ದರ್ಬಾರ್ ದೃಶ್ಯ ಬಸ್ಸಿನಲ್ಲಿ ಹೋಗಿಬರುವಾಗಲೆಲ್ಲ ಕಾಣಿಸುತ್ತಿತ್ತು. ಆದರೆ ಅವರು ಸೋತಾಗ ಅಲ್ಲಿನ ಸೀನ್ ಸಂಪೂರ್ಣ ಬದಲಾಗಿಹೋಗಿಯಿತು. ಅಲ್ಲಿ ಜನಜಂಗುಳಿ ಉಳಿಯಲಿಲ್ಲ, ಪೊಲೀಸರು, ಕಾರುಗಳು ಇರಲಿಲ್ಲ. ಅವರೊಬ್ಬರೇ ಜಗುಲಿ
ಯಲ್ಲಿ ಕೂತು, ರಸ್ತೆಯತ್ತ ದಿಟ್ಟಿಸುತ್ತ ಗಂಟೆಗಟ್ಟಲೆ ಕಳೆಯುತ್ತಿದ್ದರು. ಆ ದೃಶ್ಯ ಮತ್ತು ಹಿಂದಿನ ಅಧಿಕಾರದಲ್ಲಿದ್ದ ವೈಭವಗಳು, ಇವನ್ನು ಹೋಲಿಸಿ ಕಂಡಾಗ ಅವರಿಗೆ ಸೋಲು ಬಾಧಿಸಿದ ಪ್ರಮಾಣದ ಅಂದಾಜು ಹತ್ತುತ್ತಿತ್ತು. ಅವರಿಗೆ ನಂತರದಲ್ಲಿ ಆ ಸೋಲಿನ ಗುಂಗಿನಿಂದ ಹೊರಬರುವ ಅವಕಾಶವೇ ಸಿಗಲಿಲ್ಲ. ಮುಂದಿನ ಚುನಾವಣೆಯೊಳಗೇ ತೀರಿಕೊಂಡುಬಿಟ್ಟರು.

ರಾಜಕಾರಣಿಗೆ ಸೋಲಿಗಿಂತ ಭೀಕರವಾದದ್ದು ಇನ್ನೊಂದಿಲ್ಲ. ಅಽಕಾರದಲ್ಲಿರುವಾಗ ಹಿಂಬಾಲಕರ ದಂಡು, ಅಧಿಕಾರದ ವ್ಯವಸ್ಥೆ, ಸರಕಾರಿ ತಾಕತ್ತು, ಸೌಲಭ್ಯ, ಸೆಲ್ಯೂಟ್ ಹೊಡೆಯುವವರು, ಕಾಲಿಗೆ ಬೀಳುವವರು. ಇವೆಲ್ಲದಕ್ಕೆ ಬಹುತೇಕ ರಾಜಕಾರಣಿಗಳು ಬಹುಬೇಗ ವ್ಯಸನಿಯಾಗಿ ಬಿಡುತ್ತಾರೆ. ಹೀಗಿರುವಾಗ ಅಽಕಾರದ ಅಷ್ಟೂ ಸಾಧ್ಯತೆಗಳು ಒಮ್ಮಿಂದೊಮ್ಮೆಲೇ ಕೈತಪ್ಪಿ ಹೋಗಿಬಿಟ್ಟರೆ ಹೇಗಾಗಬೇಡ? ಚುನಾವಣಾ ಸೋಲು ಘಟಾನುಘಟಿ ಗಳನ್ನೇ ನಲುಗಿಸಿ ಬಿಡುತ್ತದೆ. ಸೋಲು ಕೆಲವೊಮ್ಮೆ ಅಂತ್ಯವಾಗಿಬಿಡಬಹುದು. ಐದೇ ವರ್ಷದಲ್ಲಿ ಮತ್ತೊಮ್ಮೆ ಟಿಕೆಟ್ ಸಿಗದಂತೆ ಸ್ಥಿತಿ, ಲೆಕ್ಕಾಚಾರ
ಬದಲಾಗಬಹುದು. ಅಧಿಕಾರ ಕಳೆದುಕೊಂಡ ಬೇಸರ, ಕಷ್ಟ, ಜತೆಯಲ್ಲಿ ನಿರಂತರ ಅನಿಶ್ಚಿತತೆ. ಸೋತಾಗಲೂ ರಾಜಕಾರಣಿ ಯಾಗಿ ಅಸ್ತಿತ್ವ ಕಾಪಾಡಿಕೊಳ್ಳುವುದು ಸುಲಭದ ಮಾತೇ ಅಲ್ಲ.

ಪಕ್ಷದಲ್ಲಿಯೂ ಮತ್ತೆ ಟಿಕೆಟ್ ಸಿಗುವಂತೆ ವಾತಾವರಣ ಇಟ್ಟುಕೊಂಡು ಹೋಗಬೇಕು. ಈ ವರ್ಷದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಕೆಲವು ಹಾಲಿ, ಶಕ್ತಿಯು ತರೆನ್ನಿಸಿಕೊಂಡ ರಾಜಕಾರಣಿಗಳು ಸೋತದ್ದು, ಸೋತ ನಂತರ ಖಿನ್ನರಾಗಿದ್ದು, ಅವರಲ್ಲಿ ಕೆಲವರು ಗುಪ್ತವಾಗಿ ಹೊರದೇಶಕ್ಕೆ ಹೋಗಿ ಮಾನಸಿಕ ಚಿಕಿತ್ಸೆ ತೆಗೆದುಕೊಂಡದ್ದು ಇವೆಲ್ಲ ನಿಮಗೆ ಗೊತ್ತಿರುತ್ತದೆ. ಬರಾಕ್ ಒಬಾಮ ತಮ್ಮ ಆತ್ಮಕಥೆ ‘ಅ Pಟಞಜಿoಛಿb
ಔZb’ನಲ್ಲಿ, ತಾವು ಅಧಿಕಾರ ಮುಗಿಸಿ ಹೊರಡುವಾಗಿನ ಮನದ ತುಮುಲಗಳನ್ನು ವಿವರಿಸಲಿಕ್ಕೆ ಒಂದು ಅಧ್ಯಾಯ ವನ್ನೇ ಮೀಸಲಿಟ್ಟಿದ್ದಾರೆ. ಕೊನೆಯಬಾರಿ ಅಧ್ಯಕ್ಷರ ಹೆಲಿ ಕಾಪ್ಟರ್ ಏರಿ, ವೈಟ್‌ಹೌಸ್‌ನ ಹಿತ್ತಲಿನಿಂದ ಮೇಲೇರಿದಂತೆ, ಅಧಿಕಾರದಿಂದ ದೂರಾಗುವ ಆ ಭಾವವನ್ನು ಅವರಷ್ಟು
ಮಾರ್ಮಿಕವಾಗಿ ಬೇರೆ ಯಾರೂ ವಿವರಿಸಲಿಕ್ಕೆ ಸಾಧ್ಯವಿಲ್ಲ.

ಯಾವುದೇ ಅಧಿಕಾರವಿರಲಿ, ಅದರಿಂದ ನಿರ್ಗಮಿಸುವಾಗ ಅಲ್ಲಿ ನಿರ್ಮಾಣವಾಗುವ ನಿರ್ವಾತ ಸಾಧಾರಣದವರಿಗೆ ಅರಗಿಸಿಕೊಳ್ಳಲಿಕ್ಕಾಗುವುದಿಲ್ಲ. ಒಬಾಮಾರಿಗೆ, ಟ್ರಂಪ್‌ರಂಥ ವ್ಯಕ್ತಿಗೆ ಅಧಿಕಾರ, ಅಮೆರಿಕ, ಜಗತ್ತಿನ ಅತ್ಯಂತ ಜವಾಬ್ದಾರಿ ಯುತ ಸ್ಥಾನವನ್ನು ಬಿಟ್ಟು ಹೋಗುತ್ತಿರುವುದಕ್ಕೆ ಒಂದಿಷ್ಟು
ಆತಂಕವೂ ಇತ್ತು. ಆದರೆ ಒಬಾಮ ಸೋತು ಹೊರಟವರಲ್ಲ. ಅಮೆರಿಕದಲ್ಲಿ ಎರಡೇ ಬಾರಿ ಅಧ್ಯಕ್ಷರಾಗಬಹುದು ಎಂಬುದು ಕಾನೂನು. ಅವರದು ಅಧ್ಯಕ್ಷ ಸ್ಥಾನದಿಂದ ನಿವೃತ್ತಿ. ಒಬಾಮ ರಂಥ ಒಬಾಮಾರಿಗೇ ಅಽಕಾರದ ಬಿಡುಗಡೆ ಜೀರ್ಣಿಸಿ ಕೊಳ್ಳಲಿಕ್ಕಾಗಲಿಲ್ಲ.

ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್- ಅವರೂ ಅಷ್ಟೇ. ಬೈಡನ್ ವಿರುದ್ಧದ ಸೋಲನ್ನು ಒಪ್ಪಿಯೇ ಇಲ್ಲ. ಟ್ರಂಪ್ ಅಧ್ಯಕ್ಷರಾಗಿದ್ದು ಮತ್ತು ಸೋತಿದ್ದು ಎರಡೂ ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದ ವಿಷಯ. ಹಿಲರಿ ಕ್ಲಿಂಟನ್ ಗೆಲ್ಲೋದೇ ಪಕ್ಕಾ ಎಂದು ಜಗತ್ತೆಲ್ಲ ನಂಬಿಕೊಂಡಿದ್ದಾಗ ಟ್ರಂಪ್ ಗೆದ್ದು
ಬಿಟ್ಟರು. ಇವರೇ ಅಧ್ಯಕ್ಷರಾಗಿ ಮರು ಆಯ್ಕೆಯಾಗುತ್ತಾರೆ ಅಂದುಕೊಂಡಾಗ ಸೋತುಬಿಟ್ಟರು. ಚುನಾವಣೆಯ ಸಮಯದಲ್ಲಿ ಟ್ರಂಪ್ ಎದುರಾಳಿಯಾಗಿ ನಿಂತಿದ್ದ ಡೆಮೋ ಕ್ರಾಟ್ ಪಕ್ಷದ ಹಿಲರಿ ಕ್ಲಿಂಟನ್ ಮೇಲೆ ನೂರೆಂಟು ಆರೋಪ ಗಳಿದ್ದವು. ಟ್ರಂಪ್ ಆಕೆಯನ್ನು ಸಂಬೋಧಿಸು ತ್ತಿದ್ದುದೇ ‘ಕ್ರುಕೆಡ್ ಹಿಲರಿ’ ಎಂದು. ಆಕೆ ಯಾವ ಅಪಾದನೆಯನ್ನೂ ಸಮರ್ಪಕವಾಗಿ ಅಲ್ಲಗಳೆಯಲಿಲ್ಲ. ಥೇಟ್ ಈ ಬಾರಿಯ ಕರ್ನಾಟಕದ ಬಿಜೆಪಿಯಂತೆ ವ್ಯವಹರಿಸಿ ಸೋತುಹೋದರು.

ರಾಜಕೀಯ ಅಥವಾ ಮಿಲಿಟರಿ ಹಿನ್ನೆಲೆಯೇ ಇಲ್ಲದ ಟ್ರಂಪ್ ಅಧ್ಯಕ್ಷರಾಗಿ ಕೂತರು. ಸಾಮಾನ್ಯವಾಗಿ ಚುನಾವಣೆಯಾದ ನಂತರ ರಾಜಕಾರಣಿ
ಗಳು ಸ್ವಲ್ಪ ಕಾಲ ಶಾಂತವಾಗಿಬಿಡುತ್ತಾರೆ. ಚುನಾವಣಾ ಅಬ್ಬರ ಮುಗಿದುಹೋಗಿರುತ್ತದೆ. ಆದರೆ ಟ್ರಂಪ್ ಹಾಗಲ್ಲ. ಗೆದ್ದ ನಂತರವೂ ಚುನಾವಣೆಯ ಮೂಡ್‌ನಿಂದ ಹೊರಬರಲೇ ಇಲ್ಲ. ನಿರಂತರವಾಗಿ, ಪ್ರತಿದಿನ ಎದುರಾಳಿಗಳ ಮೇಲೆ ಮಾತಿನ, ಕಾನೂನಿನ ದಾಳಿಮಾಡಿದರು. ಅಮೆರಿಕದ ಅಧ್ಯಕ್ಷರ
ಗಾದಿಯ ಪ್ರಾಬಲ್ಯವನ್ನು ಬಳಸಿಕೊಂಡು ಸಿಕ್ಕವರನ್ನೆಲ್ಲ ಟೀಕೆ ಮಾಡುವುದು ಅಽಕಾರದಲ್ಲಿದ್ದ ನಾಲ್ಕೂ ವರ್ಷ ನಡೆಯಿತು.

ಅಮೆರಿಕದ ಅಧ್ಯಕ್ಷರಾದವರು ಟೀಕೆಗಳನ್ನು ನಿತ್ಯ ಎದುರಿಸಬೇಕು, ಆದರೆ ಟ್ರಂಪ್ ನಿತ್ಯ ಟೀಕೆ ಮಾಡುವುದನ್ನೇ ಕಾಯಕ ಮಾಡಿಕೊಂಡವರು. ತಮ್ಮದೇ ಅಽಕಾರಿಗಳನ್ನು, ರಾಜಕಾರಣಿ ಗಳನ್ನು ಕೂಡ ಬಿಡಲಿಲ್ಲ. ತಾವು ಹೇಳಿದ್ದಕ್ಕೆ ಸೈ ಎನ್ನದ ಅಧಿಕಾರಿಗಳು, ರಾಜಕಾರಣಿಗಳನ್ನು ವೈಟ್‌ಹೌಸ್‌ನಿಂದ ಬಿಸಾತ್ ಇಲ್ಲದೆ ಹೊರಹಾಕಿದರು. ಅವರು ಸರಕಾರ ನಡೆಸಿದ್ದೇ ಟ್ವಿಟರ್ ಸಾಮಾಜಿಕ ಜಾಲತಾಣದಲ್ಲಿ. ನಾಲ್ಕು ವರ್ಷದಲ್ಲಿ
ಟ್ರಂಪ್ ೨೬ ಸಾವಿರ ಟ್ವೀಟ್ ಮಾಡಿದ್ದರು ಎಂದರೆ ನೀವೇ ಅಂದಾಜಿಸಿಕೊಳ್ಳಿ. ಅವರು ತಮಗಾಗದವರನ್ನು ಟ್ವಿಟರ್ ಬಳಸಿಯೇ ನಿರ್ನಾಮ ಮಾಡುತ್ತಿದ್ದರು.

ಅಮೆರಿಕ ಅಧ್ಯಕ್ಷರೆಂದರೆ ಅವರ ಅಽಕಾರಕ್ಕೆ ಮೇಲ್ಮಿತಿಯಿಲ್ಲ. ತಮ್ಮ ಅಽಕಾರವನ್ನು ಹೇಗೆ ಬೇಕೋ ಹಾಗೆ ಬಳಸಿ ಕೊಂಡದ್ದಕ್ಕೆ, ಅಧ್ಯಕ್ಷರಾಗಿರು ವಾಗಲೇ ಎರಡು ಬಾರಿ ನ್ಯಾಯಾಲಯದಲ್ಲಿ ಅವರ ಮೇಲೆ ದೋಷಾರೋಪ ಪಟ್ಟಿ ಮಾಡಲಾಯಿತು. ಅಮೆರಿಕದ ಡಿಫೆನ್ಸ್ ಸೆಕ್ರೆಟರಿ, ವಿದೇಶಾಂಗ
ಖಾತೆ ಮುಖ್ಯಸ್ಥ ಮೊದಲಾದವರನ್ನು ಟ್ರಂಪ್ ಮನೆಗೆ ಕಳುಹಿಸಿದ್ದು ಒಂದೊಂದು ಟ್ವೀಟ್ ಮೂಲಕ. ಅಧಿಕಾರಿ ಗಳನ್ನು, ತಮ್ಮ ಜತೆಯ ರಾಜಕಾರಣಿಗಳನ್ನು ಅತ್ಯಂತ ಕನಿಷ್ಠ ವಾಗಿ ನಡೆಸಿಕೊಂಡವರು ಟ್ರಂಪ್. ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿಕೊಂಡಿದ್ದ ಟ್ರಂಪ್, ಬಿಗ್ ಬಾಸ್ ಮನೆಯಿಂದಹೊರಗಟ್ಟುವಂತೆ ತಮ್ಮ ಸುತ್ತಲಿನವರನ್ನು ಅಮಾನತು ಮಾಡುತ್ತಿದ್ದರು.

ಟ್ರಂಪ್ ಆಡಳಿತದಲ್ಲಿ ವೈಟ್‌ಹೌಸ್‌ನಿಂದ ನಿತ್ಯವೂ ಹುಬ್ಬೇರಿಸುವ ಒಂದಾದರೂ ಬೆಳವಣಿಗೆಗಳಿರುತ್ತಿದ್ದವು. ಪ್ರತಿಯೊಂದೂ ಅಮೆರಿಕದ ಅಧ್ಯಕ್ಷರ ಶಿಷ್ಟಾಚಾರದ ತದ್ವಿರುದ್ಧದ ನಡೆಗಳು. ಟ್ರಂಪ್ ಇಂದಿಗೂ ‘ಸೋತಿದ್ದೇನೆ’ ಎಂದು ಎಲ್ಲಿಯೂ ಹೇಳುವುದಿಲ್ಲ. ‘ಚುನಾವಣೆಯೇ ಅಕ್ರಮ, ಗೆದ್ದಿದ್ದು ನಾನೇ’
ಎಂದೇ ಹೇಳುವುದು. ನಿಮಗೆ ಈ ಸುದ್ದಿ ನೆನಪಿರಬಹುದು. ಟ್ರಂಪ್ ಸೋತಾಗಿತ್ತು, ಬೈಡನ್ ಗೆದ್ದಾಗಿತ್ತು. ಅಧಿಕಾರ ಆಗಿನ್ನೂ ಹಸ್ತಾಂತರವಾಗಿರಲಿಲ್ಲ. ಟ್ರಂಪ್ ‘ಚುನಾವಣೆಯಲ್ಲಿ ಅಕ್ರಮವಾಗಿದೆ’ ಎಂದು ತಮ್ಮ ಕಟ್ಟಾ ಬೆಂಬಲಿಗರನ್ನು ನಂಬಿಸಿ ಒಗ್ಗೂಡಿಸಿದರು.

ವೈಟ್‌ಹೌಸ್ ಮುಂದೆ ಜನರೆದುರು ಭಾಷಣಕ್ಕೆ ನಿಂತರು. ತಮ್ಮದೇ ಉಪಾಧ್ಯಕ್ಷ ಈ ಚುನಾವಣೆ ಯನ್ನು ಅಕ್ರಮವೆಂದು ಘೋಷಿಸಬಹುದು ಎಂದು ಜನರನ್ನು ಎತ್ತಿಕಟ್ಟಿ, ಅವರು ಅಮೆರಿಕದ ಸಂಸತ್ತಿಗೆ ನುಗ್ಗುವಂತೆ ಪ್ರಚೋದಿಸಿದರು. ಸಾವಿರಾರು ಜನರು ಒಳನುಗ್ಗಿದರು. ಅಂದು ಅವರ ಕೈಗೆ ಉಪಾಧ್ಯಕ್ಷ ಮೈಕ್ ಪೆನ್ಸ್ ಸಿಕ್ಕಿದ್ದಿದ್ದರೆ ಅವರನ್ನು ಮುಗಿಸಿಯೇಬಿಡುತ್ತಿದ್ದರು. ಒಂದು ಸಮಯದಲ್ಲಂತೂ ಈ ಒಳನುಗ್ಗಿದ ಜನಜಂಗುಳಿಯ ಮೂರೇ ಅಡಿ ದೂರದಲ್ಲಿ, ಪಕ್ಕದ ಕೋಣೆಯಲ್ಲಿ ಪೆನ್ಸ್ ಇದ್ದರಂತೆ. ಕೊನೆಗೆ ಸಂಸತ್ತಿನ ನೆಲಮಾಳಿಗೆಯ ಮೂಲಕ ಅವರನ್ನು ಜೀವಂತ ಸಾಗಿಸುವಾಗ ಅವರ ಭದ್ರತೆ ನೋಡಿಕೊಳ್ಳುತ್ತಿದ್ದ ಸೀಕ್ರೆಟ್ ಸರ್ವಿಸ್‌ಗೆ ಸಾಕೋ ಸಾಕಾಗಿತ್ತು.

ಇಷ್ಟಾಗಿಯೂ ಜನರು ಡೊನಾಲ್ಡ್ ಟ್ರಂಪ್‌ರನ್ನು ಪ್ರೀತಿ ಸಲು ಕಾರಣವಿದೆ. ಮೊದಲನೆಯದಾಗಿ ಅವರು ತೀರಾ ಅಸಾಂಪ್ರದಾಯಿಕ ರಾಜಕಾರಣಿ. ಆ ಕಾರಣಕ್ಕೇ ಹಿಂದಿನ ಅಧ್ಯಕ್ಷರು ಯಾರೂ ಸಾಧಿಸಲಾಗದ್ದನ್ನು ಟ್ರಂಪ್ ಸಾಧಿಸಿದ್ದರು. ಟ್ರಂಪ್ ಹೇಳಿಕೇಳಿ ಅಮೆರಿಕದ ಟಾಪ್ ಬಿಸಿನೆಸ್ ಮನ್. ಸಂಧಾನ, ಮಾತುಕತೆ, ವ್ಯವಹಾರ ಇವೆಲ್ಲದರಲ್ಲಿ ಎತ್ತಿದ ಕೈ. ಅವರ ಅಸಾಂಪ್ರದಾಯಿಕ ಯೋಚನೆಗಳು ಅಮೆರಿಕದ ರಾಜಕಾರಣಕ್ಕೆ ಹೊಸತು. ಉದ್ಯಮಗಳಿಗೆ ತೆರಿಗೆ ವಿನಾಯತಿ ಕೊಟ್ಟರು. ಕೈಗಾರಿಕೆಗೆ ಅಡ್ಡಲಾಗಿದ್ದ ಪರಿಸರ ಸಂರಕ್ಷಣಾ ಕಾಯ್ದೆಗಳನ್ನು ರದ್ದು ಮಾಡಿದರು. ಇದರಿಂದ ದೇಶೀ ಉತ್ಪಾದನೆ ಹೆಚ್ಚಿತು. ಅಮೆರಿಕದೊಳಕ್ಕೆ ಮುಸ್ಲಿಂ ರಾಷ್ಟ್ರಗಳಿಂದ ವಲಸೆ ಬರದಂತೆ ಪೂರ್ಣ ನಿರ್ಬಂಧ ಹೇರಿದರು. ಇವನ್ನೆಲ್ಲ ಅಮೆರಿಕನ್ನರು ಇಷ್ಟಪಟ್ಟಿದ್ದರು.

ಅಲ್ಲಿಯವರೆಗೆ ಅಮೆರಿಕದ ಕೆಲವು ಅಪದ್ಧ ವ್ಯವಹಾರ ಗಳಿದ್ದವು. ಪಾಕಿಸ್ತಾನಕ್ಕೆ ಬೆಂಬಲಿಸಿ ಹಣಕೊಡುತ್ತಿದ್ದುದನ್ನು ನಿಲ್ಲಿಸಿ ಭಾರತದ ಜತೆ ಸ್ನೇಹ ಬೆಳೆಸಿದ್ದು, ಚೀನಾ, ಕೆನಡಾ, ಮೆಕ್ಸಿಕೋ ಮೊದಲಾದ ದೇಶಗಳ ಜತೆ ವ್ಯಾಪಾರದ ಯುದ್ಧಕ್ಕೆ ಇಳಿದದ್ದು, ಬದ್ಧ ವೈರಿಗಳೆಂದಾಗಿದ್ದ ರಷ್ಯಾ, ಉತ್ತರ ಕೊರಿಯಾದೆಡೆ ಸ್ನೇಹಹಸ್ತ ಚಾಚಿದ್ದು ಇವೆಲ್ಲವೂ ಅಮೆರಿಕದ ರಾಜಕಾರಣದಲ್ಲಿ ಅಲ್ಲಿಯವರೆಗೆ ನಡೆದುಕೊಂಡು ಬಂದದ್ದಕ್ಕೆ ವಿರುದ್ಧವಾದುದಾಗಿದ್ದವು. ಟ್ರಂಪ್ ಬಹುಸಂಖ್ಯಾತ ಬಿಳಿಯ ರಿಗೆ ಇಷ್ಟವಾಗಿದ್ದು ತಮ್ಮ ಕಟ್ಟಾ ಬಲಪಂಥೀಯ ನಿಲುವು, ನಡೆಗಳಿಂದ. ಟ್ರಂಪ್ ಎಷ್ಟೇ ಮಂಗ್ಯಾನಂತೆ ನಡೆದುಕೊಂಡರೂ ಆಡಳಿತದಲ್ಲಿ ಅವಶ್ಯವಿದ್ದುದನ್ನು, ಸಾಮಾನ್ಯ ಜನರು ಬಯಸಿದ್ದನ್ನು ಸಾಧಿಸಿದ್ದರು.

ಈಗ ಒಂದು ವಿಚಿತ್ರ ಸನ್ನಿವೇಶದಲ್ಲಿ ಅಮೆರಿಕ ಇದೆ. ೨೦೨೪ ರಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಿದೆ. ಇಂದಿನ ಅಧ್ಯಕ್ಷರಾಗಿರುವ ಜೋ ಬೈಡನ್‌ರಿಗೆ ಈಗ ೮೦ ವರ್ಷ ಪ್ರಾಯ. ಈಗೀಗ ಅವರು ಸಭೆಗಳಲ್ಲಿ ಮಾತನಾಡುವಾಗ ತೊದಲುವುದು, ಗಲಿಬಿಲಿಗೊಳ್ಳುವುದು, ನಡೆಯುವಾಗ
ಕಾಲು ತಡಸಿ ಬೀಳುವುದು, ಭಾಷಣದ ಮಧ್ಯೆ ಒಮ್ಮೆಲೇ ಮೌನವಾಗಿಬಿಡುವುದು, ಮರೆವು ಇತ್ಯಾದಿ ಶುರುವಾಗಿದೆ. ಹಾಗಂತ ಜೋ ಬೈಡನ್ ತಮ್ಮ ನಿಲುವು ನಿರ್ಧಾರಗಳಲ್ಲಿ ಎಲ್ಲಿಯೂ ತಪ್ಪಿಲ್ಲದಿದ್ದರೂ ಜನಮಾನಸದಲ್ಲಿ ಬೈಡನ್ ಸಾಮರ್ಥ್ಯದ ಬಗ್ಗೆ ಅನುಮಾನಗಳಿವೆ.

ಒಂದು ಕಾಲದಲ್ಲಿ ಜೋ ಬೈಡನ್ ಎಂದರೆ ‘ಫೈರ್ ಬ್ರ್ಯಾಂಡ್’ ರಾಜಕಾರಣಿ. ಆದರೆ ಈಗ ವಯಸ್ಸಾದ, ಹಲ್ಲಿಲ್ಲದ ಹುಲಿಯಂತೆ. ಬೈಡನ್ ದೇಶವನ್ನು ನಡೆಸಿಕೊಂಡು ಬಂದ ರೀತಿ ಇಲ್ಲಿಯವರೆಗೂ ಚೆನ್ನಾಗಿಯೇ ಇದೆ. ಆದರೆ ಇನ್ನೊಮ್ಮೆ ಅಧ್ಯಕ್ಷರಾಗಬೇಕಾದ ದೈಹಿಕ ಸಾಮರ್ಥ್ಯ ಅವರಲ್ಲಿಲ್ಲವೆಂಬ ಅನಿಸಿಕೆ ಹೆಚ್ಚುತ್ತಿದೆ. ಬೈಡನ್‌ರದು ಡೆಮೋಕ್ರಾಟಿಕ್ ಪಕ್ಷ. ಹಾಲಿ ಅಧ್ಯಕ್ಷರಾಗಿರುವುದರಿಂದ ಮತ್ತು ತಾವು ಇನ್ನೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ ಎಂದು ಹೇಳಿರುವುದರಿಂದ, ಆ ಪಕ್ಷದಿಂದ ಇನ್ಯಾರೂ ಚುನಾವಣೆಯಲ್ಲಿ ಪ್ರತಿಸ್ಪರ್ಧಿಸುವುದಿಲ್ಲ. ಹಾಗಾಗಿ ಒಂದು ಕಡೆ ೮೦ರ ಅಜ್ಜ ಬೈಡನ್. ಇನ್ನೊಂದು ಕಡೆ ರಿಪಬ್ಲಿಕನ್ ಪಕ್ಷ ದಿಂದ ಐದಾರು ಮಂದಿ ಅಧ್ಯಕ್ಷ ಚುನಾವಣೆಗೆ ಟಿಕೆಟ್ ಪಡೆಯಲು ಆಂತರಿಕವಾಗಿ ಸ್ಪರ್ಧಿಸುತ್ತಿದ್ದಾರೆ, ಚರ್ಚೆಗಳಲ್ಲಿ
ಭಾಗವಹಿಸುತ್ತಿದ್ದಾರೆ. ಆದರೆ ಅವರ‍್ಯಾರಿಗೂ ಡೊನಾಲ್ಡ್ ಟ್ರಂಪ್‌ರಷ್ಟು ಬೆಂಬಲವಿಲ್ಲ.

ಟ್ರಂಪ್‌ಗೂ ೭೭ ವರ್ಷವಾಗಿದೆ. ಬೈಡನ್‌ರಿಗಿಂತ ಮೂರೇ ವರ್ಷ ಚಿಕ್ಕವರಾಗಿದ್ದರೂ ಟ್ರಂಪ್ ಮಟ್ಟಿಗೆ ‘ವಯಸ್ಸು’ ಚರ್ಚೆಯ ವಿಷಯವಾಗಿಲ್ಲ. ಇಲ್ಲಿನ
ಅಧ್ಯಕ್ಷ ಆಕಾಂಕ್ಷಿಗಳು ಚುನಾವಣೆಯ ಸಮಯದಲ್ಲಿ ಟಿವಿ ಚರ್ಚೆಗಳಲ್ಲಿ ಭಾಗವಹಿಸುತ್ತಾರೆ. ಅವರವರೊಳಗೇ ಕೆಸರೆರಚಾಟಗಳಾಗುತ್ತವೆ. ಒಂದೊಂದು ಪಕ್ಷದಿಂದ ಒಬ್ಬರು ಕೊನೆಯಲ್ಲಿ ಆಯ್ಕೆಯಾಗಿ, ಚುನಾವಣೆಗೆ ಜನರೆದುರು ಮತಕ್ಕೆ ಹೋಗುವುದು. ಇರುವುದು ಎರಡೇ ಪಕ್ಷ. ಅಂಥ ನಾಲ್ಕೈದು ಚರ್ಚಾಸ್ಪರ್ಧೆಗಳು ಈಗಾಗಲೇ ನಡೆದಿದ್ದು, ಒಂದರಲ್ಲಿಯೂ ಟ್ರಂಪ್ ಭಾಗವಹಿಸಿಲ್ಲ. ಆದರೂ ಟ್ರಂಪ್ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈಗಿನ ಎಲ್ಲ ಬೆಳವಣಿಗೆಗಳನ್ನು ಕಂಡರೆ ಟ್ರಂಪ್ ಮುಂದಿನ ಅಧ್ಯಕ್ಷರಾಗುವುದು ಹೆಚ್ಚು ಸ್ಪಷ್ಟವಾಗುತ್ತಿದೆ. ಇದೆಲ್ಲದರ ನಡುವೆ ಅವರ ಮೇಲೆ ಕಳೆದ ೪ ವರ್ಷ ದಲ್ಲಿ ನೂರೆಂಟು ಕೋರ್ಟ್ ಕೇಸ್‌ಗಳನ್ನು ಹಾಕಲಾಗಿದೆ.

ಎಲ್ಲವೂ ಸುಳ್ಳು ಆರೋಪಗಳೆನ್ನುವಂತೆ ಇಲ್ಲ. ಅಲ್ಲದೇ ಅದೆಷ್ಟೋ ಗುಪ್ತ ಮಾಹಿತಿಯ ಕಾಗದ ಪತ್ರಗಳನ್ನು ಟ್ರಂಪ್ ಸೋತ ನಂತರ ತಮ್ಮ ಮನೆಯಲ್ಲಿಟ್ಟುಕೊಂಡು, ಎಫ್ ಬಿಐನವರು ದಾಳಿಮಾಡಿ ಅದನ್ನು ವಶಪಡಿಸಿಕೊಂಡ ಘಟನೆ ಯಾಗಿದೆ. ಆ ಕೇಸ್ ಬೇರೆ ನಡೆಯುತ್ತಿದೆ. ಟ್ರಂಪ್‌ರದ್ದು
ಈಗೀಗ ಪ್ರತಿದಿನವೂ ಕೋರ್ಟ್‌ಗೆ ಅಲೆಯುವ ಸ್ಥಿತಿ. ಆದರೆ ಅವರು ಕೋರ್ಟ್‌ಗೆ ಹೋದಷ್ಟೂ ಜನಪ್ರಿಯತೆಯೂ ಹೆಚ್ಚುತ್ತಿದೆ.

ನೀವು ಏನೇ ಹೇಳಿ, ಸದ್ಯದ ಸ್ಥಿತಿಯಲ್ಲಿ, ಹಿಂದೆಲ್ಲದಕ್ಕಿಂತ ಅಮೆರಿಕದ ಪ್ರಾಬಲ್ಯದ ಮರುಸ್ಥಾಪನೆಯ ಅವಶ್ಯಕತೆ ಜಗತ್ತಿಗಿದೆ. ನಾವು ಭಾರತದವರು, ಅವರು ಅಮೆರಿಕದವರು ಎಂಬಿತ್ಯಾದಿ ಎಲ್ಲ ಭಾವಗಳನ್ನು ಒಮ್ಮೆ ಬದಿಗಿಟ್ಟು ನೋಡಿ ದಾಗ ಇದು ಸ್ಪಷ್ಟವಾಗುತ್ತದೆ. ಅಮೆರಿಕದಲ್ಲಿ ಒಬ್ಬ ಸಮರ್ಥ
ನಾಯಕನಿದ್ದಿದ್ದರೆ ಉಕ್ರೇನ್-ರಷ್ಯಾ ಯುದ್ಧ ಸಂಭವಿಸುತ್ತಲೇ ಇರಲಿಲ್ಲ ಎನ್ನುವ ಮಾತಿದೆ. ಬೈಡನ್ ಬದಲಿಗೆ ಟ್ರಂಪ್ ಇದ್ದಿದ್ದರೆ ಯುದ್ಧ ಇಷ್ಟು ಕಾಲ ನಡೆಯುತ್ತಿರಲಿಲ್ಲ. ರಷ್ಯಾ, ಉತ್ತರ ಕೊರಿಯಾ ಮೊದಲಾದ ದೇಶಗಳು ಬಾಲ ಬಿಚ್ಚದಂತೆ ನೋಡಿಕೊಂಡದ್ದು ಟ್ರಂಪ್. ಚೀನಾ ಜಗತ್ತಿನ ದೇಶಗಳನ್ನು
ತನ್ನ ಸಾಲದಲ್ಲಿ ಮುಳುಗಿಸುವ ಕಾರ್ಯಕ್ರಮಕ್ಕೆ ಅಡ್ಡಲಾಗಿ ನಿಂತವರು ಟ್ರಂಪ್.

ರಷ್ಯಾ-ಉಕ್ರೇನ್ ಯುದ್ಧದ ಜತೆ ಈಗ ಇಸ್ರೇಲ್- ಹಮಾಸ್ ಯುದ್ಧ. ಅಮೆರಿಕದ ಶತ್ರುರಾಷ್ಟ್ರಗಳೆಂದರೆ ರಷ್ಯಾ, ಉತ್ತರ ಕೊರಿಯಾ, ಇರಾನ್ ಮತ್ತು ಚೀನಾ. ಸದ್ಯ ಚೀನಾ, ಆಫ್ರಿಕಾ ಮತ್ತು ಏಷ್ಯಾದ ಬಡ ರಾಷ್ಟ್ರಗಳನ್ನು ಆರ್ಥಿಕವಾಗಿ ತನ್ನ ವಶಕ್ಕೆ ಪಡೆದುಕೊಂಡಿದೆ. ಇತ್ತ ಇಸ್ರೇಲ್ ಯುದ್ಧದಲ್ಲಿ
ಇರಾನ್ ತೊಡೆತಟ್ಟಿ ನಿಂತಿದೆ. ಇರಾನ್ ಅಧ್ಯಕ್ಷರು ಆ ದೇಶದ ಬದ್ಧವೈರಿ ರಾಷ್ಟ್ರವಾದ ಸೌದಿಯ ಮೊಹಮ್ಮದ್ ಬಿನ್ ಸಲ್ಮಾನ್ ರನ್ನು ಭೆಟ್ಟಿಯಾಗಲು ಹೊರಟು ನಿಂತಿದ್ದಾರೆ. ಇದೆಲ್ಲ ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಲಕ್ಷಣಗಳು.

ಸದ್ಯ ಜಗತ್ತಿನ ೭೧ರಾಷ್ಟ್ರಗಳು ಆರ್ಥಿಕ ಮುಗ್ಗಟ್ಟು ಅನುಭವಿಸುತ್ತ, ಸಾಲಕ್ಕೆ ಬಡ್ಡಿ ಕೊಡಲಾಗದ ಸ್ಥಿತಿಯಲ್ಲಿವೆ. ಅವರೆಲ್ಲರದೂ ಹೆಚ್ಚು ಕಡಿಮೆ ಹಿಂದಿನ ವಾರ ಪ್ರಸ್ತಾಪಿಸಿದ ಪಾಕಿಸ್ತಾನದ ಕಥೆ. ಬಹುತೇಕ ಪ್ರಜಾಪ್ರಭುತ್ವವಿಲ್ಲದ ಅಡ್ನಾಡಿ ದೇಶಗಳು ಪಕ್ಕದ ದೇಶಗಳ ಜತೆ ಹೊಡೆದಾಟಕ್ಕಿಳಿದಿವೆ.
ಚೀನಾಕ್ಕಂತೂ ಲಂಗು ಲಗಾಮೇ ಇಲ್ಲ. ಈ ಜಗತ್ತಿನ ದೇಶಗಳ ಸಮತೋಲನವನ್ನು ಕಾಪಾಡಿ ಕೊಂಡು ಹೋಗಲು ಬೇಕಾದ ವ್ಯವಸ್ಥೆ ಮತ್ತು ತಾಕತ್ತು ಇರು ವುದು ಅಮೆರಿಕಕ್ಕೆ ಮಾತ್ರ. ಅದರ ಬಗ್ಗೆ ನಮ್ಮ ಅಭಿಪ್ರಾಯ ವೇನೇ ಇರಲಿ, ಅದುವೇ ಸತ್ಯ. ಅಮೆರಿಕದ ಪ್ರಾಬಲ್ಯ ಕ್ಷೀಣಿಸಿದರೆ ಅದರಿಂದ ಭಾರತಕ್ಕೆ, ಮಿತ್ರರಾಷ್ಟ್ರಗಳಿಗೆ ನಷ್ಟವೇ ಜಾಸ್ತಿ. ಅಮೆರಿಕದ ಪ್ರಾಬಲ್ಯ ಕಡಿಮೆಯಾದಲ್ಲಿ ಆ ಜಾಗವನ್ನು ಆವರಿಸುವುದು ಒಲಿಗಾರ್ಕಿ ರಷ್ಯಾ, ಕಮ್ಯುನಿಸ್ಟ್ ಚೀನಾ, ಭಯೋತ್ಪಾದನೆಯನ್ನು ಬೆಂಬಲಿಸುವ ಇರಾನ್.

ಇದು ಯಾವುದೂ ಒಳ್ಳೆಯದಲ್ಲ. ಇದೆಲ್ಲ ಕಾರಣದಿಂದ ಒಬ್ಬ ಸಮರ್ಥ ಅಮೆರಿಕನ್ ಅಧ್ಯಕ್ಷನ ಅವಶ್ಯಕತೆ ಸದ್ಯ ಜಗತ್ತಿಗಿದೆ. ಆದರೆ ಆಯ್ಕೆ ಜಾಸ್ತಿ ಇಲ್ಲ. ಒಂದೋ ಎಂಭತ್ತರ ಬೈಡನ್. ಅಥವಾ ಸೋತರೂ ಒಪ್ಪದ, ನೂರೆಂಟು ವಿವಾದದ, ಊಹಾತೀತ ತಿಕ್ಕಲು ಟ್ರಂಪ್. ಕಳೆದ ನಾಲ್ಕು ವರ್ಷದಲ್ಲಿ
ಜಗತ್ತು, ಅಮೆರಿಕ ಮತ್ತು ಟ್ರಂಪ್ ನಡವಳಿಕೆ ಎಲ್ಲವೂ ಬದ ಲಾಗಿವೆ. ಟ್ರಂಪ್ ಈಗ ಮೊದಲಿನ ಟ್ರಂಪ್ ಆಗಿ ಉಳಿದಿಲ್ಲ. ಸೋಲು ಅವರನ್ನೂ ಬದಲಿಸಿದೆ, ಇನ್ನಷ್ಟು ಒರಟರನ್ನಾಗಿಸಿದೆ. ಹಾಗಾದರೆ ಏನಾಗಬಹುದು? ನೋಡೋಣ!!

Leave a Reply

Your email address will not be published. Required fields are marked *