ವಿಚಾರ ಮಂಟಪ
ಗಣೇಶ್ ಭಟ್, ವಾರಣಾಸಿ
ಜಪಾನಿನ ಅಕಿರಾ ಕುರೊಸೋವಾ ೧೯೫೦ರಲ್ಲಿ ನಿರ್ಮಿಸಿದ, ೧೨ನೇ ಶತಮಾನದ ಕಥಾವಸ್ತುವನ್ನು ಹೊಂದಿದ ‘ರಶೋಮನ್’ ಸಿನಿಮಾವು ಜಗತ್ತಿನ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೋರಾಗಿ ಮಳೆ ಬರುತ್ತಿದ್ದ ಸಂದರ್ಭದಲ್ಲಿ ಮರ ಕಡಿಯುವ ವ್ಯಕ್ತಿ, ಬೌದ್ಧ ಸನ್ಯಾಸಿ
ಹಾಗೂ ದಾರಿಹೋಕ ಹೀಗೆ ಮೂವರು ಪಾಳುಬಿದ್ದ ರಶೋಮನ್ ಹೆಸರಿನ ದ್ವಾರದ ಕಟ್ಟಡದಲ್ಲಿ ಆಶ್ರಯ ಪಡೆಯುತ್ತಾರೆ. ಇವರ ನಡುವಿನ ಸಂಭಾಷಣೆ ಯಲ್ಲಿ, ಓರ್ವ ಜಪಾನಿ ಯೋಧ ಸಮುರಾಯಿಯ ಹತ್ಯೆ ಹಾಗೂ ಆತನ ಪತ್ನಿಯ ಮೇಲೆ ನಡೆದ ಅತ್ಯಾಚಾರದ ಕುರಿತಾದ ವಿಚಾರಣೆ ನಿರೂಪಿಸ ಲ್ಪಡುತ್ತದೆ.
ಈ ಪ್ರಕರಣದ ವಿಚಾರಣೆ ವೇಳೆ ಘಟನೆಯ ಭಾಗವಾಗಿದ್ದ ತಜೋಮರು ಹೆಸರಿನ ಡಕಾಯಿತ, ಸಾವಿಗೀಡಾದ ಸಮುರಾಯಿಯ ಪತ್ನಿ, ಸಮುರಾಯಿಯ ಪ್ರೇತಾತ್ಮ ಹಾಗೂ ಮರ ಕಡಿಯುವ ವ್ಯಕ್ತಿ ಈ ೪ ಜನರು ತೀರಾ ವ್ಯತಿರಿಕ್ತವಾಗಿ ಘಟನೆಯನ್ನು ವಿವರಿಸುತ್ತಾರೆ. ಕೊನೆಗೂ ಸಮುರಾಯಿಯನ್ನು ಕೊಂದ
ವರು ಯಾರು ಎನ್ನುವುದು ಸ್ಪಷ್ಟವಾಗುವುದಿಲ್ಲ. ಪಾಳುಬಿದ್ದ ರಶೋಮನ್ ಕಟ್ಟಡದ ಎದುರು ಭಾಗದಲ್ಲಿ ಯಾರೋ ಉಪೇಕ್ಷಿಸಿ ಹೋಗಿದ್ದ ಹಸುಳೆಯ ಮೇಲೆ ಕರುಣೆ ತೋರಿದ ಮರಕಡಿಯುವ ವ್ಯಕ್ತಿಯು, ತನ್ನ ೬ ಮಕ್ಕಳೊಂದಿಗೆ ಏಳನೆಯದನ್ನಾಗಿ ಸ್ವೀಕರಿಸಿ ಸಲಹುತ್ತೇನೆ ಎಂದು ಹೇಳಿ ಮನೆಗೆ ಕರೆದು ಕೊಂಡು ಹೋಗುವುದರೊಂದಿಗೆ ಸಿನಿಮಾ ಮುಗಿಯುತ್ತದೆ.
ವಸ್ತುನಿಷ್ಠ ಸತ್ಯವನ್ನು ಸಾಧಿಸಲಾಗದು ಎಂಬುದನ್ನು ಈ ಸಿನಿಮಾದಲ್ಲಿ ಕಲಾತ್ಮಕವಾಗಿ ತೋರಿಸಲಾಗಿದೆ. ಸತ್ಯವೆಂಬುದು ವ್ಯಕ್ತಿಗಳ ವೈಯಕ್ತಿಕ ಹಿತಾ ಸಕ್ತಿಗಳ ಆಧಾರದಲ್ಲಿ ಮಾತ್ರ ನಿರೂಪಿಸಲ್ಪಡುತ್ತದೆ ಎಂಬುದನ್ನು ರಶೋಮನ್ ಬಿಂಬಿಸುತ್ತದೆ. ೨ನೇ ಮಹಾಯುದ್ಧದ ಕೊನೆಯ ಘಟ್ಟದಲ್ಲಿ
ಅಮೆರಿಕವು ಜಪಾನಿನ ಮೇಲೆ ಅಣುಬಾಂಬ್ ದಾಳಿ ಮಾಡಿದ ನಂತರ ಜಗತ್ತಿನ ವಿವಿಧ ದೇಶಗಳು ಈ ದಾಳಿಯನ್ನು ಬೇರೆ ಬೇರೆ ಕೋನಗಳಿಂದ ವಿಶ್ಲೇಷಿಸಿ ದವು.
ಸೋವಿಯತ್ ಒಕ್ಕೂಟ, ಶಾಂತಿವಾದಿಗಳು, ಅಣುವಿಜ್ಞಾನಿಗಳು, ಧಾರ್ಮಿಕ ನಾಯಕರು ಅಣುಬಾಂಬು ಪ್ರಯೋಗವನ್ನು ಟೀಕಿಸಿದರೆ, ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳು ದ್ವಿತೀಯ ಮಹಾಯುದ್ಧವನ್ನು ಕೊನೆಗೊಳಿ ಸಲು ಈ ನಡೆ ಅತ್ಯಗತ್ಯವಾಗಿತ್ತೆಂದು ಸಮರ್ಥಿಸಿದವು. ಇಲ್ಲಿ ಯಾರದ್ದು ತಪ್ಪು, ಯಾರದ್ದು ಸರಿ ಎಂದು ಜಗತ್ತು ನಿರ್ಧರಿಸಲಾಗದ ಹಿನ್ನೆಲೆಯಲ್ಲಿ ಅಕಿರಾ ಕುರೊಸೋವಾ ರಶೋಮನ್ ಸಿನಿಮಾವನ್ನು ನಿರ್ಮಿಸಿದನೆಂದು ಅರ್ಥೈಸಿ ಕೊಳ್ಳಲಾಗಿದೆ. ಸದ್ಗುರು ಜಗ್ಗಿ ವಾಸುದೇವ್ ಮಿಶಿಗನ್ ಯುನಿವರ್ಸಿಟಿಯಲ್ಲಿ ಸಭಿಕರೊಂದಿಗೆ ಸಂವಾದ ನಡೆಸುತ್ತಿರುವಾಗ ಬಾಲಕನೊಬ್ಬ, ‘ಜನರು ಯಾವಾಗಲೂ ಏಕೆ ಸುಳ್ಳು ಹೇಳುತ್ತಾರೆ?’ ಎಂದು ಪ್ರಶ್ನಿಸಿದ.
ಇದಕ್ಕೆ ಸದ್ಗುರು, ‘ಸತ್ಯ ಯಾವುದು, ಸುಳ್ಳು ಯಾವುದು ಎಂಬುದರ ಬಗ್ಗೆ ಚಿಂತಿಸಬೇಡ. ಜೀವನದಲ್ಲಿನ ನಮ್ಮ ಪ್ರತಿ ಮಾತು ಹಾಗೂ ನಡೆಗಳು ಪ್ರತಿಯೊ ಬ್ಬರ ಯೋಗಕ್ಷೇಮಕ್ಕಾಗಿಯೇ ಅಥವಾ ಅವು ನಮ್ಮ ಹಿತಕ್ಕಾಗಿ ಮಾತ್ರ ಇರುವುದೇ ಎಂಬುದನ್ನು ಅರ್ಥೈಸಿಕೊಂಡು, ಅದನ್ನು ಸರಿಪಡಿಸಿ ಕೊಂಡರೆ ಸಾಕು’ ಎಂದುತ್ತರಿಸಿದರು. ಸತ್ಯ ಅಥವಾ ಅಸತ್ಯ ಎನ್ನುವುದರ ವಿಮರ್ಶೆಯ ಬದಲು, ನಮ್ಮ ಮಾತು ಮತ್ತು ಕೃತಿಗಳು ಸ್ವಾರ್ಥ ಸಾಧನೆಗೆ ಮೀಸಲಾಗದೆ ಇತರರ ಒಳಿತಿಗೂ ಪೂರಕವಾಗುವಂತಿರಲಿ ಎಂಬುದು ಸದ್ಗುರುವಿನ ಮಾತಿನ ಸಾರವಾಗಿತ್ತು. ಇಂಥದೇ ಅರ್ಥದ ಸಂವಾದವು ಮಹಾ ಭಾರತದ ಕುರು ಕ್ಷೇತ್ರ ಯುದ್ಧದ ನಂತರ ಶರಶಯ್ಯೆ ಯಲ್ಲಿದ್ದ ಭೀಷ್ಮಾ ಚಾರ್ಯ ಹಾಗೂ ಧರ್ಮರಾಯನ ನಡುವೆ ನಡೆದಿತ್ತು. ಸತ್ಯ ಎಂದರೇನು ಎಂದು ಧರ್ಮ ರಾಯ ಕೇಳಿದಾಗ ಭೀಷ್ಮರು, ವಿಶ್ವಾಮಿತ್ರನ ಮಗ ಗಾಲವ ಹಾಗೂ ನಾರದರ ನಡುವಿನ ಮಾತುಕತೆಯನ್ನು ಉದ್ಧರಿಸಿ ‘ಸತ್ಯವನ್ನು ಹೇಳು ವುದು ಉತ್ತಮ, ಆದರೆ ನಿಜ ವಾಗಿಯೂ ಯಾವುದು ಸತ್ಯ ಎಂದು ತಿಳಿಯುವುದು ತುಂಬಾ ಕಷ್ಟ.
ಸಾರ್ವತ್ರಿಕ ಒಳಿತನ್ನು ಬಯಸುವ ಸತ್ಯವನ್ನು ಮಾತ್ರ ಸತ್ಯವೆಂದು ತಿಳಿಯಬಹುದು’ ಎನ್ನುತ್ತಾರೆ. ಮಾತನಾಡುವಾಗ ಸತ್ಯವನ್ನು ಹೇಳುವುದು ಎಷ್ಟು
ಮುಖ್ಯವೋ, ಮಾತನ್ನು ಪ್ರಿಯವಾಗಿ ಹೇಳುವುದು ಕೂಡಾ ಅಷ್ಟೇ ಮುಖ್ಯ. ನಮ್ಮ ಮಾತುಗಳು ಇತರರ ಮನ ನೋಯಿಸದಂತೆ ಕೂಡಾ ಇರಬೇಕು. ಕೆಲವರು ತಾವು ನೇರವಾಗಿ ಮಾತನಾಡುವವರು ಎಂದು ತಮ್ಮನ್ನು ಬಣ್ಣಿಸಿ ಕೊಳ್ಳುತ್ತಾರೆ. ನಿಷ್ಠುರವಾಗಿ ಮಾತನಾಡುವವರು ತಾವು ಸತ್ಯವನ್ನೇ ನುಡಿಯುವವರು ಎಂದು ಭಾವಿಸಿಕೊಂಡಿರುತ್ತಾರೆ.
ತಮ್ಮ ನೇರ-ನಿಷ್ಠುರ ಮಾತುಗಳು ತಮ್ಮ ಯೋಗ್ಯತೆ ಎಂದು ಅಂಥವರು ಹೇಳಿಕೊಳ್ಳುತ್ತಾರೆ. ಆದರೆ ಅವರಾಡುವ ನೇರ ಮಾತುಗಳು ಅವರ ಮೂಗಿನ ನೇರದ ಸತ್ಯ ಎಂದು ಅವರಿಗೆ ಗೊತ್ತಿರುವುದಿಲ್ಲ. ತಾವು ಯಾವುದನ್ನು ಸತ್ಯ ಎಂದುಕೊಂಡಿರುತ್ತಾರೋ ಅದು ಇತರರಿಗೆ ಸತ್ಯವಾಗಿರಬೇಕಿಲ್ಲ. ಇವರ ನೇರ-ನಿಷ್ಠುರ ಮಾತುಗಳು ತಮ್ಮ ಅಭಿಪ್ರಾಯವನ್ನು ಇತರರ ಮೇಲೆ ಬಲವಂತವಾಗಿ ಹೇರು ವುದಾಗಿದೆ, ಅಷ್ಟೇ! ಇದಕ್ಕೋಸ್ಕರವೇ ಸತ್ಯವನ್ನು ನುಡಿ ಯುವುದು ಎಷ್ಟು ಪ್ರಧಾನವೋ, ಇತರರ ಮನಸ್ಸಿಗೆ ನೋವಾಗ ದಂತೆ, ಪ್ರಿಯವಾಗಿ ಮಾತನಾಡುವುದೂ ಅಷ್ಟೇ ಮುಖ್ಯ.
ಸಾಹಿತಿಗಳು, ನಟರು, ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳು ಆತ್ಮಕಥೆಯನ್ನು ಬರೆದು ಪ್ರಕಟಿಸುತ್ತಾರೆ. ಆತ್ಮಕಥೆಯಲ್ಲಿ ಸತ್ಯವನ್ನೇ ಬರೆಯ ಬೇಕಾ ಗುವುದರಿಂದ ಅದನ್ನು ಬರೆಯಲು ಧೈರ್ಯಬೇಕು ಎನ್ನುವುದು ಸಾಮಾನ್ಯ ಕಲ್ಪನೆ. ಆದರೆ ಬಹಳಷ್ಟು ಆತ್ಮಕಥೆಗಳು ಸತ್ಯ ವನ್ನು ಹೇಳುವು ದಕ್ಕಿಂತಲೂ ಹೆಚ್ಚಾಗಿ ಆತ್ಮಸಮರ್ಥನೆ ಹಾಗೂ ತಮ್ಮ ತಪ್ಪುಗಳಿಗೆ ಇತರರನ್ನು ಹೊಣೆಗಾರರನ್ನಾಗಿಸುವ ಮತ್ತು ದೂಷಿಸುವ ಕೆಲಸಗಳನ್ನು ಮಾಡು ತ್ತವೆ. ಹೆಚ್ಚಿನ ಆತ್ಮಕಥೆಗಳಲ್ಲಿ ಆತ್ಮಕಥೆಗಾರರ ಅಪ್ಪ-ಅಮ್ಮಂದಿರು ಬಹಳ ಆದರ್ಶಪುರುಷರಾಗಿರುತ್ತಾರೆ!(ಆದರೆ ಎಸ್.ಎಲ್.ಭೈರಪ್ಪನವರ ಆತ್ಮಕಥೆಯಾದ ‘ಭಿತ್ತಿ’ ಸ್ವಲ್ಪ ವಿಭಿನ್ನವಾಗಿದೆ.
ಭೈರಪ್ಪನವರು ತಮ್ಮ ತಂದೆಯ ಕೆಟ್ಟ ಸ್ವಭಾವಗಳನ್ನು ಯಾವುದೇ ಸಂಕೋಚವಿಲ್ಲದೆ ಬಿಚ್ಚಿಟ್ಟಿದ್ದಾರೆ). ಕೆಲವರು ಪುಸ್ತಕದುದ್ದಕ್ಕೂ ತಮ್ಮ ನಡೆ-ನುಡಿ ಗಳನ್ನು ಬಲವಾಗಿ ಸಮರ್ಥಿಸುವ ಕೆಲಸವನ್ನು ಮಾಡಿರುತ್ತಾರೆ. ಕೆಲವರು ಆತ್ಮಕಥೆಗಳಲ್ಲಿ ತಮ್ಮ ಬಗ್ಗೆ ಹೇಳಿದುದಕ್ಕಿಂತಲೂ ಹೆಚ್ಚಾಗಿ ಇತರರ ಬಗ್ಗೆಯೇ ತಮಗೆ ತೋಚಿದಂತೆ ಅಭಿಪ್ರಾಯ ಗಳನ್ನು ಹೇಳಿರುತ್ತಾರೆ. ತಮಗಾಗದವರನ್ನು, ವಿರೋಧಿಗಳನ್ನು ಟೀಕಿಸುವುದೇ ಕೆಲವು ಆತ್ಮಕಥೆಗಳ ಉದ್ದೇಶವಾಗಿ ರುತ್ತದೆ, ವಿವಾದಗಳನ್ನೆಬ್ಬಿಸುವುದೇ ಗುರಿಯಾಗಿರುತ್ತದೆ.
ಹೀಗಿರುವಾಗ ಆತ್ಮಕಥೆಗಳಲ್ಲಿ ಸತ್ಯ ಅಡಗಿವೆ ಎಂದು ನಂಬುವುದು ಭ್ರಮೆಯಾಗಬಹುದು. ಮಹಾತ್ಮ ಗಾಂಧಿಯವರ ಆತ್ಮಕಥೆ ಕೂಡಾ ವಿಮರ್ಶೆಗಳಿಂದ ಹೊರತಾಗಿಲ್ಲ. ‘ಇದು ಗಾಂಧಿ, ತಾವು ನಂಬಿದ ಸತ್ಯವನ್ನು ಇತರರ ಮೇಲೆ ಹೇರಿದ ಕಥೆ’ ಎಂದು ಕೆಲವು ಟೀಕಾಕಾರರು ಹೇಳಿದ್ದಾರೆ. ಸತ್ಯವು ಸಾಪೇಕ್ಷ ವಾಗಿದೆ ಎಂಬ ವಾದವಿದೆ. ಓರ್ವ ವ್ಯಕ್ತಿ ನಂಬಿರುವ ಸತ್ಯವು ಇನ್ನೊಬ್ಬ ವ್ಯಕ್ತಿಗೂ ಸತ್ಯವೆಂದು ಅನಿಸಬೇಕೆಂದೇನೂ ಇಲ್ಲ. ‘ಹೆಚ್ಚಿನ ಜನರು ನಿಜ
ವಾಗಿಯೂ ಸತ್ಯವನ್ನು ಬಯಸುವುದಿಲ್ಲ. ತಮ್ಮ ನಂಬಿಕೆಯ ಸತ್ಯಕ್ಕೆ ಜನರು ನಿರಂತರ ಅನುಮೋದನೆ ನೀಡಬೇಕು ಎಂದು ಬಯಸುತ್ತಾರೆ’ ಎಂದು ಒಮ್ಮೆ ಓಶೋ ರಜನೀಶ್ ಹೇಳಿದ್ದರು. ತಾವು ನಂಬಿರುವ ವಿಚಾರ, ಸಿದ್ಧಾಂತ, ಆಚಾರ, ಮತ, ಧರ್ಮ ಮೊದಲಾದವುಗಳೇ ಸತ್ಯ ಎಂಬ ವಿಷಯಗಳಲ್ಲಿ ಮನುಷ್ಯರ ನಡುವೆ ವಾದ- ವಿವಾದ, ಕೋರ್ಟ್ ಕೇಸುಗಳು ನಡೆದಿವೆ.
ಮಾತ್ರವಲ್ಲ, ನಮ್ಮದೇ ಸತ್ಯ ಎಂಬ ವಿಚಾರದಲ್ಲಿ ಮಹಾಯುದ್ಧಗಳೇ ನಡೆದಿವೆ. ಬಹುಶಃ ಜಗತ್ತಿನ ಜನರೆಲ್ಲಾ ಒಂದೇ ಸತ್ಯವನ್ನು ನಂಬಿದ್ದರೆ ಯುದ್ಧ ಗಳಿರುತ್ತಿರಲಿಲ್ಲ, ದೇಶ, ಗಡಿಗಳಿರುತ್ತಿರಲಿಲ್ಲ, ಇಷ್ಟು ಮತ ಧರ್ಮಗಳಿರುತ್ತಿರಲಿಲ್ಲ, ಕೋರ್ಟ್ ಗಳಲ್ಲಿ ಕೇಸುಗಳಿರುತ್ತಿರಲಿಲ್ಲ. ನಿನ್ನೆ ಸತ್ಯ ಎಂದು ಪರಿಗಣಿಸಲ್ಪಟ್ಟ ಎಷ್ಟೋ ವಿಚಾರಗಳು ಇಂದು ಸತ್ಯವಲ್ಲ ಎಂದು ಅರ್ಥವಾಗಿವೆ. ೧೮ನೇ ಶತಮಾನದವರೆಗೆ ಯುರೋಪಿನ ಹಾಗೂ ಮಧ್ಯಪ್ರಾಚ್ಯಗಳ ಜನರು ಭೂಮಿಯು ಚಪ್ಪಟೆ ಯಾಗಿದೆ, ಸೂರ್ಯನೇ ಭೂಮಿಯ ಸುತ್ತು ಬರುತ್ತಾನೆ ಎಂಬ ವಿಷಯವನ್ನು ಸತ್ಯವೆಂದು ಭಾವಿಸಿದ್ದರು.
‘ಭೂಮಿಯು ಸೂರ್ಯನ ಸುತ್ತ ತಿರುಗುತ್ತಿದೆ’ ಎಂದು ಖಗೋಲಶಾಸ್ತ್ರಜ್ಞ ಗೆಲಿಲಿಯೋ ಹೇಳಿದ್ದಕ್ಕೆ ಅಂದಿನ ಚರ್ಚುಗಳು ಅವನನ್ನು ಅಪರಾಧಿ ಎಂದು ಪರಿಗಣಿಸಿ ಜೈಲಿಗಟ್ಟಿದ್ದವು. ತಮ್ಮ ಪ್ರವಾದಿ, ತಮ್ಮ ಧರ್ಮಗ್ರಂಥಗಳಲ್ಲಿ ಹೇಳಿರುವ ವಿಚಾರಗಳು ಮಾತ್ರ ಸತ್ಯ ಎನ್ನುವ ವಿಚಾರದಲ್ಲಿ ಇಂದಿನ ಕಾಲ ದಲ್ಲೂ ಪ್ರಪಂಚದ ಅನೇಕ ಕಡೆ ಯುದ್ಧ, ಅಂತರ್ಯುದ್ಧ ಹಾಗೂ ಭಯೋತ್ಪಾದನಾ ದಾಳಿಗಳು ನಡೆಯುತ್ತಿವೆ. ಇನ್ನು, ನಮ್ಮ ಚರಿತ್ರೆಕಾರರು ಹೇಳಿರು ವುದು ಸತ್ಯ ಎಂದು ಭಾವಿಸೋಣವೇ? ಇತ್ತೀಚಿನವರೆಗೆ ನಮ್ಮ ಚರಿತ್ರೆಯ ಪಠ್ಯಪುಸ್ತಕಗಳ ಮೂಲಕ ಆರ್ಯರ ಆಕ್ರಮಣ ಸಿದ್ಧಾಂತವನ್ನು ವಿದ್ಯಾರ್ಥಿಗಳ ತಲೆಗೆ ತುಂಬಲಾಗುತ್ತಿತ್ತು.
ಬ್ರಿಟಿಷರು ತಮ್ಮ ವಿಸ್ತರಣಾವಾದ ಹಾಗೂ ವಸಾಹತು ಶಾಹಿತ್ವಕ್ಕೆ ಪೂರಕವಾಗುವಂತೆ ಹೊರಗಿನಿಂದ ಬಂದ ಆರ್ಯರು ಭಾರತವನ್ನು ಆಕ್ರಮಿಸಿದ್ದರು ಎಂಬ ವಾದ ವನ್ನು ಕ್ರೈಸ್ತ ಮತಪ್ರಚಾರಕ ಮ್ಯಾಕ್ಸ್ ಮುಲ್ಲರ್‌ನ ಮೂಲಕ ಹರಿಯಬಿಟ್ಟಿದ್ದರು. ಇವನ ಆರ್ಯ ಆಕ್ರಮಣ ಸಿದ್ಧಾಂತದ ಆಧಾರದಲ್ಲಿ ಕ್ರೈಸ್ತ ಪಾದ್ರಿ ಬಿಷಪ್ ರಾಬರ್ಟ್ ಕಾಲ್ಡ್ ವೆಲ್ ಆರ್ಯ ಹಾಗೂ ದ್ರಾವಿಡ ಎಂಬ ವಿಭಜನೆಯ ಸಿದ್ಧಾಂತವನ್ನು ರೂಪಿಸಿದನು. ಅವರು ತಮ್ಮಅನುಕೂಲ ಕ್ಕಾಗಿ ಹುಟ್ಟುಹಾಕಿದ ಸಿದ್ಧಾಂತವನ್ನು ನಮ್ಮ ಚರಿತ್ರೆಕಾರರು ಸತ್ಯವೆಂದು ಭಾವಿಸಿ ವಿದ್ಯಾರ್ಥಿಗಳ ತಲೆಗೆ ತುಂಬಿದರು. ಇತ್ತೀಚೆಗಿನ ಸಂಶೋಧನೆಗಳು, ಆರ್ಯರ ಆಕ್ರಮಣ ಹಾಗೂ ಆರ್ಯ-ದ್ರಾವಿಡ ಭೇದ ಕಲ್ಪನೆಯ ಸಿದ್ಧಾಂತಗಳು ಸತ್ಯಕ್ಕೆ ದೂರವಾದವು ಎಂದು ಸಾಬೀತು ಪಡಿಸಿದ್ದರೂ ಆ ವಿಚಾರಧಾರೆ ಗಳು ಇನ್ನೂ ಸಂಪೂರ್ಣ ವಾಗಿ ಭಾರತೀಯರ ಮನಸ್ಸಿನಿಂದ ಹೊರಹೋಗಿಲ್ಲ.
ಇಂದು ಮಾಧ್ಯಮವೊಂದರ ನಿಲುವನ್ನು ಇಷ್ಟಪಡುವ ಜನರು ಆ ಮಾಧ್ಯಮದಲ್ಲಿ ಪ್ರಕಟವಾಗುವ ಸುದ್ದಿ, ಲೇಖನಗಳನ್ನು ಸತ್ಯವೆಂದು ಭಾವಿಸುತ್ತಾರೆ. ಭಾರತ ಸೇರಿದಂತೆ ಇಡೀ ಪ್ರಪಂಚದಲ್ಲಿ ಮಾಧ್ಯಮಗಳು ಸರಕಾರ ಗಳ ಪರ ಹಾಗೂ ವಿರೋಧಿ ನಿಲುವುಗಳಿಂದ ವಿಭಜಿಸಲ್ಪಟ್ಟಿವೆ. ಆದರೆ ನಂತರದ ದಿನಗಳಲ್ಲಿ ಮುಖ್ಯವಾಹಿನಿ ಮಾಧ್ಯಮಗಳನ್ನೂ ಪರಾಮರ್ಶೆಗೆ ಒಡ್ಡುವ ಸಾಮಾಜಿಕ ಮಾಧ್ಯಮವು ಬಂತು. ಆದರೆ ಇಂದು ಸಾಮಾಜಿಕ ಮಾಧ್ಯಮಗಳು ಕೂಡಾ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ.
ವಿಜ್ಞಾನ ಸತ್ಯವೆಂಬ ಮಾತುಗಳು ಇದ್ದವು. ಆದರೆ ವಿಜ್ಞಾನ-ತಂತ್ರಜ್ಞಾನಗಳು ಕೂಡಾ ದುರುಪಯೋಗಕ್ಕೆ ಒಳಗಾಗುತ್ತಿರುವ ಈ ಕಾಲದಲ್ಲಿ ವಿಜ್ಞಾನವೂ
ಸತ್ಯವೆಂದು ಹೇಳುವ ಹಾಗಿಲ್ಲ. ಕೆಲವರು ‘ಸತ್ಯ ಯಾವತ್ತೂ ಕಹಿ’ ಎನ್ನುತ್ತಾರೆ. ಯಾರು ವಸ್ತುಸ್ಥಿತಿಯನ್ನು ಒಪ್ಪಿಕೊಳ್ಳಲಾರದ ಭ್ರಾಮಕ ಮನಸ್ಥಿತಿ ಯಲ್ಲಿರುತ್ತಾರೋ ಅವರಿಗೆ ಮಾತ್ರ ಸತ್ಯವು ಕಹಿ ಎನಿಸಬಹುದು. ಶ್ವೇತಾಶ್ವತರ ಉಪ ನಿಷತ್ತಿನಲ್ಲಿ ‘ಸತ್ಯಂ ಶಿವಂ ಸುಂದರಂ’ ಎನ್ನುವ ಸಾಲುಗಳು ಬರು ತ್ತವೆ. ಹೀಗಾಗಿ ಸತ್ಯವು ದೈವಿಕವೂ, ಮಂಗಲಕರವೂ ಅದಕ್ಕಿಂತಲೂ ಹೆಚ್ಚಾಗಿ ಸುಂದರವೂ ಆಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು.
(ಲೇಖಕರು ಹವ್ಯಾಸಿ ಬರಹಗಾರರು)