Wednesday, 11th December 2024

ತುತ್ತೂರಿ ಊದಿದ ಹುಂಬ

ವೇದಾಂತಿ ಹೇಳಿದೆ ಕಥೆ

ಶಶಾಂಕ್ ಮುದೂರಿ

ಇದು ಬಹಳ ಹಿಂದಿನ ಕಥೆ. ಪ್ಯಾಲೆಸ್ಟೇನ್ ಪ್ರಾಂತ್ಯದಲ್ಲಿ ಒಬ್ಬ ಹುಂಬ ಇದ್ದ. ‘ರಾಜನ ಸೇನೆಗೆ ಸಹಾಯಕ ಸಿಪಾಯಿಗಳು
ಬೇಕಾಗಿದ್ದಾರೆ’ ಎಂಬ ಘೋಷಣೆ ಕೇಳಿ, ತನ್ನ ಹಳ್ಳಿಯಿಂದ ಪಯಣಿಸಿ, ಸೇನಾ ಠಾಣ್ಯಕ್ಕೆ ಪಯಣಿಸಿದ. ಹೋಗುವ ಮುಂಚೆ
ಅವನಷ್ಟೇ ಹುಂಬನಾಗಿದ್ದ ಇನ್ನೊಬ್ಬ ಅವನಿಗೆ ಹೇಳಿಕೊಟ್ಟಿದ್ದ ‘ಅಲ್ಲಿ ನೀನು ಅಧಿಕಾರಿಯೊಂದಿಗೆ ಏನನ್ನೂ ಮಾತನಾಡಬೇಡ. ಅವರು ಏನಾದರೂ ಪ್ರಶ್ನೆ ಕೇಳಿದರೆ, ತಪ್ಪು ತಪ್ಪು ಉತ್ತರ ಕೊಟ್ಟರೆ ಪೇಚಿಗೆ ಸಿಕ್ಕಿಬೀಳುತ್ತೀಯಾ.

ಸುಮ್ಮನೆ ಕೇಳಿದ್ದಕ್ಕೆಲ್ಲಾ ತಲೆ ಆಡಿಸು. ಸುತ್ತ ಮುತ್ತ ಏನು ನಡೆಯುತ್ತಿದೆ ಎಂದು ನೋಡು ಮತ್ತು ಕೇಳು’. ಸೇನಾಧಿಕಾರಿಗಳು ಇವನನ್ನು ಸಂದರ್ಶನ ಮಾಡಿದರು ‘ಸೈನಿಕರಿಗೆ ಸಹಾಯ ಮಾಡುತ್ತೀಯಾ?’ ‘ಹೂಂ’ ‘ಹೇಳಿದ ಕೆಲಸ ಮಾಡುತ್ತೀಯಾ?’ ‘ಹೂಂ’ ‘ವಿಧೇಯತೆನಾಗಿರುತ್ತೀಯಾ?’ ‘ಹೂಂ’. ಅವನು ನೇಮಕಗೊಂಡ. ಸೈನಿಕರ ಕುದುರೆಗಳಿಗೆ ಹುರುಳಿ ಕಾಳು, ಹುಲ್ಲು ಮತ್ತು ಇತರ ಆಹಾರ ಬೇಯಿಸುವ ತಂಡಕ್ಕೆ ಸೇರಿಕೊಂಡ.

ಆಹಾರ ತಯಾರಿಸುವ ತಂಡದಲ್ಲಿ ಸೇರಿಕೊಂಡ ನಂತರ, ಇವನಿಗೆ ಎಲ್ಲಿಲ್ಲದ ಹುಮ್ಮಸ್ಸು ಬಂತು. ಚಿತ್ರ ವಿಚಿತ್ರ ಪ್ರಶ್ನೆ ಕೇಳಿ ತನ್ನ ಜತೆಗಾರರಿಗೆ ರೇಜಿಗೆ ಉಂಟುಮಾಡುವುದು ಅವನ ಹವ್ಯಾಸ. ಸುಗ್ಗಿ ಸಮಯದಲ್ಲಿ ಒಂದು ವಾರ ರಜಾ ಘೋಷಿಸಿದರು. ಇನ್ನೇನು ಬೆಳಗ್ಗೆ ಹೊರಡಬೇಕು ಎನ್ನುವಾಗ, ತುತ್ತೂರಿಯ ಧ್ವನಿ ಕೇಳಿಸಿತು. ಮನೆಗೆ ಹೊರಡುವಾಗ ಸ್ವಲ್ಪ ದೂರ ಜತೆಯಾದ ಹಿರಿಯ ಸಂಗಾತಿಗಳ ಬಳಿ ಕೇಳಿದ ‘ಏನದು ಸದ್ದು?’ ‘ಎಲ್ಲಾದರೂ ಬೆಂಕಿ ಬಿದ್ದಾಗ, ಆ ರೀತಿ ತುತ್ತೂರಿ ಊದು ತ್ತಾರೆ’ ‘ಅದರಿಂದ ಏನು ಉಪಯೋಗ?’ ‘ಬೆಂಕಿ ಆರಿಸಲು ಅದರಿಂದ ಅನುಕೂಲ ಆಗುತ್ತೆ’ ಎಂದ ಆ ಹಿರಿಯ ಸಂಗಾತಿ ತನ್ನ ದಾರಿ ಹಿಡಿದು ಹೊರಟು ಹೋದ.

ಇವನು ತನ್ನ ಹಳ್ಳಿಯ ದಾರಿ ಹಿಡಿದು ನಡೆಯತೊಡಗಿದ. ತನ್ನ ಊರಿಗೆ ಹೋಗಿ, ತಾನು ಕುದುರೆಗೆ ಹುಲ್ಲು ತಿನ್ನಿಸುವ ಕೆಲಸ ಎಂದು ಹೇಳಿಕೊಳ್ಳಲು ಅವನಿಗೆ ನಾಚಿಗೆ. ಹೊರಡುವ ದಿನವೇ ಒಂದು ಹೊಸ ವಿಚಾರ ಗೊತ್ತಾಗಿದ್ದರಿಂದ ಖುಷಿ ಆಯಿತು. ‘ಬೆಂಕಿ ಬಿದ್ದಾಗಿ ತುತ್ತೂರಿ ಊದುವುದರಿಂದಾಗಿ, ಬೆಂಕಿ ಆರಿಸಲು ಸುಲಭವಾಗುತ್ತದೆ’ ಎಂಬ ವಿಚಾರ ಅವನನ್ನು ಬಹಳ ಉದ್ವೇಗಕ್ಕೆ ಒಳ ಮಾಡಿತ್ತು. ತನ್ನ ಊರಿನವರಿಗೆ ಇದರ ಕುರಿತು ವಿವರಿಸುವುದಾಗಿ ಹೆಳುತ್ತಾ ಹಳ್ಳಿಗೆ ಬರುವಾಗ ರಾತ್ರಿ ಆಯಿತು. ಮನೆಗೆ ಬಂದ ಕೂಡಲೆ ಎಲ್ಲರು ಕೇಳಿದರು ‘ನಿನಗೆ ಏನು ಕೆಲಸ? ಅಲ್ಲಿಗೆ ಹೋಗಿ ಏನು ಕಲಿತೆ?’ ಇವನು ಸತ್ಯವನ್ನು ಮುಚ್ಚಿಟ್ಟು, ‘ನಾನು ಸೈನ್ಯದಲ್ಲಿ ದೊಡ್ಡ ಕೆಲಸದಲ್ಲಿದ್ದೇನೆ. ಹೊಸ ಹೊಸ ವಿಚಾರ ಕಲಿತಿದ್ದೇನೆ’ ಎಂದ.

‘ಏನು ಕಲಿತೆ?’
‘ಬೆಂಕಿ ಆರಿಸಲು ಅನುಕೂಲವಾಗುವ ತಂತ್ರವನ್ನು ಕಲಿತಿದ್ದೇನೆ.

ನಾಳೆ ಬೆಳಿಗ್ಗೆ ತೋರಿಸುತ್ತೇನೆ’ ಎಂದ.
ಮರುದಿನ ಒಂದು ದೊಡ್ಡ ತುತ್ತೂರಿಯನ್ನು ಹಿಡಿದು, ತನ್ನ ಗೆಳೆಯರನ್ನು ಕರೆದುಕೊಂಡು, ಹಳ್ಳಿಯಿಂದಾಚೆ ಇದ್ದ ಹೊಲದ ಬಳಿ ಹೋದ. ‘ಈಗ ಸುಲಭದಲ್ಲಿ ಬೆಂಕಿ ಆರಿಸುವ ಒಂದು ಹೊಸ ವಿಧಾನ ತೋರಿಸುತ್ತೇನೆ’ ಎಂದ. ಹೊಲದಲ್ಲಿ ಕೆಲಸ ಮಾಡು ತ್ತಿದ್ದ ಹಿರಿಯರು ಎಚ್ಚರಿಸಿದರು ‘ಬೆಂಕಿಯೊಂದಿಗೆ ಸರಸ ಸಲ್ಲದು’ ಆದರೂ ಇವನು ಕೇಳಲಿಲ್ಲ. ಹೊಲದಲ್ಲಿದ್ದ ದೊಡ್ಡ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿ, ‘ಗೆಳೆಯರೆ, ಈಗ ನೋಡಿ ಬೆಂಕಿ ನಂದಿಸುವ ತಂತ್ರ’ ಎಂದು ತುತ್ತೂರಿಯನ್ನು ಜೋರಾಗಿ ಊದಿದ. ಗಾಳಿ ಬಂದದ್ದರಿಂದ ಬೆಂಕಿ ಜೋರಾಗಿ ಉರಿಯಿತು, ಹುಲ್ಲಿನ ಬಣವೆ ಜೋರಾಗಿ ಹತ್ತಿ ಉರಿಯಿತು.

ಇವನು ಇನ್ನಷ್ಟು ಜೋರಾಗಿ ತುತ್ತೂರಿ ಊದಿದ. ‘ತುತ್ತೂರಿ ಊದಿದರೆ ಬೆಂಕಿ ಆರಿಸಲು ಸಹಕಾರಿ’ಎಂದು ತನ್ನ ಗೆಳೆಯರಿಗೆ ಹೇಳು ತ್ತಲೇ ತುತ್ತೂರಿ ಊದಿದ. ಅಷ್ಟರಲ್ಲಿ ಬಣವೆ ಪೂರ್ತಿ ಸುಟ್ಟು ಬೂದಿಯಾಯಿತು. ಹೊಲದಲ್ಲಿ ಕೆಲಸಮಾಡುತ್ತಿದ್ದ ಹಿರಿಯರು ಈ ದಡ್ಡ ಶಿಖಾಮಣಿಗಳ ತರಲೆಯನ್ನುನೋಡಿ ಚೆನ್ನಾಗಿ ಬೈದರು. ಅವರಲ್ಲಿದ್ದ ಒಬ್ಬ ತಿಳುವಳಿಕೆಯ ಮನುಷ್ಯ ಹೇಳಿದ ‘ಮೂರ್ಖನೇ, ತುತ್ತೂರಿ ಊದಿದರೆ ಬೆಂಕಿ ಆರುತ್ತದೆ ಎಂದು ನಿನಗೆ ಯಾರು ಹೇಳಿದ್ದು? ಜನರನ್ನು ಎಚ್ಚರಿಸಲು ತುತ್ತೂರಿ ಊದುತ್ತಾರೆ.

ಆಗ ಜನರು ಲಗುಬಗೆಯಿಂದ ಬಂದು, ಬಾವಿಯಿಂದ ನೀರು ತೆಗೆದು ಬೆಂಕಿಯ ಮೇಲೆ ಸುರಿದು, ಹಾಕಿ ಬೆಂಕಿ ನಂದಿಸಬೇಕು. ನಮ್ಮ ಜೀವನದಲ್ಲೂ ಇಂತಹದೇ ತಪ್ಪು ತಿಳುವಳಿಕೆಯನ್ನು ನಾವು ಬೆಳೆಸಿಕೊಂಡಿರುತ್ತೇವೆ. ಈ ರೀತಿಯ ತಪ್ಪುಗಳನ್ನು, ಎಚ್ಚರಿಕೆ ಯನ್ನು ನಿಜ ಜೀವನದಲ್ಲೂ ಗುರುತಿಸುವುದನ್ನು ಕಲಿಯಿರಿ’. ಆ ಹುಂಬ ಮತ್ತು ಅವನ ಗೆಳೆಯರು ಮ್ಲಾನವದನರಾಗಿ ಮನೆಗೆ ವಾಪಸಾದರು.