Wednesday, 11th December 2024

ಟ್ವಿಟರ್‌-ಕೇಂದ್ರ ಸರಕಾರ: ಬಾಲವೇ ಶರೀರವನ್ನು ಅಲ್ಲಾಡಿಸುತ್ತಿದೆಯಾ ?

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್‌

ಜಗತ್ತಿನಾದ್ಯಂತ ಒಂದು ದಿನದಲ್ಲಿ ಹರಿದಾಡುವ ಎಲ್ಲಾ ಟ್ವೀಟ್‌ಗಳನ್ನು ಸೇರಿಸಿದರೆ, ಅದು ಒಂದು ಕೋಟಿ ಪುಟಗಳ ಒಂದು ಬೃಹತ್ ಗ್ರಂಥವಾಗುತ್ತದೆ!

ಪ್ರತಿದಿನ 130 ಕೋಟಿ ಟ್ವೀಟ್ ಖಾತೆ ಹೊಂದಿರುವವರು, ಏನಿಲ್ಲವೆಂದರೂ ಐನೂರು ದಶಲಕ್ಷ ಟ್ವೀಟ್‌ಗಳನ್ನು ಮಾಡುತ್ತಾರೆ.
ಗೊತ್ತಿರಲಿ, ಒಂದು ಸೆಕೆಂಡಿಗೆ, ಇನ್ನೊಂದು ಸಲ ಹೇಳುತ್ತೇನೆ, ಒಂದು ಸೆಕೆಂಡಿಗೆ, ಹರಿದಾಡುವ ಟ್ವೀಟ್‌ಗಳ ಸಂಖ್ಯೆ ಆರು
ಸಾವಿರ. 2014 ರ ಫಿಫಾ ಫುಟ್ಬಾಲ್ ಅಂತಿಮ ಪಂದ್ಯದ ವೇಳೆ ಒಂದು ನಿಮಿಷದಲ್ಲಿ ಹರಿದಾಡಿದ ಟ್ವೀಟ್ ಗಳು 6.18 ಲಕ್ಷ !

ಜಗತ್ತಿನ ಶೇ.ಎಂಬತ್ತೈದರಷ್ಟು ದೇಶಗಳ ಪ್ರಧಾನಿಗಳು ಮತ್ತು ರಾಷ್ಟ್ರಪತಿಗಳು ಇಂದು ತಮ್ಮ ತಮ್ಮ ದೇಶವಾಸಿಗಳ ಜತೆ ಟ್ವಿಟರ್ ಎಂಬ ವಿಶಾಲ ವೇದಿಕೆಯ ಮೂಲಕವೇ ಸತತ ಸಂಪರ್ಕದಲ್ಲಿದ್ದಾರೆ. ಶೇ. ಎಂಬತ್ತರಷ್ಟು ಟ್ವಿಟರ್ ಅಕೌಂಟ್ ಹೊಂದಿರುವವರು ಅಮೆರಿಕದ ಹೊರಗಿದ್ದಾರೆ.

ಇಂದು ಟ್ವಿಟರ್ ಮತ್ತು ಫೇಸ್‌ಬುಕ್‌ಗಿಂತ ದೊಡ್ಡ ವೇದಿಕೆ ಜಗತ್ತಿನಲ್ಲಿ ಯಾವುದೂ ಇಲ್ಲ. ಒಂದು ನಿಮಿಷ ಈ ಎರಡೂ ವೇದಿಕೆ ಗಳು ಬಂದ್ ಆದರೆ, ಜಗತ್ತು ಸ್ತಬ್ದವಾಗುವುದು ನಿಶ್ಚಿತ. ಅದರ ಪರಿಣಾಮವನ್ನು ಊಹಿಸಿಕೊಳ್ಳಲೂ ಆಗುವುದಿಲ್ಲ. ಇಂದು ಒಂದು ದೇಶದ ಚುನಾ ವಣೆಯ ಮೇಲೆ, ಆಡಳಿತದ ಮೇಲೆ, ಟ್ವಿಟರ್ ಪ್ರಭಾವ ಬೀರುವಷ್ಟು ಶಕ್ತಿಯುತವಾಗಿ ಬೆಳೆದಿದೆ.

ಇಂದು ಟ್ವಿಟರ್ ಯಾರನ್ನು ಬೇಕಾದರೂ ತಲುಪುವ ಮಾಧ್ಯಮವಾಗಿದೆ. ಒಬ್ಬ ಕುಗ್ರಾಮದಲ್ಲಿರುವ ವ್ಯಕ್ತಿ ಮಾಡುವ ಒಂದು ಟ್ವೀಟ್ ವೈರಲ್ ಆಗಿ, ಅಮೆರಿಕದ ಅಧ್ಯಕ್ಷನನ್ನು, ಇಡೀ ಜಗತ್ತನ್ನು ಕ್ಷಣಾರ್ಧದಲ್ಲಿ ತಲುಪಬಹುದು. ಇದಕ್ಕಿಂತ ವೇಗವಾಗಿ, ವ್ಯಾಪಕವಾಗಿ ಬೇರೆ ಯಾವ ಮಾಧ್ಯಮದಿಂದಲೂ ಪ್ರಪಂಚದೆಡೆ ಆವರಿಸಿಕೊಳ್ಳುವುದು ಸಾಧ್ಯವಿಲ್ಲ. ‘ನೀವು ಮಾಡುವ ಒಂದು ಟ್ವೀಟ್‌ಗೆ, ಅಣುಬಾಂಬಿನಷ್ಟೇ ಶಕ್ತಿಯಿದೆ’ ಎಂದು ಎಂಟು ವರ್ಷಗಳ ಹಿಂದೆ, ಬ್ರಿಟಿಷ್ ಪತ್ರಕರ್ತ ಅಲನ್ ರಸ್ಬ್ರಿಜರ್ ಹೇಳಿದಾಗ ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

ಅದೊಂದು ಅತಿರಂಜಿತ ಹೇಳಿಕೆ ಎಂದು ಅನೇಕರು ಟೀಕಿಸಿದ್ದರು. ಈಗ ಹಲವರಿಗಾದರೂ ಆ ಮಾತಿನ ಮರ್ಮ ಅರಿವಿಗೆ ಬಂದಿರಲಿಕ್ಕೆ ಸಾಕು. ಇಂದು ಜನಸಾಮಾನ್ಯರೂ ಸಹ ಟ್ವೀಟ್ ಬಗ್ಗೆ ಆಸಕ್ತಿಯಿಂದ ತಿಳಿದುಕೊಳ್ಳಲಾರಂಭಿಸಿದ್ದಾರೆ. ದಿನದಿಂದ ದಿನಕ್ಕೆ ಟ್ವಿಟರ್ ಬಳಸುವವರ ಸಂಖ್ಯೆ ಅಗಾಧ ಪ್ರಮಾಣದಲ್ಲಿ ಬೆಳೆಯುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರಂಥ old fashioned ರಾಜಕಾರಣಿಗಳು ಸಹ ಟ್ವಿಟರ್ ಮಹತ್ವ ಅರಿತುಕೊಂಡಿದ್ದಾರೆ.

ಇಂದು ಟ್ವೀಟ್ ಬಳಸದ ರಾಜಕಾರಣಿಗಳು ಸಿಗಲಿಕ್ಕಿಲ್ಲ. ತಮ್ಮ ಸಂದೇಶಗಳನ್ನು ಜನರಿಗೆ ಸುಲಭವಾಗಿ, ವೇಗವಾಗಿ, ಉಚಿತವಾಗಿ, ಪರಿಣಾಮಕಾರಿಯಾಗಿ ಮತ್ತು ಗುರಿ ಮುಟ್ಟುವಂತೆ ತಲುಪಿಸಬಹುದು ಎಂಬುದು ಅವರಿಗೆ ಅರಿವಾಗಿದೆ. ಟ್ವಿಟರ್ ಎಂಬ ಮೈಕ್ರೋ ಬ್ಲಾಗಿಂಗ್ ಸಂಸ್ಥೆಯ ತಲೆ ಹಾಳಾಗಲು ಇನ್ನೇನು ಬೇಕು? ಈಗ ಎಲ್ಲಾ ದೇಶಗಳಲ್ಲೂ ಟ್ವಿಟರ್, ಅಲ್ಲಿನ ಸರಕಾರಕ್ಕಿಂತ
ದೊಡ್ಡದಾಗಿ, ಸರಕಾರಕ್ಕೆ ಸವಾಲು ಹಾಕುವ ರೀತಿಯಲ್ಲಿ ವರ್ತಿಸುತ್ತಿದೆ. ಆಯಾ ದೇಶಗಳು ತಮ್ಮ ಕಾನೂನನ್ನು ಪಾಲಿಸಿ ಅಂದರೆ, ಅಭಿವ್ಯಕ್ತಿ ಸ್ವಾತಂತ್ರ್ಯಹರಣ ಎಂಬ ಹುಯಿಲೆಬ್ಬಿಸುತ್ತದೆ.

ತಾನು ಸ್ಥಳೀಯ ಕಾನೂನಿಗಿಂತ ಅತೀತ ಎಂಬುದು ಟ್ವಿಟರ್ ಧೋರಣೆ. ಈ ವಿಷಯದಲ್ಲಿ ರಾಜಿಯಾಗದಿದ್ದರೆ, ಟ್ವಿಟರ್ ಖಾತೆ ಯನ್ನು ಸ್ಥಗಿತಗೊಳಿಸುತ್ತದೆ. ಇಂದು ನೈಜೀರಿಯಾ ಸರಕಾರ ಮತ್ತು ಟ್ವಿಟರ್ ಮಧ್ಯೆ ಜಟಾಪಟಿ ನಡೆಯುತ್ತಿದೆ. ಅಲ್ಲಿನ ಸರಕಾರ ಟ್ವಿಟರನ್ನು ರದ್ದು ಮಾಡಿದೆ. ಅದಕ್ಕೆ ಕಾರಣ ಟ್ವಿಟರ್ ಆ ದೇಶದ ಅಧ್ಯಕ್ಷನ ಖಾತೆಯನ್ನೇ ರದ್ದುಗೊಳಿಸಿದ್ದು. ಇಂದು ಟ್ವಿಟರ್‌ಗೆ ಒಂದು ದೇಶ ಯಾವ ಲೆಕ್ಕ? ಕಾರಣ ಅದು ಇಡೀ ಪ್ರಪಂಚವನ್ನೇ ಆವರಿಸಿದೆ. ಒಂದು ದೇಶದಲ್ಲಿ ಟ್ವಿಟರ್ ಬಂದ್ ಆದರೆ, ಅದರಿಂದ ಟ್ವಿಟರ್‌ಗಿಂತ ಆ ದೇಶಕ್ಕೆ ಹೆಚ್ಚು ಹಾನಿ. ಈ ಕಾರಣದಿಂದಲೇ ಟ್ವಿಟರ್ ಬ್ರಹ್ಮರಾಕ್ಷಸನಂತೆ ವರ್ತಿಸುತ್ತಿದೆ.

2006ರಲ್ಲಿ ಕೆಲವು ಸಿಬ್ಬಂದಿಯೊಂದಿಗೆ ಆರಂಭವಾದ ಟ್ವಿಟರ್ ಇಂದು ಅತ್ಯಂತ ಕಡಿಮೆ ಸಿಬ್ಬಂದಿ ಮೂಲಕ ವಿಶ್ವವನ್ನು ನಿಯಂತ್ರಿಸುತ್ತಿರುವ, ಇಡೀ ಜಗತ್ತನ್ನೇ ಆವರಿಸಿರುವ ದೊಡ್ಡಾಲದಮರ! ಪ್ರಸ್ತುತ ಭಾರತ ಸರಕಾರದೊಂದಿಗೆ ಟ್ವಿಟರ್ ಹಾಕ್ಯಾಟಕ್ಕೆ ಬಿದ್ದಿರುವುದೂ ಇದೇ ಕಾರಣಕ್ಕೆ. ಕೇಂದ್ರ ಸರಕಾರ ಟ್ವಿಟರ್ ಜತೆ ನೇರ ಸಂಘರ್ಷಕ್ಕೆ ಇಳಿದಿದೆ. ಹಾಗೆಂದು ಕೇಂದ್ರಕ್ಕೆ ಟ್ವಿಟರ್ ತೆಗೆದುಕೊಳ್ಳಬಹುದಾದ ಮುಂದಿನ ಗರಿಷ್ಠ ನಿರ್ಧಾರದ ಪರಿಣಾಮ ಅರಿವಿಲ್ಲವೆಂದಲ್ಲ. ಹಾಗೆಂದು ಅದರ ಮುಂದೆ
‘ಕುಯ್ಯೋಮುರ್ರೋ’ ಎನ್ನಲೂ ಕೇಂದ್ರ ಸರಕಾರ ಸಿದ್ಧವಿಲ್ಲ.

ಟ್ವಿಟರ್‌ಗೆ ಸರಿಸಮನಾಗಿ ಬೆಂಗಳೂರು ಮೂಲದ ‘ಕೂ’ ಹುಟ್ಟಿಕೊಂಡಿದೆ. ಟ್ವಿಟರ್‌ಗೆ ಹೋಲಿಸಿದರೆ ಅದು ಇನ್ನೂ ಶೈಶವಾವಸ್ಥೆ ಯಲ್ಲಿದೆ. ಒಂದು ಕಾಲಕ್ಕೆ ಟ್ವಿಟರ್ ಕೂಡ ಹೀಗೇ ಇತ್ತು ಎಂಬುದನ್ನು ಮರೆಯುವಂತಿಲ್ಲ. ಟ್ವಿಟರ್ ಈ ದೇಶದ ಕಾನೂನಿಗೆ ಬೆಲೆ ಕೊಡದಿದ್ದರೆ, ಭಸ್ಮಾಸುರನಿಗೆ ವರ ಕೊಟ್ಟಂತಾಗಬಹುದು, ಬಾಲವೇ ಇಡೀ ಶರೀರವನ್ನು ಅಡಿಸಬಹುದು ಎಂದು ಕೇಂದ್ರ ಸರಕಾರಕ್ಕೂ ಮನವರಿಕೆಯಾಗಿದೆ.

ಡಿಕ್ಷನರಿ ಮತ್ತು ಡಾ.ಜಾನ್ಸನ್

‘ರೀಡರ್ಸ್ ಡೈಜೆಸ್ಟ್ ಆಸ್ಟ್ರೇಲಿಯಾ’ ಪತ್ರಿಕೆ ಮಾರ್ಚ್ ತಿಂಗಳಲ್ಲಿ Fascinating Facts About Dictionaries ಎಂಬ ಲೇಖನವನ್ನು ಪ್ರಕಟಿಸಿತ್ತು. ಆದರೆ ಆ ಲೇಖನದಲ್ಲೂ ‘ಇಂಗ್ಲಿಷ್ ಭಾಷೆಯ ಪದಕೋಶ ಬ್ರಹ್ಮ’ ಎಂಬ ಅಭಿಧಾನಕ್ಕೆ ಪಾತ್ರನಾಗಿರುವ ಡಾ.ಸಾಮ್ಯುಯಲ್ ಜಾನ್ಸನ್ ಬಗ್ಗೆ ಉಲ್ಲೇಖವೇ ಇರಲಿಲ್ಲ. ಇದನ್ನು ಗಮನಿಸಿದ ಓದುಗ ರೊಬ್ಬರು, ಜೂನ್ ಸಂಚಿಕೆಯಲ್ಲಿ ಪ್ರಶ್ನಿಸಿದ್ದಾರೆ. ಒಂಬತ್ತು ವರ್ಷಗಳ ಸತತ ಪರಿಶ್ರಮದಿಂದ ಡಾ.ಜಾನ್ಸನ್, 1755ರಲ್ಲಿ ಸಮಗ್ರ ಇಂಗ್ಲಿಷ್ ಭಾಷೆಯ ಪ್ರಪ್ರಥಮ ಪದಕೋಶವನ್ನು ಸಿದ್ಧಪಡಿಸಿದ. ಅದಾಗಿ 173 ವರ್ಷಗಳ ನಂತರ ಆಕ್ಸ್ ಫರ್ಡ್ ಇಂಗ್ಲಿಷ್ ಪದಕೋಶ ಸಿದ್ಧವಾಯಿತು.

ಅಲ್ಲಿಯವರೆಗೆ ಡಾ.ಜಾನ್ಸನ್ ಬರೆದ ಪದಕೋಶವೇ ಮೂಲವಾಗಿತ್ತು. ಆಕ್ಸ್ ಫರ್ಡ್ ಡಿಕ್ಷನರಿಗೂ, ಡಾ.ಜಾನ್ಸನ್ ಪದಕೋಶವೇ ಪ್ರೇರಣೆ. ಹೀಗಿರುವಾಗ ಡಿಕ್ಷನರಿಗಳ ಬಗ್ಗೆ ಬರೆದ ಲೇಖನದಲ್ಲಿ ಡಾ.ಜಾನ್ಸನ್ ಹೆಸರನ್ನೇ ಪ್ರಸ್ತಾಪಿಸದಿದ್ದರೆ ಹೇಗೆ ಎಂದು ಆ ಓದುಗರು ಪ್ರಶ್ನಿಸಿದ್ದರು. ಅವರ ವಾದ ಸಮಂಜಸವೇ ಆಗಿದೆ.

ಇತ್ತೀಚೆಗೆ ನಾನು ಒಂದು ಪಾಡಕಾಸ್ಟ್ ಕೇಳುತ್ತಿದ್ದೆ. ಅದರಲ್ಲಿ ಡಾ.ಜಾನ್ಸನ್ ಜೀವನ ಮತ್ತು ಆತ ರೂಪಿಸಿದ ಡಿಕ್ಷನರಿಯ ಬಗ್ಗೆ
ರೋಚಕ ಕತೆಗಳನ್ನು ಕೇಳಿ, ಅವನ ಬಗ್ಗೆ ಮತ್ತಷ್ಟು ಅಧ್ಯಯನ ಮಾಡುವಂತಾಯಿತು. ಡಾ.ಜಾನ್ಸನ್‌ಗೆ ಪದಗಳ ವ್ಯಾಮೋಹ, ಅದೇ ಸರ್ವಸ್ವವಾಗಿತ್ತು. ಆದರೆ ಆತನಿಗೆ ವ್ಯವಹಾರ ಜ್ಞಾನವೇ ಇರಲಿಲ್ಲ. ಪರಿಚಯವಾದರೆ ಸಾಕು ಹಣ ಕೇಳುತ್ತಿದ್ದ. ಆದರೆ
ವಾಪಸ್ ಕೊಡುತ್ತಿರಲಿಲ್ಲ. ಸಾಲ ವಾಪಸ್ ಮಾಡಲಿಲ್ಲ ಎಂಬ ಕಾರಣಕ್ಕೆ ಎರಡು ಸಲ ಆತನನ್ನು ಅರೆಸ್ಟ್ ಮಾಡಿದ್ದರು. ಯಾರು
ಬೇಕಾದರೂ ಅವನನ್ನು ಹಣಕಾಸಿನ ವಿಷಯದಲ್ಲಿ ಮೋಸ ಮಾಡಬಹುದಿತ್ತು.

ಆತನಿಗೆ ಆಕ್ಸ್ ಫರ್ಡ್‌ನಲ್ಲಿ ಡಿಗ್ರಿಯನ್ನಾದರೂ ಮುಗಿಸಬೇಕೆಂಬ ಆಸೆಯಿತ್ತು. ಆದರೆ ಟ್ಯೂಷನ್ ಫೀ ಕಟ್ಟಲು ಆಗದ್ದರಿಂದ ಅರ್ಧಕ್ಕೆ ಬಿಡಬೇಕಾಯಿತು. ಆದರೆ 1765ರಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಜಾನ್ಸನ್‌ಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತು. ಜಾನ್ಸನ್‌ಗೆ ಒಬ್ಬ ಆಪ್ತ ಸ್ನೇಹಿತನಿದ್ದ. ಆತನ ಹೆಸರು ಹ್ಯಾರಿ ಪಾರ್ಟರ್. ಆತನಿಗೆ ಜಾನ್ಸನ್ ಕಂಡರೆ ಪ್ರಾಣ. ಅವರಿಬ್ಬರೂ ಸದಾ ಒಟ್ಟಾಗಿ ಇರುತ್ತಿದ್ದರು. ಜಾನ್ಸನ್‌ಗೆ ಆತ ಆಗಾಗ ಹಣಕಾಸಿನ ನೆರವು ನೀಡುತ್ತಿದ್ದ.

ಹೀಗಿರುವಾಗ ಒಂದು ದಿನ ಪಾರ್ಟರ್ ಹಠಾತ್ತನೆ ತೀರಿಕೊಂಡ. ಅದಾಗಿ ಕೆಲ ದಿನಗಳಲ್ಲಿ ಜಾನ್ಸನ್ ತನ್ನ ಪರಮಸ್ನೇಹಿತನ ಪತ್ನಿ ಎಲಿಜಬೆತ್ ಅನ್ನು ಮದುವೆಯಾದ. ನಲವತ್ತಾರು ವರ್ಷದ ಅವಳಿಗೆ ಮೂವರು ಮಕ್ಕಳಿದ್ದರು. ಆಗ ಜಾನ್ಸನ್‌ಗೆ ಇಪ್ಪತ್ತೈದು ವರ್ಷ. ಇದು ಎರಡೂ ಕುಟುಂಬಗಳಲ್ಲಿ ರಾದ್ಧಾಂತಕ್ಕೆ ಕಾರಣವಾಯಿತು. ಆದರೆ ಆ ಬಗ್ಗೆ ಡಾ.ಜಾನ್ಸನ್ ಹೆಚ್ಚು ತಲೆಕೆಡಿಸಿ ಕೊಳ್ಳಲಿಲ್ಲ. ಹಾಗೆ ನೋಡಿದರೆ ಆತ ಮದುವೆಯಾಗಿದ್ದು ತನ್ನ ಡಿಕ್ಷನರಿಯನ್ನು!

ನಿಘಂಟು ಮತ್ತು ಭಾಷೆ

ವರ್ಷ ವರ್ಷ ಭಾಷೆ ಎಷ್ಟು ಬೆಳೆದಿದೆ ಎಂಬುದನ್ನು ನೋಡಲು ಡಿಕ್ಷನರಿಯನ್ನು ನೋಡಬೇಕು ಎಂಬ ಮಾತಿದೆ. ಭಾಷೆ ಹುಟ್ಟಿದಾಗ, ಡಿಕ್ಷನರಿ ಇರಲಿಲ್ಲ. ಭಾಷೆ ಬೆಳೆದಂತೆ, ಅದೂ ಸಹ ಬೆಳೆಯುತ್ತಾ ಹೋಯಿತು. ವರ್ಷಗಳಾದರೂ ಪದಕೋಶಕ್ಕೆ
ಹೊಸ ಪದಗಳ ಸೇರ್ಪಡೆಯಾಗಿಲ್ಲ ಅಂದರೆ, ಒಂದೋ ಪದಕೋಶ ರಚನಕಾರರು ಹೊಸಪದಗಳನ್ನು ನಿಘಂಟಿಗೆ ಅವುಗಳನ್ನು ಸೇರಿಸುವ ಕೆಲಸ ಮಾಡಿಲ್ಲ ಅಥವಾ ಹೊಸ ಪದಗಳು ಹುಟ್ಟಿಲ್ಲ ಎಂದರ್ಥ.

ಡಾ ಸಾಮ್ಯುಯಲ್ ಜಾನ್ಸನ್ ಡಿಕ್ಷನರಿ ರಚಿಸಿದಾಗ, ಎಕ್ಸ್ (X) ದಿಂದ ಆರಂಭವಾಗುವ ಪದಗಳು ಕೇವಲ ಎಂಟು ಇದ್ದವು.
Old Noah Webster Dictionary ಯಲ್ಲಿ ‘ಎಕ್ಸ್’  ದಿಂದ ಆರಂಭವಾಗುವ ಒಂದೇ ಒಂದು ಪದವಿತ್ತು. ಅದು – Xebec. ಈಗಿನ ಆಕ್ಸ್ ಫರ್ಡ್ ಡಿಕ್ಷನರಿಯಲ್ಲಿ ಏನಿಲ್ಲವೆಂದರೂ ನಾಲ್ಕು ನೂರು ಪದಗಳಿವೆ.

ಆಕ್ಸ್ ಫರ್ಡ್ ಇಂಗ್ಲಿಷ್ ಡಿಕ್ಷನರಿಗೆ ಪ್ರತಿವರ್ಷ ಕನಿಷ್ಠ ಐನೂರು ಹೊಸ ಪದಗಳಾದರೂ ಸೇರ್ಪಡೆಯಾಗುತ್ತವೆ. ಪ್ರತಿ ವರ್ಷ ಹಾಗೆ ಸೇರ್ಪಡೆಯಾದ ಹೊಸ ಪದಗಳಿಗೆ ಅರ್ಥ ವಿವರಗಳ ಪಟ್ಟಿಯನ್ನು ಪ್ರಕಾಶಕರು ಬಿಡುಗಡೆ ಮಾಡುತ್ತಾರೆ. ಕನ್ನಡದ ಒಂದು ಪದ ಜಾಗತಿಕ ಮಟ್ಟದಲ್ಲಿ ಬಳಕೆಯಾದರೆ, ದೈನಂದಿನ ಜೀವನದಲ್ಲಿ ಜನ ಅದನ್ನು ಬರಹದಗಲಿ, ಮಾತಿನಗಲಿ ಉಪಯೋಗಿಸಿದರೆ, ಆ ಪದವನ್ನು ಆಕ್ಸ್ ಫರ್ಡ್ ಡಿಕ್ಷನರಿ ಸೇರಿಸಿಕೊಳ್ಳುತ್ತದೆ. ಭಾಷೆ ಬೆಳೆಯುವ ರೀತಿ ಅದು.

ಕನ್ನಡದಲ್ಲಿ ಪದಕೋಶವನ್ನು ವ್ಯವಸ್ಥಿತವಾಗಿ update ಮಾಡುವ ಹೊಣೆಗಾರಿಕೆಯನ್ನು ಯಾರೂ ಮುಂದೆ ಬಂದು ನಿರ್ವಹಿಸು ತ್ತಿಲ್ಲ. ಹಾಗೆ ನೋಡಿದರೆ, ಈ ಕೆಲಸವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ಮಾಡಬೇಕಿತ್ತು. ಆರಂಭದಲ್ಲಿ ಹೊಸ ಪದಗಳನ್ನು ಕಲೆ ಹಾಕುವ ಒಂದಷ್ಟು ಚೆಂದದ ಪ್ರಯತ್ನಗಳಾದವು. ಆದರೆ ಅದೊಂದು ಸಂಪ್ರದಾಯವಾಗಿ ಬೆಳೆಯಲಿಲ್ಲ. ಇದು ಕುಲಪತಿ ಗಳನ್ನು ಆಧರಿಸಿ ನಡೆಯುವ ಕೆಲಸವಾಗಬಾರದು. ಯಾರೇ ಕುಲಪತಿಗಳಾಗಿ ಬರಲಿ, ಈ ಕೆಲಸ ಅಬಾಧಿತವಾಗಿ ನಡೆಯಬೇಕು. ಈಗಂತೂ ಅಲ್ಲಿನ ಮೇಷ್ಟ್ರುಗಳ ಆದ್ಯತೆ ಬೇರೆಯದೇ ಇದ್ದಂತಿದೆ.

ಪದ ಒಂದು, ಅರ್ಥ ಹಲವು
ಇಂಗ್ಲಿಷ್ ವಿಚಿತ್ರ ಭಾಷೆ. ಸಾಮಾನ್ಯವಾಗಿ ಒಂದು ಪದಕ್ಕೆ ಒಂದೇ ಅರ್ಥವಿರಬೇಕು. ಆದರೆ ಕೆಲವು ಸಂದರ್ಭಗಳಲ್ಲಿ ಎರಡು ಮೂರು ಅರ್ಥಗಳಿರುವುದುಂಟು. ಆಯಾ ಸನ್ನಿವೇಶದಲ್ಲಿ ಬಳಸಿದಂತೆ ಅದರ ಅರ್ಥ ಬದಲಾಗುತ್ತದೆ. ಉದಾಹರಣೆಗೆ, ಹಿಂದಿಯ ‘ಕಲ’ ಎಂಬ ಪದ. ಅದರ ಅರ್ಥ ನಿನ್ನೆ ಮತ್ತು ನಾಳೆ. ನಾವು ಹೇಗೆ ಬಳಸುತ್ತೇವೆ ಎನ್ನುವುದರ ಮೇಲೆ ಅದರ ಅರ್ಥ ತೆರೆದು ಕೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ ಒಂದು ಪದ ಐದರಿಂದ ಹತ್ತು ಬೇರೆ ಬೇರೆ ಅರ್ಥ ಅಥವಾ ಹೆಚ್ಚು – ಕಮ್ಮಿ ಸನಿಹದ ಅರ್ಥಗಳನ್ನು ಹೊಂದುವುದುಂಟು.

ಆದರೆ ಇಂಗ್ಲಿಷಿನ set ಎಂಬ ಪದ ನಿಜಕ್ಕೂ ವಿಚಿತ್ರ. ಆಕ್ಸ್ ಫರ್ಡ್ ಡಿಕ್ಷನರಿಯಲಿ ಈ ಪದಕ್ಕೆ 430 ಅರ್ಥಗಳನ್ನು ನೀಡಲಾಗಿದೆ. ಅಂದರೆ ಈ ಪದದ ಅರ್ಥ ಅದರ ಬಳಕೆ ಮತ್ತು ಸಂದರ್ಭವನ್ನು ಅವಲಂಬಿಸಿದೆ. ಇದು ಒಂದು ಭಾಷೆಯ ಮಿತಿಯೂ ಹೌದು, ವೈಶಿಷ್ಟ್ಯವೂ ಹೌದು.

ನಾನು ಇಲ್ಲಿಯ ತನಕ ಅದೇ (set) ಅತಿ ಹೆಚ್ಚು ಅರ್ಥಗಳಿರುವ ಏಕೈಕ ಪದ ಎಂದು ತಿಳಿದಿದ್ದೆ. ಆದರೆ ಈ ಪದವನ್ನು ಮೀರಿಸುವ ಮತ್ತೊಂದು ಪದವಿದೆ. ಅದು. ಇದಕ್ಕೆ 645 ಪ್ರತ್ಯೇಕ ಅರ್ಥಗಳಿವೆ. ಮೂರು ಅಕ್ಷರಗಳ ಈ ಪದ ಅರ್ಥಗಳನ್ನು ಹೊತ್ತು ಓಡು (run)ತ್ತಲೇ ಇದೆ. ಕನ್ನಡದಲ್ಲೂ ಒಂದು ಗಾದೆಯಿದೆ – ‘ಕನ್ನಡ ಭಾಷೆಗೆ ಹನ್ನೆರಡು ಅರ್ಥ.’

ವೈದ್ಯರು ಮತ್ತು ಕೈಬರಹ
ವೈದ್ಯರ ಕೈ ಬರಹದ ಬಗ್ಗೆ ಇರುವ ಹಾಸ್ಯ ಪ್ರಸಂಗಗಳು ಒಂದೆರಡಲ್ಲ. ಅವರ ಕೈಬರಹಗಳು ಅದ್ಯಾಕೆ ಕೋಳಿ ನಡೆದಂತೆ ಕಾಣು ತ್ತದೆ ಎಂಬುದನ್ನು ಇಲ್ಲಿ ತನಕ ಯಾರೂ ಅಧ್ಯಯನ ಮಾಡಿದಂತಿಲ್ಲ. ನನ್ನ ಸ್ನೇಹಿತರ ಮಗ, ಪ್ರಾಥಮಿಕ ತರಗತಿಯಲ್ಲಿ ಓದುವಾಗ, ಹ್ಯಾಂಡ್ ರೈಟಿಂಗ್ ಪರೀಕ್ಷೆಯಲ್ಲಿ ಪ್ರಶಸ್ತಿ ಪಡೆದಿದ್ದ.

ದೊಡ್ಡವನಾದ ಬಳಿಕ ಡಾಕ್ಟರ್ ಆದ. ಈಗ ಅವನ ಹ್ಯಾಂಡ್ ರೈಟಿಂಗ್ ಕೋಳಿ ಹೆಜ್ಜೆ! ಆತನ ಹೊರತಾಗಿ, ಅವನ ಹ್ಯಾಂಡ್
ರೈಟಿಂಗನ್ನು ಔಷಧ ಅಂಗಡಿಯವರಷ್ಟೇ ಓದಬಲ್ಲರು. ಪತ್ರಕರ್ತ ಶಾಮರಾಯರ ಹ್ಯಾಂಡ್ ರೈಟಿಂಗ್ ನೋಡಿದರೆ, ಇದು ಡಾಕ್ಟರ್ ಬರೆದಂತಿದೆಯಲ್ಲ ಎಂದು ಯಾರಾದರೂ ಅಂದುಕೊಳ್ಳಬಹುದಿತ್ತು. ಡಾಕ್ಟರ್ ಬರೆದಿದ್ದು ಇಂಗ್ಲಿಷ್ ಎಂದು ಗೊತ್ತಾದರೆ, ಶಾಮರಾಯರ ಕನ್ನಡ, ಅರೆಬಿಕ್ ಥರ ಕಾಣುತ್ತಿತ್ತು.

ಅವರು ಏನೇ ಬರೆದರೂ, ಅದು ಬೇರೆಯವರಿಗೆ ಪಾಸ್ ವರ್ಡ್! ಇತ್ತೀಚೆಗೆ ಸ್ನೇಹಿತರ ಜತೆಗೆ ಒಬ್ಬ ಡಾಕ್ಟರ್ ನಮ್ಮ ಮನೆಗೆ
ಬಂದಿದ್ದರು. ಅವರ ಜತೆ ಮಾತಾಡುವಾಗ ಅವರು, ‘ನಿಮಗೊಂದು ಮಾತ್ರೆ ಬರೆದುಕೊಡುತ್ತೇನೆ, ಅದನ್ನು ತೆಗೆದುಕೊಳ್ಳಿ’ ಎಂದು ಕಾಗದದ ಮೇಲೆ ಬರೆದುಕೊಟ್ಟರು. ಅವರ ಅಕ್ಷರ ಸ್ಪಷ್ಟವಾಗಿತ್ತು. ಐಟೆಲಿಕ್ ಶೈಲಿಯಲ್ಲಿ ಬಹಳ ಸುಂದರ ಕೈಬರಹಗಳಲ್ಲಿ ಬರೆದುಕೊಟ್ಟರು. ಅವರ ಮೋಹಕ ಕೈಬರಹಗಳನ್ನು ನೋಡಿ, ‘ನಿಮ್ಮ ಕೈಬರಹವನ್ನು ನೋಡಿದರೆ, ನೀವು ಡಾರ್ಕ್ಟ ಥರಾ ಕಾಣುವುದಿಲ್ಲ’ ಎಂದು ಹೇಳಿದಾಗ, ‘ಈ ಮಾತನ್ನು ನನಗೆ ಅನೇಕರು ಹೇಳಿದ್ದಾರೆ’ ಎಂದು ನಕ್ಕಿದ್ದರು.

ಅವರ ಕೈಬರಹ ಅಷ್ಟು ಚೆಂದವಾಗಿತ್ತು. ಆಗ ನಮ್ಮಿಬ್ಬರ ನಡುವೆ, ‘ಡಾಕ್ಟರ್ ಮತ್ತು ಅವರ ಕೋಳಿ ಕಾಲಿನ ಹ್ಯಾಂಡ್ ರೈಟಿಂಗ್’ ಬಗ್ಗೆ ಸಣ್ಣ ಚರ್ಚೆ ಆಗಿತ್ತು. ಡಾಕ್ಟರ್ ಗಳಾದವರ ಹಸ್ತಾಕ್ಷರ ಓದಲು ಸಾಧ್ಯವಾಗದ ಶಿಲಾಶಾಸನದಂತಿರುತ್ತದೆ ಎಂಬ ಬಗ್ಗೆ ಅವರಲ್ಲೂ ಸ್ಪಷ್ಟ ಉತ್ತರವಿರಲಿಲ್ಲ.

ಹೀಗೊಂದು ಹಾಸ್ಯ ಪ್ರಸಂಗ.
ರೋಗಿ – ಡಾಕ್ಟರ್ ರೇ, ನೀವು ಔಷಧಿ ಬರೆದುಕೊಟ್ಟಿದ್ದೀರಲ್ಲ,
ಆ ಪೈಕಿ ಯಾವುದೂ ಸಿಗುತ್ತಿಲ್ಲವಲ್ಲ.
ಡಾಕ್ಟರ್: ಅದು ಔಷಧಿಯಲ್ಲ, ನಾನು ಪೆನ್ ಬರೆಯುತ್ತಿಲ್ಲ
ಅಂತ ಗೀಚಿದ್ದು
ರೋಗಿ: ಅಯ್ಯೋ ಶಿವನೇ?! ನಾನು ಹತ್ತಾರು ಮೆಡಿಕಲ್
ಶಾಪ್ ಸುತ್ತಿ ಬಂದೆನ..
ಡಾಕ್ಟರ್ – ಅಯ್ಯೋ .. ಛೇ ..ಸಾರಿ..
ರೋಗಿ – ಮತ್ತೆ ಒಂದು ಮೆಡಿಕಲ್ ಶಾಪ್ ನವ ನಾಳೆ ಬನ್ನಿ,
ಆ ಎಲ್ಲಾ ಔಷಧಗಳನ್ನು ತಂದಿಟ್ಟಿರುತ್ತೇನೆ ಅಂತ ಹೇಳಿದನ..!