Wednesday, 11th December 2024

ಮುಸ್ಲಿಂ ಹೆಣ್ಣು ಮಕ್ಕಳ ಆಶಾಕಿರಣ ಯುಸಿಸಿ

ವೀಕೆಂಡ್ ವಿತ್ ಮೋಹನ್

camohanbn@gmail.com

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಬೇಕು ಎಂಬ ವಿಚಾರ ಹಲವು ವರ್ಷಗಳಿಂದ ಚರ್ಚೆಯಲ್ಲಿದೆ. ಕೇಂದ್ರ ಸರಕಾರ ಹಲವು ವರ್ಷಗಳಿಂದ ಈ ವಿಚಾರದ ಕುರಿತು ವಿಮರ್ಶೆ ನಡೆಸುತ್ತಿದೆ. ದೇಶದಲ್ಲಿ ಸದ್ಯ ಕಾಡುತ್ತಿರುವ ಹಲವು ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಏಕರೂಪ ನಾಗರಿಕ ಸಂಹಿತೆಯೊಂದೇ ಪರಿಹಾರ. ಇದನ್ನು ವಿರೋಧಿಸುತ್ತಿರುವ ಕೆಲವರು, ಈ ನೀತಿ ಜಾರಿಯಾದರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುತ್ತಿದ್ದಾರೆ.

ಆದರೆ, ದೇಶದ ಪ್ರಜೆಗಳ ಹಿತದೃಷ್ಟಿಯ ನಿಟ್ಟಿನಲ್ಲಿ ಯುಸಿಸಿ ಜಾರಿ ಅತ್ಯಗತ್ಯ. ಜಾತಿ, ಧರ್ಮ, ಪ್ರಾಂತ್ಯಗಳ ಭೇದ-ಭಾವವಿಲ್ಲದೆ ಭಾರತದಲ್ಲಿರುವ ಎಲ್ಲ ಪ್ರಜೆಗಳಿಗೂ ಒಂದೇ ಕಾನೂನು ಇರಬೇಕು ಎನ್ನುತ್ತದೆ ಏಕರೂಪ ನಾಗರಿಕ ಸಂಹಿತೆ. ಇದರಿಂದ ದೇಶದ ಏಕತೆ ಹಾಗೂ ಸಮಾನತೆ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಮಾತ್ರವಲ್ಲ, ದೇಶದಲ್ಲಿನ ಸಾಮಾಜಿಕ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಏಕರೂಪ ನಾಗರಿಕ ಸಂಹಿತೆ ಪ್ರಮುಖ ಪಾತ್ರ ವಹಿಸಲಿದೆ. ಸದ್ಯ ದೇಶದಲ್ಲಿ ಧರ್ಮಾಧಾರಿತವಾಗಿ ಹಲವು ಕಾನೂನುಗಳಿವೆ. ಹಲವು ಧರ್ಮಗಳ ಆಚಾರ ವಿಚಾರಗಳನ್ನು ಪ್ರತಿನಿತ್ಯ ಅನುಸರಿಸುವ ಜನತೆಗೆ ವಿಭಿನ್ನ ಕಾನೂನುಗಳಿವೆ.

ಒಂದು ಧರ್ಮದ ಜನತೆ ಮತ್ತೊಂದು ಧರ್ಮವನ್ನು ಅನುಸರಿಸುವವರ ಜತೆ ವ್ಯವ ಹರಿಸುವಾಗ ಹಲವು ಬಗೆಯ ವ್ಯಾವಹಾರಿಕ ತೊಡಕುಗಳು ಸೃಷ್ಟಿ ಆಗುತ್ತಿವೆ. ಪರಿಣಾಮ ವಿಭಿನ್ನ ಸಮುದಾಯಗಳ ನಡುವೆ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಈ ತೊಡಕುಗಳನ್ನು ನಿರ್ವಹಿಸ ಲಿರುವ ಏಕೈಕ ಮಾರ್ಗ ಏಕರೂಪ ನಾಗರಿಕ ಸಂಹಿತೆ ಜಾರಿ. ಹಾಗಾದಲ್ಲಿ ಮುಂಬರುವ ದಿನಗಳಲ್ಲಿ ಪ್ರತಿಯೊಂದು ಧರ್ಮಗಳ ಜನರ ನಡುವೆ ಸಮನ್ವಯತೆ, ಸಂಪರ್ಕ ಮತ್ತು ಸಂವಹನ ಸುಲಭ ಸಾಧ್ಯವಾಗುತ್ತದೆ.
Read E-Paper click here

ಭಾರತದಲ್ಲಿರುವ ಪ್ರತಿಯೊಂದು ವರ್ಗ, ಪ್ರತಿ ಸಮುದಾಯ ಮತ್ತು ಪ್ರತಿ ಧರ್ಮಗಳ ಜನರಿಗೆ ಒಂದೇ ರೀತಿಯ ಕಾನೂನು ಜಾರಿಗೆ ಬಂದಾಗ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಬಲಗೊಳ್ಳುವಲ್ಲಿ ಸಹಕಾರಿಯಾಗುತ್ತದೆ. ಧರ್ಮಗಳ ನಡುವಿನ ಒಡಂಬಡಿಕೆಗಳು ಸುಲಭ ಸಾಧ್ಯವಾದಾಗ ಸಾಮಾಜಿಕ ಶಾಂತಿ ಸ್ಥಾಪನೆಯಾಗುತ್ತದೆ. ದೇಶದ ಪ್ರತಿ ಪ್ರಜೆ ಕೂಡ ಒಂದು ಧಾರ್ಮಿಕ ಗುಂಪಿನ ಸದಸ್ಯ ಆಗಿರುತ್ತಾನೆ. ಆತ ತನ್ನ ಧರ್ಮದ ನಿಯಮಗಳನ್ನು ಪಾಲನೆ ಮಾಡುತ್ತಿರುತ್ತಾನೆ. ಈ ರೀತಿ ನಾನಾ ನಿಯಮಗಳ ಪಾಲನೆಯಿzಗ
ದೇಶದ ಸಾಂವಿಧಾನಿಕ ನಿಯಮಗಳು ಹಾಗೂ ಕಾನೂನು ಗಳು ಕೂಡ ಆಯಾ ಧರ್ಮಕ್ಕೆ ಅನುಗುಣವಾಗಿ ಭಿನ್ನತೆಯಿಂದ ಕೂಡಿ ದ್ದರೆ, ಯಾವುದೋ ಒಂದು ಧರ್ಮದ ವ್ಯಕ್ತಿ ಮತ್ತೊಂದು ಧರ್ಮದ ವ್ಯಕ್ತಿಗಿಂತ ಹೆಚ್ಚಿನ ಕಾನೂನಾತ್ಮಕ ಸೌಲಭ್ಯಗಳನ್ನು ಅನುಭವಿಸುವ ಸಾಧ್ಯತೆ ಇರುತ್ತದೆ.

ಹೀಗಾಗಿ, ಧರ್ಮಾಧಾರಿತ ಕಾನೂನುಗಳನ್ನು ತೊಡೆದು ಹಾಕಿ ಎಲ್ಲ ಧರ್ಮದವರಿಗೂ ಏಕರೂಪದ ಕಾನೂನು ಜಾರಿ ಮಾಡಿದಾಗ ಹಲವು ಸಮಸ್ಯೆಗಳು ತಾನೇ ತಾನಾಗಿ ಬಗೆಹರಿಯುತ್ತವೆ. ಕೆಲವರ ಪ್ರಕಾರ ಭಾರತದ ಜನ ಸಮುದಾಯ ಇನ್ನೂಏಕರೂಪ ನಾಗರಿಕ ಸಂಹಿತೆಯನ್ನು ಅಳವಡಿಸಿಕೊಳ್ಳಲು, ಸ್ವೀಕರಿಸಲು ಮಾನಸಿಕವಾಗಿ ಸಿದ್ಧವಾಗಿಲ್ಲ ಅನ್ನೋದು. ಆದರೆ ಒಂದು ಬಾರಿ ಕಾನೂನು ಜಾರಿ ಯಾದರೆ ಸಮಾಜ ಕೂಡ ನಿಧಾನವಾಗಿ ಕಾಲಾಂತರದಲ್ಲಿ ಮನಃಸ್ಥಿತಿಯನ್ನು ಬದಲಾವಣೆ ಮಾಡಿಕೊಳ್ಳುತ್ತದೆ.

ಸಂವಿಧಾನ ರಚಿಸುವ ಸಂದರ್ಭದಲ್ಲಿಯೂ ಭಾರತದಲ್ಲಿ ನಾನಾ ಧರ್ಮಗಳಿದ್ದವು. ಅಂದು ಇದ್ದಂತಹ ಧರ್ಮಗಳೇ ಇಂದಿಗೂ
ಇವೆ. ಆ ಸಂದರ್ಭದಲ್ಲಿ ಸಂವಿಧಾನದ ಪರಿಚ್ಛೇದ ೪೪ರ ಅಡಿಯಲ್ಲಿ ಏಕರೂಪ ನಾಗರೀಕ ಸಂಹಿತೆಯನ್ನು ಜಾರಿಗೊಳಿ
ಸಬೇಕೆಂಬ ಅಂಶವನ್ನು ಬಾಬಾಸಾಹೇಬರು ಸೇರಿಸಿದ್ದರು. ಭಾರತಕ್ಕೆ ಸ್ವಾತಂತ್ರ್ಯ ದೊರೆತು ೭೫ ವರ್ಷಗಳು ಕಳೆದರೂ ಈ
ಕಾನೂನಿಗೆ ಅಣಿಗೊಂಡಿಲ್ಲವೆಂಬ ವಾದ ಶುದ್ಧ ಸುಳ್ಳು.

ಬದಲಾದ ಆಧುನಿಕ ಸಮಾಜದಲ್ಲಿ ಭಾರತ ಏಳು ದಶಕಗಳ ಕಾಲ ನಡೆದು ಬಂದಿದೆ. ಹಿಂದೂ ಧರ್ಮದಲ್ಲಿದ್ದಂತಹ ಹಲವು  ವೈಜ್ಞಾನಿಕ ಆಚರಣೆಗಳನ್ನು ಸ್ವತಃ ಹಿಂದುಗಳೇ ತಿರಸ್ಕರಿಸಿ ಆಧುನಿಕ ಸಮಾಜಕ್ಕೆ ಒಗ್ಗಿಕೊಂಡಿದ್ದಾರೆ. ಮದುವೆ, ವಿಚ್ಛೇದನ, ಆಸ್ತಿಯಲ್ಲಿನ ಪಾಲು, ಉತ್ತರಾಽಕಾರ, ದತ್ತು ಸ್ವೀಕಾರದಂತಹ ವಿಷಯಗಳು ಒಂದು ಧರ್ಮದ ಕಟ್ಟಳೆಗಳಿಗೆ ಸೀಮಿತವಾದರೆ ಮನುಷ್ಯ ಹುಟ್ಟಿನ ಜತೆಗೆ ಬರುವಂತಹ ಮಾನವ ಹಕ್ಕುಗಳಿಗೆ ಬೆಲೆಯಿಲ್ಲದಂತಾಗುತ್ತದೆ.

ಭಾರತದಲ್ಲಿ ಈಗಾಗಲೇ ಸರ್ವ ಧರ್ಮಕ್ಕೂ ಅನ್ವಯ ವಾಗುವಂತಹ ‘ಕ್ರಿಮಿನಲ್ ಕೋಡ್’ ಜಾರಿಯಲ್ಲಿದೆ. ಅಪರಾಧವನ್ನು ಧರ್ಮಕ್ಕೆ ಸೀಮಿತ ಮಾಡಲಾಗುವುದಿಲ್ಲ. ಸರ್ವಧರ್ಮೀಯರೂ ಸಂವಿಧಾನವನ್ನು ಗೌರವಿಸಲೇಬೇಕು. ಧರ್ಮ ಮತ್ತು ಸಂವಿ ಧಾನದ ನಡುವಿನ ಮೊದಲ ಆಯ್ಕೆ ಸಂವಿಧಾನವಾಗಿರಬೇಕು. ಆದರೆ, ಇಸ್ಲಾಂ ಧರ್ಮದ ಕೆಲವು ಮುಖಂಡರು ತಮಗೆ ಸಂವಿಧಾನಕ್ಕಿಂತಲೂ ಧರ್ಮವೇ ಮುಖ್ಯವೆಂದು ಹೇಳುತ್ತಾರೆ. ಯುಸಿಸಿಯ ಪ್ರಮುಖ ಫಲಾನುಭವಿಗಳು ಮುಸ್ಲಿಂ ಹೆಣ್ಣುಮಕ್ಕಳು. ಈ ಕಾನೂನು ಜಾರಿಯಾದರೆ ಮುಸ್ಲಿಂ ಹೆಣ್ಣು ಮಕ್ಕಳಿಗೆ ತಮ್ಮ ಗಂಡನ ಮನೆಯ ಆಸ್ತಿಯಲ್ಲಿ ಸಮಪಾಲು ಸಿಗಬಹುದು, ತನ್ನ ತವರು ಮನೆಯ ಅಸ್ತಿಯಲ್ಲಿಯೂ ಸಮಪಾಲು ಸಿಗಬಹುದು, ವಿಚ್ಛೇದನ ನೀಡುವ ಗಂಡ ಇತರ ಧರ್ಮಗಳಲ್ಲಿನ ಕಾನೂನು ಗಳಂತೆ ತನ್ನ ಹೆಂಡತಿಗೆ ಸಾಯುವವರೆಗೂ ಪರಿಹಾರ ನೀಡಬೇಕಾಗುತ್ತದೆ.

೧೯೮೫ರ ‘ಶಾ ಬಾನು’ ಪ್ರಕರಣವನ್ನು ಇಲ್ಲಿ ಉಖಿಸಬೇಕಿದೆ, ಈ ಪ್ರಕರಣದಲ್ಲಿ ಮುಸ್ಲಿಂ ಹೆಣ್ಣುಮಗಳಿಗೆ ತನ್ನ ಗಂಡ ಇಸ್ಲಾಮಿನ ವೈಯಕ್ತಿಕ ಕಾನೂನಿನಡಿಯಲ್ಲಿ ‘ತ್ರಿವಳಿ ತಲಾಕ್’ ನೀಡಿ ವಿಚ್ಛೇದನ ನೀಡುತ್ತಾನೆ. ನಂತರ ಆಕೆಗೆ ಜೀವಮಾನವಿಡೀ ನೀಡಬೇಕಾದ
ತಿಂಗಳ ಪರಿಹಾರದ ಮೊತ್ತವನ್ನು ನೀಡುವುದಕ್ಕೆ ಒಪ್ಪುವುದಿಲ್ಲ. ಆಗ ನ್ಯಾಯಾಲಯವು ಆಕೆಯ ಪರವಾಗಿ ನಿಂತು ಆಕೆಗೆ
ನೀಡಬೇಕಾದಂತಹ ಪರಿಹಾರದ ಅವಧಿಯನ್ನು ಹೆಚ್ಚಿಸುತ್ತದೆ. ಇದರಿಂದ ಬೇಸರಗೊಂಡಂತಹ ಮುಸ್ಲಿಂ ಸಮುದಾಯದ ಕೆಲ ಮುಖಂಡರನ್ನು ಮೆಚ್ಚಿಸಲು ಅಂದಿನ ಪ್ರಧಾನಮಂತ್ರಿ ರಾಜೀವ್ ಗಾಂಧಿ ಕಾನೂನಿಗೆ ತಿದ್ದುಪಡಿ ತಂದು ಮುಸ್ಲಿಂ ಗಂಡಸರ ಪರವಾಗಿ ನಿಂತಿದ್ದರು.

ಅಂದಿನಿಂದ ಇಂದಿನವರೆಗೂ ಸತತವಾಗಿ ಮುಸ್ಲಿಂ ಹೆಣ್ಣುಮಕ್ಕಳಿಗೆ ಅನ್ಯಾಯವಾಗುತ್ತಲೇ ಇದೆ. ಹಿಂದೂ ಹೆಣ್ಣು ಮಕ್ಕಳಿಗೆ
ಸಿಗುತ್ತಿರುವ ಕಾನೂನಿನ ರಕ್ಷಣೆ, ಕಾನೂನಿನ ಅವಕಾಶ, ಆಸ್ತಿಯಲ್ಲಿನ ಪಾಲುದಾರಿಕೆ, ವಿಚ್ಛೇದನದ ನಂತರದ ಪರಿಹಾರ ಮುಸ್ಲಿಂ ಹೆಣ್ಣು ಮಕ್ಕಳಿಗೆ ಸಿಗುತ್ತಿಲ್ಲ. ಈ ಸಮಸ್ಯೆ ಕೇವಲ ಮುಸ್ಲಿಂ ಸಮುದಾಯಕ್ಕೆ ಸೀಮಿತವಾಗಿಲ್ಲ, ಕ್ರಿಶ್ಚಿಯನ್ ಧರ್ಮದಲ್ಲಿ ಈ ವಿಚಾರ ಗಳಿಗೆ ಸಂಬಂಧಿಸಿದಂತೆ ಬೇರೆ ಕಾನೂನಿದೆ, ಪಾರ್ಸಿಗಳಲ್ಲಿ ಬೇರೆಯದ್ದೇ ಕಾನೂನಿದೆ.

ಭಾರತ ಸ್ವತಂತ್ರ್ಯಗೊಂಡು ಏಳು ದಶಕಗಳು ಕಳೆದರೂ ಆಧನಿಕ ಸಮಾಜದಲ್ಲಿನ ನಾಗರಿಕರಿಗೆ ಸಮಾನವಾದಂತಹ ಕಾನೂನಿಲ್ಲ ದಿರುವುದು ಸೂಕ್ತವಲ್ಲ. ಇಸ್ಲಾಮಿಕ್ ರಾಷ್ಟ್ರ ಪಾಕಿಸ್ತಾನದಲ್ಲಿ ಏಕರೂಪ ನಾಗರೀಕ ಸಂಹಿತೆ ಜಾರಿಯಲ್ಲಿದೆ. ಮುಸ್ಲಿಂ ಬಹು ಸಂಖ್ಯಾತ ಬಾಂಗ್ಲಾದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಲ್ಲಿದೆ. ಟರ್ಕಿ, ಇಂಡೋನೇಷ್ಯಾ, ಈಜಿಪ್ಟ್ ರಾಷ್ಟ್ರಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಲ್ಲಿದೆ. ಬಹುಸಂಖ್ಯಾತ ಮುಸ್ಲಿಂ ರಾಷ್ಟ್ರಗಳು ಈ ಕಾನೂನನ್ನು ಒಪ್ಪಿಕೊಂಡಿದ್ದರೂ ಭಾರತದಲ್ಲಿನ ಕೆಲ ಮುಸ್ಲಿಂ ಸಂಘಟನೆಗಳು ಮತ್ತು ಎಡಚರರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇದರ ಜಾರಿಗೆ
ವಿರೋಧಿಸುತ್ತಿದ್ದಾರೆ. ಸ್ವತಃ ಜವಾಹರಲಾಲ್ ನೆಹರು ೧೯೫೪ರಲ್ಲಿ ಏಕರೂಪ ನಾಗರೀಕ ಸಂಹಿತೆಯನ್ನು ಜಾರಿಗೆ ತರಬೇಕೆಂದು ಹೇಳಿದ್ದರು.

ಇಂದು ಅದೇ ನೆಹರೂ ಹಿಂಬಾಲಕರು ವಿರೋಧಿಸುತ್ತಿದ್ದಾರೆ. ೧೯೫೬ರಲ್ಲಿ ದೇಶದ ಜನಸಂಖ್ಯೆಯ ಶೇ.೮೦ ಹಿಂದೂಗಳನ್ನು ಮೂರು ಕಾನೂನುಗಳ ಮೂಲಕ ಕ್ರೋಡೀಕರಿಸುವ ಕೆಲಸವಾಯಿತಾದರೂ ಸಂಪೂರ್ಣ ದೇಶದ ಜನರನ್ನು ಒಟ್ಟುಗೂಡಿಸುವ ಕೆಲಸವಾಗಿ ರಲಿಲ್ಲ. ಹಿಂದೂಗಳಿಗೆ ಅನ್ವಯವಾಗುವ ಹಿಂದೂ ವಿವಾಹ ಕಾಯ್ದೆ ೧೯೫೫, ಹಿಂದೂ ವಾರಸುಧಾರರ ಕಾಯ್ದೆ ೧೯೫೬, ಹಿಂದೂ ದತ್ತು ಕಾಯ್ದೆ ೧೯೫೬ಗಳನ್ನು ಹಿಂದೂಗಳು ಈಗಾಗಲೇ ಒಪ್ಪಿಕೊಂಡಿದ್ದಾರೆ.

ಏಕರೂಪ ನಾಗರಿಕ ಸಂಹಿತೆಯ ಚರ್ಚೆ ಬ್ರಿಟಿಷರ ಕಾಲದಿಂದಲೂ ನಡೆಯುತ್ತಿದೆ. ೧೮೩೫ ರಲ್ಲಿ ಬ್ರಿಟಿಷರು ಈ ನಿಟ್ಟಿನಲ್ಲಿ ಕಾನೂನನ್ನು ಭಾರತದಲ್ಲಿ ಜಾರಿಗೆ ತರಬೇಕೆಂದು ಹೇಳಿದ್ದರು. ರಾಷ್ಟ್ರೀಯತೆಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾದರೆ ಧರ್ಮ ಗಳನ್ನೂ ಮೀರಿ ನಾವೆಲ್ಲರೂ ಒಂದೇ ಎಂಬ ಭಾವನೆ ಸಮಾಜದಲ್ಲಿ ಬರಬೇಕು. ಈ ಕಾನೂನಿನಿಂದ ರಾಷ್ಟ್ರೀಯತೆಯು ಮತ್ತಷ್ಟು ಗಟ್ಟಿಯಾಗುತ್ತದೆ ಮತ್ತು ನಾವೆಲ್ಲರೂ ಒಂದೇ ಎಂಬ ಸಂದೇಶ ಕೊಟ್ಟಂತಾಗುತ್ತದೆ.

ಅಕ್ಟೋಬರ್ ೨೦೧೫ರಲ್ಲಿ, ಭಾರತದ ಸರ್ವೋಚ್ಚ ನ್ಯಾಯಾಲಯವು ಏಕರೂಪದ ನಾಗರಿಕ ಸಂಹಿತೆಯ ಅಗತ್ಯವನ್ನು ಪ್ರತಿ ಪಾದಿಸಿತ್ತು. ನ್ಯಾಯಾಲಯವು ಪ್ರತಿಯೊಂದು ಧರ್ಮವು ತನ್ನ ವೈಯಕ್ತಿಕ ಕಾನೂನಿನ ವಿಷಯವಾಗಿ ನಾನಾ ಸಮಸ್ಯೆ ಗಳನ್ನು ನಿರ್ಧರಿಸುವ ಹಕ್ಕನ್ನು ತಾನೇ ಹೊಂದಿದೆ ಎಂದು ಹೇಳುತ್ತದೆ. ಈ ರೀತಿಯ ವೈಯಕ್ತಿಕ ಕಾನೂನಿನ ನಿರ್ಧಾರಗಳನ್ನು ಸಂಪೂರ್ಣ ವಾಗಿ ಒಪ್ಪಲಾಗುವುದಿಲ್ಲ ಎಂದು ಹೇಳಿತ್ತು. ಸಮಸ್ಯೆಗಳನ್ನು ನ್ಯಾಯಾಲಯದ ತೀರ್ಪಿನ ಮೂಲಕವೇ ಬಗೆಹರಿಸಬೇಕೆಂದು ಹೇಳಿತ್ತು.

೩೦ ನವೆಂಬರ್ ೨೦೧೬ರಂದು, ಬ್ರಿಟಿಷ್ ಭಾರತೀಯ ವ್ಯಕ್ತಿ ತು-ಲ್ ಅಹ್ಮದ್ ೧೨ ಅಂಶಗಳ ದಾಖಲೆಯ ಕರಡನ್ನು ಅನಾವರಣ ಗೊಳಿಸಿದ್ದರು. ೧೯೫೦ ರಿಂದ ಭಾರತದ ಸರಕಾರಗಳು ಯುಸಿಸಿ ಜಾರಿ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡಿಲ್ಲ ವೆಂದು ಉಲ್ಲೇಖಿಸಿದ್ದರು. ಇದಾದ ನಂತರ ೨೧ನೆಯ ಭಾರತದ ಕಾನೂನು ಆಯೋಗವು ಈ ಕಾನೂನನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸಮಾಜದ ನಾನಾ ವಲಯಗಳ ಅಭಿಪ್ರಾಯಗಳನ್ನು ಸಂಗ್ರಹಿಸಿತ್ತು. ಆದರೆ, ಆಯೋಗದಿಂದ ಧನಾತ್ಮಕವಾದ ಪ್ರತಿಕ್ರಿಯೆ ಬಂದಿರಲಿಲ್ಲ. ತದನಂತರಬಂದಂತಹ ೨೨ ನೆಯ ಭಾರತದ ಕಾನೂನು ಆಯೋಗ, ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದಲ್ಲಿ ಅಭಿಪ್ರಾಯ ಸಂಗ್ರಹ ಮತ್ತು ಚರ್ಚೆಗೆ ಮುಂದಾಗಿದೆ.

ಈಗಾಗಲೇ ಸುಮಾರು ೮,೫೦,೦೦೦ ಅಭಿಪ್ರಾಯ ಸಂಗ್ರಹಣೆಯಾಗಿದ್ದು ದೊಡ್ಡಮಟ್ಟದಲ್ಲಿ ಚರ್ಚೆ ಶುರುವಾಗಿದೆ. ಭಾರತವು ‘ಜಾತ್ಯತೀತ ರಾಷ್ಟ್ರ’. ಅಂದರೆ ಎಲ್ಲ ಧರ್ಮಗಳ ಸಮಾನತೆ ಮತ್ತು ಕಾನೂನಿನ ಮುಂದೆ ಎಲ್ಲ ಧರ್ಮಗಳ ಕಟ್ಟಳೆಗಳನ್ನು ಅಭ್ಯಾಸ ಮಾಡಬಹುದು. ಪ್ರಸ್ತುತ, ವಿಭಿನ್ನ ನಾಗರಿಕ ಸಂಹಿತೆಗಳ ಮಿಶ್ರಣದೊಂದಿಗೆ, ವಿವಿಧ ನಾಗರಿಕರನ್ನು ಅವರ ಧರ್ಮದ ಆಧಾರದ ಮೇಲೆ ವಿಭಿನ್ನವಾಗಿ ಪರಿಗಣಿಸಲಾಗುತ್ತದೆ. ಹಿಂದೂ ಮಹಿಳೆಯರಿಗೆ ಇರುವ ಹಕ್ಕುಗಳು, ಷರಿಯಾ ಕಾನೂನಿನ ಆಧಾರದ ಮೇಲೆ ಮುಸ್ಲಿಂ ವೈಯಕ್ತಿಕ ಕಾನೂನಿನಿಂದ ನಿಯಂತ್ರಿಸಲ್ಪಡುವ ಮುಸ್ಲಿಂ ಮಹಿಳೆಯರಿಗಿಂತ ಹೆಚ್ಚು ಪ್ರಗತಿಪರ ವಾಗಿವೆ.

ಸಂವಿಧಾನದ ೪೪ನೇ ಪರಿಚ್ಛೇದದಲ್ಲಿ ಹೇಳಿರುವ ಏಕರೂಪ ನಾಗರಿಕ ಸಂಹಿತೆಯ ಉದ್ದೇಶವೇನೆಂದರೆ – ದೇಶದ ಏಕತೆ ಮತ್ತು
ಸಮಗ್ರತೆಯನ್ನು ಬಲಪಡಿಸುವುದು. ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆಯ ಬೇಡಿಕೆಯನ್ನು ಕೆಲವು ಧಾರ್ಮಿಕ ವಿಚಾರವಾದಿಗಳು ಮತ್ತು ಕೆಲ ಜಾತ್ಯತೀತವಾದಿಗಳು ರಾಜಕೀಯದ ಕಾರಣದಿಂದಾಗಿ ಋಣಾತ್ಮಕವಾಗಿ ನೋಡುತ್ತಿದ್ದಾರೆ. ಆದರೆ ಕಾಲ ಬದಲಾಗಿದೆ. ಸ್ವತಂತ್ರ ಭಾರತದ ಅಮೃತ ಕಾಲದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನನ್ನು ಕಾನೂನಿನ ಮುಂದೆ
ಸಮಾನವಾಗಿ ಪರಿಗಣಿಸುವ ಕಾಲ ಬಂದಿದೆ.