Sunday, 13th October 2024

ಆಧಾರ್‌ ಉನ್ನತೀಕರಣಕ್ಕೆ ಇದು ಸಕಾಲ

ಅಭಿಮತ

ರಮಾನಂದ ಶರ್ಮಾ

ಇದು ವರ್ಷಗಳ ಹಿಂದಿನ ಮಾತು. ಹಿರಿಯ ನಾಗರಿಕರೊಬ್ಬರು ಜೆರಾಕ್ಸ್ ಅಂಗಡಿಯೊಂದರಲ್ಲಿ ಕೂತು ತಮ್ಮ ಆಧಾರ್ ಕಾರ್ಡ್‌ನ ೫೦ ಪ್ರತಿಗಳನ್ನು ಮಾಡಿಸುತ್ತಿದ್ದರು. ಅದರ ಜತೆಗೆ ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್, ಹಿರಿಯ ನಾಗರಿಕರ ಗುರುತಿನ ಕಾರ್ಡ್, ಉದ್ಯೋಗ ನಿವೃತ್ತಿ ಮತ್ತು ಬಿಡುಗಡೆ ಪತ್ರ, ಪಾಸ್‌ಪೋರ್ಟ್, ಪಾನ್‌ಕಾರ್ಡ್, ವಾಹನ ಚಾಲನಾ ಪರವಾನಗಿ, ದೂರ ವಾಣಿ, ವಿದ್ಯುತ್ ಮತ್ತು ಜಲ ಮಂಡಳಿಯ ಬಿಲ್‌ಗಳನ್ನೂ ಜೆರಾಕ್ಸ್ ಮಾಡಿಸಿಕೊಳ್ಳುತ್ತಿದ್ದರು.

ಅವರನ್ನು ಪ್ರಶ್ನಾರ್ಥಕವಾಗಿ ನೋಡಿದಾಗ, ‘ಇಂದಿನ ಕೆಲ ಯುವಕರಿಗೆ ಇದು ಅರ್ಥ ವಾಗುವುದಿಲ್ಲ. ನಮ್ಮ ದಿನನಿತ್ಯದ ಕೆಲಸ ಗಳಿಗೆ ಹತ್ತಾರು ಕಚೇರಿಗಳನ್ನು ಅಲೆಯಬೇಕು. ಅಲ್ಲೆಲ್ಲ ಇಂಥ ಹತ್ತಾರು ದಾಖಲೆಪತ್ರಗಳನ್ನು ಕೇಳುತ್ತಿದ್ದು, ಕೆಲಸವನ್ನು ಹಗುರ ಮಾಡಿಕೊಳ್ಳಲು ಮತ್ತು ತ್ವರಿತವಾಗಿ ಅದು ನೆರವೇರುವಂತಾಗಲು ಹೀಗೆ ಎಲ್ಲ ದಾಖಲೆ ಗಳ ಪ್ರತಿಗಳನ್ನು ತೆಗೆದಿರಿಸಿಕೊಳ್ಳುತ್ತೇನೆ’ ಎಂದು ಅವರು ಸಮಜಾಯಿಷಿ ನೀಡಿದರು.

ಸಾಮಾನ್ಯವಾಗಿ ಇಂಥ ಕೆಲಸಗಳನ್ನು ಮಾಡಲು ಇತರರಿಗೆ ವ್ಯವಧಾನ ಇಲ್ಲದಿರುವು ದರಿಂದ ಹಿರಿಯರು ಇವನ್ನು ಮಾಡುತ್ತಿದ್ದು, ಮನೆ ಯಲ್ಲಿನ ಇತರರಿಗೆ ಈ ನಿಟ್ಟಿನಲ್ಲಿ ತಿಳಿಯದಿರುವುದು ಬೇರೆ ಮಾತು. ದಶಕಗಳ ಹಿಂದೆ ಬ್ಯಾಂಕಿನಲ್ಲಿ ಖಾತೆ ತೆರೆಯಬೇಕಿದ್ದರೆ
ಯಾವುದೇ ದಾಖಲೆಗಳನ್ನು ಕೇಳುತ್ತಿರಲಿಲ್ಲ; ಸಂಭಾವ್ಯ ಗ್ರಾಹಕರು ನೀಡುವ ವಿಳಾಸ ಮತ್ತಿತರ ಒಂದೆರಡು ಮಾಹಿತಿಗಳನ್ನು ಚಿಕ್ಕ ನಮೂನೆಯೊಂದರಲ್ಲಿ ಬರೆದು ಕೊಂಡು ಅವರ ಸಹಿ ತೆಗೆದುಕೊಂಡು ಖಾತೆಯನ್ನು ತೆರೆಯುತ್ತಿದ್ದರು.

ವರ್ಷಗಳು ಉರುಳಿದಂತೆ, ಹೆಚ್ಚಿನ ಸುರಕ್ಷತೆ ಮತ್ತು ಭದ್ರತೆಯ ನಿಟ್ಟಿನಲ್ಲಿ, ಹೊಸ ಗ್ರಾಹಕರನ್ನು ಬ್ಯಾಂಕಿನ ಹಳೆಯ ಗ್ರಾಹಕ ರೊಬ್ಬರು ಪರಿಚಯಿಸಬೇಕು (introduction) ಮತ್ತು ಗ್ರಾಹಕರು ತಮ್ಮ ಇತ್ತೀಚಿನ ಭಾವಚಿತ್ರ, ವಿಳಾಸದ ದೃಢೀಕರಣಕ್ಕಾಗಿ ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್‌ನಂಥ ದಾಖಲೆಗಳಲ್ಲೊಂದನ್ನು ನೀಡಬೇಕು ಎಂಬ ಕಟ್ಟಳೆ ವಿಧಿಸ
ಲಾಯಿತು.

ಈಗ ಇವೆಲ್ಲವೂ ಇತಿಹಾಸದ ಪುಟ ಸೇರಿದ್ದು, ‘ಆಧಾರ್’ ಕಾರ್ಡು ಮುಖ್ಯವಾಗಿದೆ. ಜಿಎಸ್‌ಟಿ ವ್ಯವಸ್ಥೆ ಜಾರಿಯಾದ ಮೇಲೆ ಉಳಿದೆಲ್ಲಾ ಬಗೆಯ ತೆರಿಗೆಗಳು ನೇಪಥ್ಯಕ್ಕೆ ಸೇರಿದ್ದು ಇದೇ ಮಾದರಿಯಲ್ಲಿ. ‘ಆಧಾರ್’ ಬಂದ ಮೇಲೆ ಉಳಿದೆಲ್ಲಾ ಗುರುತಿನ ಕಾರ್ಡ್‌ಗಳು ಚಲಾವಣೆಯಿಂದ ಮಾಯವಾಗದಿದ್ದರೂ ದಿನನಿತ್ಯದ ವ್ಯವಹಾರದಲ್ಲಿ ಗುರುತಿನ ಕಾರ್ಡ್‌ನ ಅವಶ್ಯಕತೆ ಇರುವಲ್ಲಿ
‘ಆಧಾರ್’ ಅನ್ನೇ ಕೇಳಲಾಗುತ್ತದೆ. ಆ ದೃಷ್ಟಿಯಲ್ಲಿದು ಮಿಕ್ಕವನ್ನು ಬದಿಗೆ ಸರಿಸಿದೆ.

ಒಟ್ಟಾರೆಯಾಗಿ ಸರ್ವಾಂತರ್ಯಾಮಿಯಾಗಿರುವ ‘ಆಧಾರ್’ ಕಾರ್ಡು, ಮನುಷ್ಯನ ಹುಟ್ಟಿನ ಸಂದರ್ಭದಿಂದ ಮೊದಲ್ಗೊಂಡು ಅವನ ಬದುಕಿನ ಪಯಣ ಮುಗಿಯುವವರೆಗೂ ಜತೆಗಿರುವಂಥದ್ದು. ಏಕೆಂದರೆ, ಮನೆಯಲ್ಲೋ ಅಥವಾ ಆಸ್ಪತ್ರೆಯಲ್ಲೋ ಮಗುವಿನ ಜನನವಾಗಿ, ಅದರ ಜನನ ಪ್ರಮಾಣಪತ್ರವನ್ನು ನೀಡುವಾಗ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ಆಸ್ಪತ್ರೆಯ ದಾಖಲೆ ಪತ್ರಗಳೊಂದಿಗೆ ಮಗುವಿನ ತಂದೆಯ ‘ಆಧಾರ್’ ಕೇಳುತ್ತವೆ; ವ್ಯಕ್ತಿಯೊಬ್ಬ ಮೃತನಾದಾಗ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸುವಾಗಲೂ, ವೈದ್ಯರು ನೀಡಿದ ಮರಣ ಪ್ರಮಾಣಪತ್ರ ದೊಂದಿಗೆ (death certificate) ಮೃತವ್ಯಕ್ತಿಯ ಆಧಾರ್ ಕಾರ್ಡ್ ಪ್ರತಿಯನ್ನೂ ಕೇಳಲಾಗುತ್ತದೆ.

ಆಧಾರ್ ಕಾರ್ಡ್ ಮೂಲತಃ ಭಾರತೀಯ ಪರಿಕಲ್ಪನೆಯಲ್ಲ. ಇದರ ಹಿಂದೆ, ಅಮೆರಿಕದಲ್ಲಿ ಪ್ರತಿ ನಾಗರಿಕರಿಗೆ ನೀಡುವ ‘ಸೋಷಿ ಯಲ್ ಸೆಕ್ಯುರಿಟಿ ಕಾರ್ಡ್’ ಇದ್ದು, ಅದನ್ನು ನಮ್ಮ ದೇಶಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಎಲ್ಲಾ ಉದ್ದೇಶ ಗಳಿಗೆ ಒಂದೇ ಗುರುತಿನ ಕಾರ್ಡನ್ನು ಬಳಸುವ ಮಹತ್ವಾಕಾಂಕ್ಷಿ ಯೋಜನೆಯ ಭಾಗ ಇದಾಗಿದೆ. ಸೋಷಿಯಲ್ ಸೆಕ್ಯುರಿಟಿ ಕಾರ್ಡು ಅಮೆರಿಕದಲ್ಲಿ ಮೊದಲು ಬಳಕೆಗೆ ಬಂದಿದ್ದು ೧೯೩೬ರಲ್ಲಿ; ಅಮೆರಿಕನ್ನರು ತಮ್ಮ ಬದುಕಿನಲ್ಲಿ ಎಷ್ಟು ಹಣ ಗಳಿಸುತ್ತಾರೆ
ಎಂಬುದನ್ನು ಲೆಕ್ಕಹಾಕಿ ಅವರಿಗೆ ನೀಡಬಹುದಾದ ಸಾಮಾಜಿಕ ಸುರಕ್ಷತಾ ಸೌಲಭ್ಯವನ್ನು ಲೆಕ್ಕಹಾಕಲು ಇದನ್ನು ಬಳಸಲಾ ಗುತ್ತಿತ್ತು.

ಕ್ರಮೇಣ, ೧೯೬೯ ರಿಂದ ೧೯೭೪ ರವರೆಗೆ ಇದನ್ನು ಅಮೆರಿಕದ ಸೇನೆ, ನೌಕಾದಳ ಮತ್ತು ಕೋಸ್ಟಲ್ ಗಾರ್ಡ್‌ವರೆಗೆ ವಿಸ್ತರಿಸ ಲಾಯಿತು. ಅಮೆರಿಕದಲ್ಲಿ ಕಾಯಂ ವಾಸ್ತವ್ಯ ಹೂಡುವ ಪ್ರತಿಯೊಬ್ಬರಿಗೆ ೯ ಅಂಕಿಗಳಿರುವ ಈ ಕಾರ್ಡ್ ಅಗತ್ಯವಾಗಿದ್ದು, ಬ್ಯಾಂಕ್ ಖಾತೆ ತೆರೆಯಲು, ಉದ್ಯೋಗ ಹಿಡಿಯಲು, ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ವ್ಯವಹಾರ ಮಾಡಲು, ತೆರಿಗೆ ಪಾವತಿಸಲು, ಸರಕಾರದ ಸೌಲಭ್ಯ ಪಡೆಯಲು ಇದು ಅತ್ಯವಶ್ಯವಾಗಿದೆ.

ವಲಸೆ ಉದ್ಯೋಗಿಗಳಿಗೂ ಈ ಕಾರ್ಡನ್ನು ನೀಡಲಾಗುತ್ತದೆ. ಒಂದು ಕಾಲಕ್ಕೆ ಭಾರತದಲ್ಲಿ ಬೇರೆ ಬೇರೆ ವ್ಯವಹಾರ ಗಳಿಗೆ ವಿಭಿನ್ನ ಬಗೆಯ ಗುರುತಿನ ಚೀಟಿಗಳನ್ನು ಕೇಳಲಾಗುತ್ತಿತ್ತು. ಇದರಿಂದಾಗಿ ಜನಸಾಮಾನ್ಯರಿಗೆ ಕಚೇರಿ ಕೆಲಸ ಗಳನ್ನು ಮಾಡಿಸಿ ಕೊಳ್ಳು ವುದು ತೊಡಕಿನ ಬಾಬತ್ತಾಗಿದ್ದರ ಜತೆಗೆ ಗೊಂದಲಕಾರಿಯಾಗಿಯೂ ಪರಿಣಮಿಸಿರುವುದನ್ನು ಗಮನಿಸಿ ದೇಶದ ನಾಗರಿಕರಿಗೂ ಅಮೆರಿಕದ ಸೋಷಿಯಲ್ ಸೆಕ್ಯುರಿಟಿ ಕಾರ್ಡ್ ಮಾದರಿಯಲ್ಲೇ ಎಲ್ಲಾ ಕಡೆ ಏಕರೂಪದಲ್ಲಿ ಬಳಸಬಹುದಾದ ಗುರುತಿನ ಚೀಟಿಯ ನ್ನೇಕೆ ನೀಡಬಾರದು ಎಂಬ ಚಿಂತನೆ ಮೊಳೆಯಿತು.

ಅದರ ಫಲವೇ ‘ಆಧಾರ್ ಕಾರ್ಡ್’. ಈ ಮಹತ್ವಾಕಾಂಕ್ಷಿ ಯೋಜನೆಗೆ ೨೦೦೯ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ನಂದನ್ ನಿಲೇಕಣಿಯವರ ನೇತೃತ್ವದಲ್ಲಿ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಚಾಲನೆ ನೀಡಿದ್ದು ಗೊತ್ತಿರುವ ಸಂಗತಿಯೇ. ಭಾರತದ ಪ್ರಸಕ್ತ ಜನಸಂಖ್ಯೆಯ ಪೈಕಿ ಇನ್ನೂ ೨೮ ದಶಲಕ್ಷ ಮಂದಿಗೆ ‘ಆಧಾರ್’ ನೀಡುವುದು ಬಾಕಿಯಿದ್ದು, ಇವರ ಪೈಕಿ ಅಲ್ಪಸಂಖ್ಯಾತರು ಮತ್ತು ಬುಡಕಟ್ಟು ಜನರು ಹೆಚ್ಚಿಗೆ ಇದ್ದಾರೆಂದು ಹೇಳಲಾಗುತ್ತದೆ.

ಆಧಾರ್ ಕಾರ್ಡ್ ನೀಡಿಕೆಯನ್ನು ಮನಮೋಹನ್ ಸಿಂಗ್ ಸರಕಾರದ ಅದ್ವಿತೀಯ ಸಾಧನೆ ಎಂದು ಬಣ್ಣಿಸಲಾಗಿದ್ದು, ಇದರ ಹಿಂದೆ ರಾಜೀವ್ ಗಾಂಧಿಯವರ ದೂರದೃಷ್ಟಿ ಇತ್ತು ಎಂದೂ ಹೇಳಲಾಗುತ್ತದೆ. ಇದರ ಹಿಂದಿರುವ ಉದ್ದೇಶ ಮತ್ತು ಆಶಯಗಳಿಗೆ
ಸ್ವಲ್ಪವೂ ಚ್ಯುತಿ ಬಾರದಂತೆ ನಂದನ್ ನಿಲೇಕಣಿಯವರು ಈ ಯೋಜನೆಯನ್ನು “clinical precision’ ರೀತಿಯಲ್ಲಿ ಕಾರ್ಯ ರೂಪಕ್ಕೆ ತಂದರು ಎಂಬುದು ಗಮನಾರ್ಹ.

ಹಾಗೆಂದ ಮಾತ್ರಕ್ಕೆ ‘ಆಧಾರ್’ ಪರಿಪೂರ್ಣವಲ್ಲ; ಅಷ್ಟೇಕೆ, ಯಾವುದೇ ಯೋಜನೆಯಾದರೂ ಅದು ಪರಿಪೂರ್ಣವಾಗಿರುತ್ತದೆ
ಎಂದು ಹೇಳಲು ಸಾಧ್ಯವಿಲ್ಲ. ಕಾಲಕ್ರಮೇಣ ಅದರಲ್ಲಿನ ನ್ಯೂನತೆಗಳು ಹೊರಬರುತ್ತವೆ. ಆದರೆ ಪ್ರತಿಯೊಂದು ಕಡೆಯೂ ವ್ಯಕ್ತಿಯ ಗುರುತಿಗಾಗಿ ‘ಆಧಾರ್’ ಅನ್ನು ಕೇಳಲಾಗುತ್ತಿದ್ದು, ಇದು ತಿರುಪತಿ ಪ್ರಸಾದದಂತೆ ಹಂಚಿಕೆಯಾಗುತ್ತಿದೆ ಮತ್ತು ವ್ಯಕ್ತಿಯ ವೈಯಕ್ತಿಕ ಮಾಹಿತಿಯ ಸೋರಿಕೆಯಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಮಾಹಿತಿ ಹೇಗೆ ಸೋರಿಕೆಯಾಗುತ್ತಿದೆ
ಎಂಬುದರ ಬಗ್ಗೆ ನಿಖರ ವಿವರಗಳಿಲ್ಲ. ಆದರೆ ಸರಕಾರಿ ಕಚೇರಿ ಸೇರಿದಂತೆ ಯಾವುದೇ ಕೆಲಸ-ಕಾರ್ಯಗಳಿಗೆ/ ವ್ಯವಹಾರಕ್ಕೆ ಮುಂದಾದಾಗಲೂ ಗುರುತಿಗಾಗಿ ‘ಆಧಾರ್’ ಪ್ರತಿಯನ್ನು ಕೇಳುವುದಂತೂ ನಿಜ.

ಹೀಗಾಗಿ, ಆರಂಭದಲ್ಲಿ ನಾನು ಉಲ್ಲೇಖಿಸಿದ ಆ ಹಿರಿಯ ನಾಗರಿಕರು ‘ಆಧಾರ್’ ಕಾರ್ಡಿನ ೫೦ ಪ್ರತಿಗಳನ್ನು ಮಾಡಿಸುತ್ತಿದ್ದುದು ಸಹಜವಾಗೇ ಇದೆ. ಸರಕಾರೇತರ/ಖಾಸಗಿ ಸಂಸ್ಥೆಗಳಲ್ಲೂ ಆಧಾರ್‌ಗಾಗಿ ಕೇಳುತ್ತಿರುವುದರಿಂದ ವ್ಯಕ್ತಿಯ ಖಾಸಗಿತನವು
ಸಾರ್ವಜನಿಕವಾಗಿ ಸೋರುತ್ತದೆ ಎನ್ನುವ ಆರೋಪದಲ್ಲಿ ಸ್ವಲ್ಪ ತಥ್ಯ ಕಾಣುತ್ತದೆ. ಸಮಸ್ಯೆ ಇರುವುದು ಕಾಡ್ ಗಳಿಗಿಂತ ಹೆಚ್ಚಾಗಿ ಅವನ್ನು ಲಿಂಕ್ ಮಾಡುವುದರಲ್ಲಿ. ಇತ್ತೀಚೆಗೆ ಆಧಾರ್ ಅನ್ನು ಬ್ಯಾಂಕ್ ಖಾತೆಗಳಿಗೆ, ಆದಾಯಕರ ಇಲಾಖೆಯ ಪಾನ್‌ಕಾರ್ಡ್‌ಗೆ, ಮೊಬೈಲ್ ಸಂಖ್ಯೆಗೆ, ಆಸ್ತಿ ವ್ಯವಹಾರದಲ್ಲಿ (ಖರೀದಿ-ಮಾರಾಟ), ಹೂಡಿಕೆ ಮಾಡುವಾಗ ಮತ್ತು ಹಿಂಪಡೆಯುವಾಗ, ವಾಹನ ಖರೀದಿ ಮತ್ತು ಮಾರಾಟದ ವೇಳೆ, ಹಣಕಾಸು ವ್ಯವಹಾರದ ವೇಳೆ ಲಿಂಕ್ ಮಾಡುತ್ತಿರುವುದರಿಂದ ಕಾಡ್ ನಲ್ಲಿನ ಮಾಹಿತಿಗಳು ಸೋರಿಕೆಯಾಗುವುದಕ್ಕೆ ಹೆಚ್ಚು ಅವಕಾಶ ಕಲ್ಪಿಸಿಕೊಟ್ಟಂತಾಗಿದೆ ಎಂದು ಹೇಳಲಾಗುತ್ತದೆ.

ಯಾರದೋ ಆಧಾರ್ ಕಾರ್ಡ್ ಬಳಸಿ ಬ್ಯಾಂಕ್‌ನಲ್ಲಿ ಸಾಲಪಡೆದು ವಂಚಿಸಿದ ಪ್ರಕರಣಗಳೂ ಇವೆ. ಸೈಬರ್ ಕಳ್ಳರು, ವಂಚಕರು ಮತ್ತು ಖದೀಮರು ಇದನ್ನು ದುರುಪಯೋಗ ಮಾಡಿಕೊಂಡ ಉದಾಹರಣೆಗಳೂ ಇವೆ. ಜನರನ್ನು ಗುರುತಿಸುವ ಈ ಆಧಾರ್ ವ್ಯವಸ್ಥೆ ದೇಶದಲ್ಲಿ ಜಾರಿಗೆ ಬಂದು ೧೩ ವರ್ಷಗಳಾಗಿದ್ದು, ಅನುಭವದ ಆಧಾರದ ಮೇಲೆ ಇದರಲ್ಲಿನ ನ್ಯೂನತೆಗಳನ್ನು ಪಟ್ಟಿ ಮಾಡಿಕೊಂಡು ಇದನ್ನು ಮರುಪರಿಷ್ಕರಿಸುವ ಕಾಲ ಸನ್ನಿಹಿತವಾಗಿದೆ.

ಆಧಾರ್ ಕಾರ್ಡುಗಳನ್ನು ಪಡೆದವರ ಪೈಕಿ ಅದೆಷ್ಟೋ ಜನರು ಮೃತರಾಗಿರಬಹುದು, ವಿಳಾಸ ಸೇರಿದಂತೆ ಹಲವರ ವೈಯಕ್ತಿಕ ಮಾಹಿತಿಗಳಲ್ಲಿ ಬದಲಾವಣೆಯಾಗಿರಬಹುದು, ಭಾವ ಚಿತ್ರ ತೀರಾ ಹಳತಾಗಿದ್ದು ಗುರುತಿಸಲು ಕಷ್ಟವಾಗುವಂತಿರಬಹುದು. ‘ಬಾಲ’ ಆಧಾರ್ ಕಾರ್ಡುದಾರರು ವಯಸ್ಕರಾಗಿರಬಹುದು. ಅಷ್ಟೇಕೆ, ಕೆಲವು ಅನರ್ಹರು ಕಾರ್ಡ್ ಪಡೆದಿರಬಹುದು. ಏಕೆಂದರೆ,
ಹೊರದೇಶದಿಂದ ಅಕ್ರಮವಾಗಿ ಭಾರತದೊಳಗೆ ನುಸುಳಿ, ವಾಮಮಾರ್ಗದಲ್ಲಿ ಆಧಾರ್ ಕಾರ್ಡ್ ಪಡೆದವರು ಸಾಕಷ್ಟು ಸಂಖ್ಯೆ ಯಲ್ಲಿದ್ದಾರಂತೆ.

ಆದ್ದರಿಂದ, ಕಾಳಿನಿಂದ ಜೊಳ್ಳನ್ನು ಬೇರ್ಪಡಿಸಿ, ಆಧಾರ್ ವ್ಯವಸ್ಥೆಯನ್ನು ಮತ್ತಷ್ಟು ಉನ್ನತೀಕರಣಗೊಳಿಸುವ ಮತ್ತು ಅದು ಇನ್ನೂ ಹೆಚ್ಚು ‘”tamper proof’’ ಆಗುವಂತೆ ನೋಡಿಕೊಳ್ಳುವ ಅಗತ್ಯವಿದೆ. ಅವನ್ನು ದುರುಳರು, ಖದೀಮರು, ಅದರಲ್ಲೂ ಮುಖ್ಯವಾಗಿ ಸೈಬರ್ ವಂಚಕರು ದುರುಪಯೋಗ ಪಡಿಸಿಕೊಂಡು ಅಮಾಯಕರು ಅವರ ಜಾಲಕ್ಕೆ ಬಲಿಯಾಗದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಅವಶ್ಯಕತೆ ಹಿಂದೆಂದಿಗಿಂತ ಹೆಚ್ಚಾಗಿದೆ.