Wednesday, 18th September 2024

ಅಜರಾಮರ ಚೇತನ: ವೈವಿಧ್ಯಮಯ ವ್ಯಕ್ತಿತ್ವದ ಉಮೇಶ ಭಟ್

ಸಂಸ್ಮರಣೆ

ಪಿ.ಎಸ್.ಸದಾನಂದ

(ಇಂದು ಐದನೇ ಪುಣ್ಯಸ್ಮರಣೆ)

ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಪರಮಾಪ್ತ, ರಾಮಕೃಷ್ಣ ಹೆಗಡೆ ಸೇರಿದಂತೆ ಎಲ್ಲ ಮುತ್ಸದ್ದಿ ರಾಜಕಾರಣಿಗಳ ಸಲುಗೆ, ೧೯೮೯ರಲ್ಲಿ ಅಂಕೋಲಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ, ಒಂದೇ ಅವಧಿಗೆ ಶಾಸಕರಾದರೂ ಸದಾ ನೆನಪಿನಲ್ಲಿ ಉಳಿದ ನಾಯಕ, ಸಾಧಕ. ಶಿಕ್ಷಣ ಕ್ಷೇತ್ರದಲ್ಲಿಯೂ ಮಹತ್ತರ ಸಾಧನೆ ಮಾಡಿದ ಉಮೇಶ ಭಟ್ ಅವರ ೫ನೇ ಪುಣ್ಯಸ್ಮರಣೆ ಇಂದು. ತನ್ನಿಮಿತ್ತ ಈ ವಿಶೇಷ ಲೇಖನ.

ಅವರು ಮರೆತುಹೋಗುವವರಲ್ಲ. ಅವರೊಡನೆ ಒಡನಾಟಕ್ಕೆ ಬಂದವರು ಅವರಿಗೆ ಆಕರ್ಷಿತರಾಗಿ ಭಾವ ಬಂಧನದ ಪ್ರಕ್ರಿಯೆಗೆ ಒಳಗಾಗಿಬಿಡುತ್ತಿದ್ದರು.
ಏಕೆಂದರೆ ಅವರ ವರ್ತನೆಯಲ್ಲಿ ‘ಬಡಿದಾಟ’ವಿರುತ್ತಿರಲಿಲ್ಲ; ಒಣ ‘ಬಡಿವಾರ’ ಎದ್ದು ನಿಲ್ಲುತ್ತಿರಲಿಲ್ಲ. ಅಲ್ಲಿರುತ್ತಿದ್ದುದು ನೇರ, ತೆರೆದ ಅವರದ್ದೇ ಶೈಲಿಯ ಮಾತು ಗಳು. ಅದರಲ್ಲಿ ಅರ್ಥವಿರುತ್ತಿತ್ತು. ಒಂದು ವಾಸ್ತವವಿರುತ್ತಿತ್ತು.

ಅದರಲ್ಲಿ ತಮಾಷೆಯ ಧ್ವನಿ-ಭಾವವು ಮಿಳಿತವಾಗಿರುತಿತ್ತು. ಇವೆಲ್ಲದರ ಜತೆಗೆ ಅವರದೇ ಆದ ಒಂದು ಸುಂದರ ಮಂದಸ್ಮಿತ ನಗು. ಇವೆಲ್ಲವೂ ಸೇರಿ ಅವರತ್ತ ಸೆಳೆದುಬಿಡುತ್ತಿತ್ತು. ಬೇಡಿಕೆಯ ಸಮಸ್ಯೆಯನ್ನು ಹೇಳಿಕೊಳ್ಳಲು ಬಂದವರ ಮಾತನ್ನು ತದೇಕ ಚಿತ್ತದಿಂದ ಆಲಿಸಿ, ಅದು ಸಾಧ್ಯವಿದ್ದರೆ, ‘ಮಾಡಿ ಕೊಡುತ್ತೇನೆ. ನೀ ಹೋಗೋ’ ಎಂಬ ಅಭಯಹಸ್ತ. ಅವರು ಹಾಗೆ ಹೇಳಿದಾಗ ‘ತಮ್ಮ ಕೆಲಸವಾದಂತೆ ಎಂಬ ಸಂತೃಪ್ತಿ’ ಬಂದವರಲ್ಲಿ ಮೂಡಿ ಬಿಡುತ್ತಿತ್ತು.

ಉತ್ತರ ಕನ್ನಡ ಜಿಲ್ಲೆಯ ರಾಜಕೀಯ, ಶೈಕ್ಷಣಿಕ, ಮಾಧ್ಯಮ (ಪತ್ರಿಕೆ), ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಉಮೇಶ ಭಟ್ ಅವರು ಅಂಕೋಲಾ ತಾಲೂಕಿನ ಬಾವಿಕೇರೆಯವರು. ಬೆಂಗಳೂರಿನಲ್ಲೇ ಬಹುಕಾಲ ನೆಲೆಸಿದ್ದರೂ ಇಲ್ಲಿಯ ಮಣ್ಣಿನ ವಾಸನೆಯ ಸೊಗಡನ್ನು ಮರೆತವರಲ್ಲ. ‘ಬೆಂಗಳೂರಿ ನಲ್ಲಿ ಎಲ್ಲಾ ಐಷಾರಾಮಿ ಜೀವನ ಬಿಟ್ಟು ಇಲ್ಲಿಗೆ (ಉ.ಕ. ಜಿಲ್ಲೆಗೆ) ಬಂದಾಗ ಸಿಗುವ ನೆಮ್ಮದಿ, ಸಮಾಧಾನ, ಸಂತಸ, ಹರ್ಷ ಎಲ್ಲಿಯೂ ಸಿಗುವುದಿಲ್ಲ. ಇಲ್ಲಿನ ಜನರ, ಪರಿಸರ, ಅರಣ್ಯದ ನಡುವಿನ ಬದುಕು ಸೂರ್ತಿ ಮೂಡಿಸುತ್ತದೆ’ ಎಂದು ಹಲವು ಬಾರಿ ಹೇಳುತ್ತಿದ್ದರು. ಅಂತೆಯೇ ತಿಂಗಳು ಎರಡು ತಿಂಗಳಿಗೊಮ್ಮೆಯಾದರೂ ಇಲ್ಲಿ ಬಂದು ಕೆಲ ದಿನ ಉಳಿದು ಹೋಗುತ್ತಿದ್ದರು.

ಅವರ ಜೀವನ ನಡೆಯ ಒಂದು ರೂಢಿಯಾಗಿತ್ತು. ಹೀಗೆಂದ ಮಾತ್ರಕ್ಕೆ ಈ ಉಳಿವಿಕೆಯ ಅವಽಯಲ್ಲಿ ನಿಷ್ಕ್ರಿಯರಾಗಿ ಬಿಡುತ್ತಿದ್ದರು ಎಂದಲ್ಲ. ಶೈಕ್ಷಣಿಕ, ಆಡಳಿತ, ರಾಜಕಾರಣದ ಮಜಲು, ಪತ್ರಿಕೆ ಆಡಳಿತ, ಸಾಮಾಜಿಕ ಸಮಸ್ಯೆಗಳ ಪರಾಮರ್ಶೆ ಹೀಗೆ ಹಲವು ರಂಗಗಳಲ್ಲಿ ಅರ್ಪಿತರಾಗಿ ಬಿಡುತ್ತಿದ್ದರು.

ಸರಳ-ನಿಗರ್ವಿ: ಉಮೇಶ ಭಟ್ಟರದ್ದು ಸರಳ, ನಿಗರ್ವಿ ವ್ಯಕ್ತಿತ್ವ. ಚಿಂತನಾಶೀಲತೆ ಅವರ ವ್ಯಕ್ತಿತ್ವದ ಒಂದು ಭಾಗವೇ ಆಗಿಹೋಗಿತ್ತು. ಅವರು ಹಲವು ಬಾರಿ ಪತ್ರಿಕಾಗೋಷ್ಠಿಯನ್ನು ನಡೆಸುತ್ತಿದ್ದರು. ನಾನು ಪಾಲ್ಗೊಂಡ ಪ್ರಥಮ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ನಾನು ಕೇಳಿದ ಸಾಂದರ್ಭಿಕ ಪ್ರಶ್ನೆಯು ಅವರನ್ನು ಸೆಳೆದಿತ್ತು. ಗೋಷ್ಠಿ ಮುಗಿದ ನಂತರ ನನ್ನನ್ನು ಕರೆದು ‘ನಿಮ್ಮ ಪತ್ರಿಕೆ ಯಾವುದು?’ ಎಂದು ಕೇಳಿದ್ದು ನನಗಿನ್ನೂ ನೆನಪಿದೆ. ಆಗ ಇವಿಷ್ಟೇ ಅವರ ನನ್ನ ನಡುವಿನ ಒಡನಾಟ.

‘ಲೋಕಧ್ವನಿ’ ಪತ್ರಿಕೆಯನ್ನು ಆರಂಭಿಸಿ ಅದನ್ನು ಜನವಿಶ್ವಾಸ ದೊಂದಿಗೆ ಗಟ್ಟಿಯಾಗಿ ಬೆಳೆಸಿದ್ದ ಗೋಪಾಲಕೃಷ್ಣ ಆನವಟ್ಟಿ ಅವರು ‘ಪತ್ರಿಕೆ ಸಮಾಜದ ಆಸ್ತಿ; ಅದು ಸಮಾಜದ ಧ್ವನಿ, ಅದು ಶಾಶ್ವತವಾಗಿ ಉಳಿಯಬೇಕು. ಅದು ವ್ಯಕ್ತಿಗತವಾಗಿ ಉಳಿದು, ಅವರ ನಂತರ ಅದು ನಿಂತು ಹೋಗಬಾರದು’ ಎಂಬ ಉದ್ದೇಶದಿಂದ ಅದನ್ನು ಸಮಾಜಕ್ಕೆ ಒಪ್ಪಿಸಲು ಮುಂದಾದರು. ಈ ಹಿನ್ನೆಲೆಯಲ್ಲಿ ‘ಜನಶಕ್ತಿ ವಿಶ್ವಸ್ಥ ಮಂಡಳಿ’ ಸ್ಥಾಪಿಸಿಕೊಂಡು ಲೋಕಧ್ವನಿ ಟ್ರಸ್ಟಿನ ಸುಪರ್ದಿಗೆ ಬಂತು (೨೦೦೧). ಟ್ರಸ್ಟ್‌ನ ಸಂಸ್ಥಾಪಕ ಟ್ರಸ್ಟಿಗಳಾಗಿ ಪತ್ರಿಕೆಯನ್ನು ಉಮೇಶ ಭಟ್ ವಹಿಸಿಕೊಂಡಾಗ ಅವರ ಹೆಜ್ಜೆ ಪತ್ರಿಕಾ ಕ್ಷೇತ್ರದಲ್ಲಿ ಪ್ರಥಮ ಸ್ಪರ್ಶ ಮಾಡಿತು (ಪ್ರಪ್ರಥಮವಾಗಿ ಜನಶಕ್ತಿ ವಿಶ್ವಸ್ಥ ಮಂಡಳಿಯಲ್ಲಿ ಟ್ರಸ್ಟಿಗಳಾಗಿ ಉಮೇಶ ಭಟ್, ಉಮಾಮಹೇಶ್ವರ ಭಟ್, ಎಸ್.ಬಿ. ಹಿರೇಮಠ, ಗೋಪಾಲಕೃಷ್ಣ ಆನವಟ್ಟಿ, ಸುಬ್ರಹ್ಮಣ್ಯ ಹೆಗಡೆ, ಎಸ್.ವಿ. ಹೆಗಡೆ ಮತ್ತು ಪಿ.ಎಸ್. ಸದಾನಂದ ಒಳಗೊಂಡಿದ್ದರು).

ಲೋಕಧ್ವನಿಯ ಬೆಳವಣಿಗೆಯಲ್ಲಿ ಮೈಲು ಗಲ್ಲು ಸಾಧನೆಗೆ ಕಾರಣವಾಯಿತು. ಅವರ ಪರಮಾಪ್ತರಾದ ಎಸ್.ಬಿ. ಹಿರೇಮಠ (ಶಿರಸಿ) ಅವರು ಉಮೇಶ ಭಟ್ಟರೊಂದಿಗೆ ಗಟ್ಟಿಯಾಗಿ ಕೈ ಜೋಡಿಸಿದ್ದು ಇತಿಹಾಸ. ‘ನನಗೆ ಪತ್ರಿಕಾ ಕ್ಷೇತ್ರದ ಗಂಧಗಾಳಿಯೂ ಗೊತ್ತಿಲ್ಲ. ಅದರ ನಡೆ, ವರ್ತನೆ ನನಗೆ ತಿಳಿದಿಲ್ಲ. ನೀವೇ ನಡೆಸಬೇಕು’ ಎಂದು ಜನಶಕ್ತಿ ವಿಶ್ವಸ್ಥ ಮಂಡಳಿಯ ಪ್ರಥಮ ಸಭೆ ಯಲ್ಲಿ ತೆರೆದ ಪುಸ್ತಕದಂತೆ ಹೇಳಿಕೊಂಡಿದ್ದು ಇನ್ನೂ ಸದಾ ಹಸಿರು. ಆದರೆ,
ಅವರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಪತ್ರಿಕಾ ರಂಗದ ಒಳ-ಹೊರಗು, ಪತ್ರಿಕಾಧರ್ಮ, ಜನ ವಿಶ್ವಾಸ. ಮುನ್ನಡೆಸುವಿಕೆ ಇತ್ಯಾದಿಗಳ ಬಗ್ಗೆ ಬಹುಬೇಗನೆ ಅರಿವು ಮೂಡಿಸಿಕೊಂಡವರು ಉಮೇಶ ಭಟ್.

‘ಲೋಕಧ್ವನಿ’ ಬೆಳೆಯಬೇಕು. ಹೆಮ್ಮರವಾಗಬೇಕು ಎಂದು ಸಂಕಲ್ಪಿಸಿಕೊಂಡ ಉಮೇಶ ಭಟ್ಟರ ಶ್ರಮದಿಂದಲೇ ‘ಲೋಕ ಧ್ವನಿ’ ಸ್ವಂತ ನಿವೇಶನ, ಸ್ವಂತ ಕಟ್ಟಡ ಹೊಂದಲು ಸಾಧ್ಯವಾಯಿತು. ಅವರು ಅಲ್ಲಿಗೇ ನಿಲ್ಲಲಿಲ್ಲ. ಪತ್ರಿಕೆ ‘ಕಲರ್’ನಲ್ಲಿ ಪ್ರಕಟಗೊಳ್ಳಬೇಕು ಎಂಬ ಪ್ರಬಲ ಆಕಾಂಕ್ಷೆಯ ಫಲವಾಗಿ ವೆಬ್ ಪ್ರಿಂಟಿಂಗ್ ಮಷಿನ್ ಅನ್ನು ಅಳವಡಿಸಿ ಬಣ್ಣದ ಕನಸನ್ನು ಸಾಕಾರಗೊಳಿಸಿದ ಕೀರ್ತಿಯು ಅವರಿಗೆ ಸಲ್ಲಲೇಬೇಕು. ಈ ಎಲ್ಲ ಆಯಾಮಗಳಲ್ಲಿ ಉಮೇಶ ಭಟ್ಟರ ಇಚ್ಛಾಶಕ್ತಿ, ಕ್ರಿಯಾಶೀಲತೆ, ದೂರದರ್ಶಿತ್ವ ಕಾರ್ಯ ಮಾಡಿದ್ದು ದಾಖಲಾದ ಸಂಗತಿ. ಪತ್ರಿಕೆಯು ಆಧುನಿಕ ಬೆಳವಣಿಗೆಯೊಂದಿಗೆ ಮುನ್ನಡೆಯಲು ಅವರು ಕಾರಣರಾದರು.

ಉಮೇಶ ಭಟ್ಟರು ಪತ್ರಿಕಾ ಧರ್ಮದ ನಿಜ ಸ್ವರೂಪವನ್ನು ತಿಳಿದುಕೊಂಡಿದ್ದರು. ಅಂತೆಯೇ ಅವರು ‘ಪತ್ರಿಕೆ ನನ್ನದಲ್ಲ, ಜನರದ್ದು. ಅದು ಜನರ ನೈಜ ಧ್ವನಿಯಾಗಬೇಕು. ಜನರ ನೋವು, ನಲಿವು, ಸಮಸ್ಯೆಗಳನ್ನು ಬಿಂಬಿಸಬೇಕು’ ಎಂದು ಹಲವು ಸಲ ಹೇಳುತ್ತಿದ್ದರು. ಕೊನೆಗೆ ಅವರು ಪತ್ರಿಕಾ ಕ್ಷೇತ್ರದ ಬಗ್ಗೆ ಎಷ್ಟು ಪಳಗಿದ್ದರೆಂದರೆ, ಸುದ್ದಿಯ ಸುಳಿವನ್ನು ನೀಡಿ, ಈ ಸುದ್ದಿಯನ್ನು ಹೀಗೆ ಬರೆಯಬೇಕು. ಅದರಿಂದ ಹೆಚ್ಚು ಗಮನ ಸೆಳೆಯುತ್ತದೆ ಯೇನೋ? ನಾನು
ಹೇಳಿದಂತೆ ಬರೆಯ ಬೇಕೆಂದು ಹೇಳುವುದಿಲ್ಲ. ನಿಮ್ಮ ಬರಹ ಸ್ವಾತಂತ್ರ್ಯದಲ್ಲಿ ಕೈ ಆಡಿಸುವುದಿಲ್ಲ ಎಂದು ವಿಶಾಲವಾಗಿ ನಗುತ್ತಿದ್ದರು. ಅವರ ಪತ್ರಿಕಾ ವರದಿಗಾರಿಕೆ ಸಲಹೆ ನಿಜಕ್ಕೂ ಅದ್ಭುತವೇ ಆಗಿರುತ್ತಿತ್ತು. ಅವರ ಸಲಹೆ ಸೂಚನೆ ಸೂಕ್ತವಾಗಿಯೂ ಇರುತ್ತಿತ್ತು.

ಆಸಕ್ತಿ ಇದ್ದರೆ ಏನನ್ನು ಬೇಕಾದರೂ ಕಲಿಯಬಹುದು ಎಂಬುದಕ್ಕೆ ಅವರು ಸಾಕ್ಷಿಯಾಗಿದ್ದರು. ಪತ್ರಿಕಾ ರಂಗದ ‘ಓಂಕಾರ’ ಗೊತ್ತಿರದೆ ಬಂದವರು ನಂತರದ ದಿನಗಳಲ್ಲಿ ‘ಝೇಂಕಾರ’ವಾಗಿದ್ದು ಆಶ್ಚರ್ಯಕರವಾಗಿತ್ತು. ಅಂತೆಯೇ ಅವರು ‘ಲೋಕಧ್ವನಿ’ ಒಳಗಿನ ಸ್ಪೂರ್ತಿಯಾಗಿದ್ದರು. ಆ ಸ್ಪೂರ್ತಿ
ಇನ್ನೂ ಬತ್ತಿಹೋಗಿಲ್ಲ. ಬತ್ತುವುದಿಲ್ಲ. ಅದು ಒಳಹರಿವಿನ ಗಂಗೆ. ಇದೊಂದೆಡೆಯಾದರೆ ‘ಲೋಕಧ್ವನಿ’ ನನ್ನದು. ನನಗೆ ಪ್ರಚಾರ ನೀಡಿ ಎಂದು ಅವರು ಹೇಳಿಕೊಳ್ಳಲಿಲ್ಲ. ಅಂತೆಯೇ ಸಂಪಾದಕೀಯ ವಿಭಾಗದಲ್ಲಿ ಅಡೆತಡೆಯಾಗಲಿಲ್ಲ. ಮುಕ್ತತೆಯ ಅನಂತತೆ ಕಂಡಿತ್ತು. ಅವರ ಹೃದಯ ಯಾವಾಗಲೂ
ಲೋಕಧ್ವನಿಗಾಗಿ ಮಿಡಿಯುತ್ತಿತ್ತು, ತುಡಿಯುತ್ತಿತ್ತು.

ಶಿಕ್ಷಣವೇ ಜನಸಾಮಾನ್ಯರ ಬದುಕಿಗೆ ಬೆಳಕು: ಉಮೇಶ ಭಟ್ಟರದ್ದು ಉ.ಕ. ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲೂ ಛಾಪು ಮೂಡಿಸಿದ ಹೆಜ್ಜೆ. ಶೈಕ್ಷಣಿಕ ಕ್ಷೇತ್ರಕ್ಕೆ ಅವರದ್ದು ಅಪಾರ ಕೊಡುಗೆ. ಅದು ಅರಿವಿನ ಬೆಳಕಿತ್ತ ದರ್ಶನ. ಯಲ್ಲಾಪುರದಲ್ಲಿ ಇಂದು ಬೆಳೆದು ನಿಂತಿರುವ ‘ವಿಶ್ವ ದರ್ಶನ ಶಿಕ್ಷಣ ಸಂಸ್ಥೆ’ ಅವರು ಬಿತ್ತಿದ ಬೀಜ. ಅವರು ನೀರೆರೆದು ಬೆಳಸಿದ ಫಲ. ದೀನದಲಿತರ ಬಗೆಗಿನ ಅವರ ಸಾಮಾಜಿಕ ಕಾಳಜಿಗೆ ಸಾಕ್ಷಿಯಾಗಿ ನಿಂತಿರುವ ವಿದ್ಯಾದೇಗುಲ. ವಿಶ್ವ ದರ್ಶನ ಶಿಕ್ಷಣ ಸಂಸ್ಥೆಯ ಆರಂಭಿಕ ದಶಕಗಳಲ್ಲಿ ಹಣವನ್ನು ಕ್ರೋಡೀಕರಿಸಿ ಮೂಲಸೌಕರ್ಯ ಒದಗಿಸಿ ವಿದ್ಯಾ ಸಂಸ್ಥೆಯನ್ನು ಮುನ್ನಡೆಸುವ ಸವಾಲನ್ನು ಅವರು ಸಮರ್ಥವಾಗಿ ನಿಭಾಯಿಸಿದರು. ಇದಕ್ಕಾಗಿ ಅವರು ಶ್ರಮಪಟ್ಟಿದ್ದು ಕಠಿಣ ಹಾದಿಯಲ್ಲಿ, ಅದಿಂದು ಇತಿಹಾಸ. ಈ ವಿಶ್ವ ದರ್ಶನ ಶಿಕ್ಷಣ ಸಂಸ್ಥೆಯು ಹುಟ್ಟಲು ಉಮೇಶ ಭಟ್ಟರಲ್ಲಿ ಪ್ರೇರಣೆ ಎದ್ದೇಳಲು ಕಾರಣವಾಗಿದ್ದು ಕಡು ಬಡ ಮಹಿಳೆಯೊಬ್ಬಳ ದೀನ ಅಳಲು. ತನ್ನ ಮಗಳಿಗೆ
ಯಾವುದಾದರೂ ಶಾಲೆಯಲ್ಲಿ ಪ್ರವೇಶ ಕೊಡಿಸಲು ದೀನತೆಯಲ್ಲಿ ಬೇಡಿದ ಸಂದರ್ಭ.

ಈ ಘಟನೆಯನ್ನು ಉಮೇಶ ಭಟ್ಟರೇ ಹಲವು ಸಲ ನೆನಪಿಸಿಕೊಂಡಿದ್ದಾರೆ. ‘ಒಂದು ದಿನ ಹಿಂದುಳಿದ ವರ್ಗದ ಬಡ ಮಹಿಳೆಯೊಬ್ಬಳು ಯಾರದೋ ಸಹಾಯ ಪಡೆದು ನನ್ನನ್ನು ಭೇಟಿಯಾದಳು. ನನ್ನ ಮಗಳಿಗೆ ಯಾವ ಶಾಲೆಯವರೂ ಪ್ರವೇಶ ನೀಡುತ್ತಿಲ್ಲ. ನಾನು ಕಡು ಬಡವಳು. ಎಲ್ಲಿಯಾದರೂ ಪ್ರವೇಶ ಕಲ್ಪಿಸಿಕೊಡಿ ಎಂದು ಕಣ್ಣೀರು ಹಾಕಿದಳು. ಅದು ನನ್ನ ಅಂತಃಕರಣವನ್ನು ಕಲುಕಿತು. ಆಗಲೇ ಮನಸ್ಸಲ್ಲಿ ಸಂಕಲ್ಪಿಸಿದೆ ವಿದ್ಯಾಸಂಸ್ಥೆಯನ್ನು ಸ್ಥಾಪಿಸಬೇಕೆಂದು. ನನ್ನ ಈ ಭಾವನೆ ಗಟ್ಟಿಯಾಗಿತ್ತು. ಇದಕ್ಕೆ ಹಲವರ ಸಹಕಾರವು ಕೈಜೋಡಿಸಿತು. ಅದರ -ಲವೇ ಯಲ್ಲಾಪುರ ವಿಶ್ವದರ್ಶನ ಶಿಕ್ಷಣ
ಸಂಸ್ಥೆ. ನಾನು ರಾಜಕಾರಣಿ ಯಾಗಿ ಸಮಾಜಕ್ಕೆ ಕೊಟ್ಟ ಕಾರ್ಯವಿದು. ಇದರಲ್ಲಿ ನನಗೆ ಸಂತೃಪ್ತಿಯಿದೆ’ ಎಂದು ಅವರು ಹೆಮ್ಮೆ ವ್ಯಕ್ತಪಡಿಸುತ್ತಿದ್ದರು.

ಸಮಾಜಕ್ಕೆ ವಿದ್ಯೆಯ ಬೆಳಕು ನೀಡಿ ಅವರು ಪಡೆದ ಸಂತೃಪ್ತಿಯಲ್ಲಿ ನಿಜಕ್ಕೂ ಅರ್ಥವಿದೆ. ಅವರು ಸಮಾಜದ ಋಣ ತೀರಿಸಿದ ರೀತಿಯಿದು.

ಸಾಮಾಜಿಕ ತುಡಿತದ ವ್ಯಕ್ತಿ-ಶಕ್ತಿ: ತಮ್ಮ ಸಮ ಕಾಲೀನ ರಾಜಕೀಯ ಸಂದರ್ಭದಲ್ಲಿ ಪ್ರಭಾವಿ ರಾಜಕಾರಣಿಯಾಗಿದ್ದ ಉಮೇಶ ಭಟ್ಟರ ಸಂಪರ್ಕ,
ಸಂಬಂಧ ವಿಸ್ತಾರವಾಗಿತ್ತು. ಸರಕಾರದ ಮಟ್ಟದಲ್ಲೂ ಅವರ ಮಾತಿಗೆ ಗೌರವ, ಮನ್ನಣೆ ಇತ್ತು. ಜನಪ್ರತಿನಿಧಿಗಳಿಂದ ಆಗದ ಕೆಲಸವನ್ನು ಅವರು ಸಾಧಿಸುತ್ತಿದ್ದುದು ಅವರ ವಿಶೇಷ ವರ್ಚಸ್ಸಿಗೆ ದ್ಯೋತಕವಾಗಿತ್ತು. ಅಂತೆಯೇ ‘ನಿಮ್ಮ ಕೆಲಸವಾಗ ಬೇಕೆ? ಉಮೇಶ ಭಟ್ಟರಲ್ಲಿ ಹೇಳಿಕೊಳ್ಳಿ, ನಿಮ್ಮ ಕೆಲಸ ವಾದಂತೆ’ ಎಂದು ಜನತೆ ಹೇಳಿಕೊಳ್ಳುವಷ್ಟು ಕ್ರಿಯಾಶೀಲ, ಜನಪರ ವ್ಯಕ್ತಿಯಾಗಿದ್ದರು. ರಸ್ತೆ, ಶಾಲಾ ಕಟ್ಟಡ, ಕಾಲು ಸಂಕ ಹೀಗೆ ಹಲವು ಕಾರ್ಯ ಗಳಿಗಾಗಿ ಸರಕಾರದಿಂದ ಹಣ ಮಂಜೂರು ಮಾಡಿಸಿಕೊಟ್ಟು ಸಮಾಜದ ಅಭಿವೃದ್ಧಿಗಾಗಿ ದುಡಿದವರು ಉಮೇಶ ಭಟ್ಟರು.

ದೇವರು, ಭವಿಷ್ಯ ಇತ್ಯಾದಿಗಳಲ್ಲಿ ಅಪಾರ ನಂಬಿಕೆ ಹೊಂದಿದ್ದ ಅವರು ದೇವಸ್ಥಾನಗಳಿಗೆ ದೇಣಿಗೆಯನ್ನು ನೀಡಿ ನೆರವಾದರು. ಮತ್ತೊಮ್ಮೆ ಶಾಸಕರಾಗ ಬೇಕೆಂಬುದು ಅವರ ಅಂತರಂಗದ ಪ್ರಬಲ ಇಚ್ಛೆಯಾಗಿತ್ತು. ಅದನ್ನು ಹಲವು ಸಲ ಹೇಳಿ ಕೊಂಡಿದ್ದರು. ಆದರೆ ಹಲವು ರಾಜಕೀಯ ಬೆಳವಣಿಗೆ,
ಕುತಂತ್ರಗಳಿಂದಾಗಿ ಅವರ ಇಚ್ಛೆ ಈಡೇರದೇಹೋಯಿತು. ಕೃಷಿಯಲ್ಲಿ ಆಸಕ್ತಿ ಹೊಂದಿದ್ದ ಉಮೇಶ ಭಟ್ಟರು ಯಲ್ಲಾಪುರ ತಾಲೂಕಿನಲ್ಲಿ ಸ್ವಂತ ಜಮೀನು ಹೊಂದಿ ಅಡಕೆ, ತೆಂಗಿನ ತೋಟವನ್ನು ಅಭಿವೃದ್ಧಿ ಪಡಿಸಿದ್ದರು. ಆಧುನಿಕ ಹೂವಿನ ಕೃಷಿಗೆ ಮುಂದಾಗಿ ಕೈಸುಟ್ಟುಕೊಂಡರು.

ಸುವರ್ಣ ಕೃಷಿಯನ್ನೂ ಮಾಡಿದರು, ಆದರೆ ಹೇಳಿಕೊಳ್ಳುವಂಥ ಲಾಭವಾಗ ಲಿಲ್ಲ. ಸುವರ್ಣಗಡ್ಡೆ ಬೀಜವನ್ನು (ಒಂದು ಟನ್) ನಾನೇ ಸೊರಬ ಭಾಗದ ಹಳ್ಳಿಗಳಿಂದ ಸಂಗ್ರಹಿಸಿ ಅವರ ತೋಟಕ್ಕೆ ವಾಹನದಲ್ಲಿ ತಲುಪಿಸಿದ್ದು, ಅವರು ಖುಷಿಪಟ್ಟಿದ್ದು ನನ್ನ ಕಣ್ಣಮುಂದಿನ ಹಸಿಹಸಿ ಚಿತ್ರ (ಈ ದಿಸೆಯಲ್ಲಿ ಉದಯಕುಮಾರ ಕಾನಳ್ಳಿ, ಎಸ್.ಪಿ. ಗೌಡರ್ ನೆರವಾಗಿದ್ದರು). ಕೃಷಿ ಅವರಿಗೆ ಹಲವು ಕಾರಣಗಳಿಂದ ಪೂರ್ಣತೆಯನ್ನು ನೀಡದಿದ್ದರೂ ಅವರು ಮಾಡಿದ ಪತ್ರಿಕಾಕೃಷಿ (ಲೋಕಧ್ವನಿ), ಶೈಕ್ಷಣಿಕ ಕೃಷಿ ಅವರನ್ನು ಅಮರವಾಗಿಸಿದೆ. ಅವರೊಂದಿಗಿನ ಒಡನಾಟಕ್ಕೆ ನನ್ನ ಒಡಲಾಳದ ನಮನ. ಸ್ಮರಣೆಯ ನುಡಿನಮನ.

(ಲೇಖಕರು ಲೋಕಧ್ವನಿಯ ನಿವೃತ್ತ ಸಂಪಾದಕರು)

Leave a Reply

Your email address will not be published. Required fields are marked *