ವೀಕೆಂಡ್ ವಿತ್ ಮೋಹನ್
camohanbn@gmail.com
ಭವಿಷ್ಯದಲ್ಲಿ ಈತ ಭಾರತದ ಪ್ರಮುಖ ಬೌಲರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲವೆಂಬುದು ಭಾರತೀಯ ಬಹುತೇಕ ಕ್ರಿಕೆಟ್ ದಿಗ್ಗಜರ ಅಭಿಮತ. ವೇಗದ ಬೌಲರ್ ವಿನಯ್ ಕುಮಾರ್, ಈತನ ಎಸೆತವನ್ನು ಕಂಡು ಈತನ ಭವಿಷ್ಯ ಬಹಳ ಉಜ್ವಲವಾಗಿದೆಯೆಂದು ಹೇಳಿದ್ದಾರೆ.
ಭಾರತ ಹಾಗೂ ಶ್ರೀಲಂಕಾ ನಡುವೆ ನಡೆಯುತ್ತಿರುವ ಟಿ-೨೦ ಪಂದ್ಯದಲ್ಲಿ ೨೩ ವರ್ಷದ ಯುವ ಬೌಲರ್, ೧೫೫ ಕಿಲೋ ಮೀಟರ್ ವೇಗದಲ್ಲಿ ಚೆಂಡನ್ನು ಎಸೆಯುವ ಮೂಲಕ ಭಾರತೀಯ ಕ್ರಿಕೆಟ್ ರಂಗವನ್ನೇ ಬೆಚ್ಚಿಬೀಳಿಸಿದ್ದ. ಭಾರತ ಕ್ರಿಕೆಟ್ ತಂಡದಲ್ಲಿ ಅದ್ಬುತ ಸಾಧನೆಯೊಂದನ್ನು ಆತ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮಾಡಿದ್ದ, ಅದು ಅಲ್ಲಿಗೆ ನಿಲ್ಲಲಿಲ್ಲ ಒಂದು ಸಂಪೂರ್ಣ ಒಬ್ಬನಲ್ಲಿ ಐದು ಬಾಲುಗಳನ್ನು ೧೫೦ ಕಿಲೋಮೀಟರುಗಿಂತಲೂ ಅಽಕ ವೇಗದಲ್ಲಿ ಎಸೆಯುವ ಮೂಲಕ ತನ್ನ ಸಾಧನೆಯನ್ನು ಸಂಪೂರ್ಣವಾಗಿ ನಿರೂಪಿಸಿದ್ದ.
ಆತ ಜಮ್ಮು ಮತ್ತು ಕಾಶ್ಮೀರದಿಂದ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ಉಮ್ರಾನ್ ಮಲಿಕ್. ಮೂಲತಃ ಜಮ್ಮುವಿನಲ್ಲಿ ಹುಟ್ಟಿ ಬೆಳೆದ ಉಮ್ರಾನ್ ಮಲಿಕ್, ಹತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದ. ಓದು ತಲೆಗೆ ಹತ್ತದ ಕಾರಣ ತನ್ನನ್ನು ತಾನು ಕ್ರಿಕೆಟ್ ಆಟದಲ್ಲಿ ಹೆಚ್ಚು ತೊಡಗಿಸಿ ಕೊಂಡ ಉಮ್ರಾನ್ ಮಲಿಕ್, ಮಧ್ಯಮ ವರ್ಗದ ಕುಟುಂಬದಿಂದ ಬಂದಂತಹ ಕ್ರೀಡಾಪಟು.
ಉಮ್ರಾನ್ ಮಲಿಕ್‌ನ ತಂದೆ ಅಬ್ದುಲ್ ರಶೀದ್ ಜಮ್ಮುವಿನಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದಾರೆ. ಕಾಶ್ಮೀರದ ಯುವಕ ರೆಂದರೆ ಭಯೋತ್ಪಾದನೆಯಲ್ಲಿ ತೊಡಗಿರುವವರೇ ಹೆಚ್ಚೆಂದು ಭಾವಿಸಿರುವ ಹೊರಜಗತ್ತಿನ ನಡುವೆ ಉಮ್ರಾನ್ ಮಲಿಕ್‌ನ
ಸಾಧನೆ ಕಣಿವೆ ರಾಜ್ಯದ ಚಿತ್ರಣವನ್ನೇ ಬದಲಿಸಿದೆ. ಕಾಶ್ಮೀರವನ್ನು ಒಂದು ದ್ವೀಪದಂತೆ ತನ್ನದೇ ಆದ ಚೌಕಟ್ಟಿನಲ್ಲಿ
ಸಂವಿಧಾನದ ಪರಿಚ್ಛೇದ ೩೭೦ರ ಮೂಲಕ ಕಟ್ಟಿಹಾಕಿದ್ದ ಕಾಂಗ್ರೆಸ್‌ನ ಕರ್ಮದ ಫಲವಾಗಿ ಅಲ್ಲಿನ ಯುವಕರಿಗೆ ಏಳು
ದಶಕಗಳ ಕಾಲ ಹೊರಜಗತ್ತಿನೊಡನೆ ಬೆರೆಯುವ ಅವಕಾಶವಿರಲಿಲ್ಲ.
ಯುವಕರು ಕ್ರೀಡೆಗಳಲ್ಲಿ ಭಾಗವಹಿಸಬೇಕೆಂದರೆ ಭಯಪಡುವ ವಾತಾವರಣ ನಿರ್ಮಾಣವಾಗಿತ್ತು. ಶ್ರೀನಗರದಲ್ಲಿ ಸಿನಿಮಾ ನೋಡಲು ಚಿತ್ರಮಂದಿರಗಳಿರಲಿಲ್ಲ. ಅಲ್ಲಿನ ಜನರನ್ನು ಮತಾಂಧತೆಯ ಕರಿನೆರಳಿನಲ್ಲಿ ಬದುಕು ಕಟ್ಟಿಕೊಳ್ಳುವಂತೆ ಮಾಡ ಲಾಗಿತ್ತು. ನಾನು ಕಾಶ್ಮೀರಕ್ಕೆ ಹೋಗಿದ್ದಾಗ ಶ್ರೀನಗರದಲ್ಲಿ ತಂಗಿದ್ದ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದಂತಹ ಹಲವು ತರುಣ ರಿಗೆ ತಮ್ಮ ಕೆಲಸದ ಬಿಡುವಿನ ಸಮಯದಲ್ಲಿ ಭಾರತೀಯ ಸೈನಿಕರನ್ನು ಬಯ್ಯುವುದೇ ಕೆಲಸವಾಗಿತ್ತು. ಹೊರಗಿನಿಂದ ಬಂದ ಪ್ರವಾಸಿಗರ ಬಳಿ ಆ ಹುಡುಗರು, ಭಾರತೀಯ ಸೇನೆ ತಮ್ಮ ನಡುವಿದ್ದ ಸ್ನೇಹಿತನನ್ನು ಭಯೋತ್ಪಾದಕನೆಂದು ತಿಳಿದು ಹೊಡೆದುರುಳಿಸಿದ್ದರೆಂಬುದನ್ನು ಹೇಳುತ್ತಿರುತ್ತಾರೆ.
ಅಸಲಿಗೆ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹಾಗು ಭಾರತೀಯ ಸೇನೆ ಪಾಕಿಸ್ತಾನದ ಜತೆ ಕೈಜೋಡಿಸಿದ್ದ ಉಗ್ರನನ್ನು ಹೊಡೆದುರುಳಿಸಿರುತ್ತಾರೆ. ಆದರೆ ಅಲ್ಲಿನ ಯುವರು ತಮ್ಮ ಸ್ನೇಹಿತನನ್ನು ಪ್ರವಾಸಿಗರ ಮುಂದೆ ಅಮಾಯಕನೆಂದು ಬಿಂಬಿಸುವ ನಾಟಕವಾಡುತ್ತಾರೆ.
ಇಂತಹ ಮನಃಸ್ಥಿತಿಯ ಯುವಕರ ನಡುವೆ ಉಮ್ರಾನ್ ಮಲಿಕ್, ಕಾಶ್ಮೀರಿ ಯುವಕರಿಗೆ ಮಾದರಿಯಾಗಿ ಕಾಣುತ್ತಾನೆ. ಹೊರ ಜಗತ್ತು ಈತನ ಸಾಧನೆಯನ್ನು ಹೆಚ್ಚೆಚ್ಚು ಪಸರಿಸಿದಷ್ಟೂ ಕಣಿವೆ ರಾಜ್ಯದ ಯುವಕರ ಮನಃಸ್ಥಿತಿ ಬದಲಾಗುತ್ತದೆ. ಈತನಿಗೆ ಇಬ್ಬರು ಅಕ್ಕಂದಿರಿದ್ದಾರೆ. ಈತನ ಸಾಧನೆಯ ಹಾದಿಯಲ್ಲಿ ಯಾವ ತೊಂದರೆಯೂ ಆಗದಂತೆ ಆತನ ಕುಟುಂಬದವರು ನೋಡಿಕೊಂಡಿದ್ದಾರೆ. ಈತನ ತರಬೇತುದಾರರಾಗಿದ್ದ ರಣಧೀರ್ ಸಹಾಬ್ ಕೂಡ ಹಲವು ಬಾರಿ ಹಣವನ್ನು ಪಡೆಯದೇ ಬೌಲಿಂಗ್ ತರಬೇತಿ ನೀಡಿದ್ದಾರೆಂದು ಈತನ ಅಕ್ಕ ಹೇಳಿದ್ದಾರೆ.
ದೇಶಿಯ ಕ್ರಿಕೆಟ್ ನಲ್ಲಿ ತನ್ನ ವೇಗದ ಎಸೆತದ ಮೂಲಕ ಹೆಸರು ಮಾಡಿರುವ ಉಮ್ರಾನ್, ೨೦೨೧ರ ಅಕ್ಟೋಬರ್ ತಿಂಗಳಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಮೂಲಕ ಐಪಿಎಲಗೆ ಪದಾರ್ಪಣೆ ಮಾಡಿದ. ತನ್ನ ಮೊದಲ ಪಂದ್ಯದಲ್ಲಿ ೧೫೧ ಕಿಲೋಮೀಟರು ವೇಗದಲ್ಲಿ ಚೆಂಡನ್ನು ಎಸೆಯುವ ಮೂಲಕ ತಂಡದ ನಾಯಕ ಕೇನ್ ವಿಲಿಯಂಸನ್‌ನ ಗಮನ ಸೆಳೆದ. ಪಂದ್ಯದ ನಂತರ ಕೇನ್, ಈತನ ಸಾಧನೆಯನ್ನು ಮುಕ್ತ ಕಂಠದಿಂದ ಹೊಗಳಿ ಭಾರತದ ಯುವ ಪ್ರತಿಭೆಗಳ ಬಗ್ಗೆ ಮಾತನಾಡಿದ್ದ. ತನ್ನ ೧೭ ನೇ ವಯಸಿನಲ್ಲಿ ಕ್ರಿಕೆಟ್ ಆಡಲು ಶುರುಮಾಡಿದ ಉಮ್ರಾನ್, ಜಮ್ಮು ಮತ್ತು ಕಾಶ್ಮೀರದ
ಕ್ರೀಡಾ ಪರಿಷತ್ತಿನ ಪರವಾಗಿ ಆಡುತ್ತಿದ್ದ. ಈತನ ಆಟವನ್ನು ಗಮನಿಸಿದ ಅಕಾಡೆಮಿಯ ಮುಖ್ಯಸ್ಥ ರಂಜನ್ ಆತನಿಗೆ
ಸರಿಯಾದ ತರಬೇತಿ ನೀಡಬೇಕೆಂದು ನಿರ್ಧರಿಸಿದ್ದರು.
ಮೊದಮೊದಲು ಕ್ರಿಕೆಟ್ ಆಟವನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳದ ಆತ, ನಿಧಾನವಾಗಿ ತನ್ನ ಆಟದ ಕಡೆಗೆ ಗಮನಹರಿಸಲು ಶುರುಮಾಡಿದ್ದ. ನೆಟ್ ಅಭ್ಯಾಸದ ವೇಳೆ ೧೪೫ ಕಿಲೋಮೀಟರು ವೇಗದಲ್ಲಿ ಚೆಂಡನ್ನು ಎಸೆಯುತ್ತಿದ್ದಂತಹ ಈತನಿಗೆ ಉತ್ತಮ ತರಬೇತಿಯ ಅವಶ್ಯಕತೆಯಿದೆಯೆಂಬುದು ತರಬೇತುದಾರರಿಗೆ ಮನವರಿಕೆಯಾಗಿತ್ತು. ನಂತರ ಜಮ್ಮು ಕಾಶ್ಮೀರದ ೧೯ ವರ್ಷದ ಒಳಗಿನ ತಂಡಕ್ಕೆ ಆಯ್ಕೆಯಾದರೂ ೧೧ ಜನರ ತಂಡದಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ನಂತರ ಈತನ ಸಹಾಯಕ್ಕೆ ನಿಂತದ್ದು ಮತ್ತೊಬ್ಬ ಕ್ರಿಕೆಟಿಗ ಇರ್ಫಾನ್ ಪಠಾಣ್.
ಈತನ ಪ್ರತಿಭೆಯನ್ನು ಗಮನಿಸಿದ ಇರ್ಫಾನ್, ಜಮ್ಮು ಮತ್ತು ಕಾಶ್ಮೀರದ ೧೯ ವರ್ಷದ ಒಳಗಿನವರ ೧೧ ಜನರ ತಂಡದಲ್ಲಿ ಆಡಲು ಅವಕಾಶ ಕಲ್ಪಿಸಿದ್ದರು. ಮೊದಲ ಬಾರಿ ೧೧ ಜನರ ತಂಡದಲ್ಲಿ ಆಡಲು ಅವಕಾಶ ಸಿಗಲಿಲ್ಲವೆಂಬುದಕ್ಕೆ ಆತ ಎದೆ ಗುಂದಲಿಲ್ಲ. ತರಬೇತುದಾರರ ಸಹಾಯದಿಂದ ಮತ್ತಷ್ಟು ಗಟ್ಟಿಯಾದ. ಹತ್ತನೇ ತರಗತಿಗೆ ಶಾಲೆಯನ್ನು ಬಿಟ್ಟು ಕ್ರಿಕೆಟ್‌ನ ಮೇಲೆ ಸಂಪೂರ್ಣ ಗಮನಹರಿಸಿದ. ಕಣಿವೆ ರಾಜ್ಯದ ಹಲವು ಯುವಕರು ಕಳೆದ ಏಳು ದಶಕಗಳಲ್ಲಿ ಸೂಕ್ತ ವಿದ್ಯಾಭ್ಯಾಸ ಸಿಗದೇ, ಕೆಲಸವನ್ನೂ ಮಾಡಲಾಗದೇ ಭಯೋತ್ಪಾದಕ ಸಂಘಟನೆಗಳ ಜತೆ ಸೇರಿದ ಸಾವಿರಾರು ಉದಾಹರಣೆಗಳಿವೆ.
ಅರುಂಧತಿ ರಾಯ ತರಹದ ಎಡಚ ಪತ್ರಕರ್ತರು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಬೆಂಬಲಿಸುವ ಮೂಲಕ ಅಲ್ಲಿನ
ಯುವಕರು ಹೊರಜಗತ್ತಿಗೆ ಹೊಂದಿಕೊಳ್ಳದಂತೆ ನೋಡಿಕೊಂಡರು. ಅಲ್ಲಿನ ಯುವಕರಿಗೆ ಸರಿಯಾದ ವಿದ್ಯಾಭ್ಯಾಸ
ಸಿಗದಂತೆ ನೋಡಿಕೊಂಡು ಹಣಕ್ಕಾಗಿ ಪ್ರತ್ಯೇಕತಾವಾದಿಗಳ ಜತೆ ಕೈಜೋಡಿಸುವಂತೆ ಮಾಡಿದ್ದರು. ಸಂವಿಧಾನದ
ಪರಿಚ್ಛೇದ ೩೭೦ರ ರದ್ದತಿಯ ಬಳಿಕ ಕಾಶ್ಮೀರಕ್ಕೆ ಬಂಡವಾಳ ಹೂಡಿಕೆಯಾಗುತ್ತಿದೆ. ಹೊಸ ಶಾಲೆಗಳು ಹಾಗೂ ಕಾಲೇಜು ಗಳು ತಲೆಯೆತ್ತುತ್ತಿವೆ.
ಪ್ರತ್ಯೇಕತಾವಾದಿಗಳ ಪರವಾಗಿ ನಿಲ್ಲುವ ಕಾಶ್ಮೀರದ ತರುಣರು ತಾವು ಮಾಡುತ್ತಿರುವ ದೇಶದ್ರೋಹಿ ಕೆಲಸಕ್ಕೆ ಉದ್ಯೋಗಾವಕಾಶಗಳು ಸಿಗದಿರುವುದೇ ಕಾರಣವೆಂದು ಹೇಳುವಂತೆಯೇ ಇಲ್ಲ. ಏಕೆಂದರೆ ಉಮ್ರಾನ್ ಕೂಡ ಹತ್ತನೇ ತರಗತಿಯ ಶಾಲೆ ಬಿಟ್ಟ ತರುಣ. ಆತ ಎಂದೂ ಇವರಂತೆ ಯೋಚಿಸಲಿಲ್ಲ,ಅರ್ಧಕ್ಕೆ ನಿಂತ ವಿದ್ಯಾಭ್ಯಾಸ ಎಂದೂ ಸಹ ಆತನನ್ನು ಅಡ್ಡದಾರಿಗೆ ಎಳೆಯಲಿಲ್ಲ. ಆತನ ಪೋಷಕರು ಎಂದಿಗೂ ಆತನ ಓದನ್ನು ಮಾತ್ರ ಮಾನದಂಡವನ್ನಾಗಿಸಿ ಕೊಳ್ಳಲಿಲ್ಲ. ಆತನ ಮಧ್ಯಮ ವರ್ಗದ ಕುಟುಂಬಕ್ಕೆ ಆತನ ಕ್ರಿಕೆಟ್ ಮೇಲಿನ ಒಲವು ಎಂದೂ ಹೊರೆಯಾಗಲಿಲ್ಲ.
ಕಾಶ್ಮೀರದ ಬಹುತೇಕ ಪೋಷಕರು ತಮ್ಮ ಮಕ್ಕಳ ವಿಚಾರದಲ್ಲಿ ಇದೇ ರೀತಿ ಯೋಚಿಸಿದರೆ ಪ್ರತ್ಯೇಕತಾವಾದಿಗಳ
ಜತೆ ಯುವಕರು ಕೈಜೋಡಿಸಿ ದೇಶದ್ರೋಹಿ ಕೃತ್ಯಗಳಲ್ಲಿ ತೊಡಗುವುದನ್ನು ನಿಲ್ಲಿಸಬಹುದು. ಈಗಂತೂ ೩೭೦ನೇ ವಿಧಿ
ರದ್ದಾಗಿದೆ ತಮ್ಮ ಮಕ್ಕಳಿಗೆ ಹಲವು ಅವಕಾಶಗಳು ಹೊರಗಿನಿಂದ ಬರುತ್ತಿವೆ. ತಂತ್ರಜ್ಞಾನ ಆಧರಿತ ಹಲವು ಸ್ಟಾರ್ಟ್ ಅಪ್‌ಗಳು ಶ್ರೀನಗರದಲ್ಲಿ ಶುರುವಾಗಿವೆ. ಕೊಲ್ಲಿ ರಾಷ್ಟ್ರಗಳಿಂದ ಮಿಲಿಯನ್ ಗಟ್ಟಲೆ ಬಂಡವಾಳ ಹರಿದು ಬರುತ್ತಿದೆ.
ಸದಾ ಋಣಾತ್ಮಕ ವಿಷಯಗಳಿಗೆ ಸುದ್ದಿಯಾಗುತ್ತಿದ್ದ ಜಮ್ಮು ಮತ್ತು ಕಾಶ್ಮೀರ, ಉಮ್ರಾನ್ ಮಲಿಕ್‌ನ ಸಾಧನೆಯ ಮೂಲಕ ಧನಾತ್ಮಕ ವಿಷಯಕ್ಕೆ ಸುದ್ದಿಯಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ದಿಗ್ಗಜರು ಉಮ್ರಾನ್ ಮಲಿಕ್ ಜಮ್ಮು ಮತ್ತು ಕಾಶ್ಮೀರ ದವನೆಂದು ತಿಳಿದಾಕ್ಷಣ ತಮ್ಮ ಹುಬ್ಬೇರಿಸುವ ಪರಿಸ್ಥಿತಿಯಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕರ ಜಪ ಮಾಡುವ ಪ್ರತ್ಯೇಕತಾವಾದಿಗಳಿಗೆ ಈತನ ಸಾಧನೆ ಚಪ್ಪಲಿಯಲ್ಲಿ ಹೊಡೆದಂತಾಗಿದೆ. ಕಾಶ್ಮೀರದ ವಿಷಯದಲ್ಲಿ ಸದಾ ಋಣಾತ್ಮಕ ವಿಷಯಗಳನ್ನೇ ತೋರಿಸುವ ಮಾಧ್ಯಮಗಳೂ ಈತನ ಸಾಧನೆಯ ಬಗೆಗೆ ಕಣ್ತೆರೆಯಬೇಕಿದೆ.
ಭವಿಷ್ಯದಲ್ಲಿ ಈತ ಭಾರತದ ಪ್ರಮುಖ ಬೌಲರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲವೆಂಬುದು ಭಾರತೀಯ ಬಹುತೇಕ ಕ್ರಿಕೆಟ್ ದಿಗ್ಗಜರ ಅಭಿಮತ. ವೇಗದ ಬೌಲರ್ ವಿನಯ್ ಕುಮಾರ್, ಈತನ ಎಸೆತವನ್ನು ಕಂಡು ಈತನ ಭವಿಷ್ಯ ಬಹಳ ಉಜ್ವಲವಾಗಿದೆಯೆಂದು ಹೇಳಿದ್ದಾರೆ. ಜಿಂಬಾಬ್ವೆ ತಂಡದ ಮಾಜಿ ಕ್ರಿಕೆಟ್ ಆಟಗಾರ ಮಬಂಗ್ವಾ, ಪಂದ್ಯದ ಕಾಮೆಂಟರಿ ಸಂದರ್ಭದಲ್ಲಿ ‘ಇಷ್ಟು ದಿವಸ ಈತ ಎಲ್ಲಿದ್ದ’ ಎಂದು ಪ್ರಶ್ನಿಸಿದ್ದಾರೆ.
ಮತ್ತೊಬ್ಬ ಖ್ಯಾತ ಕಮೆಂಡ್ರೇಟರ್ ಹರ್ಷ ಬೋಗ್ಲೆ, ಈತನ ಬೌಲಿಂಗ್ ಬಗ್ಗೆ ಟ್ವೀಟ್ ಮಾಡಿ ಆತ ಎಸೆಯುವ ಚೆಂಡಿನ ವೇಗ ವನ್ನು ಹೊಗಳಿದ್ದರು. ೩೭೦ನೇ ವಿಧಿಯ ರದ್ದತಿಯ ಸಮಯದಲ್ಲಿ ಕರ್ಫ್ಯೂ ಹೇರಿದ್ದ ಕಾರಣ ಉಮ್ರಾನ್ ಮಲಿಕ್‌ಗೆ ಸರಿಯಾದ ತರಬೇತಿ ಪಡೆಯಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಆತ ರಣಜಿ ಟ್ರೋಫಿಗೆ ಆಡುವುದು ಕಷ್ಟ ಸಾಧ್ಯವಾಗಿತ್ತು. ಆದರೂ ಧೃತಿಗೆಡದ ಈ ಯುವಕ ತನ್ನ ತರಬೇತಿಯನ್ನು ಬಿಟ್ಟಿರಲಿಲ್ಲವೆಂದು ಇರ್ಫಾನ್ ಪಠಾಣ್ ಹೇಳುತ್ತಾರೆ.
ಉಮ್ರಾನ್ ಮಲಿಕ್ ಹೊರಬಂದಿರುವ ಒಂದು ಪ್ರತಿಭೆ ಮಾತ್ರ. ಈ ರೀತಿಯ ಅದೆಷ್ಟು ಪ್ರತಿಭೆಗಳು ಕಾಶ್ಮೀರ ಕಣಿವೆಯಲ್ಲಿ ಪ್ರತ್ಯೇಕತಾವಾದಿಗಳ ಕಪಿ ಮುಷ್ಟಿಗೆ ಸಿಲುಕಿ ತಮ್ಮ ಅಮೂಲ್ಯ ಜೀವನವನ್ನು ಹಾಳುಮಾಡಿಕೊಳ್ಳುತ್ತಿರುವೆಯೋ ಭಗವಂತನೇ ಬಲ್ಲ. ತಾನು ಪುನಃ ಅಧಿಕಾರಕ್ಕೆ ಬಂದರೆ ರದ್ದಾಗಿರುವ ವಿಶೇಷ ಸ್ಥಾನಮಾನವನ್ನು ಮರಳಿ ಸ್ಥಾಪಿಸುತ್ತೇವೆಂದು ಹೇಳುವ ಮೂಲಕ ಕಣಿವೆ ರಾಜ್ಯದಲ್ಲಿನ ಮತ್ತಷ್ಟು ಪ್ರತಿಭೆಗಳನ್ನು ಕಣ್ಣು ಬಿಡುವ ಮೊದಲೇ ಮುಗಿಸುವ ಹುನ್ನಾರಕ್ಕೆ ಅಬ್ದು ಹಾಗೂ ಮುಫ್ತಿಯ ಸಂತತಿ ನಾಂದಿ ಹಾಡಿದೆ.
ಇವರಿಬ್ಬರ ಸಂತತಿಯ ಜತೆಗೆ ಸಮಸ್ಯೆಯ ಮೂಲ ನಾಯಕ ನೆಹರುವಿನ ಸಂತತಿಯವರು ಕೂಡ ಕೈಜೋಡಿಸಿದ್ದಾರೆ. ಉಮ್ರಾನ್ ಮಲಿಕ್ ವಿಶೇಷ ಸ್ಥಾನಮಾನ ರದ್ದಾದ ನಂತರ ಬೆಳಕಿಗೆ ಬಂದಂತಹ ಪ್ರತಿಭೆಯಲ್ಲದಿದ್ದರೂ, ಕಣಿವೆಯಲ್ಲಿನ ಲಕ್ಷಾಂತರ ಯುವಕರಿಗೆ ಆತನ ಸಾಧನೆ ಪ್ರೇರಣೆಯಾಗಬೇಕು. ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ಹುನ್ನಾರದ
ಸುಳಿಯಲ್ಲಿ ಸಿಲುಕಿರುವ ಕಾಶ್ಮೀರದ ಹಲವು ತರುಣರು ಈತ ಭಾರತ ತಂಡದ ಪರವಾಗಿ ಆಡುವುದನ್ನು ಕಂಡು ಬದಲಾಗ ಬೇಕು.
ಉಮ್ರಾನ್ ಮಲಿಕ್ ಕೇವಲ ಕ್ರಿಕೆಟ್ ಆಟಗಾರನಲ್ಲ, ತನ್ನ ಆಟದ ಜತೆಗೆ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಸಾಧನೆಯನ್ನು ಹೊತ್ತ ಪ್ರತಿನಿಧಿ.