ತನ್ನಿಮಿತ್ತ
ಇಂದು ಅಂತಾರಾಷ್ಟ್ರೀಯ ಅಪಸ್ಮಾರ ದಿನ. ಅಪಸ್ಮಾರ ಅಥವಾ ಮೂರ್ಛೆರೋಗದ ಕುರಿತು ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ನವೆಂಬರ್ 17ರಂದು ಇಂಟರ್‌ನ್ಯಾಷನಲ್ ಎಪಿಲೆಪ್ಸಿ ಡೇ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ವೈದ್ಯಕೀಯ ಲೇಖನ.
ಅಪಸ್ಮಾರ ಅಥವಾ ಮೂರ್ಛೆರೋಗ ಎಂದಾಕ್ಷಣ ನೆನಪಾಗುವುದು ಕೈ ಕಾಲು ನಡುಗಿಸುತ್ತ, ಪಿಳಿ ಪಿಳಿ ಕಣ್ಣು ಬಿಡುತ್ತ, ಕುಸಿದು ಕುಪ್ಪಳಿಸುತ್ತ ಬಿದ್ದು ಒದ್ದಾಡುತ್ತ, ಒದ್ದಾಡುತ್ತ ಎಚ್ಚರ ತಪ್ಪುವ ರೋಗಿ. ಹೊರ ಚಾಚಿದ ನಾಲಿಗೆ. ನಾಲಿಗೆ ಕಚ್ಚಿಕೊಂಡಿದ್ದರಿಂದ ಜಿನುಗುವ ರಕ್ತ, ಬಾಯಲ್ಲಿ ನೊರೆ. ಸುತ್ತಲೂ ಹೌಹಾರಿ ನಿಂತ ಜನ… ಇದು ಅಪಸ್ಮಾರದ ಒಂದು ಪ್ರಕಾರವಷ್ಟೇ.
ಇದ್ದಕ್ಕಿದ್ದ ಹಾಗೆ ಏನೂ ಮಾತನಾಡದೇ ಶೂನ್ಯವಾಗಿ ಕುಳಿತುಕೊಳ್ಳುವುದು, ಎಂದೂ ತೊದಲದೆ ಇದ್ದವರು ತೊದಲುವುದು, ಸತತವಾಗಿ ಸ್ವಲ್ಪ ಹೊತ್ತು ಒಂದು ಕಣ್ಣನ್ನು ಮಿಟುಕಿಸುವುದು, ತುಟಿಗಳನ್ನು ವಿಚಿತ್ರವಾಗಿ ಅಲುಗಾಡಿಸುವುದು, ಒಮ್ಮೆಲೆ ಜೋಲಿ ತಪ್ಪುವುದು… ಇವೆಲ್ಲ ಮಲರೋಗದ ಇತರ ಪ್ರಕಾರಗಳು. ಒಮ್ಮೊಮ್ಮೆ ಕೈ ಮೇಲೆ ಹುಳು ಹರಿದಾಡುತ್ತಿದೆ ಎಂಬ ಭ್ರಮೆ ಉಂಟಾಗಬಹುದು. ಇದೂ ಕೂಡ ಅಪಸ್ಮಾರವೇ.
ಫಿಟ್ಸ್, ಎಪಿಲೆಪ್ಸಿ, ಸೀಸರ್, ಅಪಸ್ಮಾರ, ಮೂರ್ಛೆರೋಗ ಎಂತಲೂ ಇದನ್ನು ಕರೆಯುತ್ತಾರೆ. ರಾಜ್ಯದ ಕೆಲವೆಡೆ ಗ್ರಾಮ್ಯ ಭಾಷೆ
ಯಲ್ಲಿ ಮಲರೋಗ ಅಂತಲೂ ಕರೆಯುತ್ತಾರೆ.
ಏನು ಕಾರಣ?: ಮೆದುಳಿನ ಕೋಶಗಳ ನಾಶ, ಮೆದುಳಿಗೆ ತಗಲುವ ಸೋಂಕು, ಮೆದುಳಿಗೆ ಆಮ್ಲಜನಕ ಪೂರೈಕೆಯಲ್ಲಿನ ಕೊರತೆ…. ಇವು ಮೂರ್ಛೆ ರೋಗಕ್ಕೆ ಮುಖ್ಯ ಕಾರಣ. ಬಹುತೇಕ ಪ್ರಕರಣಗಳಲ್ಲಿ ಮೂರ್ಛೆ ರೋಗ ಬರಲು ಯಾವ ಕಾರಣವೂ ಗೋಚರವಾಗು ವುದಿಲ್ಲ. ಇದನ್ನು ‘ಈಡಿಯೋಪತಿಕ್ ಎಪಿಲೆಪ್ಸಿ’ (ಕಾರಣ ತಿಳಿಯದ ಮಲರೋಗ) ಎನ್ನುತ್ತಾರೆ.
ಕೆಲವೇ ಪ್ರಕರಣಗಳಲ್ಲಿ ಇದು ಅನುವಂಶಿಕ ವಾಗಿ ಬರಬಹುದು. ಶೇ.1 ಅಥವಾ 2 ರಷ್ಟು ಪ್ರಕರಣಗಳಲ್ಲಿ ಗುರುತಿಸಬ ಹುದಾದಂತಹ ಕಾರಣಗಳಿಂದ ಮೂರ್ಛೆರೋಗ ಬರುತ್ತದೆ.
ಉದಾ: ಬ್ಯಾಕ್ಟೀರಿಯಾ, ವೈರಸ್‌ಗಳಿಂದ ಉಂಟಾಗುವ ಮಿದುಳು ಜ್ವರ, ತಲೆಗೆ ತೀವ್ರ ಪೆಟ್ಟು, ವಿಷವಸ್ತುಗಳ ಸೇವನೆ, ಮದ್ಯಪಾನ, ಮಾದಕ ವಸ್ತುಗಳ ಚಟ ಇರುವವರು, ರಕ್ತನಾಳ ಒಡೆದು ಮಿದುಳಿನೊಳಗೆ ರಕ್ತ ಸ್ರಾವ, ಮಿದುಳಿನಲ್ಲಿ ಗಡ್ಡೆ, ಮಿದುಳು ನಶಿಸಿ ಹೋಗುವ ರೋಗಗಳು ಇತ್ಯಾದಿ.
ಹೀಗಾಗಿ ಹೆಚ್ಚಿನ ಮೂರ್ಛೆ ರೋಗಿಗಳಿಗೆ ಯಾವ ಪರೀಕ್ಷೆ (ಎಕ್ಸ್ ರೇ, ಸ್ಕ್ಯಾನಿಂಗ್) ಅಗತ್ಯವಿಲ್ಲ. 20 ವರ್ಷ ವಯಸ್ಸಾದ ಮೇಲೆ ಮೊದಲ ಬಾರಿಗೆ ಫಿಟ್ಸ್ ಬಂದರೆ, ಮಿದುಳಿಗೆ ಹಾನಿಯಾಗುವ ಇತರ ಲಕ್ಷಣಗಳು ಕಂಡು ಬಂದರೆ ಮಾತ್ರ ಎಕ್ಸ್ ರೇ, ಸ್ಕ್ಯಾನಿಂಗ್ ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ. ಮಿದುಳಿನ ವಿದ್ಯುಲ್ಲೇಖ (CCi)ದಲ್ಲಿ ಈ ರೋಗಿಗಳಲ್ಲಿ ನರಕೋಶಗಳ ಮಟ್ಟದಲ್ಲಿ ಏರುಪೇರಿನ ಚಟುವಟಿಕೆ ಕಂಡು ಬರುವುದು ದಾಖಲಾಗುತ್ತದೆ.
ಜಾಗತಿಕ ಆರೋಗ್ಯ ಸಂಸ್ಥೆಯ ಪ್ರಕಾರ: “Epilepsy is the most common brain disorder with no
age, racial, social class, national or geographic boundaries ‘. ಈ ಮಾತು ಸರ್ವ ಕಾಲಿಕ ಸತ್ಯ.
ರೋಗದ ಲಕ್ಷಣಗಳು: ಪ್ರಜ್ಞೆ ತಪ್ಪಿ ಬೀಳುವುದೆಲ್ಲ ಮೂರ್ಛೆ ರೋಗವಲ್ಲ. ಉಪವಾಸದಿಂದ ರಕ್ತದಲ್ಲಿ ಗ್ಲುಕೋಜ ಪ್ರಮಾಣ ಕಡಿಮೆಯಾಗಿ, ವ್ಯಕ್ತಿ ಪ್ರಜ್ಞೆ ತಪ್ಪಿ ಕೆಳಕ್ಕೆ ಬೀಳಬಹುದು. ತುಂಬಾ ಹೊತ್ತು ನಿಂತಿದ್ದರಿಂದ ಕೈ ಕಾಲುಗಳಲ್ಲಿ ರಕ್ತ ಹೆಚ್ಚು ಸೇರಿ, ಮಿದುಳಿಗೆ ರಕ್ತ ಪೂರೈಕೆ ಕಡಿಮೆಯಾಗಿ, ವ್ಯಕ್ತಿ ಕೆಳಕ್ಕೆ ಬೀಳಬಹುದು. ವಿಪರೀತ ಬಿಸಿಲು, ದೈಹಿಕ ಶ್ರಮ, ವಾಂತಿ ಭೇದಿ, ರಕ್ತಸ್ರಾವದಿಂದ ಸುಸ್ತಾಗಿ ಪ್ರಜ್ಞೆ ತಪ್ಪಬಹುದು. ಮಾನಸಿಕ ಕ್ಲೇಶ, ಆಘಾತದಿಂದ ಪ್ರಜ್ಞೆ ತಪ್ಪಬಹುದು. ಆದ್ದರಿಂದ ಮೂರ್ಛೆ ರೋಗದ ವಿಶೇಷ ಲಕ್ಷಣಗಳನ್ನು ಗಮನಿಸುವುದು ಮತ್ತು ಅವನ್ನು ವೈದ್ಯರಿಗೆ ಹೇಳುವುದು ಮುಖ್ಯವಾಗುತ್ತದೆ. ಮೂರ್ಛೆ ರೋಗ ಎಲ್ಲೆಂದರಲ್ಲಿ, ಯಾವಾಗೆಂದರೆ ಆವಾಗ ಥಟ್ಟನೆ ಕಾಣಿಸಿಕೊಳ್ಳುತ್ತದೆ. ಅಟ್ಯಾಕ್ ಬಂದು ವ್ಯಕ್ತಿ ಪ್ರಾಣಾಪಾಯದಲ್ಲಿ ಸಿಕ್ಕಿ ಕೊಳ್ಳಬಹುದು. ಉದಾ: ವಾಹನ ಚಾಲನೆ ಮಾಡುವಾಗ, ರಸ್ತೆ ಮಧ್ಯದಲ್ಲಿ, ಬೆಂಕಿ, ನೀರಿನ ಹತ್ತಿರ ಇದ್ದಾಗ, ತಿರುಗುವ ಯಂತ್ರದ ಬಳಿ ಕೆಲಸ ಮಾಡುವಾಗ, ಮಹಡಿಯ ಮೇಲೆ, ಮರದ ಮೇಲೆ ಇದ್ದಾಗ, ಒಂಟಿಯಾಗಿದ್ದಾಗ, ನಿದ್ರೆಯಲ್ಲಿರುವಾಗ ಈ
ರೀತಿ ಅಟ್ಯಾಕ್ ಆಗಿ, ವ್ಯಕ್ತಿಗೆ ಬಲವಾದ ಏಟೂ ಗಾಯಗಳಾಗುತ್ತವೆ. ಕೈ ಕಾಲು ಜೋರಾಗಿ ಅದುರುವಾಗ, ನಾಲಿಗೆ ಕಚ್ಚಿಕೊಂಡು ರಕ್ತ ಬಂದಿರುತ್ತದೆ. ಮಲ ಮೂತ್ರ ವಿಸರ್ಜನೆಯಾಗಿರುತ್ತದೆ.
ಪ್ರತಿಯೊಂದು ಅಟ್ಯಾಕ್ ಹಿಂದಿನ ಅಟ್ಯಾಕ್‌ನ ತದ್ರೂಪವಾಗಿರುತ್ತದೆ. ಯಾವ ಬದಲಾವಣೆಯೂ ಇರುವುದಿಲ್ಲ. ಪ್ರತಿ ಅಟ್ಯಾಕ್ ನಲ್ಲೂ ಎಲ್ಲವೂ ಒಂದು ನಿರ್ದಿಷ್ಟ ರೀತಿಯಲ್ಲೇ ಕಾಣಿಸಿಕೊಳ್ಳುತ್ತವೆ. ರೋಗಿಗೆ ಕೈ ಕಾಲುಗಳಲ್ಲಿ ಸೆಳವು ಉಂಟಾಗಿ ಆತ ಮೂರ್ಛೆ ತಪ್ಪಿ ಬಿದ್ದರೆ ಅದು ಕ್ಲಾಸಿಕಲ್ ಫಿಟ್ಸ್. ಇಂತಹ ಅಟ್ಯಾಕ್ ಬರುವ ಒಂದೆರಡು ದಿನ ಮೊದಲು ಬೆವರು ಬಿಡುವುದು, ನಡುಕ, ಹೃದಯ ಬಡಿತ ಹೆಚ್ಚುವುದು, ಆಯ ತಪ್ಪಿದಂತಾಗುವುದು, ಶೂನ್ಯತಾ ಭಾವ, ಸುಮ್ಮನೇ ಭಯ…. ಒಟ್ಟಿನಲ್ಲಿ ಕೆಟ್ಟದ್ದೇನೋ ಸಂಭವಿಸಲಿದೆ ಎನ್ನುವ ಭಾವನೆ.
ಒಮ್ಮೆ ಅಟ್ಯಾಕ್ ಬಂದ ನಂತರ ಇನ್ನೊಮ್ಮೆ ಯಾವಾಗ ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಒಂದೇ ದಿನದಲ್ಲಿ ಇದು ಮೂರು ನಾಲ್ಕು ಬಾರಿ ಬರಬಹುದು ಅಥವಾ ವರ್ಷದಲ್ಲಿ ಒಂದೆರಡು ಸಲ ಮಾತ್ರ ಬರಬಹುದು. ‘ಸ್ಟೆಟಸ್ ಎಪಿಲೆಪ್ಸಿ ’ಯಲ್ಲಿ ಒಂದು ಅಟ್ಯಾಕ್ ಬಂದ ಮೇಲೆ ಪ್ರe ತಪ್ಪಿದ ರೋಗಿ ಎಚ್ಚರಗೊಳ್ಳುವ ಮೊದಲೇ ಇನ್ನೊಂದು ಅಟ್ಯಾಕ್ ಬರುತ್ತದೆ.
ಮತ್ತೆ ಎಚ್ಚರಗೊಳ್ಳುವಷ್ಟರಲ್ಲಿಯೇ ರೋಗಿ ಇನ್ನೊಮ್ಮೆ ಕುಸಿಯುತ್ತಾನೆ. ಪ್ರe ತಪ್ಪಿ ಅದುರುವ ಸಮಯದಲ್ಲಿ ರೋಗಿ ಹೊರಗಿನ ಯಾವ ಪ್ರಚೋದನೆಗೂ ಸ್ಪಂದಿಸುವುದಿಲ್ಲ. ಆಗ ನಡೆದದ್ದು ಆತನಿಗೆ ಸ್ವಲ್ಪವೂ ನೆನಪಿರುವುದಿಲ್ಲ. ಅಟ್ಯಾಕ್ ನಂತರ ಸ್ವಲ್ಪ ಹೊತ್ತು ರೋಗಿ ಅತೀವವಾಗಿ ಸುಸ್ತಾದವನಂತೆ ಕಾಣುತ್ತಾನೆ. ವಿಪರೀತ ತಲೆನೋವು, ಮೈಕೈ ನೋವು, ವಾಕರಿಕೆ, ವಾಂತಿ ಯಂತಹ ತೊಂದರೆಗಳಿಂದ ಬಳಲಬಹುದು. ಆ ದಿವಸವೆಲ್ಲ ಮಂಕಾಗಿ, ಮಾಮೂಲಿನ ಕೆಲಸ, ಚಟುವಟಿಕೆಗಳನ್ನು ಮಾಡಲು ಆಗದಿರಬಹುದು.
ಮದ್ದೇ ಮೂರ್ಛೆ ರೋಗಕ್ಕೆ ಮದ್ದು: ಮವಾದ ಮತ್ತು ಸೂಕ್ತ ಪ್ರಮಾಣದ ಔಷಧಗಳು: ಪಿನೋಬಾರ್ಬಿಟೋನ್, ಪೆನಿಟಾಯಿನ್, ಕಾರ್ಬಮೆಜೆಪಿನ್, ಸೋಡಿಯಂ ವಾಲ್ಟ್ರೊಯೇಟ್ ಬಳಕೆಯಲ್ಲಿರುವ ಜನಪ್ರಿಯ ಔಷಧಿಗಳು. ವೈದ್ಯರು ಇವುಗಳಲ್ಲಿ ಒಂದನ್ನು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸುತ್ತಾರೆ. ಯಾವ ರೋಗಿಗೆ ಎಷ್ಟು ಪ್ರಮಾಣದ ಔಷಧಿ ಬೇಕಾಗುತ್ತದೆ ಎಂಬುದು ಸ್ವಲ್ಪ ದಿನಗಳ ನಂತರವೇ ತಿಳಿಯುವುದು.
ಔಷಧಿ ಪರಿಣಾಮಕಾರಿಯಾಗಿ ಕೆಲಸ ಮಾಡಿ ಫಿಟ್ಸ್ ಬರುವುದನ್ನು ನಿಲ್ಲಿಸಬೇಕಾದರೆ ರೋಗಿ ಮತ್ತು ಮನೆಯವರು ಈ ಕೆಳಗೆ ಕೊಟ್ಟಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವೈದ್ಯರು ಸೂಚಿಸಿದ ಔಷಧ ಪ್ರಮಾಣವನ್ನು ಒಂದು ಡೋಸ್ ತಪ್ಪದೇ ಕ್ರಮವಾಗಿ ತಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಔಷಧ ಸೇವನೆಯನ್ನು ಮರೆಯಬಾರದು. ಅವಧಿಗೊಂದಾ ವರ್ತಿ (15 ಅಥವಾ 30 ದಿನಗಳಿಗೊಮ್ಮೆ) ವೈದ್ಯರನ್ನು ಕಾಣಬೇಕು. ಅನಾವಶ್ಯಕವಾಗಿ ವೈದ್ಯರನ್ನು ಬದಲಿಸಬಾರದು.
ರೋಗಿ ವೇಳೆಗೆ ಸರಿಯಾಗಿ ಆಹಾರ ಸೇವಿಸ ಬೇಕು. ಆದರೆ, ಆಹಾರ ಪಥ್ಯವೇನೂ ಇಲ್ಲ. ಯಾವುದೇ ಸಬೂಬು ಹೇಳಿ ರೋಗಿ ಉಪವಾಸ ಮಾಡಬಾರದು. ನಿದ್ರೆಗೆಡಬಾರದು. ಜ್ವರ, ವಾಂತಿ ಭೇದಿ ಇತ್ಯಾದಿ ಬೇರೆ ಯಾವುದೇ ರೋಗ ಲಕ್ಷಣ ಕಂಡು ಬಂದರೆ ತಡಮಾಡದೇ ವೈದ್ಯರ ಸಲಹೆ ಪಡೆಯಬೇಕು.
ವೈದ್ಯರು ತಿಳಿಸಿದ ಔಷಧ ಸೇವನೆಯನ್ನು ಕನಿಷ್ಠ ಐದು ವರ್ಷಗಳ ಕಾಲ ಸೇವಿಸಬೇಕು. ‘Optimism is the faith faith that leads to achievement. Nothing can be done without hope and confidence‘ ಎಂಬ ಹೆಲನ್ ಕೆಲರ್ ಮಾತು ಮೂರ್ಛೆರೋಗಿಗಳ ಬದುಕಿನ ಮಂತ್ರವಾಗಬೇಕು. ಮೂರ್ಛೆ ರೋಗಿಗಳನ್ನು ಕೀಳಾಗಿ, ಹೀನಾಯ ವಾಗಿ ಕಾಣಬಾರದು. ಎಲ್ಲ ರೀತಿಯ ಪ್ರೋತ್ಸಾಹ, ಪ್ರೀತಿ ಪ್ರೇರಣೆ, ಮಾರ್ಗದರ್ಶನ, ಆಸರೆಯನ್ನು ನೀಡಬೇಕು. ಜ್ಯೂಲಿಯಸ್ ಸೀಸರ್, ಅಲೆಕ್ಸಾಂಡರ್, ನೆಪೋಲಿಯನ್ ಬೋನಾಪಾರ್ಟ, ಖ್ಯಾತ ಕ್ರಿಕೆಟ್ ಆಟಗಾರ ಟೋನಿ ಗ್ರೇಗ್… ಇವರೆಲ್ಲ ಮೂರ್ಛೆ ರೋಗಿಗಳೇ.
ಆದರೆ, ಅವರ ಸಾಧನೆಗೆ ರೋಗವೇನಾದರೂ ಅಡ್ಡಿ ಬಂತೆ? ರೋಗಿಗಳು ಔಷಧಿಯನ್ನು ಸರಿಯಾಗಿ ತಗೆದುಕೊಂಡು ಅವಶ್ಯಕ ಮುಂಜಾಗ್ರತೆ ವಹಿಸಿದರೆ ಅವರೂ ಇತರರಂತೆ ಜೀವನ ನಡೆಸಬಹುದು. ಸಾಧಕರೂ ಆಗಬಹುದು!