ಅವಲೋಕನ
ಚಂದ್ರಶೇಖರ ಬೇರಿಕೆ
ಪ್ರತಿಷ್ಠಿತ ಆಪಲ್ ಐಫೋನ್ ತಯಾರಿಕಾ ಕಾರ್ಖಾನೆ ತೈವಾನ್ ಮೂಲದ ಸ್ಟ್ರಾನ್ ಕಾರ್ಪ್ ವಿರುದ್ಧ ನಡೆದ ದಾಂಧಲೆ ದುರದೃಷ್ಟ ಕರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜು
ಮಾಡಿದ ಘಟನೆ. ಬೆಂಗಳೂರಿನ ಪೀಣ್ಯದಲ್ಲಿ ಮೊದಲ ಘಟಕವನ್ನು ಹೊಂದಿದ ಈ ಸಂಸ್ಥೆಯು ಕೋಲಾರ ಜಿಲ್ಲೆಯ ನರಸಾಪುರ ದಲ್ಲಿ ಸುಮಾರು 3000 ಕೋಟಿ ಹೂಡಿಕೆಯೊಂದಿಗೆ ಸಂಸ್ಥೆಯ ಎರಡನೇ ಘಟಕವನ್ನು ಕಾರ್ಯಾರಂಭ ಮಾಡಿ ಎರಡನೇ ತಲೆಮಾರಿನ ಐಫೋನ್ ಎಸ್‌ಇ (2020) ಜೋಡಣೆಯನ್ನು ಪ್ರಾರಂಭಿಸಿತ್ತು ಮತ್ತು ಈಗ ಇಲ್ಲಿ ಐಫೋನ್ 11 ಸೇರಿದಂತೆ 4 ಮಾದರಿಗಳನ್ನು ತಯಾರು ಮಾಡುತ್ತಿದೆ. ಈ ಸಂಸ್ಥೆಯು ಕಾರ್ಮಿಕರನ್ನು ನೇಮಿಸಿಕೊಳ್ಳಲು ಐದಾರು ಗುತ್ತಿಗೆದಾರರನ್ನು ನಿಯೋಜಿಸಿಕೊಂಡಿದ್ದು, ಖಾಯಂ ನೌಕರರೂ ಸೇರಿದಂತೆ ಸುಮಾರು 10500 ಕ್ಕೂ ಹೆಚ್ಚು ಕಾರ್ಮಿಕರು ಈ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಡಿಸೆಂಬರ್ 12, 2020ರ ಮುಂಜಾನೆ ಸುಮಾರು 5 ಗಂಟೆಗೆ ರಾತ್ರಿ ಪಾಳಿಯ ಲ್ಲಿದ್ದ ಕಾರ್ಮಿಕರು ಮತ್ತು ಬೆಳಗಿನ ಪಾಳಿಗೆ ಬಂದು ಒಟ್ಟು ಸೇರಿದ್ದ ಸಾವಿರಾರು ಕಾರ್ಮಿಕರು ಏಕಾಏಕಿ ಕಾರ್ಖಾನೆಯ ಮೇಲೆ ದಾಳಿ ಮಾಡಿ ಸಂಸ್ಥೆಯ ಪೀಠೋಪಕರಣಗಳು, ಸಿಸಿ ಟಿ.ವಿ.ಗಳು, ಲ್ಯಾಪ್‌ಟಾಪ್ ಗಳು, ಸಾವಿರಾರು ಐಫೋನ್‌ಗಳನ್ನು ಕ್ಷಣ ಮಾತ್ರದಲ್ಲಿ ಧ್ವಂಸ ಮಾಡಿದರು. ಸ್ಮಾರ್ಟ್ ಫೋನ್ ಗಳನ್ನು ಜೋಡಿಸಲಾಗಿರುವ ಪ್ರದೇಶ ಮತ್ತು ಮುದ್ರಿತ ಸರ್ಕ್ಯೂಟ್ ಬೋರ್ಡ್‌ಗಳಂಥ ಸೂಕ್ಷ್ಮ ಘಟಕಗಳನ್ನು ಅಳವಡಿಸ ಲಾಗಿರುವ ಸಾಧನಗಳನ್ನು ಮತ್ತು ಕಚೇರಿಗಳನ್ನು ನಾಶ ಮಾಡಿ ಸಂಸ್ಥೆಯ ವಾಹನಗಳಿಗೆ ಬೆಂಕಿ ಹಚ್ಚಿದರು.
ಕೈಗೆ ಸಿಕ್ಕ ಬಹುತೇಕ ವಸ್ತುಗಳು ಮತ್ತು ಆಸ್ತಿಗಳು ಇವರ ಅಟ್ಟಹಾಸಕ್ಕೆ ಗುರಿಯಾಯಿತು. ಮಾತ್ರವಲ್ಲ ಲ್ಯಾಪ್‌ಟಾಪ್ ಹಾಗೂ ಸಾವಿರಾರು ಐಫೋನ್ಗಳನ್ನು ಕದ್ದೊಯ್ದು ಸಂಸ್ಥೆಗೆ ಕೋಟ್ಯಂತರ ರುಪಾಯಿಗಳ ನಷ್ಟವನ್ನುಂಟು ಮಾಡಿದರು. ಕೆಲವು ತಿಂಗ ಳಿಂದ ಸರಿಯಾಗಿ ವೇತನ ಪಾವತಿ ಮಾಡಿಲ್ಲ, 4 ತಿಂಗಳ ಹಿಂದೆ ವೇತನದಲ್ಲಿ ಭಾರೀ ವ್ಯತ್ಯಯ ಮಾಡಿ ವೇತನ ಕಡಿತ ಮಾಡಿದರು. ವೇತನದ ಭರವಸೆಗಿಂತ ಕಡಿಮೆ ವೇತನ ಪಾವತಿ ಮಾಡಿದ್ದು, ಕೆಲವು ಕಾರ್ಮಿಕರ ಬ್ಯಾಂಕ್ ಖಾತೆಗೆ ಕೇವಲ 500 ರುಪಾಯಿ ಜಮೆಯಾಗಿರುತ್ತದೆ.
ವಿಳಂಬ ವೇತನ ಪಾವತಿ, ಹಾಜರಾತಿಯಲ್ಲಿನ ದೋಷಗಳು, ಹೆಚ್ಚುವರಿ ಕೆಲಸದ ವೇತನ ಪಾವತಿಯ ಬಾಕಿ ಸೇರಿದಂತೆ ನಮ್ಮ ಕುಂದುಕೊರತೆಗಳನ್ನು ಪಟ್ಟಿಮಾಡಿ ಸಂಸ್ಥೆಯ ಮಾನವ ಸಂಪನ್ಮೂಲ ಭಾಗದ ಗಮನಕ್ಕೆ ತರಲಾಗಿದ್ದು, ಈ ಬಗ್ಗೆ ಹೊರಗುತ್ತಿಗೆ ಸಂಸ್ಥೆಗಳು ಮತ್ತು ಕಾರ್ಖಾನೆ ಆಡಳಿತ ಮಂಡಳಿ ಜತೆ ಚರ್ಚಿಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಲಾಗಿತ್ತು. ಅದಾಗಿ 4 ತಿಂಗಳು ಕಳೆದರೂ ಸಮಸ್ಯೆ ಇತ್ಯರ್ಥವಾಗಿಲ್ಲ. ಕೆಲಸದ ಅವಧಿ 8 ತಾಸು ಬದಲಿಗೆ 12 ತಾಸಿಗೆ ಹೆಚ್ಚಿಸಲಾಗಿತ್ತು. ಆದರೆ ವೇತನ ದಲ್ಲಿ ಹೆಚ್ಚಳ ಮಾಡುವ ಬದಲು ವೇತನ ಕಡಿತ ಮಾಡಿದ್ದರು.
ಅಲ್ಲದೇ 12 ತಾಸು ಕೆಲಸ ಮಾಡಿಸಿಕೊಂಡು 8 ತಾಸಿನ ಸಂಬಳವನ್ನೂ ಸರಿಯಾಗಿ ಪಾವತಿಸದೆ ಕಾರ್ಮಿಕ ವಿರೋಧಿ ನೀತಿ ಗಳನ್ನು ಅನುಸರಿಸುತ್ತಿದ್ದರು ಎಂದು ಆರೋಪಿಸುತ್ತಾ, ಈ ಬಗ್ಗೆ ಅಸಮಧಾನಗೊಂಡಿದ್ದ ಕಾರ್ಮಿಕರು ಪರಸ್ಪರ ಚರ್ಚಿಸುತ್ತಿದ್ದ ವೇಳೆಯಲ್ಲಿ ಕೆಲವರು ಗಲಾಟೆಗೆ ಪ್ರಚೋದಿಸಿ ದಾಂಧಲೆಗೆ ಮುಂದಾದರು. ಈ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಇತರ ಸಾವಿರಾರು ಕಾರ್ಮಿಕರು ಪ್ರೇರಣೆಗೊಂಡು ಸಂಸ್ಥೆಯ ಆಸ್ತಿಪಾಸ್ತಿಗಳನ್ನು ನಾಶ ಮಾಡಿದರು ಎಂಬುದು ಕಾರ್ಮಿಕರ ಸಮಜಾಯಿಷಿ.
ಈ ಘಟನೆಯ ಬಗ್ಗೆ ತನಿಖೆ ಕೈಗೊಂಡ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ‘ಸ್ಟ್ರಾನ್ ಸಂಸ್ಥೆ ಮತ್ತು ಕಾರ್ಮಿಕರನ್ನು ಪೂರೈಕೆ ಮಾಡುವ ಹೊರಗುತ್ತಿಗೆ ಸಂಸ್ಥೆಗಳು ಹಲವಾರು ಕಾರ್ಮಿಕ ಕಾನೂನುಗಳ ಉಲ್ಲಂಘನೆ ಮಾಡಿದೆ. ಉದ್ಯೋಗ ಮತ್ತು ನೇಮಕಾತಿ ವಿವರಗಳನ್ನು ನಿರ್ವಹಿಸಿಲ್ಲ. ಈ ಘಟಕದಲ್ಲಿ 12 ಗಂಟೆಗಳ ಪಾಳಿಯಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದರು ಮತ್ತು ಹೆಚ್ಚುವರಿ ಕೆಲಸದ ವೇತನ ಪಾವತಿ ಮಾಡಿಲ್ಲ. ವೇತನ ಮತ್ತು ಹಾಜರಾತಿ ದಾಖಲೆ ಗಳನ್ನು ನಿರ್ವಹಿಸಿಲ್ಲ ಹಾಗೂ ತನಿಖೆಯ ಸಮಯದಲ್ಲಿ ಹಾಜರುಪಡಿಸಿಲ್ಲ’ ಎಂದು ತನ್ನ ಪ್ರಾಥಮಿಕ ತನಿಖೆಯ ವರದಿಯಲ್ಲಿ ತಿಳಿಸಿದೆ.
ಆಪಲ್ ಸಂಸ್ಥೆ ತನ್ನ ಉತ್ಪನ್ನಗಳ ಪೂರೈಕೆದಾರರ ನೀತಿ ಸಂಹಿತೆಯಲ್ಲಿ, ‘ಪೂರೈಕೆದಾರರು ವೇತನ ಮತ್ತು ಸವಲತ್ತುಗಳಿಗೆ ಸಂಬಂಧಿಸಿದ ಎಲ್ಲಾ ಕಾನೂನು ಮತ್ತು ಅವಶ್ಯಕತೆಗಳನ್ನು ಪೂರೈಸಬೇಕು ಮತ್ತು ನಿಖರವಾದ ವೇತನವನ್ನು ಸಮಯೋಚಿತ ವಾಗಿ ಪಾವತಿಸುವುದು ಸೇರಿದಂತೆ ನೌಕರರ ಮೇಲಿನ ಶಿಸ್ತಿನ ಕ್ರಮವಾಗಿ ವೇತನ ಕಡಿತವನ್ನು ಮಾಡಬಾರದು ಮತ್ತು ಹೊರ ಗುತ್ತಿಗೆ ಕಾರ್ಮಿಕರ ಎಲ್ಲಾ ಬಳಕೆಯು ಸ್ಥಳೀಯ ಕಾನೂನಿನ ಮಿತಿಯಲ್ಲಿರಬೇಕು ಎಂಬ ಷರತ್ತನ್ನು ವಿಧಿಸಿರುತ್ತದೆ.
ಕೆಲಸಕ್ಕೆ ಸುರಕ್ಷಿತ ವಾತಾವರಣ ನಿರ್ಮಿಸಿ, ನೌಕರರನ್ನು ಘನತೆ, ಗೌರವ, ಸಮಾನತೆ ಮತ್ತು ನೈತಿಕತೆಯಿಂದ ನಡೆಸಿಕೊಳ್ಳಬೇಕು. ಯಾವುದೇ ಪ್ರದೇಶ ಅಥವಾ ದೇಶದಲ್ಲಿ ಉತ್ಪನ್ನಗಳ ತಯಾರಿಕೆ ಮಾಡುತ್ತಿದ್ದಾರೋ ಅಲ್ಲಿನ ಪರಿಸರಕ್ಕೆ ತಕ್ಕಂತೆ ನಿಯಮ ಗಳನ್ನು ಪಾಲಿಸಬೇಕು’ ಎಂಬ ಷರತ್ತುಗಳನ್ನು ಪ್ರತಿಪಾದಿಸಿದೆ. ಈ ಹಿನ್ನೆಲೆಯಲ್ಲಿ ಆಪಲ್ ಸಂಸ್ಥೆ ತನ್ನ ಮೊಬೈಲ್ ತಯಾರಿಕಾ ಮತ್ತು ಪೂರೈಕೆ ಗುತ್ತಿಗೆ ಸಂಸ್ಥೆಯಾದ ಸ್ಟ್ರಾನ್ ಕಾರ್ಪ್ ಮೇಲೆ ಸತ್ಯಾನ್ವೇಷಣಾ ತನಿಖೆಯನ್ನು ಕೈಗೊಂಡಿದೆ.
ಕಾರ್ಮಿಕ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಪಲ್ ಸಂಸ್ಥೆಯು ತನ್ನ ಪೂರೈಕೆದಾರರ ಪೈಕಿ ಪೆಗಾಟ್ರಾನ್ ಕಾರ್ಪ್‌ನೊಂದಿಗಿನ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಿತ್ತು ಎಂಬುದು ಗಮನಾರ್ಹ. ಈ ಘಟನೆಯಲ್ಲೂ ಅದೇ ಪ್ರಕಾರದ ನಿರ್ಧಾರ ತೆಗೆದು ಕೊಂಡರೂ ಆಶ್ಚರ್ಯವಿಲ್ಲ. ಕಾರ್ಮಿಕರನ್ನು ಪೂರೈಕೆ ಮಾಡುವ ಹೊರಗುತ್ತಿಗೆ ಸಂಸ್ಥೆಗೆ ವೇತನದ ಪೂರ್ಣ ಹಣವನ್ನು ನೀಡಲಾಗಿತ್ತು. ಆದರೆ ಹೊರಗುತ್ತಿಗೆದಾರರು ಕಾರ್ಮಿಕರಿಗೆ ವೇತನದ ಹಣವನ್ನು ಸಮರ್ಪಕವಾಗಿ ನೀಡಿಲ್ಲ ಎಂದು ವಿಸ್ಟ್ರಾನ್ ಸಂಸ್ಥೆ ಘಟನೆ ನಡೆದ ಸಂದರ್ಭದಲ್ಲಿ ಹೇಳಿಕೊಂಡಿತ್ತು.
ಆದರೆ ಡಿಸೆಂಬರ್ 19, 2020ರಂದು ಸಂಸ್ಥೆಯು ತನ್ನ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಕಾರ್ಖಾನೆಯನ್ನು ಸ್ಥಾಪಿಸುವ ಮತ್ತು ವಿಸ್ತರಿಸುವ ಪ್ರಕ್ರಿಯೆಯಲ್ಲಿ ಹಾಗೂ ಕಾರ್ಮಿಕರಿಗೆ ವೇತನ ಪಾವತಿ ವಿಚಾರದಲ್ಲಿ ಕೆಲವು ಲೋಪಗಳಾಗಿವೆ ಎಂಬುದನ್ನು ಒಪ್ಪಿಕೊಂಡಿದೆ. ಇದಕ್ಕಾಗಿ ಕಾರ್ಮಿಕರಲ್ಲಿ ಕ್ಷಮೆಯಾಚಿಸಿದೆ ಮತ್ತು ಆಗಿರುವ ಲೋಪಕ್ಕೆ ಶಿಸ್ತು ಕ್ರಮವಾಗಿ ಸಂಸ್ಥೆಯ ಭಾರತದ ಕಾರ್ಯಭಾರವನ್ನು ನಿಭಾಯಿಸುತ್ತಿದ್ದ ಉಪಾಧ್ಯಕ್ಷನನ್ನು ತಲೆದಂಡ ಮಾಡಿದೆ.
ಘಟನೆಯ ಸಂಬಂಧ ಕೈಗಾರಿಕಾ ಇಲಾಖೆಯ ತನಿಖಾ ವರದಿಯ ಪ್ರಕಾರ, ಕಾರ್ಖಾನೆಯು ಆರಂಭದಲ್ಲಿ 5000 ಕಾರ್ಮಿಕ
ರನ್ನು ನೇಮಿಸಿಕೊಳ್ಳಲು ಅನುಮತಿ ಪಡೆದಿತ್ತು. ಆದರೆ ಒಂದೆರಡು ತಿಂಗಳಲ್ಲಿ ಕಾರ್ಮಿಕರ ಸಂಖ್ಯೆಯಲ್ಲಿ 10, 500ಕ್ಕೆ
ಏರಿಕೆಯಾಗಿತ್ತು. ಇಷ್ಟು ಸಂಖ್ಯೆಯ ಕಾರ್ಮಿಕರನ್ನು ಸಂಭಾಳಿಸಲು ಅಗತ್ಯ ಸಿಬ್ಬಂದಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದಲ್ಲಿ ಇರಲಿಲ್ಲ. ಇದರಿಂದ ಸಂಬಂಧಪಟ್ಟ ಕಾನೂನುಗಳ ಅನುಷ್ಠಾನ ಮತ್ತು ಸಂಸ್ಥೆಯ ನಿಯಮ ಪಾಲನೆಯಲ್ಲಿ ವ್ಯತ್ಯಯವಾಗಿದೆ ಎಂದು ಹೇಳಿದೆ.
ಈ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳಲು ಯಾವುದೇ ಶೈಕ್ಷಣಿಕ ಅರ್ಹತೆ ಬೇಕಿರಲಿಲ್ಲ. ಕರೋನಾದಿಂದಾಗಿ ಶೈಕ್ಷಣಿಕ ಚಟುವಟಿಕೆ ಗಳು ಸ್ಥಗಿತಗೊಂಡಿದ್ದ ಕಾರಣದಿಂದ ಮನೆಗಳಲ್ಲೇ ಇದ್ದ ವಿದ್ಯಾರ್ಥಿಗಳು ಸಮಯ ಕಳೆಯುವ ಸಲುವಾಗಿ ಕೆಲಸಕ್ಕೆ ಸೇರಿಕೊಂಡಿ ದ್ದರು. ಇವರಿಗೆ ಯಾವುದೇ ರೀತಿಯ ಸೇವಾ ನಿಷ್ಠೆಯ ಮನೋಭಾವನೆ ಇರಲಿಲ್ಲ. ಈ ದಾಂಧಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಕಾರ್ಮಿಕರೇ ತೊಡಗಿಕೊಂಡಿದ್ದರು ಎಂಬುದಾಗಿ ಕೆಲವು ಕಾರ್ಮಿಕರು ಅಭಿಪ್ರಾಯಪಟ್ಟಿದ್ದಾರೆಂಬ ವರದಿಯೂ ಇದೆ.
ಹೀಗಾಗಿ ಹೊರಗುತ್ತಿಗೆ ಸಂಸ್ಥೆಗಳು ಪರಿಸ್ಥಿತಿಯ ಲಾಭ ಪಡೆದು ತಮ್ಮ ಅಧೀನದಲ್ಲಿ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡು
ಲಾಭ ಪಡೆಯುವ ಮನಸ್ಥಿತಿಯಿಂದ ಕಾರ್ಮಿಕರ ಪೂರ್ವಾಪರ ಮತ್ತು ಉದ್ದೇಶ ತಿಳಿದುಕೊಳ್ಳದೇ ನೇಮಿಸಿಕೊಂಡರು ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. ಹಾಗಾದರೆ ಸ್ಟ್ರಾನ್ ಕಾರ್ಪ್ ಸಂಸ್ಥೆಯು ಎಡವಿದ್ದೆಲ್ಲಿ? ಸಂಸ್ಥೆ ಮತ್ತು ಮಾನವ ಸಂಪನ್ಮೂಲ ವಿಭಾಗವು ಕಾರ್ಮಿಕ ಪೂರೈಕೆದಾರರ ಮೇಲೆ ಅತಿಯಾಗಿ ಅವಲಂಬಿತವಾಗಿತ್ತೇ? ಯಾವುದೇ ಸಂಸ್ಥೆಯಲ್ಲಿ ಮತ್ತು ಸಂಸ್ಥೆಯ ಅಳಿವು, ಉಳಿನಲ್ಲಿ ಮಾನವ ಸಂಪನ್ಮೂಲ ವಿಭಾಗವು ನಿರ್ಣಾಯಕ ಪಾತ್ರ ವಹಿಸುತ್ತದೆ.
ದೇಶಿ ಮೂಲದ ಕಾರ್ಖಾನೆಗಳು ನಮ್ಮಲ್ಲಿ ಬಂಡವಾಳ ಹೂಡಿ ಕೈಗಾರಿಕೆಗಳನ್ನು ಪ್ರಾರಂಭಿಸಿದರೂ ಅವರಿಗೆ ಇಲ್ಲಿಯ ನೆಲದ ಕಾನೂನುಗಳ ಬಗ್ಗೆ ಅರಿವು ಇರುವುದಿಲ್ಲ. ಅದನ್ನು ಸಂಸ್ಥೆಗಳಲ್ಲಿ ಅನುಷ್ಠಾನ ಮಾಡುವ ಮಹತ್ತರ ಜವಾಬ್ದಾರಿ ಮಾನವ ಸಂಪನ್ಮೂಲ ವಿಭಾಗದ ಹೊಣೆಗಾರಿಕೆಯಾಗಿರುತ್ತದೆ. ಕನಿಷ್ಠ ವೇತನ ಮತ್ತು ಗುತ್ತಿಗೆ ಕಾರ್ಮಿಕ ಕಾಯಿದೆಯ ಪ್ರಾವಧಾನಗಳು ಮತ್ತು ಮಾರ್ಗಸೂಚಿಗಳು, ಹೆಚ್ಚುವರಿ ಕೆಲಸದ ವೇತನ, ದಿನದ ಕೆಲಸದ ಗರಿಷ್ಠ ಅವಧಿಯ ಅನುಷ್ಠಾನ ಮತ್ತು ಹೊರಗುತ್ತಿಗೆ
ಸಂಸ್ಥೆಯವರಿಂದ ನಿಯಮಾನುಸಾರ ವೇತನ ಪಾವತಿ ಹಾಗೂ ಸಾಮಾಜಿಕ ಭದ್ರತಾ ಕಾಯಿದೆಗಳ ಪ್ರಾವಧಾನಗಳ ಪಾಲನೆ ಯನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.
ಸಂಸ್ಥೆಗೆ ಕಾರ್ಮಿಕರನ್ನು ಪೂರೈಸುತ್ತಿದ್ದ ಹೊರಗುತ್ತಿಗೆ ಸಂಸ್ಥೆಯವರ ಜತೆ ಮಾನವ ಸಂಪನ್ಮೂಲ ವಿಭಾಗದ ಸಿಬ್ಬಂದಿಗಳು
ಶಾಮೀಲಾಗಿ ಅವ್ಯವಹಾರ ಮಾಡಿರುವುದೇ ಗಲಭೆಗೆ ಕಾರಣ ಎಂಬ ವರದಿಯೂ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಮಾನವ ಸಂಪನ್ಮೂಲ ವೃತ್ತಿನಿರತರ ವಿರುದ್ಧ ಇಂತಹ ಆರೋಪಗಳು ಆಗಾಗ ಸದ್ದು ಮಾಡುತ್ತಿವೆ. ಈ ವೃತ್ತಿನಿರತರು ಸದಾ ಪ್ರಾಮಾಣಿಕ ರಾಗಿರಬೇಕು, ಶುದ್ಧ ಹಸ್ತರಾಗಿರಬೇಕು ಮತ್ತು ವೃತ್ತಿಮೌಲ್ಯ ಹಾಗೂ ನೈತಿಕತೆಯನ್ನು ಕಾಪಾಡಿಕೊಳ್ಳಬೇಕು.
ಸಂಸ್ಥೆಯ ಒಳಿತನ್ನು ಬಯಸಬೇಕು. ಹಾಗೆಯೇಕಾರ್ಮಿಕರಿಗೂ ನ್ಯಾಯವನ್ನು ಒದಗಿಸುತ್ತಾ ಸಂಸ್ಥೆಯ ಘನತೆಯನ್ನು ಎತ್ತಿ ಹಿಡಿಯಬೇಕು. ಕೆಲವು ವೃತ್ತಿ ಕಳಂಕಿತರ ನೀಚ, ಹೊಣೆಗೇಡಿ ಮತ್ತು ವಾಮಮಾರ್ಗದ ಹಣಬಾಕತನ ಪ್ರವೃತ್ತಿಯಿಂದ ಒಂದು ವೃತ್ತಿ ಸಮೂಹ ಅಪಕೀರ್ತಿ ಒಳಗಾಗಬೇಕಾಗುವುದು ಖೇದಕರ.
ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆಯಲ್ಲಿ ಆಡಳಿತ ವರ್ಗ ಮತ್ತು ಕಾರ್ಮಿಕ ಸಂಘಟನೆಗಳ ನಡುವಿನ ವಾದ ಇತ್ಯರ್ಥವಾಗುವಲ್ಲಿ ಅನಿಶ್ಚಿತತೆ ಮುಂದುವರಿದ ಸಂದರ್ಭದಲ್ಲೇ ಸ್ಟ್ರಾನ್ ಸಂಸ್ಥೆಯಲ್ಲಿ ನಡೆದಿರುವ ಘಟನೆ ಆಘಾತಕಾರಿ ಬೆಳವಣಿಗೆಯಾಗಿದೆ. ಅದೂ ಅಲ್ಲದೇ ಘಟನೆಗೆ ಒಂದು ದಿನದ ಹಿಂದೆ ಅಂದರೆ ಡಿಸೆಂಬರ್ 11, 2020ರಂದು ತೈಪೆಯ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ಜನರಲ್ ಬೆನ್ ವಾಂಗ್ ಅವರ ನೇತೃತ್ವದ ನಿಯೋಗ ಕರ್ನಾಟಕದ ಮುಖ್ಯಮಂತ್ರಿ
ಯವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಇನ್ನಷ್ಟು ಹೂಡಿಕೆಗೆ ಒಲವು ವ್ಯಕ್ತಪಡಿಸಿದ ಮರುದಿನವೇ ಈ ಘಟನೆ ನಡೆದಿರುವುದು ಆಘಾತಕಾರಿ.
ಈ ದಾಂಧಲೆ ಪ್ರಕರಣವನ್ನು ಚೀನಾ ಮುಂದಿಟ್ಟುಕೊಂಡು ತನ್ನ ದೇಶವನ್ನು ತೊರೆಯಲು ಉದ್ದೇಶಿಸಿರುವ ವಿವಿಧ ದೇಶಗಳ ಕಂಪನಿಗಳಿಗೆ ಎಚ್ಚರಿಕೆ ನೀಡುವ ಕೆಲಸವನ್ನು ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯು ಈ ಘಟನೆಯನ್ನು ಉತ್ಪ್ರೇಕ್ಷೆ ಮಾಡಿ ಭಾರತದಲ್ಲಿ ಹೂಡಿಕೆಗೆ ಪೂರಕ ವಾತಾವರಣವಿಲ್ಲ ಎಂಬಂತೆ ಪ್ರಚಾರ ಮಾಡಿ ಬೆದರಿಕೆ ಒಡ್ಡುತ್ತಿದೆ.
ಇದು ಭಾರತದ ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಅಭಿಯಾನಕ್ಕೆ ದೊಡ್ಡ ಹೊಡೆತವಾಗಲಿದ್ದು, ಭಾರತ ವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡಿ ಯಶಸ್ಸು ಸಾಧಿಸುವ ಭಾರತ ಸರಕಾರದ ಪ್ರಯತ್ನಕ್ಕೆಕೊಳ್ಳಿ ಇಟ್ಟಂತಾಗಿದೆ. ಆಪಲ್ ಸಂಸ್ಥೆಯು ಚೀನಾ ದೇಶದ ಬದಲಿಗೆ ಭಾರತವನ್ನು ನೆಲೆಯಾಗಿಟ್ಟುಕೊಂಡು ತನ್ನ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ಬಯಸಿತ್ತು. ಹೀಗಾಗಿ ವಿಸ್ಟ್ರಾನ್ ಸಂಸ್ಥೆಯು ತನ್ನ ಕಾರ್ಮಿಕರ ಸಂಖ್ಯೆಯನ್ನು ಮುಂದಿನ ಒಂದೂವರೆ ವರ್ಷದ ಅವಽಯಲ್ಲಿ ಸುಮಾರು 25000ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿತ್ತಾದರೂ ಈ ಘಟನೆಯಿಂದ ಆಪಲ್ ಮತ್ತು ವಿಸ್ಟ್ರಾನ್ ಸಂಸ್ಥೆಗಳ
ಮಹತ್ವಾಕಾಂಕ್ಷೆಗೆ ಧಕ್ಕೆಯಾಗಿದೆ.
ಆದಾಗ್ಯೂ ವಿಸ್ಟ್ರಾನ್ ಸಂಸ್ಥೆಯು ಈ ಘಟಕವನ್ನು ಮತ್ತೆ ಪುನರಾರಂಭಿಸುವ ಬಗ್ಗೆ ಬಯಕೆಯನ್ನು ವ್ಯಕ್ತಪಡಿಸಿದ್ದು ಶ್ಲಾಘನೀಯ.
ಕಾರ್ಮಿಕರಿಗೆ ಆಗಿರುವ ಅನ್ಯಾಯವನ್ನು ಯಾರೂ ಸಮರ್ಥಿಸುವುದಿಲ್ಲ. ಆದರೆ ಕಾರ್ಮಿಕರು ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಅದಕ್ಕೆ ಗುತ್ತಿಗೆದಾರ ರಾಗಲಿ ಅಥವಾ ಸಂಸ್ಥೆಯವರಾಗಲಿ ಸೂಕ್ತವಾಗಿ ಸ್ಪಂದಿಸ ದಿದ್ದಲ್ಲಿ ಅವರ ಕುಂದು ಕೊರತೆಗಳನ್ನು ಲಭ್ಯವಿರುವ ಕಾನೂನುಗಳಡಿಯಲ್ಲಿ ಇಲ್ಲವೇ ಸಂಬಂಧಪಟ್ಟ ವೇದಿಕೆಗಳಲ್ಲಿ ಸಾಂವಿಧಾನಿಕ ವಿಧಾನಗಳ
ಮೂಲಕ ಶಾಂತಿಯುತವಾಗಿ ಪರಿಹರಿಸಿಕೊಳ್ಳಬಹುದಿತ್ತು.
ಇದರ ಬದಲಾಗಿ ಕಾನೂನನ್ನು ಕೈಗೆತ್ತಿಕೊಂಡು ಜಾಗತಿಕ ಮಟ್ಟದಲ್ಲಿ ಭಾರತವು ತಲೆಬಾಗು ವಂತೆ ಮಾಡಿದ್ದು ಅಕ್ಷಮ್ಯ.
ಕೈಗಾರಿಕಾ ಸಂಸ್ಥೆಗಳೂ ಸಹ ಕೇವಲ ಲಾಭ ಗಳಿಕೆಗೆ ಮಾತ್ರ ಆದ್ಯತೆ ನೀಡದೆ ತಮ್ಮ ಕರ್ತವ್ಯ ಮತ್ತು ಕಾನೂನುಗಳ ಅನುಷ್ಠಾನದ ಹೊಣೆಗಾರಿಯನ್ನೂ ನಿಭಾಯಿಸಬೇಕು ಹಾಗೂ ಕಾರ್ಮಿಕರ ಅಭ್ಯುದಯವನ್ನೂ ಬಯಸಬೇಕು. ಈ ಘಟನೆಗೆ ಸಂಬಂಧಪಟ್ಟಂತೆ ಸುಮಾರು ೭೦೦೦ ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದ್ದು, ಕಾರ್ಮಿಕರು ತಮಗೆ ಅನ್ನ ನೀಡುವ ಕೈಯನ್ನೇ ಕಚ್ಚಿದಂತಾಗಿದೆ.
ಒಂದು ಕಡೆ ಸರಕಾರಗಳು ಕೈಗಾರಿಕೆಗಳಿಂದ ಬಂಡವಾಳ ಹೂಡಿಕೆ ಮಾಡಿ ಉದ್ಯೋಗ ಸೃಷ್ಟಿಸಲು ಕೈಗಾರಿಕಾ ಸ್ನೇಹಿ ವಾತಾವರಣ
ನಿರ್ಮಾಣ ಮಾಡಲು ಪ್ರಯತ್ನಿಸಿದರೆ ಇನ್ನೊಂದೆಡೆ ಇಂಥ ಘಟನೆಗಳಿಂದ ಕೈಗಾರಿಕೆಗಳನ್ನು ಆಕರ್ಷಿಸಲು ಹಿನ್ನಡೆಯಾಗಲಿದೆ. ಉದ್ಯೋಗ ನೀಡುವ ಸಂಸ್ಥೆಗಳನ್ನು ನಿರ್ನಾಮ ಮಾಡಿ ನಿರುದ್ಯೋಗ ಸಮಸ್ಯೆನಿವಾರಣೆ ಮಾಡಲು ಸಾಧ್ಯವಿಲ್ಲ