Saturday, 14th December 2024

ವಿರೋಧಿಗಳ ನಿದ್ದೆ ಕೆಡಿಸಿದ 2023ರ ಬಜೆಟ್

ವೀಕೆಂಡ್ ವಿತ್ ಮೋಹನ್

camohanbn@gmail.com

ಒಂದೆಡೆ ಕರೋನದಿಂದಾಗಿ ಜಾಗತಿಕ ಆರ್ಥಿಕ ಹಿಂಜರಿತ, ಮತ್ತೊಂದೆಡೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಪರಿಣಾಮ ಸ್ಥಗಿತಗೊಂಡಿ ರುವ ಜಾಗತಿಕ ಸರಬರಾಜು ಸರಪಳಿ. ಪರಿಣಾಮ ಜಗತ್ತಿನ ಬಹುತೇಕ ಮುಂದುವರಿದ ದೇಶಗಳ ಆರ್ಥಿಕ ಪರಿಸ್ಥಿತಿ ಹೀನಾಯವಾಗಿದೆ. ಮಗದೊಂದೆಡೆ ಸಣ್ಣ ಪುಟ್ಟ ದೇಶಗಳ ಪರಿಸ್ಥಿತಿ ಅಧೋಗತಿಗೆ ತಲುಪಿದೆ.

ಪಕ್ಕದ ಪಾಕಿಸ್ತಾನದ ಜನರಿಗೆ ಹೊಟ್ಟೆಗೆ ತಿನ್ನಲೂ ಅನ್ನವಿಲ್ಲ. ರಸ್ತೆಗಳಲ್ಲಿ ಒಂದು ಕಿಲೋಗ್ರಾಮ್ ಗೋಧಿಗಾಗಿ ಹೊಡೆದಾಟಗಳು ನಡೆಯುತ್ತಿವೆ. ಒಂದು ಲೀಟರ್ ಹಾಲಿನ ಬೆಲೆ ೧೫೦ ರುಪಾಯಿ ತಲುಪಿದೆ. ವಿಶ್ವ ಬ್ಯಾಂಕ್ ಪಾಕಿಸ್ತಾನಕ್ಕೆ ಹಣ ನೀಡಲು ನಿರಾಕರಿಸಿದೆ. ಇತ್ತ ಶ್ರೀಲಂಕಾ ದೀವಾಳಿ ಯಾಗಿದೆ. ಅಲ್ಲಿನ ಜನರಿಗೆ ಪೆಟ್ರೋಲ್ ಡೀಸೆಲ್ ಸಿಗುತ್ತಿಲ್ಲ. ರಾತೋ ರಾತ್ರಿ ಅಲ್ಲಿನ ಅಧ್ಯಕ್ಷ ದೇಶ ಬಿಟ್ಟು ಓಡಿಹೋಗಿದ್ದಾನೆ. ಬ್ರಿಟಿಷ್ ಸಾಮ್ರಾಜದ ಪ್ರಧಾನಿ ಕೇವಲ ೪೫ ದಿನಗಳ ಆಡಳಿತಕ್ಕೆ ಹೆದರಿ ರಾಜೀನಾಮೆ ನೀಡಿದ್ದರು.

ನ್ಯೂಜಿಲೆಂಡ್‌ನ ಪ್ರಧಾನಮಂತ್ರಿ ಆಡಳಿತ ನಡೆಸಲಾಗದೇ ರಾಜೀನಾಮೆ ನೀಡಿ ಮನೆಗೆ ತೆರಳಿದ್ದಾರೆ. ಅಮೆರಿಕದ ಹಣದುಬ್ಬರ ಇಳಿಯುತ್ತಲೇ ಇಲ್ಲ. ಇಂತಹ ವಿಷಮ ಪರಿಸ್ಥಿತಿ ಯಲ್ಲಿ ೧೩೮ ಕೋಟಿ ಜನಸಂಖ್ಯೆಯ ಭಾರತದಂತಹ ದೇಶವನ್ನು ಮುನ್ನಡೆಸು ವುದು ಬಹುದೊಡ್ಡ ಸವಾಲಿನ ಕೆಲಸ. ಸಮಾಜದ ಪ್ರತಿಯೊಂದು ವರ್ಗವನ್ನೂ ಗಣನೆಗೆ ತೆಗೆದುಕೊಂಡು ಜಾಗತಿಕ ಮಟ್ಟದ ಏರುಪೇರುಗಳನ್ನು ಸಂಬಾಳಿಸಿಕೊಂಡು ಭಾರತದಂತಹ ದೇಶದ ಬಜೆಟ್ ಮಂಡಿಸುವುದು ಸುಲಭದ ಕೆಲಸವಲ್ಲ. ಕೋವಿಡ್ ನಂತರ ನಿರ್ಮಲಾ ಸೀತಾರಾಮನ್ ಮಂಡಿಸಿದ ಮೂರನೇ ಬಜೆಟ್ ಇದು. ಈ ಮೂರೂ ಬಜೆಟ್ ಕೂಡ ಅವರಿಗೆ ಸವಾಲಾಗಿತ್ತು.

ಆದಾಯಕ್ಕೆ ಕತ್ತರಿ ಬಿದ್ದರೂ ದೇಶದ ಜನರಿಗೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಬೇಕಿತ್ತು. ಬಜೆಟ್ ೨೦೨೩, ಕಾಂಗ್ರೆಸ್ ಅವಧಿಯಂತೆ ಗಂಟೆಗಟ್ಟಲೆ ರೈಲು ಬಿಡುವ ಬಜೆಟ್ ಆಗಿರಲಿಲ್ಲ. ಹೆಚ್ಚಾಗಿ ನೂತನ ಘೋಷಣೆಗಳು ಕಾಣಲಿಲ್ಲ.ಹಿಂದಿನ ಯೋಜನೆಗಳನ್ನು ಪೂರ್ಣಗೊಳಿಸುವತ್ತ ಹೆಚ್ಚಿನ ಗಮನ ಹರಿಸಲಾಗಿದೆ. ಹಿಂದೆಲ್ಲ ಘೋಷಣೆಗಳಾಗುತ್ತಿದ್ದವು, ಆದರೆ ಅವುಗಳ ಅನುಷ್ಠಾನವಾಗುತ್ತಿರಲಿಲ್ಲ. ಉದಾಹರಣೆಗೆ ದೇವೇಗೌಡರು ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲಿ ಗುದ್ದಲಿಪೂಜೆ ಮಾಡಿದ ‘ಬೋಗಿ ಬಿಲ’ ಸೇತುವೆ ನರೇಂದ್ರ ಮೋದಿಯವರು ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರ ಉದ್ಘಾಟನೆಯಾಯಿತು.

೨೦೨೩ರ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ಸುಮಾರು ೨,೪೦,೦೦೦ ಕೋಟಿಯ ಹಣವನ್ನು ಮೀಸಲಿಡಲಾಗಿದೆ. ಹಿಂದೊಂದು ಕಾಲವಿತ್ತು, ರೈಲ್ವೆ ಬಜೆಟ್‌ಗಾಗಿ ಒಂದು ಇಡೀ ದಿನವನ್ನೇ ಸದನದಲ್ಲಿ ಮೀಸಲಿಡಲಾಗುತ್ತಿತ್ತು. ಒಂದು ಊರಿನಿಂದ ಮತ್ತೊಂದು ಊರಿಗೆ ಘೋಷಣೆಯಾದ ರೈಲುಗಳ ಹೆಸರನ್ನು ಓದುವುದೇ ರೈಲ್ವೆ ಸಚಿವರಿಗೆ ದೊಡ್ಡ ಕೆಲಸವಾಗಿರುತ್ತಿತ್ತು. ಹಿಂದಿನ ಸರಕಾರಗಳು ಒಂದು ಇಡೀ ದಿನವನ್ನೇ ರೈಲ್ವೆ ಬಜೆಟಿಗೆ ಮೀಸಲಿಟ್ಟಿ ದ್ದರೂ ಕನಿಷ್ಠವೆಂದರೂ ತಿಂಗಳಿಗೊಂದರಂತೆ ದೇಶದಲ್ಲಿ ರೈಲು ಅಪಘಾತ ಗಳಾಗುತ್ತಿದ್ದವು. ಆದರೆ ಕಳೆದ ಒಂಬತ್ತು ವರ್ಷಗಳಲ್ಲಿ ಕೇವಲ ಬೆರಳೆಣಿಕೆ ಯಷ್ಟು ಅಪಘಾತಗಳು ಮಾತ್ರ ಸಂಭವಿಸಿವೆ.

೨೦೨೩ರ ಬಜೆಟ್ ಮಾಧ್ಯಮ ವರ್ಗದವರಿಗೆ ಬಂಪರ್ ಎಂದರೆ ತಪ್ಪಿಲ್ಲ. ೨೦೧೪ರಲ್ಲಿ ವ್ಯಕ್ತಿಯೊಬ್ಬರ ಆದಾಯ ೨.೫ಲಕ್ಷ ರು. ದಾಟಿದರೆ ಸಾಕು ಆದಾಯ ತೆರಿಗೆ ಕಟ್ಟಬೇಕಿತ್ತು. ೨೦೨೩ ರ ಬಜೆಟಿನಲ್ಲಿ ಅದನ್ನು ಏಳು ಲಕ್ಷಕ್ಕೆ ಏರಿಸಲಾಗಿದೆ. ತಿಂಗಳಿಗೆ ಸುಮಾರು ೫೮,೦೦೦ ರೂಪಾಯಿ ಸಂಬಳ ಪಡೆಯುವ ವ್ಯಕ್ತಿ ಆದಾಯ ತೆರಿಗೆ ಕಟ್ಟಬೇಕಿಲ್ಲ. ಆದಾಯ ತೆರಿಗೆ ವ್ಯವಸ್ಥೆಯಲ್ಲಿ ೭ಲಕ್ಷದವರೆಗೂ ಆದಾಯ ಗಳಿಸುವ ಬಹುದೊಡ್ಡ ವರ್ಗವಿದೆ. ಇಂತಹ ಬಹುದೊಡ್ಡ ವರ್ಗಕ್ಕೆ ಆದಾಯ ತೆರಿಗೆ ವಿನಾಯಿತಿ ನೀಡಿದರೆ ಅವರಿಗೆ ಖರ್ಚು ಮಾಡಲು ಹಣವಿರುತ್ತದೆ.

ಹೆಚ್ಚಾಗಿ ಹಣ ಖರ್ಚಾದರೆ ಸಮಾಜದಲ್ಲಿನ ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತವೆ. ಆರ್ಥಿಕ ಚಟುವಟಿಕೆಗಳು ಹೆಚ್ಚಾದಂತೆ ಭಾರತದ ಆರ್ಥಿಕತೆಯ ಬೆಳವಣಿಗೆಯ ವೇಗ ಹೆಚ್ಚುತ್ತದೆ. ೨೦೧೪ರಲ್ಲಿ ಭಾರತದ ಆರ್ಥಿಕತೆಯ ಮೊತ್ತ ಅಂದಾಜು ೧.೧೫ ಟ್ರಿಲಿಯನ್ ಅಮೆರಿಕನ್ ಡಾಲರ್ ಇತ್ತು, ಪ್ರಸ್ತುತ ಇದು ೩ ಟ್ರಿಲಿಯನ್ ಅಮೆರಿಕನ್ ಡಾಲರ್ ದಾಟಿದೆ. ಕೇವಲ ಒಂಬತ್ತು ವರ್ಷದಲ್ಲಿ ಭಾರತದ ಆರ್ಥಿಕತೆ ಮೂರುಪಟ್ಟು ಹೆಚ್ಚಾಗಿದೆ. ಅತ್ತ ಕರೋನ ಹಾಗೂ ರಷ್ಯಾ ಯುದ್ಧದ ನಡುವೆಯೂ ಜಗತ್ತಿನ ಇತರ ದೇಶಗಳು ಮಾಡದ ಸಾಧನೆಯನ್ನು ಭಾರತ ಮಾಡಿದೆ. ಈಗಿನ ಬಜೆಟಿನ ಮತ್ತೊಂದು ವಿಶೇಷವನ್ನು ಹೇಳಲೇಬೇಕು, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಬಜೆಟ್ ಮಾರ್ಚ್ ತಿಂಗಳಲ್ಲಿ ನಡೆಯುತ್ತಿತ್ತು. ನಂತರ ಏಪ್ರಿಲ್ ತಿಂಗಳಲ್ಲಿ ಬಜೆಟ್ ಅಧಿವೇಶನದ ಚರ್ಚೆಗಳ ನಂತರ ರಾಷ್ಟ್ರಪತಿಗಳ ಅಂಕಿತ ಬಿದ್ದು ಇಲಾಖೆಗಳಿಗೆ ತಲುಪುವಷ್ಟರಲ್ಲಿ ಜೂನ್ ತಿಂಗಳಾಗಿರುತ್ತಿತ್ತು.

ಆಯಾ ಇಲಾಖೆಗಳು ತಮ್ಮ ಆಂತರಿಕ ಬಜೆಟಿಗೆ ಅನುಗುಣವಾಗಿ ಕೆಲಸ ಪ್ರಾರಂಭಿಸುವಷ್ಟರಲ್ಲಿ ಆಗಸ್ಟ್/ಸೆಪ್ಟೆಂಬರ್ ತಿಂಗಳಾಗಿರುತ್ತಿತ್ತು. ಆದರೆ ಈಗ ಫೆಬ್ರವರಿ ಮೊದಲನೇ ದಿನದಲ್ಲಿ ಬಜೆಟ್ ಮಂಡಿಸಿ, ಅಧಿವೇಶನದಲ್ಲಿ ಚರ್ಚಿಸಿ ರಾಷ್ಟ್ರಪತಿಗಳ ಅಂಕಿತವಾಗಿ ಮಾರ್ಚ್ ತಿಂಗಳಲ್ಲಿ ಆಯಾ ಇಲಾಖೆಗಳಿಗೆ ಅಂತಿಮ ಹಂಚಿಕೆ ತಲುಪಿಬಿಡುತ್ತದೆ. ಪ್ರತಿಪಕ್ಷಗಳು ಎಂದಿನಂತೆ ತಾವು ಕಂಠಪಾಠ ಮಾಡಿಕೊಂಡು ಬಂದಿರುವ ಹೇಳಿಕೆಗಳನ್ನು ಮಾಧ್ಯಮದ ಮುಂದೆ ಹೇಳಿಬಿಡುತ್ತಾರೆ.

ಜತೆಗೆ ಸಾಮಾನ್ಯ ಜನರ ದಾರಿ ತಪ್ಪಿಸುವಲ್ಲಿ  ಸ್ಸೀಮರು. ೨೦೨೩ ರ ಬಜೆಟಿನಲ್ಲಿ ಆಮದು ಮಾಡಿಕೊಳ್ಳುವ ‘ಸೈಕಲ್’ ಹಾಗೂ ‘ಅಡುಗೆಮನೆ ಚಿಮಣಿ’ಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಲಾಗಿದೆ. ಇದರಿಂದ ಬಡವ ಹಾಗೂ ಮಧ್ಯಮ ವರ್ಗದವರಿಗೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಆದರೆ ಕಾಂಗ್ರೆಸಿಗರು ಸೈಕಲ್ ಬೆಲೆ ಏರಿಸಿ ಬಡವರ ಹೊಟ್ಟೆಯ ಮೇಲೆ ಹೊಡೆದ ಮೋದಿ ಸರ್ಕಾರವೆಂಬ ಸುಳ್ಳನ್ನು ಹೇಳುತ್ತಿದ್ದಾರೆ. ಅತ್ತ ದೇವೇಗೌಡರ ಪಟಾಲಂ ಬಡವರ ಅಡುಗೆ ಮನೆಯ ಚಿಮಣಿ ಬೆಲೆ ಏರಿಸಿದ ಮೋದಿ ಸರಕಾರವೆಂಬ ಸುಳ್ಳನ್ನು ಹರಡಿಸಿ ಬಿಡುತ್ತಿದೆ.

ಆಮದು ಮಾಡಿಕೊಳ್ಳುವ ಚಿನ್ನದ ಆಭರಣಗಳ ಮೇಲಿನ ಆಮದು ಸುಂಕವನ್ನು ಏರಿಸಲಾಗಿದೆ. ಇದರಿಂದಲೂ ಜನಸಾಮಾನ್ಯ ನಿಗೆ ಯಾವುದೇ ಹಾನಿಯಿಲ್ಲ. ಹೆಚ್ಚಿನ ಜನರು ಆಭರಣಗಳನ್ನು ದೇಶದೊಳಗಿರುವ ಚಿನ್ನಾಭರಣ ಮಾಡುವ ಕುಶಲಕರ್ಮಿಗಳ ಬಳಿಯಲ್ಲಿಯೇ ಮಾಡಿಸುತ್ತಾರೆ. ವಿದೇಶಿ ಚಿನ್ನದ ಆಭರಣವನ್ನು ಆಮದುಮಾಡಿಕೊಳ್ಳುವವರನ್ನು ಮಧ್ಯಮವರ್ಗ ಎನ್ನಲಾ ದೀತೆ? ತಮ್ಮನ್ನು ತಾವು ರೈತರ ಮಕ್ಕಳೆಂದು ಹೇಳಿ ಕೋಟಿಗಟ್ಟಲೆ ಆಸ್ತಿ ಮಾಡಿರುವ ಜಾತ್ಯತೀತ ಜನತಾದಳದ ಪಟಾಲಂ, ಬಜೆಟಿನಲ್ಲಿ ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ಕಡಿತಗೊಳಿಸಲಾಗಿದೆಯೆಂದು ಹೇಳುತ್ತಾರೆ.

ಆದರೆ ಯಾಕೆ ಕಡಿತಗೊಂಡಿದೆಯೆಂದು ಹೇಳುವುದಿಲ್ಲ. ಕಳೆದ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರ ದ ಬೆಲೆ ಗಗನಕ್ಕೇರಿತ್ತು. ಆಗ ರೈತರಿಗೆ ತೊಂದರೆ ಯಾಗಬಾರದೆಂದು ಸಬ್ಸಿಡಿಯನ್ನು ಹೆಚ್ಚಾಗಿ ನೀಡಲಾಗಿತ್ತು. ಬಜೆಟಿನಲ್ಲಿ ಸುಮಾರು ೧,೦೫,೦೦೦ ದಷ್ಟು ಹಣವನ್ನು ಮೀಸಲಿಡಲಾಗಿತ್ತು. ಆದರೆ ಕೊಟ್ಟಿದ್ದು ಸುಮಾರು ೨,೫೦,೦೦೦ ಕೋಟಿಯ ರಸಗೊಬ್ಬರ ಸಬ್ಸಿಡಿ. ಈಗ ಬೆಲೆ ಇಳಿದಿರುವ ಕಾರಣ ಸಬ್ಸಿಡಿ ಹಣದ ಹಂಚಿಕೆ ಕಡಿಮೆಯಾಗಲೇ ಬೇಕು.

ಹಾಗಾಗಿ ರೈತನಿಗೆ ಈ ಹಿಂದೆ ಸಿಗುತ್ತಿದ್ದಂತಹ ದರದಲ್ಲಿಯೇ ರಸಗೊಬ್ಬರ ಸಿಗುತ್ತಿದೆ. ಇವರ ಕಾಲದಲ್ಲಿ ಪ್ರತಿಯೊಂದು ಜಿಲ್ಲೆಗಳಲ್ಲಿ ರಸಗೊಬ್ಬರದ ಕೊರತೆಯ ವಿಚಾರವಾಗಿ ರೈತರ ಪ್ರತಿಭಟನೆಗಳು ನಡೆಯುತ್ತಿದ್ದವು. ಆದರೆ ಕಳೆದ ಒಂಬತ್ತು ವರ್ಷಗಳಿಂದ ದೇಶದಲ್ಲಿ ರೈತರು ರಸಗೊಬ್ಬರ ಕೊರತೆಯ ವಿಚಾರವಾಗಿ ಪ್ರತಿಭಟನೆ ನಡೆಸಿದ ಉದಾಹರಣೆಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರ. ‘ಮನರೇಗಾ’ಯೋಜನೆ ವಿಚಾರದಲ್ಲಿ ೨೦೨೩ರಲ್ಲಿ ಹಂಚಿಕೆ ಕಡಿಮೆಯಾಗಿದೆಯೆಂಬ ಮತ್ತೊಂದು ಸುಳ್ಳನ್ನು ತೇಲಿ ಬಿಡುವ ಕೆಲಸ ಮಾಡಿದರು. ಕರೋನ ಕಾಲಘಟ್ಟದಲ್ಲಿ ಬಹಳಷ್ಟು ಕೂಲಿ ಕಾರ್ಮಿಕರು ತಮ್ಮ ತಮ್ಮ ಊರು ಗಳಿಗೆ ಹಿಂತಿರುಗಿದ್ದರು.

ಅವರು ತಮ್ಮ ತಮ್ಮ ಊರುಗಳಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಆ ಸಂದರ್ಭದಲ್ಲಿ ಅತೀ ಹೆಚ್ಚಿನ ಹಂಚಿಕೆಯನ್ನು ಈ ಯೋಜನೆಗೆ ನೀಡಲಾಗಿತ್ತು. ಆದರೆ ಕರೋನ ನಂತರದ ದಿನಗಳಲ್ಲಿ ಕೇವಲ ಮನರೇಗಾ ಹಣವನ್ನು ನಂಬಿಕೊಂಡು ಕಾರ್ಮಿಕರು ತಮ್ಮ ತಮ್ಮ ಊರುಗಳಲ್ಲಿಯೇ ಇದ್ದರೆ ಇತರ ಕೆಲಸಗಳಿಗೆ ಹೊಡೆತ ಬೀಳುತ್ತದೆ. ಕರೋನ ಮುಗಿದ ಕಾರಣ ಅವರೆಲ್ಲರೂ ಪುನಃ ತಮ್ಮ ಕೆಲಸಗಳಿಗೆ ವಾಪಾಸ್ ಆಗಲೇಬೇಕು. ಅವರು ತಮ್ಮ ಊರಿನಲ್ಲಿಯೇ ಇಲ್ಲವೆಂದರೆ ಯಾಕೆ ಕರೋನ ಕಾಲದಲ್ಲಿ ಹಂಚಿಕೆ ಯಾದ ಹಣವನ್ನೇ ಈಗಲೂ ಮಾಡಬೇಕು ಕರೋನ ಗಿಂತಲೂ ಮುಂಚೆ ಹಂಚಿಕೆಯಾಗುತ್ತಿದ್ದ ಹಣಕ್ಕಿಂತಲೂ ಹೆಚ್ಚಿನ ಹಂಚಿಕೆ ೨೦೨೩ರ ಬಜೆಟಿನಲ್ಲಿ ಆಗಿದೆ.

’ಅIಉಐಇಅಘೆಖ ಅಉ ಐಇಏ ಆಉಇಅಖಿಖಉ ಅIಉಐಇಅಘೆ uಅಈಖ ಅಉ ಐಇಏ’ ಎಂಬ ಮಾತಿದೆ. ೧೯೬೦ರ ದಶಕದಲ್ಲಿ ಅಮೆರಿಕದಲ್ಲಿ ಹೆzರಿಗಳ ನಿರ್ಮಾಣ ಕ್ಕಾಗಿ ಹೆಚ್ಚಿನ ಒತ್ತನ್ನು ನೀಡಲಾಯಿತು. ಅಮೆರಿಕದ ಆರ್ಥಿಕತೆಯ ವೇಗವನ್ನು ಹೆಚ್ಚಿಸಿ ಪ್ರಪಂಚದಲ್ಲಿ ನಂಬರ್ ಒನ್ ರಾಷ್ಟ್ರವಾಗಲು ಕಾರಣವಾದದ್ದು ಅಲ್ಲಿನ ಹೆದ್ದಾರಿಗಳು. ಇದೇ ಮಾದರಿಯಲ್ಲಿ ಮೋದಿ ಸರಕಾರ ಹೆದ್ದಾರಿ, ರೈಲು ಮತ್ತು ಏರ್ಪೋರ್ಟ್ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ಈ ಬಾರಿಯ ಬಜೆಟಿನಲ್ಲಿ ಸುಮಾರು ೧೦ಲಕ್ಷ ಕೋಟಿ ರುಗಳನ್ನು ದೇಶದ ರಸ್ತೆ ಹಾಗೂ ಇತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮೀಸಲಿಟ್ಟಿದೆ. ರಾಹುಲ್ ಗಾಂಧಿ ಯವರ ‘ಭಾರತ್ ತೋಡೋ ಯಾತ್ರೆ’ ಹಾದುಹೋದದ್ದು ಅಟಲ್ ಬಿಹಾರಿ ವಾಜಪೇಯಿ ಮತ್ತು ಮೋದಿ ಸರಕಾರ ನಿರ್ಮಾಣ ಮಾಡಿದ ಅದ್ಭುತ ರಸ್ತೆಗಳ ಮೂಲಕ.

ಜಾತ್ಯತೀತ ಜನತಾದಳದ ಕಾರ್ಯಕರ್ತರು ಹಳೆ ಮೈಸೂರು ಭಾಗದಲ್ಲಿ ನಡೆಸುತ್ತಿರುವ ‘ಪಂಚರತ್ನ’ಯಾತ್ರೆ ತಲುಪಲು ಮೋದಿ ಸರಕಾರ ನಿರ್ಮಿಸಿದ ನೂತನ ಮೈಸೂರು ಹೈವೇ ಮೂಲಕವೇ ಸಾಗಬೇಕು. ಲಿಂಗನಮಕ್ಕಿ ಜಲಾಶಯ ನಿರ್ಮಾಣವಾಗಿ ಐದು ದಶಕಗಳು ಕಳೆದವು. ಆದರೆ ಅದರ ಹಿನ್ನೀರಿನಲ್ಲಿ ಮುಳುಗಡೆಯಾದ ಸಂತ್ರಸ್ತರು ತಮ್ಮ ಊರುಗಳಿಗೆ ಓಡಾಡಲು ಒಂದು ಸೇತುವೆಯನ್ನು ಕಾಂಗ್ರೆಸ್ ಸರಕಾರ ನಿರ್ಮಾಣ ಮಾಡಿರಲಿಲ್ಲ. ಅದನ್ನು ನಿರ್ಮಿಸಲು ಮೋದಿ ಸರಕಾರವೇ ಬರಬೇಕಾಯಿತು.

ಎರಡು ವರ್ಷಗಳ ಹಿಂದೆ ಅಡಿಪಾಯ ಹಾಕಿದ್ದ ಶಿವಮೊಗ್ಗ ವಿಮಾನ ನಿಲ್ದಾಣ ಇನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆ ಗೊಳ್ಳಲಿದೆ. ಕೇವಲ ಬಜೆಟಿನಲ್ಲಿ ಘೋಷಿಸಿದರೆ ಸಾಲದು ಅದರ ಅನುಷ್ಠಾನ ಬಹಳ ಮುಖ್ಯ. ಮೋದಿ ಸರಕಾರದ ಬಜೆಟಿನಲ್ಲಿ ಹೊಸ ಘೋಷಣೆಗಿಂತಲೂ ಹೆಚ್ಚಾಗಿ ಅದರ ಅನುಷ್ಠಾನದ ಬಗ್ಗೆ ಗಮನ ಹರಿಸಲಾಗುತ್ತದೆ. ಬಡವರ ಆಹಾರ ಸಬ್ಸಿಡಿಗೆಂದೇ ಸುಮಾರು ೨ಲಕ್ಷ ಕೋಟಿಯಷ್ಟು ಹಣವನ್ನು ಕಳೆದ ಬಜೆಟಿನಲ್ಲಿ ಮೀಸಲಿಡಲಾಗಿತ್ತು. ದೇಶದಾದ್ಯಂತ ಸುಮಾರು ೮೦ ಕೋಟಿ ಬಡವರಿಗೆ ಕರೋನ ನಂತರ ಉಚಿತ ಪಡಿತರ ನೀಡಲಾಗಿದೆ. ಭಾರತದಲ್ಲಿನ ಕಡು ಬಡತನದ ಪ್ರಮಾಣ ಶೇ.೧ಕ್ಕಿಂತಲೂ ಕಡಿಮೆಗೆ ಇಳಿದಿದೆ. ಅಂತ್ಯೋದಯದ ಕಲ್ಪನೆಯಲ್ಲಿ ಸರಕಾರದ ಪ್ರತಿಯೊಂದು ಯೋಜನೆಯು ಮನೆಮನೆಗೆ ತಲುಪಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ೨೦೨೩ ರ ಬಜೆಟಿನಲ್ಲಿ ಸಹಕಾರ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿ ನಡೆಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ.

ದೇಶದ ಸಾವಿರಾರು ಸಹಕಾರ ಸಂಘಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಾಫ್ಟ್ ವೇರ್ ಅಳವಡಿಕೆಗೆ ಹಣವನ್ನು ಮೀಸಲಿಡ ಲಾಗಿದ್ದು ಕರ್ನಾಟಕದ ಒಂದು ಸಣ್ಣ ಹಳ್ಳಿಯಲ್ಲಿನ ಸಹಕಾರ ಸಂಘದಲ್ಲಿನ ಉತ್ಪನ್ನಗಳನ್ನು ಮದ್ಯ ಪ್ರದೇಶದ ಇಂದೋರಿನ ಅಂಗಡಿಯೊಂದಕ್ಕೆ ಮಾರಾಟ ಮಾಡುವಂತಾಗುವ ಕಾಲ ಬರುತ್ತದೆ. ಉಚಿತ ಘೋಷಣೆಗಳನ್ನು ಮಾಡದೆ, ವಾಸ್ತವ ಆರ್ಥಿಕತೆಯ ಚಿತ್ರಣವನ್ನು ಜನರ ಮುಂದಿಟ್ಟು, ಯೋಜನೆಗಳನ್ನು ಕೇವಲ ಹೇಳಿಕೆಗಳಿಗೆ ಸೀಮಿತಗೊಳಿಸದೇ ಪ್ರಸ್ತುತ ಪಡಿಸಿದ ವಾಸ್ತವ ೨೦೨೩ ರ ಬಜೆಟ್.
Read E-Paper click here