Wednesday, 18th September 2024

ವಿಶ್ವಸಂಸ್ಥೆಯ ನಿಷ್ಕ್ರಿಯತೆ

ಯುದ್ದಕಾಂಡ

ಕೆ.ಪಿ.ವಾಸು

ಜಗತ್ತಿನ ಬಲಶಾಲಿ ರಾಷ್ಟ್ರಗಳಲ್ಲಿ ಒಂದೆನಿಸಿರುವ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್‌ನ ಉಗ್ರ ಸಂಘಟನೆಯಾದ ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ, ಸಾವಿರಾರು ಅಮಾಯಕರು ಅದರಲ್ಲೂ ಪುಟ್ಟಮಕ್ಕಳು ಬಲಿಯಾಗಿರುವುದು ಖಂಡನೀಯ ವಿಚಾರ. ೧೯೪೮ರಲ್ಲಿ ಅಸ್ತಿತ್ವಕ್ಕೆ ಬಂದ ಇಸ್ರೇಲ್, ಗಾಜಾಪಟ್ಟಿಯ ವಿಚಾರಕ್ಕಾಗಿ ಪ್ಯಾಲೆಸ್ತೀನ್ ಜತೆ ನಿರಂತರ ಸಂಘರ್ಷ
ನಡೆಸುತ್ತಾ ಬಂದಿದೆ.

ಕೇವಲ ೩೬೫ ಚ.ಕಿ.ಮೀ. ವಿಸ್ತಾರವುಳ್ಳ ಈ ವಿವಾದಿತ ಗಾಜಾಪಟ್ಟಿಯನ್ನು ೧೯೬೭ರ ಮಧ್ಯಪ್ರಾಚ್ಯ ಯುದ್ಧದಲ್ಲಿ ಈಜಿಪ್ಟ್ ವಶಪಡಿಸಿಕೊಂಡಿತ್ತು. ನಂತರದ ವರ್ಷಗಳಲ್ಲಿ ಗಾಜಾಪಟ್ಟಿಯ ಮೇಲಿನ ಅಧಿಪತ್ಯಕ್ಕಾಗಿ ಇಸ್ರೇಲ್-ಪ್ಯಾಲೆಸ್ತೀನ್ ಕಚ್ಚಾಡುತ್ತಿವೆ. ಇದೇ ವಿಚಾರಕ್ಕಾಗಿ ೨೦೦೮, ೨೦೧೦, ೨೦೧೨, ೨೦೧೪, ೨೦೧೬, ೨೦೧೮, ೨೦೨೦ ಮತ್ತು ೨೦೨೨ರಲ್ಲಿ ಹೀಗೇ ಯುದ್ಧ ನಡೆದಿತ್ತು. ಆದರೆ ಕಳೆದ ಅಕ್ಟೋಬರ್ ೭ರಂದು ಶುರುವಾದ ಯುದ್ಧದಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ಸಾವು-ನೋವು ಸಂಭವಿ ಸಿವೆ, ಆಸ್ತಿಪಾಸ್ತಿಗಳಿಗೆ ಗಣನೀಯ ನಷ್ಟವಾಗಿದೆ.

ಪ್ಯಾಲೆಸ್ತೀನ್ ವಿಮೋಚನಾ ರಂಗದ ಮುಖ್ಯಸ್ಥರಾಗಿದ್ದ ಯಾಸಿರ್ ಅರಾಫತ್‌ರವರ ಹೋರಾಟದ ಫಲವಾಗಿ ಸ್ವತಂತ್ರ ಪ್ಯಾಲೆಸ್ತೀನ್ ರಾಷ್ಟ್ರ ಸ್ಥಾಪನೆಯಾದರೂ, ಅದರ ಉಗ್ರಗಾಮಿ ಸಂಘಟನೆ ಹಮಾಸ್ ಇಸ್ರೇಲ್ ಮೇಲೆ ಆಗಾಗ್ಗೆ ದಾಳಿ ನಡೆಸುತ್ತಿದೆ ಮತ್ತು ಗಾಜಾಪಟ್ಟಿಯನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ. ಲಭ್ಯ ಮಾಹಿತಿಯಂತೆ ಈ ಸಂಘಟನೆಯಲ್ಲಿ ಸುಮಾರು ೨೭ ಸಾವಿರ ಉಗ್ರರಿದ್ದಾರೆ.

೧೯೮೭ರಲ್ಲಿ ಹುಟ್ಟಿಕೊಂಡ ಈ ಸಂಘಟನೆಗೆ ಟರ್ಕಿ ಮತ್ತು ಕತಾರ್ ನಿಂದ ಹಣದ ನೆರವು ಹರಿದುಬರುತ್ತದೆ ಎನ್ನಲಾಗುತ್ತದೆ. ಮತ್ತೊಂದೆಡೆ ಕೇವಲ ೯.೭೩ ಮಿಲಿಯನ್ ಜನಸಂಖ್ಯೆಯಿರುವ ಪುಟ್ಟರಾಷ್ಟ್ರ ಇಸ್ರೇಲ್, ಗೆರಿಲ್ಲಾ ಯುದ್ಧದಲ್ಲಿ ವಿಶೇಷ ಪರಿಣತಿ ಯಿರುವ ಯೋಧರನ್ನೊಳಗೊಂಡ ಅತ್ಯಂತ ಪ್ರಬಲ ರಕ್ಷಣಾ ವ್ಯವಸ್ಥೆ ಹಾಗೂ ಅತ್ಯಾಧುನಿಕ ಕೃಷಿ ತಂತ್ರಜ್ಞಾನವನ್ನು ಹೊಂದಿದೆ. ಇಸ್ರೇಲ್‌ನಲ್ಲಿ ಗಣನೀಯ ಸಂಖ್ಯೆಯಲ್ಲಿ ಭಾರತೀಯರು ನೆಲೆಸಿದ್ದಾರೆ ಎನ್ನಲಾಗಿದ್ದು ಅವರ ಸುರಕ್ಷತೆ ಕೂಡ ನಮಗೆ
ಮುಖ್ಯವಾಗಿದೆ. ಒಂದೆಡೆ ಭಾರತ ಸರಕಾರವು ಹಮಾಸ್ ದಾಳಿಯನ್ನು ಖಂಡಿಸಿ ಇಸ್ರೇಲ್‌ಗೆ ಬೆಂಬಲ ಸೂಚಿಸಿದ್ದರೆ, ದೇಶದ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ‘ಪ್ಯಾಲೆಸ್ತೀನಿಯರ ಹಕ್ಕುಗಳನ್ನು’ ಬೆಂಬಲಿಸಿದೆ.

ವಿಶ್ವಸಂಸ್ಥೆಯ ನಿಷ್ಕ್ರಿಯತೆಯ ಬಗ್ಗೆ ಪ್ರಸ್ತಾಪಿಸುವುದು ಕೂಡ ಈ ಸಂದರ್ಭದಲ್ಲಿ ಅನಿವಾರ್ಯವಾಗಿದೆ. ಮೊದಲ ಮಹಾಯುದ್ಧ ದಿಂದ ಉಂಟಾದ ಸಾವುನೋವುಗಳನ್ನು ಪರಿಗಣಿಸಿದ ವಿಶ್ವದ ಕೆಲವು ಪ್ರಮುಖ ನಾಯಕರು, ಅಂತಾರಾಷ್ಟ್ರೀಯ ಶಾಂತಿ ಮತ್ತು ಸುಭದ್ರತೆಯ ಸ್ಥಾಪನೆಗೆ ‘ಲೀಗ್ ಆಫ್ ನೇಷನ್ಸ್’ ಎಂಬ ಸಂಸ್ಥೆಯನ್ನು ಜಿನೆವಾದಲ್ಲಿ ೧೯೨೦ರಲ್ಲಿ ಸ್ಥಾಪಿಸಿದರು. ನಿಶ್ಶಸ್ತ್ರೀಕರಣ,
ಅಂತಾರಾಷ್ಟ್ರೀಯ ಶಾಂತಿ ಹಾಗೂ ನ್ಯಾಯ ಪಂಚಾಯತಿ ಮುಂತಾದ ವಿಚಾರಗಳು ಇದರ ಕಾರ್ಯವ್ಯಾಪ್ತಿಗೆ ಒಳಪಟ್ಟಿದ್ದವು.
ಆದರೆ ಯುದ್ಧಗಳನ್ನು ತಡೆಗಟ್ಟುವಲ್ಲಿ ಈ ಸಂಸ್ಥೆ ವಿಫಲವಾಯಿತು.

೧೯೩೯ರಂದ ೧೯೪೫ರವರೆಗೆ ನಡೆದ ೨ನೇ ಮಹಾಯುದ್ಧದಲ್ಲಿ ಬ್ರಿಟನ್, ಅಮೆರಿಕ, ಸೋವಿಯತ್ ಒಕ್ಕೂಟ ಮತ್ತು ಫ್ರಾನ್ಸ್
ದೇಶಗಳು ಜರ್ಮನಿ, ಇಟಲಿ ಮತ್ತು ಜಪಾನ್ ವಿರುದ್ಧ ಸಮರ ಸಾರಿದ್ದವು. ಜರ್ಮನಿಯು ಮಿತ್ರದೇಶಗಳ ಪಡೆಗಳಿಗೆ ಬೇಷರತ್ತಾಗಿ
ಶರಣಾಯಿತು. ಜರ್ಮನಿಯಂತೆ ಜಪಾನ್ ಕೂಡ ಈ ಯುದ್ಧದಿಂದ ಸಾಕಷ್ಟು ನಷ್ಟ ಅನುಭವಿಸಿತು. ಜಪಾನ್‌ನ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಮೆರಿಕ ಮತ್ತು ಮಿತ್ರಪಡೆಗಳು ಅಣುಬಾಂಬ್ ಹಾಕಿದವು. ಈ ದಾಳಿಯಿಂದಾಗಿ ಜಪಾನ್ ಬಹುತೇಕ ನಾಶವಾಯಿತಾದರೂ, ಮುಂದಿನ ವರ್ಷಗಳಲ್ಲಿ ಅದು ಫೀನಿಕ್ಸ್ ಪಕ್ಷಿಯಂತೆ ಮರುಹುಟ್ಟು ಪಡೆದಿದ್ದು ವಿಶೇಷ.

ಜರ್ಮನಿಯನ್ನು ಪೂರ್ವ ಹಾಗೂ ಪಶ್ಚಿಮ ಜರ್ಮನಿ ಎಂಬ ೨ ಭಾಗಗಳಾಗಿ ವಿಂಗಡಿಸಲಾಯಿತು. ಈ ಮಹಾಯುದ್ಧದಲ್ಲಿ ಸುಮಾರು ೭೫ ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಭೀಕರತೆಯನ್ನು ಅರಿತ ವಿಶ್ವನಾಯಕರು, ಯುದ್ಧವನ್ನು ತಡೆಗಟ್ಟುವ ನಿಟ್ಟಿನಲ್ಲಿ ‘ಲೀಗ್ ಆಫ್ ನೇಷನ್ಸ್’ ವಿಫಲವಾಗಿದ್ದ ಹಿನ್ನೆಲೆಯಲ್ಲಿ ಮತ್ತೊಂದು ಶಾಂತಿದೂತ ಸಂಸ್ಥೆ ಯನ್ನು ಹುಟ್ಟುಹಾಕುವ ಯತ್ನದಲ್ಲಿ ತೊಡಗಿದರು.

ಇದರ ಫಲವಾಗಿ ೧೯೪೫ರ ಅಕ್ಟೋಬರ್ ೨೪ರಂದು ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂತು. ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಶ್ವಸಂಸ್ಥೆಯಲ್ಲಿ ಪ್ರಸ್ತುತ ೧೯೩ ದೇಶಗಳು ಸದಸ್ಯರಾಗಿವೆ. ವಿಶ್ವಸಂಸ್ಥೆಯ ಅತ್ಯಂತ ಪ್ರಮುಖ
ಅಂಗವೆನ್ನಲಾಗುವ ಭದ್ರತಾ ಸಮಿತಿಯಲ್ಲಿ ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್ ಮತ್ತು ಚೀನಾ ದೇಶಗಳಿಗೆ ವೀಟೋ ಅಧಿಕಾರ ನೀಡಿರುವುದರಿಂದ, ಇವುಗಳ ತಾಳಕ್ಕೆ ತಕ್ಕಂತೆ ವಿಶ್ವಸಂಸ್ಥೆ ಕುಣಿಯುವಂತಾಗಿದೆ. ಇದು ನಿಜಕ್ಕೂ ದುರದೃಷ್ಟಕರ ಸಂಗತಿ.

ವಿಶ್ವಸಂಸ್ಥೆಯ ಸ್ಥಾಪನೆಯ ನಂತರವೂ ವಿಶ್ವದಲ್ಲಿ ಅನೇಕ ಘೋರಯುದ್ಧಗಳು ನಡೆದು ಲಕ್ಷಾಂತರ ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಇರಾನ್-ಇರಾಕ್, ಭಾರತ-ಪಾಕಿಸ್ತಾನ, ಇಸ್ರೇಲ್-ಪ್ಯಾಲೆಸ್ತೀನ್, ರಷ್ಯಾ-ಉಕ್ರೇನ್ ನಡುವಿನ ಯುದ್ಧಗಳು
ಮಾತ್ರವಲ್ಲದೆ, ಕೊರಿಯನ್ ಯುದ್ಧ, ಕೊಲ್ಲಿ ಯುದ್ಧದಂಥ ಅನೇಕ ಘನಘೋರ ಸಂಘರ್ಷಗಳಿಂದಾಗಿ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಧಕ್ಕೆಯಾಗಿದೆ.

ಇಂಥ ಬಹುತೇಕ ಯುದ್ಧಗಳನ್ನು ತಡೆಗಟ್ಟುವಲ್ಲಿ ವಿಫಲವಾಗಿರುವ ವಿಶ್ವಸಂಸ್ಥೆಯ ಅಸ್ತಿತ್ವವೇ ಪ್ರಶ್ನಾರ್ಹವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ದೇಶಗಳು ಗಾಜಾಪಟ್ಟಿಯಲ್ಲಿ ತಕ್ಷಣ ಕದನವಿರಾಮ ಘೋಷಿಸಿ, ಮಾನವೀಯ ನೆರವಿಗೆ ಅನುವುಮಾಡಿಕೊಡಬೇಕೆಂಬ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯವನ್ನು ೧೨೧ ಸದಸ್ಯ ರಾಷ್ಟ್ರಗಳು ಬೆಂಬಲಿಸಿದ್ದರೂ, ೧೪ ರಾಷ್ಟ್ರಗಳು ವಿರೋಧಿಸಿವೆ ಮತ್ತು ಭಾರತ ಸೇರಿದಂತೆ ೪೪ ದೇಶಗಳು ಮತದಾನದಿಂದ ಹೊರಗುಳಿದಿವೆ.
ಈ ರೀತಿಯಲ್ಲಿ, ಮೂಕಪ್ರೇಕ್ಷಕನಂತೆ ಇರುವ ವಿಶ್ವಸಂಸ್ಥೆಗೆ ಬಲತುಂಬುವ ಕೆಲಸ ಈಗಲಾದರೂ ನಡೆಯಬೇಕಿದೆ.

ಅಮೆರಿಕ ಸೇರಿದಂತೆ ಮಿಕ್ಕ ಪ್ರಬಲ ರಾಷ್ಟ್ರಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಿದೆ. ವಿಶ್ವಸಂಸ್ಥೆಗೆ ತೊಡರು ಗಾಲಾಗಿ ಪರಿಣಮಿಸಿರುವ ವೀಟೋ ಅಧಿಕಾರವನ್ನು ೫ ಕಾಯಂ ರಾಷ್ಟ್ರಗಳಿಂದ ಹಿಂದಕ್ಕೆ ಪಡೆದು, ಭದ್ರತಾ ಸಮಿತಿಯು ಬಹುಮತದ ಆಧಾರದ ಮೇಲೆ ನಿರ್ಣಯಗಳನ್ನು ತೆಗೆದುಕೊಳ್ಳುವಂತಾದರೆ, ವಿಶ್ವಸಂಸ್ಥೆಯ ವಿಶ್ವಾಸಾರ್ಹತೆ ಉಳಿಯಬಹುದು. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರಾರು?

(ಲೇಖಕರು ವಕೀಲರು ಹಾಗೂ ನೋಟರಿ)

Leave a Reply

Your email address will not be published. Required fields are marked *