Wednesday, 11th December 2024

ಭಾರತದ ಒಕ್ಕೂಟ ವ್ಯವಸ್ಥೆ ಸವಕಲಾಗುತ್ತಿದೆ

ಅಭಿಪ್ರಾಯ

ರಾಜದೀಪ ಸರದೇಸಾಯಿ

ಮುಖ್ಯಮಂತ್ರಿಯಾಗಿದ್ದಾಗಲೇ ದೇಶದ ಪ್ರಧಾನಮಂತ್ರಿಯಾಗಿ 2014ರಲ್ಲಿ ಆಯ್ಕೆಯಾದ ರಾಜಕೀಯ ನೇತಾರರಲ್ಲಿ ನರೇಂದ್ರ ಮೋದಿಯವರು ಎರಡನೆಯವರು. ಅದಕ್ಕೂ ಮೊದಲು ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ದೇವೇಗೌಡರು ಪ್ರಧಾನಮಂತ್ರಿ ಸ್ಥಾನಕ್ಕೇರಿದ ಉದಾಹರಣೆಯಿದೆ.

ಪ್ರಧಾನಿ ನರೇಂದ್ರ ಮೋದಿಯವರು ಸಹಕಾರಿ ತತ್ವದ ಸಂಯುಕ್ತ ಪದ್ಧತಿ ಅಳವಡಿಕೆ ಯಾಗಬೇಕು. ರಾಷ್ಟ ಮತ್ತು ರಾಜ್ಯಗಳ ನಡುವಣ ಓರೆಕೋರೆಗಳುಳ್ಳ ಅಧಿಕಾರ ಹಂಚಿ ಕೆಯ ವಿಧಾನ ಪುನರ್ ಚಿಂತನೆಗೆ ಒಳಪಡಬೇಕೆಂದು ಸದಾ ಹೇಳುತ್ತಲೇ ಇರುತ್ತಾರೆ. ವಿಪರ್ಯಾಸವೆಂದರೆ ಎಂಟುವರ್ಷಗಳ ನಂತರ ಒಕ್ಕೂಟ ವ್ಯವಸ್ಥೆಯ ಆಶಯಗಳು ಮುರಿದು ಬೀಳುತ್ತಿವೆ, ಪ್ರತೀಕಾರದ ರಾಜಕೀಯ ಹೆಚ್ಚಾಗುತ್ತಿದೆ, ಪರಸ್ಪರ ದೋಷಾ ರೋಪಣೆ ಮಾಡುವ ಪ್ರವೃತ್ತಿ ಪರಾಕಾಷ್ಠೆಯನ್ನು ತಲುಪಿದೆ ಮತ್ತು ಅಧಿಕಾರದ ಅಮಲು ಇನ್ನಿಲ್ಲದಂತೆ ಎಡೆ ವ್ಯಾಪಿಸಿದೆ.

ಇತ್ತೀಚೆಗೆ ಪ್ರಧಾನಿ ಮೋದಿ, ತಮಿಳುನಾಡಿಗೆ ಬಂದಿದ್ದರು. ಮೋದಿ ದೇಶದ ಅಧಿಕಾರ ಚುಕ್ಕಾಣಿ ಹಿಡಿಯುವುದನ್ನು ಪ್ರತಿರೋಧಿ ಸಿದ ಪಕ್ಷಗಳಲ್ಲಿ ತಮಿಳುನಾಡಿನ ಡಿಎಂಕೆ ಕೂಡ ಒಂದು. ಹಾಗಾಗಿಯೇ ಪ್ರಧಾನಿ ಮೋದಿ ಉಪಸ್ಥಿತಿಯಲ್ಲಿಯೇ, ಕೇಂದ್ರ ಸರಕಾರದ ಹಿಂದಿ ಹೇರಿಕೆ ನೀತಿಯನ್ನು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಉಗ್ರವಾಗಿ ಖಂಡಿ ಸುವ ಮಾತನ್ನಾಡಿದರು. ತಮಿಳುಭಾಷೆ ದ್ರಾವಿಡ ಸಂಸ್ಕೃತಿಯ ಹೆಗ್ಗುರುತು ಎಂದು ಹೇಳಿದ ಅವರು ದೆಹಲಿ ಮತ್ತು ಚೆನ್ನೈ ನಡುವೆ ಒಂದು ಲಕ್ಷ್ಮಣರೇಖೆ ಯನ್ನು ಎಳೆದು ಸುದೀರ್ಘ ಕಾಲದಿಂದ ಇದ್ದ ಹಗೆತನದ ಭಾವವನ್ನು ಪ್ರದರ್ಶಿಸಿದರು.

ಉತ್ತರ-ದಕ್ಷಿಣದ ಪ್ರಾದೇಶಿಕ ಭಾಷೆಗಳ ಸಮರ ಇಂದು ನಿನ್ನೆಯದಲ್ಲ. ವಿಂಧ್ಯ ಪರ್ವತದಿಂದ ದಕ್ಷಿಣಕ್ಕಿರುವ ಭಾಗ ಮೋದಿ ಆಡಳಿತದಕಾಲದಲ್ಲಿ ಬಿಜೆಪಿಯ ಬಹುಪಾಲು ಸ್ಥಾನಗಳನ್ನು ಗೆದ್ದ ಪ್ರದೇಶ ಎಂದು ಪರಿಭಾವಿಸಲಾಗಿದ್ದರೂ, ನೀತಿನಿರೂಪಣೆಗಳ
ನಿರ್ಧರಣೆ ಕುರಿತಂತೆ ತಾರತಮ್ಯ ನಡೆದಿದೆ ಎಂಬ ಆರೋಪವೂ ಬಲವಾಗಿಯೇ ಇದೆ. ಬಿಜೆಪಿ ಆಗಿಂದಾಗ್ಯೆ ಹೇಳಿಕೊಂಡು ಬರುತ್ತಿದ್ದ ಹಿಂದಿ- ಹಿಂದೂ-ಹಿಂದುಸ್ತಾನ್ ಘೋಷಣೆಯನ್ನು ಪಕ್ಕಕ್ಕಿಟ್ಟು ಹೊಸ ವ್ಯಾಖ್ಯೆಯನ್ನು ಕೊಡುವ ಪ್ರಯತ್ನದಲ್ಲಿದ್ದರೂ ಅದರ ಮೂಲಸ್ರೋತ ಹೆಚ್ಚಾಗಿ ಉತ್ತರಭಾರತದ ರಾಜಕೀಯ ಮತ್ತು ಸಾಂಸ್ಕೃತಿಕ ಸಂಗತಿಗಳನ್ನು ನೆಚ್ಚಿಕೊಂಡಿದೆ.

ದಕ್ಷಿಣದಲ್ಲಿ ತಮಿಳು ನಾಡು ರಾಜ್ಯ ಆರ್ಥಿಕವಾಗಿ ಒಂದು ಶಕ್ತಿಕೇಂದ್ರವಾಗಿ ಹೊರಹೊಮ್ಮುವುದರ ಜತೆಗೆ ಪ್ರಾದೇಶಿಕತೆಯ ಛಾಪಿನೊಂದಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿರುವ ಕಾರಣ, ಹಿಂದೂರಾಷ್ಟದ ಪರಿಕಲ್ಪನೆಗೆ ಅದು ಮಗ್ಗುಲಮುಳ್ಳಾಗಿದೆ.
ರಾಜಸ್ವ ಹಂಚಿಕೆಯಿಂದ ಹಿಡಿದು ಆಡಳಿತಾತ್ಮಕ ಸಂಗತಿಗಳವರೆಗೆ ಅನೇಕ ವಿಚಾರಗಳಲ್ಲಿ ರಾಷ್ಟ ಮತ್ತು ರಾಜ್ಯ ಸರಕಾರಗಳ ನಡುವೆ ಭೀತಿ ಹುಟ್ಟಿಸುವಂತಹ ಸಂಘರ್ಷವಿದೆ. ಇದು ಎಲ್ಲಿಯವರೆಗೆ ಇದೆಯೆಂದರೆ ನೀಟ್ ಪರೀಕ್ಷೆಯ ವಿಚಾರದಲ್ಲೂ ಗೊಂದಲವೆದ್ದಿದೆ.

ತೈಲಬೆಲೆ ಏರಿಕೆಯ ಹಿನ್ನೆಲೆಯಲ್ಲಿ ರಾಜ್ಯಗಳು ತೆರಿಗೆ ಕಡಿತ ಮಾಡಬೇಕೆನ್ನುವ ಆಗ್ರಹಪೂರ್ವಕ ಇರಾದೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವ್ಯಕ್ತಪಡಿಸಿದ್ದು, ಹಲವು ರಾಜ್ಯಗಳು ಇದನ್ನು ತಿರಸ್ಕರಿಸಿವೆ. ಜಿಎಸ್‌ಟಿ
ಮೂಲಕ ಹರಿದು ಬರುವ ತೆರಿಗೆ ಸಂಗ್ರಹಣೆಯನ್ನೇ ನೆಚ್ಚಿಕೊಂಡಿರುವ ರಾಜ್ಯಗಳು ತೆರಿಗೆ ಉಪಬಂಧಗಳ ಕುರಿತಾಗಿ ಕೇಂದ್ರದ ಹೇರಿಕೆ ಮತ್ತು ದಬ್ಬಾಳಿಕೆ ಬಗ್ಗೆ ರಾಜ್ಯಗಳಿಗೆ ತೀವ್ರ ಅಸಹನೆಯಿದೆ.

ಇಲ್ಲಿ ಇನ್ನೊಂದು ಹರಿತವಾದ ಅಂಚಿದೆ. ಅದು ಬಿಜೆಪಿ ಮತ್ತು ಬಿಜೆಪಿಯೇತರ ಸರಕಾರಗಳ ಆಡಳಿತವಿರುವ ರಾಜ್ಯಗಳ ನಡು ವಣ ಸಮರ. ಪ್ರಧಾನಮಂತ್ರಿಗಳು ಡಬಲ್ ಎಂಜಿನ್ ಸರಕಾರವನ್ನು ಬೆಂಬಲಿಸಲು ಕರೆ ಕೊಟ್ಟಾಗ ಅವರು ಬಿಜೆಪಿ ಮತ್ತು ಪ್ರತಿಪಕ್ಷಗಳ ಆಡಳಿತವಿರುವ ಸರಕಾರಗಳ ನಡುವೆ ತಾರತಮ್ಯವನ್ನು ಸೃಷ್ಟಿಸುತ್ತಾರೆಂಬ ಮಾತಿದೆ. ಚುನಾವಣಾ ರಾಜಕೀಯದ ವಾಕ್ ಚಾತುರ್ಯದ ಪ್ರಹಸನದಲ್ಲಿ ಎಲ್ಲವನ್ನೂ ಅಲ್ಲಗಳೆಯಬಹುದು, ಆದರೆ ಪ್ರಧಾನಮಂತ್ರಿಗಳು ಎಲ್ಲ ರಾಜ್ಯಗಳ ಮುಖ್ಯ ಮಂತ್ರಿಗಳ ಸಭೆಯನ್ನು ಕೋವಿಡ್-19 ಕುರಿತಾಗಿ ಏಪ್ರಿಲ್‌ನಲ್ಲಿ ನಡೆಸಿದಾಗ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳನ್ನು ಕಡೆಗಣಿಸಲಾಯಿತು ಮತ್ತು ತೈಲತೆರಿಗೆ ಇಳಿಸದೇ ಇದ್ದುದಕ್ಕೆ ಅವರನ್ನು ದೂಷಣೆಗೆ ಒಳಪಡಿಸಲಾಯಿತು.

ಕಳೆದ ವರ್ಷ ಪ್ರಾಥಮಿಕ ಹಂತದ ವ್ಯಾಕ್ಸಿನ್ ವಿತರಣೆ ವಿಚಾರದಲ್ಲಿ ಅವರನ್ನು ದೂಷಿಸಲಾಗಿತ್ತು. ಇಲ್ಲಿ ಅಹಮಿಕೆಯ ಘರ್ಷಣೆ ಎದ್ದು ಕಾಣುತ್ತಿದೆ. ವ್ಯಾಕ್ಸಿನ್ ಸರ್ಟಿಫಿಕೇಟುಗಳ ಮೇಲೆ ಪ್ರಧಾನಮಂತ್ರಿಗಳ ಫೋಟೋ ಛಾಪಿಸಲಾಗಿದ್ದು ಅದು ಅವರ ಸ್ವಂತ ಸಾಧನೆ ಎಂಬಅತೆ ಬಿಂಬಿತವಾಗಿರುವುದು ಪ್ರಭಾವೀ ಮುಖ್ಯಮಂತ್ರಿಗಳಿಗೆ ಇರಿಸುಮುರಿಸಿನ ಸಂಗತಿಯಾಗಿದೆ. ಈ ತರಹದ
ಘರ್ಷಣೆ ಮೊದಲಿಗೆ ದಾಖಲಾಗಿದ್ದು ಬಂಗಾಲದಿಂದ. ಅಲ್ಲಿ ರಾಜ್ಯಪಾಲರಾಗಿರುವ ಜಗದೀಪ ಧನಕರ್ ಪ್ರತಿನಿತ್ಯ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆ ತಿಕ್ಕಾಟ ಮಾಡುತ್ತಲೇ ಇದ್ದಾರೆ. ಅಲ್ಲಿ ಸಾಂವಿಧಾನಿಕ ಹಕ್ಕುಗಳು ಹತ್ತಿಕ್ಕಲ್ಪಟ್ಟಿವೆ ಎನ್ನಲಾಗುತ್ತಿದೆ.

ನಂಬಿಕೆಯ ಕೊರತೆ ಇನ್ನಷ್ಟು ವಿಸ್ತೃತವಾಗಿದ್ದು, ಕೇಂದ್ರದ ಜಾರಿ ಸಂಸ್ಥಾಪನೆಗಳು ಪ್ರತಿಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿ ಹೆಚ್ಚು ಉತ್ಸುಕತೆಯನ್ನು ತೋರುತ್ತಿವೆ ಎಂಬ ಅಭಿಪ್ರಾಯವಿದೆ. ಬಹುತೇಕ ಎಲ್ಲ ಪ್ರತಿಪಕ್ಷದ ಆಡಳಿತವಿರುವ ರಾಜ್ಯಗಳ
ಮುಖ್ಯಮಂತ್ರಿಗಳು ಜಾರಿ ನಿರ್ದೇಶನಾಲಯದ ನಿಗಾವಣೆಯಲ್ಲಿದ್ದಾರೆ. ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿ ಗಳು ಕೆಟ್ಟವರು ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸಂತರು ಎಂಬಂತಹ ಭಾವನೆ ವ್ಯಾಪಕವಾಗಿದೆ.
ಕೇಂದ್ರ ಸರಕಾರ ಜಾರಿ ನಿರ್ದೇಶನಾಲಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಯಾವ ಉತ್ತರವೂ ಬರುತ್ತಿಲ್ಲ.

ಏಕವ್ಯಕ್ತಿ ಕೇಂದ್ರಿತ ಕೇಂದ್ರ ಸರಕಾರ, ಮತ್ತೆ ಮತ್ತೆ ಗೆಲುವನ್ನು ತನ್ನದಾಗಿಸುತ್ತ ಮುಂದುವರಿದಿರುವ ಈ ಕಾಲಘಟ್ಟದಲ್ಲಿ, ಸರಕಾರ ಹೇಗೆ ಸಂಸ್ಥೆಗಳನ್ನು ದುರುಪಯೋಗಪಡಿಸುವ ಮೂಲಕ ಕೇಂದ್ರ- ರಾಜ್ಯಗಳ ನಡುವಿನ ಕಂದಕ ಹೆಚ್ಚುವಂತೆ ಮಾಡಿದೆ
ಎಂಬುದು ಕೂಡ ಗಮನಿಸಬೇಕಾದ ಸಂಗತಿ. ಬಹು ಪಕ್ಷಗಳ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಭಾರತವನ್ನು ಏಕಪಕ್ಷ ರಾಜಕೀಯ ಕ್ಕೆ ಒಳಪಡಿಸುವುದು ಸರಿಯಾದ ಕ್ರಮವಲ್ಲ. ಏಕವ್ಯಕ್ತಿ ಆಡಳಿತದ ನಿರಂಕುಶ ಪ್ರಭುತ್ವ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ
ಸಾಂವಿಧಾನಿಕ ಪ್ರಕ್ರಿಯೆಗಳನ್ನು ಗಾಳಿಗೆ ತೂರಲಾಗುತ್ತದೆ.

ಯೋಜನಾ ಆಯೋಗವನ್ನು ಪ್ರಧಾನಮಂತ್ರಿಗಳು ಬರಖಾಸ್ತು ಮಾಡಿದ್ದು ಕೂಡ ಪ್ರಜಾಪ್ರಭುತ್ವದ ಕಡೆಗಣನೆಯ ಕ್ರೂರ ವ್ಯಂಗ್ಯ ವಾಗಿ ಕಾಣಿಸುತ್ತಿದೆ. ಅವರು ಗುಜರಾತದ ಸಿ.ಎಂ. ಆಗಿದ್ದಾಗಿನಿಂದ ದೆಹಲಿ ಮೂಲದ ಬ್ಯೂರಾಕ್ರಸಿ ರಾಜ್ಯಗಳ ಚುನಾಯಿತ ಪ್ರತಿನಿಧಿಗಳ ಮೇಲೆ ತಮ್ಮ ಅಧಿಕಾರ ಹೇರುವುದು ಅವರಿಗೆ ಇಷ್ಟವಿರಲಿಲ್ಲ. ಆದರೆ ಈಗ ಮೋದಿಯವರು ಕೇಂದ್ರ ಸರಕಾರದ ಮೂಲಕ ರಾಜ್ಯಗಳ ಮೇಲೆ ಅದೇ ತೆರನಾದ ಅಧಿಕಾರ ಚಲಾವಣೆ ತಂತ್ರವನ್ನು ನಡೆಸುತ್ತಿದ್ದಾರೆ.

ಮೋದಿಯವರು ಬಂದಾಗ ಪಶ್ಚಿಮಬಂಗಾಲದಲ್ಲಿ ಮಮತಾ ಬ್ಯಾನರ್ಜಿಯವರು ಅವರ ಭೇಟಿ ಮಾಡದೇ ಉಳಿದಿದ್ದರೆ ಇತ್ತೀಚೆಗೆ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಕೂಡ ಅಂತಹದೇ ಪ್ರವೃತ್ತಿ ತೋರಿದ್ದಾರೆ. ಮುಂಬೈನಲ್ಲಿ ಲತಾಮಂಗೇಶ್ಕರ ನೆನಪಿನ ಮೊದಲ ಪ್ರಶಸ್ತಿ ಮೋದಿಯವರಿಗೆ ಪ್ರದಾನ ಮಾಡಲಾದ ಸಮಾರಂಭದಲ್ಲಿ ಮಹಾರಾಷ್ಟದ ಮುಖ್ಯಮಂತ್ರಿ ಉದ್ಧವ ಠಾಕ್ರೆ ದೂರವುಳಿದರು. ಈ ರೀತಿ ಕೇಂದ್ರ ರಾಜ್ಯಗಳ ನಡುವಣ ಸಂಬಂಧ ಹಳಸುತ್ತಿರುವುದು ಒಳ್ಳೆಯ ಲಕ್ಷಣವಲ್ಲ. ರಾಜಕೀಯ ಕ್ಷಿತಿಜದಲ್ಲಿ ಅನೈತಿಕವಾದ ಸ್ಪರ್ಧೆ ಒಳ್ಳೆಯದಲ್ಲ.