Saturday, 12th October 2024

Basavaraj Shivappa Giraganvi Column: ಆಚ್ಛಾದನೆ ಎಂದು ಪೋಷಕ ಪಾತ್ರಧಾರಿ

ಕೃಷಿರಂಗ

ಬಸವರಾಜ ಶಿವಪ್ಪ ಗಿರಗಾಂವಿ

ಭಾರತದ ಹಲವೆಡೆ ಅವೈಜ್ಞಾನಿಕ ಕೃಷಿ ಪದ್ಧತಿಗಳ ಪರಿಣಾಮದಿಂದಾಗಿ ಮಣ್ಣು ಪ್ರಸ್ತುತ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಇಂಥ ಸಂದರ್ಭದಲ್ಲಿ ಮಣ್ಣು ಮತ್ತು ಫಸಲಿನ ಆರೋಗ್ಯಕರ ಬೆಳವಣಿಗೆಗೆ ‘ಮಲ್ಚಿಂಗ್’ ಅಥವಾ ಆಚ್ಛಾದನೆಯು ಬಹಳ ಪರಿಣಾಮಕಾರಿಯಾದ ಕೃಷಿ ಪದ್ಧತಿಯಾಗಿದೆ. ಮಣ್ಣಿನ ಮೇಲ್ಮೈಯನ್ನು ಅವಶ್ಯಕ ವಸ್ತುಗಳ ಪದರದಿಂದ ಮುಚ್ಚುವ ಮೂಲಕ ಮಣ್ಣಿನ ಆರೋಗ್ಯವನ್ನು ಸಂರಕ್ಷಿಸುವ ಪ್ರಕ್ರಿಯೆಗೆ ಆಚ್ಛಾದನೆ (ಹೊದಿಕೆ ಹೊದಿಸುವಿಕೆ) ಎನ್ನಲಾಗುತ್ತದೆ.

ಕ್ಯಾಲಿಫೋರ್ನಿಯಾ, ಇಸ್ರೇಲ್, ಚೀನಾದಂಥ ದೇಶಗಳು ಪ್ರತಿಯೊಂದು ಬೆಳೆಗೂ ಕಡಿಮೆ ಖರ್ಚಿನಲ್ಲಿ ಆಚ್ಛಾದನೆ
ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡು, ಆರೋಗ್ಯಕರ ಮಣ್ಣು ಮತ್ತು ನಿರೀಕ್ಷಿತ ಕೃಷಿ ಆದಾಯ ದೊಂದಿಗೆ ಅಗಾಧ ಸಾಧನೆ ಮಾಡಿವೆ. ಈಗ ಆಚ್ಛಾದನೆಯ ಪ್ರಯೋಜನಗಳ ಕಡೆಗೆ ಕೊಂಚ ಗಮನ ಹರಿಸೋಣ. ಆಚ್ಛಾದನೆಯಿಂದಾಗಿ ಮಣ್ಣಿಗೆ ತೇವಾಂಶವು ಲಭ್ಯವಾಗಿ, ಸಸ್ಯಗಳಿಗೆ ಸ್ಥಿರವಾದ ನೀರುಪೂರೈಕೆ ಆಗುತ್ತದೆ.

ಅಂತೆಯೇ ಶುಷ್ಕ ಅಥವಾ ಬಿಸಿ ವಾತಾವರಣದಲ್ಲಿ ಫಸಲಿನ ಆರೋಗ್ಯಕರ ಬೆಳವಣಿಗೆಯಾಗುತ್ತದೆ. ಸೂರ್ಯನ ಬೆಳಕು ನೇರವಾಗಿ ಭೂಮಿಗೆ ಮತ್ತು ಕಳೆಬೀಜಗಳಿಗೆ ತಾಗದಿರುವುದರಿಂದ, ಕಳೆ ಬೀಜಗಳು ಮೊಳಕೆಯೊಡೆಯು ವುದಿಲ್ಲ.

ಮೊಳಕೆಯೊಡೆದ ಕಳೆಗಳ ಎಲೆಗಳಲ್ಲಿ ಬಿಸಿಲಿನ ಕೊರತೆಯಿಂದಾಗಿ ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆಯದಿರುವು ದರಿಂದ, ಕಳೆಗಳ ಬೆಳವಣಿಗೆಯಾಗುವುದಿಲ್ಲ. ಆಚ್ಛಾದನೆಯು ಮಣ್ಣಿನ ತಾಪಮಾನದ ನಿರೋಧಕ ಪದರವಾಗಿ ಕಾರ್ಯನಿರ್ವಹಿಸುತ್ತದೆ. ಇದು ಮಣ್ಣನ್ನು ಬಿಸಿ ವಾತಾವರಣದಲ್ಲಿ ತಂಪಾಗಿಸುತ್ತದೆಯಲ್ಲದೆ, ತಂಪಾದ ವಾತಾ ವರಣದಲ್ಲಿ ಬೆಚ್ಚಗಾಗಿಸುತ್ತದೆ. ಒಟ್ಟಾರೆಯಾಗಿ ಸಸ್ಯದ ಬೆಳವಣಿಗೆಗೆ ಅವಶ್ಯಕವಾದ ವಾತಾವರಣವನ್ನು ಅದು ಸೃಷ್ಟಿಸುತ್ತದೆ. ಆಚ್ಛಾದನೆಯಿಂದಾಗಿ ಬರಗಾಲದಂಥ ಸನ್ನಿವೇಶಗಳಲ್ಲಿ ಕನಿಷ್ಠ ಶೇ.40ರಷ್ಟು ನೀರಿನ ಉಳಿತಾಯ ವಾಗುತ್ತದೆ.

ಅತಿಯಾದ ಸೂರ್ಯಪ್ರಕಾಶ, ಮಳೆ ಮತ್ತು ಗಾಳಿಯಿಂದ ಆಗಬಹುದಾದ ಮಣ್ಣಿನ ಸವೆತವನ್ನು ಮತ್ತು ಬೆಳೆ ಹಾನಿ ತಡೆಯುವ ಆಚ್ಛಾದನೆಯು ಇಳಿಜಾರು ಭೂಮಿಗಳಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಸಾವಯವ ಆಚ್ಛಾದನೆ ಳು ಕ್ರಮೇಣವಾಗಿ ಕೊಳೆತು ಮಣ್ಣಿನಲ್ಲಿ ಸೇರ್ಪಡೆಯಾಗುತ್ತವೆ. ಇದರಿಂದಾಗಿ ಮಣ್ಣಿನಲ್ಲಿ ಪೋಷಕಾಂಶಗಳು, ಸಾವಯವ ಇಂಗಾಲ, ನೀರನ್ನು ಹಿಡಿದಿಡುವ ಸಾಮರ್ಥ್ಯ ಮತ್ತು ಫಲವತ್ತತೆಯು ಹೆಚ್ಚಾಗಿ ಮಣ್ಣಿನ ರಚನೆಯು ಸುಧಾರಿಸುತ್ತದೆ.

ಸುಲಭವಾಗಿ ಕೊಳೆಯುವ ಆಚ್ಛಾದನೆಗಳಿಂದಾಗಿ ಮತ್ತು ಮಣ್ಣಿನಲ್ಲಿ ಅವಶ್ಯಕ ತೇವಾಂಶವಿರುವುದರಿಂದಾಗಿ
ನೈಸರ್ಗಿಕವಾಗಿಯೇ ರೈತಸ್ನೇಹಿ ಜೀವಾಣುಗಳು ಸೃಷ್ಟಿಯಾಗುತ್ತವೆ. ಇದರಿಂದಾಗಿ ನೈಸರ್ಗಿಕವಾಗಿ ರಾಸಾಯನಿಕ
ಕ್ರಿಯೆಗಳು ನಡೆದು ಮಣ್ಣಿನ -ಲವತ್ತತೆ ಮತ್ತು ಬೆಳೆಯ ಇಳುವರಿ ಹೆಚ್ಚಾಗುತ್ತವೆ. ನಾಟಿಯಾದ ಬೀಜಕ್ಕೆ ಆರಂಭ ದಿಂದಲೇ ಅವಶ್ಯಕ ಸಂರಕ್ಷಣೆ ದೊರೆಯುವುದರಿಂದ ಚಿಗುರೊಡೆಯುವ ಪ್ರಮಾಣವು ಹೆಚ್ಚುತ್ತದೆ.

ನಾಟಿಯಾದ ತಕ್ಷಣದಿಂದ ಬೀಜಕ್ಕೆ ಸಂಭವಿಸಬಹುದಾದ ಕ್ರಿಮಿ-ಕೀಟಗಳ ಕಾಟ, ಪಕ್ಷಿಗಳ ಉಪಟಳದಿಂದ ರಕ್ಷಣೆ ಯು ಲಭಿಸು ತ್ತದೆ. ಆಚ್ಛಾದನೆಯಿಂದಾಗಿ ರಸಗೊಬ್ಬರ, ನೀರು, ಕೀಟನಾಶಕ ಮತ್ತು ಕಾರ್ಮಿಕರ ಅವಶ್ಯಕತೆಯು ಕಡಿಮೆ ಯಾಗುವುದರಿಂದ ಖರ್ಚು ಉಳಿತಾಯವಾಗುತ್ತದೆ. ಬೆಳೆಗೆ ನೀಡಿದ ಪೋಷಕಾಂಶಗಳನ್ನು ಕಳೆಗಳು ಹೀರಿ ಕೊಂಡು ತೊಂದರೆ ಮಾಡುವುದುಂಟು. ಆದರೆ ಆಚ್ಛಾದನೆಯಿಂದ ಕಳೆಗಳು ನಾಶವಾಗುವುದರಿಂದಾಗಿ ಬೆಳೆಗಳಿಗೆ ಪೋಷಕಾಂಶಗಳು ಅವಶ್ಯಕ ಪ್ರಮಾಣದಲ್ಲಿ ಲಭ್ಯವಾಗಿ ಬೆಳೆಯು ಸಮೃದ್ಧ ಇಳುವರಿಯನ್ನು ನೀಡುತ್ತದೆ.

ನೈಸರ್ಗಿಕ ವಸ್ತುಗಳಾದ ಹುಲ್ಲು, ಬೆಳೆಯುಳಿಕೆಗಳು, ಒಣಗಿರುವ ಎಲೆಗಳು, ಕಬ್ಬು ಹಾಗೂ ಬಾಳೆಯಂಥ ದೀರ್ಘಾ ವಧಿ ಬೆಳೆಗಳ ಪ್ರತಿ ಕಟಾವಿನ ನಂತರದಲ್ಲಿ ಉಳಿಯುವ ಹಸಿ ಹಾಗೂ ಒಣ ಎಲೆ, ಕಾಂಡಗಳು ಆಚ್ಛಾದನೆಗೆ
ಯೋಗ್ಯವಾಗಿವೆ. ಗರಿಕೆ ಮತ್ತು ಜೇಕುಗಳನ್ನು ಹೊರತುಪಡಿಸಿ, ಹೂವಾಗುವ ಮುಂಚೆ ತೆಗೆದುಹಾಕಿರುವ ಇನ್ನಿತರ ಹಸಿ ಕಳೆಗಳೆಲ್ಲವೂ ಮುಖ್ಯ ಬೆಳೆಗೆ ಉತ್ತಮ ಪೋಷಕಾಂಶಗಳನ್ನು ನೀಡುವ ಆಚ್ಛಾದನೆಗಳಾಗಿವೆ. ಇವು ಮುಖ್ಯ ಬೆಳೆಯ ಕಟಾವಿನ ಅವಧಿಯೊಳಗಾಗಿ ಕೊಳೆತು ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗುತ್ತವೆ.

ಇದರಿಂದ ಬೆಳೆಯು ಉತ್ತಮ ಇಳುವರಿಯೊಂದಿಗೆ, ಗುಣಮಟ್ಟದೊಂದಿಗೆ ಕೂಡಿರುತ್ತದೆ. ಆಚ್ಛಾದನೆಯಲ್ಲೂ ವರ್ಣವೈವಿಧ್ಯ ಹಾಗೂ ಪರಿಣಾಮ ವೈವಿಧ್ಯವಿದೆ. ಕಪ್ಪು ಬಣ್ಣದ ಆಚ್ಛಾದನೆಯು ಶಾಖವನ್ನು ಹೀರಿಕೊಂಡು ಮಣ್ಣನ್ನು ಬೆಚ್ಚಗಾಗಿಸುತ್ತದೆ ಹಾಗೂ ಕಳೆಗಳನ್ನು ನಿಗ್ರಹಿಸುತ್ತದೆ. ಇದು ಶೀತ ಸಮಯದಲ್ಲಿನ ಅಲ್ಪಾವಧಿ ಬೆಳೆ ಗಳಿಗೆ ಸಹಕಾರಿ. ಬೆಳ್ಳಿ ಬಣ್ಣದ ಆಚ್ಛಾದನೆಯು ಬೆಳಕನ್ನು ಪ್ರತಿಫಲಿಸುವುದರೊಂದಿಗೆ ಕೀಟಗಳನ್ನು ಹಿಮ್ಮೆಟ್ಟಿಸಿ ಮಣ್ಣನ್ನು ತಂಪಾಗಿಸುತ್ತದೆ.

ಬಿಳಿ ಬಣ್ಣದ ಆಚ್ಛಾದನೆಯು ಸೂರ್ಯನ ಪ್ರಖರ ಬೆಳಕನ್ನು ಪ್ರತಿಫಲಿಸಿ ಮಣ್ಣನ್ನು ತಂಪಾಗಿಸುತ್ತದೆ. ಕೆಂಪು ಬಣ್ಣದ್ದು ಬೆಳಕಿನ ನಿರ್ದಿಷ್ಟ ತರಂಗಾಂತರಗಳನ್ನು ಪ್ರತಿಫಲಿಸುವ ಮೂಲಕ ಇಳುವರಿ ಮತ್ತು ಗುಣಮಟ್ಟವನ್ನು ಹೆಚ್ಚಿಸುತ್ತದೆ.

ಇದು ಹಣ್ಣು ಮತ್ತು ತರಕಾರಿಗಳಿಗೆ ಸೂಕ್ತ. ಹಳದಿ ಬಣ್ಣದ ಆಚ್ಛಾದನೆಯು ಕೀಟ ನಿರ್ವಹಣಾ ತಂತ್ರಗಳಿಗೆ ಸೂಕ್ತವಾಗಿದೆ. ಹಸಿರು ಬಣ್ಣದ ಆಚ್ಛಾದನೆಯು ತರಂಗಾಂತರಗಳನ್ನು ಪ್ರತಿಫಲಿಸುವಾಗ ಸ್ವಲ್ಪ ಬೆಳಕನ್ನು ಹೀರಿಕೊಳ್ಳುತ್ತದೆ. ಬೆಳೆಯಬೆಳವಣಿಗೆ ಮತ್ತು ದ್ಯುತಿಸಂಶ್ಲೇಷಣಾ ಕ್ರಿಯೆಯನ್ನು ಹೆಚ್ಚಿಸಲು ಇದು ಸಹಕಾರಿ ಯಾಗುತ್ತದೆ. ನೀಲಿ ಆಚ್ಛಾದನೆಯು ಬೆಳಕನ್ನು ಪ್ರತಿಫಲಿಸುವುದರಿಂದ ಕಲ್ಲಂಗಡಿಯಂಥ ಬೆಳೆಗಳಲ್ಲಿ ಬೆಳವಣಿಗೆ ಯನ್ನು ಉತ್ತೇಜಿಸುತ್ತದೆ. ಕಂದು ಆಚ್ಛಾದನೆಯು ಮಧ್ಯಮ ಶಾಖವನ್ನು ಹೀರಿಕೊಳ್ಳುವುದರಿಂದ ಬೆಳೆಗಳ
ಸೌಂದರ್ಯಕ್ಕೆ ಸೂಕ್ತ. ಕೊಳೆಯದ ವಸ್ತುಗಳನ್ನು ಸಾಧ್ಯವಾದಷ್ಟು ಆಚ್ಛಾದನೆಯಾಗಿ ಬಳಸದಿರುವುದು ಸೂಕ್ತ. ಇವು ರಾಸಾಯನಿಕ ವಸ್ತುಗಳಾಗಿರುವುದರಿಂದ ಮಣ್ಣಿನ ಫಲವತ್ತತೆಗೆ ಹಾನಿ ಯುಂಟುಮಾಡಬಹುದು.

ಕೊಳೆಯದ ಆಚ್ಛಾದನೆಗಳನ್ನು ಬಳಸಿದಲ್ಲಿ ಮುಖ್ಯ ಬೆಳೆಯ ಕಟಾವಿನ ನಂತರ ಜಮೀನಿನಿಂದ ತ್ವರಿತವಾಗಿ ವಿಲೇವಾರಿ ಮಾಡಬೇಕು. ಭೂಮಿಯನ್ನು ಹದಗೊಳಿಸಿದ ನಂತರ ನೀರುಣಿಸುವ ಮತ್ತು ಬಿತ್ತನೆಯ ಪೂರ್ವದಲ್ಲಿ ಆಚ್ಛಾದನೆಯನ್ನು ಕೈಗೊಳ್ಳಬೇಕು. ನಂತರ ಕೈಗೊಂಡಲ್ಲಿ, ಪ್ರಾರಂಭದಿಂದಲೇ ತೇವಾಂಶ ಸಂರಕ್ಷಣೆ ಮತ್ತು
ಕಳೆಗಳ ನಿಯಂತ್ರಣ ಸಾಧ್ಯವಾಗುವುದಿಲ್ಲ. ಬೆಳೆಯ ಬೆಳವಣಿಗೆಯ ಗಾತ್ರವನ್ನು ಅವಲೋಕಿಸಿ, ಬೆಳೆಯ ಸುತ್ತಲೂ ತೇವಾಂಶ ಶೇಖರಣೆ ಮತ್ತು ಸಂಭಾವ್ಯ ಕೊಳೆತವನ್ನು ತಡೆಗಟ್ಟಲು 2-3 ಅಂಗುಲದಷ್ಟು ಸ್ಥಳವನ್ನು ಬಿಟ್ಟು ಉಳಿದೆಲ್ಲ ಸ್ಥಳದಲ್ಲಿ ಆಚ್ಛಾದನೆಯನ್ನು ಕೈಗೊಳ್ಳಬಹುದು.

ಆಚ್ಛಾದನೆಯ ಪದರವು ತುಂಬಾ ತೆಳುವಾಗಿದ್ದಲ್ಲಿ ಅದು ಸಮರ್ಪಕ ಫಲಿತಾಂಶವನ್ನು ನೀಡದಿರಬಹುದು. ತುಂಬಾ ದಪ್ಪವಾದ ಆಚ್ಛಾದನೆಯ ಪದರವು ಸಸ್ಯಗಳ ಬೇರುಗಳನ್ನು ಉಸಿರುಗಟ್ಟಿಸಿ ಹಲವು ಸಮಸ್ಯೆಗಳನ್ನು ಸೃಷ್ಟಿಸ ಬಹುದು. ಆದ್ದರಿಂದ ತಜ್ಞರ ಸಲಹೆಯಂತೆ ಮಣ್ಣು ಮತ್ತು ಬೆಳೆಗೆ ಸೂಕ್ತವಾದ ಆಚ್ಛಾದನೆಯನ್ನು ಅಳವಡಿಸಿ ಕೊಳ್ಳಬೇಕು.

ಒಟ್ಟಾರೆಯಾಗಿ ಆಚ್ಛಾದನೆ ಕೈಗೊಂಡ ಜಮೀನಿಗೆ ಹನಿ ಅಥವಾ ತುಂತುರು ನೀರಾವರಿ ವ್ಯವಸ್ಥೆಯಿದ್ದಲ್ಲಿ ಮತ್ತಷ್ಟು ಪರಿಣಾಮಕಾರಿಯಾದ ಫಲಿತಾಂಶ ವನ್ನು ಪಡೆಯಬಹುದು. ಕಾಲುವೆ ನೀರಾವರಿ ಪದ್ಧತಿಯಲ್ಲಿ ಆಚ್ಛಾದನೆಯು
ಅಷ್ಟೊಂದು ಸೂಕ್ತವಲ್ಲ, ಕಾರಣ ಸಾಲುಗಳಲ್ಲಿ ಆಚ್ಛಾದನೆ ಇರುವುದರಿಂದ ನೀರಿನ ಮುನ್ನಡೆಗೆ ಅಡಚಣೆ ಯಾಗುತ್ತದೆ. ಕಬ್ಬು ಮತ್ತು ಬಾಳೆಯಂಥ ದೀರ್ಘಾವಧಿ ಬೆಳೆಗಳಲ್ಲಿ ಭೂಮಿಯ ತಯಾರಿ ಮಾಡುವಾಗ ಜೋಡಿ ಸಾಲು ಗಳನ್ನು ತಯಾರಿಸಬೇಕು. ಈ ಜೋಡಿಸಾಲುಗಳಲ್ಲಿ ಒಂದನ್ನು ಆಚ್ಛಾದನೆಗೆ, ಇನ್ನೊಂದನ್ನು ಕಾಲುವೆ ನೀರಾವರಿಗೆ ಬಳಸಬಹುದು.

ಆಚ್ಛಾದನೆಯನ್ನು ನಿಯತವಾಗಿ ಪರಿಶೀಲಿಸುತ್ತಿರಬೇಕು. ಅದರ ಪದರದ ಮೂಲಕ ಬೆಳೆ ಯುವ ಕಳೆಗಳನ್ನು ಗುರುತಿಸಿ ತೆಗೆದುಹಾಕುತ್ತಿರಬೇಕು. ಪಶು- ಪಕ್ಷಿಗಳಿಂದ ಆಚ್ಛಾದನೆಗೆ ತೊಂದರೆ ಉಂಟಾದಲ್ಲಿ ತ್ವರಿತವಾಗಿ
ಸರಿಪಡಿಸುತ್ತಿರಬೇಕು. ತಪ್ಪಿದಲ್ಲಿ ಒಟ್ಟಾರೆ ಜಮೀನಿನಲ್ಲಿ ಬೆಳೆಯ ಏಕರೂಪ ಬೆಳವಣಿಗೆಯು ಅಸಾಧ್ಯವಾಗುತ್ತದೆ. ಸಾವಯವ ಆಚ್ಛಾದನೆಗಳ ಮೇಲೆ ಕ್ರಿಮಿ-ಕೀಟಗಳು ದಾಳಿ ಮಾಡಬಹುದು. ಇವುಗಳ ಹತೋಟಿಗಾಗಿ ರಾಸಾಯನಿಕ ಕ್ರಮಗಳ ಬದಲಾಗಿ ಜೈವಿಕ ಹತೋಟಿಯನ್ನು ಕೈಗೊಳ್ಳಬೇಕು. ಕಾರಣ, ಆಚ್ಛಾದನೆಯ ಸ್ಥಳದಲ್ಲಿ ಸದಾ ತೇವಾಂಶ ವಿರುವುದರಿಂದ ಜೈವಿಕ ಕ್ರಿಯೆಗೆ ತೊಂದರೆಯಾಗುವುದಿಲ್ಲ. ಆಚ್ಛಾದನೆಯು ಸರಳವಾದ ಮತ್ತು ಹೆಚ್ಚು ಪರಿಣಾಮ ಕಾರಿಯಾದ ಕೃಷಿ ಪದ್ಧತಿಯಾಗಿದೆ. ಇದರಿಂದ ಮಣ್ಣಿನ ಆರೋಗ್ಯವು ಸುಧಾರಿಸುವುದಲ್ಲದೆ ಸಸ್ಯಗಳು ಆರೋಗ್ಯ ದಾಯಕ ಬೆಳವಣಿಗೆಯನ್ನು ಹೊಂದಿ ಉತ್ತಮ ಇಳುವರಿಯನ್ನು ನೀಡುತ್ತವೆ.

(ಲೇಖಕರು ಕೃಷಿತಜ್ಞರು ಹಾಗೂ ಸಹಾಯಕ ಮಹಾಪ್ರಬಂಧಕರು)

ಇದನ್ನೂ ಓದಿ: IND vs BNG: ಬಾಂಗ್ಲಾ ಮಣಿಸಲು ರೆಡ್‌ ಪಿಚ್‌ ನಿರ್ಮಿಸಿದ ಭಾರತ