Saturday, 12th October 2024

ಉಪರ್‌ಕೋಟ್‌ ಉಪ್ಪರಿಗೆಯ ಮೇಲೆ…!

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

mehandale100@gmail.com

ಒಂದು ಕಾಲದಲ್ಲಿ ಪ್ರವಾಸ ಅಥವಾ ಟ್ರೆಕ್ ಎಂದರೆ ಕಡ್ಡಾಯ ಕೆಲವು ನಿಯಮಗಳನ್ನು ಹಾಕಿಕೊಟ್ಟಂತೆ; ಜನ ಮತ್ತು ವಿದ್ಯಾರ್ಥಿ ಗಳು ಸೇರಿದಂತೆ ಎಲ್ಲರೂ ಅದನ್ನೇ ಅನುಸರಿಸುತ್ತಿದ್ದರು. ಕೇವಲ ಎದುರಿಗಿನ ನದಿ ತೀರ, ಕೆಲವು ಪ್ರಸಿದ್ಧ ಗಿರಿಧಾಮ ಹೊರತು ಪಡಿಸಿದರೆ ಇನ್ನುಳಿದಂತೆ ಅಪರೂಪದ ಮತ್ತು ಐತಿಹಾಸಿಕ ಸ್ಥಳಗಳನ್ನು ಹುಡುಕಿಕೊಂಡು ಹೊಗುವ ಆಫ್ ಬೀಟ್ ಪ್ರವಾಸದ ಮಾತೇ ಇರಲಿಲ್ಲ.

ಇದರಿಂದಾಗಿ ನಮ್ಮ ನೈಸರ್ಗಿಕ ಸಂಪತ್ತು, ಇತಿಹಾಸ, ಪಾರಂಪರಿಕತೆ, ವೈಶಿಷ್ಟ್ಯ ಎಲ್ಲ ಸೇರಿದಂತೆ ಪ್ರತಿಯೊಂದೂ ಕೇವಲ ಪುಸ್ತಕದ ಬದನೆಕಾಯಿ ಆಗತೊಡಗಿದಂತೆ ಜನ ಮಾನಸದಲ್ಲೂ ಹಲವು ಪ್ರದೇಶಗಳು ನಮೂದಾಗದೇ ಹಳ್ಳ ಹಿಡಿಯತೊಡಗಿದ್ದವು.
ಇಂಥಾ ಸಂದರ್ಭದ ಸ್ಥಳೀಯವಾಗೂ ಇವೆಲ್ಲ ಬೆಂಬಲ ಇಲ್ಲದೇ ಮೂಲೆಗುಂಪಾಗುವು ದರೊಂದಿಗೆ ಕ್ರಮೇಣ ಅನೈತಿಕ ಚಟುವಟಿಕೆ ಮತ್ತು ಇತರೆ ಅಕ್ರಮಗಳಿಗೂ ಇವೆಲ್ಲ ತಾಣ ವಾಗಿ ಬಕ್ಕ ಬಾರಲಾಗುತ್ತಿದ್ದರೆ, ಕೊನೆಗೊಮ್ಮೆ ಅದರ ಜತೆಗೆ ಇತಿಹಾಸವೂ ಹಳ್ಳ ಹಿಡಿ ಯುತ್ತದೆ.

ಇದರಿಂದಾಗೇ ದೇಶದಲ್ಲಿ ಇವತ್ತು ಶೇ.30ಕ್ಕೂ ಹೆಚ್ಚು ಇಂಥ ಐತಿಹಾಸಿಕ ವೈಶಿಷ್ಟ್ಯಗಳು ನಾಮಾವಶೇಷವಾಗಿವೆ ಎಂದರೆ ತಪ್ಪಿಲ್ಲ. ಆದರೆ ಇದೇ ಹೊತ್ತಿಗೆ ಕೇಂದ್ರ ಮತ್ತು ಪುರಾ ತತ್ವ ಇಲಾಖೆ ಒಂದಷ್ಟು ರಂಗಕ್ಕಿಳಿದವು ನೋಡಿ. ಹಲವು ವಿಭಿನ್ನ ಮತ್ತು ಐತಿಹಾಸಿಕ ಸ್ಥಳಗಳು ಬೆಳಕಿಗೆ ಬಂದವು. ಕ್ರಮೇಣ ಜನಮಾನಸದ ಪ್ರವಾಸದಲ್ಲೂ ಜಾಗ ಪಡೆದವು. ಗತ ವೈಭವಕ್ಕೆ ಸಾಕ್ಷಿ ಆಗತೊಡಗಿದವು. ಅಂಥದ್ದೇ ಒಂದು ಕೋಟೆ ಕೊತ್ತಲ ನಾಡು ಗಿರನಾರ್. ಆ ಕೋಟೆ ಸತತ ಹದಿನಾರು ಬಾರಿ ಸ್ತಂಭನಕ್ಕೊಳ ಗಾಗಿತ್ತು. ಅನಾಮತ್ತು ಮೂರುನೂರು ವರ್ಷಗಳ ಕಾಲ ಭೂಮಿಯಡಿಯಲ್ಲಿ ಮುಚ್ಚಿ ನಲುಗಿ ಹೋಗಿತ್ತು.

ಎಗ್ಗಿಲ್ಲದೇ ಹಲವು ಬಾರಿ ದಾಳಿಕೋರರ ಕೈಗೆ ಸಿಲುಕಿ ನಲುಗಿತ್ತು. ಸತತ ಭೀಕರ ಬರಗಾಲಕ್ಕೆ ಈಡಾದಾಗ ಕೋಟೆಯೊಳಗೆ ಬಾವಿ ಯನ್ನು ತೋಡಿ ಜನರು ಅಲ್ಲಿ ಬದುಕಿಕೊಂಡಿದ್ದರು. ನಗರದಿಂದ ರಮಣೀಯವಾಗಿ ಕಾಣುವ ಗಿರ್ನಾರ್ ಬೆಟ್ಟವನ್ನು ಸುಂದರ ವಾಗಿ ಕಾಣಿಸುವಂತೆ ಅದರ ಮಹಲಿನ ಕಮಾನುಗಳನ್ನು ನಿರ್ಮಿಸಲಾಗಿತ್ತು. ಅಲ್ಲಿಂದ ಜುನಾಗಢದ ಅತ್ಯಂತ ರೂಪವತಿಯಾದ ರಾಣಿ ರಾಣಿಕಾದೇವಿಯ ಮಹಲಿನ ಕಿಟಕಿಯ ಕೋವೆಗಳು ಹೊರಚಾಚಿಕೊಂಡಿದ್ದು, ಜುನಾಗಢ ನಗರದ ಸುಂದರ ದೃಶ್ಯಗಳ ಜತೆಗೆ ಗಿರ್ನಾರ್ ಪರ್ವತ ಕೂಡ ಸುಂದರವಾಗಿ ಕಂಡು ಬರುತ್ತಿತ್ತು.

ಅದಕ್ಕಾಗಿಯೇ ಆ ಕಮಾನಿನ ಮಹಲನ್ನು ಕಟ್ಟಲಾಗಿತ್ತು. ಬರುಬರುತ್ತ ಇತಿಹಾಸದ ‘ರೇವತ್ ನಗರಿ’ ಉಪರ್‌ಕೋಟ್ ಆಗಿ ಬದಲಾ ಗಿತ್ತು. ಕಾಲನ ಹೊಡೆತಕ್ಕೆ ಸಿಕ್ಕು ಉಸಿರು ಮರಳಿ ಪಡೆದ ಕೋಟೆಯೊಂದರ ಕಥೆ ಇದು. ಕ್ರಿ.ಪೂ. ೩೦೦ರಿಂದ ಆರಂಭಿಸಿ ಸತತವಾಗಿ ಬದಲಾವಣೆಗಳಿಗೆ ಈಡಾಗುತ್ತಲೇ ಬಂದ ಜುನಾಗಢದ ಈ ಕೋಟೆ ಆಸಕ್ತರಿಗೆ ಮತ್ತು ಪ್ರವಾಸಿಗರಿಗೆ ಮೊದಲ ನೋಟಕ್ಕೆ
ಸುಲಭಕ್ಕೆ ಆಕರ್ಷಿಸುವುದಿಲ್ಲ. ಕಾರಣ ಕೋಟೆಯೊಳಗಿನದೇ ಆದ ಹತ್ತು ಹಲವು ಅದ್ಭುತ ಸ್ಥಳಗಳು ನೋಡಲು ಲಭ್ಯವಿದ್ದರೂ ವಿಶಾಲತೆ ಮತ್ತು ಹಲವು ಸ್ತರಗಳ ವಿನ್ಯಾಸದಲ್ಲಿ ಗೊಂದಲಕ್ಕೀಡುಮಾಡುತ್ತದೆ.

ಅಷ್ಟಾಗಿ ಹೊರಾಕರ್ಷಣೆ ಇಲ್ಲದ ಉಪರ್‌ಕೋಟ್ ನೋಡುತ್ತ ಹೋದಂತೆ ತನ್ನ ಗತ ವೈಭವವನ್ನು ಬಿಚ್ಚಿಡುತ್ತದೆ. ಒಳಭಾಗದಲ್ಲಿ ಈಗಲೂ ಎಲೆ ಮರೆಯ ಕಾಯಿ ಅದರ ಭವ್ಯತೆ ಮತ್ತು ತಾಂತ್ರಿಕತೆ. ಉತ್ತರ ಗುಜರಾತಿನ ಪ್ರಮುಖ ಜುನಾಗಢ ನಗರಕ್ಕೆ ಬೆನ್ನೆಲು ಬಾಗಿಯೂ, ಇನ್ನೊಂದೆಡೆಯಲ್ಲಿ ಎತ್ತರಕ್ಕೆ ಗಿರ್ನಾರ್ ಬೆಟ್ಟಕ್ಕೆ ಎದುರು ಮುಖವಾಗಿ ರಕ್ಷಣೆಯಂತೆ ನಿಂತಿರುವ ಉಪರ್ಕೋಟ್ ಕೋಟೆ ಒಂದು ಕಾಲದಲ್ಲಿ ‘ರೇವತ ನಗರಿ’ ಎಂದಾಗಿದ್ದುದು, ಭಾರತದ ಖ್ಯಾತ ರಾಜ ವಂಶಸ್ಥ ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ಆರಂಭಿಕ ವೈಭವವನ್ನು ಕಂಡ ಇತಿಹಾಸವನ್ನು ಹೊಂದಿ, ಅವನ ಕಾಲದ ಕ್ರಿ.ಪೂ ೩೧೯ರಲ್ಲಿ ಇದರ ನಿರ್ಮಾಣವಾಯಿತು.

ಅಲ್ಲಿಂದ ಸತತ ಮುನ್ನೂರು ವರ್ಷಕಾಲ ಇದು ಭೂಮಿಯಡಿಯಲ್ಲಿ ಗಿರ್ನಾರ್ ವರ್ವತದ ಕುಸಿತಕ್ಕೆ ಸಿಲುಕಿ ಕೆಲ ಭಾಗ ಪಾಳು
ಬಿದ್ದು, ಮುಚ್ಚಿ ಹೋಗಿದ್ದು ಕಾಲ ನಂತರದಲ್ಲಿ ಸರಿ ಸುಮಾರು ಕ್ರಿ.ಶ. 976 ಮುಖ್ಯವಾಹಿನಿಗೆ ಬಂತು. ಸುಮಾರು ೩೦೦ ಆಡಿ ಆಳದ ಕಂದಕವನ್ನು ತನ್ನ ರಕ್ಷಣೆಗಾಗಿ ಹೊಂದಿರುವ ಉಪರ್‌ಕೋಟ್‌ನ ಕಂದಕದಲ್ಲಿ ಅನಾಹುತಕಾರಿ ಮೊಸಳೆಗಳನ್ನು ಸಾಕುತ್ತಿದ್ದುದು ಈಗ ಇತಿಹಾಸ. ಇದರಿಂದಾಗಿ ಸುಲಭಕ್ಕೆ ವೈರಿಗಳಿಗೆ ರೇವತನಗರಿಯ ಪ್ರವೇಶ ಲಭ್ಯವಾಗುತ್ತಿರಲಿಲ್ಲ. ಅದರ
ಈಚೆಗೆ ೨೦ ಮೀ. ಎತ್ತರದಲ್ಲಿ ಕೋಟೆಯ ಗೋಡೆಗಳನ್ನು ಹೊಂದಿದ್ದು ಸ್ವತಃ ಕುಡಿಯುವ ನೀರಿನ ವ್ಯವಸ್ಥೆ, ವರ್ಷಗಳಿ ಗಾಗುವಷ್ಟು ಧಾನ್ಯ ಸಂಗ್ರಹ ಕೊಠಡಿ, ಮದ್ದು ಗುಂಡುಗಳ ಶಸಾಗಾರ ಇತ್ಯಾದಿಗಳ ಅಪೂರ್ವ ಸಂಗ್ರಹದ ಜತೆಗೆ ಆಯಾ ಶತಮಾನದ ಬದಲಾವಣೆಗೆ ತಕ್ಕಂತೆ ಕೋಟೆಯಲ್ಲಿನ ಬದಲಾವಣೆಗಳು ಅಪೂರ್ವ ಸ್ಥಳಗಳ ಜನನಕ್ಕೂ ಕಾರಣವಾಯಿತು.

ಮೊಟ್ಟ ಮೊದಲು ಕೋಟೆಯ ಅರಂಭಿಕ ಹಂತದಲ್ಲಿ ಬೌದ್ಧ ಭಿಕ್ಷುಗಳು ತಪಸ್ಸನ್ನು ಮಾಡಲು ಅನುಕೂಲವಾಗುವಂತಹ ಮೂರು ಮಹಲಿನ ಕಲ್ಲಿನ ಗುಹಾಕೃತಿಯ ಧ್ಯಾನ ಮಂದಿರಗಳ ನಿರ್ಮಾಣ ಎಕ ಶಿಲೆಯ ಬೆಟ್ಟದಲ್ಲಿ ಕೊರೆದದ್ದು ಅವುಗಳು ಈಗಲೂ ಸುಸ್ಥಿತಿಯಲ್ಲಿರುವುದು ಗಮನೀಯ. ಏಕ ಶಿಲಾ ಬಂಡೆಯಲ್ಲಿ ನಿರ್ಮಿಸಲಾಗಿರುವ ಇದನ್ನು ಈಗಲೂ ಅತ್ಯಂತ ವ್ಯವಸ್ಥಿತ ಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದ್ದು ಆಳಕ್ಕೆ ಇಳಿದು ಹೋದಂತೆ ಆಕರ್ಷಣೀಯ ಕಲಾ ವಿನ್ಯಾಸಗಳು ಎದುರಾಗುತ್ತವೆ.

ನಂತರ 7ನೇ ಶತಮಾನದವರೆಗೂ ಇದು ಸಮಾಽಯ ಸ್ಥಿತಿಯನ್ನು ಕಂಡಿತಾದರೂ ನಂತರದ ದಿನಗಳಲ್ಲಿ ಅಂದರೆ 9ನೇ ಶತಮಾನದ ಆರಂಭದಲ್ಲಿ ಚುಡಾಸಮ ವಂಶಸ್ಥರು ಜುನಾಗಢವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಇದನ್ನು ಮತ್ತೆ ಪುನರು ಜ್ಜೀವನಗೊಳಿಸಿದರು. ೧೦ನೇ ಶತಮಾನದಲ್ಲಿ ನವ ನಿರ್ಮಾಣಗೊಂಡ ಉಪರ್ ಕೋಟ್ 12ನೇ ಶತಮಾನದಲ್ಲಿ ರಾಣಿ ರಾಣಿಕಾ ದೇವಿಗಾಗಿ ವಿಶೇಷ ಮಹಲನ್ನು ಹೊಂದಿ ಉಚ್ಛ್ರಾಯ ಸ್ಥಿತಿಯನ್ನು ತಲುಪಿತ್ತು. ಅನುಪಮ ಸೌಂದರ್ಯವತಿಯಾದ ರಾಣಿಕಾ ದೇವಿಗಾಗಿ ಅವಳ ಮಹಲಿನಿಂದಲೇ ಗಿರ್ನಾರ್ ಬೆಟ್ಟಗಳ ಕಾಡಿನ ಸೌಂದರ್ಯ ಕಂಡು ಬರುವಂತೆ ಎಲ್ಲ ಕಮಾನಿನ
ದಿಕ್ಕನ್ನು ಏಕಮುಖ ವ್ಯವಸ್ಥೆಯಲ್ಲಿ ನಿರ್ಮಿಸಲಾಗಿತ್ತು.

ನಂತರದಲ್ಲಿ ಮುಸ್ಲಿಮ್ ರಾಜರ ಆಳ್ವಿಕೆಗೆ ಇದು ಸಿಕ್ಕುತ್ತಿದ್ದಂತೆ ಈ ರಾಣಿಯ ಮಹಲು ಶಾಶ್ವತವಾಗಿ ನಾಶಗೊಳಗಾದರೂ, ಉಳಿದ ಭವ್ಯ ಭಾಗ ಮುಂದೆ ಮಸೀದಿಯಾಗಿ ಬದಲಾಗಿ ಉಳಿದುಕೊಂಡಿತು. ಈಗಲೂ ಅದೇ ಶೈಲಿಯಲ್ಲಿ ಮಸೀದಿ ಅಚ್ಚಳಿಯದೇ ಉಳಿ ದಿದ್ದರೂ ಆಗಿನ ಶಿಲ್ಪ ಸೌಂದರ್ಯ ಎದ್ದು ಕಾಣುತ್ತದೆ. ಹದಿನೈದನೇ ಶತಮಾನದಲ್ಲಿ ರಾಜ ಮಾಂಡಲಿಕ ಸಂಪೂರ್ಣವಾಗಿ ಸೋತು ಹೋಗುವುದರೊಂದಿಗೆ ನಂತರದ ದಿನಗಳಲ್ಲಿ ಉಪರ್‌ಕೋಟ್ ನಿರಂತರವಾಗಿ ಮುಸ್ಲಿಂ ಆಡಳಿತಕ್ಕೊಳಪಟ್ಟಿತು.

ತನ್ನ ವೈಭವದ ದಿನಗಳಲ್ಲಿ ಆದಿ-ಖದಿ ವಾವ್(ಬಾವಿ) ಎನ್ನುವ ಬಾವಿಯ ಅಪರೂಪದ ನಿರ್ಮಾಣವನ್ನು ಕಂಡ ಉಪರ್‌ಕೋಟ್ ನೂರು ಮೀ. ಉದ್ದ, ನಲವತ್ತು ಮೀ. ಆಳ ಹಾಗೂ ಹದಿನೈದು ಅಡಿಗೂ ಮಿಗಿಲು ಅಗಲದ, ದೇಶದ ಮೊಟ್ಟ ಮೊದಲ ಬಾವಿ ಆಗಿನ ಶೈಲಿಯಲ್ಲಿ ನಿರ್ಮಾಣ ವಾಗಿದೆ. ಶತಮಾನಗಳೇ ಕಳೆದರೂ ಈಗಲೂ ಸುಸ್ಥಿತಿಯಲ್ಲಿದ್ದು ತಂತ್ರಗಾರಿಕೆಗೆ ಸಾಕ್ಷಿಯಾಗಿ ನಿಂತಿದೆ. ಈ ಭೂಮಿಯಾಳದ ಅಗಾಧ ಅಳತೆಯ ಬಂಡೆಯಲ್ಲಿ ಕೊರೆಯಲಾಗಿರುವ ಬಾವಿಯ ಇಕ್ಕೆಲಗಳಲ್ಲಿ ಕಲಾಕೃತಿಯ ಕೆತ್ತನೆ ಇಲ್ಲದಿದ್ದರೂ ಕಡೆದಿರುವ ನೈಜ ಹಂತಗಳು ಅದೆಷ್ಟು ಚೆನ್ನಾಗಿ ಮೂಡಿವೆ ಎಂದರೆ ಬಾವಿಯನ್ನು ನೋಡಲೇ ಅರ್ಧ ದಿನ ಕಳೆಯುವವರು ಇದ್ದಾರೆ.

ಬಾವಿಯಲ್ಲಿ ನೀರಿನ ಒರತೆ ಉಕ್ಕದಿದ್ದಾಗ ಹರೆಯದ ಇಬ್ಬರು ಹೆಣ್ಣುಮಕ್ಕಳಾದ ಆದಿ ಮತ್ತು ಖದಿ ಎನ್ನುವರ ಬಲಿದಾನವಾಗಿ ಹರಿದ ನೀರು ಇವತ್ತಿಗೂ ಜೀವಂತ. ಜತೆಗೆ ಅಷ್ಟು ಶತಮಾನಗಳ ಹಿಂದೆಯೇ ಮಳೆಯ ನೀರಿನ ಕೊಯ್ಲಿನ ವ್ಯವಸ್ಥೆ ಈ ಬಾವಿ ಗಿದ್ದಿದ್ದು ಸೋಜಿಗ. ಈಗಲೂ ಗಿರ್ನಾರ್ ಮತ್ತು ಕೋಟೆಯ ಸುತ್ತಲ ಮಳೆಯ ನೀರು ಸತತವಾಗಿ ಆದಿ-ಖದಿ ಬಾವಿಗೆ ಹರಿಯುವುದು ತಾಂತ್ರಿಕತೆಯ ಅದ್ಭುತ. ಈಗ ಅಲ್ಲ ಉಪಯೋಗಿಸುವವರಿಲ್ಲದೇ ಕಸ ಎಸೆಯುವ ರಾಡಿಯ ಗುಂಡಿಯಾಗಿ ಮಾರ್ಪಟ್ಟಿದೆ ಅದು
ಬೇರೆ ವಿಷಯ.

ಹಲವು ವಿನ್ಯಾಸಗಳಲ್ಲಿ ಅಪರೂಪದ ನಿರ್ಮಾಣ ಕಾಮಗಾರಿಯಿಂದ ಗಮನ ಸೆಳೆಯುವ ಉಪರ್‌ಕೋಟ್ ಅಥವಾ ರೇವತ್ ನಗರಿ, ಸಾವಿರ ವರ್ಷಗಳಲ್ಲಿ ಕನಿಷ್ಠ ಹದಿನಾರು ಬಾರಿ ನವ ನಿರ್ಮಾಣಕ್ಕೆ ಕಾರಣವಾಗಿಯೂ ತನ್ನ ನೈಜ ಮೂಲ ನಿರ್ಮಾಣದ ರೂಪದಿಂದ ಕದಲಿಸಲಾಗಿಲ್ಲ ಮತ್ತು ಆ ಕಾಲಕ್ಕೇನೆ ಕೋಟೆಯೊಳಗೆ ಸಾಕಷ್ಟು ನೀರು ಹಾಗೂ ಆಹಾರದ ವ್ಯವಸ್ಥೆ ಮಾಡಿ ಕೊಳ್ಳುವ ತಂತ್ರಗಾರಿಕೆಯಿಂದ ಆಕರ್ಷಣೀಯ. ಅಂದಿನಿಂದ ಇಂದಿನವರೆಗೂ ಕೋಟೆಯ ಮೂಲ ವಿನ್ಯಾಸದಲ್ಲಿ ಬದಲಾವಣೆ ತರುವುದಿರಲಿ ಒಂದು ಕಲ್ಲನ್ನೂ ಬದಲಿಸಲು ಸಾಧ್ಯವಾಗದಿರುವುದು ಮೂಲ ಕಾಮಗಾರಿಯ ದೃಢತೆಯ ಸಂಕೇತ.

ಎತ್ತರದ ಬೆಟ್ಟದ ಮೇಲಿನ ಸ್ಥಳ ಹಾಗೂ ಅಷ್ಟು ಎತ್ತರದಲ್ಲಿಂದ ಕಾಣುವ ಗಿರ್ನಾರ್ ಪರ್ವತ ಶ್ರೇಣಿಯ ಸುಂದರ ದೃಶ್ಯಗಳಿಗಾಗಿ ಉಪರ್‌ಕೋಟ್ ಇವತ್ತಿಗೂ ಗಮನೀಯ ಸ್ಥಾನವಾಗಿ ಗುಜರಾತ್ ಪ್ರವಾಸೋದ್ಯಮದಲ್ಲಿ ಮಿನುಗುತ್ತಿದೆ. ಗುಜರಾತಿನ ಅಹಮದಾ ಬಾದ್‌ನಿಂದ ಅಥವಾ ಇನ್ನಾವುದೇ ಮೂಲೆಯಿಂದ ಗುಜರಾತನ್ನು ಸೇರಿದರೂ ಸರಿ, ಜುನಾಗಢನ್ನು ತಲುಪುವುದು ಸುಲಭ.

ಸಾಮಾನ್ಯವಾಗಿ ಸೌರಾಷ್ಟ್ರ ಎಂದೇ ಕರೆಯಲ್ಪಡುವ ಪಶ್ಚಿಮೋತ್ತರ ಪ್ರದೇಶದಲ್ಲಿ ಪೋರ್ ಬಂದರ್ ಅಥವಾ ಗೀರ್ ಪ್ರದೇಶವನ್ನು ಸಂದರ್ಶಿಸುವವರು ಜುನಾಗಢವನ್ನು ಮರೆಯುವುದಿಲ್ಲ. ಮುಖ್ಯ ನಮ್ಮ ಇತಿಹಾಸ ಮತ್ತು ಐತಿಹ್ಯಗಳ ಬಗ್ಗೆ ಇರುವ ಒಲವು ಮತ್ತು ಗೌರವ ಬೆಳೆಯುವುದೇ ಇಂಥಾ ಪ್ರದೇಶಗಳನ್ನೂ ಬಕೆಟ್ ಲಿಸ್ಟ್‌ನಲ್ಲಿ ಇರಿಸಿಕೊಂಡಾಗ. ಇಲ್ಲದಿದ್ದರೆ ಅಲೆಮಾರಿಯಾಗಿ ಏನು ಪ್ರಯೋಜನ..?