Saturday, 14th December 2024

ಏರುದಾರಿಯ ಭುಜವೇರುವ ಮುನ್ನ…

ಅಲೆಮಾರಿಯ ಡೈರಿ

mehandale100@gmail.com

ಒಂದು ಪ್ರವಾಸ ಚೆಂದವಾಗುವುದು ತನ್ನ ತಾಣಕ್ಕಿಂತಲೂ ಅದನ್ನು ತಲುಪುವ ಮುನ್ನ ಕ್ರಮಿಸುವ ಹಾದಿಯಿಂದಾಗಿ ಎನ್ನುವುದು ಹೆಚ್ಚಿನ ಅಲೆಮಾರಿಗಳಿಗೆ ಅನುಭವವೇದ್ಯ. ಹಾಗಾಗಿ ಹೆಚ್ಚಿನ ತಿರುಗಾಟದಲ್ಲಿ ನೇರವಾಗಿ ಗಾಡಿ ಒಯ್ದು ಆಯಾ ತಾಣದ ಪಾದಕ್ಕೆ ನಿಲ್ಲಿಸಿ ಧಡಬಡನೆ ನುಗ್ಗಿ ಬರುವುದಕ್ಕಿಂತ, ಆಯಾ ಮಾರ್ಗದ ಏರಿಳಿತಗಳನ್ನೂ ಬಳಸಿ ಮಾರ್ಗಾಯಾಸ
ಹೆಚ್ಚಾಗುತ್ತಿದ್ದರೂ ದಾರಿಯನ್ನು ಅವಗಾಹಿಸುತ್ತಾ ನಡೆದಲ್ಲಿ ದಕ್ಕುವ ಮಜವೇ ಬೇರೆ.

ಅದರಲ್ಲೂ ಕರ್ನಾಟಕದ ಚಿಕ್ಕಮಗಳೂರು, ಮೂಡಿಗೆರೆ, ಕೊಟ್ಟಿಗೆಹಾರ, ಸಕಲೇಶಪುರ, ತೀರ್ಥಹಳ್ಳಿ ಭಾಗದಿಂದ ಪ್ರವಾಸ ಎನ್ನುವುದಕ್ಕಿಂತ ಸೂಕ್ತ ಜಾಗ ಆಯ್ದು ಅಲೆಮಾರಿತನ ಮಾಡುತ್ತಿದ್ದಾಗ ಹೆಚ್ಚಿನ, ಅದರಲ್ಲೂ ಕೊಟ್ಟಿಗೆ ಹಾರದಿಂದ ಕೆಳಗಿಳಿಯುವ ಮತ್ತು ಅದೇ ಮಾರ್ಗದಲ್ಲಿ ಹಿಂದಿರುಗಿ ಇತ್ತ ಮೂಡಿಗೆರೆಗೋ ಅತ್ತ ವಿರಾಜಪೇಟೆಯ ಕಡೆಗೋ ತಿರುಗುವ ಸನ್ನಾಹ ದಲ್ಲಿ ಅಲ್ಲಲ್ಲಿ ಕೆಲವು ಕಾಫಿ ಪ್ಲಾಂಟರ್‌ಗಳೆ ನಡೆಸುತ್ತಿರುವ, ಇತ್ತಿಚೆಗೆ ಜೀವನೋ ಪಾಯಕ್ಕಾಗೂ ನಡೆಸುತ್ತಿರುವ ಹಲವು ಇಂಥಾ ಚಿಕ್ಕ ಚಿಕ್ಕ ಚಹ, ಕಾಫಿ ಹಟ್ ಗಳು ಮತ್ತು ತಿನಿಸಿನ ಅಂಗಡಿಗಳು ಮುಖ್ಯ ರಸ್ತೆ ಅಥವಾ ತೋಟದ ಪಡಿಬಾಗಿಲಲ್ಲೆ, ಚೆಂದನೆಯ ಕಲಾತ್ಮಕ ಚಿತ್ರಣಗಳೊಂದಿಗೆ ಒಂದು ನಾಲ್ಕಾರು ಅಡಿ ಎತ್ತರದ ಅಟ್ಟಣಿಗೆಯಲ್ಲಿ ನಿಲ್ಲಿಸಿದ್ದು ನೋಡಲು ದಕ್ಕುತ್ತದೆ. ಹೆಚ್ಚಿನ ಪ್ರವಾಸಿಗರು ಇಲ್ಲೆಲ್ಲ ನಿಲ್ಲಿಸಿ ಕಾಫಿ ಪಡ್ಡು, ಮಸಾಲೆ ಎರಿಯಪ್ಪ, ಚಟ್ನಿ, ಕಡಬು, ಕೊಟ್ಟೆಇಡ್ಲಿ ಮತ್ತು ಕಾಯಿ ಚಟ್ನಿ ಸವಿಯುತ್ತಾರೆ.

ಇಲ್ಲೆಲ್ಲ ನಿಜಕ್ಕೂ ನಿಲ್ಲಿಸಿ ಒಮ್ಮೆಯಲ್ಲ ಎರಡು ಬಾರಿಯಾದರೂ ತಿನಿಸು ಸವಿಯಲೇಬೇಕೆನ್ನುವಂತಹ ತಿಂಡಿಗಳು ಇಲ್ಲಿದ್ದು, ಮಾರ್ಗಾಯಾಸ ಜತೆಗೆ ಆಯಾ ನೇಟಿವಿಟಿಯ ವಿಶಿಷ್ಟತೆಗಳೂ ಸೇರಿ ಅಲ್ಲೊಂದು ಸಹಜ ಮತ್ತು ಆಸಕ್ತಿಯ ತಾಣವಾಗಿ ಬದಲಾಗಿರುತ್ತದೆ. ಹೋಗುವ ಜಾಗ ಎಷ್ಟೇ ಚೆನ್ನಾಗಿದ್ದರೂ ಈ ಟೀ ಅಂಗಡಿ ಕೊಡುವ ಮುದ ನಿಮ್ಮನ್ನು ತಕ್ಷಣಕ್ಕೆ ಎದ್ದು ಹೋಗಲು ಬಿಡುವುದಿಲ್ಲ.

ತಿಂದು ಮುಗಿದಿದ್ದರೂ, ಮತ್ತೇನೂ ಬೇಡದಿದ್ದರೂ, ಅಲ್ಲೇನೂ ಇರದಿದ್ದರೂ ಕೆಲವು ಹೊತ್ತು ಸುಮ್ಮನೆ ಕೂರುವ ಮನಸ್ಸು.
ಅಂಥದ್ದೊಂದು ಅವಕಾಶ ಸಿಕ್ಕಿದರೆ ಕೂತು ಬಿಡಿ ಎನ್ನುತ್ತೇನೆ ನಾನು. ಆ ಮುದ ಬೇರೆಡೆ ಸಿಗುವುದಿಲ್ಲ ಮಾತ್ರವಲ್ಲ
ಮುಂದೆಂದೊ ಒಂದು ಪ್ರವಾಸ ನೆನಪಾದಾಗ, ಇಲ್ಲಿ ಸುಖಾ ಸುಮ್ಮನೆ ಕೂತೆದ್ದು ಹೋದ ಟೀ ಅಂಗಡಿ ನೆನಪಾಗದಿದ್ದರೆ
ಕೇಳಿ. ಜಾಗದ ಜೊತೆಗೆ ಮನಸ್ಸು ಬಯಸುವ ಆಹಾರ ಮತ್ತು ಆಪ್ತತೆ ನಮ್ಮನ್ನು ಅದಕ್ಕೆಲ್ಲ ತಳ್ಳಿರುತ್ತದೆ.

ಅದರಲ್ಲೂ ಇಂಥಾ ವಿಭಿನ್ನ ಆಹಾರ ಮತ್ತು ಸ್ಥಳಗಳೂ ಆಯಾ ಪರಿಸರಕ್ಕೆ ತಕ್ಕಂತೆ ಒಂದೊಂದು ಕಡೆಯಲ್ಲಿ ಒಂದೊಂದು ರೀತಿ. ಹಾಗೆ ಆ ಪರಿಸರವನ್ನು ಆವರಿಸಿಕೊಳ್ಳುವಂತೆ ಕಾಪಿಡುವುದಿದೆಯಲ್ಲ ಅದೇ ಅಲೆಮಾರಿತನಕ್ಕೆ ಇಂಬು ಕೊಡೋ ಅಂಶ. ಕರ್ನಾಟಕದ ಕೊನೆಯ ತುದಿಯಲ್ಲಿ ಉ.ಕ. ಜಿಲ್ಲೆಯ ಕಡೆಯಿಂದ ಗೋವೆ ಪ್ರವೇಶಿಸುವಾಗ ಹೆಚ್ಚಿನ ಪ್ರವಾಸಿಗ ಬಾರ್ಡರ್
ದಾಟುತ್ತಿದ್ದಂತೆ ಗೋವೆಯನ್ನು ಫೀಲ್ ಮಾಡುತ್ತಾನೆ. ಇದು ಹೆಚ್ಚಿನ ಪ್ರವಾಸಿಗರಿಗೆ ಅನುಭವವಾಗಿರುತ್ತದೆ. ಗೋವೆಯ
ಘಮಲೇ ಬೇರೆ ಎನ್ನುವ ನೇಟಿವಿಟಿಯ ಸೊಗಡು ಒಮ್ಮೆಲೆ ಆವರಿಸಿಕೊಳ್ಳುತ್ತದೆ.

ಪ್ರವಾಸಕ್ಕೂ ಚಾರಣಕ್ಕೂ ಒಂದು ಸ್ಪಷ್ಟ ವ್ಯತ್ಯಾಸ ಅನುಭವ ವೇದ್ಯವಾಗುತ್ತದೆ. ಹೆಚ್ಚಿನ ಸಲ ಸರಳ ಮತ್ತು ಸುಲಲಿತ
ಮಾರ್ಗವಿದ್ದರೂ ಕೆಲವು ಸ್ಥಳಗಳಿಗೆ ಕಾಲ್ನಡಿಗೆ ಸೂಕ್ತವಾಗಿರುತ್ತದೆ. ಹಾಗೆ ನಾನು ಇತ್ತ ಕಾಡೂ ಅಲ್ಲದ ಅತ್ತ ಊರೂ ಅಲ್ಲದ ಯಲಗುಡಗಿ ಎನ್ನುವ ಸಣ್ಣ ಹಳ್ಳಿಯ ಮಗ್ಗುಲಲ್ಲಿ ಇರುವ, ವಿಶಾಲ ಜಗಲಿಯ ಮನೆಯೊಂದರಲ್ಲಿ ಹೋಮ್ ಸ್ಟೇ ಹುಡುಕಿಕೊಂಡು ಹೋಗಿ ಉಳಿದಿದ್ದಾಗ ಪಕ್ಕದಲ್ಲೇ ನಿಲುಕಿದ್ದು ಎತ್ತಿನ ಭುಜ.

ಇತ್ತಿಚಿನ ದಿನದಲ್ಲಿ ಹೆಚ್ಚಿನ ಚಾರಣ ಆಸಕ್ತರನ್ನು ಸೆಳೆಯುತ್ತಿರುವ ಆಕರ್ಷಕ ತಾಣಗಳಲ್ಲಿ ಇದೂ ಹೌದು. ಯಲಗುಡಗಿ ಎನ್ನುವ ಹಳ್ಳಿಯಿಂದ ಅಂಥಾ ದೂರ ಏನೂ ಇಲ್ಲದ್ದು ಮತ್ತು ನಮಗೆ ಇದ್ದಲ್ಲಿ ಇರಲಾಗದ ಕಾರಣ ಒಂದಿನ ಎತ್ತಿನ ಭುಜವನ್ನಾದರೂ ಸವರಿ ಬಿಡೋಣ ಎಂದು ಹೊರಟಾಗಲೇ ಇದನ್ನು ತಡುವಿಕೊಂಡಿದ್ದು. ತೀರ್ಥಹಳ್ಳಿ, ಚಿಕ್ಕಮಗಳೂರು, ಇತ್ಲಾಗಿನ ಶಿಕಾರಿಪುರ ಹೀಗೆ ಮಲೆನಾಡಿನ ಯಾವ ಭಾಗದಿಂದಲಾದರೂ ಎತ್ತಿನ ಭುಜ ಚಾರಣಕ್ಕೆ ಬರಬಹುದು.

ಇದು ಸುಮ್ಮನೆ ಗಾಡಿ ಒಯ್ದು ನಿಲ್ಲಿಸಿಕೊಂಡು ದರ್ಶಿಸಬಹುದಾದ ಪ್ರವಾಸಿ ತಾಣವಲ್ಲ. ಅಪ್ಪಟ ಕಾಡು ದಾರಿ. ಆಮೇಲೆ ಪರ್ವತದ ಕೊರಕಲಿನ ದಾರಿ ಅದಕ್ಕೂ ನಂತರದಲ್ಲಿ ಬೋಳು ಗುಡ್ಡದ ದಾರಿ ತೀರ ಕೊನೆಯ ಶೇ.೫ ರಷ್ಟು ಅಪ್ಪಟ ಪರ್ವತಾರೋಹಣ. ಏರಿಳಿಯುವ ಸುಖ ಸಲೀಸಾಗಿಲ್ಲ ಬಿಡಿ, ಏರಿದ ನಂತರವೂ ವಿಪರೀತ ಗಾಳಿಯ ಮಧ್ಯೆ ಕೆಲವು ನಿಮಿಷ ಅದ್ಭುತ ರಮ್ಯ ಲೋಕ. ಕೊನೆಯ ಕಲ್ಲಿನ ಕೊರಕಲಿನ ಭಾಗವೇ ದೂರದಿಂದ ಬಸವ ಅಥವಾ ನಂದಿ ಕುಳಿತಂತೆ ಗೋಣು ಇಳಿಸಿರುವ ನೋಟ. ದೂರದಿಂದ ರಸ್ತೆಯ ಮೇಲೆ ಬರುವಾಗಲೇ ಅಲ್ಲಲ್ಲಿ ಕಂಡು ಬರುತ್ತದೆ.

ಒಂದು ದಿಸೆಯಲ್ಲಿ ಕಾಣುವ ಈ ಎತ್ತಿನ ಭುಜದ ಹಾಗಿರುವ ತುದಿ ಮೊದಲಿಗೆ ನೋಡುವಾಗ ಸಲೀಸು ದಾರಿಯೇ
ಅನ್ನಿಸಿದರೂ ೨-೩ ಕಿ.ಮೀ ಕಾಡಿನ ಹಾದಿ ಸವೆಸಿ, ಕೊರಕಲಿನ ಏರು ದಾರಿಯನ್ನು ಅರಣ್ಯದ ಒಳ ನೆರಳಿನಲ್ಲಿ ಏರುವ
ಹೊತ್ತಿಗೆ ಒಮ್ಮೆ ಉಸಿರು ನೆತ್ತಿಗೆ ಹತ್ತಿರುತ್ತದೆ. ಆದರೂ ಅಪ್ಪಟ ಚಾರಣದ ಅನುಭವ ನೀಡುವ ಎತ್ತಿನ ಭುಜ ಎರಡು ಹಂತದ
ಚಾರಣವೇ ಸರಿ. ಹಾಗಾಗಿ ಕಾಡಿನ ಕೊರಕಲನ್ನು ಏರಿದ ಮೇಲೆ ಮತ್ತೆ ಸುಮಾರಾಗಿ ಐನೂರು ಮೀ. ದೂರದ ಪರ್ವತದ ಶಿರಕ್ಕೆ ಹೋಗುವ ಎರಡನೆ ಹಂತದ ಚೆಂದವೇ ಬೇರೆ.

ಅಲ್ಲಿಂದ ಸುತ್ತಲಿನ ಮಲೆಗಳ ಮಹಾ ಸಾಲಿನ ನೋಟವನ್ನು ಅಲ್ಲಿ ನಿಂತೇ ಅನುಭವಿಸಬೇಕು. ಭುಜದ ಮೇಲಿಂದ ಎತ್ತರದ ತುದಿಗೆ ನಿರ್ದಿಷ್ಟ ದಾರಿ ಇಲ್ಲ. ಕ್ರಮೇಣ ಹತ್ತಿಳಿದು ನಿರ್ಮಿತವಾಗಿರುವ ಗುರುತಿನ ಪಾತ್ ವೇಯಲ್ಲೇ ನುಸುಳುತ್ತಾ ಕೋಡುಗಲ್ಲಿನ ತುದಿಗಳನ್ನು ಆಸರೆಯಾಗಿಸಿಕೊಳ್ಳುತ್ತಾ ಸಾಗಬೇಕು ಅಷ್ಟೆ. ಮೇಲೇರಿ ನಿಂತರ ಅದ್ಭುತವನ್ನು ಕಣ್ತುಂಬಿಕೊಳ್ಳುವುದರಲ್ಲಿ ಸಂಶಯವಿಲ್ಲ. ಹೀಗೆ ಮೂಡಿಗೆರೆ ಮತ್ತು ತೀರ್ಥಹಳ್ಳಿ ಆಸುಪಾಸಿನಲ್ಲಿ ಬೀಡು ಬಿಡುವ ಹೊತ್ತಿಗೆ ಒಂದು ದಿನದ ಚಾರಣಕ್ಕಾಗಿ ಇದನ್ನು ಆಯ್ದುಕೊಂಡಲ್ಲಿ ಸಲೀಸು.

ಬೆಳಿಗ್ಗೆ ಬಿಸಿಲೇರುವ ಮೊದಲೇ ಅಂದರೆ ಏಳು ಗಂಟೆಯ ಹೊತ್ತಿಗೆಲ್ಲ ಒಂದು ಸಣ್ಣ ಜಂಕ್ಷನ್ ಪಾಯಿಂಟ್ ಸೇರಿಕೊಂಡರೆ ಆಮೇಲೆ ದಾರಿ ಕ್ರಮಿಸುವುದು ಸುಲಭ, ಮಧ್ಯಾಹ್ನದ ಬಿಸಿಲು ಸುಡುವ ಮೊದಲೇ ಹಿಂದಿರುಗುವುದು ಲೇಸು. ಅರ್ಧ ದಿನದಲ್ಲೇ ಇದನ್ನೆಲ್ಲ ಮುಗಿಸಬಹುದಾದ ಚೆಂದದ ಜಾಗ ಇದು. ಒಮ್ಮೆ ಚಾರಣದ ಅನುಭವ ಮಲೆನಾಡ ಹೋಮ್ ಸ್ಟೇ ತೆಗೆದುಕೊಂಡು, ಅಲ್ಲಿ ಸುತ್ತಲಿನ ಪರಿಸರಕ್ಕೆ ತೆರೆದುಕೊಳ್ಳುವ ಅವಕಾಶದ ಬಾಗಿಲಲ್ಲಿ ಲಭ್ಯವಾಗುವ ಎತ್ತಿನ ಭುಜ ದಾರಿಯ ಮೇಲೆ ಹೋಗುವಾಗ ಎಡಕ್ಕೆ ದಕ್ಕುವ ಮತ್ತೊಂದು ಗಂಟೆ ಪರ್ವತ ಎನ್ನುವ ಬೆಟ್ಟದ ದರ್ಶನ ಆಗುತ್ತಿದ್ದಂತೆ ಮತ್ತೊಮ್ಮೆ ಅಲ್ಲೂ ಹೋಗಬೇಕು ಎನ್ನುವ ಮೋಹಕ್ಕೀಡು ಮಾಡುವ ಪರ್ವತ.

ಸರಿಯಾಗಿ ಅರ್ಧ ದಾರಿ ಕ್ರಮಿಸಿದ್ದಾಗ ಎಡಕ್ಕೆ ಸರಿಯಾಗಿ ೨-೩ ಕಿ.ಮೀ. ಅಂತರದಲ್ಲಿ ತಲೆ ಎತ್ತಿ ನಿಂತಿರುವ ಗಂಟೆ ಪರ್ವತದ ತುದಿಗೆ ನಿರ್ದಿಷ್ಟ ದಾರಿಯಿಲ್ಲ. ಅಲ್ಲಿಗೆ ಕ್ರಮಿಸಿದ ಚಾರಣಿಗರೂ ಕಮ್ಮಿ ಎಂಬ ಮಾಹಿತಿ ಸಿಕ್ಕಿತು. ಅನ್‌ಟಚ್ಡ್ ಅನ್ನುತ್ತಾರಲ್ಲ ಹಾಗೆ
ಉಳಿದಿರುವ ಗಂಟೆ ಪರ್ವತದ ದಾರಿಯನ್ನೊಮ್ಮೆ ಅವಿಷ್ಕಾರ ಮಾಡಿದರೆ ಆಗ ಇದೇ ಎತ್ತಿನ ಭುಜದ ಮುಖ ಅಚೆಯಿಂದ ಲಭವಾಗುತ್ತದಲ್ಲ ಆಗ ದಕ್ಕುವ ನೋಟದ ದೃಶ್ಯ. ಈ ಅಂದಾಜಿನ ಮೇಲೆ ಸ್ಥಳೀಯರೊಂದಿಗೆ ನಡೆಸಿದ ಚರ್ಚೆ ಯಾವುದೇ -ಲ ನೀಡಿಲಿಲ್ಲ. ಗಂಟೆ ಪರ್ವತ ಅಥವಾ ಗಣೇಶ ಪರ್ವತ ಎನ್ನುವ ಆ ನಿರ್ದಿಷ್ಟ ಬೆಟ್ಟಕ್ಕೆ ಅಽಕೃತ ದಾರಿ ಬಿಡಿ, ಅಲ್ಯಾಕೆ ಹೋಗಬೇಕು
ಎನ್ನುವವರೇ ಹೆಚ್ಚಾಗಿರುವಾಗ ದಾರಿ ಮೂಡೀತಾದರೂ ಹೇಗೆ.

ಆದರೆ ಇತ್ತಲಿನಿಂದ ಕಾಣುವ ಎತ್ತಿನ ಭುಜದ ನೋಟ ಅದರ ವಿರುದ್ಧ ಅಷ್ಟೆ ಎತ್ತರದಿಂದ ಉಲ್ಟಾ ಗೋಚರಿಸುವಾಗ ಆಗಬಹುದಾದ ದೃಶ್ಯಾವಳಿ ಅದ್ಭುತ. ಅದರ ಮೇಲಿನಿಂದ ಕಣಿವೆಯ ಭಾಗದಲ್ಲಿ ಲಭ್ಯವಾಗುವ ಮಲೆಗಳ ಸಾಲಿನ ದೃಶ್ಯಕ್ಕಾದರೂ ಮತ್ತೊಮ್ಮೆ ಅತ್ತ ಕಾಲು ಹರಿಸಬೇಕು. ಅಂದು ಒಳ ದಾರಿಯ ಮೂಲಕ ಮಂಜರಾಬಾದ್ ಕಡೆ ಸಂಪರ್ಕಿಸುವ
ಅತ್ಯಂತ ದುರ್ಗಮ ಕಾಡುದಾರಿಯನ್ನು ಸ್ಥಳೀಯರ ನಿರ್ದೇಶನದಲ್ಲಿ ಕ್ರಮಿಸಿದ್ದೆ. ಆ ದಾರಿ ಮತ್ತು ಗಂಟೆ ಪರ್ವತದ ನೆತ್ತಿ ಸವರುವುದಕ್ಕಾದರೂ ಮತ್ತೊಮ್ಮೆ ಎತ್ತಿನ ಭುಜದ ಪಾದಕ್ಕೆ ಹೋಗಬೇಕಿದೆ. ಅಗ ಗಂಟೆ ಪರ್ವತ ಅಥವಾ ಗಣೇಶ ಪರ್ವತಕ್ಕೆ ಒಬ್ಬ ಸ್ಥಳೀಯನಂತೆ ಅಲೆಮಾರಿಯ ಸಾಂಗತ್ಯ ದೊರಕಿದರೆ ಎತ್ತಿನ ಭುಜದ ಮತ್ತೊಂದು ಮಗ್ಗುಲಿನ ಪರಿಚಯವಾದೀತು.