Wednesday, 11th December 2024

ರಂಗ ಪ್ರವೇಶಿಸಿದ ಈ ಅಮೆರಿಕನ್ನಡತಿ, ಎಸ್‌.ವಿ.ರಂಗಣ್ಣರ ಮರಿಮೊಮ್ಮಗಳು !

ತಿಳಿರು ತೋರಣ

srivathsajoshi@yahoo.com

ಭರತನಾಟ್ಯವಷ್ಟೇ ಅಲ್ಲದೆ ರಸಸಂಜೆ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್‌ಗಳಿಗೆ ಕೊರಿಯೊಗ್ರಫಿ ಮಾಡಿದವಳು. ‘ಡಾಟರ್ಸ್ ಆಫ್ ದಿ ಅಮೆರಿಕನ್ ರಿವೊಲ್ಯುಷನ್ ಯುಥ್ ಸಿಟಿಜನ್‌ಶಿಪ್’ ಅವಾರ್ಡ್ ಗೆದ್ದವಳು. ಶಾಲೆಯ ಸೈನ್ಸ್ ಒಲಿಂಪಿಯಾಡ್ ತಂಡದಲ್ಲಿ ಮೂರು ಬಾರಿ ರಾಷ್ಟ್ರಮಟ್ಟದ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದವಳು. ತಂತ್ರಾಂಶದ ‘ಮರ್ಮಭೇದಕ’ ಹ್ಯಾಕಥಾನ್ ಆಯೋಜಿಸಿದವಳು. ಒಟ್ಟಿನಲ್ಲಿ ಪ್ರತಿಭೆಗೊಂದು ಪರ್ಯಾಯ ಹೆಸರು.

‘ಅನ್ಯ ದೇಶಕ್ಕೆ ನಾವು ನಡೆದಾಗ ನಮ್ಮ ನಾಡು ನಮ್ಮೊಂದಿಗೆ ಪಯಣ ಗೊಳ್ಳುವುದಿಲ್ಲ. ಪಯಣಗೊಂಡರೂ ಕೇವಲ ಮಾನಸಿಕವಾಗಿ, ಚಿನ್ಮಾತ್ರ ಗೋಚರವಾಗಿ. ತಾಯ್ನುಡಿಯಾದರೋ ನಾವು ಎಲ್ಲೇ ಇರಲಿ ಏನೇ ಮಾಡು ತ್ತಿರಲಿ, ಹಗಲೇ ಆಗಲಿ, ರಾತ್ರಿಯೇ ಆಗಲಿ,ನಮ್ಮೊಂದಿಗೆ ಇದ್ದೇ ಇರುತ್ತದೆ. ಮಾತು ವ್ಯಕ್ತಿಯ ನೆರಳು.

ಅದೇ ವ್ಯಕ್ತಿಯ ಪ್ರಮುಖ ವ್ಯಕ್ತಿತ್ವ. ನುಡಿಯನ್ನು ಬೆಳೆಸಿಕೊಳ್ಳದ ನಾಡೊಂದು ನಾಡೇ? ನುಡಿಯಿಂದಲೇ ನಾಡು. ಕನ್ನಡ ವೊಂದರಿಂದಲೇ ಜೀವನ ಸೌಖ್ಯವನ್ನು, ಆತ್ಮಕಲ್ಯಾಣವನ್ನು ನಾವು ಸಾಧಿಸಿಕೊಳ್ಳಬಹುದು.’ – ಇವು ಕನ್ನಡದ ಅಗ್ರಗಣ್ಯ ಸಾಹಿತಿಗಳಲ್ಲೊಬ್ಬರೆನಿಸಿದ ಡಾ.ಎಸ್.ವಿ.ರಂಗಣ್ಣ (1898-&1987) ಅವರ ಮಾತುಗಳು. ನನಗಿವು ಎಲ್ಲಿ ಸಿಕ್ಕಿದವು? ‘ಕರ್ನಾಟಕ ನುಡಿ ನಿಪುಣರು- ಕಳೆದ ಒಂದೂವರೆ ಶತಮಾನದ ಭವ್ಯ ಸಾಹಿತ್ಯ ಪರಂಪರೆಯನ್ನು ನೂರಾ ಅರವತ್ತೆಂಟು ಸಾಹಿತಿಗಳ ಮೂಲಕ ಪರಿಚಯಿಸುವ ಸಚಿತ್ರ ಪ್ರಯತ್ನ’ ಎಂಬೊಂದು ಅತ್ಯಮೂಲ್ಯ ಪುಸ್ತಕ ನನ್ನಲ್ಲಿದೆ.

ಖ್ಯಾತ ಚಿತ್ರಕಲಾವಿದ ನಾ.ರೇವನ್ ಅವರು ಬಿಡಿಸಿದ ಪೆನ್ಸಿಲ್ ಸ್ಕೆಚ್‌ಗಳು ಮತ್ತು ಈ ಎಲ್ಲ ಸಾಹಿತಿಗಳ ಕಿರುಪರಿಚಯ ದಾಖಲಿಸಿರುವ ಗ್ರಂಥ. ಕರ್ನಾಟಕ ಸಾಹಿತ್ಯ ಪರಿಷತ್ತಿನ ಪ್ರಕಟಣೆ. ಮಾಹಿತಿಯುಕ್ತ ಕಾಫಿ-ಟೇಬಲ್ ಬುಕ್ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿರುವ ಉತ್ಕೃಷ್ಟ ಸಂಪುಟ. ಅದರ ಪುಟ 134 ಮತ್ತು 135ರಲ್ಲಿ ರಾರಾಜಿಸಿರುವವರು ಡಾ.ಎಸ್.ವಿ.ರಂಗಣ್ಣ. ಮೇಲೆ ಬರೆದಿರುವ ಮಾತುಗಳು ಅವರು 1976ರಲ್ಲಿ ಶಿವಮೊಗ್ಗದಲ್ಲಿ ಅಖಿಲ ಭಾರತ ಕನ್ನಡ
ಸಾಹಿತ್ಯ ಸಮ್ಮೇಳನದಲ್ಲಿ ಮಾಡಿದ ಅಧ್ಯಕ್ಷೀಯ ಭಾಷಣದ ಭಾಗವಿರಬಹುದು.

ಉಳಿದಂತೆ ಅವರ ಸ್ಥೂಲ ಪರಿಚಯ, ಸುಧಾದಲ್ಲಿ ಬರೆಯುತ್ತಿದ್ದ ಎಚ್ಚೆಸ್ಕೆ ಶಲಿಯಲ್ಲಿ ಬರೆಯುವುದಾದರೆ: ಸಾಲಗಾಮೆ ವೆಂಕಟ ಸುಬ್ಬಯ್ಯ ರಂಗಣ್ಣ ಪೂರ್ತಿ ಹೆಸರು. ಮೊಳಕಾಲ್ಮೂರು, ಗುಬ್ಬಿಗಳಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ. ಚಿಕ್ಕಮಗಳೂರಿ ನಲ್ಲಿ 1915ರಲ್ಲಿ ಮೆಟ್ರಿಕ್ ತೇರ್ಗಡೆ. 1919ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಚಿನ್ನದ ಪದಕದೊಂದಿಗೆ ಬಿ.ಎ ಪದವಿ. ಇಂದಿರಮ್ಮ ಬಾಳಸಂಗಾತಿ. 1921ರಲ್ಲಿ ಮೈಸೂರಿನ ಮಹಾರಾಜಾ ಕಾಲೇಜಿನಿಂದ ಸುವರ್ಣ ಪದಕಗಳೊಂದಿಗೆ ಸ್ನಾತಕೋತ್ತರ ಪದವಿ.

ಅಲ್ಲೇ ಇಂಗ್ಲಿಷ್ ಉಪನ್ಯಾಸಕರಾಗಿ ಸೇರಿ ಮುಂದೆ ಪ್ರಾಂಶುಪಾಲರಾಗಿ ನಿವೃತ್ತಿ. ಎ.ಆರ್.ಕೃಷ್ಣಶಾಸ್ತ್ರಿಗಳಿಂದ ಸಾಹಿತ್ಯ ಕೃಷಿಗೆ ಪ್ರೇರಣೆ. ಬಿ.ಎಂ.ಶ್ರೀ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದಾಗ ಇವರು ಕಾರ್ಯದರ್ಶಿ. ವಿಮರ್ಶೆ, ಸಾಹಿತ್ಯಚರಿತ್ರೆ ಪ್ರಕಾರಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪಾಂಡಿತ್ಯಪೂರ್ಣ ಕೃತಿರಚನೆ. ‘ಹರಿಶ್ಚಂದ್ರ’ ಗಮನಾರ್ಹ ನಾಟಕ. ‘ರಂಗ ಬಿನ್ನಪ’ ವಚನಸಂಕಲನಕ್ಕೆ 1965ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.

ಸ್ಕೌಟ್ಸ್ ನಲ್ಲಿ ಸೇವೆ ಸಲ್ಲಿಸಿದ್ದಕ್ಕಾಗಿ ‘ರಜತಗಜ’ ಪ್ರಶಸ್ತಿ. 1970ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್. 1954ರಲ್ಲಿ ಕನ್ನಡ ಜನತೆ ಅಭಿಮಾನದಿಂದ ಸಮರ್ಪಿಸಿದ ಅಭಿನಂದನಾ ಗ್ರಂಥ ‘ಬಾಗಿನ’. ಕಳೆದ ರವಿವಾರ ಜುಲೈ 31ರಂದು ಇಲ್ಲಿ ವಾಷಿಂಗ್ಟನ್‌ನಲ್ಲಿ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿಕ್ಕಿತ್ತು. ಅದರಲ್ಲೇನಿದೆ ವಿಶೇಷ, ಈಗ ಇಲ್ಲಿ ಬೇಸಗೆ ರಜೆ, ಹೈಸ್ಕೂಲ್/ಕಾಲೇಜು ಗ್ರಾಜುವೇಷನ್‌ಗಳು, ಭರತನಾಟ್ಯ ಮತ್ತಿತರ ಭಾರತೀಯ ಶಾಸ್ತ್ರೀಯ ಲಲಿತಕಲೆಗಳ ಶಿಕ್ಷಣ ಪಡೆದ ಮಕ್ಕಳ ರಂಗಪ್ರವೇಶ ಸಮಾರಂಭಗಳು ತೀರ ಸಾಮಾನ್ಯವೇ.

ಕಳೆದೆರಡು ವರ್ಷ ಕೋವಿಡ್‌ನಿಂದಾಗಿ ಸ್ಥಗಿತಗೊಂಡಿದ್ದೆಲ್ಲ ಈಗ ಕ್ರಮೇಣ ತೆರೆಯತೊಡಗಿ ಈ ವರ್ಷವಂತೂ ಪ್ರತಿ ವಾರಾಂತ್ಯ
ದಲ್ಲೂ ಒಂದೆರಡು ಸಮಾರಂಭಗಳು. ಆದರೆ ಮೊನ್ನೆಯದು, ಇಲ್ಲಿನ ನಮ್ಮ ಕನ್ನಡಿಗ ಸಮುದಾಯದಲ್ಲಿ ಸಕ್ರಿಯರಾಗಿರುವ
ಸೌಮ್ಯಾ-ವಿನಯ್ ದಂಪತಿಯ ಮಗಳು ಸಂಹಿತಾಳ ರಂಗಪ್ರವೇಶ. ಆಕೆಯ ನೃತ್ಯಗುರು ವಾಣಿ ರಮೇಶ್ ಸಹ ಇಲ್ಲಿ
ನೆಲೆಸಿರುವ ಪ್ರತಿಭಾನ್ವಿತ ಕನ್ನಡಿತಿ.

ಆದ್ದರಿಂದ ನಮಗೆ ಕನ್ನಡಿಗರಿಗೆ ದುಪ್ಪಟ್ಟು ಆಪ್ತ ಸಮಾರಂಭ. ಹಾಗೆ ನೋಡಿದರೆ ಅದೂ ಅಂಥ ಅಪರೂಪದ ವಿಚಾರವೇನಲ್ಲ. ಅಮೆರಿಕದಾದ್ಯಂತ ನೆಲೆಸಿರುವ ಕನ್ನಡಿಗ ಕುಟುಂಬಗಳು ಸಾವಿರಗಟ್ಟಲೆ ಇರುವಾಗ, ವಲಸೆ ಬಂದವರಲ್ಲನೇಕರು ‘ತೆನೆಯ ಕೆನೆ’ಗಳೇ ಆಗಿರುವಾಗ, ಭರತನಾಟ್ಯ ಕಲಿಸುವ ಕನ್ನಡಿತಿಯರೂ, ಶ್ರದ್ಧೆ-ಪರಿಶ್ರಮಗಳಿಂದ ಕಲಿತು ರಂಗ ಪ್ರವೇಶಿಸುವ ಮಕ್ಕಳೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

ಮೊನ್ನೆಯ ವಿಶೇಷ ಏನೆಂದರೆ ರಂಗಪ್ರವೇಶ ಮಾಡಿದ ಸಂಹಿತಾ, ಎಸ್ .ವಿ.ರಂಗಣ್ಣರ ಮರಿಮೊಮ್ಮಗಳು. ಅಂದರೆ ಸಂಹಿತಾಗೆ ಅವರು ಮುತ್ತಾತನ ತಂದೆ ‘ಕೋಲುತಾತ’! (ಹಾಗೊಂದು ಪದ ಇದೆಯೆಂದು ನನಗೆ ಮೊನ್ನೆ ಸೌಮ್ಯಾ ರಿಂದಲೇ ಗೊತ್ತಾದದ್ದು). ಬಹುಶಃ ಇದು ಕೂಡ ಅನ್ಯಾದೃಶ ಅನಿಸುವಂಥದ್ದೇನಲ್ಲ. ತಲೆಮಾರುಗಳಷ್ಟು ಹಿಂದಿನ ಶ್ರೇಷ್ಠ ಸಾಹಿತಿಗಳ ಸಂತತಿಯವರು ಅಮೆರಿಕದಲ್ಲಿ ಮತ್ತಿತರ ವಿದೇಶಗಳಲ್ಲಿ ನೆಲೆಸಿರುವವರು ಬೇಕಾದಷ್ಟಿದ್ದಾರೆ.

ಹಾಗಾದರೆ, ಏನಿತ್ತು ಅನನ್ಯತೆ ಈ ರಂಗಪ್ರವೇಶದಲ್ಲಿ? ಆಮೇಲೆ ತಿಳಿಸುತ್ತೇನೆ. ಮೊದಲಿಗೆ… ಸಂಹಿತಾ ಪುಟ್ಟ ಮಗುವಾಗಿ ದ್ದಾಗಿನಿಂದ- ಸ್ಟ್ರೋಲರ್‌ನಲ್ಲಿ ಕುಳಿತುಕೊಂಡು ಅಮ್ಮ-ಅಪ್ಪನಿಂದ ದೂಡಿಸಿಕೊಳ್ಳುವಾಗಿಂದ ಎನ್ನೋಣ- ನಮ್ಮ ಕಣ್ಮುಂದೆ ಬೆಳೆದ ಚೂಟಿ ಹುಡುಗಿ. ಇಲ್ಲಿಯ ಪ್ರತಿಷ್ಠಿತ ಥಾಮಸ್ ಜೆಫರ್‌ಸನ್ ಹೈಸ್ಕೂಲ್‌ನಲ್ಲಿ ಈಗಷ್ಟೇ ಹೈಸ್ಕೂಲ್ ಶಿಕ್ಷಣ ಮುಗಿಸಿ ಕಾಲೇಜಿಗೆ ಸೇರಲು ಸಿದ್ಧಳಾಗಿರುವವಳು. ಟೆಕ್ಸಸ್‌ನ ಖ್ಯಾತ ರೈಸ್ ಯುನಿವರ್ಸಿಟಿಯಲ್ಲಿ ಬಯೋಎಂಜಿನಿಯರಿಂಗ್‌ಗೆ ಪ್ರವೇಶ ಗಿಟ್ಟಿಸಿರುವವಳು.

2009ರಿಂದ ವಾಣಿಯವರ ಬಳಿ ಭರತನಾಟ್ಯ ಕಲಿಯುತ್ತಿರುವವಳು. ಡಾ.ವಸುಂಧರಾ ದೊರೆಸ್ವಾಮಿ, ಎನ್.ಶ್ರೀಕಾಂತ್ ಮುಂತಾದ ನೃತ್ಯಕಲಾವಿದರು ಇಲ್ಲಿಗೆ ಬಂದಾಗ ನಡೆಸುವ ಕಾರ್ಯಾಗಾರಗಳಲ್ಲಿ ಭಾಗಿಯಾದವಳು. ಇಲ್ಲಿನ ಬೇರೆಬೇರೆ ಸಂಘಸಂಸ್ಥೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ದೇವಾಲಯಗಳಲ್ಲಿ ನಡೆಯುವ ಉತ್ಸವಗಳಲ್ಲಿ ಸಾಮೂಹಿಕ ನೃತ್ಯ ಪ್ರದರ್ಶನಗಳಲ್ಲಿ ಪಾಲ್ಗೊಂಡವಳು.

ಕಾವೇರಿ ಕನ್ನಡ ಸಂಘದಿಂದ ಹತ್ತು ವರ್ಷಗಳ ಹಿಂದೆ ‘ಅರಳುಪ್ರತಿಭೆ’ ಪ್ರಶಸ್ತಿ ಪುರಸ್ಕೃತಳು. ಭರತನಾಟ್ಯವಷ್ಟೇ ಅಲ್ಲದೆ ಶಾಲೆಯಲ್ಲಿ ರಸಸಂಜೆ ಕಾರ್ಯಕ್ರಮಗಳಲ್ಲಿ ಬಾಲಿವುಡ್, ಭಾಂಗ್ರಾ, ಗರ್ಬಾ ಡ್ಯಾನ್ಸ್‌ಗಳಿಗೆ ಕೊರಿಯೊಗ್ರಫಿ ಮಾಡಿದವಳು.
‘ಡಾಟರ್ಸ್ ಆಫ್ ದಿ ಅಮೆರಿಕನ್ ರಿವೊಲ್ಯುಷನ್ ಯುಥ್ ಸಿಟಿಜನ್‌ಶಿಪ್’ ಅವಾರ್ಡ್ ಗೆದ್ದವಳು. ಶಾಲೆಯ ಸೈನ್ಸ್ ಒಲಿಂಪಿ
ಯಾಡ್ ತಂಡದಲ್ಲಿ ಮೂರು ಬಾರಿ ರಾಷ್ಟ್ರಮಟ್ಟದ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದವಳು. ಕಂಪ್ಯೂಟರ್ ತಂತ್ರಾಂಶದ
‘ಮರ್ಮಭೇದಕ’ ಹ್ಯಾಕಥಾನ್‌ಗಳನ್ನು ಆಯೋಜಿಸಿದವಳು.

ಒಟ್ಟಿನಲ್ಲಿ ಪ್ರತಿಭೆಗೊಂದು ಪರ್ಯಾಯ ಹೆಸರು. ಸಂಹಿತಾಳ ಅಪ್ಪ ವಿನಯ್ ತನ್ನ ಹೆಸರಿಗಿಂತಲೂ ತುಸು ಹೆಚ್ಚೇ ವಿನಯ ಸ್ವಭಾವದವರು, ಮಿತ ಭಾಷಿ. ಆದರೆ ಅಮ್ಮ ಸೌಮ್ಯಾ ‘ಕಲ್ಲನ್ನೂ ಮಾತನಾಡಿಸಬಲ್ಲರು’ ಎನ್ನುವಂಥ ಮಾತುಗಾರ್ತಿ.
ಹೃದಯದಲ್ಲಿ ಹದಿನಾರಾಣೆ ಸ್ನೇಹಮಯಿ. ಇಲ್ಲಿನ ಕಾವೇರಿ ಕನ್ನಡ ಸಂಘದ ಆಶ್ರಯದಲ್ಲಿ ಕಳೆದ 10-15 ವರ್ಷಗಳಿಂದ
ನಡೆಸಿಕೊಂಡು ಬಂದಿರುವ ‘ಕನ್ನಡ ಕಲಿಯೋಣ’ ವಾರಾಂತ್ಯ ಶಾಲೆಯಲ್ಲಿ ಕ್ರಿಯಾಶೀಲ ಶಿಕ್ಷಕಿ, ಎಂತಹ ಕಠಿನ ಜವಾಬ್ದಾರಿ
ಯನ್ನೂ ಹೂ ಎತ್ತಿದಂತೆ ಆರಾಮಾಗಿ ನಿಭಾಯಿಸಬಲ್ಲ ಗಟ್ಟಿಗಿತ್ತಿ.

ಕನ್ನಡ ಕಲಿಯೋಣ ಶಾಲೆಯವರು ನಡೆಸುವ ವಾರ್ಷಿಕ ‘ಪ್ರೊಜೆಕ್ಟ್ ಪ್ರೆಸೆಂಟೇಷನ್’ (ಕೊಟ್ಟಿರುವ ವಿಷಯದ ಬಗ್ಗೆ ವಿದ್ಯಾರ್ಥಿಯು ಮಾಹಿತಿ ಸಂಗ್ರಹಿಸಿ, ಚಿತ್ರಗಳ ಪೋಸ್ಟರ್ ತಯಾರಿಸಿ, ಕನ್ನಡದಲ್ಲಿ ಮಾತನಾಡಿ ಪ್ರಸ್ತುತಪಡಿಸುವ) ಸ್ಪರ್ಧೆಗೆ
ಕಳೆದ ಐದಾರು ವರ್ಷಗಳಲ್ಲಿ ನಾನೊಬ್ಬ ತೀರ್ಪುಗಾರನಾಗಿ ಭಾಗವಹಿಸಿದ್ದೇನಾದ್ದರಿಂದ ಸೌಮ್ಯಾ ಮತ್ತು ಅವರ ತಂಡದ
ಶಿಕ್ಷಕ-ಶಿಕ್ಷಕಿಯರು ಮಕ್ಕಳಿಗೆ ಕನ್ನಡ ಕಲಿಸುವ ಒಳ್ಳೆಯ ಕೆಲಸವನ್ನು ನಿಃಸ್ವಾರ್ಥ ನಿಃಶುಲ್ಕ ರೀತಿಯಲ್ಲಿ ಕನ್ನಡಮ್ಮನ ಸೇವೆಯಂತೆ ನಡೆಸುತ್ತಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅರಳು ಹುರಿದಂತೆ ಮಾತನಾಡುವ ಸೌಮ್ಯಾ ಅವರ ಸ್ಪಷ್ಟ-ದಿಟ್ಟ ಮಿಂಚಂಚೆ ಸಂವಹನಗಳನ್ನೂ ಗಮನಿಸಿದ್ದೇನೆ. ಗೌರವಾಭಿಮಾನ ಮೂಡಿಸುವ ವ್ಯಕ್ತಿತ್ವ.

ನೃತ್ಯಗುರು ವಾಣಿ ರಮೇಶ್ ಬಗ್ಗೆಯೂ ಇಲ್ಲಿ ಪ್ರಸ್ತಾವಿಸಲೇಬೇಕು. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ
ಸಾಂಸ್ಕೃತಿಕ ಮನೆತನದಿಂದ ಬಂದವರು. ಅವರ ಮುತ್ತಾತ ವೈಣಿಕಪ್ರವೀಣ ವೀಣೆ ವೆಂಕಟಗಿರಿಯಪ್ಪನವರು ನಾಲ್ವಡಿ
ಕೃಷ್ಣರಾಜ ಒಡೆಯರ್ ಆಡಳಿತಕಾಲದಲ್ಲಿ ಆಸ್ಥಾನವಿದ್ವಾಂಸ. ವಾಣಿ ಯವರು ಭರತನಾಟ್ಯ ಕಲಿತದ್ದು ಟಿ.ಎನ್.ಸೋಮ ಶೇಖರ್ ಮತ್ತು ನಾಟ್ಯಾಚಾರ್ಯ ಕೆ.ಮುರಲೀಧರ ರಾವ್ ಅವರಲ್ಲಿ. ಕರ್ನಾಟಕ ರಾಜ್ಯ ಮಟ್ಟದ ವಿದ್ವತ್ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್.

ಮೈಸೂರು ವಿಶ್ವವಿದ್ಯಾಲಯದಿಂದ ಕಲಾವಿಭಾಗದಲ್ಲಿ ಸ್ನಾತಕೋತ್ತರ ಪದವಿ, ಅಲ್ಲಿಯೂ ಚಿನ್ನದ ಪದಕ. ವಿದ್ವಾನ್ ಎಲ್.ರಾಮಶೇಷು ಮತ್ತು ಉಷಾ ಚಾರ್‌ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತಿದ್ದಾರಾದರೂ ನೃತ್ಯವೇ ಅವರ
ಜೀವಾಳ. ಭಾರತದಲ್ಲೂ ಅಮೆರಿಕದಲ್ಲೂ ಹಲವೆಡೆ ನೃತ್ಯಕಾರ್ಯಾಗಾರಗಳನ್ನು ನಡೆಸಿದ ಅನುಭವ. ಕಲಾಸೇವೆ ಗುರುತಿಸಿ ಕರ್ನಾಟಕದ ನೃತ್ಯಕಲಾ ಪರಿಷತ್‌ನಿಂದ ಸನ್ಮಾನ. ಬರಾಕ್ ಒಬಾಮ ಅಮೆರಿಕಾಧ್ಯಕ್ಷನಾಗಿದ್ದಾಗ, ನೃತ್ಯಶಿಕ್ಷಕಿ ಮತ್ತು ಸಮಾಜಸೇವಕಿಯಾಗಿ ವಾಣಿ ಗೌರವಿಸಲ್ಪಟ್ಟವರು.

ಯುನೆಸ್ಕೊದ ಇಂಟರ್‌ನ್ಯಾಷನಲ್ ಡ್ಯಾನ್ಸ್ ಕೌನ್ಸಿಲ್‌ನ ಸದಸ್ಯೆಯಾಗಿ ಇತ್ತೀಚೆಗೆ ನಾಮನಿರ್ದೇಶನಗೊಂಡವರು.
ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯಿಂದ, ಪುಣೆಯ ಭಾರತೀ ವಿದ್ಯಾಪೀಠದಿಂದ ನೃತ್ಯಪರೀಕ್ಷಕಿಯಾಗಿ ಮನ್ನಣೆ
ಪಡೆದವರು. ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ವಾಣಿಯವರು ನಡೆಸುತ್ತಿರುವ ‘ಸೃಷ್ಟಿ ಸ್ಕೂಲ್ ಆಫ್ ಡ್ಯಾನ್ಸ್’ ಸಂಸ್ಥೆಯಲ್ಲಿ ನೂರಾರು ವಿದ್ಯಾರ್ಥಿಗಳು ಭರತನಾಟ್ಯ ಕಲಿತಿದ್ದಾರೆ, ಅನೇಕರು ರಂಗಪ್ರವೇಶ ಮಾಡಿದ್ದಾರೆ, ಪ್ರತಿಭಾನ್ವಿತ ನೃತ್ಯಪಟು ಗಳಾಗಿ ಹೊರಹೊಮ್ಮಿದ್ದಾರೆ.

ರಾಜಧಾನಿಯ ಸುತ್ತಮುತ್ತ ಅನೇಕ ನೃತ್ಯಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಅಮೆರಿಕನ್ನರಿಗೂ ಭರತನಾಟ್ಯದ
ಸೊಗಸನ್ನು ಪರಿಚಯಿಸಿದ್ದಾರೆ. ವಾಣಿಯವರು ನಿರ್ದೇಶಿಸಿದ ಒಂದೆರಡು ಕನ್ನಡ ನೃತ್ಯರೂಪಕಗಳಿಗೆ ಸ್ಕ್ರಿಪ್ಟ್ ಬರೆದುಕೊಟ್ಟ,
ಕನ್ನಡ ಸಾಹಿತ್ಯಕೃತಿಗಳನ್ನು ನೃತ್ಯಕ್ಕೆ ಅಳವಡಿಸಿಕೊಂಡಾಗೆಲ್ಲ ಅವುಗಳ ಅರ್ಥವಿವರಣೆ ಮಾಡಿಕೊಟ್ಟ ಹೆಮ್ಮೆ ನನ್ನದು. ವಾಣಿಯವರ ಕಾರ್ಯಕ್ಷಮತೆ, ಸಮಯಪಾಲನೆ, ಶಿಸ್ತು, ಸೂಕ್ಷ್ಮ ವಿವರಗಳತ್ತ ಗಮನ- ಇವೆಲ್ಲ ನನಗೆ ತುಂಬ ಇಷ್ಟ. ನನ್ನ-ಅವರ ತರಂಗಾಂತರ ಹೊಂದಾಣಿಕೆಗೆ ಕಾರಣ ಕೂಡ.

ಇಂತಹ ಘಟಾನುಘಟಿ ಕನ್ನಡಾಭಿಮಾನಿಗಳೇ ಮುಖ್ಯ ಭೂಮಿಕೆಯಲ್ಲಿದ್ದ ರಂಗಪ್ರವೇಶದಲ್ಲಿ ಸಹಜವಾಗಿಯೇ ‘ಕನ್ನಡ
ಎನೆ ಕಿವಿ ನಿಮಿರುವುದು’ ಆಗಿಸಬಲ್ಲದ್ದು ಏನೋ ಇರಲೇಬೇಕಷ್ಟೆ? ಆ ವೈಶಿಷ್ಟ್ಯ ಏನೆಂದರೆ ಆವತ್ತು ಸಂಹಿತಾ ನಾಟ್ಯವಾಡಿ ತೋರಿಸಿದ ಅಷ್ಟೂ ಪ್ರಸ್ತುತಿಗಳು (ರಂಗಪ್ರವೇಶ ಟರ್ಮಿನಾಲಜಿಯಲ್ಲಿ ‘ಮಾರ್ಗಂ’ ಎನ್ನುತ್ತಾರಂತೆ) ಕನ್ನಡದವೇ! ಆರಂಭದ ಪುಷ್ಪಾಂಜಲಿ/ಗಣೇಶಸ್ತುತಿಯಿಂದ ಹಿಡಿದು ಕೊನೆಯ ಮಂಗಲಂವರೆಗೆ ಎಲ್ಲವೂ ಕನ್ನಡ. ಕಾರ್ಯಕ್ರಮದ ಕರಪತ್ರದಲ್ಲಿ ‘ಆಂಡಾಳ್ ಕೌತ್ವಮ್’ ಎಂದು ನೋಡಿ ಇದು ತಮಿಳು ಇರಬಹುದಲ್ಲ ಎಂದುಕೊಂಡವರಿಗೂ ಅಚ್ಚರಿ.

ಅಭಿನಯಿಸಿ ತೋರಿಸಿದ್ದು ತಮಿಳುನಾಡಿನ ಶ್ರೀರಂಗಂನ ಭಕ್ತೆ ಆಂಡಾಳ್‌ಳ ಕಥೆಯನ್ನಾದರೂ ಸಾಹಿತ್ಯ ಕನ್ನಡದ್ದು! ದ್ವಾರಕಿ ಕೃಷ್ಣಮೂರ್ತಿ ಅವರ ರಚನೆ. ಮುಂದಿನ ಐಟಂ ‘ಕೀರ್ತನ’ ಸಹ ಚಿದಂಬರಂನ ಸ್ವರ್ಣಸಭಾದಲ್ಲಿ ನಟರಾಜನರ್ತನ ವರ್ಣನೆ, ಕನ್ನಡದಲ್ಲಿ! ಕಾರ್ಯಕ್ರಮದ ಪ್ರಧಾನ ಪ್ರಸ್ತುತಿಯಾಗಿ ಸುದೀರ್ಘ ‘ಪದವರ್ಣ’ ತಿರುಪತಿ ವೆಂಕಟೇಶ್ವರನ ಮೇಲೆ, ಅದರಲ್ಲೇ ದಶಾವತಾರಗಳ ಅಭಿನಯ, ಡಿ.ವಿ.ಪ್ರಸನ್ನಕುಮಾರರ ಸೊಗಸಾದ ಕನ್ನಡ ಸಾಹಿತ್ಯಕ್ಕೆ ಹೆಜ್ಜೆಹಾಕುತ್ತ.

ಆಮೇಲೆ ಡಿವಿಜಿಯವರ ‘ಅಂತಃಪುರ ಗೀತೆಗಳು’ ದಿಂದ ಆಯ್ದ ಪ್ರಸ್ತುತಿ ‘ನೃತ್ಯೋನ್ಮತ್ತೆ’- ಬೇಲೂರಿನ ಶಿಲಾಬಾಲಿಕೆಯೇ ಜೀವ ತಳೆದಳೇನೋ ಎಂಬಂತೆ. ಅದಾದಮೇಲೆ ದೇವರ ನಾಮ- ಜಗನ್ನಾಥ ದಾಸರದೊಂದು ಅಪರೂಪದ ಕೃತಿ ವರದಾ
ನದಿಯ ಸ್ತುತಿ. ಜೋಗ್ ರಾಗದ ತಿಲ್ಲಾನದಲ್ಲೂ ಕೊನೆಗೆ ಸರಸ್ವತಿ-ಲಕ್ಷ್ಮಿ-ಪಾರ್ವತಿಯರ ಸ್ತುತಿಯ ಸಾಹಿತ್ಯ ಕನ್ನಡದಲ್ಲೇ.

ಇಡೀ ಕಾರ್ಯಕ್ರಮಕ್ಕೆ ಕಳಶಪ್ರಾಯವಾಗಿ ಮಂಗಲಗೀತೆ, ಎಸ್ .ವಿ.ರಂಗಣ್ಣರ ‘ರಂಗ ಬಿನ್ನಪ’ ಕೃತಿಯಿಂದಾಯ್ದ ಒಂದು ಚಂದದ ಮುಕ್ತಕ. ರಂಗಣ್ಣರ ಯಾವುದಾದರೊಂದು ಮುಕ್ತಕವನ್ನು ನೃತ್ಯಕ್ಕೆ ಅಳವಡಿಸುವ ಐಡಿಯಾ ಬಂದದ್ದು ವಾಣಿಯ ವರಿಗೇ ಅಂತೆ. ಸಂಹಿತಾಳ ಮುತ್ತಾತ, ಅಂದರೆ ಎಸ್.ವಿ.ರಂಗಣ್ಣರ ಮಗ ಎಸ್. ಆರ್.ಶಿವರಾಂ ಈ ಒಂದು ಮುಕ್ತಕವನ್ನು ಆಯ್ದು ಕೊಟ್ಟರು.

ರಂಗಪ್ರವೇಶಕ್ಕೆ ಕೆಲ ತಿಂಗಳ ಹಿಂದೆ ವಿಽವಶರಾದರು. ಭಾವುಕ ಶ್ರದ್ಧಾಂಜಲಿಯಾಗಿ, ಮುತ್ತಾತ-ಕೋಲುತಾತರಿಗೆ ಗೌರವಾ
ರ್ಪಣೆಯಾಗಿ ಸಂಹಿತಾ ಅದನ್ನು ಅಭಿನಯಿಸಿದಳು. ಅದರ ಸಾಹಿತ್ಯವನ್ನು ವಾಣಿಯವರಿಂದ ಸಂಗ್ರಹಿಸಿ ಇಲ್ಲಿ ಸೇರಿಸಿಕೊಂಡಿ ದ್ದೇನೆ: ನಾಡದೇವಿ ಬೇಡಿದುದು ನಿನಗೆ ಕಿವಿ ತಾಕಿತೇನಯ್ಯ ರಂಗಯ್ಯ: ‘ನೀಲಗಿರಿ ವಿಂಧ್ಯ ಸಹ್ಯಾದ್ರಿ ಹಿಮಾಚಲ ಸದೃಶ
ಕುಮಾರರ ಕೊಟ್ಟು ಕಾಪಾಡು; ಕೃಷ್ಣೆ ಕಾವೇರಿ ಯಮುನಾ ಗಂಗೆಯಂದದ ಕುವರಿಯರ ಅನುಗ್ರಹಿಸು; ನನ್ನ ದಟ್ಟ ವನಗಳಂತೆ ಪರಿಪುಷ್ಟವಾದ ವೃಷಭ ವಾಜಿಗಳ ನೀಡು; ವಿಶಾಲ ಉತ್ತ ಭೂಮಿಗಳಂತೆ ಚೆಲುವಾದ ಗೋ ಮಹಿಷಿಗಳ ಕೊಡು.

ಬೀಸುವ ಗಾಳಿಯಾಗಲಿ ಆತ್ಮಬಲ. ಮಳೆಯಂತೆ ಸುರಿಯಲಿ ಭ್ರಾತೃವಾತ್ಸಲ್ಯ. ನಗರ ಗ್ರಾಮಗಳ ಪ್ರಭೆ ಹೊಗರೆದ್ದು ಜ್ಯೋತಿಯಾಗಲಿ. ಶಾಂತಿ ಬೆಳಗಲಿ ಎನ್ನ ಆಗಸದ ಧ್ರುವತಾರೆಯಾಗಿ. ತಾಯಿ ಎನ್ನಿಸು; ತಾಯಿಯರಲ್ಲಿ ತಾಯಿ ಎನ್ನಿಸು!
ಇಲ್ಲಿ ಇನ್ನೊಂದು ಪ್ರಶಂಸಾರ್ಹ ಸಂಗತಿಯನ್ನೂ ಉಲ್ಲೇಖಿಸಬೇಕು.

ನೃತ್ಯಪ್ರದರ್ಶನದ ಹಿಮ್ಮೇಳದಲ್ಲಿ ನಟುವಾಂಗಕ್ಕೇನೋ ಗುರು ವಾಣಿಯವರೇ ಇದ್ದರು. ಆದರೆ ಕೊಳಲುವಾದಕ ಪ್ರಯುತ್ ನಡುತೋಟರನ್ನು ಬಿಟ್ಟರೆ ಮುಖ್ಯ ಗಾಯಕ ಲಲಿತ್ ಸುಬ್ರಹ್ಮಣ್ಯಂ, ವಯಲಿನ್‌ನಲ್ಲಿ ಸಂಧ್ಯಾ ಶ್ರೀನಾಥ್, ಮೃದಂಗ/ ಖಂಜಿರದಲ್ಲಿ ಶ್ರೀನಾಥ ಬಾಲಾ- ಎಲ್ಲರೂ ತಮಿಳು ಮಾತೃ ಭಾಷೆಯವರು. ಸಂಗೀತಕ್ಕೆ ಭಾಷೆಯ ಸೀಮೆಗಳಿಲ್ಲವೆನ್ನಿ.
ಆದರೂ, ಈ ಎಲ್ಲ ಕನ್ನಡ ಕೃತಿಗಳನ್ನು ಅಸ್ಖಲಿತ ಕನ್ನಡ ಸ್ವರೋಚ್ಚಾರದಲ್ಲಿ ಹಾಡಿದ ಲಲಿತ್ ಸುಬ್ರಹ್ಮಣ್ಯಂ ನಿಜಕ್ಕೂ ಗ್ರೇಟ್!

ಆಮೇಲೆ ಗೊತ್ತಾಯಿತು ಅವರ ಹೆಂಡತಿ ಮೂಲತಃ ದಕ್ಷಿಣಕನ್ನಡದ ಪುತ್ತೂರಿನವರಂತೆ, ಗಂಡನಿಗೆ ಹವ್ಯಕನ್ನಡ ಭಾಷೆಯನ್ನೂ ಕಲಿಸಿದ್ದಾರಂತೆ! ಈ ಹಿನ್ನೆಲೆಯಲ್ಲಿ, ಲೇಖನದ ಆರಂಭದಲ್ಲಿ ಉದ್ಧರಿಸಿದ್ದ ಎಸ್.ವಿ.ರಂಗಣ್ಣರ ಮಾತುಗಳನ್ನು ನಾವು ಮತ್ತೊಮ್ಮೆ ಗಮನಿಸಬೇಕು. ವಾಣಿ-ಸಂಹಿತಾ ಗುರುಶಿಷ್ಯೆಯರು ಸೇರಿ ಆವತ್ತು ಅದನ್ನು ಸಾಽಸಿ ತೋರಿಸಿದರು; ಕನ್ನಡ ಪಾಕದಲ್ಲದ್ದಿದ ಸಂಗೀತ-ನೃತ್ಯ ಮಾಧುರ್ಯವನ್ನು ಪ್ರೇಕ್ಷಕರಿಗೆ ಉಣಿಸಿದರು.

ಈ ಅಂಕಣಬರಹದ ತಯಾರಿಯ ವೇಳೆ ನಾನು ಸೌಮ್ಯಾರಿಗೆ ಮೆಸೇಜು ಮಾಡಿ ಕೋಲುತಾತ-ಮರಿಮೊಮ್ಮಗಳು ಸಂಬಂಧದ ಎಲ್ಲ ಕೊಂಡಿಗಳ ಹೆಸರನ್ನೂ ತಿಳಿಸಿ ಎಂದು ಕೇಳಿಕೊಂಡೆ. ಅವರು ಸಂತೋಷದಿಂದ ಈ ಮಾಹಿತಿ ಒದಗಿಸಿದರು: ಎಸ್.ವಿ.ರಂಗಣ್ಣರ ಮಗ ಎಸ್.ಆರ್ ಶ್ರೀಕೃಷ್ಣ, ಸೊಸೆ ಮಹಾಲಕ್ಷ್ಮಿ; ಅವರ ಮಗಳು ಶುಭಾ, ಅಳಿಯ ಮೂರ್ತಿ; ಅವರ
ಮಗಳು ಸೌಮ್ಯಾ, ಅಳಿಯ ವಿನಯ್; ಅವರ ಮಗಳು ಸಂಹಿತಾ.

ಆಕೆಗೊಬ್ಬ ತಮ್ಮನಿದ್ದಾನೆ ಸಿದ್ಧಾಂತ್ ಎಂದು ಹೆಸರು. ಮೊನ್ನೆ ಅಕ್ಕನ ರಂಗಪ್ರವೇಶ ಕಾರ್ಯಕ್ರಮದಲ್ಲಿ ಅವನಿಂದ ತಬಲಾ ವಾದನದ ಚಿಕ್ಕದೊಂದು ಪ್ರದರ್ಶನವೂ ಇತ್ತು. ಅಂದಹಾಗೆ ಈ ಅಂಕಣಬರಹದ ತಯಾರಿಯ ವೇಳೆಯೇ ಇನ್ನೂ ಒಂದು ಸಂಗತಿ ನಡೆಯಿತು. ಎಸ್ .ವಿ. ರಂಗಣ್ಣರ ಬಗೆಗೆ ಸ್ವಾರಸ್ಯಕರ ಅಂಶಗಳೇನಾದರೂ ಸಿಗಬಹುದೆಂದು ನಾನು ಅಂತರಜಾಲದಲ್ಲಿ ಹುಡುಕುತ್ತಿದ್ದಾಗ, ‘ಸುಧಾ’ ಕನ್ನಡ ಸಾಪ್ತಾಹಿಕದ ೨೯ ಅಕ್ಟೋಬರ್ ೧೯೯೫ರ ಸಂಚಿಕೆಯ ಪುಟ ಸಿಕ್ಕಿತು.
ಅದರಲ್ಲಿ ‘ಸಮಕ್ಷಮ’ ಅಂಕಣದಲ್ಲಿ ಕೃಷ್ಣ ಕಟ್ಟಿಯವರು ಎಸ್.ವಿ.ರಂಗಣ್ಣರ ಬಗ್ಗೆ ಬರೆದಿದ್ದರು.

ಆ ಮಾಹಿತಿ ಈಗ ವಿಕಿಪಿಡಿಯಾದಲ್ಲಿಯೂ ಇದೆ. ಆದರೆ ಅಮೂಲ್ಯ ಆಸ್ತಿಯೆಂಬಂತೆ ಸಿಕ್ಕಿದ್ದೆಂದರೆ ಅದೇ ಪುಟದಲ್ಲಿ ಎಸ್.ವಿ. ರಂಗಣ್ಣರ ಹಸ್ತಾಕ್ಷರ ಮಾದರಿ. ಅದರಲ್ಲಿ ಎಸ್.ವಿ.ರಂಗಣ್ಣ ಬರೆದದ್ದೇನು ಗೊತ್ತೇ? ‘ಮುದ್ದು ಸೌಮ್ಯಳಿಗೆ, ಆಶೀರ್ವಾದಗಳು! ರಂಗಣ್ಣ’ ಎಂದು. ನಾನದನ್ನು ಸೌಮ್ಯಾರಿಗೆ ಕಳುಹಿಸಿ ‘ನೀವೇನಾ ಈ ಸೌಮ್ಯಾ?’ ಎಂದು ಕೇಳಿದೆ. ‘ಹೌದು ಹೌದು ಹೌದು!’ ಎಂದು ಮೂರುಸಲ ಹೇಳಿ ಅವರು ತನ್ನ ಮುತ್ತಾತನ ಬಗೆಗಿನ ಗೌರವಾಭಿಮಾನ ಮೆರೆದರು.

ಮೊನ್ನೆ ಸಂಹಿತಾ ಭರತನಾಟ್ಯ ರಂಗಪ್ರವೇಶದ ಮಂಗಲಗೀತೆಯಾಗಿ ಅವರದೇ ಮುಕ್ತಕವನ್ನು ಪ್ರಸ್ತುತಪಡಿಸಿದಾಗ ಸ್ವರ್ಗದಿಂದಲೇ ‘ಮುದ್ದು ಸಂಹಿತಾಳಿಗೆ, ಆಶೀರ್ವಾದಗಳು! ರಂಗಣ್ಣ’ ಎಂದರೇನೋ!