Monday, 14th October 2024

ಅಮೆರಿಕ ಆಡಲಿದೆ 2024ರ ಕ್ರಿಕೆಟ್‌ ವಿಶ್ವಕಪ್‌ !

ಶಿಶಿರ ಕಾಲ

shishirh@gmail.com

ಕ್ರಿಕೆಟ್. ಬ್ರಿಟಿಷರು ಕಲಿಸಿದರು, ಬಿಟ್ಟು ಹೋದರು ಇತ್ಯಾದಿ ಎಲ್ಲವೂ ಹೌದು. ಆದರೆ ಇಂದು ನಮ್ಮಲ್ಲಿನ ಕ್ರಿಕೆಟ್ ಎಲ್ಲ ರೀತಿ ಯಲ್ಲೂ ಬ್ರಿಟಿಷರನ್ನು ಮೀರಿ ಆಗಿದೆ. ಟೆಸ್ಟ್, ಒನ್ ಡೇ, ಟ್ವೆಂಟಿ ಟ್ವೆಂಟಿ ಇವೆಲ್ಲ ಆಯಿತಲ್ಲ. ಅದನ್ನು ಬಿಟ್ಟು ಹಲವು ನಮೂನೆ ಯ ಕ್ರಿಕೆಟ್ ನಮಗೆ ಗೊತ್ತು. ಭಾರತದಲ್ಲಿರುವಷ್ಟು ಕ್ರಿಕೆಟ್‌ನ ವೈವಿಧ್ಯ ಇನ್ನೊಂದು ದೇಶದಲ್ಲಿ ಇಲ್ಲ. ಅಂತೆಯೇ ಒಂದೇ ಕ್ರೀಡೆಯಲ್ಲಿ ಇಷ್ಟೊಂದು ವೈವಿಧ್ಯ ಇನ್ನೊಂದು ಆಟದಲ್ಲಿಲ್ಲ.

ನನ್ನ ಶಾಲೆ ಚಿಕ್ಕ ಗುಡ್ಡದ ಮೇಲಿತ್ತು. ಹಾಗಾಗಿ ಶಾಲೆಯ ಮೈದಾನ ಮೂರು ಸ್ಥರದಲ್ಲಿತ್ತು. ಅಲ್ಲಿಯೇ ನಮ್ಮ ಕ್ರಿಕೆಟ್. ಒಂದು ಸ್ಥರದಲ್ಲಿ ಬಾಲಿಂಗ್, ಬ್ಯಾಟಿಂಗ್. ಎರಡನೇ ಸ್ಥರ ಹತ್ತು ಫುಟ್ ಹೊಂಡದಲ್ಲಿ, ಕೆಳಕ್ಕೆ. ಮೂರನೇ ಸ್ಥರ, ಇನ್ನೂ ಕೆಳಕ್ಕೆ, ಅದು ಬೌಂಡರಿ ಲೈನ್. ಅದರಾಚೆ ಸಾರ್ವಜನಿಕ ರಸ್ತೆ, ಗದ್ದೆ, ತೊರೆ ಇತ್ಯಾದಿ. ಅಲ್ಲ ಬಾಲ್ ಹೋದರೆ ಓಡಿ ಹೋಗಿ ತರುವಂತಿಲ್ಲ. ರಸ್ತೆಯ ಮೇಲೆ ಕಾಲಿಟ್ಟರೆ ಮಾಸ್ತರ್ ಬೆತ್ತ ಮಾತಾಡುತ್ತಿತ್ತು.

ವಿಕೆಟ್ ಕೀಪರ್‌ನ ಹಿಂದೆ ಶಾಲೆಯ ಆವರಣದ ಗೋಡೆ. ಆಚೆ ಮಾಲ್ಕಿ ಜಾಗಕ್ಕೆ ಬಾಲ್ ಹೋದರೆ ಔಟ್. ಕೆಳ ರಸ್ತೆಗೆ ಸಿಕ್ಸ್ ಹೊಡೆ ದರೆ ಔಟ್. ಲಾಂಗ್‌ಆನ್ ನಲ್ಲಿದ್ದ ನೀರಿನ ಹೊಂಡಕ್ಕೆ ಬಾಲ್ ಬಿದ್ದರೆ ಔಟ್. ಶಾಲೆಯ ಕಿಟಕಿಗೆ ಬಡಿದರೆ ಔಟ್ ಮತ್ತು ಮಾಸ್ತರ್ ಹೊಡೆತ, ನಾಳಿನ ಆಟದಿಂದ ಹೊರಕ್ಕೆ -ಅದು ರೆಡ್ ಕಾರ್ಡ್. ಔಟ್ ಆಗಲು ಒಂದು ಸಾವಿರ ಸಾಧ್ಯತೆಗಳ ಮಧ್ಯೆ ಕ್ರಿಕೆಟ್ ‘ಸಹಜ’ ಔಟ್ ಆಗುವ ಪ್ರಮಾಣ ತೀರಾ ಕಡಿಮೆಯಿತ್ತು. ನಮ್ಮದು ಈ ರೀತಿಯಾದರೆ ಪಕ್ಕದೂರಿನ ಶಾಲೆಯಲ್ಲಿ ಕ್ರಿಕೆಟ್ ಆಡುವ ರೀತಿ, ರಿವಾಜು ಅಲ್ಲಿನ ಗ್ರೌಂಡ್(!)ಗೆ, ಭೌಗೋಳಿಕತೆಗೆ ಅನುಗುಣವಾಗಿ ಬೇರೆ.

ಇದು ಬಿಟ್ಟು ಮಧ್ಯಂತರದಲ್ಲಿ ಕ್ಲಾಸ್ ರೂಮಿನಲ್ಲಿ ಪಿಂಗ್ ಪಾಂಗ್ ಬಾಲ್ ಮತ್ತು ಪರೀಕ್ಷೆ ಬರೆಯುವ ಬೋರ್ಡ್ ಅನ್ನು ಬಳಸಿ ಮೈಕ್ರೋ ಕ್ರಿಕೆಟ್. ರಜಾದಿನಗಳಲ್ಲಿ ಊರಿನ ಬಯಲಿನ ದೊಡ್ಡ ಗ್ರೌಂಡ್ ನಲ್ಲಿ ಬೇಗ ಹೋಗಿ ಜಾಗ ಹಿಡಿಯಬೇಕು. ಅಲ್ಲಿ ಆಚೀಚೆ ಗಿನ ಶಾಲೆಯ ಮಕ್ಕಳ ಜತೆ ಗ್ರೌಂಡ್ ಒತ್ತುವರಿಗೆ ಪೈಪೋಟಿ. ಅಲ್ಲಿ ಜಾಗ ಸಿಗಲಿಲ್ಲವೆಂದರೆ ಮನೆಯ ಅಂಗಳ, ದೇವ ಸ್ಥಾನದ ಹಿಂದಿನ ಚಿಕ್ಕ ಖಾಲಿ ಜಾಗವಾದರೂ ಆಯಿತು. ಯಾವುದೂ ಸಿಗದಿದ್ದಲ್ಲಿ ರಸ್ತೆಯಾದರೂ ಸರಿ.

ಕ್ರಿಕೆಟ್ಟಿಗೆ ಬಾಲ್ – ಬ್ಯಾಟ್ ಇವೆರಡೇ ಇದ್ದರೆ ಸಾಕು. ಗೋಡೆಗೆ ಮೂರು ಗೆರೆ ಎಳೆದು ಅದನ್ನೇ ವಿಕೆಟ್ ಎಂದು ಪರಿಗಣಿಸಿ ಓಣಿಯಲ್ಲಿ ಇಬ್ಬರದೇ ಕ್ರಿಕೆಟ್ ಶುರು. ಈ ಎಲ್ಲ ಕ್ರಿಕೆಟ್ ಪ್ರಭೇದಗಳಲ್ಲಿ ಹೆಚ್ಚಿನ ಸಮಯ ಕ್ರಿಕೆಟ್ಟಿಗಿಂತ ಕಳೆದು ಹೋಗುವ ಬಾಲ್ ಹುಡುಕುವುದರಲ್ಲಿಯೇ ವ್ಯಯವಾಗುತ್ತಿತ್ತು – ಅದು ಬೇರೆ ವಿಷಯ. ಅದು ಬಿಟ್ಟು ಸ್ವಲ್ಪ ದೊಡ್ಡ ಹುಡುಗರಿಗೆ ಊರಾಚೆ ವಾರ್ಷಿಕ ಸ್ಮರಣಾರ್ಥ ಟೂರ್ನಿಗಳು. ಅಲ್ಲಿಗೆ ದೇಣಿಗೆ ಕೊಟ್ಟು ಉದ್ಘಾಟನೆಗೆ ಬರುತ್ತಿದ್ದ ಎಂಎಲಎ ಆಕಾಂಕ್ಷಿ, ಕನ್ನಡದಲ್ಲಿ ಬ್ಯಾಟ್ಸ್‌ಮನ್
ಅನ್ನು ದಾಂಡಿಗನೆನ್ನುವ ಕಮೆಂಟ್ರಿ, ಆಟದ ಮಧ್ಯೆ ಮಜ್ಜಿಗೆ ನೀರಿನ, ಪಾನಕ.

ಬಾಜಲ್, ಕೋಲಾ ವ್ಯವಸ್ಥೆ  ಇದೆಯೆಂದರೆ ಆ ಟೂರ್ನಮೆಂಟಿನ ಲೆವೆ ಬೇರೆ. ತಪ್ಪು ನಿರ್ಧಾರ ಕೊಟ್ಟ ಅಂಪೈರ್ ಮೇಲೆ ಸ್ಟಂಪ್ ಎತ್ತಿ ಹೋಗುವ ಸೀನ್, ತಂಡಗಳ ಮಧ್ಯೆ ಆಗುವ ಜಗಳಗಳು, ಸೋತಾಗ ಅಂಪೈರ್ ಸರಿಯಿರಲಿಲ್ಲ ಎಂದು ಗೊಣಗುತ್ತ ಹೋಗುವ
ತಂಡಗಳು… ಇವೆಲ್ಲ ನಾಸ್ಟಾಲ್ಜಿಯಾ (ಗೃಹವಿರಹ). ನನ್ನ ಮಟ್ಟಿಗೆ ಇವೆಲ್ಲವನ್ನು ‘ಗಲ್ಲಿ ಕ್ರಿಕೆಟ್’ ಎಂದು ಒಂದೇ ಶಬ್ದದ ಅಡಿ ಯಲ್ಲಿ ಕರೆಯುವುದು ಅಪರಾಧ. ಒಟ್ಟಾರೆ ಕ್ರಿಕೆಟ್ಟಿನಲ್ಲಿಯೇ ಸಾವಿರದೊಂದು ರೀತಿಯ ವೈವಿಧ್ಯವನ್ನು ಆಡುತ್ತ ಬೆಳೆದವರು ನಾವು-ನೀವೆಲ್ಲ. ಒಂದೊಂದು ರೀತಿಯ ಕ್ರಿಕೆಟ್ಟಿಗೂ ಅಸಲಿ ಕ್ರಿಕೆಟ್ಟಿಗೆ ಬೇಕಾಗುವುದಕ್ಕಿಂತ ಹೆಚ್ಚಿನ ಸ್ಕಿಲ್ ಬೇಕಿತ್ತು. ಅಲ್ಲಿ ಹಾಗೆ ಹೊಡೆದರೆ ಔಟು, ಇಲ್ಲಿ ಹೀಗೆ ಹೊಡೆದರೆ ಫೋರ್, ಅಂಡರ್ ಆರ್ಮ್, ಓವರ್ ಆರ್ಮ್ ಹೀಗೆ.

ನಾವು ಆಡುವ ಕ್ರಿಕೆಟ್ಟೇ ಬೇರೆ, ಅಸಲಿ ಟಿವಿಯಲ್ಲಿ ನೋಡುತ್ತಿದ್ದ ಕ್ರಿಕೆಟ್ಟೇ ಬೇರೆ. ದಕ್ಷಿಣ ಅಮೆರಿಕದ ಉರುಗ್ವೆ ಫುಟ್ಬಾಲ್ ಆಡುವ ದೇಶ. ಹದಿನೈದು ವರ್ಷದ ಹಿಂದೆ ಒಂದಿಪ್ಪತ್ತು ಭಾರತದ ಹುಡುಗರು ಆ ದೇಶದಲ್ಲಿ ವೃತ್ತಿಗೋಸ್ಕರ ನೆಲೆಸಿದ್ದೆವು. ಆ ದೇಶಕ್ಕೆ ಹೋಗುವಾಗ ಯಾವುದಕ್ಕೂ ಇರಲಿ ಎಂದು ನಾವು ಕೆಲವರು ಕ್ರಿಕೆಟ್ ಬ್ಯಾಟ್ ಅನ್ನು ಜತೆಯಲ್ಲಿ ಒಯ್ದಿದ್ದೆವು.

ಉರುಗ್ವೆಯ ಮೊಂಟೆವಿಡಿಯೊ ಇದ್ದ ಊರು. ಅಲ್ಲಿನ ಬೇಸ್ ಬಾಲ್ ಮೈದಾನದಲ್ಲಿ ನಮ್ಮದು ಕ್ರಿಕೆಟ್. ಕ್ರಿಕೆಟ್ ಎಂದರೆ ಏನೆಂಬ ಅಂದಾಜೂ ಅಲ್ಲಿನವರಿಗಿರಲಿಲ್ಲ. ನಾವು ಆಡುವಾಗ ಅಲ್ಲಿನವರು ಬಂದುನಿಂತು ನೋಡುತ್ತಿದ್ದರು. ಮೊದಮೊದಲು ಅವರಿಗೆಲ್ಲ ನಾವು ಏನು ಆಡುತ್ತಿದ್ದೇವೆ ಎಂಬ ಅಂದಾಜಿಲ್ಲದ ಕುತೂಹಲ. ಅವರಿಗೆ ಈ ಆಟವನ್ನು ವಿವರಿಸಬೇಕಾಗಿ ಬಂತು. ಕೆಲ ದಿನಗಳಲ್ಲಿ ನಮ್ಮ ಕ್ರಿಕೆಟ್ ಅನ್ನು ನೋಡಲು ಇನ್ನಷ್ಟು ಜನರು ಸೇರಲು ಶುರುಮಾಡಿದರು. ನಾಲ್ಕಾರು ಮಂದಿ ನಮ್ಮ ಜತೆ ಸೇರಿಕೊಂಡರು, ಕ್ರಿಕೆಟ್ ಏನೆಂದು ಕಲಿತರು. ನಾವು ಆ ಚಿಕ್ಕ ನಗರದಲ್ಲಿ ಕ್ರಿಕೆಟ್ ಆಡುವ ಹುಡುಗರು ಎಂದೇ ಫೇಮಸ್ ಆಗಿದ್ದೆವು.

ನಾನು ಮೊದಲು ಅಮೆರಿಕದ ನ್ಯೂಜರ್ಸಿಗೆ ಬಂದಾಗ ಸ್ಥಿತಿ ಹಾಗಿರಲಿಲ್ಲ. ನ್ಯೂಜರ್ಸಿ, ನ್ಯೂಯಾರ್ಕ್ ಎಂದರೆ ಅಲ್ಲಿ ಭಾರತೀ ಯರೇ ಎಡೆ. ಅದಾಗಲೇ ನ್ಯೂಜರ್ಸಿಯಲ್ಲಿ ಚಿಕ್ಕಪುಟ್ಟ ಟೂರ್ನಿಗಳು ನಡೆಯುತ್ತಿದ್ದವು. ಎಲ್ಲ ಹುಡುಗರು ಸೇರಿಕೊಂಡು ವಾರಾಂತ್ಯ ಬಂತೆಂದರೆ ಕ್ರಿಕೆಟ್ ಲೀಗ್ ಮ್ಯಾಚ್‌ಗಳನ್ನು ಬೇಸ್ ಬಾಲ್ ಮೈದಾನಗಳಲ್ಲಿ ಆಡುವುದು.

ದಶಕದಿಂದೀಚೆ ಅಮೆರಿಕದಲ್ಲಿ ಹವ್ಯಾಸಿ ಕ್ರಿಕೆಟ್ ಆಟ ಬಹಳಷ್ಟು ಬಲಿತಿದೆ, ಹೊಸ ರೂಪ ಪಡೆದುಕೊಂಡಿದೆ. ನಾನಿರುವ ಚಿಕಾಗೋದಲ್ಲಿ, ಬೇಸಿಗೆಯಲ್ಲಿ ಸುಮಾರು ನಾಲ್ಕೈದು ಪಂದ್ಯಾವಳಿ ನಡೆಯುತ್ತವೆ. ಚಿಕಾಗೊ ಪ್ರೀಮಿಯರ್ ಲೀಗ್ ಅತ್ಯಂತ ದೊಡ್ಡ, ಬೇಸಿಗೆಯಿಡೀ ನಡೆಯುವ ಟೂರ್ನಿ. ಇದರಲ್ಲಿ ಬರೋಬ್ಬರಿ 74 ತಂಡಗಳು ಭಾಗವಹಿಸುತ್ತವೆ. ಏನಿಲ್ಲವೆಂದರೂ ಸುಮಾರು ಒಂದು ಸಾವಿರದಷ್ಟು ಮಂದಿ ಆಟಗಾರರು. ಇದು ಕೇವಲ ಚಿಕಾಗೋದಲ್ಲಿ ಅಷ್ಟೇ ಅಲ್ಲ. ನ್ಯೂಜರ್ಸಿ, ಹೂಸ್ಟನ್,
ಸಿಯಾಟಲ, ಸ್ಯಾನ್ ಫ್ರಾನ್ಸಿಸ್ಕೋ ಹೀಗೆ ಅಮೆರಿಕದ ಬಹುತೇಕ ಮೆಟ್ರೋ ಪ್ರದೇಶಗಳಲ್ಲಿ, ಉಪನಗರಗಳಲ್ಲಿ ಇಷ್ಟೇ ಅಥವಾ ಇದಕ್ಕೂ ಹೆಚ್ಚು ತಂಡಗಳು ಇಂದು ಕ್ರಿಕೆಟ್ ಆಡುತ್ತವೆ.

ಇದರಲ್ಲಿ ಭಾರತೀಯ ಮೂಲದವರದೇ ಪಾರುಪತ್ಯವಾದರೂ, ಪಾಕಿಸ್ತಾನ ಮತ್ತು ಬಾಂಗ್ಲಾ, ಶ್ರೀಲಂಕಾದ ಕೆಲ ಬೆರಳೆಣಿಕೆಯ ತಂಡಗಳೂ ಇವೆ. ಅದಲ್ಲದೆ ನಮ್ಮ ತಂಡಗಳಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ಆಸ್ಟ್ರೇಲಿಯಾ ಮೊದಲಾದ ದೇಶಗಳಿಂದ ಬಂದವರೂ ಸೇರಿಕೊಂಡಿರುತ್ತಾರೆ. ಇವೆಲ್ಲ ಹವ್ಯಾಸೀ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಆಯಿತು. ಇದು ಬಿಟ್ಟು ಸೆಮಿ ಪ್ರೊಫೆಷ ನಲ್ ಲೆದರ್ ಬಾಲ್ ಟೂರ್ನಿಗಳೂ ನಡೆಯುತ್ತವೆ. ಅದಕ್ಕೆ ಅಂಪೈರ್‌ಗಳನ್ನು ವೆಸ್ಟಿಂಡೀಸ್‌ನಿಂದ ಕರೆಸುವುದೂ ಉಂಟು. ಇನ್ನು ಮಕ್ಕಳಿಗೆ ಕ್ರಿಕೆಟ್ ಕಲಿಸುವ, ಕೋಚ್ ಮಾಡುವ ಸಂಸ್ಥೆಗಳು ಬಹಳಷ್ಟಿವೆ.

ಅಲ್ಲಿ ಸಣ್ಣ ಪ್ರಮಾಣದಲ್ಲಿ ಅಮೆರಿಕನ್ ಮಕ್ಕಳೂ ಕ್ರಿಕೆಟ್ ಕಲಿಯುತ್ತಾರೆ. ಅವುಗಳ ನಡುವೆ ರಾಜ್ಯ ಮಟ್ಟದ ಟೂರ್ನಿಗಳೂ ನಡೆಯುತ್ತವೆ. ಒಟ್ಟಾರೆ ಭಾರತದಿಂದ ಬಂದವರಿಗೆ ಅಮೆರಿಕದಲ್ಲಿ ಕ್ರಿಕೆಟ್ಟಿನ ಕೊರತೆಯಿಲ್ಲ. ಈ ರೀತಿಯ ಹವ್ಯಾಸೀ ಕ್ರಿಕೆಟ್
ಟೂರ್ನಿಗಳು ಸಿಂಗಾಪುರ, ಮಲೇಷ್ಯಾ ಇಲ್ಲ ನಡೆಯುತ್ತವೆ ಎಂದು ಕೇಳಿ ಬ. ಇನ್ನು ಇಂಗ್ಲೆಡ್, ದಕ್ಷಿಣ ಆಫ್ರಿಕಾ ಮೊದಲಾದ ಬ್ರಿಟಿಷ್ ಆಳಿಬಿಟ್ಟ ದೇಶಗಳಲ್ಲಂತೂ ಕ್ರಿಕೆಟ್, ಕ್ರಿಕೆಟ್ ಆಗಿಯೇ ಲಭ್ಯವಿದೆ ಬಿಡಿ. ಅಮೆರಿಕದ ಮುಖ್ಯ ಆಟಗಳೆಂದರೆ ಬೇಸ್ ಬಾಲ್,
ಘೆಊಔ (ಅಮೆರಿಕನ್ ಫುಟ್ಬಾಲ್ – ಮೊನ್ನೆ ನಡೆದ ವಿಶ್ವಕಪ್ಪಿನ ಫುಟ್ಬಾಲ್ ಅಲ್ಲ) ಮತ್ತು ಬಾಸ್ಕೆಟ್ ಬಾಲ. ಈ ಮೂರೂ ಆಟಗಳಲ್ಲಿ ನಿಯಮಗಳ ಸಂಖ್ಯೆ ಕೆಲವೇ ಕೆಲವು. ಏಕೆಂದರೆ ಆಟ ಅಷ್ಟು ಸರಳ. ಆಡುವುದಕ್ಕೆ ನೈಪುಣ್ಯ ಬೇಕು, ನೋಡುವು ದಕ್ಕಲ್ಲ.

ಕ್ರಿಕೆಟ್‌ನ ಸಮಸ್ಯೆಯೆಂದರೆ ಜಾಗತಿಕ ಆಟಗಳಲ್ಲಿಯೇ ಇದು ಅತ್ಯಂತ ಕ್ಲಿಷ್ಟ. ಲೆಗ್ ಬೈ, ಬೈ, ವೈಡ್, ನೋಬಾಲ್, ಫ್ರೀ ಹಿಟ್, ಹಿಟ್ ವಿಕೆಟ್, ಬೌನ್ಸರ್ ಹೀಗೆ ನೂರೆಂಟು ನಿಯಮಗಳು. ಉಳಿದ ಆಟಗಳನ್ನು ವಿವರಿಸುವುದಕ್ಕೆ ಒಂದೈದು ನಿಮಿಷ ಸಾಕು, ಆದರೆ ಕ್ರಿಕೆಟ್ ಅಷ್ಟು ಸುಲಭಕ್ಕೆ ಅರ್ಥವಾಗುವಂತೆ ಹೇಳುವುದು ಸಾಧ್ಯವಿಲ್ಲ.. ಆದರೆ ಕ್ರಿಕೆಟ್‌ನ ಒಂದು ವಿಶೇಷವೆಂದರೆ ಇದು ಪ್ರತೀ ಆಟದಲ್ಲಿ ಕೊಡುವ ಖುಷಿ ಸಂದರ್ಭದ ಸಂಖ್ಯೆ (count of happy moments) ಉಳಿದೆಲ್ಲ ಆಟಗಳಿಗಿಂತ ಜಾಸ್ತಿ. ಆ ಕಾರಣಕ್ಕೇ ಇಂದು ಜಗತ್ತಿನ ಅತ್ಯಂತ ವೇಗದಲ್ಲಿ ಹರಡುತ್ತಿರುವ ಕ್ರೀಡೆಯಲ್ಲಿ ಕ್ರಿಕೆಟ್ ಮೊದಲನೆಯದು.

ಅಮೆರಿಕ ಕ್ರಿಕೆಟ್ ತಂಡ ವರ್ಲ್ಡ್ ಕಪ್‌ನಲ್ಲಿ ಭಾಗವಹಿಸುತ್ತದೆಯಂತೆ, ಅವರು ಬಂದರೆ ಮುಂದಿನ ವರ್ಲ್ಡ್ ಕಪ್ ಎಲ್ಲ ಅವರಿಗೇ ಅಂತೇ ಎನ್ನುವ ಮಾತನ್ನೆಲ್ಲ ಸುಮಾರು ಇಪ್ಪತ್ತು ವರ್ಷಗಳಿಂದ ಕೇಳಿಕೊಂಡು ಬರುತ್ತಿದ್ದೇವೆ. ಆದರೆ ಅದು ಇಲ್ಲಿಯವರೆಗೆ ಅರ್ಹತೆ ಪಡೆದದ್ದಿಲ್ಲ. ಕ್ರಿಕೆಟ್ ಬ್ರಿಟಿಷರ ಜತೆ ಅಮೆರಿಕಕ್ಕೆ ಹದಿನೆಂಟನೇ ಶತಮಾನದಲ್ಲಿಯೇ ಬಂದಿತ್ತು. ಆದರೆ ಹಾಗೆ ಕ್ರಿಕೆಟ್ ತಂದವರು ಇಲ್ಲಿಯೇ ನೆಲೆಯೂರಿದರೂ ಅವರ ಜತೆ ಬಂದ ಕ್ರಿಕೆಟ್ ಇಲ್ಲಿ ಬದುಕಲಿಲ್ಲ. ಇದಕ್ಕೆ ವಿಶ್ವಯುದ್ಧದ ಕಾರಣವೂ ಇದ್ದಂತಿದೆ. ಆದರೆ ಈಗೀಗ ಭಾರತದಿಂದ ಬಂದ ವಲಸಿಗರಿಂದಾಗಿ ಕ್ರಿಕೆಟ್ ಅಮೆರಿಕ ದೇಶದುದ್ದಗಲಕ್ಕೂ ಚಿಗುರೊಡೆಯುತ್ತಿದೆ.

ಎಷ್ಟು ವಿಚಿತ್ರವೆಂದರೆ, ಬಿಳಿಯರಿಂದಲೇ ಕಲಿತ ಕ್ರಿಕೆಟ್ ಅನ್ನು ಕೆಲವು ತಲೆಮಾರಿನ ನಂತರ ಬಿಳಿಯರಿಗೆ ಭಾರತೀಯರು ಕಲಿಸಿಕೊಡುತ್ತಿದ್ದಾರೆ, ಪುನರ್ ಸ್ಥಾಪಿಸುತ್ತಿದ್ದಾರೆ. ಈ ಕೆಲಸವನ್ನು ಕೇವಲ ಲೀಗ್ ಮ್ಯಾಚ್ ಗಳನ್ನು ಆಡುವ ನಮ್ಮಂತವರಷ್ಟೇ ಮಾಡುತ್ತಿಲ್ಲ. ಬದಲಿಗೆ ಕ್ರಿಕೆಟ್ ಘಟಾನುಘಟಿ ಮಂದಿಯೆಲ್ಲ ಅವರದೇ ಸ್ಥರದಲ್ಲಿ ತನ್ನಿಮಿತ್ತ ಕೆಲಸ ಮಾಡುತ್ತಿದ್ದಾರೆ. ಅದರ ಪರಿಣಾಮ ಈಗ ಕೆಲ ವರ್ಷದಿಂದ ಗೋಚರಿಸಲು ಶುರುವಾಗಿದೆ. ಕ್ರಿಕೆಟ್ ಆಡುವವರು ಜಾಸ್ತಿಯಾದಂತೆ ಹಲವು ಊರುಗಳಲ್ಲಿ
ಸಾರ್ವಜನಿಕ ಕ್ರಿಕೆಟ್ ಗ್ರೌಂಡ್‌ಗಳು ನಿರ್ಮಾಣವಾಗಿವೆ.

ಚಿಕ್ಯಾಗೋದಲ್ಲಿಯೇ ಪೂರ್ಣ ಪ್ರಮಾಣದ 31 ಕ್ರಿಕೆಟ್ ಮೈದಾನಗಳು ಇವತ್ತು ತಲೆಯೆತ್ತಿವೆ. ಇದು ಬಿಟ್ಟು ಅಮೆರಿಕದಲ್ಲಿ ಸುಮಾರು ನಲವತ್ತು ಅಂತಾರಾಷ್ಟ್ರೀಯ ಶ್ರೇಣಿಯ ಮೈದಾನಗಳು ಕೂಡ ಇವೆ. ಅಮೆರಿಕ ರಾಷ್ಟ್ರೀಯ ತಂಡ 1965ರಲ್ಲಿಯೇ ಹುಟ್ಟಿತ್ತು. ಅದು ಹೆಸರಿಗಷ್ಟೇ ಎಂಬಂತೆ ಇದ್ದದ್ದೇ ಜಾಸ್ತಿ. ಎಲ್ಲಾ ಅಂದು ಇಂದು ಚಿಕ್ಕಪುಟ್ಟ ಅಂತಾರಾಷ್ಟ್ರೀಯ ಟೂರ್ನಿಗಳು
ಆಡಿದ್ದು ಬಿಟ್ಟರೆ ಈ ತಂಡ ಕಡಿದು ಗುಡ್ಡೆ ಹಾಕಿದ್ದು ಅಷ್ಟಕ್ಕಷ್ಟೆ. ಇದೆಲ್ಲದರ ನಡುವೆ 2017ರಲ್ಲಿ ನಡೆದ ಒಂದು ಅವ್ಯವಹಾರ ದಿಂದಾಗಿ ಐಸಿಸಿ ಅಮೆರಿಕನ್ ಕ್ರಿಕೆಟ್ ಅಸೋಸಿಯೇಷನ್ ಅನ್ನು ಬ್ಯಾನ್ ಮಾಡಿತ್ತು. ಈ ನಿಷೇಧವನ್ನು ಎರಡು ವರ್ಷದ ನಂತರ ಹಿಂತೆಗೆದುಕೊಂಡರೂ ಈ ತಂಡ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು ಇಲ್ಲ. ಈಗ ಇದೆಲ್ಲ ಬದಲಾಗುವ ಹಂತಕ್ಕೆ ಕೊನೆಗೂ ಬಂದು ನಿಂತಿದೆ.

2024ರ ಐಸಿಸಿ ವಿಶ್ವಕಪ್‌ನಲ್ಲಿ ಅಮೆರಿಕನ್ ಕ್ರಿಕೆಟ್ ತಂಡ ಮೊದಲ ಬಾರಿ ಭಾಗವಹಿಸಲಿದೆ. ಅಮೆರಿಕ ಮತ್ತು ವೆಸ್ಟಿಂಡೀಸ್ ಈ ವರ್ಲ್ಡ್ ಕಪ್ ಅನ್ನು ಸೇರಿ ನಡೆಸಿಕೊಡುವುದರಿಂದ ಅಮೆರಿಕ ಆಡುವ ಆಟದ ಪಟ್ಟಿಯಲ್ಲಿ ಪಕ್ಕಾ ಆಗಿದೆ. ಒಂದಿಷ್ಟು ಮ್ಯಾಚುಗಳು ಅಮೆರಿಕದಲ್ಲೂ ನಡೆಯುವುದರಿಂದ ಸಹಜವಾಗಿ ಈ ಕ್ರೀಡೆ ಇನ್ನಷ್ಟು ಅಮೆರಿಕನ್ನರನ್ನು ತಲುಪಲಿದೆ. ರಾಷ್ಟ್ರೀಯ ತಂಡ ಭಾಗವಹಿಸುವುದರಿಂದ ಅಮೆರಿಕನ್ನರು ನೋಡುವ ರೀತಿ ಬೇರೆಯದಾಗಿರುತ್ತದೆ. ಇದರ ಜತೆ ಸತ್ಯ ನಾದೆ, ಸುಂದರ್ ಪಿಚಾಯ್
ಮೊದಲಾದವರು, ಮತ್ತು ಭಾರತೀಯ ಮೂಲದ ಹಲವು ಪ್ರಭಾವೀ ವ್ಯಕ್ತಿಗಳೆಲ್ಲ ಕೈಜೋಡಿಸಿ ಇನ್ನೊಂದು ಸಾಹಸಕ್ಕೆ ಕೈ ಹಾಕಿ ದ್ದಾರೆ. ಇವರು ಈಗಾಗಲೇ ಸುಮಾರು 44 ಮಿಲಿಯನ್ ಡಾಲರ್ (364 ಕೋಟಿ ರುಪಾಯಿಗೆ ಸಮ) ಕ್ರಿಕೆಟ್ ಸಲುವಾಗಿ ತಮ್ಮ ಕಿಸೆಯಿಂದ ಎತ್ತಿಟ್ಟಿದ್ದಾರೆ.

ಇದರ ದುಪ್ಪಟ್ಟು ಹಣವನ್ನು ಮುಂದಿನ ದಿನಗಳಲ್ಲಿ ಕೊಡುವುದಾಗಿ ಆಶ್ವಾಸನೆಯಿದೆ. ಇದನ್ನು ‘ಮೇಜರ್ ಕ್ರಿಕೆಟ್ ಲೀಗ್’
ಎನ್ನುವ ಪಂದ್ಯಾವಳಿಗೆ ಬಳಸಲಿದ್ದು ಈಗಾಗಲೇ ಡಾಲಸ್, ಲಾಸ್ ಏಂಜಲೀಸ್, ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ,
ಸಿಯಾ ಟಲ್, ವಾಷಿಂಗ್ಟನ್ ಡಿಸಿ ಈ ಆರು ಫ್ರಾಂಚೈಸಿ ಸ್ಥಾಪನೆಯಾಗಿವೆ. ಇದರ ಜತೆ ಇಲ್ಲಿನ ಹೈಸ್ಕೂಲ್‌ಗಳಲ್ಲಿ ಕಲಿಸುವ, ಆಡುವ ಮುಖ್ಯ ಐದು ಆಟಗಳ ಜತೆ ಆರನೆಯದಾಗಿ ಕ್ರಿಕೆಟ್ ಪರಿಚಯಿಸುವಂತೆ ಇವರು ಲಾಬಿ ಕೂಡ ಮಾಡುತ್ತಿದ್ದಾರೆ. ಒಟ್ಟಾರೆ ತೀರಾ ಅಜ್ಞಾತ ರೂಪದಲ್ಲಿದ್ದ ಕ್ರಿಕೆಟ್ ಕ್ರಮೇಣ ಇಲ್ಲಿ ವಿಸ್ತರಿಸಿ ಬೇರೂರುತ್ತಿದೆ. ಇದು ನಮ್ಮಲ್ಲಿನಂತೆ ಅಮೆರಿಕನ್ನರ ಜನಮಾನಸ ದೊಳಕ್ಕೆ ಇಳಿಯಲು ಇನ್ನೊಂದಿಷ್ಟು ವರ್ಷ ಬೇಕು, ನಿಜ. ಅದಕ್ಕೆ ಮೊದಲು ಕ್ರಿಕೆಟ್ ಉಳಿದ ಪಂದ್ಯಗಳ ಜತೆ ಪೈಪೋಟಿ ಗಿಳಿಯಬೇಕು, ಗೆಲ್ಲಬೇಕು. ಈಗ ಅದಕ್ಕೆ ಬೇಕಾದ ವೇದಿಕೆಯಂತೂ ಸಿದ್ಧವಾಗಿದೆ. ಇದು ಅವಶ್ಯವಿತ್ತು. ಕ್ರೀಡೆ ದೇಶಗಳನ್ನು, ದೇಶದವರನ್ನು, ಜನರನ್ನು ಜೋಡಿಸುವ ರೀತಿಯೇ ಬೇರೆ. ಈ ಎಲ್ಲ ಕಾರಣಕ್ಕೆ ಇದು ಖುಷಿಯ ವಿಷಯ.

 
Read E-Paper click here